Homeಅಂಕಣಗಳುಈ ಸಂದರ್ಭ ಒಂದು ತಿರುವು ಬಿಂದುವಾಗಬಲ್ಲುದು, ಮನಸ್ಸು ಮಾಡಿದರೆ...!

ಈ ಸಂದರ್ಭ ಒಂದು ತಿರುವು ಬಿಂದುವಾಗಬಲ್ಲುದು, ಮನಸ್ಸು ಮಾಡಿದರೆ…!

- Advertisement -
- Advertisement -

ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟು ಎಂಬ ಪದಪುಂಜ ಅಷ್ಟು ಸರಿಯಲ್ಲ. ಕೊರೊನಾ ಸೋಂಕು ಉದ್ಭವವಾದಾಗ ಅದನ್ನು ನಿಭಾಯಿಸಲಾಗದಂತೆ ನಾವುಗಳು ಸೃಷ್ಟಿಸಿಕೊಂಡಿದ್ದ ಇಕ್ಕಟ್ಟು ಮೂಲ ಸಮಸ್ಯೆಯಾಗಿತ್ತು. ಹಾಗಾಗಿ ಕಣ್ಣಿಗೆ ಕಾಣದ ಮತ್ತು ಪೂರ್ಣ ಜೀವಿಯೂ ಅಲ್ಲದ ವೈರಸ್ ಇಷ್ಟೆಲ್ಲಾ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತು. ಅಂದರೆ ಇದು ವೈರಸ್‍ನ ಶಕ್ತಿ ಎನ್ನುವುದಕ್ಕಿಂತ ನಮ್ಮ ದೌರ್ಬಲ್ಯ ಇದಕ್ಕೆಲ್ಲಾ ಕಾರಣವಾಯಿತು. ಈ ಕುರಿತು ಮತ್ತಷ್ಟು ಆಳ ಹಾಗೂ ಒಳನೋಟಗಳನ್ನು ಹೆಕ್ಕುವ ಅಗತ್ಯವಿದೆ. ಆದರೆ, ಇಂದು ಕೊರೊನಾ ಇನ್ನೂ ವ್ಯಾಪಕವಾಗುತ್ತಿರುವಾಗಲೇ ‘ಪುನರ್ ನಿರ್ಮಾಣ’ದ ಕೆಲಸವೂ ಶುರುವಾಗಬೇಕಿರುವುದರಿಂದ ಕೆಲವು ಪ್ರಾಥಮಿಕ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೆನಿಸಿದೆ.

ನಾವು ಮನಸ್ಸು ಮಾಡಿದಲ್ಲಿ ಈ ಸಂದರ್ಭವನ್ನೇ ನಮ್ಮ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಸದವಕಾಶವನ್ನಾಗಿ ಪರಿವರ್ತಿಸಿಕೊಳ್ಳಲು ಸಾಧ್ಯ.

ಲೋಕಲ್, ಗ್ಲೋಬಲ್ ನಡುವೆ ಇರಬೇಕಾದ ಸಮತೋಲನ

ಮೊನ್ನೆ ಮಾತನಾಡುವಾಗ ಪ್ರಧಾನಿಗಳು ಹೇಳಿದ್ದರಲ್ಲಿ ತಪ್ಪೇನಿಲ್ಲ. ಆದರೆ ಸ್ಥಳೀಯವಾದುದರ ಕುರಿತು ಮಾತು ಹೆಚ್ಚು; ಮಾಡುವುದೆಲ್ಲಾ ಅದಕ್ಕೆ ತದ್ವಿರುದ್ಧ ಎನ್ನುವುದು ಪ್ರಧಾನಿಗಳಿಗೆ ಮಾತ್ರ ಸೀಮಿತ ವಲ್ಲ. ಅದನ್ನು ನಾವೆಲ್ಲರೂ ಮಾಡುತ್ತಿದ್ದೇವೆ. ಜೊತೆಗೆ ನಮ್ಮದು 100% ಲೋಕಲ್ ಎಂದು ಹೇಳುವ ಸಾಧ್ಯತೆಯೂ ಇರದಾಗ, ಎರಡರ ನಡುವೆ ಇರಬೇಕಾದ ಸಮತೋಲನದ ಬಗ್ಗೆ ಚರ್ಚಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಹಾಗೆ ಮಾಡದೇ ಹೇಳೋದೊಂದು ಮಾಡೋದೊಂದು ಆಷಾಢಭೂತಿತನದಿಂದ ಹಾನಿಯೇ ಹೆಚ್ಚು. ಬಹಳ ಹಳೆಯದಾದ ‘ಥಿಂಕ್ ಗ್ಲೋಬಲಿ, ಆಕ್ಟ್ ಲೋಕಲಿ’ (ಜಾಗತಿಕವಾಗಿ ಯೋಚಿಸಿ, ಸ್ಥಳೀಯವಾಗಿ ಕ್ರಿಯಾಶೀಲರಾಗಿ) ಈಗಲೂ ಪ್ರಸ್ತುತ.

ಆರ್ಥಿಕತೆ ಪುನರ್ ಕಟ್ಟಿಕೊಳ್ಳುವ ಬಗೆ

ಬಂಡವಾಳ ಹೂಡಿಕೆ ಮಾಡಬಲ್ಲವರೇ ಸಂಪತ್ತನ್ನು ಸೃಷ್ಟಿಸುವವರು ಮತ್ತು ಉದ್ಯೋಗ ಕೊಡುವವರು ಎಂಬ ಥಿಯರಿ ಚಾಲ್ತಿಯಲ್ಲಿದೆ. ತಮ್ಮನ್ನು ತಾವು ಅನ್ನದಾತರು ಎಂದು ಕರೆದುಕೊಂಡು ಕರ್ನಾಟಕದ ಮಾಲೀಕರ ಸಂಘದವರು ಸರ್ಕಾರಕ್ಕೆ ಬರೆದ ಪತ್ರ ನೋಡಿದರೆ ಗೊತ್ತಾಗುತ್ತದೆ. ಆದರೆ, ಬೆಂಗಳೂರಿನಿಂದ ವಲಸೆ ಕಾರ್ಮಿಕರು ಹೊರಹೋಗದಿರಲಿ ಎಂದು ಸರ್ಕಾರದ ಮೇಲೆ ಒತ್ತಡ ಹೇರಿದ್ದ ಬಿಲ್ಡರ್‍ಗಳು ‘ಕಾರ್ಮಿಕರಿಲ್ಲದೇ ಕೆಲಸವಾಗಲ್ಲ’ ಎಂಬುದನ್ನು ನಿರೂಪಿಸಿದ್ದಾರೆ. ‘ನಾವು ಬಡವಾಗುತ್ತಿದ್ದೇವೆ, 8 ಗಂಟೆಯ ಬದಲು 12 ಗಂಟೆ ಕೆಲಸ ಮಾಡಲು ಕಾನೂನು ತಿದ್ದುಪಡಿ ತನ್ನಿ’ ಎಂದು ಹೇಳಿದವರೂ ಸಹಾ ದುಡಿಮೆಗಾರರೇ ಸಂಪತ್ತನ್ನು ಸೃಷ್ಟಿಸುತ್ತಾರೆ ಎಂಬುದಕ್ಕೆ ಸಾಕ್ಷಿ ಒದಗಿಸಿದ್ದಾರೆ.

ಇವರು ದುಡಿಮೆಗಾರರು ಮಾತ್ರವಲ್ಲಾ, ಗ್ರಾಹಕರೂ ಸಹಾ. ಈ ಕೋಟಿ ಕೋಟಿ ಜನ ಅಲ್ಪಸ್ವಲ್ಪ ಕೊಳ್ಳುವಿಕೆಯೇ ಆರ್ಥಿಕತೆಯನ್ನು ತಳದಿಂದ ಮೇಲಿನವರೆಗೆ ಚಾಲ್ತಿಯಲ್ಲಿಡುತ್ತದೆ ಎಂಬುದೂ ಪದೇ ಪದೇ ಸಾಬೀತಾಗುತ್ತಿದೆ. ಹೀಗಿರುವಾಗ ಆರ್ಥಿಕತೆಯನ್ನು ಕಟ್ಟಬೇಕಾದ್ದು ತಳದಿಂದ ಮೇಲಕ್ಕೆ ಎಂಬುದರಲ್ಲಿ ಸಂಶಯವೇ ಇಲ್ಲ. ಈಗ ಬರಬೇಕಿರುವ ಎಲ್ಲಾ ಪ್ಯಾಕೇಜುಗಳು, ನೀತಿ ನಿರೂಪಣೆಗಳು ಅದನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ಇದುವರೆಗೆ ಕೆಲಸ ಮಾಡದಿರುವ ಮೇಲಿನಿಂದ ಕಟ್ಟುವ ಥಿಯರಿಗಳನ್ನು ಈಗಾದರೂ ಕಸದ ಬುಟ್ಟಿಗೆ ಹಾಕಬೇಕು.

ಮನುಷ್ಯ ನಿರ್ಮಿತ ಜಾತಿ, ಧರ್ಮಗಳನ್ನು ನಿವಾರಿಸಿಕೊಂಡು ಮನುಷ್ಯರಾಗುವುದು

ವೈರಸ್ಸು ಪ್ರಾಣಿಗಳನ್ನೂ, ಪ್ರಾಣಿಗಳ ನಂತರ ಮನುಷ್ಯರನ್ನೂ ಆವರಿಸಿಕೊಳ್ಳುತ್ತಿದೆ. ಪ್ರಾಣಿ ಸಂಕುಲವನ್ನೇ ಬಿಡದೇ ಇರುವುದು, ಮನುಷ್ಯರನ್ನೆಲ್ಲಾ ಒಂದು ಪ್ರಬೇಧದಂತೆ ಪರಿಗಣಿಸುತ್ತದೆ ಅಷ್ಟೇ. ಒಂದೇ ಧರ್ಮದವರು ವಾಸಿಸುವ ಕೆಲವು ದೇಶಗಳು ಅತ್ಯುತ್ತಮವಾಗಿ ಈ ಸಂದರ್ಭವನ್ನು ನಿಭಾಯಿಸಿದ್ದರೆ, ಅದೇ ಧರ್ಮದವರು ಇರುವ ಇನ್ನೊಂದು ದೇಶ ಇಕ್ಕಟ್ಟಿಗೆ ಸಿಕ್ಕಿದೆ. ಘಟನೆಯೊಂದನ್ನು ಇಟ್ಟುಕೊಂಡು ನಿರ್ದಿಷ್ಟ ಸಮುದಾಯವೊಂದನ್ನು ಗುರಿಯಾಗಿಸಿದರೆ, ಇನ್ನೊಂದು ಘಟನೆ ಇಟ್ಟುಕೊಂಡು ಮತ್ತೊಂದು ಸಮುದಾಯವನ್ನೂ ದೂಷಿಸಬಹುದು. ಅಂತಿಮವಾಗಿ ಪ್ರಚಾರ ಯುದ್ಧದಲ್ಲಿ ಯಾರು ಗಟ್ಟಿಯೋ ಅವರ ಕೈ ಮೇಲಾಗಲೂಬಹುದು. ಆದರೆ ವೈರಸ್ ಪ್ರಚಾರಕ್ಕೆ ತಕ್ಕಂತೆ ಹರಡುವುದಿಲ್ಲ. ಅದಕ್ಕೆ ಕಣ್ಣು, ಕಿವಿಗಳಿರುವ ಕುರಿತು ಪುರಾವೆಗಳಿಲ್ಲ. ಹಾಗಾಗಿ ಜಾತಿ, ಧರ್ಮಗಳ ಗೋಡೆಗಳು ಹಾಗೂ ತಾರತಮ್ಯಗಳನ್ನು ನಿವಾರಿಸಿಕೊಳ್ಳುವ ಕುರಿತು ಮನುಷ್ಯರು ಆಲೋಚಿಸಲು ಈ ಸಂದರ್ಭ ಕಾರಣವಾಗಬಹುದೇ?

ಬದುಕನ್ನು ನೋಡುವ ದೃಷ್ಟಿಕೋನದಲ್ಲಿ ಮೂಲಭೂತ ಬದಲಾವಣೆ

ಅಗೋಚರವಾದ ಅರೆಜೀವಿಯೊಂದು ನಮ್ಮನ್ನು ಹೀಗೆಲ್ಲಾ ಮಾಡಬಹುದಾದರೆ ಬದುಕಿರುವಷ್ಟು ದಿನ ಏನು ಮಾಡಬೇಕೆಂದು ಮನುಷ್ಯರು ಯೋಚಿಸಬೇಕಲ್ಲವೇ? ಬ್ರಹ್ಮಾಂಡವೆಲ್ಲವನ್ನೂ ಶೋಧಿಸಿ, ಪಾತಾಳವನ್ನೂ ಬಗೆದು ಸಾಮ್ರಾಜ್ಯ ವಿಸ್ತರಿಸುತ್ತಿರುವ ಮನುಷ್ಯರು ಇಷ್ಟು ಕ್ಷುಲ್ಲಕವಾಗಿ ಸೋತು ನಿಂತಿದ್ದಾರೆ. ಈ ಕ್ಷಣದವರೆಗೂ ಕೊರೊನಾ ಸೋಂಕನ್ನು ಹೀಗ್ಹೀಗೇ ನಿಭಾಯಿಸಲು ಸಾಧ್ಯ ಎಂಬ ಅಂತಿಮ ಷರಾ ಬರೆಯಲು ಯಾವ ದೇಶಕ್ಕೂ ಆಗಿಲ್ಲ. ಮಹಾಮಹಿಮರೂ ಊಹೆಗಳನ್ನು ಮಾಡುತ್ತಿದ್ದಾರೆ. ಭಾರೀ ಭಾರೀ ತಜ್ಞರೂ ವಿರುದ್ಧ ದಿಕ್ಕಿನ ನಿರ್ಣಯಗಳನ್ನು ಘೋಷಿಸುತ್ತಿದ್ದಾರೆ. ಮಾಸ್ಕ್‍ನ ಅಗತ್ಯವಿಲ್ಲ; ಮಾಸ್ಕೇ ಮೂಲಮಂತ್ರ. ಲಾಕ್‍ಡೌನ್ ಏಕೈಕ ಪರಿಹಾರ; ಲಾಕ್‍ಡೌನ್‍ನಿಂದ ನಷ್ಟವೇ ಹೆಚ್ಚು. ಒಂದೇ ವಾತಾವರಣವಿರುವ ಎರಡು ದೇಶಗಳ ಮಧ್ಯೆ ವೈರಸ್ ಭಿನ್ನ ರೀತಿಯಲ್ಲಿ ವರ್ತಿಸುತ್ತಿರುವುದಕ್ಕೆ ಇದು ಕಾರಣ; ಅಲ್ಲ ಅದು ಕಾರಣವಲ್ಲ. ಕೇವಲ ಕಪ್ಪು ಬಿಳುಪು ಮಾತ್ರವಲ್ಲದೇ, ವಿವಿಧ ವರ್ಣಗಳ ವೈರುಧ್ಯಗಳೂ ಇವೆ.

ಅಂದ ಮೇಲೆ, ಮನುಷ್ಯ ಸಮಾಜದ ಸಾವಿರಾರು ವರ್ಷಗಳ ಜ್ಞಾನಕ್ಕೆ ಈ ಪರಿ ಮಿತಿಯಿದೆಯೇ? ಇದು ಎಲ್ಲರಲ್ಲಿ ವಿನಮ್ರ ಭಾವವೊಂದನ್ನು ಮೂಡಿಸಿದರೆ ಪ್ರಕೃತಿಯೊಂದಿಗೆ ಸೇರಿ ಬಾಳುವ ಹೊಸ ನಾಗರಿಕತೆಯತ್ತ ಪ್ರಪಂಚವನ್ನು ಕರೆದೊಯ್ಯಬಹುದು.

ಆದರೆ ಇವೆಲ್ಲಕ್ಕೂ ಈ ದಿಕ್ಕಿನತ್ತ ಮನಸ್ಸು ಮಾಡಬೇಕು. ಇಲ್ಲದಿದ್ದರೆ ವಿನಾಶದ ಮತ್ತೊಂದು ದಾರಿಯತ್ತಲೂ ಹೋಗುವ ಅವಕಾಶ ಹೇಗೂ ಇದ್ದೇ ಇದೆ. ಹೆಚ್ಚಿನ ಜನರು ಮನುಷ್ಯರಾಗಿ ಯೋಚಿಸುತ್ತಾರೆಂದು ಆಶಿಸೋಣ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...