Homeಮುಖಪುಟಸಂಸತ್ತಿನ ಭದ್ರತಾ ಲೋಪದ ಬಗ್ಗೆ ಸುಳ್ಳು ಪೋಸ್ಟ್‌: ಬಿಜೆಪಿ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲು

ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಸುಳ್ಳು ಪೋಸ್ಟ್‌: ಬಿಜೆಪಿ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಸಂಸತ್ತಿನ ಭದ್ರತಾ ಲೋಪದ ಘಟನೆಯ ಬಗ್ಗೆ ಸುಳ್ಳು ಪೋಸ್ಟ್‌ ಮಾಡಿದ ಆರೋಪದ ಮೇಲೆ ತಿರುಚ್ಚಿ ಪೊಲೀಸ್ ಸೈಬರ್ ಕ್ರೈಂ ವಿಭಾಗವು ಬಿಜೆಪಿ ಯುವ ಘಟಕದ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲಿಸಿದೆ.

ಬಿಜೆಪಿ ಯುವ ಘಟಕದ ಕಾರ್ಯಕರ್ತ ಪ್ರವೀಣ್‌ರಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ‘ಸಂಘಿ ಪ್ರಿನ್ಸ್’ ಎಂಬ ಎಕ್ಸ್‌ ಖಾತೆಯಲ್ಲಿ ಬಿಜೆಪಿ ಯುವ ಘಟಕದ ಕಾರ್ಯಕರ್ತ ಪ್ರವೀಣ್‌ರಾಜ್, ಧರ್ಮಪುರಿ ಕ್ಷೇತ್ರದ ಡಿಎಂಕೆ ಸಂಸದ ಡಾ ಸೆಂಥಿಲ್ ಕುಮಾರ್ ಸಂಸತ್ತಿನ ಒಳಗೆ ಜಿಗಿದ ದುಷ್ಕರ್ಮಿಗಳಿಗೆ ಪಾಸ್ ವಿತರಿಸಿದ್ದರು ಎಂದು ಸುಳ್ಳು ಪೋಸ್ಟ್‌ ಮಾಡಿದ್ದರು. ಆರೋಪಿ ತಮಿಳುನಾಡು ಬಿಜೆಪಿಯ ಯುವ ಘಟಕದ ಸಾಮಾಜಿಕ ಮಾದ್ಯಮ ಉಸ್ತುವಾರಿಯೂ ಕೂಡ ಆಗಿದ್ದಾನೆ.

ವಕೀಲ ಆರೋಕಿಯದಾಸ್ ಅವರ ದೂರಿನ ಮೇರೆಗೆ ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಆರೋಪಿ ವಿರುದ್ಧ  ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504, 505(1)(ಬಿ) ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯಿದೆಯ ಸೆಕ್ಷನ್ 66ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರ ಬೆನ್ನಲ್ಲೇ ನಾಮಕ್ಕಲ್ ಜಿಲ್ಲೆಯ ರಾಶಿಪುರಂ ನಿವಾಸಿಯಾಗಿರುವ ಪ್ರವೀಣ್‌ರಾಜ್ ಅಲ್ಲಿಂದ ತಲೆಮರೆಸಿಕೊಂಡಿದ್ದಾನೆ.

ಪ್ರವೀಣ್‌ರಾಜ್ ಪೋಸ್ಟ್‌ನಲ್ಲಿ ಏನಿತ್ತು?

ಡಿ.13ರಂದು ಸಂಸತ್ತಿನಲ್ಲಿ ಭದ್ರತಾ ಲೋಪ ಘಟನೆ ಸಂಭವಿಸಿದ ದಿನ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಪ್ರವೀಣ್‌ರಾಜ್, ಲೋಕಸಭೆಯಲ್ಲಿ ಭದ್ರತಾ ಲೋಪ ಏಕೆ ಸಂಭವಿಸಿದೆ ಎಂದು ನಿಮಗೆ ತಿಳಿದಿದೆಯೇ? ನಿಮ್ಮಂತಹ ಬೇಜವಾಬ್ದಾರಿ ಸಂಸದರು, ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರಕ್ಕಾಗಿ ಹಿನ್ನೆಲೆ ಪರಿಶೀಲನೆ ಇಲ್ಲದೆ ಸಂದರ್ಶಕರಿಗೆ ಪಾಸ್‌ಗಳನ್ನು ಹಂಚುತ್ತಿದ್ದರು. ಸಂಸತ್ತಿನ ದಾಳಿ, ಈ ಆಪಾದನೆಯ ಜವಾಬ್ದಾರಿಯನ್ನು  ನೀವು ತೆಗೆದುಕೊಳ್ಳಿ ಎಂದು ಪೋಸ್ಟ್‌ ಮಾಡಿದ್ದ.

ಪ್ರವೀಣ್‌ರಾಜ್ ವಿರುದ್ಧ ಈ ಹಿಂದೆ ಕೂಡ ಪ್ರಕರಣ ದಾಖಲಾಗಿತ್ತು. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಪ್ರವೀಣ್‌ರಾಜ್ ಅವರನ್ನು ಈ ವರ್ಷದ ಅಕ್ಟೋಬರ್‌ನಲ್ಲಿ ಕರೂರು ಪೊಲೀಸರು ಬಂಧಿಸಿದ್ದರು.

ಲೋಕಸಭೆಯ ಚಳಿಗಾಲದ ಅಧಿವೇಶನದ ವೇಳೆ ಇಬ್ಬರು ಅಪರಿಚಿತರು ವೀಕ್ಷಕರ ಗ್ಯಾಲರಿಯಿಂದ ಹಠಾತ್ ಆಗಿ ಸಂಸದರು ಕುಳಿತುಕೊಳ್ಳುವ ಆಸನದ ಕಡೆಗೆ ನುಗ್ಗಿ ಘೋಷಣೆಗಳನ್ನು ಕೂಗುತ್ತಾ ಹಳದಿ ಬಣ್ಣದ ಗ್ಯಾಸ್ ಸ್ಪ್ರೇ ಹರಡಿದ್ದರು. 2001ರ ಸಂಸತ್ ದಾಳಿಯ 22ನೇ ವಾರ್ಷಿಕದ ದಿನದಂದೇ ಈ ಭದ್ರತಾ ಲೋಪ ಸಂಭವಿಸಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ವೇಳೆ ಭದ್ರತೆಯನ್ನು ಉಲ್ಲಂಘಿಸಿದ ಇಬ್ಬರು ವ್ಯಕ್ತಿಗಳಿಗೆ ಸದನದೊಳಗೆ ಪ್ರವೇಶಿಸಲು ಸಂದರ್ಶಕರ ಪಾಸ್‌ಗಳನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ನೀಡಿದ್ದರು ಎನ್ನುವುದು  ಬಯಲಾಗಿದೆ.

ಘಟನೆಗೆ ಸಂಬಂಧಿಸಿ ಲೋಕಸಭೆಯೊಳಗೆ ಸಾಗರ್ ಶರ್ಮಾ ಮತ್ತು ಡಿ ಮನೋರಂಜನ್, ಸಂಸತ್ತಿನ ಹೊರಗೆ ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಸಂಸತ್ತಿನ ಭದ್ರತಾ ವ್ಯವಸ್ಥೆಯನ್ನು ಭೇದಿಸುವ ಸಂಚು ರೂಪಿಸಿದ್ದ ಪ್ರಮುಖ ಆರೋಪಿ ಲಲಿತ್ ಝಾನನ್ನು ಬಂಧಿಸಲಾಗಿತ್ತು. ಇದಲ್ಲದೆ ಲಲಿತ್‌ ಝಾಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಮಹೇಶ್ ಕುಮ್ವತ್ ಮತ್ತು ಕೈಲಾಶ್ ಅವರ ವಿಚಾರಣೆ ಕೂಡ ನಡೆಯುತ್ತಿದೆ.

ಇದನ್ನು ಓದಿ: ಸಂಸತ್ತಿನ ಭದ್ರತಾ ಲೋಪ: ಅವಲೋಕನ ಮಾಡಬೇಕಾದ ಅಂಶಗಳಿವು..

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read