ಇಂದು ಪ್ರಧಾನಿ ನರೇಂದ್ರ ಮೋದಿಯವರ ಅಸ್ಸಾಂ ಭೇಟಿಗೂ ಮುನ್ನ, ಕೇಂದ್ರ ಸರ್ಕಾರದ ವಿವಾದಾತ್ಮಕ ಸಿಎಎ, ಎನ್‌ಆರ್‌ಸಿ ಕಾನೂನುಗಳನ್ನು ವಿರೋಧಿಸಿ ಶುಕ್ರವಾರ ತೇಜ್‌ಪುರದಲ್ಲಿ ರ್ಯಾಲಿ ನಡೆಸಿದ ಆಲ್ ಅಸ್ಸಾಂ ವಿದ್ಯಾರ್ಥಿ ಸಂಘದ (ಎಎಎಸ್‌ಯು) ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಅಸ್ಸಾಂನ ವಿವಿಧ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ದಿನವಿಡೀ ನಡೆದ ಪ್ರತಿಭಟನೆಯಲ್ಲಿ ಪಂಜಿನ ಮೆರವಣಿಗೆ ನಡೆಸಲಾಗಿದೆ. ಹಾಗಾಗಿ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಶುಕ್ರವಾರ ಹಲವಾರು ಎಎಎಸ್‌ಯು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಅಸ್ಸಾಂನಲ್ಲಿ ಈಗಾಗಲೇ ಎನ್‌ಆರ್‌ಸಿ ಜಾರಿಗೊಳಿಸಲಾಗಿದೆ. ಈ ಕಾನೂನು ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುತ್ತದೆ ಮತ್ತು ಭಾರತೀಯ ಸಂವಿಧಾನಕ್ಕೆ ವಿರುದ್ಧವಿದೆ ಎಂದು ಹಲವಾರು ಜನರು ವಿರೋಧಿಸಿದ್ದಾರೆ. ಹಾಗೆಯೇ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಿಂದ 2015ಕ್ಕೂ ಮೊದಲು ಅಕ್ರಮ ವಲಸೆ ಬಂದಿರುವ ಲಕ್ಷಾಂತರ ಬಾಂಗ್ಲಾದೇಶಿಯರು ಪೌರತ್ವ ಪಡೆಯಲಿದ್ದು ಇದು ಅಸ್ಸಾಂ ಅಸ್ಮಿತೆಯ ಮೇಲಿನ ದಾಳಿಯೆಂದು ಹಲವಾರು ಜನ ಭಾವಿಸಿದ್ದು ಈ ಕಾನೂನುಗಳ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.
ತೇಜ್‌ಪುರದಲ್ಲಿ ಸಾವಿರಾರು ಎಎಎಸ್‌ಯು ಕಾರ್ಯಕರ್ತರು ರ್ಯಾಲಿ ನಡೆಸಿದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಅಲ್ಲಿಂದ ಪೊಲೀಸ್ ದೌರ್ಜನ್ಯ ಹಿಂಸಾತ್ಮಕವಾಯಿತು ಎಂದು ಎನ್‌ಡಿಟಿವಿ ವರದಿ ಮಾಡಿದೆ. ಪೊಲೀಸ್ ದೌರ್ಜನ್ಯವನ್ನು ಖಂಡಿಸಿರುವ ವಿದ್ಯಾರ್ಥಿಗಳು ಶನಿವಾರ ಸೋನಿತ್ಪುರ ಜಿಲ್ಲೆ ಬಂದ್‌ಗೆ ಕರೆ ನೀಡಿದ್ದಾರೆ. ಶನಿವಾರ-ಭಾನುವಾರ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸ್ಸಾಂಗೆ ಭೇಟಿ ನೀಡುವುದನ್ನು ವಿರೋಧಿಸಿ ಸಿಎಎ ವಿರುದ್ಧ ಮೂರು ದಿನಗಳ ಪ್ರತಿಭಟನೆಗೆ ವಿದ್ಯಾರ್ಥಿ ಸಂಘಗಳು ಕರೆ ನೀಡಿವೆ.
“ನಮ್ಮ ಶಾಂತಿಯುತ, ಪ್ರಜಾಪ್ರಭುತ್ವ ಪರವಾದ ಪಂಜಿನ ಮೆರವಣಿಗೆ ರ್ಯಾಲಿಯನ್ನು ನಿಲ್ಲಿಸುವಂತೆ ಸರ್ಕಾರ ಪೊಲೀಸರಿಗೆ ನಿರ್ದೇಶನ ನೀಡಿದೆ. ಈ ಬಿಜೆಪಿ ಸರ್ಕಾರವು ಬಲಪ್ರಯೋಗದ ಮೂಲಕ ನಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ” ಎಂದು ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಂಕ್ ನಾಥ್ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂನಲ್ಲಿರುವ ಸಮಯದಲ್ಲಿ ಸಿಎಎ ವಿರುದ್ಧ ನಮ್ಮ ಆಂದೋಲನವನ್ನು ತೀವ್ರಗೊಳಿಸುತ್ತೇವೆ. ಕೇಂದ್ರ ಸರ್ಕಾರ ಸಿಎಎ ರದ್ದುಗೊಳಿಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: CAA ವಿರೋಧಿ ನಾಟಕಕ್ಕೆ ದೇಶದ್ರೋಹದ ಪ್ರಕರಣ ಎದುರಿಸಿದ್ದ ಶಾಹೀನ್ ಸಂಸ್ಥೆ ವಿದ್ಯಾರ್ಥಿ ಕರ್ನಾಟಕ NEET ಟಾಪರ್!