ಟಾಲ್ಸ್‌‌ಟಾಯ್
PC: Getty Images

[ಇಂದು ಜಗತ್ತಿನ ಶ್ರೇಷ್ಠ ಮಾನವತಾವಾದಿ, ರಶ್ಯನ್ ಸಾಹಿತಿ ಲಿಯೋ ಟಾಲ್ಸ್ಟಾಯ್ ಹುಟ್ಟಿದ ದಿನ. ಆ ನೆನಪಿನಲ್ಲಿ 1909ರಲ್ಲಿ ಟಾಲ್ಸ್‌‌ಟಾಯ್ ಮಾಡಿದ ಈ ಭಾಷಣವನ್ನು ಪ್ರಕಟ ಮಾಡುತ್ತಿದ್ದೇವೆ. ಕನ್ನಡ ಚಿಂತಕ ಕೆ ಕೆ. ಮರುಳಸಿದ್ಧಪ್ಪ ಇದನ್ನು ಅನುವಾದಿಸಿದ್ದಾರೆ]

ಪ್ರೀತಿಯ ಸೋದರರೇ:

ಯುದ್ಧದ ವಿರುದ್ಧ ಹೋರಾಡಲು ನಾವಿಲ್ಲಿ ಸೇರಿದ್ದೇವೆ; ಯುದ್ಧದ ಸಲುವಾಗಿ ಪ್ರಪಂಚದ ಎಲ್ಲಾ ದೇಶಗಳೂ, ಕೋಟ್ಯಂತರ ಜನಗಳೂ, – ಕೆಲವೇ ಜನಗಳ ಅಥವಾ ಒಮ್ಮೊಮ್ಮೆ ಕೇವಲ ಒಬ್ಬ ವ್ಯಕ್ತಿಯ ಅನಿರ್ಬಂಧಿತ ವಶಕ್ಕೆ ಒಳಗಾಗಬೇಕಾಗುತ್ತದೆ; ಬಹುಪಾಲು ಶ್ರಮದ ದುಡಿಮೆಯನ್ನು ಪ್ರತಿನಿಧಿಸುವ ಕೋಟ್ಯಂತರ ರೂಬಲ್, ಫ್ರಾಂಕ್ ಅಥವಾ ಯೆನ್‌ಗಳು ಮಾತ್ರವಲ್ಲ, ಅವರ ಜೀವವನ್ನೇ ಪಣವಿಡಬೇಕಾಗುತ್ತದೆ. ನಾವಾದರೂ ಕೆಲವೇ ಮಂದಿ ಖಾಸಗಿ ಜನಗಳು ಜಗತ್ತಿನ ಬೇರೆ ಬೇರೆ ಭಾಗಗಳಿಂದ ಬಂದು ಇಲ್ಲಿ ಸೇರಿದ್ದೇವೆ.

ಇದನ್ನೂ ಓದಿ: ಯುದ್ದವೆಂಬುದು ವ್ಯಾಪಾರ ಮತ್ತು ಬೃಹತ್‌ ಉದ್ಯಮವಾಗಿದೆ: ಬರಗೂರು ರಾಮಚಂದ್ರಪ್ಪ

ಯಾವ ಬಗೆಯ ವಿಶಿಷ್ಟ ಸೌಲಭ್ಯಗಳೂ ಇಲ್ಲದೇ, ಯಾರ ಮೇಲೂ ಯಾವ ಬಗೆಯ ಅಧಿಕಾರವೂ ಇಲ್ಲದೆ, ನಾವು ಹೋರಾಡಬಯಸುತ್ತವೆ; ಕೇವಲ ಹೋರಾಟ ಮಾತ್ರವಲ್ಲ, ಗೆಲ್ಲಬೇಕೆಂದೂ ಬಯಸಿದ್ದೇವೆ. ನಾವು ಹೋರಾಡುತ್ತಿರುವುದು ಕೇವಲ ಒಂದು ಸರ್ಕಾರದೊಂದಿಗೆ ಅಲ್ಲ;  ಕೋಟ್ಯವಧಿ ಹಣ ಮತ್ತು ಸೈನಿಕರಿಂದ ಕೂಡಿ, ಅಪರಿಮಿತ ಶಕ್ತಿ ಸಾಮರ್ಥ್ಯಗಳನ್ನು ಪಡೆದಿರುವ ಎಲ್ಲಾ ಸರ್ಕಾರಗಳೊಂದಿಗೆ. ಸರ್ಕಾರಗಳನ್ನು ರೂಪಿಸುವವರ ವಿಶಿಷ್ಟ ಸ್ಥಾನಮಾನಗಳು ನಿಂತಿರುವುದು ಸೈನ್ಯದ ಮೇಲೆ, ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಸೈನ್ಯಕ್ಕೆ ಒಂದು ಅರ್ಥ ಮತ್ತು ಉದ್ದೇಶಗಳು ಉಂಟಾಗುವುದು ಯುದ್ಧವಿದ್ದರೆ ಮಾತ್ರ. ಈ ಯುದ್ಧದ ವಿರುದ್ಧವೇ ನಾವು ಹೋರಾಡಬಯಸುವುದು; ಮತ್ತು ತೊಡೆದುಹಾಕಬಯಸುವುದು.

ಶಕ್ತಿಗಳು ಇಷ್ಟೊಂದು ಅಸಮವಾಗಿರುವಾಗ, ನಾವು ಹೋರಾಡಬಯಸುವುದು ಹುಚ್ಚುತನವೆಂಬಂತೆ ಕಂಡುಬರಬಹುದು. ನಮ್ಮ ವಿರೋಧಿಗಳ ಕಲಹದ ಸಾಧನದೊಂದಿಗೆ ಹೋಲಿಸಿದರೆ, ನಮ್ಮದು ಅಸಂಬದ್ಧವಾಗಬಹುದಾದರೂ ಹೋರಾಟದ ಅಗತ್ಯವಿದೆ; ಏಕೆಂದರೆ, ನಾವು ಯಾವುದರ ವಿರುದ್ಧ ಹೋರಾಡಬೇಕೆನ್ನುತ್ತೇವೆಯೋ ಇದು ಇನ್ನೂ ಬದುಕಿದೆ. ಅವರಿಗೆ ಕೋಟ್ಯಂತರ ಹಣವಿದೆ; ಕೋಟ್ಯವಧಿ ಸೈನಿಕರಿದ್ದಾರೆ. ಸತ್ಯವೇ ನಮ್ಮ ಏಕಮೇವ ಬಲ; ಆದರೆ, ಅದು ಜಗತ್ತಿನಲ್ಲಿಯೇ ಅತ್ಯಂತ ಪ್ರಬಲವಾದುದು. ನಮ್ಮ ಬಲ, ವಿರೋಧಿಗಳೊಂದಿಗೆ ಹೋಲಿಸಿದಾಗ ನಿಕೃಷ್ಟವಾಗಿ ಕಾಣಬಹುದಾದರೂ ನಮಗೆ ಗೆಲುವಾಗುವುದು ಶತಸ್ಸಿದ್ಧ; ಉದಯಿಸುತ್ತಿರುವ ಸೂರ್ಯನ ಬೆಳಕು ಇರುಳು ಕತ್ತಲೆಯ ಮೇಲೆ ಜಯಪಡೆದಂತೆ.

ಒಂದೇ ಒಂದು ನಿಯಮದ ಮೇಲೆ ನಮಗೆ ಗೆಲುವು ಖಚಿತವಾಗಿದೆ: ಯಾವುದೆ ರೀತಿಯ ಒಪ್ಪಂದ, ವಿನಾಯಿತಿ ಅಥವಾ ಮಾರ್ಪಾಟುಗಳಿಲ್ಲದೆ ನಾವು ಸಂಪೂರ್ಣ ಸತ್ಯವನ್ನೇ ನುಡಿಯುತ್ತೇವೆ, ಎಂಬುದು ನಿಯಮ. ಸತ್ಯ ಎನ್ನುವುದು ಕ್ರೈಸ್ತರಿಗೆ ಮಾತ್ರವಲ್ಲ ವಿವೇಕಿಗಳೆಲ್ಲರಿಗೂ ಅತ್ಯಂತ ಸರಳವಾದ, ಸ್ಪಷ್ಟವಾದ ಪ್ರತ್ಯಕ್ಷ ಕರ್ತವ್ಯವಾಗಿದೆ. ಪ್ರತಿಭಟಿಸಲಾಗದಂತಿರಬೇಕಾದರೆ ಅದನ್ನು ಆಖಂಡವಾಗಿ ಪರಿಣಾಮಕಾರಿಯಾಗಿ ವ್ಯಕ್ತಪಡಿಸಬೇಕಾದ ಅಗತ್ಯವಿದೆ.

ಇದನ್ನೂ ಓದಿ: ಜೈಲು ಕಾಣಿಸುವ ಇನ್ನೊಂದು ಸತ್ಯ : ಡಾ.ರಹಮತ್ ತರೀಕೆರೆ

ಸತ್ಯವೆನ್ನುವುದು ಸಾವಿರಾರು ವರ್ಷಗಳ ಹಿಂದೆಯೇ (ದೇವರ ನಿಯಮದಂತೆ ನಾವುಗಳು ಈ ಕಾರಣವನ್ನು ಒಪ್ಪಿದ್ದೇವೆ. ನಾಲ್ಕೇ ಪದಗಳಲ್ಲಿ ವ್ಯಕ್ತವಾಗಿದೆ: “Thou Shalt not kill”. ನಿಜವಾಗಿಯೂ ಮನುಷ್ಯನು ಯಾವುದೇ ಸಂದರ್ಭದಲ್ಲಿಯೂ ಯಾವ ನೆಪದಿಂದಲೂ ತನ್ನ ಸಂಗಡಿಗನನ್ನು ಕೊಲ್ಲಲು ಸಾಧ್ಯವಿಲ್ಲ; ಕೊಲ್ಲಬಾರದು.

ಸತ್ಯವೆನ್ನುವುದು ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗಿರುವ ಪ್ರತ್ಯಕ್ಷ ಕರಾರಿನಂತಿರುವುದರಿಂದ, ಮನುಷ್ಯರ ಮುಂದೆ ಅದನ್ನು ಹೆಚ್ಚು ಸ್ಪಷ್ಟವಾಗಿ ಮಂಡಿಸಬೇಕಾದ ಅಗತ್ಯವಿದೆಯಷ್ಟೆ; ಆಗಲೇ, ಯುದ್ಧವೆನ್ನುವ ದುಷ್ಕೃತ್ಯ ಅಸಾಧ್ಯವಾಗಿ ಪರಿಣಮಿಸುವುದು.

ಆದುದರಿಂದ ಈ ಸಮ್ಮೇಳನದಲ್ಲಿ ಒಂದೆಡೆ ಸೇರಿರುವ ನಾವುಗಳು, ಸ್ಪಷ್ಟವಾಗಿ ಖಚಿತವಾಗಿ ಸತ್ಯವನ್ನು ನುಡಿಯಬೇಕು ಹೊರತು, ಯುದ್ಧದ ಕೆಡುಕುಗಳನ್ನು ಕಡಿಮೆಮಾಡಲು ಅಥವಾ ಕ್ರಮೇಣ ಯುದ್ಧಗಳ ಸಂಭವ ಪ್ರಮಾಣವನ್ನು ಕ್ಷೀಣಿಸಲು ಸರ್ಕಾರಗಳಿಗೆ ಅನೇಕ ಬಗೆಯ ಯೋಜನೆಗಳನ್ನು ವಿನಂತಿಸಬೇಕಿಲ್ಲ. ಹಾಗೆ ಮಾಡುವುದಾದರೆ, ಬಾಗಿಲಿನ ಬೀಗವನ್ನೇ ಕೈಯಲ್ಲಿಟ್ಟುಕೊಂಡಿದ್ದು ಗೋಡೆ ಒಡೆದು ನುಗ್ಗಲು ಪ್ರಯತ್ನಿಸುವ ಗಾಂಪರಂತಾಗುತ್ತೇವೆ. ನಮ್ಮ ಮುಂದೆ ಲಕ್ಷಾಂತರ ಶಸ್ತ್ರಸಜ್ಜಿತ ಸೈನಿಕರಿದ್ದಾರೆ; ಅವರನ್ನು ಹೆಚ್ಚುಹೆಚ್ಚಿನ ಶಸ್ತ್ರಾಸ್ತ್ರಗಳಿಂದ ಬಲಪಡಿಸಲಾಗಿದೆ; ಹೆಚ್ಚು ಸಂಖ್ಯೆಯಲ್ಲಿ ಮತ್ತು ವೇಗದಲ್ಲಿ ಕೊಲೆಮಾಡಲು ಅವರಿಗೆ ತರಬೇತಿ ಕೊಡಲಾಗಿದೆ.

ಈ ಲಕ್ಷಾಂತರ ಜನಗಳಿಗೆ ತಮ್ಮ ಸಹಚರರನ್ನು ಕೊಲ್ಲುವ ಬಯಕೆಯೇನು ಇಲ್ಲವೆಂಬುದು ನನಗೆ ಗೊತ್ತಿದೆ; ಮಾತ್ರವಲ್ಲ, ಈ ಬಗೆಯ ಅಸಹ್ಯ ಕೆಲಸವನ್ನು ಮಾಡಲು ಏಕೆ ಅವರನ್ನು ಒತ್ತಾಯಿಸಲಾಗುತ್ತಿದೆ, ಎಂಬುದು ಸಹ ಅವರಲ್ಲಿ ಬಹುಜನಗಳಿಗೆ ಗೊತ್ತಿಲ್ಲ. ನಿರ್ಬಂಧದಿಂದ ಕೂಡಿದ ಅವರ ಅಧೀನ ಸ್ಥಿತಿಯನ್ನು ಕುರಿತು ಅವರು ಬೇಸರ ಹೊಂದಿದ್ದಾರೆ. ಕಾಲದಿಂದ ಕಾಲಕ್ಕೆ ಇವರು ಮಾಡಿದ ಕೊಲೆಗಳು ಸರ್ಕಾರದ ಅಪ್ಪಣೆಯಂತೆ ಮಾಡಲ್ಪಟ್ಟಿವೆಯೆಂದೂ ನಮಗೆ ಗೊತ್ತಿದೆ. ಹೀಗಿರುವಾಗ ಯುದ್ಧ ನಿಷೇಧವನ್ನು ಬಯಸುವ ನಾವು, ನಮ್ಮ ಗುರಿಯ ಸಾಧನೆಗಾಗಿ ಇನ್ನೂ ಉತ್ತಮ ನೆರವನ್ನು ಕಂಡುಹಿಡಿಯಬೇಕೇ ಹೊರತು, ಸೈನ್ಯ ಮತ್ತು ಯುದ್ಧಗಳು ಬಲದಮೇಲೆ ನಿಂತಿರುವ ಸರ್ಕಾರಕ್ಕೆ ಯುದ್ಧ ನಿರ್ಮೂಲನವನ್ನು ಕುರಿತು ಸಲಹೆ ಮಾಡಬೇಕು? ಸರ್ಕಾರಗಳಿಗೆ ತಮ್ಮನ್ನು ತಾವೇ ನಾಶಮಾಡಿಕೊಳ್ಳಲು ಸಲಹೆ ನೀಡುವುದು ಹೇಗೆ?

ಇದನ್ನೂ ಓದಿ: ಭೀಮರಾಜ್ಯದ ಮುಂದೆ ರಾಮರಾಜ್ಯ ಧೂಳಿಪಟವಾಗುತ್ತದೆ; ಒಂದು ಪ್ರತಿಕ್ರಿಯೆ

ಸರ್ಕಾರಗಳು ಮಾತ್ರ ಈ ಬಗೆಯ ಯಾವುದೇ ಭಾಷಣಗಳನ್ನು ಸಮ್ಮತಿ ಪೂರ್ವಕವಾಗಿಯೇ ಆಲಿಸುತ್ತದೆ. ಏಕೆಂದರೆ, ಈ ಬಗೆಯ ಚರ್ಚೆಗಳು ಯುದ್ಧವನ್ನು ನಿರ್ಮೂಲಗೊಳಿಸುವುದೂ ಇಲ್ಲ ಅಥವಾ ಅವರ ಅಧಿಕಾರವನ್ನು ಶಿಥಿಲಗೊಳಿಸುವುದೂ ಇಲ್ಲವೆಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ; ಪ್ರತಿಯಾಗಿ, ಯುದ್ಧಗಳು, ಸೈನ್ಯಗಳು ಮತ್ತು ಅವುಗಳ ಅಧಿಪತಿಗಳಾದ ಅವರುಗಳು ಯಾವುದನ್ನು ಗೋಪ್ಯವಾಗಿಟ್ಟುಕೊಂಡು ಉಳಿಯಲು ಅಪೇಕ್ಷಿಸುತ್ತಾರೆಯೋ ಅಂಥವುಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಗುಟ್ಟಾಗಿಡಲು ಈ ಭಾಷಣಗಳು ಸಹಕಾರಿಯಾಗುತ್ತವೆ ಎಂದು ಅವರಿಗೆ ಗೊತ್ತಿದೆ.

ಆದರೆ, ನನಗೆ ಹೇಳುತ್ತಾರೆ: ‘ಇದು ಅರಾಜಕತೆ: ಜನಗಳು ಯಾವಾಗಲೂ ದೇಶ ಮತ್ತು ಸರ್ಕಾರಗಳಿಲ್ಲದೆ ಜೀವಿಸಿದ್ದಿಲ್ಲ; ಆದುದರಿಂದ ದೇಶಗಳ ಅಸ್ತಿತ್ವಕ್ಕೆ ಮತ್ತು ಜನಗಳ ರಕ್ಷಣೆಗೆ ಸರ್ಕಾರ ಮತ್ತು ಮಿಲಿಟರಿ ಶಕ್ತಿಗಳ ಅಗತ್ಯವಿದೆ’.

ಕ್ರೈಸ್ತ ದೇಶಗಳು ಮತ್ತು ಇತರ ದೇಶಗಳು ಬದುಕಲು ಮತ್ತು ಅವರ ಸರ್ಕಾರ ಗಳನ್ನು ಸಮರ್ಥಿಸಿಕೊಳ್ಳಲು ಸೈನ್ಯ ಮತ್ತು ಯುದ್ಧಗಳಿಲ್ಲದಿದ್ದರೆ ಸಾಧ್ಯವಿಲ್ಲವೇ? ಪ್ರಶ್ನೆಯನ್ನು ಒತ್ತಟ್ಟಿಗಿಟ್ಟು, ಅವರ ಹಿತದೃಷ್ಟಿಯಿಂದಲೇ, ಗುಲಾಮರಂತೆ ಸರ್ಕಾರಗಳೆಂಬ ಸಂಸ್ಥೆಗಳಿಗೆ (ಅವರಿಗೆ ವೈಯಕ್ತಿಕವಾಗಿ ಪರಿಚಯವೇ ಇಲ್ಲದ ಜನಗಳಿಂದ ಕೂಡಿರುವ) ಅಧೀನರಾಗುವುದು ಅನಿವಾರ್ಯವೆಂಬುದನ್ನು ಭಾವಿಸಿಕೊಂಡು, ಎಲ್ಲ ಜನರಿಗೂ – ವಿಶೇಷವಾಗಿ ಕ್ರೈಸ್ತ ದೇಶಗಳಿಗೆ ಒಂದು ಮನವಿಯನ್ನು ಸಿದ್ಧಿಪಡಿಸೋಣ; ಎಲ್ಲರಿಗೂ ಗೊತ್ತಿದ್ದರೂ ಯಾರೂ ವ್ಯಕ್ತಪಡಿಸದಿರುವ ವಿಚಾರಗಳಿಗೆ ಸ್ಪಷ್ಟವಾಗಿ ಖಚಿತವಾಗಿ ಅಭಿವ್ಯಕ್ತಿ ಕೊಡೋಣ. ಯುದ್ಧವೆಂಬುದು ಈಗ ಬಹುಜನ ಅಂಗೀಕರಿಸುವಂತೆ, ಒಂದು ಉತ್ತಮ ಸ್ತುತ್ಯರ್ಹ ಸಂಗತಿಯೇನು ಅಲ್ಲ; ಎಲ್ಲ ಕೊಲೆಗಳಂತೆಯೇ ಇದೂ ನೀಚವಾದ ಅಪರಾಧ; ಮಿಲಿಟರಿ ಉದ್ಯೋಗವನ್ನು ಸ್ವತಃ ಅವಲಂಬಿಸುವವರಿಗೆ ಮಾತ್ರವಲ್ಲ; ದುರಾಶೆ ಅಥವಾ ಶಿಕ್ಷೆಯ ಹೆದರಿಕೆಯಿಂದ ಕಡ್ಡಾಯವಾಗಿ ಅಧೀನಕ್ಕೊಳಪಟ್ಟಿರುವವರಿಗೂ ಇದು ಅನ್ವಯಿಸುತ್ತದೆ, ಎಂಬುದಾಗಿ ವಿವರಿಸೋಣ.

ಇದನ್ನೂ ಓದಿ: ಜನಸಂಕಷ್ಟಕ್ಕೆ ದನಿಯಾದ ಜೀವನಾಡಿಗಳು

ಸ್ವಪ್ರೇರಣೆಯಿಂದ ಮಿಲಿಟರಿ ಉದ್ಯೋಗವನ್ನು ಆರಿಸಿಕೊಂಡಿರುವವರಿಗೆ ನಾನು ಸ್ಪಷ್ಟವಾಗಿ ಮತ್ತು ಖಚಿತವಾಗಿ ಹೇಳಬೇಕೆಂದಿದ್ದೇನೆ: ಎಷ್ಟೇ ವೈಭವ ಮತ್ತು ಬೆರಗುಗಳಿಂದ ಹಾಗೂ ಸರ್ವಸಮ್ಮತಿಯಿಂದ ಕೂಡಿದ್ದರೂ ಅದು ನಾಚಿಕೆಗೇಡಿನ ನೀಚವೃತ್ತಿ; ಮಿಲಿಟರಿ ಉದ್ಯೋಗದಲ್ಲಿ ಒಬ್ಬ ಮನುಷ್ಯ ಎಷ್ಟು ಉಚ್ಚಸ್ಥಾನದಲ್ಲಿರುತ್ತಾನೆಯೋ ಅಷ್ಟು, ಅವನ ಮರ್ಯಾದೆಗೆಟ್ಟ ಅಪರಾಧಗಳು ಜಾಸ್ತಿಯಾಗುತ್ತಾ ಹೋಗುತ್ತವೆ. ಲಂಚ ಮತ್ತು ಶಿಕ್ಷೆಯ ಹೆದರಿಕೆಯಿಂದ ಮಿಲಿಟರಿ ಸೇವೆಗೆ ಒತ್ತಾಯಪೂರ್ವಕವಾಗಿ ಎಳೆಯಲ್ಪಟ್ಟಿರುವವರಿಗೂ ನಾನು ಸ್ಪಷ್ಟವಾಗಿ ಮತ್ತು ಖಚಿತವಾಗಿ ಹೇಳುವುದೇನೆಂದರೆ ಅವರು ಸೈನ್ಯವನ್ನು ಸೇರಲು ಒಪ್ಪಿಕೊಂಡಾಗ ತಮ್ಮ ನಂಬಿಕೆ, ನೈತಿಕ ನಿಲುವು ಮತ್ತು ವಿವೇಕಕ್ಕೆ ವಿರುದ್ಧವಾಗಿ ಅತಿಸ್ಪಷ್ಟವಾದ ತಪ್ಪನ್ನು ಮಾಡಿದ್ದಾರೆಂದು ಎಣಿಸುತ್ತೇನೆ.

ಅವರ ನಂಬಿಕೆಗೆ ವಿರುದ್ಧವೇಕೆಂದರೆ, ಕೊಲೆಗಾರರಾದ ಸೈನಿಕರನ್ನು ಸೇರುವುದರ ಮೂಲಕ ಅವರು ಒಪ್ಪುವ ದೇವರ ನಿಯಮವನ್ನು ಉಲ್ಲಂಘಿಸಿದ್ದಾರೆ; ಅವರ ನೈತಿಕ ನಿಲುವಿಗೆ ವಿರೋಧವಾಗಿದೆಯೇಕೆಂದರೆ, ಸಂಬಳ ಅಥವಾ ಶಿಕ್ಷೆಯ ಹೆದರಿಕೆಯಿಂದಾಗಿ –  ಆತ್ಮಸಾಕ್ಷಿಗನುಗುಣವಾಗಿ ಅವರು ತಪ್ಪೆಂದು ತಿಳಿದಿರುವುದರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ;

ವಿವೇಕಕ್ಕೆ ವಿರುದ್ಧವಾಗಿದೆಯೇಕೆಂದರೆ, ಅವರು ಸೈನ್ಯಕ್ಕೆ ಸೇರಿದಮೇಲೆ ಯುದ್ಧವೇನಾದರೂ ಘಟಿಸಿದರೆ ಹಾನಿಯಾಗುತ್ತದೆ; ಈ ಹಾನಿ, ಅವರು ಸೈನ್ಯಕ್ಕೆ ಸೇರಲು ಒಪ್ಪದಿದ್ದರೆ ವಿಧಿಸುತ್ತಿದ್ದ ಶಿಕ್ಷೆಗಿಂತ ಕಡಿಮೆಯೇನೂ ಆಗಿರುವುದಿಲ್ಲ. ಅದಕ್ಕಿಂತ ಹೆಚ್ಚಾದ ಅವಿವೇಕವೆಂದರೆ, ತಮ್ಮ ಸ್ವಾತಂತ್ರ್ಯವನ್ನು ಅಪಹರಿಸಿ, ಸೈನಿಕರಾಗಲು ಅವರನ್ನು ಒತ್ತಾಯಿಸಿದೆ ಜಾತಿಯ ಜನಗಳನ್ನು ಅವರು ಸೇರಿರುವುದು.

ಇದನ್ನೂ ಓದಿ: ಕ್ರಾಂತಿಯ ಕಿಡಿ ಹೊತ್ತಿಸಿದವರು ಕಿಡಿಗೇಡಿಗಳಿಂದ ಹತ್ಯೆಯಾದ ಕಥೆ

ಈ ಎರಡು ವರ್ಗಗಳ ಸೈನಿಕರಿಗೂ ಸಂಬಂಧಪಟ್ಟಂತೆ, ಈ ಮನವಿಯಲ್ಲಿ ಸ್ಪಷ್ಟವಾಗಿ ನಿಮ್ಮ ಆಲೋಚನೆಯನ್ನು ವ್ಯಕ್ತಪಡಿಸಿ, ಅಲ್ಲಿರುವ ನಿಜವಾದ ವಿವೇಕಿಗಳ ಗಮನ ಸೆಳೆಯಬೇಕೆಂದು ನಾನು ಸೂಚಿಸುತ್ತೇನೆ. ಏಕೆಂದರೆ, ಅವರುಗಳು ಮಿಲಿಟರಿ ವೈಭವ, ಹೇಳಿಕೆ ಮತ್ತು ಪ್ರೇರಣೆಗಳ ಮೂಢ ನಂಬಿಕೆಗಳಿಂದ ಮುಕ್ತರಾದವರು. (ಈ ಬಗೆಯ ಜನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ). ಹೇಗಾದರೂ ಮಾಡಿ ಅದರ ನಿಜವಾದ ಅರ್ಥವನ್ನು ಅವರಿಂದ ಮುಚ್ಚಿಡಲು ಯತ್ನಿಸಲಾಗುತ್ತಿದೆಯಾದರೂ, ಸೈನಿಕವೃತ್ತಿ, ಗಲ್ಲಿಗೇರಿಸುವವರಂತೆಯೇ ಅಥವಾ ಇನ್ನೂ ಹೆಚ್ಚಾದ ನಾಚಿಕೆಗೇಡಿನ ವೃತ್ತಿಯಾಗಿದೆಯೆಂಬುದನ್ನು ಅವರ ಗಮನಕ್ಕೆ ತರಬೇಕು. ಏಕೆಂದರೆ, ಗಲ್ಲಿಗೇರಿಸುವವನು ಈಗಾಗಲೇ ಆಪಾಯಕಾರಿ ಅಪರಾಧಿಗಳೆಂದು ನಿರ್ಣಯಿಸಲ್ಪಟ್ಟವರನ್ನು ಮಾತ್ರ ಕೊಲ್ಲಲು ತಯಾರಾಗುತ್ತಾನೆ. ಆದರೆ, ಒಬ್ಬ ಸೈನಿಕ ತನಗೆ ಆಪ್ತರೇ ಆಗಿರಲಿ, ಒಳ್ಳೆಯವರು ಆಗಿರಲಿ, ಎಲ್ಲರನ್ನೂ ಅಪ್ಪಣೆ ಬಂದರೆ ಕೊಲ್ಲಲು ಭರವಸೆ ಕೊಟ್ಟಿರುತ್ತಾನೆ.

ಸಾರ್ವತ್ರಿಕವಾಗಿ ಮಾನವಜನಾಂಗ ಮತ್ತು ನಿರ್ದಿಷ್ಟವಾಗಿ ಕ್ರೈಸ್ತಜನಾಂಗವು ತನ್ನ ಸೈನಿಕ ನಿಷ್ಠೆ ಹಾಗೂ ಸಮಕಾಲೀನ ಸಾಮಾಜಿಕ ವ್ಯವಸ್ಥೆಗಳ ನಡುವೆ ತೀವ ವಿರೋಧವಿರುವಂತಹ ಘಟ್ಟವನ್ನು ಮುಟ್ಟಿಬಿಟ್ಟಿದೆ. ಬದಲಾವಣೆ ಅನಿವಾರ್ಯವಾಗಿದೆ. ಆದರೆ ಈ ಬದಲಾವಣೆ ಮಾರ್ಪಡಿಸಲಾಗದ ನೈತಿಕ ನಿಷ್ಠೆಗಳಿಗೆ ಸಂಬಂಧಪಟ್ಟದ್ದಾಗಿರುವುದಿಲ್ಲ. ಬದಲಾಯಿಸಬಹುದಾದ, ಸಾಮಾಜಿಕ ವ್ಯವಸ್ಥೆಗೆ ಸಂಬಂಧಪಟ್ಟಿರುತ್ತದೆ. ಬೇರೆ ರೀತಿಯ ಸಾಮಾಜಿಕ ವ್ಯವಸ್ಥೆಯ ಅವಶ್ಯಕತೆ ವರ್ಷದಿಂದ ದರ್ಪಕ್ಕೆ, ಪ್ರತಿದಿನವೂ ಹೆಚ್ಚುಹೆಚ್ಚಾಗಿ ಸ್ಪಷ್ಟವಾಗುತ್ತದೆ.

ಕೊಲೆಗಾಗಿ ನಡೆಸುವ ನಮ್ಮ ಸಿದ್ಧತೆಗಳಿಂದ ಹುಟ್ಟಿದ ಆಂತರಿಕ ವಿರೋಧಗಳಲ್ಲಿ ಅದಕ್ಕೆ ದೃಷ್ಟಾಂತಗಳನ್ನು ಕಾಣಬಹುದಾಗಿದೆ. ಬದಲಾವಣೆಯನ್ನು ಅಪೇಕ್ಷಿಸುವ ಉದ್ವೇಗ ಯಾವ ಘಟ್ಟವನ್ನು ಮುಟ್ಟಿದೆಯೆಂದರೆ, ಒಮ್ಮೊಮ್ಮೆ ಒಂದು ಚಿಕ್ಕ ಪ್ರಚೋದನೆಯಿಂದ, ದ್ರವವು ಘನವಸ್ತುವಾಗಿ ಮಾರ್ಪಡುವಂತೆ, ಒಂದು ಚಿಕ್ಕ ಪ್ರಯತ್ನ ಅಥವಾ ಕೇವಲ ಒಂದು ಮಾತು ನಮ್ಮ ಕಾಲದ ಕ್ರೂರವಾದ -ಸೈನ್ಯ, ಸೈನ್ಯದ ತುಕಡಿ ಮತ್ತು ಶಸ್ತ್ರಾಸ್ತ್ರಗಳ – ಅವಿವೇಕದ ಜೀವನವನ್ನು ಸಮಕಾಲೀನ ಮಾನವೀಯ ಪ್ರಜ್ಞೆಗನುಗುಣವಾಗಿ ವಿವೇಕಯುತಗೊಳಿಸೀತು. ಒಂದೊಂದು ಪ್ರಯತ್ನವೂ, ಒಂದೊಂದು ಮಾತೂ ಸಹ ಪ್ರಚೋದನೆಯಂತೆ ಪರಿಣಮಿಸಿ ಈಗಾಗಲೇ ವಿಪರೀತ ತಣ್ಣಗಾಗಿರುವ ದ್ರವವನ್ನು ಕೂಡಲೇ ಘನೀಭವಿಸುವಂತೆ ಮಾಡಬಹುದು.

ಇದನ್ನೂ ಓದಿ: ಮರಾಠಿ ಸಂಸ್ಕೃತಿ: ಕೆಲವು ಸಮಸ್ಯೆಗಳು-‘ಕನ್ನಡ ಮತ್ತು ಮರಾಠಿ ದಾಯಾದಿ ಸಂಬಂಧಗಳ ಶೋಧ’

ನಿಮ್ಮ ಈ ಸಮ್ಮೇಳನವೇ ಯಾಕೆ ಅಂತಹ ಪ್ರಚೋದನೆಯಾಗಬಾರದು? ಅಂಡರ್‌ಸನ್ನನ ಅದ್ಭುತ ಕಥೆಗಳಲ್ಲಿ, ಒಬ್ಬ ರಾಜನು ವಿಜಯದ ಮೆರವಣಿಗೆ ಹೊರಟಾಗ ದಾರಿಯುದ್ದಕ್ಕೂ ನೆರೆದಿದ್ದ ಪಟ್ಟಣದ ಜನ ಅವನ ಸುಂದರವಾದ ಹೊಸ ಉಡುಗಳನ್ನು ಕಂಡು ಸಂತೋಷಪಡುತ್ತಿದ್ದರು; ಆದರೆ ಒಂದು ಚಿಕ್ಕ ಮಗುವಿನ ಪ್ರತಿಕ್ರಿಯೆ, ಸ್ಥಿತಿಯನ್ನು ತಲೆಕೆಳಗುಮಾಡಿತು. ಎಲ್ಲರಿಗೂ ಗೊತ್ತಿದ್ದರೂ ಯಾರೂ ಹೇಳದಿದ್ದ ಮಾತನ್ನೇ ಅದುಹೇಳಿತು: ‘ಅವನು ಬೆತ್ತಲೆ ಇದ್ದಾನೆ’, ಎಂದು ಆ ಮಗು ಕೂಗಿದ ತಕ್ಷಣ ಮಂತ್ರಮುಗ್ಧರಂತಿದ್ದ ಜನ ಪಿಸುಗುಟ್ಟಿದರು. ರಾಜನಿಗೆ ನಿಜಸ್ಥಿತಿಯ ಅರಿವಾಗಿ ನಾಚಿಕೆಯಾಯಿತು. ಉಳಿದವರೂ ಇಲ್ಲಿಯವರೆಗೆ ಆತನು ಸುಂದರವಾದ ಉಡುಪು ಧರಿಸಿದ್ದಾನೆಂದು ಪ್ರಯತ್ನಪೂರ್ವಕವಾಗಿ ನಂಬಿಕೊಂಡಿದ್ದರೂ ಸಹ, ಈಗ ಬೆತ್ತಲೆ ಇದ್ದಾನೆಂಬುದನ್ನು ಗ್ರಹಿಸಿದರು.

ನಾವೂ ಅದನ್ನೇ ಹೇಳಬೇಕಾಗಿದೆ; ಎಲ್ಲರಿಗೂ ತಿಳಿದಿದ್ದರೂ ಹೇಳಲು ಧೈರ್ಯವಹಿಸಿದ ಮಾತನ್ನೇ ನಾವು ಹೇಳಬೇಕು. ಯಾವ ಹೆಸರಿನಿಂದ ಜನ ಕರೆದರೂ ಕೊಲೆ, ಕೊಲೆಯೇ ಆದೀತು – ಮತ್ತು ನಾಚಿಕೆಗೇಡಿನ ಅಪರಾಧವೇ ಆದೀತು, ಎಂದು ನಾವು ಹೇಳಬೇಕು. ಇಲ್ಲಿ ಹೇಳಿದಂತೆಯೇ ಎಲ್ಲೆಲ್ಲಿಯೂ ಅದನ್ನು ಸ್ಪಷ್ಟವಾಗಿ, ಖಚಿತವಾಗಿ ಕೂಗಿ ಹೇಳಬೇಕು. ಆಗಲೇ ಜನರು ತಾವು ಏನನ್ನು ಕಂಡಿದ್ದೇವೆಂದು ಯೋಚಿಸಿದ್ದರೋ ಅದನ್ನು ನಿಲ್ಲಿಸಿ, ತಮ್ಮ ಕಣ್ಣೆದುರಿಗಿರುವ ಸತ್ಯ ಸ್ಥಿತಿಯನ್ನು ಕಾಣುತ್ತಾರೆ. ಅವರು ತಮ್ಮ ದೇಶಸೇವೆಯನ್ನು, ಯುದ್ಧದ ಸಾಹಸಗಳನ್ನು, ಸೈನ್ಯದ ವೈಭವವನ್ನು ಮತ್ತು ದೇಶಪ್ರೇಮವನ್ನು ಬದಿಗೊತ್ತಿ, ಕಣ್ಣೆದುರಿಗೆ ಕಾಣುತ್ತಿರುವ ಬರ್ಬರವಾದ ಕೊಲೆಯ ನೀಚಕೃತ್ಯಗಳನ್ನು ನೋಡುತ್ತಾರೆ.

ಹಾಗೆ ಜನ ನೋಡಿದಾಗ ಅದ್ಭುತ ಕಥೆಯಲ್ಲಿ ಏನು ನಡೆಯಿತೋ ಅದು ಇಲ್ಲಿಯೂ ನಡೆಯುತ್ತದೆ. ಯಾರು ನೀಚಕೃತ್ಯಗಳಲ್ಲಿ ನಿರತರಾಗಿದ್ದಾರೋ ಅವರು ನಾಚಿಕೆಯಿಂದ ತಲೆಯೆತ್ತುವುದಿಲ್ಲ; ಯಾರು ತಮಗೆ ಕೊಲೆಯ ನೀಚತನ ಕಾಣುತ್ತಿಲ್ಲವೆಂದು ನಂಬಿಸಿಕೊಳ್ಳುತ್ತಿದ್ದಾರೋ ಅವರು ನಿಜಸ್ಥಿತಿಯನ್ನು ಗ್ರಹಿಸಿ, ಕೊಲೆಗಾರರಾಗಿ ಉಳಿಯುವುದಿಲ್ಲ.

ಆದರೆ ದೇಶಗಳು ಹೇಗೆ ತಮ್ಮನ್ನು ವೈರಿಗಳಿಂದ ರಕ್ಷಿಸಿಕೊಳ್ಳುತ್ತವೆ? ಆಂತರಿಕ ವ್ಯವಸ್ಥೆಯನ್ನು ಹೇಗೆ ಕಾಪಾಡಿಕೊಳ್ಳುತ್ತವೆ? ಹೇಗೆ ಸೈನ್ಯವಿಲ್ಲದೆ ಬದುಕಲು ಸಾಧ್ಯ?

ಇದನ್ನೂ ಓದಿ: ಇದು ಭಾರತ-ಚೀನಾ ’ನಾಥು-ಲಾ’ ಸಂಘರ್ಷದ ಚಿತ್ರವಲ್ಲ: ಫ್ಯಾಕ್ಟ್ ಚೆಕ್‌

ಕೊಲೆಗಳನ್ನು ನಿರಾಕರಿಸಿದರೆ, ಜನಗಳ ಬದುಕು ಹೇಗೆ ರೂಪುಗೊಳ್ಳುತ್ತದೆಯೋ ನಮಗೆ ಗೊತ್ತಿಲ್ಲ; ಗೊತ್ತಾಗುವಂತಿಲ್ಲ. ಆದರೆ ಒಂದು ವಿಚಾರ ಮಾತ್ರ ಸ್ಪಷ್ಟವಾಗಿದೆ; ಸಾಮೂಹಿಕ ಕೊಲೆಗಳ ವ್ಯವಸ್ಥೆ ಮಾಡುವವರಿಗೆ ಗುಲಾಮರಂತೆ ಅಧೀನವಾಗುವುದಕ್ಕಿಂತ ಮನುಷ್ಯರಿಗೆ ದೈವದತ್ತವಾಗಿರುವ ವಿವೇಕ ಮತ್ತು ಆತ್ಮಸಾಕ್ಷಿಯಿಂದ ನಿರ್ದೇಶನ ಪಡೆಯುವುದು ಹೆಚ್ಚು ಸ್ವಾಭಾವಿಕವಾಗಿರುತ್ತದೆ. ತಮ್ಮ ನೀತಿಯನ್ನು ಹೆದರಿಕೆಯ ತಳಹದಿಯ ಮೇಲೆ ನಿಂತಿರುವ ಹಿಂಸೆಯ ನಿರ್ದೇಶನದಂತೆ ರೂಪಿಸಿಕೊಳ್ಳದೆ, ವಿವೇಕ ಮತ್ತು ಆತ್ಮಸಾಕ್ಷಿಯ ನಿರ್ದೇಶನದಂತೆ ರೂಪಿಸಿಕೊಳ್ಳುವವರ ನಡವಳಿಕೆ ಮತ್ತು ಅವರು ಕಂಡುಕೊಳ್ಳುವ ಸಾಮಾಜಿಕ ವ್ಯವಸ್ಥೆ, ಈಗಿನ ಸ್ಥಿತಿಗಿಂತ ಖಂಡಿತ ಕೆಳಮಟ್ಟದಲ್ಲಿರುವುದಿಲ್ಲ.

ನಾನು ಹೇಳಬೇಕೆಂದಿರುವುದು ಮುಗಿಯಿತು. ನನ್ನ ಮಾತುಗಳು ಯಾರನ್ನಾದರೂ ನೋಯಿಸಿದರೆ, ದುಃಖಕ್ಕೀಡುಮಾಡಿದರೆ ಅಥವಾ ಕೆಟ್ಟ ಭಾವನೆಗಳನ್ನು ಉದ್ರೇಕಿಸಿದರೆ ತುಂಬಾ ವಿಷಾದಪಡುತ್ತೇನೆ. ಆದರೆ, ಎಂಬತ್ತು ವರ್ಷ ವಯಸ್ಸಾಗಿರುವ, ಯಾವ ಕ್ಷಣಕ್ಕಾದರೂ ಸಾವನ್ನು ನಿರೀಕ್ಷಿಸುತ್ತಿರುವ ನಾನು, ಸತ್ಯವನ್ನು ಸಂಪೂರ್ಣವಾಗಿ ನನಗೆ ತಿಳಿದಷ್ಟು ಖಚಿತವಾಗಿ ಹೇಳದಿದ್ದರೆ ಅಪರಾಧಿಯಾಗುತ್ತೇನೆ; ನಾಚಿಕೆಯಾಗುತ್ತದೆ. ಏಕೆಂದರೆ, ನಾನು ದೃಢವಾಗಿ ನಂಬಿರುವಂತೆ ಯುದ್ಧದಿಂದಾಗಿರುವ ಅಗಣಿತ ಕೆಡಕುಗಳನ್ನು ನಿವಾರಿಸುವ ಶಕ್ತಿ ಸತ್ಯಕ್ಕೆ ಮಾತ್ರ ಇರುವುದು.

(ಇದು 1909ರಲ್ಲಿ ಮಾಡಿದ್ದ ಭಾಷಣ)

ಅನುವಾದ: ಕೆ. ಮರುಳಸಿದ್ಧಪ್ಪ

ಕೃಪೆ: ಟಾಲ್ಸ್‌‌ಟಾಯ್ ವಿಚಾರಧಾರೆ, ಪ್ರಕಟನೆ: ಬೆಂಗಳೂರು ವಿಶ್ವವಿದ್ಯಾಲಯ, 1973


ಇದನ್ನೂ ಓದಿ: ಮೋದಿ ಆಡಳಿತದಲ್ಲಿ ಪರಿಸರದ ಮೇಲಾದ ದಾಳಿಗಳು : ಲಿಯೋ ಎಫ್ ಸಲ್ಡಾನಾ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಅನುವಾದಿತ ಲೇಖನ
+ posts

LEAVE A REPLY

Please enter your comment!
Please enter your name here