Homeಕರ್ನಾಟಕರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಟೊಯೋಟಾ ಕಾರ್ಮಿಕರು

ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಟೊಯೋಟಾ ಕಾರ್ಮಿಕರು

ಕಾರ್ಮಿಕ ಸಂಘದ ಹೋರಾಟ ಇಂದಿಗೆ 40 ನೇ ದಿನಕ್ಕೆ ಕಾಲಿಟ್ಟಿದೆ

- Advertisement -
- Advertisement -

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಾರ್ಮಿಕ ಸಂಘದ ಹೋರಾಟ 40 ನೇ ದಿನಕ್ಕೆ ಕಾಲಿಟ್ಟಿದ್ದು ಇಂದು ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಟೊಯೋಟಾ ಕಿರ್ಲೋಸ್ಕರ್ ಕಾರ್ಮಿಕ ಸಂಘದ 3000 ಕ್ಕೂ ಹೆಚ್ಚು ಕಾರ್ಮಿಕರ ಜೊತೆಗೆ ಇತರ ಹಲವಾರು ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಟೊಯೋಟಾ ಕಾರ್ಮಿಕ ಸಂಘದ ಅಧ್ಯಕ್ಷರಾದ ಪ್ರಸನ್ನಕುಮಾರ್ ಚಕ್ಕೆರೆ, “ಶೀಘ್ರವಾಗಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು. ಇದು ಕೇವಲ ನಮ್ಮ ಸಮಸ್ಯೆ ಮಾತ್ರ ಅಲ್ಲ ದೇಶದ ಎಲ್ಲಾ ಬಹುರಾಷ್ಟ್ರೀಯ ಕಂಪನಿಗಳ ಸಮಸ್ಯೆ. ಕಾರ್ಮಿಕರನ್ನು ಯಂತ್ರದಂತೆ ದುಡಿಸಿ ಐದತ್ತು ವರ್ಷಗಳಲ್ಲಿ ಮನೆಗೆ ಕಳುಹಿಸುತ್ತಿದ್ದು, ಈ ಶೋಷಣೆ ನಿಲ್ಲಬೇಕಿದೆ. ಕಂಪನಿಯ ಆಡಳಿತ ವರ್ಗ ಯಾವುದೇ ಕಾನೂನುಗಳಿಗೆ ಬೆಲೆ ಕೊಡದೆ, ಸರ್ಕಾರದ ಮಾತಿಗೂ ಬೆಲೆ ಕೊಡದೆ ಕಾರ್ಮಿಕರನ್ನು ಬೀದಿಗೆ ತಳ್ಳಿವೆ. ಜಿಲ್ಲಾಧಿಕಾರಿಗಳು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.

ಇದನ್ನೂ ಓದಿ: ಸಂಬಳ ಕೊಡದ ಆರೋಪ: ಐಫೋನ್ ತಯಾರಿಕ ನರಸಾಪುರದ ‘ವಿಸ್ಟ್ರಾನ್’ ಕಂಪನಿಗೆ ಬೆಂಕಿ ಹಚ್ಚಿದ ಕಾರ್ಮಿಕರು

ಎಐಟಿಯುಸಿ ರಾಜ್ಯಾಧ್ಯಕ್ಷ ಅಪ್ಪಣ್ಣ ಮಾತನಾಡಿ, “ವಿದೇಶಿ ಕಂಪನಿಗಳು ಭಾರತದ ಕಾನೂನುಗಳಿಗೆ ಬೆಲೆಕೊಟ್ಟು ಗೌರವಿಸಬೇಕು ಇಲ್ಲವಾದರೆ ನಮ್ಮ ನೆಲ ಜಲ ವಿದ್ಯುತ್ ವಾಪಸ್ ಪಡೆಯ ಬೇಕಾಗುತ್ತದೆ. ಜೊತೆಗೆ ಕೇಂದ್ರ ಸರ್ಕಾರ 44 ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ 4 ಸಂಹಿತೆಗಳಾಗಿ ಮಾಡಿರುವುದು ದುರಾದೃಷ್ಟಕರ, ಈ ಕಾಯ್ದೆಗಳು ಕೂಡಾ ವಾಪಸ್ ಆಗಬೇಕು” ಎಂದು ಒತ್ತಾಯಿಸಿದರು.

ಬಿಎಸ್ಪಿ ರಾಜ್ಯಾಧ್ಯಕ್ಷರಾದ ಕೃಷ್ಣಮೂರ್ತಿ ಮಾತನಾಡಿ, “ರಾಜ್ಯದ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಆದಷ್ಟು ಬೇಗ ಸಮಸ್ಯೆ ಬಗೆ ಹರಿಸದಿದ್ದರೆ ವಿಧಾನಸೌಧ ಮುತ್ತಿಗೆ ಹಾಕಲಾಗುವುದು. ಇಲ್ಲವೆಂದರೆ ಕಾರ್ಮಿಕರು ’ರಕ್ತ ಪತ್ರ ಚಳುವಳಿ’ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯುತ್ತೇವೆ. ರಾಜ್ಯ ಸರ್ಕಾರ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿರುವ ಕಾರ್ಮಿಕ ಸಂಘವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ” ಎಂದು ಆರೋಪಿಸಿದರು.

ಮಾರಸಂದ್ರ ಮುನಿಯಪ್ಪ ಮಾತನಾಡಿ, “80 ಪರ್ಸೆಂಟ್ ರಾಜಕಾರಣಿಗಳು ಮತಪಡೆದು ಈಗ ನಿದ್ರಿಸುತ್ತಿದ್ದಾರೆ. ಎಚ್ಚೆತ್ತು ರೈತ-ದಲಿತ-ಕಾರ್ಮಿಕರ ಸಮಸ್ಯೆ ಬಗೆಹರಿಸದಿದ್ದರೆ ಯಾವುದೇ ಸರ್ಕಾರಕ್ಕೆ ಉಳಿಗಾಲವಿಲ್ಲ. ಕೇಂದ್ರ ಸರ್ಕಾರದ ಖಾಸಗೀಕರಣವೇ ಇದಕ್ಕೆ ಕಾರಣ. ಸರ್ಕಾರ ಖಾಸಗೀಕರಣವನ್ನು ಕೈಬಿಡಬೇಕು. ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಬಾರದು” ಎಂದು ಆಗ್ರಹಿಸಿದರು.

ಇದನ್ನೂ ಓದಿ: ಟೊಯೊಟಾ ಕಾರ್ ಕಂಪನಿ ಲಾಕ್‌ ಔಟ್?- ಬೀದಿಗಿಳಿದು ಪ್ರತಿಭಟಿಸುತ್ತಿರುವ 3500 ಕಾರ್ಮಿಕರು!

 

ರಾಮನಗರ ರೈತ ಸಂಘದ ಜಿಲ್ಲಾಧ್ಯಕ್ಷ ಬೈರೇಗೌಡ ಮಾತನಾಡಿ, “ದುಡಿಯುವ ಕೈಗಳು ದೇಶಕ್ಕೆ ಆಧಾರ. ರೈತ-ಕಾರ್ಮಿಕರಿಂದ ದೇಶ ನಡೆಯುತ್ತಿದೆ. ಅವರಿಗೆ ಅನ್ಯಾಯವಾದರೆ ರೈತ ಸಂಘ ಸದಾ ಅವರ ಬೆಂಬಲಕ್ಕೆ ನಿಲ್ಲುತ್ತದೆ. ಶೀಘ್ರವಾಗಿ ಸಮಸ್ಯೆ ಬಗೆಹರಿಯದಿದ್ದರೆ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ” ಎಚ್ಚರಿಸಿದರು.

ಪ್ರತಿಭಟನೆಗೆ ಜಿಗಣೆ ಕಾರ್ಮಿಕ ಸಂಘದ ಒಕ್ಕೂಟ ಮತ್ತು ಫೆಡೆರಲ್ ಮೊಗುಲ್ ಕಾರ್ಮಿಕ ಸಂಘಟನೆ ತನ್ನ ಸಂಪೂರ್ಣ ಬೆಂಬಲ ನೀಡಿತು.

ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಆಡಳಿತ ಮಂಡಳಿ ತಮ್ಮ ಮೇಲೆ ನಡೆಸಿದ ದೌರ್ಜನ್ಯವನ್ನು ಪ್ರಶ್ನಿಸಿದ ಕಾರಣಕ್ಕಾಗಿ, ಕಂಪೆನಿಯು ಕಾರ್ಮಿಕರು ಮುಷ್ಕರ ಹೂಡಿದ್ದಾರೆ ಎಂದು ಆರೋಪಿಸಿ ಲಾಕೌಟ್ ಘೋಷಿಸಿತ್ತು. ಈ ನಡುವೆ ರಾಜ್ಯ ಸರ್ಕಾರವು ಕೈಗಾರಿಕಾ ವಿವಾದ ಕಾಯ್ದೆ 1947 ಕಲಂ 10(3) ರ ಅಧಿಕಾರ ಬಳಿಸಿ ಕಾರ್ಮಿಕರು ಮುಷ್ಕರ ನಿಲ್ಲಿಸಬೇಕು ಮತ್ತು ಕಂಪೆನಿಯು ಲಾಕ್‌ಔಟ್‌‌ ತೆರವುಗೊಳಿಸಬೇಕೆಂದು ನವೆಂಬರ್‌ 18 ರಂದು ಆದೇಶ ಹೊರಡಿಸಿತ್ತು. ಆದರೆ ಕಾರ್ಮಿಕರು ತಮ್ಮ ಕರ್ತವ್ಯಕ್ಕೆ ತೆರಳುತ್ತೇವೆ ಎಂದು ಹೊರಟರೂ ಕಂಪೆನಿಯು ಅವರನ್ನು ಒಳಕ್ಕೆ ಬಿಡುತ್ತಿಲ್ಲ ಎಂದು ಕಾರ್ಮಿಕರು ಆರೋಪಿದ್ದಾರೆ.

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೈರೇಗೌಡ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಉಪಾಧ್ಯಕ್ಷರಾದ ಅನುಸೂಯ, ಜಿಲ್ಲಾಧ್ಯಕ್ಷರಾದ ಬೈರೇಗೌಡ, ಬಿಎಸ್ಪಿ ರಾಜ್ಯಾಧ್ಯಕ್ಷರಾದ ಕೃಷ್ಣಮೂರ್ತಿ, ಬಿಎಸ್ಪಿ ರಾಜ್ಯ ಸಂಯೋಜಕರಾದ ಮಾರಸಂದ್ರ ಮುನಿಯಪ್ಪ, ಅನ್ನದಾತ ರಕ್ಷಣಾ ವೇದಿಕೆ ಮುತ್ತುರಾಜ್, ಎಐಸಿಸಿಟಿಯು ರಾಜ್ಯಾಧ್ಯಕ್ಷರಾದ ಅಪ್ಪಣ್ಣ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಉಮೇಶ್ ಸೇರಿದಂತೆ ಇನ್ನೂ ಹಲವಾರು ನಾಯಕರು ಪ್ರತಿಭಟನೆಗೆ ನೇತೃತ್ವ ನೀಡಿದ್ದರು.

ಇದನ್ನೂ ಓದಿ:ಟೊಯೊಟಾ ಕಿರ್ಲೋಸ್ಕರ್‌ ದರ್ಪ ಮುಂದುವರಿಕೆ: ’ಛತ್ರಿ ಚಳುವಳಿ’ ಆರಂಭಿಸಿದ ಕಾರ್ಮಿಕರು!

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

0
ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ನಾಯಕರು ಮಾಧುಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಧುಸ್ವಾಮಿಯವರೂ ಪ್ರಕರಣಕ್ಕೆ ಸಂಬಂಧಿಸಿದಂತೆ...