Homeಮುಖಪುಟಹಿಂದೂಯಿಸಂ ಒಂದು ಧರ್ಮವಲ್ಲ; ಅದೊಂದು ಕಾನೂನು; ಭಾಗ-2

ಹಿಂದೂಯಿಸಂ ಒಂದು ಧರ್ಮವಲ್ಲ; ಅದೊಂದು ಕಾನೂನು; ಭಾಗ-2

- Advertisement -
- Advertisement -

ಡಾ.ರಾಜೇಂದ್ರ ಪ್ರಸಾದ್ ಮತ್ತು ವಲ್ಲಭಭಾಯ್ ಪಟೇಲ್ ಇಬ್ಬರೂ ಮನುವಿನ ಪ್ರಕಾರ ಶೂದ್ರರಾಗಿದ್ದರೂ, ಹಿಂದೂ ಕಾನೂನುಗಳ ಕ್ರೋಢೀಕರಣವನ್ನು (ಹಿಂದೂ ಕೋಡ್ ಬಿಲ್) ವಿರೋಧಿಸಿದರು. ರಾಜೇಂದ್ರ ಪ್ರಸಾದ್ ಅವರು ಜಾತಿಯಲ್ಲಿ ಕಾಯಸ್ಥರಾಗಿದ್ದು, ಅದು ನಾಲ್ಕನೇ ವರ್ಣ ಎಂದು ಪರಿಗಣಿಸಲಾಗುತ್ತಿತ್ತು ಮತ್ತು ವಲ್ಲಭಭಾಯ್ ಪಟೇಲ್ ಕೂಡಾ ಹಾಗೆಯೇ. ಆದರೂ, ತಮ್ಮ ನಾಲ್ಕನೇ ದರ್ಜೆಯ ಸ್ಥಾನಮಾನವನ್ನು ತೊಡೆದುಹಾಕುವುದು ಅವರಿಗೆ ಬೇಕಾಗಿರಲಿಲ್ಲ. ಅವರು ಬ್ರಾಹ್ಮಣ ಪ್ರತಿಗಾಮಿಗಳ ಜೊತೆಗೆ ಕೈಜೋಡಿಸಿದರು.

ಹಿಂದೂ ಕಾನೂನುಗಳ ಕ್ರೋಢೀಕರಣಕ್ಕೆ ಜನಾದೇಶ ಇಲ್ಲ ಎಂದು ಕೆಲವು ಜನರು ಹೇಳಿದರು. ನೆಹರೂ ಅವರು ಹಿಂದೂ ಕಾನೂನು ಸಂಹಿತೆ (ಹಿಂದೂ ಕೋಡ್ ಬಿಲ್) ಮಸೂದೆಯ ಪರವಾಗಿದ್ದರು. ಒಂದು ವೇಳೆ ಹಿಂದೂ ಸಂಹಿತೆ ಮಸೂದೆಯು ಅಂಗೀಕಾರವಾಗದಿದ್ದರೆ ತನ್ನ ಸರಕಾರವು ರಾಜೀನಾಮೆ ನೀಡುವುದೆಂದು ಅವರು ಘೋಷಿಸಿದ್ದರು. ಆದರೆ, ಅವರ ಈ ಘೋಷಣೆಯು ಮಸೂದೆಯನ್ನು ವಿರೋಧಿಸಿದವರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಹೆಚ್ಚುತ್ತಿರುವ ವಿವಾದಗಳ ನಡುವೆಯೇ ಬಾಬಾಸಾಹೇಬ್ ಅವರು ಫೆಬ್ರವರಿ 5, 1951ರಂದು ಮಸೂದೆಯನ್ನು ಮಂಡಿಸಿದರು. ಮಸೂದೆಯು ಸಂಸತ್ ಸದಸ್ಯರಿಂದ ಟೀಕೆಗೊಳಗಾಯಿತು. ಜಾಟ್ ಸಿಕ್ಖರು ಕೂಡಾ ಮಸೂದೆಗೆ ವಿರುದ್ಧವಿದ್ದರು.

ಡಾ.ರಾಜೇಂದ್ರ ಪ್ರಸಾದ್

ಬಾಬಾಸಾಹೇಬರು ಟೀಕೆಗಳಿಗೆ ಉತ್ತರ ನೀಡುತ್ತಾ, ಮಸೂದೆಯು ಭಾರತದಾದ್ಯಂತ ಕಾನೂನುಗಳಿಗೆ ಏಕರೂಪತೆ ತರುವುದೆಂದು ಹೇಳಿದರು. ಬುದ್ಧನು ವೈದಿಕ ಹಿಂದೂ ಧರ್ಮದ ಜೊತೆ ಭಿನ್ನಮತ ಹೊಂದಿದಾಗ, ಆತ ಜಾತಿ, ಮತಗಳ ವಿಷಯದಲ್ಲಿ ಮಾತ್ರ ಭಿನ್ನಾಭಿಪ್ರಾಯ ಹೊಂದಿದ್ದ. ಆದರೆ, ಹಿಂದೂ ಧರ್ಮದ ಚೌಕಟ್ಟನ್ನು ಹಾಗೆಯೇ ಉಳಿಸಿಕೊಂಡ. ಆತ ತನ್ನ ಹಿಂಬಾಲಕರಿಗೆ ಪ್ರತ್ಯೇಕ ಕಾನೂನನ್ನು ಪ್ರತಿಪಾದಿಸಲಿಲ್ಲ. ಜೈನ ಧರ್ಮದ ಸ್ಥಾಪಕ ಮಹಾವೀರ ಮತ್ತು ಹತ್ತು ಮಂದಿ ಸಿಖ್ ಧರ್ಮಗುರುಗಳ ಸಂದರ್ಭದಲ್ಲಿಯೂ ಇದೇ ನಡೆದಿತ್ತು. ರಾಣಿಯ ಆಪ್ತ ಆಡಳಿತ ಮಂಡಳಿ (The Privy Council) ಕೂಡಾ 1850 ಇಸವಿಯಷ್ಟು ಹಿಂದೆಯೇ ಸಿಕ್ಖರು ಹಿಂದೂ ಕಾನೂನಿನಿಂದ ನಿಯಂತ್ರಿಸಲ್ಪಡುವರು ಎಂದು ವಿಧಿಸಿತ್ತು. ನಾಗರಿಕ ಸಂಹಿತೆಗಾಗಿ ಬೇಡಿಕೆ ಸಲ್ಲಿಸಿದವರಿಗೆ, ಒಂದು ಗಂಭೀರ ಉದ್ದೇಶ ಮತ್ತು ದೇಶಕ್ಕೆ ಒಂದು ಉತ್ತಮ ಕಾನೂನನ್ನು ಹೊಂದುವ ಪ್ರಾಮಾಣಿಕ ಬಯಕೆಯಿದೆಯೇ ಎಂಬುದರ ಬಗ್ಗೆ ಬಾಬಾಸಾಹೇಬರು ಸಂಶಯಿಸಿದ್ದರು. ಮಸೂದೆಯ ಮೇಲೆ ಜನಮತಗಣನೆಯ ಬೇಡಿಕೆಯನ್ನು ಅವರು ತಿರಸ್ಕರಿಸುತ್ತಾ, ಸಂಸತ್ತು ಒಂದು ಸಾರ್ವಭೌಮ ಸಭೆಯಾಗಿದ್ದು, ಯಾವುದೇ ಕಾನೂನು ತರಲು ಮತ್ತು ತೆಗೆದುಹಾಕಲು ಸಮರ್ಥವಾಗಿದೆ ಎಂದು ಹೇಳಿದರು.

ಅವರ ಆರೋಗ್ಯ ಚೆನ್ನಾಗಿಲ್ಲದಿದ್ದುದರಿಂದ ಆಗಸ್ಟ್ 16, 1951ರಂದು ಸಂಸತ್ತಿನಲ್ಲಿ ಹಿಂದೂ ಸಂಹಿತೆ ಮಸೂದೆ ಕುರಿತ ಚರ್ಚೆಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಬೇಕೆಂದು ಬಾಬಾಸಾಹೇಬರು ಪ್ರಧಾನಿ ನೆಹರೂ ಅವರನ್ನು ವಿನಂತಿಸಿದರು. ಆರೋಗ್ಯದ ಮೇಲೆ ಹೆಚ್ಚಿನ ಭಾರ ಹಾಕಬೇಡಿ ಎಂದು ನೆಹರೂ ಉತ್ತರಿಸಿದ್ದರು. ಮಸೂದೆಗೆ ಸಂಸತ್ತಿನ ಒಳಗೆ ಮತ್ತು ಹೊರಗೆ ಕೂಡಾ ವಿರೋಧವಿತ್ತು.

ಸೆಪ್ಟೆಂಬರ್‌ನಲ್ಲಿ ಸಂಸತ್ತು ಮತ್ತೆ ಸೇರಿದಾಗ ಸಂಪುಟವು ಅದನ್ನು ಮತ್ತೆ ಕೈಗೆತ್ತಿಕೊಳ್ಳುವುದೆಂದು ನೆಹರೂ ಹೇಳಿದರು. ಈ ಮಸೂದೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು ಎಂದು ನೆಹರೂ ಕಾಂಗ್ರೆಸ್ ಸಂಸದೀಯ ಪಕ್ಷಕ್ಕೆ ಹೇಳಿದರು. ಆದರೆ, ಬಹುಸಂಖ್ಯಾತ ಕಾಂಗ್ರೆಸ್ ಸಂಸತ್ ಸದಸ್ಯರು ಅದನ್ನು ವಿರೋಧಿಸಿದರು ಮತ್ತು 1952ರಲ್ಲಿ ಹೊಸ ಸಂಸತ್ತು ಅದನ್ನು ಕೈಗೆತ್ತಿಕೊಳ್ಳಬೇಕು ಎಂದು ನಿರ್ಣಯ ಅಂಗೀಕರಿಸಿದರು. ಮಸೂದೆಯ ಮೇಲಿನ ಚರ್ಚೆಗೆ ಸೆಪ್ಟೆಂಬರ್ 17, 1951ರ ದಿನಾಂಕವನ್ನು ನಿಗದಿಪಡಿಸಲಾಯಿತು. ಮಸೂದೆಯಲ್ಲಿನ ಮದುವೆ ಮತ್ತು ವಿಚ್ಛೇದನ ಕುರಿತ ಭಾಗವನ್ನು ಮೊದಲು ಕೈಗೆತ್ತಿಕೊಳ್ಳಬೇಕೆಂದು ನಿರ್ಧರಿಸಲಾಯಿತು. ಹಿಂದೂ ಸಂಹಿತೆ ಮಸೂದೆಯು ಭವ್ಯವಾದ ಹಿಂದೂ ಸಂಸ್ಕೃತಿಯ ಸಂರಚನೆಯನ್ನು ಪುಡಿಗುಟ್ಟುತ್ತದೆ ಮತ್ತು ಶತಮಾನಗಳ ಎಲ್ಲಾ ಬದಲಾವಣೆಗಳಿಗೆ ಅದ್ಭುತವಾಗಿ ಹೊಂದಿಕೊಂಡ ಕ್ರಿಯಾಶೀಲ ಮತ್ತು ಸಂಪ್ರದಾಯಿಕ ಜೀವನ ಪದ್ಧತಿಯನ್ನು ಕಳೆಗುಂದಿಸುತ್ತದೆಂದು ಹೇಳುತ್ತಾ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಈ ಮಸೂದೆಯನ್ನು ವಿರೋಧಿಸಿದರು. ಆದರೆ, ಎನ್.ವಿ. ಗಾಡ್ಗೀಳ್, ಎಚ್.ಎನ್. ಕುಂಝ್ರು ಮತ್ತು ಮಹಿಳಾ ಸದಸ್ಯರು, ಇದು ಸಂವಿಧಾನದ ಭಾಗ ಎಂದು ಹೇಳುತ್ತಾ ಮಸೂದೆಯನ್ನು ಬೆಂಬಲಿಸಿದರು. ಮದನ ಮೋಹನ ಮಾಳವೀಯರ ಮಗ ಕೆ.ಡಿ. ಮಾಳವೀಯ, ಜನರಿಗೆ ಕಾನೂನಿನ ಬಗ್ಗೆ ಇರುವ ಗೌರವವನ್ನು ನಾಶ ಮಾಡಬಾರದು ಎಂದು ಸರಕಾರವನ್ನು ಎಚ್ಚರಿಸಿದರು.

ಮಸೂದೆಯ ಕುರಿತು ಎರಡು ಅಧಿವೇಶನಗಳಲ್ಲಿ ಹೆಚ್ಚು ಕಡಿಮೆ ಏಳು ದಿನಗಳ ಕಾಲ ಚರ್ಚಿಸಲಾಯಿತು. ದೀರ್ಘವಾದ ಚರ್ಚೆಗಳು ನಡೆದವು. ಅಧಿವೇಶನ ಇನ್ನೇನು ಕೊನೆಗೊಳ್ಳುವುದರಲ್ಲಿತ್ತು. ಏಕಾಏಕಿಯಾಗಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಮಸೂದೆಯನ್ನು ಕೈಬಿಡುವ ಸಲಹೆ ಮಾಡಿದರು. ಬಾಬಾಸಾಹೇಬರು, ಈ ಮಸೂದೆಯನ್ನು ಅದರ ವಿರೋಧಿಗಳು, ಅದಕ್ಕಿಂತಲೂ ಹೆಚ್ಚಾಗಿ ನೆಹರೂ ಅವರು ನಡೆಸಿಕೊಂಡ ರೀತಿಯನ್ನು ಒಪ್ಪಿಕೊಳ್ಳಲಿಲ್ಲ. ನಾಲ್ಕು ವಿಧಿಗಳನ್ನು ಅಂಗೀಕರಿಸಿದ ಬಳಿಕ, ಮಸೂದೆಯನ್ನು ಯಾವುದೇ ಶೋಕವಿಲ್ಲವೇ ಬೇಸರವಿಲ್ಲದೇ ಕೊಂದು, ಹೂಳಲಾಯಿತು ಎಂದು ಅವರು ಪ್ರತಿಕ್ರಿಯಿಸಿದರು. ಅವರಿಗೆ ತುಂಬಾ ನಿರಾಸೆಯಾಗಿತ್ತು ಮತ್ತು ಅವರು ಸಿಟ್ಟಿನಿಂದ ಕಿಡಿಕಿಡಿಯಾಗಿದ್ದರು. ಜಾತಿ ಮತ್ತು ಉಪಜಾತಿಗಳನ್ನು ತೊಡೆದುಹಾಕುವುದರ ಮೂಲಕ ಹಿಂದೂ ಸಮಾಜವನ್ನು ಸುಧಾರಿಸಬಹುದು ಎಂದು ಅವರು ಯೋಚಿಸಿದ್ದರು. ಕಾನೂನಿನ ಎದುರು ಸಮಾನತೆಯ ಸಾಂವಿಧಾನಿಕ ವಿಧಿಗಳು- ಹಿಂದೂ ಕಾನೂನುಗಳ ಕ್ರೋಢೀಕರಣದ ಹೊರತು ಪರಿಣಾಮಕಾರಿಯಾಗುವುದಿಲ್ಲ ಎಂದು ಅವರು ಭಾವಿಸಿದ್ದರು. ಬ್ರಾಹ್ಮಣಶಾಹಿ ಸಂಚಿನ ದುಷ್ಟ ಉದ್ದೇಶಗಳ ವಿರುದ್ಧ ತನ್ನ ಪ್ರತಿಭಟನೆಯನ್ನು ಪರಿಣಾಮಕಾರಿಯಾಗಿ ದಾಖಲಿಸುವ ಸಲುವಾಗಿ, ಅವರು ಸೆಪ್ಟೆಂಬರ್ 27, 1951ರಂದು ಸಂಪುಟ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ವಲ್ಲಭಭಾಯ್ ಪಟೇಲ್

ಪ್ರಧಾನಿಯವರಿಗೆ ನೀಡಿದ ತನ್ನ ರಾಜೀನಾಮೆ ಪತ್ರದಲ್ಲಿ ಡಾ. ಅಂಬೇಡ್ಕರ್ ಅವರು, ದೀರ್ಘ ಕಾಲದಿಂದ ತಾನು ರಾಜೀನಾಮೆ ಕುರಿತು ಚಿಂತನೆ ಮಾಡುತ್ತಿದ್ದುದಾಗಿಯೂ, ಅದನ್ನು ಅನುಷ್ಟಾನಗೊಳಿಸಲಿಲ್ಲವೇಕೆಂದರೆ, ಪ್ರಸ್ತುತ ಸಂಸತ್ತಿನ ಕಾಲಾವಧಿ ಮುಗಿಯುವುದರೊಳಗೆಯೇ ಹಿಂದೂ ಸಂಹಿತೆ ಮಸೂದೆ ಅಂಗೀಕಾರವಾಗುವಂತೆ ನೋಡುವುದು ತನ್ನ ಬಯಕೆಯಾಗಿತ್ತು ಎಂದು ಹೇಳಿದ್ದಾರೆ. ಅವರು ಮಸೂದೆಯನ್ನು ವಿಭಜಿಸಲು ಒಪ್ಪಿದ್ದರು ಮತ್ತು ತನ್ನ ಶ್ರಮದ ಕನಿಷ್ಟ ಇಷ್ಟು ಭಾಗವಾದರೂ ಫಲ ನೀಡಬಹುದು; ಎಲ್ಲವೂ ವ್ಯರ್ಥವಾಗುವುದು ಬೇಡ ಎಂಬ ಒತ್ತಾಸೆಯಿಂದ ಅವರು ಅದನ್ನು ವಿವಾಹ ಮತ್ತು ಮತ್ತು ವಿಚ್ಛೇದನಕ್ಕೆ ಸೀಮಿತಗೊಳಿಸಿದ್ದರು. ಅವರನ್ನು ಸ್ಪೀಕರ್ “ಗೌರವಾನ್ವಿತ ಸಚಿವರೇ” ಎಂದು ಸಂಬೋಧಿಸಿದರು. ತಕ್ಷಣವೇ ಬಾಬಾಸಾಹೇಬರು ತಾನೀಗ “ಗೌರವಾನ್ವಿತ ಸಚಿವ” ಅಲ್ಲವೆಂದು ಸ್ಪೀಕರ್‌ಗೆ ಮಾರುತ್ತರ ನೀಡಿದರು. ತಾನು ಇಂತಾ ಅಪ್ಪಣೆಗಳಿಗೆ ಬಾಗುವುದಿಲ್ಲ ಎಂದು ಹೇಳುತ್ತಾ, ತಕ್ಷಣವೇ ಸದನದಿಂದ ಹೊರನಡೆದರು. ಅವರು ನಂತರ ತನ್ನನ್ನು ರಾಜೀನಾಮೆಯತ್ತ ತಳ್ಳಿದ ಐದು ಕಾರಣಗಳ ರೂಪುರೇಷೆಯನ್ನು ನೀಡುವ ಹೇಳಿಕೆಯೊಂದನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದರು. ಮೊದಲನೆಯದಾಗಿ ತನಗೆ ಯೋಜನಾ ಆಯೋಗ ಅಥವಾ ಹಣಕಾಸು ಸಚಿವಾಲಯ ನೀಡುವ ಭರವಸೆಯನ್ನು ನೆಹರೂ ಮುರಿದಿದ್ದರು. ಎರಡನೆಯದು, ಎಸ್‌ಸಿ/ಎಸ್‌ಟಿಗಳ ಕುರಿತು ಸರಕಾರದ ಅಸಡ್ಡೆ. ಮೂರನೆಯದಾಗಿ, ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ಅವರು, ಬೌದ್ಧರು ಮತ್ತು ಹಿಂದೂಗಳನ್ನು ಮುಸ್ಲಿಂ ಜನಸಂಖ್ಯೆಯಿಂದ ಪ್ರತ್ಯೇಕಿಸಬೇಕು ಮತ್ತು ಮುಸ್ಲಿಂ ಭಾಗವನ್ನು ಪಾಕಿಸ್ತಾನಕ್ಕೆ ಕೊಡಬೇಕು; ಇದರಿಂದ ಸೇನೆಯನ್ನು ಕಾಯ್ದುಕೊಳ್ಳುವ ಭಾರೀ ವೆಚ್ಚವನ್ನು ಉಳಿಸಬಹುದು ಎಂದು ಸಲಹೆ ಮಾಡಿದ್ದರು. ನಾಲ್ಕನೆಯದಾಗಿ, ಭಾರತದ ವಿದೇಶಾಂಗ ನೀತಿಯು ಪ್ರಪಂಚದಲ್ಲಿ ಮಿತ್ರರಿಗಿಂತ ಹೆಚ್ಚಾಗಿ ಶತ್ರುಗಳನ್ನು ಉಂಟುಮಾಡಿದೆ ಮತ್ತು ಐದನೆಯದಾಗಿ ಹಿಂದೂ ಸಂಹಿತೆ ಮಸೂದೆ ಕುರಿತು ನೆಹರೂ ಅವರ ತಣ್ಣಗಿನ ಧೋರಣೆ.

ಹಿಂದೂ ಕಾಯಿದೆ ಸಂಹಿತೆ ಮಸೂದೆಯು ದುರಂತ ಅಂತ್ಯ ಕಂಡದ್ದು ಹೀಗೆ. ಜಾತಿ ಆಧರಿತ ಸಾಮಾಜಿಕ ಸಂರಚನೆಯು ಹಾಗೆಯೇ ಉಳಿಯಿತು. ಸಂವಿಧಾನದ ಮುಖ್ಯ ಶಿಲ್ಪಿಯನ್ನು ಹೇಗೆ ನಡೆಸಿಕೊಳ್ಳಲಾಯಿತು ಮತ್ತು ಸದಸ್ಯರು ಹೇಗೆ ದುರ್ವರ್ತನೆ ತೋರಿ, ಅವರು ಸದನವನ್ನು ತೊರೆಯುವಂತೆ ಮಾಡಿದರು ಎಂಬುದು ಭಾರತದ ಇತಿಹಾಸದ ನಾಚಿಕೆಗೇಡಿನ ವಾಸ್ತವವಾಗಿದೆ.

ಜಾತಿ ಮನಸ್ಸಿನ ನ್ಯಾಯಾಧೀಶರುಗಳು ಸಂವಿಧಾನದ ವಿಧಿಗಳಿಗೆ ಬೇರೆಬೇರೆ ವ್ಯಾಖ್ಯಾನಗಳನ್ನು ನೀಡಿ, ಆ ಮೂಲಕ ಅರ್ಚಕವೃತ್ತಿ ಮಾಯವಾಗುವುದನ್ನು ಹಾಗೂ ಜಾತಿ ನಿರ್ಮೂಲನೆಯನ್ನು ತಪ್ಪಿಸಿದರು ಎಂಬುದು ದುರದೃಷ್ಟಕರ. ಸುಪ್ರೀಂ ಕೋರ್ಟ್ ಕೂಡಾ ಈ ವಿಷಯದಲ್ಲಿ ಹೊರತಾಗಿರಲಿಲ್ಲ. ತಮಿಳುನಾಡು ಸರಕಾರವು ಆಗಮಶಾಸ್ತ್ರಗಳಲ್ಲಿ ಅಗತ್ಯ ಅರ್ಹತೆ ಪಡೆದ ಬ್ರಾಹ್ಮಣೇತರರು ಮತ್ತು ಬ್ರಾಹ್ಮಣರಿಬ್ಬರಿಗೂ ಅರ್ಚಕ ಸ್ಥಾನ ನೀಡುವ ’ಅರ್ಚಕ’ ಕಾನೂನನ್ನು ತಂದಿತು. ಆದರೆ, ಸುಪ್ರೀಂ ಕೋರ್ಟ್, ಬ್ರಾಹ್ಮಣರು ಮಾತ್ರವೇ ದೇವಾಲಯಗಳ ಅರ್ಚಕರಾಗಲು ಅರ್ಹರು ಎಂಬ ಮನುಧರ್ಮವನ್ನು ಎತ್ತಿಹಿಡಿದು, ಅದನ್ನು ಅಮಾನ್ಯ ಮಾಡಿತು. ಇದೆಲ್ಲವೂ ಜಾತ್ಯತೀತತೆ, ಸಮಾನತೆ ಮತ್ತು ಭ್ರಾತೃತ್ವವನ್ನು ಸ್ಥಾಪಿಸಿದ ಸಂವಿಧಾನದ ವಿಧಿಗಳ ವಿರುದ್ಧ ಬ್ರಾಹ್ಮಣಶಾಹಿಯ ವ್ಯಾಖ್ಯಾನವಾಗಿದೆ.

ಇಂದು- ಹಿಂದೂ ಧರ್ಮವು ಒಂದು ಕಾನೂನಲ್ಲ, ಬದಲಾಗಿ ಜಾತಿ ತಾರತಮ್ಯ ವ್ಯವಸ್ಥೆಯಲ್ಲಿ ಒಂದು ವೈಯಕ್ತಿಕವಾದ ನಂಬಿಕೆ ಎಂಬುದು ಸ್ಪಷ್ಟವಾಗಿದೆ. ಹಿಂದೂಗಳು ಬಾಬಾಸಾಹೇಬರ ಸಾಂವಿಧಾನಿಕ ಸುಧಾರಣೆಗಳ ಬಗ್ಗೆ ಚಿಂತಿಸುವಂತಾಗಿದೆ. ಅವರ ದಾರಿಯು ಜಾತಿಯನ್ನು ನಿರ್ಮೂಲನಗೊಳಿಸಿ ದೇಶವನ್ನು ಉಳಿಸುವಂತದ್ದಾಗಿದೆ ಎಂದು ಅವರಿಗೆ ಮನವರಿಕೆಯಾಗಿದೆ. ಆದರೆ ಮುಖ್ಯ ವಿಷಯವೆಂದರೆ, ಜಾತಿ ಸತ್ತರೆ ಅದರೊಂದಿಗೆ ಬ್ರಾಹ್ಮಣ್ಯವೂ ಸಾಯುತ್ತದೆ. ಅದು ಕೊನೆಯುಸಿರು ಎಳೆದಾಗ, ದೇಶವು ಬಲಶಾಲಿಯಾಗುತ್ತದೆ. ದೇಶವು ಬದುಕಲು ಮತ್ತು ಮೇಲ್ಜಾತಿಯವರೂ ಸೇರಿದಂತೆ ಎಲ್ಲಾ ಜನರು ಹೆಚ್ಚು ಸುಖದಿಂದಿರಲು ಈ ರೀತಿಯಾಗಿ ಬಾಬಾಸಾಹೇಬರು ಬ್ರಾಹ್ಮಣ್ಯವನ್ನು ನಾಶಮಾಡಲು ಬಯಸಿದ್ದರು. ದೇಶವನ್ನು ಬಲಪಡಿಸುವ ಸಲುವಾಗಿ ಅಸಮಾನತೆ, ಗುಲಾಮಿ, ಅಭ್ರಾತೃತ್ವ, ಅನ್ಯಾಯ, ಅಮಾಯಕ ಜನಸಮುದಾಯದ ಮೇಲಿನ ಶೋಷಣೆ ಮತ್ತು ದಬ್ಬಾಳಿಕೆ ಇತ್ಯಾದಿಗಳನ್ನು ಸಂವಿಧಾನವೇನೋ ನಿರ್ಮೂಲನ ಮಾಡಿದೆ. ಆದರೆ, ಅವರ ಎಲ್ಲಾ ಪ್ರಯತ್ನಗಳು ವ್ಯರ್ಥವಾದವು. ಇವೆಲ್ಲವೂ ಬ್ರಾಹ್ಮಣ-ಬನಿಯಾ ಕೂಟದ ಜಂಟಿ ಪಿತೂರಿಗಳ ಕಾರಣದಿಂದಾಗಿ. ಕೇಂದ್ರ ಸರಕಾರವು “ವಂಚಿತರ” ಮತ್ತು ಸಾಮಾನ್ಯ ಜನಸಮುದಾಯದ ಪ್ರತಿನಿಧಿಗಳಿಂದ ಆಳಲ್ಪಡದಿರುವವರೆಗೆ ಈ ಪಿತೂರಿಯು ಮುಂದುವರಿಯುತ್ತದೆ. ಸಾಮಾನ್ಯ ಜನಸಮುದಾಯಗಳು ತಮ್ಮ ಮಾನವಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿದುಕೊಳ್ಳುವವರೆಗೆ ಜಾತೀಯತೆಯು ಉಳಿದುಕೊಳ್ಳುವುದು ಮತ್ತು ದೇಶವನ್ನು ಹಾಳುಗೆಡಹುವುದು.

ನೆಹರು

ಭಾರತದ ಒಟ್ಟು ಜನಸಂಖ್ಯೆಯ ಕೇವಲ ನಾಲ್ಕು ಶೇಕಡಾವಷ್ಟೇ ಇರುವ ಈ ಬ್ರಾಹ್ಮಣ-ಬನಿಯಾ ಕೂಟವು ಈ ದೇಶವನ್ನು ಆಳಲಿದೆ. ಕೇಂದ್ರ ಸರಕಾರವು ಜಾತಿ ತಾರತಮ್ಯ ವ್ಯವಸ್ಥೆಯಿಂದ ಆಳಲ್ಪಡುವ ತನಕ, ಬಡತನ, ಅಜ್ಞಾನ, ಜನಸಮುದಾಯದ ಶೋಷಣೆ ಉಳಿದಿರುವ ತನಕ ಇದು ಮುಂದುವರೆಯಲಿದೆ.

ಬಾಬಾಸಾಹೇಬರ ಭಗವದ್ಗೀತೆಯ ಅಧ್ಯಯನ

ಬಾಬಾಸಾಹೇಬರು ಹಿಂದೂ ಧರ್ಮಗ್ರಂಥಗಳ ಆಳವಾದ ಅಧ್ಯಯನ ಮಾಡಿದರು. ಅಸ್ಪೃಶ್ಯರು ಮತ್ತು ಬ್ರಾಹ್ಮಣೇತರರನ್ನು ಶೋಷಿಸಲು ಬ್ರಾಹ್ಮಣರು ಈ ಧಾರ್ಮಿಕ ಗ್ರಂಥಗಳನ್ನು ಬರೆದರು ಎಂದು ಅವರು ಕಂಡುಕೊಂಡರು. ಶಾಲೆಯಲ್ಲಿ ಅವರಿಗೆ ಸಂಸ್ಕೃತ ಕಲಿಯಲು ಅವಕಾಶ ನೀಡಲಾಗದಿದ್ದರೂ, ಅವರು ಇಂಗ್ಲಿಷಿಗೆ ಅನುವಾದಿಸಲಾದ ಗ್ರಂಥಗಳ ಮೂಲಕ ಅವುಗಳಲ್ಲಿ ಪಾಂಡಿತ್ಯ ಪಡೆದರು. ಈ ಧರ್ಮ ಗ್ರಂಥಗಳ ಮುಖ್ಯ ಉದ್ದೇಶ ಸ್ವಂತ ಲಾಭಕ್ಕಾಗಿ (ಸ್ವಂತ ಸುಖಾಯ) ಎಂಬುದನ್ನು ಅವರು ಕಂಡುಕೊಂಡರು. ಭಗವದ್ಗೀತೆಯು ಒಂದು ಪವಿತ್ರ ಗ್ರಂಥವಲ್ಲ; ಅದೊಂದು ಅಧಾರ್ಮಿಕ, ಅಮಾನವೀಯ, ರಾಜಕೀಯ ಸಾಹಿತ್ಯ. ಅವರು ಅದನ್ನು ಒಳ್ಳೆಯ ಧರ್ಮದ ಹೆಸರಿನಲ್ಲಿರುವ ಕಳಂಕ ಎಂದು ಪರಿಗಣಿಸಿದರು. ಈ ತಥಾಕಥಿತ ಧಾರ್ಮಿಕ ಗ್ರಂಥದ ಲೇಖಕ ಒಬ್ಬ ತೀರಾ ಅಸಾಧಾರಣ ವಂಚಕ ವ್ಯಕ್ತಿಯಾಗಿರಬೇಕು; ಏಕೆಂದರೆ, ಅದು ಅಸಮಾನತೆ, ಗುಲಾಮಗಿರಿ ಮತ್ತು ಅನ್ಯಾಯವನ್ನು ಸಮರ್ಥಿಸುತ್ತದೆ ಎಂದು ಅವರು ಟೀಕಿಸಿದರು. ಗೀತೆಯ ಮುಖ್ಯ ಉದ್ದೇಶವೇ ಅಸಮಾನತೆಯನ್ನು ಸಮರ್ಥಿಸುವುದು; ಜಾತಿ ವಿರೋಧಿಗಳನ್ನು ನಾಶ ಮಾಡುವುದೇ ಈ ಬ್ರಾಹ್ಮಣಶಾಹಿ ಸಾಹಿತ್ಯದ ಮುಖ್ಯ ಗುರಿ. ಕೃಷ್ಣನು ಗೊಲ್ಲ ಸಮುದಾಯಕ್ಕೆ- ಅಂದರೆ, ಶ್ರೇಣೀಕೃತ ಹಿಂದೂ ಸಮಾಜದಲ್ಲಿ ಶೂದ್ರ ವರ್ಗಕ್ಕೆ ಸೇರಿದವನೆಂದು ಹೇಳಲಾಗುತ್ತದೆ. ಆದುದರಿಂದ ಗೀತೆಯು ಜಾತಿಯ ಸಮರ್ಥನೆ ಮಾಡಲು ಮತ್ತು ಅರ್ಚಕರಿಗೆ ಮಾರ್ಗದರ್ಶನ ಮಾಡಲು ಒಂದು ಕೇಂದ್ರಾಧಿಕಾರವಲ್ಲದೇ ಬೇರೇನಲ್ಲ.

ಅದರ “ಕರ್ಮ ಸಿದ್ಧಾಂತ”ವು ಜಾತಿಯಲ್ಲದೆ ಬೇರೇನಲ್ಲ. ಅದು ನೈತಿಕತೆ ಮತ್ತು ಮಾನವ ಸಂಸ್ಕೃತಿಯ ತತ್ವಗಳನ್ನು ಬೋಧಿಸಿದ ಬೌದ್ಧಧರ್ಮದ ಧಮ್ಮಪಾದದ ಕಚ್ಚಾ ಅನುಕರಣೆ; ಆದರೆ ಅದೇ ಹೊತ್ತಿಗೆ ಗೀತೆಯು ಅಸಮಾನತೆ, ಜಾತಿ, ಹಿಂಸಾಚಾರ ಮತ್ತು ಶೋಷಣೆಯನ್ನು ಬೋಧಿಸುತ್ತದೆ. ತಥಾಕಥಿತ ದೇವರು ಚಾತುರ್ವರ್ಣವನ್ನು (ಜಾತಿ ವ್ಯವಸ್ಥೆ) ಸೃಷ್ಟಿಸಿದ ಎಂದು ಅದು ಹೇಳಿದೆ. ಬ್ರಾಹ್ಮಣೇತರರ ಮನಸ್ಸಿನಲ್ಲಿ ಯಾವುದೇ ವಿವೇಚನಾಯುತ ಬುದ್ಧಿವಂತಿಕೆಯನ್ನು ಉಂಟುಮಾಡದೆ, ಶಾಶ್ವತವಾಗಿ ಅವರ ಆಜ್ಞಾನದ ಫಲವನ್ನು ಅನುಭವಿಸಬೇಕೆಂದು ಅದು ತನ್ನ ಅನುಯಾಯಿಗಳಿಗೆ ಆದೇಶಿಸಿದೆ (ಗೀತೆ 3-26). ತಮ್ಮ ಸ್ವಂತ ಜಾತಿಯನ್ನು ಅನುಸರಿಸಬೇಕು ಮತ್ತು ಆಗ ಮಾತ್ರವೇ ಅವರು ಸ್ವರ್ಗಕ್ಕೆ ಹೋಗಲು ಸಾಧ್ಯ ಎಂದು ಅದು ಜನರಿಗೆ ಕರೆಕೊಟ್ಟಿದೆ.

ಇತರ ಜಾತಿಗಳನ್ನು ಅನುಸರಿಸುವವರು ನರಕಕ್ಕೆ ಹೋಗುತ್ತಾರೆ; ಯಾಕೆಂದರೆ, ಇತರರ ಧರ್ಮವು ಅಪಾಯಕಾರಿಯಾಗಿದೆ ಮತ್ತು ವಿನಾಶಕಾರಿಯಾಗಿದೆ. ಈ ಗ್ರಂಥವು ಸಂಪೂರ್ಣವಾಗಿ ವಿರೋಧಾಭಾಸಗಳಿಂದ ತುಂಬಿಕೊಂಡಿದೆ. ಅದು ಬ್ರಾಹ್ಮಣರರಿಗೆ ಪರಮಾಧಿಕಾರವನ್ನು ಕೊಟ್ಟಿದೆ. ಮುಂದುವರಿದು ಅದು ಮಹಿಳೆಯರು, ಬನಿಯಾಗಳು, ಶೂದ್ರರು ಮತ್ತು ಚಾಂಡಾಲರು ಪಾಪಿಗಳಾಗಿ ಹುಟ್ಟಿದ್ದಾರೆ ಎಂದು ಹೇಳಿದೆ. (ಗೀತೆ 9-32). ಅದು ಕೊಲ್ಲುವಿಕೆ, ಕಳ್ಳತನ ಮತ್ತು ಅನೈತಿಕ ಜೀವನದಲ್ಲಿ ನಂಬಿಕೆ ಹೊಂದಿದೆ ಮತ್ತು ಸುಳ್ಳು ಹೇಳುವುದು ಮತ್ತು ಮದ್ಯಪಾನದ ದಾಸರಾಗಿರುವುದರ ಪರವಾಗಿ ವಾದಿಸಿದೆ. “ಕೃಷ್ಣ” ಎಂದರೆ ಕತ್ತಲು ಎಂದರ್ಥ. ಬೇರೆಯೇ ಶಬ್ದಗಳಲ್ಲಿ ಅನೈತಿಕ ಜೀವನ.

ನವೆಂಬರ್ 26, 1949: ಹಿಂದೂ ಕಾನೂನಿನ ಕ್ರೋಢೀಕರಣ

ಜನವರಿ 26, 1950ರಂದು ಸಂವಿಧಾನ ರಚನಾ ಸಭೆಯು ಸಂವಿಧಾನವನ್ನು ಅಂಗೀಕರಿಸಿತು. ನವೆಂಬರ್ 26, 1949 (ಶನಿವಾರ) ಡಾ. ಅಂಬೇಡ್ಕರ್ ಅವರು ಮಾಡಿದ ಐತಿಹಾಸಿಕ ಭಾಷಣವು ಸ್ಮರಣಾರ್ಹವಾಗಿದೆ. ಅದು ಇಡೀ ದೇಶಕ್ಕೆ ಒಂದು ಎಚ್ಚರಿಕೆಯಾಗಿತ್ತು. “26 ಜನವರಿ, 1950ರಂದು ನಾವು ರಾಜಕೀಯದಲ್ಲಿ ಸಮಾನತೆ ಮತ್ತು ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಅಸಮಾನತೆಯನ್ನು ಹೊಂದಲಿದ್ದೇವೆ” ಎಂದವರು ಘೋಷಿಸಿದರು. “ನಾವು ಈ ವಿರೋಧಾಭಾಸವನ್ನು ಆದಷ್ಟು ಬೇಗನೇ ತೊಡೆದುಹಾಕಬೇಕು. ಇಲ್ಲವಾದಲ್ಲಿ ಅಸಮಾನತೆಯಿಂದ ಬಾಧಿತರಾದವರು- ಈ ಸಂವಿಧಾನ ಸಭೆಯು ಅಷ್ಟೊಂದು ಶ್ರಮಪಟ್ಟು ಕಟ್ಟಿದ ಪ್ರಜಾಸತ್ತಾತ್ಮಕ ರಾಜಕೀಯ ರಚನೆಯನ್ನು ಉಡಾಯಿಸಿಬಿಡುತ್ತಾರೆ” ಎಂದು ಎಚ್ಚರಿಸಿದರು.

ಎಂತಾ ದಾರ್ಶನಿಕ ಮಾತುಗಳಿವು! ಅವರ ಭವಿಷ್ಯ ನುಡಿಗಳು ಈಗಾಗಲೇ ನಿಜವಾಗಿವೆ. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳ ಕುರಿತ ಅವರ ಊಹೆಗಳು ಈಗಾಗಲೇ ದೇಶಾದ್ಯಂತ ಸಮಸ್ಯೆಗಳನ್ನು ಉಂಟುಮಾಡಿವೆ. ಜಾತ್ಯಾಧಾರಿತ ಯೋಜನೆಗಳಿಂದಾಗಿ ಬಡವರು ಇನ್ನಷ್ಟು ಬಡವರಾಗಿದ್ದಾರೆ ಮತ್ತು ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಲೇ ಇದ್ದಾರೆ. ಭಾರತದ ಭೂರಹಿತ ಕಾರ್ಮಿಕರು, ಎಸ್‌ಸಿ ಮತ್ತು ಎಸ್‌ಟಿಗಳ ಮೇಲೆ ದೌರ್ಜನ್ಯ, ಶೋಷಣೆ ಮತ್ತು ದಮನಗಳು ಮುಂದುವರಿಯುತ್ತಿವೆ. ದೇಶದ ಎಲ್ಲಾ ಭಾಗಗಳಲ್ಲಿ ಸಂಪೂರ್ಣ ಅಶಾಂತಿಯಿದೆ.

ಸಂವಿಧಾನದ ಐತಿಹಾಸಿಕ ಅಂಗೀಕಾರಕ್ಕಾಗಿ ಮತ್ತು ದೇಶಕ್ಕೆ ಎಚ್ಚರಿಕೆ ನೀಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸುವುದಕ್ಕಾಗಿ ಅದೇ ದಿನ ಸಂಜೆ ಈ ಲೇಖಕ ಬಾಬಾಸಾಹೇಬರ ನಿವಾಸಕ್ಕೆ ಹೋದರು. ತಾನು 1927 ಮತ್ತು 1935ರಲ್ಲಿ ಮನುಸ್ಮೃತಿ ಸುಟ್ಟಿದ್ದುದಾಗಿ ಬಾಬಾಸಾಹೇಬರು ಹೇಳಿದರು. ಅದನ್ನೀಗ ಪ್ರಜಾಸತ್ತಾತ್ಮಕ ಸಂವಿಧಾನವು ಸ್ವತಃ ಬದಲಿಸಿದೆ. ಅದು ಅವರ ಜೀವನದ ಅತ್ಯಂತ ದೊಡ್ಡ ಕನಸಿನ ಸಾಕಾರ. ಅವರು ಅತ್ಯಂತ ಸಂತಸದಿಂದಿದ್ದರು ಮತ್ತು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೇಲೆ ಆಧರಿಸಿದ ಸಂವಿಧಾನವನ್ನು ರೂಪಿಸಲು ತನ್ನ ಮೇಲೆ ವಿಶ್ವಾಸ ಇರಿಸಿದ್ದಕ್ಕಾಗಿ ಅವರು ದೇಶಕ್ಕೆ ಮತ್ತು ಅದರ ನಾಯಕರುಗಳಿಗೆ ಆಭಾರಿಯಾಗಿದ್ದರು. ಸಾಂವಿಧಾನಿಕ ವಿಧಿಗಳ ಅನುಷ್ಠಾನವು ರಾಜಕೀಯ ಸಮಾನತೆಯನ್ನು ಸ್ಥಾಪಿಸುವುದರಲ್ಲಿ ಸಂಶಯವಿಲ್ಲ. ಆದರೆ, ಸಮಯ ಕಳೆದಂತೆ ಸಾಮಾಜಿಕ ಅಸಮಾನತೆಗಳು ಹೆಚ್ಚುವವು. ಹಿಂದೂ ಸಮಾಜದಲ್ಲಿನ ಈ ರೋಗವನ್ನು ನಿವಾರಿಸಲು ಸಂವಿಧಾನದ ವಿಧಿಗಳಿಗೆ ಅನುಸಾರವಾಗಿ ಹಿಂದೂ ಕಾನೂನುಗಳನ್ನು ಕ್ರೋಢೀಕರಣಗೊಳಿಸಬೇಕು. ಒಮ್ಮೆ ಇದನ್ನು ಮಾಡಲಾದರೆ, ಜಾತಿಯು ತನ್ನ ಪರಿಣಾಮವನ್ನು ಕಳೆದುಕೊಳ್ಳುತ್ತದೆ ಮತ್ತು ಇಡೀ ದೇಶವು ಒಗ್ಗಟ್ಟಾಗಿ ಇರುತ್ತದೆ. ಹಿಂದೂ ಕಾನೂನಿನ ಕ್ರೋಢೀಕರಣದ ಡಾ. ಅಂಬೇಡ್ಕರರ ಕನಸು- ಜಾತಿ ತಾರತಮ್ಯ ವ್ಯವಸ್ಥೆಯ ಸಂಘಟಿತ ಪ್ರತಿಭಟನೆಯ ಕಾರಣದಿಂದ ನುಚ್ಚುನೂರಾಯಿತು ಎಂದು ನಂತರದ ಘಟನೆಗಳು ತೋರಿಸಿಕೊಟ್ಟವು.

ಡಾ. ಅಂಬೇಡ್ಕರ್ ಅವರ ಮಾತುಗಳನ್ನು ಕೇಳದಿರುವುದಕ್ಕಾಗಿ ಮತ್ತು ಅವರು ತೋರಿಸಿಕೊಟ್ಟ ಧೀಮಂತ ಹಾದಿಯಲ್ಲಿ ನಡೆಯದಿರುವುದಕ್ಕಾಗಿ ಹಿಂದೂ ಸಾಂಪ್ರದಾಯಿಕತೆಯು ಪಶ್ಚಾತ್ತಾಪ ಪಡಲಿದೆ. ದೇಶದಲ್ಲಿದ್ದ ಸುಮಾರು 600ರಷ್ಟು ರಾಜ್ಯಗಳ ಆಡಳಿತಗಾರರ ಮೂಲ ಸಂರಚನೆಯನ್ನು ನಾಶ ಮಾಡಲು ಸಾಧ್ಯವಾದುದಕ್ಕೆ ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಅವುಗಳು ದೇಶದಲ್ಲಿ ಜಾತಿ ತಾರತಮ್ಯ ವ್ಯವಸ್ಥೆಯು ಮುಂದುವರಿದುಕೊಂಡು ಬರುವುದಕ್ಕೆ ಜವಾಬ್ದಾರವಾಗಿದ್ದವು. ಇಂದೂ ಕೂಡಾ ನೇಪಾಳವು ಒಂದು ಹಿಂದೂ ರಾಜಸತ್ತೆ. ಮನುವಿನ ಕಾನೂನಿನಂತೆಯೇ ಅಲ್ಲಿ ಜಾತಿ ಮತ್ತು ಉಪಜಾತಿಗಳನ್ನು ಅನುಸರಿಸಲಾಗುತ್ತದೆ. ಬ್ರಾಹ್ಮಣರಲ್ಲದ ಇತರರು ಗೌರವಾರ್ಹ ಜೀವನವನ್ನು ನಡೆಸಲು ಬಿಡಲಾಗುತ್ತಿಲ್ಲ. ಬ್ರಾಹ್ಮಣ ಅರ್ಚಕರು ರಾಣಾಗಳ ಮೂಲಕ ನೇಪಾಳದಲ್ಲಿ ಆಡಳಿತ ನಡೆಸುತ್ತಿದ್ದಾರೆ.

ಶಂಕರಾನಂದ್ ಶಾಸ್ತ್ರಿ
(ಬಾಬಾಸಾಹೇಬರ ಒಡನಾಡಿಯಾಗಿದ್ದ ಶಂಕರಾನಂದ್ ಶಾಸ್ತ್ರಿಯವರ ’ಮೈ ಮೆಮರೀಸ್ ಎಂಡ್ ಎಕ್ಸ್‌ಪೀರಿಯೆನ್ಸಸ್ ಆಫ್ ಬಾಬಾಸಾಹೇಬ್ ಡಾ. ಅಂಬೇಡ್ಕರ್-1989 ಪುಸ್ತಕದಿಂದ ಆಯ್ದ ಅಧ್ಯಾಯದ ಕೊನೆಯ ಕಂತು)

ಕನ್ನಡಕ್ಕೆ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಹಿಂದೂಯಿಸಂ ಒಂದು ಧರ್ಮವಲ್ಲ; ಅದೊಂದು ಕಾನೂನು; ಭಾಗ-1

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...