Homeಮುಖಪುಟವೇದಗಣಿತ ತರಬೇತಿಯ ಉಪಯೋಗಕ್ಕಿಂತ ಅಪಾಯವೇ ಹೆಚ್ಚು: ದಲಿತರ ಮೀಸಲು ಹಣ ದುರ್ಬಳಕೆಗೆ ಆಕ್ರೋಶ

ವೇದಗಣಿತ ತರಬೇತಿಯ ಉಪಯೋಗಕ್ಕಿಂತ ಅಪಾಯವೇ ಹೆಚ್ಚು: ದಲಿತರ ಮೀಸಲು ಹಣ ದುರ್ಬಳಕೆಗೆ ಆಕ್ರೋಶ

ಗ್ರಾಮ ಪಂಚಾಯ್ತಿಗಳಲ್ಲಿ ದಲಿತರಿಗಾಗಿ ಮೀಸಲಾದ ಶೇ.25ರ SCSP TSP ಅನುದಾನದಲ್ಲಿ 5ರಿಂದ 8ನೇ ತರಗತಿ ಮಕ್ಕಳಿಗೆ ವೇದಗಣಿತ ಕಲಿಸಲು ಸರ್ಕಾರ ಮುಂದಾಗಿದೆ.

- Advertisement -
- Advertisement -

ಪಠ್ಯ ಪರಿಷ್ಕರಣೆ ಮೂಲಕ ಪಠ್ಯ ಪುಸ್ತಕಗಳನ್ನು ಬ್ರಾಹ್ಮಣೀಕರಣಗೊಳಿಸಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆದಿತ್ತು. ಅದರ ಬೆನ್ನಲ್ಲೆ ಸರ್ಕಾರ ದಲಿತರಿಗಾಗಿ ಮೀಸಲಿಟ್ಟ SCSP TSP ಹಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳಿಗೆ ವೇದಗಣಿತ ಪಾಠ ಮಾಡಲು ಹೊರಟಿದೆ. ಸರ್ಕಾರದ ಈ ನಡೆಯನ್ನು ಶಿಕ್ಷಣ ತಜ್ಞರು ಮತ್ತು ಹೋರಾಟಗಾರರು ಬಲವಾಗಿ ಖಂಡಿಸಿದ್ದಾರೆ.

ರಾಜ್ಯದ ಹಲವಾರು ಶಾಲೆಗಳಲ್ಲಿನ 5 ರಿಂದ 8ನೇ ತರಗತಿವರೆಗಿನ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ವೇದಗಣಿತ ಕಲಿಸುವುದು ಮತ್ತ ಅದಕ್ಕಾಗಿ ಸಮವಸ್ತ್ರ ನೀಡುವುದಕ್ಕಾಗಿ ಗ್ರಾಮ ಪಂಚಾಯ್ತಿಗಳಲ್ಲಿ ದಲಿತರಿಗಾಗಿ ಮೀಸಲಾದ ಶೇ.25ರ SCSP TSP ಅನುದಾನವನ್ನು ಬಳಸಿಕೊಳ್ಳುವಂತೆ ಗ್ರಾಮೀಣಾಭಿವೃದ್ದಿ ಇಲಾಖೆ ಆದೇಶ ಹೊರಡಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರಂಭಿಕವಾಗಿ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 5 ರಿಂದ 8ನೇ ತರಗತಿವರೆಗಿನ 25 ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಹಿತ ವೇದಗಣಿತ ತರಬೇತಿ ನೀಡಲು ಹಿರಿಯೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎ.ವಿ.ಎಂ ಅಕಾಡೆಮಿಯು ಆಗಸ್ಟ್‌ನಲ್ಲಿ ಶಿಕ್ಷಣ ಇಲಾಖೆಗೆ ಮನವಿ ಮಾಡಿತ್ತು. ಇದಕ್ಕೆ ಒಂದೇ ತಿಂಗಳಲ್ಲಿ ಸರ್ಕಾರ ಅನುಮತಿ ನೀಡಿದೆ. ಅಲ್ಲದೆ ಇಂದಿನಿಂದ ಶಿಕ್ಷಕರಿಗೆ ತರಬೇತಿ ನೀಡಲು ಮುಂದಾಗಿದ್ದು ತರಬೇತಿ ಹಾಜರಾಗುವಂತೆ ಸರ್ಕಾರಿ ಶಾಲಾ ಶಿಕ್ಷಕರಿಗೆ ಬಿಇಓಗಳು ನೋಟಿಸ್ ಕಳಿಸಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಎವಿಎಂ ಅಕಾಡೆಮಿಯ ಮುಖ್ಯಸ್ಥರಾದ ರಘು ಗೌಡ ಮಾತನಾಡಿ, “ನಮ್ಮ ಸಂಸ್ಥೆ ವೇದಗಣಿತ ಕಲಿಸಲು ಸರ್ಕಾರ ಅವಕಾಶ ನೀಡಿದೆ. ನಮ್ಮಿಂದ ತರಬೇತಿ ಪಡೆದ ಸರ್ಕಾರಿ ಶಿಕ್ಷಕರು ಪ್ರತಿ ಶನಿವಾರ ಮತ್ತು ಭಾನುವಾರ ಶಾಲೆ ಮುಗಿದ ನಂತರ ಎರಡು ಗಂಟೆಗಳ ಕಾಲ ಮಕ್ಕಳಿಗೆ ವೇದಗಣಿತ ಪಾಠ ಮಾಡುತ್ತಾರೆ. 16 ವಾರಗಳ ಕಾಲ ಮುಂದುವರೆಯುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಕಲಿಕಾ ಕಿಟ್ ತಯಾರಿಸಿದ್ದೇವೆ ಮತ್ತು ಸಮವಸ್ತ್ರ ನೀಡುತ್ತಿದ್ದೇವೆ” ಎಂದರು.

ದಲಿತರಿಗಾಗಿ ಮೀಸಲಿಟ್ಟ ಹಣದ ದುರ್ಬಳಕೆ ಸಲ್ಲದು – ಬಿ.ಶ್ರೀಪಾದ್ ಭಟ್

ಮಕ್ಕಳಿಗೆ ವೇದ ಗಣಿತ ಕಲಿಸುವುದಕ್ಕಾಗಿ ದಲಿತರಿಗಾಗಿ ಮೀಸಲಿಟ್ಟ ಹಣ ಬಳಸುವುದಕ್ಕೆ ಶಿಕ್ಷಣ ತಜ್ಞ ಹೋರಾಟಗಾರ ಬಿ.ಶ್ರೀಪಾದ್ ಭಟ್ ವಿರೋಧ ವ್ಯಕ್ತಪಡಿಸಿದ್ದಾರೆ. “ಪ. ಜಾತಿ/ಪ.ಪಂಗಡ ಸಮುದಾಯಗಳ ಸಬಲೀಕರಣಕ್ಕಾಗಿ ಜಾರಿಗೊಂಡ Scsp, tsp ಯೋಜನೆಯ ಉದ್ದೇಶವನ್ನು ಈಗಾಗಲೇ ವಿಫಲಗೊಳಿಸಲಾಗಿದೆ. ಪ್ರತಿ ಇಲಾಖೆಗೂ ಅನುಮೋದನೆಗೊಂಡ ಮೊತ್ತವನ್ನು ಪೂರ್ಣವಾಗಿ ಹಂಚಿಕೆ ಮಾಡುತ್ತಿಲ್ಲ, ಹಂಚಿಕೆಯಾದ ಮೊತ್ತದ ಶೇ.30ರಷ್ಷು ಪ್ರಮಾಣವು ಬಳಕೆಯಾಗುವುದಿಲ್ಲ. ಬಳಕೆಯಾಗುವ ಮೊತ್ತವನ್ನು ದಲಿತ ಸಮುದಾಯದ ಶಿಕ್ಷಣ, ಸ್ಕಾಲರ್ಶಿಪ್, ಹಾಸ್ಟೆಲ್, ಆರೋಗ್ಯ, ಸ್ವ ಉದ್ಯೋಗ ಮುಂತಾದವುಗಳಿಗೆ ವಿನಿಯೋಗಿಸದೆ ಅನ್ಯ ಕಾರ್ಯಗಳಿಗೆ ಅಕ್ರಮವಾಗಿ ಬಳಸಿಕೊಳ್ಳುತ್ತಾರೆ. ಈ ಸಾಮಾಜಿಕ ಅನ್ಯಾಯದ ಇತ್ತೀಚಿನ ಉದಾಹರಣೆ ಈ ವೇದಗಣಿತ ಕಲಿಸುವುದಾಗಿದೆ. Scsp, tsp ಯೋಜನೆಗೆ ಮೀಸಲಾದ ಹಣವನ್ನು ಅರ್ಥಹೀನ ವೇದಗಣಿತ ತರಬೇತಿಗೆ ಬಳಸಿಕೊಳ್ಳುತ್ತಿದ್ದಾರೆ. ಇದು ನೇರವಾಗಿ ಕಾನೂನಿನ ಉಲ್ಲಂಘನೆ. ಯಾರಿಗಾಗಿ, ಯಾತಕ್ಕಾಗಿ ವಂಚಿತ ಸಮುದಾಯದ ಮೊತ್ತವನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತೀರಿ ಎಂದು ಶಿಕ್ಷಣ ಸಚಿವ ನಾಗೇಶ್, ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಬೇಕಿದೆ” ಎಂದಿದ್ದಾರೆ.

ವೇದಗಣಿತದಿಂದ ಮಕ್ಕಳು ನಿಜವಾದ ಗಣಿತ ಕಲಿಯದಿರುವ ಅಪಾಯವಿದೆ – ಎಸ್.ಬಾಲಚಂದ್ರ ರಾವ್

ಬೆಂಗಳೂರಿನ ಭಾರತೀಯ ವಿದ್ಯಾಭವನದ ಗಾಂಧಿ ಸೆಂಟರ್ ಅಫ್ ಸೈನ್ಸ್ ಅಂಡ್ ಹ್ಯೂಮನ್ ವ್ಯಾಲ್ಯೂಸ್ ವಿಭಾಗದ ಗೌರವ ನಿರ್ದೇಶಕರೂ ಹಾಗೂ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಗೌರವ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್.ಬಾಲಚಂದ್ರ ರಾವ್ ರವರು ಈ ವೇದಗಣಿತ ಕಲಿಕೆಯಿಂದ ಮಕ್ಕಳಿ ನಿಜವಾದ ಗಣಿತ ಕಲಿಯದಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು, “ವೇದಗಣಿತ ಕಲಿಕೆಯಿಂದ ಏನೂ ಉಪಯೋಗವಿಲ್ಲ. ಅದರಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದ ವಿದ್ಯಾರ್ಥಿಗಳಿಗೆ ಶಾರ್ಟ್‌ಕಟ್ ವಿಧಾನದಲ್ಲಿ ಗುಣಾಕಾರ ಮತ್ತು ಭಾಗಕಾರವನ್ನು ಹೇಳಿಕೊಡಲಾಗುತ್ತದೆ. ಆದರೆ ಅದರಿಂದ ಗಣಿತಕ್ಕೆ ಬೇಕಾದ ತಾರ್ಕಿಕ ಚಿಂತನೆಗಳು ಅಭಿವೃದ್ಧಿಯಾಗುವುದಿಲ್ಲ” ಎಂದು ಅಭಿಪ್ರಾಯಪಡುತ್ತಾರೆ.

ಮುಖ್ಯವಾಗಿ ಗಣಿತ ವಿಜ್ಞಾನಕ್ಕೆ ತಾರ್ಕಿಕವಾದ ಚಿಂತನೆ, ಮನಸ್ಥಿತಿ ಬೇಕು. ಆದರೆ ವೇದಿಕ್ ಮ್ಯಾಥಮೆಟಿಕ್ಸ್‌ನಿಂದ ಅದು ಬರುವುದಿಲ್ಲ. ಅದೊಂದು ಮ್ಯಾಜಿಕ್ ಇದ್ದಹಾಗೆ ಅಷ್ಟೆ. ಇದನ್ನು ಮಕ್ಕಳಿಗೆ ಹೇಳಿಕೊಡುವುದರಿಂದ ಅದೇ ಗಣಿತ ಎಂದು ಭಾವಿಸಿ ಮಕ್ಕಳು ನಿಜವಾದ ಗಣಿತವನ್ನು ಕಲಿಯದೆ ಇರುವ ಅಪಾಯವಿದೆ. ನಿಜವಾದ ಗಣಿತದಲ್ಲಿ ಅದರಲ್ಲಿಯೂ ರೇಖಾಗಣಿತದಲ್ಲಿ ತಾರ್ಕಿಕವಾದ ಚಿಂತನೆ ಅಭಿವೃದ್ದಿಯಾಗುತ್ತದೆ. ಈ ಕಲಿಕೆಯನ್ನು ಹೆಚ್ಚು ಮಾಡಬೇಕು. ಇದರಿಂದ ಮುಂದೆ ಮುಂದೆ ಹೋದಂತೆ ತಾರ್ಕಿಕ ಚಿಂತನೆ ಆಳವಾಗಿ ಅಭಿವೃದ್ದಿಯಾಗುತ್ತದೆ. ಇದು ಯಾವುದು ಸಹ ವೇದಗಣಿತದಲ್ಲಿ ಸಾಧ್ಯವಿಲ್ಲ ಎನ್ನುತ್ತಾರೆ ಎಸ್.ಬಾಲಚಂದ್ರ ರಾವ್.

ಈ ವೇದಗಣಿತ ಕಲಿಕೆಯಿಂದ ಗಣಿತದ ಬಗ್ಗೆ ತಪ್ಪು ಅಭಿಪ್ರಾಯ ಬರುತ್ತದೆ. ಗಣಿತ ಎಂದರೆ ಕೇವಲ ಮ್ಯಾಜಿಕ್ ಎಂದು ವಿದ್ಯಾರ್ಥಿಗಳು ಭಾವಿಸುವ ಅಪಾಯವಿದೆ. ಅಲ್ಲದೆ ವೇದಗಣಿತದ ಬಗ್ಗೆ ಯಾವ ವೇದಗಳಲ್ಲಿಯೂ ಹೇಳಿಲ್ಲ. ಹಿಂದಿನ ಶತಮಾನದ ಕೆಲ ಸ್ವಾಮಿಗಳು ಮಾಡಿರುವ ಸೂತ್ರಗಳು ಇವು. ಅವು ವೇದಿಕ್ ಅಲ್ಲ ಮತ್ತು ಮ್ಯಾಥಮ್ಯಾಟಿಕ್ಸ್ ಕೂಡ ಅಲ್ಲ. ಅವುಗಳಿಗೆ ವೇದಿಕ್ ಎಂದು ಹೆಸರು ಕೊಟ್ಟು ಮಕ್ಕಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವೇದಗಣಿತದ ಬದಲು ಮಕ್ಕಳಿಗೆ ಉತ್ತಮ ಇಂಗ್ಲಿಷ್ ಕಲಿಸಲಿ – ಸರೋವರ್ ಬೆಂಕಿಕೆರೆ

ಸರ್ಕಾರವು ದಲಿತರಿಗಾಗಿ ಮೀಸಲಿಟ್ಟ ಹಣದಲ್ಲಿ ಅವೈಜ್ಞಾನಿಕ ಮತ್ತು ಸಂಸ್ಕೃತ ಪ್ರೇರಿತ ವೇದಗಣಿತ ಕಲಿಸುವುದು ಸರಿಯಲ್ಲ. ಅದರ ಬದಲಿಗೆ ಉತ್ತಮ ಇಂಗ್ಲಿಷ್ ಕಲಿಸಬೇಕೆಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಂಚಾಲಕರಾದ ಸರೋವರ್ ಬೆಂಕಿಕೆರೆ ಒತ್ತಾಯಿಸಿದ್ದಾರೆ.

ದಲಿತ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಜೊತೆಗೆ ಬಹುತೇಕ ಶಾಲೆಗಳಲ್ಲಿ ಆಂಗ್ಲ ಶಿಕ್ಷಕರಿಲ್ಲ. ಸರ್ಕಾರವು ಈ ಬಗ್ಗೆ ಗಮನಹರಿಸಿ ಮಕ್ಕಳಿಗೆ ಉತ್ತಮ ಪೌಷ್ಠಿಕ ಆಹಾರ ಒದಗಿಸಬೇಕು ಮತ್ತು ಉತ್ತಮ ತರಬೇತಿ ಪಡೆದ ಶಿಕ್ಷಕರಿಂದ ಆಂಗ್ಲ ಭಾಷೆ ಕಲಿಸಬೇಕು, ಸ್ಕಾಲರ್‌ ಶಿಪ್ ನೀಡಬೇಕು ಮತ್ತು ಅತ್ಯುತ್ತಮ ಕಂಪ್ಯೂಟರ್ ತರಭೇತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಕುರಿತು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಮತ್ತು ಚಿಕ್ಕಬಳ್ಳಾಪುರ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಜಯರಾಮರೆಡ್ಡಿಯವರ ಅಭಿಪ್ರಾಯ ಪಡೆಯಲು ಯತ್ನಿಸಿತಾದರೂ ಅವರು ಕರೆಗೆ ಲಭ್ಯವಾಗಿಲ್ಲ. ಅವರು ಸಂಪರ್ಕಕ್ಕೆ ಸಿಕ್ಕ ನಂತರ ಅವರ ಅಭಿಪ್ರಾಯವನ್ನು ಅಪ್ಟೇಡ್ ಮಾಡಲಾಗುವುದು.

ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ಸರಿಯಾಗಿ ಶಾಲೆಗಳು ನಡೆಯದ ಕಾರಣ ಮಕ್ಕಳು ಸಮರ್ಪಕ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬಹಳ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದ್ದ ಸರ್ಕಾರ ಯಾವುದೋ ಎನ್‌ಜಿಓಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸರಿಯಲ್ಲ. ಅದರಲ್ಲಿಯೂ ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳಿಗೆ ವೈಜ್ಞಾನಿಕವಾದ, ಆಧುನಿಕವಾದ ಶಿಕ್ಷಣ ನೀಡುವುದು ಬಿಟ್ಟು ವೈದಿಕ ಶಿಕ್ಷಣ ಕೊಡುವುದು ಅವರನ್ನು ಶಿಕ್ಷಣದಿಂದ ಶಾಶ್ವತವಾಗಿ ದೂರವಾಗಿಸುವ ಹುನ್ನಾರ ಎಂಬ ಆರೋಪಗಳು ಕೇಳಿಬರುತ್ತಿವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಸಿ ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕಾಗಿದೆ.


ಇದನ್ನೂ ಓದಿ : ಪಠ್ಯಪರಿಷ್ಕರಣೆಯ ಬೇರಡಗಿರುವುದು ’ರಾಷ್ಟ್ರೀಯ ಶಿಕ್ಷಣ ನೀತಿ 2020’ರಲ್ಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

5 COMMENTS

  1. ಎಸ್ಸಿ ಎಸ್ಟಿ ಮಕ್ಕಳಿಗೆ ಕಲಿಕಾ ಮೆಟೀರಿಯಲ್ ಗಳನ್ನು ಮೊದಲು ನೀಡಲಿ ಮತ್ತು ಲ್ಯಾಪ್ಟಾಪಿನ ಅಗತ್ಯವಿದೆ ಅದನ್ನು ಪೂರೈಸಲಿ ದೂರದ ಸ್ಕೂಲ್ಗಳಿಗೆ ಹೋಗಿ ಬರುವ ಮಕ್ಕಳಿಗೆ ಟ್ರಾನ್ಸ್ಪೋರ್ಟ್ ವ್ಯವಸ್ಥೆ ಕಲ್ಪಿಸಲಿ

  2. ಎಸ್ಸಿ ಎಸ್ಟಿ ಮಕ್ಕಳಿಗೆ ಕಲಿಕಾ ಮೆಟೀರಿಯಲ್ ಗಳನ್ನು ಮೊದಲು ನೀಡಲಿ ಮತ್ತು ಲ್ಯಾಪ್ಟಾಪಿನ ಅಗತ್ಯವಿದೆ ಅದನ್ನು ಪೂರೈಸಲಿ ದೂರದ ಸ್ಕೂಲ್ಗಳಿಗೆ ಹೋಗಿ ಬರುವ ಮಕ್ಕಳಿಗೆ ಉಚಿತವಾಗಿ ಟ್ರಾನ್ಸ್ಪೋರ್ಟ್ ವ್ಯವಸ್ಥೆ ಕಲ್ಪಿಸಲಿ

  3. ಸರ್ಕಾರದ ಈ ಕ್ರಮ ಕಂಡನಾರ್ಹ. ನಮ್ಮ ಮಕ್ಕಳನ್ನು ಮನುವಾದಿಗಳ ಗುಲಾಮರನ್ನಾಗಿ ಮಾಡಲು ನಡೆಯುತ್ತಿರುವ ಈ ಕುತಂತ್ರವನ್ನು ಪ್ರಜ್ಞಾವಂತರೆಲ್ಲರೂ ಒಕ್ಕೋರಲಿನಂದ ಕಂಡಿಸಬೇಕು.

  4. ಎಲ್ಲಕ್ಕಿಂತ ಮೊದಲು ಸರ್ಕಾರ SC, ST ಮಕ್ಕಳಿಗೆ ಮೂಲ ಸೌಕಾರ್ಯದ ವ್ಯವಸ್ಥೆ ಮಾಡಲಿ. ಶಿಕ್ಷಣವನ್ನು ಕೇಸರಿಕಾರಣಗೊಳಿಸುವ ಹುನ್ನಾರ ಇದು.

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...