‘ಟ್ರೂಥ್‌ ಸೋಶಿಯಲ್‌’ | ಹೊಸ ಸಾಮಾಜಿಕ ಜಾಲತಾಣ ಘೋಷಿಸಿದ ಟ್ರಂಪ್! | Naanu gauri

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಫೇಸ್‌ಬುಕ್ ಮತ್ತು ಟ್ವಿಟರ್‌ ನಿಷೇಧ ಹೇರಿದೆ. ಇದೀಗ ಅವರೇ ಸ್ವತಃ ಸಾಮಾಜಿಕ ಜಾಲತಾಣವೊಂದನ್ನು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ. ಜಾಲತಾಣಕ್ಕೆ ‘ಟ್ರೂಥ್‌ ಸೋಶಿಯಲ್‌’ ಎಂಬ ಹೆಸರು ನೀಡಲಾಗಿದ್ದು, ಇನ್ನೂ ಪ್ರಾರಂಭವಾಗಿಲ್ಲ. ಜಾಲತಾಣ ನವೆಂಬರ್‌‌ನಲ್ಲಿ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಧ್ಯಕ್ಷೀಯ ಚುನಾವಣೆಯ ಸಂದರ್ಭ ಅಮೆರಿಕದ ಕ್ಯಾಪಿಟಲ್ ಹಿಲ್‌ನಲ್ಲಿ ಟ್ರಂಪ್ ಬೆಂಬಲಿಗರು ಹಿಂಸಾಚಾರ ನಡೆಸಿದ್ದರು. ಇದರ ನಂತರ ಅವರನ್ನು ಫೇಸ್‌ಬುಕ್ ಮತ್ತು ಟ್ವಿಟರ್‌‌ ತಮ್ಮ ಜಾಲತಾಣಗಳಲ್ಲಿ ನಿಷೇಧಿಸಿತ್ತು. ಜಾಗತಿಕ ದೈತ ಸಾಮಾಜಿಕ ಜಾಲತಾಣಗಳು ಟ್ರಂಪ್‌ ಅವರನ್ನು ನಿರ್ಬಂಧಿಸುತ್ತಿದ್ದಂತೆ, ತಮ್ಮದೇ ಸ್ವಂತ ಸಾಮಾಜಿಕ ಮಾಧ್ಯಮ ರೂಪಿಸುವುದಾಗಿ ಅವರು ಘೋಷಿಸಿದ್ದರು.

ಇದನ್ನೂ ಓದಿ: ಕ್ಯಾಪಿಟಲ್ ಮೇಲೆ ದಾಳಿ: ಟ್ರಂಪ್ ಮತ್ತು ಬಲಪಂಥೀಯ ಗುಂಪುಗಳ ವಿರುದ್ಧ ಮೊಕದ್ದಮೆ ಹೂಡಿದ ಪೊಲೀಸರು

“ತಾಲಿಬಾನಿಗಳೇ ಹೆಚ್ಚು ತುಂಬಿರುವ ಟ್ವಿಟ್ಟರ್‌ನ್ನು ನಾವು ಬಳಕೆ ಮಾಡುತ್ತಿದ್ದೇವೆ. ಇಷ್ಟಾದರೂ ಅಮೆರಿಕದ ಜನಪ್ರಿಯ ಅಧ್ಯಕ್ಷರು ಮೌನವಾಗಿದ್ದಾರೆ. ಇದು ಸ್ವೀಕಾರಾರ್ಹವಲ್ಲ” ಎಂದು ಟ್ರಂಪ್ ಹೇಳಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದೆ.

 

ಟ್ರಂಪ್ ಮೀಡಿಯಾ ಮತ್ತು ಟೆಕ್ನಾಲಜಿ ಗ್ರೂಪ್ ಹಾಗೂ ಸ್ಪೆಷಲ್‌ ಅಕ್ವಶೀಷನ್‌ ಕಂಪೆನಿ (ಎಸ್‌ಪಿಎಸಿ) ಯನ್ನು ವಿಲೀನ ಮಾಡಿ ಒಂದು ಹೊಸ ಕಂಪನಿಯ ಮೂಲಕ ‘ಟ್ರೂಥ್‌ ಸೋಶಿಯಲ್‌’ ಅನ್ನು ರಚಿಸಲಾಗುವುದು ಎಂದು ಎರಡೂ ಸಂಸ್ಥೆಗಳು ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿವೆ ಎಂದು ರಾಯ್ಟರ್ಸ್‌ ವರದಿ ಹೇಳಿದೆ.

“ನಾನು ಶೀಘ್ರದಲ್ಲೇ ‘ಟ್ರೂಥ್‌ ಸೋಶಿಯಲ್‌’ನಲ್ಲಿ ನನ್ನ ಮೊದಲ ಸತ್ಯವನ್ನು ಕಳುಹಿಸಲು ಉತ್ಸುಕನಾಗಿದ್ದೇನೆ. ಎಲ್ಲರಿಗೂ ಧ್ವನಿಯನ್ನು ನೀಡುವ ಉದ್ದೇಶದಿಂದ TMTG ಅನ್ನು ಸ್ಥಾಪಿಸಲಾಗಿದೆ. ಶೀಘ್ರದಲ್ಲೇ ‘ಟ್ರೂಥ್‌ ಸೋಶಿಯಲ್‌’ ಕುರಿತು ನನ್ನ ಯೋಚನೆಗಳನ್ನು ಹಂಚಿಕೊಳ್ಳಲು ಮತ್ತು ಬೃಹತ್‌ ಸಾಮಾಜಿಕ ಜಾಲತಾಣಗಳ ವಿರುದ್ಧ ಹೋರಾಡಲು ನಾನು ಉತ್ಸುಕನಾಗಿದ್ದೇನೆ” ಎಂದು ಟ್ರಂಪ್ ಹೇಳಿದ್ದಾರೆ. ಈ ಮೂಲಕ ತನ್ನ ಮೇಲೆ ನಿಷೇಧ ಹೇರಿದ ಫೇಸ್‌ಬುಕ್ ಮತ್ತು ಟ್ವಿಟರ್‌ ಮೇಲೆ ಸಮರ ಸಾರಿದ್ದಾರೆ.

ಇದನ್ನೂ ಓದಿ: 2023ರವರೆಗೆ ಟ್ರಂಪ್‌ ಖಾತೆ ಬ್ಯಾನ್‌ ವಿಸ್ತರಿಸಿದ ಫೇಸ್‌ಬುಕ್: ಅವಮಾನವೆಂದ ಟ್ರಂಪ್

LEAVE A REPLY

Please enter your comment!
Please enter your name here