Homeಮುಖಪುಟಎರಡು ಆಸ್ಕರ್ ಕಥೆಗಳು!

ಎರಡು ಆಸ್ಕರ್ ಕಥೆಗಳು!

- Advertisement -
- Advertisement -

ಫೆಬ್ರವರಿ 13ರಂದು ಭಾರತೀಯ ಮಾಧ್ಯಮಗಳು, ಭಾರತ ಮೂಲದ ಎರಡು ಸಿನಿಮಾಗಳು ಎರಡು ವಿಭಾಗಗಳಲ್ಲಿ ಪಡೆದ ಆಸ್ಕರ್ ಪ್ರಶಸ್ತಿಯ ಸಲುವಾಗಿ ಇನ್ನಿಲ್ಲದಂತೆ ಸಂಭ್ರಮಾಚರಣೆಯಲ್ಲಿದ್ದವು. ಅಮೆರಿಕ ಮೂಲದ ಈ ಪ್ರಶಸ್ತಿ ಅಷ್ಟು ಜನಪ್ರಿಯತೆ ಪಡೆದುಕೊಂಡಿರುವುದು ನಿಜವೇ! ಹಾಲಿವುಡ್‌ನ ಸಾಧಾರಣ ಸಿನಿಮಾವನ್ನು ಜತ್ತಿನಾದ್ಯಂತ ’ಶ್ರೇಷ್ಠ’ ಎಂಬಂತೆ ಬಿಂಬಿಸುವ ಅಮೆರಿಕದ ಪ್ರಚಾರ ಯಂತ್ರಾಂಗ ಆಸ್ಕರ್ ಪ್ರಶಸ್ತಿಗಳನ್ನೂ ಜಾಗತಿಕವಾಗಿ ಜನಪ್ರಿಯಗೊಳಿಸಿದೆ. ಜೊತೆಗೆ, ಹಲವು ಅತ್ಯುತ್ತಮ ಸಿನಿಮಾಗಳಿಗೂ ಪ್ರಶಸ್ತಿ ನೀಡಿ ಒಂದು ಮಟ್ಟದ ’ಹೆಸರು’ ಉಳಿಸಿಕೊಂಡಿರುವ ’ಆಸ್ಕರ್’ ಅಮೆರಿಕದ ಶ್ರೇಷ್ಠತೆಯನ್ನು ಪ್ರಚಾರ ಮಾಡುವ ಸಿನಿಮಾಗಳಿಗೂ (ಉದಾಹರಣೆಗೆ ಯುದ್ಧೋನ್ಮಾದದ) ಪ್ರಶಸ್ತಿ ನೀಡಿ ಟೀಕೆಗೂ ಗುರಿಯಾಗಿದೆ. ಆದರೂ, ಅತ್ಯುತ್ತಮ ವಿದೇಶಿ ಚಿತ್ರ ವಿಭಾಗಕ್ಕೆ ಹಲವು ದೇಶಗಳು ಒಂದು ಸಿನಿಮಾವನ್ನು ನಾಮಾಂಕಿತ ಮಾಡುವ ಪರಿಪಾಠವನ್ನು ಉಳಿಸಿಕೊಂಡಿವೆ. ಆಲ್ಟರ್‌ನೇಟಿವ್ ಎನ್ನಬಹುದಾದ (ಕಥೆ, ನಿರೂಪಣೆ ಮುಂತಾದವುಗಳಲ್ಲಿ), ಕೇವಲ ಜನಪ್ರಿಯತೆಯನ್ನೇ ಮಾನದಂಡವನ್ನಾಗಿಟ್ಟುಕೊಳ್ಳದ, ಸಿನಿಮಾದ ವಿವಿಧ ವಿಭಾಗಗಳಲ್ಲಿ ಗಂಭೀರತೆಯನ್ನು ತೊಡಗಿಸಿಕೊಂಡ, ಸಮಕಾಲೀನ ಸಂದರ್ಭವನ್ನು ವಿಮರ್ಶಾತ್ಮಕವಾಗಿ ಚಿತ್ರಿಸುವ ಸಿನಿಮಾಗಳು ಈ ವಿಭಾಗದಲ್ಲಿ ಹೆಚ್ಚು ಪ್ರಶಸ್ತಿ ಪಡೆಯುವುದರಿಂದ, ಭಾರತದಲ್ಲಿ ಕೂಡ ’ಕಲಾತ್ಮಕ’ ಚಿತ್ರಗಳು ಎಂದು ಪರಿಗಣಿಸಲಾಗುವ ಚಿತ್ರಗಳನ್ನು ಈ ವಿಭಾಗಕ್ಕೆ ಕಳುಹಿಸುವುದು ವಾಡಿಕೆ. ಅದರಂತೆಯೇ ಈ ಬಾರಿ ’ಚ್ಚೆಲ್ಲೋ ಶೋ’ ಎಂಬ ಗುಜರಾತಿ ಭಾಷೆಯ ಸಿನಿಮಾವನ್ನು ಆಸ್ಕರ್‌ನ ’ವಿದೇಶಿ ಅತ್ಯುತ್ತಮ ಸಿನಿಮಾ’ ವಿಭಾಗದ ಸ್ಪರ್ಧೆಗೆ ಕಳುಹಿಸಲಾಗಿತ್ತು.

ಆದರೆ ಇದರ ಕೆಲವು ದಿನಗಳ ನಂತರ ಶುರುವಾಯಿತು ನೋಡಿ; ತೀವ್ರ ಪ್ರತಿಗಾಮಿ ಸಿನಿಮಾವಾದ ’ದ ಕಾಶ್ಮೀರ್ ಫೈಲ್ಸ್’, ಅತಿ ಸಾಧಾರಣ ಮತ್ತು ಸನಾತನ ನಂಬಿಕೆಗಳನ್ನು ಪ್ರತಿಪಾದಿಸುವ ’ಆರ್‌ಆರ್‌ಆರ್’ ಸಿನಿಮಾಗಳನ್ನು ಆಸ್ಕರ್‌ಗೆ ಕಳುಹಿಸಬೇಕಿತ್ತೆಂಬ ಗುಲ್ಲನ್ನು ಎಬ್ಬಿಸಲಾಯಿತು. ನಂತರ ಈ ಚಿತ್ರಗಳನ್ನು ಅದರ ನಿರ್ಮಾಪಕರೇ ಖಾಸಗಿಯಾಗಿ ಅರ್ಜಿ ತುಂಬಿ ಆಸ್ಕರ್ ಪ್ರಶಸ್ತಿಗಳಿಗೆ ಕಳುಹಿಸಿದರು. ’ಆರ್‌ಆರ್‌ಆರ್’ ಅಂತೂ ಅಮೆರಿಕದಲ್ಲಿ ಸಿನಿಮಾ ಪ್ರಮೋಟರ್ ಸಂಸ್ಥೆಯೊಂದನ್ನು ತೊಡಗಿಸಿಕೊಂಡು ಬಹುಶಃ ಹಿಂದೆಂದೂ ಕಾಣದಷ್ಟು ಹಣ ವಿನಿಯೋಗಿಸಿ ಪ್ರಚಾರದಲ್ಲಿ ತೊಡಗಿಸಿಕೊಂಡಿತು. ಹಲವು ವಿಭಾಗಗಳಲ್ಲಿ ಈ ಸಿನಿಮಾ ನಾಮನಿರ್ದೇಶನಗೊಂಡರೂ, ’ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ಮಾತ್ರ ’ಆರ್‌ಆರ್‌ಆರ್‌’ ’ನಾಟುನಾಟು’ ಹಾಡು ಕೊನೆ ಹಂತದವರೆಗೂ ಉಳಿದುಕೊಂಡಿತ್ತು ಮತ್ತು ಅದರಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಮೆರಿಕದಲ್ಲಿ ಈ ಪ್ರಚಾರಕ್ಕಾಗಿ ಮಾಡಿದ ಖರ್ಚಿನಲ್ಲಿ ಬಹುಶಃ ಸುಮಾರು ಹತ್ತು ಅತ್ಯುತ್ತಮ ಸಿನಿಮಾಗಳನ್ನು ತೆಗೆಯಬಹುದಿತ್ತು ಎಂಬ ನಗೆ ಚಟಾಕಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತೇಲಿಹೋದವು. ಒಟ್ಟಿನಲ್ಲಿ ಈಗ ಆರ್‌ಎಸ್‌ಎಸ್ ಬಗೆಗೆ ಸಿನಿಮಾ ಮಾಡುವುದಕ್ಕೆ ಸನ್ನದ್ಧರಾಗುತ್ತಿರುವ ’ಆರ್‌ಆರ್‌ಆರ್’ ಸಿನಿಮಾದ ನಿರ್ದೇಶಕ ರಾಜಮೌಳಿ ಈ ಪ್ರಶಸ್ತಿಯನ್ನು ಮತ್ತಷ್ಟು ಪ್ರದರ್ಶನ ಮಾಡಿಕೊಳ್ಳುವುದಂತೂ ನಿಜ. ಈ ಸಿನಿಮಾಗೆ ಸಂಗೀತ ನೀಡಿದ ಕೀರವಾಣಿಯವರು ಹಿಂದೆ ಬಸವಣ್ಣನ ವಚನಗಳಿಗೆ ಸಂಗೀತ ನೀಡಿ ಹಾಡಿದ ಆಲ್ಬಂ ಕೂಡ ಈ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿದ್ದು ವಿಶೇಷ.

ಇನ್ನು ಅಷ್ಟು ಅಬ್ಬರವಿಲ್ಲದೆ ಭಾರತದಲ್ಲಿ ತಯಾರಾದ ಕಿರು ಸಾಕ್ಷ್ಯಚಿತ್ರವೊಂದು ಆಸ್ಕರ್ ಪ್ರಶಸ್ತಿ ಪಡೆದು ದೇಶದ ಸಿನಿಮಾ ರಸಿಕರ ಗಮನ ಸೆಳೆಯಿತು. ’ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್’ ವಿಭಾಗದಲ್ಲಿ ಪ್ರಶಸ್ತಿ ಪಡೆದ ’ದ ಎಲಿಫೆಂಟ್ ವಿಸ್ಪರರ್ಸ್’ನ ನಿರ್ದೇಶಕಿ ಕಾರ್ತಿಕಿ ಗೋನ್ಸೇವ್ಸ್. ತಮಿಳುನಾಡಿದ ಮಧುಮಲೈ ಹುಲಿ ಸಂರಕ್ಷಣಾ ಅಭಯಾರಣ್ಯದ ತೆಪ್ಪಕಾಡು ಎಂಬ ಬೆಟ್ಟಗಾಡು ಪ್ರದೇಶದಲ್ಲಿ ಹಿಂಡಿನಿಂದ ತಪ್ಪಿಸಿಕೊಂಡ ಆನೆ ಮರಿಗಳನ್ನು ರಕ್ಷಿಸಿ ಸಾಕುವ ಬೊಮ್ಮನ್ ಮತ್ತು ಬೆಳ್ಳಿ ಅಮ್ಮ ಅವರ ಮತ್ತು ಅವರು ಸಾಕುವ ಎರಡು ಆನೆಗಳ ಒಡನಾಟದ ಭಾವನಾತ್ಮಕ ಕಥೆ ಇದು. ತಮಿಳಿನಲ್ಲಿ ಈ ಸಾಕ್ಷ್ಯಚಿತ್ರ ನಿರೂಪಿತವಾಗಿದ್ದರೂ, ನಡುನಡುವೆ ಬೊಮ್ಮನ್ ಮತ್ತು ಬೆಳ್ಳಿ ಅಮ್ಮ ಮಾತನಾಡುವ ಆ ಭಾಗದ ಕನ್ನಡ ಮಿಶ್ರಿತ ಭಾಷೆ ವಿಶೇಷವೆನಿಸುತ್ತದೆ. ಮರಿಯಾನೆಗಳನ್ನು ತಮ್ಮ ಸ್ವಂತ ಮಕ್ಕಳಂತೆ ಸಾಕಿ ಕಾಪಾಡುವ ಈ ಭಾವನಾತ್ಮಕ ಕಥೆ ’ಫೀಲ್ ಗುಡ್’ ಸಿನಿಮಾವೆನ್ನಬಹುದು. ಸಾಮಾನ್ಯವಾಗಿ ಇಂತಹ ಫೀಲ್ ಗುಡ್ ಸಿನಿಮಾಗಳನ್ನು ಹೆಚ್ಚು ಆಸ್ಕರ್ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದ್ದಿದೆ. ರಘು ಮತ್ತು ಅಮ್ಮು ಎಂಬ ಎರಡು ಆನೆಗಳ ಜೊತೆಗಿನ ಒಡನಾಟದ ದೃಶ್ಯಗಳು ಆ ಬೆಟ್ಟಗಾಡಿನ ಪರಿಸರದಲ್ಲಿ ಮನಮೋಹಕವಾಗಿ ಚಿತ್ರಿಸಲ್ಪಟ್ಟಿವೆ. ಕಾಡು ಪರಿಸರದ ಜೊತೆಗೆ ಮನುಷ್ಯ ಹೊಂದಿರಬೇಕಾದ ಸಂಬಂಧದ ಬಗ್ಗೆ ಈ ಸಿನಿಮಾ ಪರೋಕ್ಷವಾಗಿ ನುಡಿಯುತ್ತದೆ. ಆದರೆ, ಮನುಷ್ಯನ ಅಭಿವೃದ್ಧಿ ಕಲ್ಪನೆಗಳಿಂದ ಪರಿಸರದಲ್ಲಿ ಆಗುತ್ತಿರುವ ಅನಾಹುತಗಳ ಬಗ್ಗೆ, ಅದರಿಂದ ಹುಟ್ಟುತ್ತಿರುವ ಕಾಡುಪ್ರಾಣಿಗಳ ಜೊತೆಗಿನ ಸಂಘರ್ಷದ ಬಗ್ಗೆ ಇನ್ನೂ ಪರಿಣಾಮಕಾರಿಯಾಗಿ ಮಾತನಾಡುವ ಅವಕಾಶವನ್ನು ಸಿನಿಮಾ ಕೈಚೆಲ್ಲಿದೆ. ಆದರೂ, ಕೋಟ್ಯಾನುಗಟ್ಟಲೆ ಪ್ರಚಾರಕ್ಕಾಗಿ ಸುರಿದ ’ಆರ್‌ಆರ್‌ಆರ್’ ಸಿನಿಮಾಗಿಂತಲೂ ಹತ್ತಾರು ಪಟ್ಟು ಉತ್ತಮ ಸಿನಿಮಾ ಇದು ಎನ್ನಲಡ್ಡಿಯಿಲ್ಲ. ಮಕ್ಕಳ ಜೊತೆಗೆ ಕೂತು ’ದ ಎಲಿಫೆಂಟ್ ವಿಸ್ಪರರ್ಸ್’ ನೋಡುವುದು ಒಂದು ಒಳ್ಳೆಯ ಅನುಭವವಾದೀತು. ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಇದು ವೀಕ್ಷಣೆಗೆ ಲಭ್ಯವಿದೆ.


ಇದನ್ನೂ ಓದಿ: ಭಾರತಕ್ಕೆ ಎರಡು ಆಸ್ಕರ್: ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರ, RRR ಚಿತ್ರದ ನಾಟು ನಾಟು ಹಾಡಿಗೆ ಪ್ರಶಸ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಓಂ ಬಿರ್ಲಾ ಪುತ್ರಿಯ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್; ಧ್ರುವ ರಾಠಿ ವಿರುದ್ಧ ಪ್ರಕರಣ ದಾಖಲು

0
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿಯ ಬಗ್ಗೆ ಎಕ್ಸ್‌ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ ನಂತರ, ಮಹಾರಾಷ್ಟ್ರದ ಸೈಬರ್ ಪೊಲೀಸರು ಜನಪ್ರಿಯ ಯೂಟ್ಯೂಬರ್ ಧ್ರುವ ರಾಠಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ...