Homeಮುಖಪುಟಯುಪಿ ಚುನಾವಣೆ: ಬದಲಾವಣೆ ಎದುರು ನೋಡುತ್ತಿರುವ ‘ದಲಿತ ರಾಜಧಾನಿ’ ಆಗ್ರಾ

ಯುಪಿ ಚುನಾವಣೆ: ಬದಲಾವಣೆ ಎದುರು ನೋಡುತ್ತಿರುವ ‘ದಲಿತ ರಾಜಧಾನಿ’ ಆಗ್ರಾ

- Advertisement -
- Advertisement -

ತಾಜ್‌ಮಹಲ್ ಸಿಟಿ ಎಂದು ಕರೆಸಿಕೊಳ್ಳುವ ನಗರ ಆಗ್ರಾ. ಈ ಜಿಲ್ಲೆಯಲ್ಲಿರುವ ಜನಸಂಖ್ಯೆಯಲ್ಲಿ 21% ದಲಿತರು. ಅವರೆಲ್ಲರೂ, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದಾರೆ.

42 ವರ್ಷದ ಸೋಹನ್ ಸಿಂಗ್ ಅವರು ಮಾಯಾವತಿಯವರ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಕಟ್ಟಾ ಬೆಂಬಲಿಗರು. ಸೋಹನ್ ಅವರು ಪರಿಶಿಷ್ಟ ಜಾತಿಗೆ ಸೇರಿದವರು. ಅವರು ಫತೇಹಾಬಾದ್ ಪ್ರದೇಶದಲ್ಲಿ ಸಣ್ಣ ವೀಳ್ಯದೆಲೆ ಅಂಗಡಿಯನ್ನು ನಡೆಸುತ್ತಿದ್ದಾರೆ. ಬಿಎಸ್‌ಪಿಗೆ ಮತ ಹಾಕುವ ವಿಚಾರದಲ್ಲಿ ಅವರು ಇತ್ತೀಚೆಗೆ ತಮ್ಮ ಅಂಗಡಿ ಬಂದ ಗ್ರಾಹಕರೊಂದಿಗೆ ವಾಗ್ವಾದ ನಡೆಸಿದ್ದರು.

ಇದನ್ನೂ ಓದಿ: ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡದಂತೆ ಯುಪಿ ರೈತರಿಗೆ ಎಸ್‌ಕೆಎಂ ಮನವಿ

ಗ್ರಾಹಕರು ತಮ್ಮ ವಾದದಲ್ಲಿ, “ಆಗ್ರಾ ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದರೂ, ಮಾಯಾವತಿಯಾಗಲಿ ಅಥವಾ ಅವರ ಕಾರ್ಯಕರ್ತರಾಗಲಿ ಬಂದು ತಮ್ಮ ಜನರ ಸಮಸ್ಯೆಗಳನ್ನು ಆಲಿಸಲಿಲ್ಲ. ಆದ್ದರಿಂದ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಸಮಾಜವಾದಿ ಪಕ್ಷವನ್ನು ಬೆಂಬಲಿಸುವುದು ಉತ್ತಮ” ಎಂದು ಹೇಳಿದ್ದಾರೆ. ತನ್ನ ಗ್ರಾಹಕರ ಹೇಳಿಕೆಯಿಂದ ಕೆರಳಿದ ಸೋಹನ್‌, ಬಿಎಸ್‌ಪಿಗೆ ಪರ್ಯಾಯವಾಗಿ ಇತರ ಪಕ್ಷಗಳನ್ನು ಆಯ್ಕೆಯಾಗಿ ನೋಡುವ ಜನರ ಬೆಂಬಲದ ಅಗತ್ಯ ತಮ್ಮ ಪಕ್ಷಕ್ಕಿಲ್ಲ ಎಂದು ಕೂಗಾಡಿದರು.

ತಾಜ್ ಮಹಲ್ ನಗರ ಎಂದು ಕರೆಯುವುದರ ಹೊರತಾಗಿ, ಆಗ್ರಾವನ್ನು ಉತ್ತರ ಪ್ರದೇಶದ ದಲಿತ ರಾಜಧಾನಿ ಎಂದೂ ಕರೆಯಲಾಗುತ್ತದೆ. ಅದರ ಜನಸಂಖ್ಯೆಯ ಸುಮಾರು ಐದನೇ ಒಂದು ಭಾಗದಷ್ಟು ಪರಿಶಿಷ್ಟ ಜಾತಿಗೆ ಸೇರಿದ ಜನರಿದ್ದಾರೆ. ತಾಜ್ ಜಿಲ್ಲೆಯಲ್ಲಿ ಒಂಭತ್ತು ವಿಧಾನಸಭಾ ಕ್ಷೇತ್ರಗಳಿದ್ದು, ಇವೆಲ್ಲವೂ ಬಿಜೆಪಿಯ ವಶದಲ್ಲಿವೆ. 2017ರ ಮೊದಲು ಒಂಭತ್ತು ಕ್ಷೇತ್ರಗಳ ಪೈಕಿ ಆರರಲ್ಲಿ ಬಿಎಸ್‌ಪಿ ಪ್ರಾಬಲ್ಯ ಹೊಂದಿತ್ತು.

ಆಗ್ರಾದಲ್ಲಿರುವ ದಲಿತ ಸಮುದಾಯದ ಹೆಚ್ಚಿನ ಜನರು ದೊಡ್ಡ ಶೂ ಉದ್ಯಮ, ಶುಚಿಗೊಳಿಸುವ ಉದ್ಯಮ ಮತ್ತು ಚರ್ಮದ ಉದ್ಯಮವನ್ನು ಅವಲಂಭಿಸಿದ್ದಾರೆ. ಆದರೆ, ಇತ್ತೀಚೆಗೆ ಹತ್ರಾಸ್‌ನಲ್ಲಿ ಪೊಲೀಸ್ ವಶದಲ್ಲಿ ವಾಲ್ಮೀಕಿ ಸಮುದಾಯದ ಯುವಕನ ಸಾವು ಮತ್ತು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಜಿಲ್ಲೆಯ ದಲಿತರನ್ನು ಅಸಮಾಧಾನಗೊಳಿಸಿವೆ.

ಇದನ್ನೂ ಓದಿ: ಯುಪಿ ಚುನಾವಣೆ: ರೈತ ಆಕ್ರೋಶದ ಜಿಲ್ಲೆ ಲಖಿಂಪುರ್‌ ಖೇರಿಯಲ್ಲಿ ಪ್ರಚಾರ ನಡೆಸಲಿರುವ ರಾಜನಾಥ್ ಸಿಂಗ್

20,000 ಕ್ಕೂ ಹೆಚ್ಚು ದಲಿತರು ವಾಸಿಸುವ ಲೋಹಾ ಮಂಡಿಯ ವಾಲ್ಮೀಕಿ ನಗರದ ನಿವಾಸಿ ಸ್ವಚ್ಛತಾ ಕಾರ್ಮಿಕ ಸೌರಭ್ ಪ್ರಕಾರ, ತಮ್ಮ ಸಮುದಾಯಕ್ಕೆ ತಮ್ಮದೇ ನಾಯಕನ ಅಗತ್ಯವಿದೆ. “ನಮಗೆ ಶಿಕ್ಷಣ ಬೇಕು, ನಮಗೆ ಉತ್ತಮ ಸೌಲಭ್ಯಗಳು ಬೇಕು, ನಮಗೆ ಗೌರವ ಬೇಕು. ವಾಲ್ಮೀಕಿ ಸಮುದಾಯ ಅಥವಾ ಪರಿಶಿಷ್ಟ ಜಾತಿಗೆ ಸೇರಿದವರು ಎಂದರೆ ನಾವು ಕೇವಲ ಶುಚಿಗೊಳಿಸುವಿಕೆ ಅಥವಾ ನೈರ್ಮಲ್ಯ ಕಾರ್ಯಗಳನ್ನು ಮಾತ್ರ ಮಾಡುವ ಜನರು ಎಂದು ಅರ್ಥವಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಗ್ರಾದಲ್ಲಿ ಇತ್ತೀಚೆಗೆ ಪೊಲೀಸ್ ವಶದಲ್ಲಿದ್ದ ನೈರ್ಮಲ್ಯ ಕಾರ್ಯಕರ್ತನ ಸಾವಿನ ಬಗ್ಗೆ ಉಲ್ಲೇಖಿಸಿದ ಅವರು, “ನಮ್ಮ ಸಹೋದರ ಅರುಣ್ ವಾಲ್ಮೀಕಿ ಕೂಡ ನೈರ್ಮಲ್ಯ ಕಾರ್ಯಕರ್ತರಾಗಿದ್ದರು. ಅವರು ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಪೊಲೀಸರಿಂದ ಕೊಲ್ಲಲ್ಪಟ್ಟರು. ವಾಲ್ಮೀಕಿಗಳು ಮನುಷ್ಯರಲ್ಲವೇ ಅಥವಾ ನಮ್ಮ ಜೀವನ ಯಾರಿಗೂ ಮುಖ್ಯವಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.

“ವಾಲ್ಮೀಕಿನಗರದಲ್ಲಿ ಹಾದು ಹೋಗಿರುವ ದೊಡ್ಡ ಚರಂಡಿಯಿಂದ ದುರ್ನಾತ ಬರುತ್ತಿತ್ತು. ಆದರೂ, ತಮ್ಮ ಸಮಸ್ಯೆಯನ್ನು ಪಕ್ಕಕ್ಕಿಟ್ಟು, 2017ರಲ್ಲಿ ಹಿಂದುತ್ವದ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಗೆ ಮತ ಹಾಕಿದ್ದೆವು. ಆದರೆ, ಈಗ ನಾವು ಎಚ್ಚೆತ್ತುಕೊಂಡಿದ್ದೇವೆ. ನಮಗೆ ಹಿಂದೂತ್ವ ಬೇಡ, ಸಮಸ್ಯೆಗೆ ಪರಿಹಾರ ಬೇಕು” ಎಂದು ಸೌರಭ್ ಹೇಳಿದ್ದಾರೆ.

ಇದನ್ನೂ ಓದಿ: ಯುಪಿ ಚುನಾವಣೆ: ಯಾವ ಪಕ್ಷಕ್ಕೂ ಇಲ್ಲ ರೈತರ ಮತ, ನೋಟಾದತ್ತ ಎಲ್ಲರ ಚಿತ್ತ

ಆಗ್ರಾದಿಂದ ಸುಮಾರು ನೂರು ಕಿ.ಮೀ. ದೂರದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಅರುಣ್ ವಾಲ್ಮೀಕಿ ಮನೆ ಇದೆ. ಆದರೆ, ಅವರ ಸಾವು ಹೃದಯಾಘಾತವಲ್ಲ ಪೊಲೀಸ್ ವಶದಲ್ಲಿ ಅವರ ಹತ್ಯೆಯಾಗಿದೆ ಎಂದು ಕುಟುಂಬ ಮತ್ತು ಸಮುದಾಯದವರು ಆರೋಪಿಸಿದ್ದಾರೆ. 31 ವರ್ಷದ ಈ ನೈರ್ಮಲ್ಯ ಕಾರ್ಯಕರ್ತನ ಸಾವು ಜಿಲ್ಲೆಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಅರುಣ್ ವಾಲ್ಮೀಕಿ ಅವರ ಕುಟುಂಬ ಸದಸ್ಯರನ್ನು ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕಿ ಪ್ರಿಯಾಂಕಾ ಗಾಂಧಿ ಮತ್ತು ಇತರ ರಾಜಕೀಯ ಪಕ್ಷದ ಮುಖಂಡರು ಭೇಟಿ ಮಾಡಿದ್ದರು. ಕಾಂಗ್ರೆಸ್ ಮತ್ತು ಎಸ್‌ಪಿಯಂತಹ ಪಕ್ಷಗಳು ಕುಟುಂಬಕ್ಕೆ ಆರ್ಥಿಕ ಪರಿಹಾರವನ್ನು ಸಹ ನೀಡಿವೆ. ಇದರಿಂದ ಸಮುದಾಯವು ಬಿಎಸ್‌ಪಿಗೆ ಪರ್ಯಾಯವಾಗಿ ಈ ಪಕ್ಷಗಳತ್ತ ಮುಖಮಾಡುವಂತೆ ಮಾಡಿದೆ.

ಅರುಣ್ ವಾಲ್ಮೀಕಿಯ ಹಿರಿಯ ಸಹೋದರ ಸೋನು ನರ್ವಾಲ್, “ತನ್ನ ಸಹೋದರ ಸಾವನ್ನಪ್ಪಿದ ಸಮಯದಲ್ಲಿ, ಬಿಎಸ್‌ಪಿ ಮುಖ್ಯಸ್ಥರು ಮತ್ತು ಅವರ ಕೇಡರ್‌ನ ಪ್ರಮುಖ ನಾಯಕರು ನಮ್ಮ ಸಮುದಾಯದೊಂದಿಗೆ (ಬಿಎಸ್ಪಿಗೆ ಮತಹಾಕುವ ಬೃಹತ್ ಸಮುದಾಯ) ಇರಬೇಕಿತ್ತು. ಬದಲಾಗಿ, ಅವರೆಲ್ಲರೂ ಬ್ರಾಹ್ಮಣರನ್ನು ಸಮಾಧಾನಪಡಿಸುವಲ್ಲಿ ನಿರತರಾಗಿದ್ದರು” ಎಂದು ದೂರಿದ್ದಾರೆ.

“ನಮಗಾಗಿ ನಿಲ್ಲುವ ಪಕ್ಷಕ್ಕೆ ನಾವು ಮತ ಹಾಕುತ್ತೇವೆ ಎಂಬುದು ಸ್ಪಷ್ಟವಾಗಿದೆ. ಆ ಪಟ್ಟಿಯಲ್ಲಿ ಬಿಜೆಪಿ ಇಲ್ಲ. ನಮ್ಮ ಸಮುದಾಯವು ಯಾವ ಪಕ್ಷದತ್ತ ಹೋಗುತ್ತದೆ ಎಂಬುದನ್ನು ಸಮಯ ನಿರ್ಧರಿಸುತ್ತದೆ” ಎಂದು ನರ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಯುಪಿ-2022: ಅಖಿಲೇಶ್‌ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಕಾಂಗ್ರೆಸ್!

ಒಂದು ಕಾಲದಲ್ಲಿ ಬಿಎಸ್‌ಪಿಯ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿದ್ದ ಆಗ್ರಾದ ಹಿರಿಯ ಬಿಎಸ್‌ಪಿ ಕಾರ್ಯಕರ್ತರೊಬ್ಬರು ಮಾತನಾಡಿ, “ಈ ಬಾರಿ 2017 ರ ಚುನಾವಣೆಯಂತಲ್ಲ. ಮೋದಿ ಅಥವಾ ಯೋಗಿ ಅಲೆ ಇಲ್ಲ. ಜನರು ಈಗ ತಮ್ಮ ಸಮಸ್ಯೆಗಳ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ಕಾರ್ಯಕರ್ತರಿಗೆ ಈ ಆಡಳಿತದಲ್ಲಿ ಎದುರಿಸಿದ ತಾರತಮ್ಯಗಳ ಬಗ್ಗೆ ತಿಳಿದಿದೆ. ಇಡೀ ಎಸ್‌ಸಿ, ಎಸ್‌ಟಿ ಸಮುದಾಯದ ಜನರು ತಮ್ಮ ಮೇಲಾದ ದೌರ್ಜನ್ಯ ಮತ್ತು ಅನ್ಯಾಯದ ಸಮಸ್ಯೆಯಿಂದ ಸಿಟ್ಟಿಗೆದ್ದಿದ್ದಾರೆ. ಬಿಎಸ್‌ಪಿ ತಮ್ಮ ಗೆಲುವನ್ನು ಖಾತ್ರಿ ಮಾಡಿಕೊಳ್ಳಲು ಈ ಚುನಾವಣೆಯಲ್ಲಿ ಪ್ರತಿ ಕ್ಷೇತ್ರದಲ್ಲಿ ಪಕ್ಷವಾಗಿ ಸ್ಪರ್ಧಿಸಬೇಕು, ಅಭ್ಯರ್ಥಿಗಳಾಗಿ ಅಲ್ಲ” ಎಂದು ಹೇಳಿದ್ದಾರೆ.

ಫೆಬ್ರವರಿ 2 ರಂದು, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ರ್‍ಯಾಲಿಯಲ್ಲಿ ಆಗ್ರಾದಲ್ಲಿ ಮಾತನಾಡಿದ್ದ ಬಿಎಸ್‌ಪಿ ವರಿಷ್ಠೆ ಮಾಯಾವತಿ, ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಮಾತನಾಡಿದ್ದರು. “ನಾವು ಅಧಿಕಾರದಲ್ಲಿದ್ದಾಗ ಅದ್ಭುತ ಕೆಲಸ ಮಾಡಿದ್ದೇವೆ. ನಮ್ಮ ಆಡಳಿತದಲ್ಲಿ ಕೈಗೊಂಡ ಕಾರ್ಯಗಳನ್ನು ನಮ್ಮ ನಂತರ ಅಧಿಕಾರಕ್ಕೆ ಬಂದ ಪಕ್ಷಗಳು ನಕಲು ಮಾಡಿವೆ. ಎಲ್ಲ ಜಾತಿ, ಸಮುದಾಯಗಳ ಕಲ್ಯಾಣಕ್ಕಾಗಿ ನಮ್ಮ ಸರ್ಕಾರವನ್ನು ಮರಳಿ ತರಬೇಕು” ಎಂದು ಹೇಳಿದ್ದರು.

ಬಿಜೆಪಿಯಿಂದ ರಾಮರಾಜ್ಯ ಅಥವಾ ಆದರ್ಶ ರಾಜ್ಯ ಎಂದು ಕರೆಯಲ್ಪಟ್ಟಿರುವ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯು ಹಲವಾರು ಘಟನೆಗಳಿಂದಾಗಿ ಪ್ರಶ್ನಾರ್ಹವಾಗಿದೆ. ಇದರಲ್ಲಿ ಆಪಾದಿತ ಕಸ್ಟಡಿ ಸಾವುಗಳು ಮತ್ತು ಪೊಲೀಸ್ ದೌರ್ಜನ್ಯಗಳೂ ಸೇರಿವೆ. ಇದೆಲ್ಲದರ ನಡುವೆ, ಸೋಹನ್ ಸಿಂಗ್ ಅವರಂತಹ ಬಿಎಸ್‌ಪಿ ಕಾರ್ಯಕರ್ತರು ನಿಂದನೆಗಳಿಗೆ ಒಳಗಾದರೂ, ನಿಷ್ಠಾವಂತ ಕಾರ್ಯಕರ್ತರಂತೆ ಜನರನ್ನು ಬಿಎಸ್‌ಪಿಗೆ ಮತ ಹಾಕಲು ಮನವೊಲಿಸಲು ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. ಆದರೆ, ಜನರು ಬಿಎಸ್ಪಿ ಮತ್ತು ಬಿಜೆಪಿಗೆ ಪರ್ಯಾಯವನ್ನು ಹುಡುಕುತ್ತಿದ್ದಾರೆ.

ಕೃಪೆ: News Click

ಇದನ್ನೂ ಓದಿ: ಮೌನಕ್ಕೆ ಶರಣಾದ ಯುಪಿ ಮತದಾರರು, ಆತಂಕದಲ್ಲಿ ಅಭ್ಯರ್ಥಿಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...