ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಲ್ಲಿ (ಕೆಎಂವಿಎಸ್‌ಟಿಡಿಸಿ) ನಡೆದಿದೆ ಎನ್ನಲಾದ ಬಹುಕೋಟಿ ಅಕ್ರಮಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಸಿದ್ದು, 12 ಆರೋಪಿಗಳನ್ನು ಹೆಸರಿಸಿ 49 ಕೋಟಿ ರೂಪಾಯಿ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಆದರೆ, ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ)ದಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಆರೋಪಪಟ್ಟಿಯಲ್ಲಿ ಹೆಸರಿಸಿಲ್ಲ ಎನ್ನಲಾಗಿದೆ.
ಬಂಧಿತರಲ್ಲಿ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ ಜಿ ಪದ್ಮನಾಭ ಮತ್ತು ಮಾಜಿ ಅಕೌಂಟ್ಸ್ ಅಧಿಕಾರಿ ಪರಶುರಾಮ್ ದುರ್ಗಣ್ಣನವರ್ ಸೇರಿದಂತೆ ವಾಲ್ಮೀಕಿ ನಿಗಮದ ಮಾಜಿ ಅಧಿಕಾರಿಗಳು ಸೇರಿದ್ದಾರೆ. ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸತ್ಯನಾರಾಯಣ ಏಟಕಾರಿ, ಮಾಜಿ ಸಚಿವ ನಾಗೇಂದ್ರ ಅವರ ಪರಿಚಯದ ನೆಕ್ಕುಂಟೆ ನಾಗರಾಜ್ ಮತ್ತು ನಾಗರಾಜ್ ಅವರ ಸೋದರ ಮಾವ ನಾಗೇಶ್ವರ್ ರಾವ್ ಬಂಧಿತರು.
ಕೆಎಂವಿಎಸ್‌ಟಿಡಿಸಿ ದೂರಿನ ಪ್ರಕಾರ, ನಿಗಮದ ಅಧಿಕಾರಿಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿನ ನಿಗಮದ ಖಾತೆಯ ಮೂಲಕ ತೆಲಂಗಾಣದ ವಿವಿಧ ಬ್ಯಾಂಕ್ ಖಾತೆಗಳಿಗೆ ನಕಲಿ ಸಹಿ ಮತ್ತು ಸುಮಾರು 94 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಎಸ್‌ಎಂಎಸ್ ಮೂಲಕ ಅಥವಾ ನೋಂದಾಯಿತ ಇಮೇಲ್ ಐಡಿ ಮೂಲಕ ನಿಗಮವು ಈ ವಹಿವಾಟಿನ ಯಾವುದೇ ಸೂಚನೆಯನ್ನು ಸ್ವೀಕರಿಸಿಲ್ಲ ಎಂದು ಪ್ರಥಮ ಮಾಹಿತಿ ವರದಿಯು ಆರೋಪಿಸಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಎಂಟು ಪ್ರಕರಣಗಳನ್ನು ದಾಖಲಿಸಿದೆ. ತನಿಖೆ ವೇಳೆ ಆರೋಪಿಗಳಿಂದ 16.83 ಕೋಟಿ ರೂಪಾಯಿ ನಗದು, 16.25 ಕೆಜಿ ಚಿನ್ನಾಭರಣ, 4.51 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳು ಮತ್ತು ಒಟ್ಟು 13.72 ಕೋಟಿ ರೂಪಾಯಿ ಬ್ಯಾಂಕ್ ಖಾತೆಯ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಎಸ್‌ಐಟಿ ಸಲ್ಲಿಸಿರುವ ಪ್ರಾಥಮಿಕ ಚಾರ್ಜ್‌ಶೀಟ್ ಏಳು ಸಂಪುಟಗಳು ಮತ್ತು 3,072 ಪುಟಗಳನ್ನು ಒಳಗೊಂಡಿದ್ದು, ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದೆ. ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 120 (ಬಿ) (ಕ್ರಿಮಿನಲ್ ಪಿತೂರಿ), 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ), 420 (ವಂಚನೆ) ಅಡಿಯಲ್ಲಿ ಆರೋಪ ಹೊರಿಸಿದ್ದಾರೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಲೆಕ್ಕಪರಿಶೋಧನೆ ಮತ್ತು ಸಮನ್ವಯದಲ್ಲಿ ತೊಡಗಿಸಿಕೊಂಡಿದ್ದ ನಿಗಮದ ಅಧಿಕಾರಿ ಪಿ ಚಂದ್ರಶೇಖರನ್ ಅವರು ಮೇ 26 ರಂದು ಆತ್ಮಹತ್ಯೆ ಮಾಡಿಕೊಂಡ ನಂತರ ವಂಚನೆ ಮತ್ತು ಅದರಲ್ಲಿ ಭಾಗಿಯಾಗಿರುವ ವಿವಿರ ಬೆಳಕಿಗೆ ಬಂದಿದೆ.
ಇದನ್ನೂ ಓದಿ; ಬಾಂಗ್ಲಾ ರಾಜಕೀಯ ಬಿಕ್ಕಟ್ಟು: ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ