Homeಚಳವಳಿನಳಿನಿ ವಿರುದ್ಧ ಬಿಜೆಪಿ ಐಟಿ ಸೆಲ್: ಒಂದು ಕ್ಲಾಸಿಕ್ ಕೇಸು

ನಳಿನಿ ವಿರುದ್ಧ ಬಿಜೆಪಿ ಐಟಿ ಸೆಲ್: ಒಂದು ಕ್ಲಾಸಿಕ್ ಕೇಸು

ಪೂರ್ಣ ಓದಿದರೆ ನಿಮಗೆ ಒಂದು ಪ್ರಮುಖ ಅಧ್ಯಯನದ ಅತ್ಯಂತ ಸ್ವಾರಸ್ಯಕರ ವಿವರಗಳು ದೊರೆಯುತ್ತವೆ)

- Advertisement -
- Advertisement -

ಮೇ 20ರಂದು ಕೋಲಾರ ತಾಲೂಕಿನ ಅಗ್ರಹಾರ ಕೆರೆಯ ಬಳಿ ನಡೆದ ಒಂದು ಘಟನೆ ರಾಜ್ಯದ ಜನರ, ಮಾಧ್ಯಮಗಳ ಗಮನ ಸೆಳೆದು ಸ್ವತಃ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಬೇಕಾಗಿ ಬಂದಿತು. ಆದರೆ ಈ ವಿಚಾರದಲ್ಲಿ ಬಿಜೆಪಿಯ ಐಟಿ ಸೆಲ್ (ಬಿಜೆಪಿ ಐಟಿ ಸೆಲ್ ಎಂದರೇನು ಎಂಬುದನ್ನು ನಂತರ ವಿವರಿಸಲಾಗಿದೆ) ಯಾವ ರೀತಿ ವ್ಯವಸ್ಥಿತವಾಗಿ ಕೆಲಸ ಮಾಡಿತೆಂಬುದನ್ನು ಅಧ್ಯಯನ ಮಾಡಿದರೆ ಅದೊಂದು ಕ್ಲಾಸಿಕ್ ಕೇಸಾಗಿ ನಮ್ಮೆದುರು ಬಂದು ನಿಲ್ಲುತ್ತದೆ. ಜೊತೆಗೆ ಕಳೆದ 8-10 ವರ್ಷಗಳಲ್ಲಿ ದೇಶದಲ್ಲಿ ನಡೆದಿರುವ ಒಂದು ಯಶಸ್ವಿ ಪ್ರಯೋಗದ ಕೆಲಸದ ವಿಧಾನ (Modus Operandi) ಅರ್ಥವಾಗುತ್ತದೆ.

ಆ ದಿನ ಸಣ್ಣ ನೀರಾವರಿ ಮತ್ತು ಕಾನೂನು ಸಚಿವ ಮಾಧುಸ್ವಾಮಿಯವರು ಕೆರೆ ವೀಕ್ಷಣೆಗೆ ಹೋಗಿದ್ದಾಗ, ರೈತಸಂಘದ ಕಾರ್ಯಕರ್ತೆ ನಳಿನಿ ಮತ್ತು ಆಕೆಯ ತಂಗಿ ಉಮಾ ಇಬ್ಬರು ನಡೆಸಿದ ಮಾತುಕತೆಯು ರಾಜ್ಯದ ಬಹುತೇಕರಿಗೆ ಗೊತ್ತಿದೆ. ಆ ಮಾತುಕತೆಯ ಸಂದರ್ಭದಲ್ಲಿ ‘ನಾನು ಭಾಳಾ ಕೆಟ್ ಮನುಷ್ಯ’, ‘ಮುಚ್ಚು ಬಾಯ್ ರ್ಯಾಸ್ಕಲ್’ ಎಂದು ಮಾಧುಸ್ವಾಮಿಯವರು ಹೇಳಿದ್ದು ಆ ಘಟನೆಯ ವಿಡಿಯೋ ನೋಡಿದವರಿಗೆ ಬಹಳ ಆಘಾತ ತರಿಸುವಂತಿತ್ತು. ಸಹಜವಾಗಿ ಅದು ವೈರಲ್ ಆಯಿತು. ಮಾಧುಸ್ವಾಮಿಯವರನ್ನು ಎಲ್ಲರೂ ಖಂಡಿಸಿದರು. ಕೆಲವು ಟಿವಿ ಚಾನೆಲ್‍ಗಳು ಮತ್ತು ಪತ್ರಿಕೆಗಳೂ ಸಹಾ ಅದಕ್ಕೆ ವಿಶೇಷ ಕವರೇಜ್ ಕೊಟ್ಟವು.

ಐಟಿ ಸೆಲ್

ಮೊದಲ ದಿನದ ಅರೆಬರೆ ಸಮರ್ಥನೆ
ಈ ವಿಚಾರದಲ್ಲಿ ಬಿಜೆಪಿ ಐಟಿ ಸೆಲ್ ಯಾವಾಗಿನಿಂದ ಆಕ್ಟಿವ್ ಆಯಿತು, ಹೇಗೆ ತನ್ನ ಕೆಲಸ ನಿರ್ವಹಿಸಿತು ಎಂಬುದನ್ನು ನಂತರ ನೋಡೋಣ. ಆ ಘಟನೆಯ ವಿಡಿಯೋಗಳು ಬಂದ ಆರಂಭದಲ್ಲಿ ಮಾಧುಸ್ವಾಮಿಯವರನ್ನು ಯಾರೂ ಸಮರ್ಥಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಆದರೆ ಬಿಜೆಪಿ ಪರವಾಗಿ ಸಾಮಾನ್ಯವಾಗಿ ಬ್ಯಾಟಿಂಗ್ ಮಾಡುವ ಸೋಷಿಯಲ್ ಮೀಡಿಯಾ ಅಕೌಂಟುಗಳು ‘ಆ ವಿಡಿಯೋದ ಹಿಂದಿನ ಮತ್ತು ಮುಂದಿನ ಭಾಗಗಳನ್ನೂ ನೋಡಿದರೆ ಮಾತ್ರ ಸತ್ಯಾಸತ್ಯತೆ ಗೊತ್ತಾಗುತ್ತದೆ’ ಎಂದು ಕ್ಷೀಣ ದನಿಯಲ್ಲಿ ಕಾಮೆಂಟುಗಳನ್ನು ಮಾಡಿ ಸುಮ್ಮನಾಗಿವೆ. ಆದರೆ ಮಾಧುಸ್ವಾಮಿಯವರ ಪರವಾಗಿ ಪೋಸ್ಟ್‌ಗಳನ್ನು ಹಾಕುತ್ತಾ ಡಿಫೆನ್ಸ್‌ಗೆ ನಿಂತಿದ್ದು ಅವರದ್ದೇ ಅಭಿಮಾನಿಗಳು ಮಾತ್ರ.
ಮರುದಿನವಾಗುವ ಹೊತ್ತಿಗೆ (ಮೇ 21) ಸ್ವತಃ ಮಾಧುಸ್ವಾಮಿಯವರೇ ಡಿಫೆನ್ಸಿಗೆ ಇಳಿದರು. ‘ಆಕೆ ಯಾವಾಗಲೂ ಹೀಗೇ ಅಂತೆ, ಪೊಲೀಸರಿಗೆ ಆಕೆ ಹೇಳುವ ಮಾತುಗಳನ್ನು ನೀವೇ ಕೇಳಿ. ಮಿನಿಸ್ಟರ್ ಅಂದರೆ ಯಾರಿಂದ ಬೇಕಾದರೂ ಬೈಸಿಕೊಂಡು ಬರಬೇಕಾ? ನನ್ನನ್ನು ಆಕೆ ಪ್ರಚೋದಿಸಿದ್ದರಿಂದ ಹಾಗಂದೆ. ಅಂದಿದ್ದು ನಿಜ. ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ’ ಎಂದರು. ಯಡಿಯೂರಪ್ಪನವರೂ ಸಹಾ ಅದೇ ದಿನ ‘ಅದು ಬಹಳ ತಪ್ಪು, ನಾನು ಎಚ್ಚರಿಕೆ ಕೊಡ್ತೇನೆ ಮತ್ತು ಆ ಹೆಣ್ಣುಮಗಳ ಹತ್ತಿರವೂ ಮಾತಾಡುತ್ತೇನೆ’ ಎಂದು ಹೇಳಬೇಕಾಯಿತು.‌

ಐಟಿ ಸೆಲ್

ಅಲ್ಲಿಗೆ ಮಾಧುಸ್ವಾಮಿಯವರ ಡಿಫೆನ್ಸ್ ಬಿದ್ದು ಹೋಯಿತು. ಏಕೆಂದರೆ ವಿಡಿಯೋದಲ್ಲಿ ನಳಿನಿ ಒಂದೇ ಒಂದು ತಪ್ಪು ಮಾತಾಡಿಲ್ಲ ಎಂಬುದು ನೋಡಿದ ಎಲ್ಲರಿಗೂ ಗೊತ್ತಾಗುವಂತಿತ್ತು. ಅದರ ಜೊತೆಗೆ ಕೆರೆಗೆ ಸಂಬಂಧಪಟ್ಟ ಸಚಿವರನ್ನು, ಕೆರೆಗೆ ಸಂಬಂಧಪಟ್ಟ ವಿಚಾರದ ಕುರಿತು, ಅದೇ ಕೆರೆಯ ಜೊತೆಗೆ ಸಂಬಂಧಪಟ್ಟ ವ್ಯಕ್ತಿಯೇ ಪ್ರಶ್ನೆ ಕೇಳಿದ್ದರು. ಮಾಧುಸ್ವಾಮಿಯವರು ಕಡೆಯದಾಗಿ ರ್ಯಾಸ್ಕಲ್ ಎಂದಾಗಲೂ ಆಕೆ ‘ಏನಣ್ಣಾ ಹೀಗೆ ಮಾತಾಡ್ತೀರಿ?’ ಎಂದು ಹೇಳಿದ್ದರೇ ಹೊರತು ಬೇರೇನೂ ಹೇಳಿರಲಿಲ್ಲ. ಅಂದರೆ ಘಟನೆಯ ವಿಚಾರವಷ್ಟೇ ಇಟ್ಟುಕೊಂಡು ನಳಿನಿಯ ತೇಜೋವಧೆ ಮಾಡಲು ಸಾಧ್ಯವಿರಲಿಲ್ಲ. ‌
ಹೀಗಾಗಿ ಮಾಧುಸ್ವಾಮಿಯವರ ವಾದದ ಸರಣಿಯನ್ನಿಟ್ಟುಕೊಂಡು ಕೇಸು ಗೆಲ್ಲಕ್ಕೆ ಆಗಲ್ಲ ಎಂಬುದು ಅರ್ಥವಾಗುವಂತಿತ್ತು.
ಬಿಜೆಪಿ ಐಟಿ ಸೆಲ್ ಎಂದರೆ ಏನು?

ಅಲ್ಲಿಂದಾಚೆಗೆ ಬಿಜೆಪಿ ಐಟಿ ಸೆಲ್ ಸಕ್ರಿಯವಾಯಿತು. ಐಟಿ ಸೆಲ್ ಹೇಗೆ ಕೆಲಸ ಮಾಡುತ್ತದೆಂಬುದನ್ನು ಮೊದಲು ನೋಡೋಣ. ಬಿಜೆಪಿ ಐಟಿ ಸೆಲ್‍ನಲ್ಲಿ ಅಧಿಕೃತ ನಿರ್ವಾಹಕರಲ್ಲದೇ, ಗುಪ್ತವಾಗಿ ಕೆಲಸ ಮಾಡುವವರು, ಹೊರಗುತ್ತಿಗೆ ತೆಗೆದುಕೊಂಡು ಕೆಲಸ ಮಾಡುವ ‘ಕಾರ್ಡು’ಗಳವರು, ಬಿಡಿ ಪ್ರಾಜೆಕ್ಟುಗಳಿಗಾಗಿ ಕೆಲಸ ಮಾಡುತ್ತಲೂ ನಿರಂತರವಾಗಿ ಅಜೆಂಡಾ ಪ್ರಕಾರ ಕೆಲಸ ಮಾಡುವ ‘ಯುವಾ’ಗಳು ಹೀಗೆ ಹಲವು ಬಗೆಯ ಜನರಿದ್ದಾರೆ. ಆದರೆ ಒಂದು ಕೇಂದ್ರ ತಂಡ ಇದ್ದು, ಇದು ಕೇವಲ ಸೋಷಿಯಲ್ ಮೀಡಿಯಾ ನೋಡಿಕೊಳ್ಳುವುದಿಲ್ಲ; ಒಟ್ಟಾರೆ ನೆರೇಟಿವ್ ಹೇಗೆ ಕೆಲಸ ಮಾಡಬೇಕೆಂದು ನೋಡಿಕೊಳ್ಳುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಏನು ಬರಬೇಕು, ಟಿವಿ ಚಾನೆಲ್‍ಗಳಲ್ಲಿ ಏನು ಬರಬೇಕು, ಯಾವ ಒಪೀನಿಯನ್ ಮೇಕರ್ಸ್ (ಯಾರು ಮಾತಾಡಿದರೆ ಹೆಚ್ಚು ತೂಕ ಬರುತ್ತದೋ ಅಂಥವರು) ಏನು ಮಾತಾಡಬೇಕು ಇವೆಲ್ಲವನ್ನೂ ನಿರ್ಧರಿಸುವ ತಂಡವೂ ಇದೆ.

ಒಂದಷ್ಟು ಅವರವರು ಸ್ವತಂತ್ರವಾಗಿ ತಮ್ಮ ಕ್ರಿಯೇಟಿವಿಟಿ ಬಳಸಿಕೊಂಡು ಕೌಂಟರ್ ಅಟ್ಯಾಕ್ ಮಾಡುವುದು, ಸುಳ್ಳು ಸೃಷ್ಟಿಸುವುದು, ಯಾವ ಆಂಗಲ್‍ನಿಂದ ಸುಳ್ಳನ್ನು ಹೇಳಿದರೆ ಪರಿಣಾಮಕಾರಿಯಾಗಿರುತ್ತದೆ ಎಂಬುದನ್ನು ಯೋಜಿಸಿ ಜಾರಿ ಮಾಡುತ್ತಾರೆ. ಆದರೆ ಒಮ್ಮೆ ಕೇಂದ್ರ ತಂಡದಿಂದ ಅದಕ್ಕೆ ಯಾವ ಆಂಗಲ್ (ಅಥವಾ ಯಾವ್ಯಾವ ಆಂಗಲ್) ಎಂದು ತೀರ್ಮಾನಿಸುತ್ತಾರೋ ಆಗ ಸರಿಯಾದ ಮೆಸೇಜ್ ರವಾನೆಯಾಗಿ ಸಂಬಂಧಪಟ್ಟ ಎಲ್ಲರೂ ಆಯಾ ಆಂಗಲ್‍ನಿಂದ ತಮ್ಮ ಪೋಸ್ಟ್, ಪೋಸ್ಟರ್, ವಿಡಿಯೋಗಳು, ಲೈವ್‍ಗಳನ್ನು ಹರಿಯಬಿಡುತ್ತಾರೆ. ಅದರಲ್ಲೂ ಅವರದ್ದೇ ಕ್ರಿಯೇಟಿವಿಟಿಗಳೂ ಇರುತ್ತವೆ.

ಇದನ್ನೂ ಓದಿ: ಮಾಧುಸ್ವಾಮಿಯವರನ್ನು ಪ್ರಶ್ನಿಸಿದ ನಳಿನಿ ಯಾರು?

ಟಿವಿ ಚಾನೆಲ್‍ಗೆ ಬೇರೆ ದಾರಿಗಳಿರುತ್ತವೆ. ಅಂದರೆ ಟಿವಿಗಳಲ್ಲಿ ಯಾವ ಆಂಗಲ್ ಕೊಟ್ಟರೆ ಒಳ್ಳೆಯದು ಎಂದು ಯೋಚಿಸಿ, ಅದನ್ನು ಅಲ್ಲಿರುವ ತಮ್ಮ ಜನರ ಮೂಲಕ ಪುಷ್ ಮಾಡುತ್ತಾರೆ. ಬಹುತೇಕ ಸಾರಿ ಮುಖ್ಯಸ್ಥರೇ ಅದನ್ನು ನಿಭಾಯಿಸುತ್ತಾರೆ. ಕೆಲವೊಮ್ಮೆ ಮುಖ್ಯಸ್ಥರು ತೀರಾ ತಮ್ಮ ಐಟಿ ಸೆಲ್ ರೀತಿಯಲ್ಲಿ ಇರದಿದ್ದರೆ ಈ ಕಡೆಯಿಂದ ಯಾರಾದರೂ ‘ಈ ಥರದ ಆಂಗಲ್ ಹೆಚ್ಚಾಗಿ ಕೇಳಿ ಬರುತ್ತಿದೆ’ ಎಂದು ಒಂದು ಎಕ್ಸ್‍ಕ್ಲೂಸಿವ್ ಕೊಟ್ಟ ರೀತಿಯಲ್ಲಿ ದಾಟಿಸುತ್ತಾರೆ. ಅವರು ಅದನ್ನು ವಿಶೇಷ ಬ್ರೇಕಿಂಗ್ ಆಗಿ ಓಡಿಸುತ್ತಾರೆ. ಅಗತ್ಯಬಿದ್ದರೆ ‘ಪ್ಯಾಕೇಜು’ ನೀಡಿ, ಅಂದರೆ ಹಣ, ಲಂಚ ನೀಡಿ ನಿರ್ದಿಷ್ಟ ಸಂದರ್ಭದಲ್ಲಿ ಈ ರೀತಿಯ ಸ್ಟೋರಿ ಬರಬೇಕೆಂದು ಹುಕುಂ ಹೊರಡಿಸಲಾಗುತ್ತದೆ.

ವ್ಯವಸ್ಥಿತ ಮತ್ತು ಸ್ಪಾಂಟೇನಿಯಸ್: ಎರಡೂ ವಿಧಗಳಿವೆ

ಈ ರೀತಿ ಎಲ್ಲವೂ ನೂರಕ್ಕೆ ನೂರು ವ್ಯವಸ್ಥಿತವಾಗಿ ನಡೆಯುತ್ತದೆ ಎಂದಲ್ಲ. ಇದನ್ನು ಮಾಡುತ್ತಾ ಮಾಡುತ್ತಾ ತಮ್ಮಂತೆ ತಾವೇ ಇವೆಲ್ಲವನ್ನೂ ನಿರ್ವಹಿಸುವ, ಸ್ವತಂತ್ರವಾಗಿ ಸುಳ್ಳುಗಳನ್ನು ಕಟ್ಟುವ ಕೆಲಸವನ್ನು ಈ ಇಡೀ ಮೀಡಿಯಾ, ಸೋಷಿಯಲ್ ಮೀಡಿಯಾ ನೆಟ್‍ವರ್ಕ್‍ನವರು ಮಾಡುತ್ತಾರೆ. ಆದರೆ ವ್ಯವಸ್ಥಿತವಾಗಿ ಮಾಡಬೇಕೆಂದು ನಿಲ್ಲುವ ಸ್ಟೋರಿಗಳಲ್ಲಿ ಮೇಲೆ ಹೇಳಲಾದುದಕ್ಕಿಂತ ನೂರು ಪಟ್ಟು ವ್ಯವಸ್ಥಿತವಾಗಿ ಕೆಲಸ ನಡೆಯುತ್ತದೆ. ಉದಾಹರಣೆಗೆ ಯತ್ನಾಳ್ ಕೆಟ್ಟದಾಗಿ ಮಾತಾಡಿದಾಗ, ದೊರೆಸ್ವಾಮಿಯವರ ವಿರುದ್ಧ ಅಭಿಪ್ರಾಯ ರೂಪಿಸಲು ಹೊರಟಾಗ ಸ್ವತಃ ಸುರೇಶ್‍ಕುಮಾರ್ ಅವರೇ ಫೀಲ್ಡಿಗಿಳಿದಿದ್ದು ಆಕಸ್ಮಿಕ ಅಲ್ಲ; ಆ ರೀತಿಯಲ್ಲಿ ಮಾಡಲಾಗುತ್ತದೆ. ಅದೇ ಪ್ರಕರಣದಲ್ಲಿ ಮಿಕ್ಕ ಟಿವಿ ಚಾನೆಲ್‍ಗಳವರು ಬಿಜೆಪಿ/ಸಂಘಪರಿವಾರದ ನೆರೇಟಿವ್‍ಗೆ ಹತ್ತಿರ ಬರುವಂತೆ ಕಾಣಲಿಲ್ಲವಾದ್ದರಿಂದ, ಬಿಟಿವಿಯ ಶೇಷಕೃಷ್ಣರ ಮೂಲಕ ಕಾರ್ಯಸಾಧನೆ ಮಾಡಿಕೊಂಡರು. ಬಿಟಿವಿಯ ಎಂಡಿ ನೀಡಿದ ಒಂದು ಬೇರೆ ಸೂಚನೆಯನ್ನು ಶೇಷಶರ್ಮ ಮೀಡಿಯಾ ಸೆಲ್‍ನ ಸೂಚನೆಗನುಗುಣವಾಗಿ ಅಸಹ್ಯವಾಗಿ ಬಳಸಿದರು. ಆ ವಿದ್ಯಮಾನದಲ್ಲಿ ಸಂದೇಶ ಯಡಿಯೂರಪ್ಪನವರ ತನಕ ಹೋಗಿತ್ತು. ನೀವು ಸಮರ್ಥಿಸಿಕೊಳ್ಳಬೇಡಿ, ಖಂಡಿಸಲೂಬೇಡಿ ಎಂಬ ಸ್ಪಷ್ಟ ಸಂದೇಶ ಅವರಿಗೆ ರವಾನಿಸಲು ಸೆಂಟ್ರಲ್ ಟೀಂ ಬೇರೆ ಹಿರಿಯರನ್ನು ಸಂಪರ್ಕಿಸಿತ್ತು.

ಐಟಿ ಸೆಲ್ಮಾಧುಸ್ವಾಮಿಯವರ ಪ್ರಕರಣದಲ್ಲಿ ಮೊದಲ ದಿನ ಐಟಿ ಸೆಲ್ ಸುಮ್ಮನಿತ್ತು. ಮಾಧುಸ್ವಾಮಿಯವರ ಕ್ಷೇತ್ರದ ಅಭಿಮಾನಿ ಬಳಗದ ಫೇಸ್‍ಬುಕ್ ಅಕೌಂಟುಗಳಲ್ಲಿ ಮಾತ್ರ ಅವರ ಪರ ಬ್ಯಾಟಿಂಗ್ ಮಾಡಲಾಯಿತ್ತು. ಅದರಲ್ಲಿ ಮಾಧುಸ್ವಾಮಿಯವರೆಂದರೆ ಎಂತಹ ದೊಡ್ಡ ನಾಯಕ, ಮುತ್ಸದ್ದಿ, ನೇರವಾಗಿ ಮಾತನಾಡುವ ವ್ಯಕ್ತಿ, ಅವರ ಒಂದು ಮಾತನ್ನು ಇಟ್ಟುಕೊಂಡು ವ್ಯಕ್ತಿತ್ವ ಅಳೆಯಬಾರದು ಇತ್ಯಾದಿ ವಾದಗಳು ಮಾತ್ರ ಬಂದವು. ಅವು ಅಭಿಮಾನದಿಂದ ಹುಟ್ಟುವ ಸುಳ್ಳುಗಳು. ಅದಕ್ಕಿಂತ ಹೆಚ್ಚಿನ ಸುಳ್ಳುಗಳನ್ನು ಸೃಷ್ಟಿಸುವುದು ಅವರಿಂದ ಸಾಧ್ಯವಾಗಲಿಲ್ಲ. ಈ ಹೊತ್ತಿಗೆ ತುಮಕೂರು ಜಿಲ್ಲೆಯ ಫೇಸ್‍ಬುಕ್ ಪೇಜ್ ಮತ್ತು ಗುಂಪುಗಳಲ್ಲಿ (ಇವು ಜೆಡಿಎಸ್‍ನವು ಹೆಚ್ಚಿವೆ, ಗುಬ್ಬಿಯ ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಮಾನಿಗಳು ಮಾಡಿದಂಥವೂ ಇವೆ) ಮಾಧುಸ್ವಾಮಿಯವರ ವಿರುದ್ಧ, ನಳಿನಿಯ ಪರವಾಗಿ ವಿವರಗಳು ಹರಿದಾಡತೊಡಗಿದ್ದವು. ಮಾಧುಸ್ವಾಮಿಯವರನ್ನು ಕಳೆದುಕೊಳ್ಳಲು ಬಿಜೆಪಿ ಸಿದ್ಧವಾಗಿದೆಯೇ ಎಂಬ ಅನುಮಾನ ಬರುವಷ್ಟು ಪ್ರಮಾಣಕ್ಕೆ ಬಿಜೆಪಿ ಐಟಿ ಸೆಲ್ ಸುಮ್ಮನಾಗಿತ್ತು.

ಐಟಿ ಸೆಲ್
ಆದರೆ ಮರುದಿನ (ಮೇ 22) ಎಲ್ಲಿಂದ ಸೂಚನೆ ಬಂತೋ ಗೊತ್ತಿಲ್ಲ. ಐಟಿ ಸೆಲ್ ಚುರುಕಾಯಿತು. ಅದರ ಜೊತೆಗಿರುವ ನಮ್ಮ ಮಾಹಿತಿದಾರರು ಹೇಳಿದ ಪ್ರಕಾರ ಕೇವಲ ಅರ್ಧ ಗಂಟೆಯಲ್ಲಿ ಯಾವ ಲೈನ್ ಹಿಡಿಯಬೇಕೆಂದು ಫೈನಲ್ಲಾಗಿ, ಒಂದು ಗಂಟೆಯ ಒಳಗೆ ನಾಲ್ಕೈದು ಪೋಸ್ಟರ್‍ಗಳು ತಯಾರಾದವು. ಇದಕ್ಕೆ ಮುಂಚೆ ಇದ್ದ ವಾದಗಳು ಐಟಿ ಸೆಲ್‍ನಿಂದ ಹುಟ್ಟಿರಲಿಲ್ಲ. ಸ್ಥಳೀಯವಾಗಿ (ಘಟನೆ ನಡೆದ ಸಂದರ್ಭದಲ್ಲೂ ಜೊತೆಗಿದ್ದ ಕೋಲಾರ ಜಿಲ್ಲೆಯ ಬಿಜೆಪಿ ಪದಾಧಿಕಾರಿ – ಅವರ ಹೆಸರುಗಳನ್ನೆಲ್ಲಾ ಕೊಟ್ಟು ಅವರನ್ನು ಫೇಮಸ್ ಮಾಡಬಾರದೆಂದು ಇಲ್ಲಿ ಕೊಡುತ್ತಿಲ್ಲ. ಆಸಕ್ತಿ ಇರುವವರಿಗೆ ಎಲ್ಲಾ ವಿವರಗಳು, ಸ್ಕ್ರೀನ್‍ಶಾಟ್‍ಗಳನ್ನು ಒದಗಿಸಲಾಗುವುದು) ಹುಟ್ಟಿದ ವಾದಗಳು ಬೆಂಗಳೂರಿನಲ್ಲಿ ಮಾಧುಸ್ವಾಮಿಯವರು ಮಾತಾಡಿದಂಥವು ಅಷ್ಟೇ.

ಇವು ಮೇ 21ರ ಸಂಜೆ 6 ಗಂಟೆಯ ನಂತರ ಅವು ಕೋಲಾರದ ಸುತ್ತಮುತ್ತ ಮಾತ್ರ ಕಂಡವು. ಯಾವ ಮಂತ್ರಿಗಳು ಬಂದರೂ ಹೋಗಿ ಇಲ್ಲಸಲ್ಲದ ಪ್ರಶ್ನೆ ಮಾಡಿ ಜಗಳ ಮಾಡೋದೇ ಈಯಮ್ಮನ ಕೇಳಸ (ಕ್ಷಮಿಸಿ, ಇದು ಅವರದ್ದೇ ಕಾಗುಣಿತ) ಎಂಬುದು ಅವರ ವಾದವಾಗಿತ್ತು. ಅದಕ್ಕಾಗಿ ಅವು ನಾಲ್ಕು ಮಂತ್ರಿಗಳನ್ನು ಪ್ರಶ್ನಿಸುತ್ತಿರುವ/ಮನವಿ ಸಲ್ಲಿಸುತ್ತಿರುವ ಫೋಟೋಗಳನ್ನು ಬಳಸಿಕೊಳ್ಳಲಾಗಿತ್ತು. ಕಾಗುಣಿತ ಮಾತ್ರವಲ್ಲದೇ, ಆ ಪೋಸ್ಟರ್‍ಗಳೇ ಸ್ಥಳೀಯತೆಯನ್ನು ತೋರುತ್ತಿದ್ದವು. ಇಲ್ಲಿಂದಲೇ ತುಮಕೂರು ಗುಂಪುಗಳಿಗೂ ಷೇರ್ ಮಾಡಲಾಗಿತ್ತು. ಆ ಎಲ್ಲಾ ಫೋಟೋಗಳಲ್ಲಿ ನಳಿನಿ ಮಾತ್ರವಲ್ಲದೇ ಸ್ಥಳೀಯ ರೈತಸಂಘದ ಮುಖಂಡರು ಮತ್ತು ನಳಿನಿಯ ಕುಟುಂಬದ ಹಿರಿಯರೂ ಇದ್ದರು. ನಳಿನಿ ಒಬ್ಬ ಹೋರಾಟಗಾರ್ತಿಯೆಂಬುದನ್ನಷ್ಟೇ ಅವು ಬಿಂಬಿಸುತ್ತಿದ್ದವು.

ಫೀಲ್ಡಿಗಿಳಿದ ಅನುಭವಸ್ಥರು

ಮರುದಿನ ಐಟಿ ಸೆಲ್ ಇಳಿಯುವ ಹೊತ್ತಿಗೆ ಈ ವಾದ ಬಳಸುವುದರಿಂದ ಪ್ರಯೋಜನವಿಲ್ಲ ಎಂದು ‘ಅನುಭವಸ್ಥರು’ ತೀರ್ಮಾನಿಸಿದರು. ಅಲ್ಲಿಂದ ಮುಂದಕ್ಕೆ (ಮೇ 22ರ 11.30ರ ನಂತರ) ಈ ವಾದವನ್ನು ಬಿಜೆಪಿಯ ಅಧಿಕೃತ (ಅಸಲಿ ಅಥವಾ ನಕಲಿ) ಅಕೌಂಟುಗಳು ಆ ವಾದಗಳನ್ನು ಮುಂದಿಡಲಿಲ್ಲ. ಬದಲಿಗೆ ಮೊದಲ ಪೋಸ್ಟರ್ರೇ ‘ಹಿಂದೂ ವಿರೋಧಿ ಪ್ರಕಾಶ್‍ರೈಗೆ ಸನ್ಮಾನ ಮಾಡುತ್ತಿರುವ ನಕಲಿ ಹೋರಾಟಗಾರ್ತಿ’ ಇತ್ಯಾದಿ. ದೊರೆಸ್ವಾಮಿಯವರ ಜೊತೆಗಿರುವುದನ್ನೂ ಸೇರಿಸಿ ಅವರನ್ನೂ ಕ್ಷುದ್ರವಾಗಿ ಟೀಕಿಸುವ ಮಾತುಗಳು ಶುರುವಾದವು. ಅಂದರೆ ಈಗಾಗಲೇ ಪಳಗಿರುವ ಬಿಜೆಪಿ ಮನಸ್ಥಿತಿಯ (ಎಂತಹ ದೊಡ್ಡ ವ್ಯಕ್ತಿ, ನಾಡಿಗೆ ಹೆಮ್ಮೆ ತರಬಲ್ಲ ವ್ಯಕ್ತಿಯಿದ್ದರೂ ಸತತವಾಗಿ ಅವರ ಮೇಲೆ ದಾಳಿ ನಡೆಸಿ, ಧರ್ಮವನ್ನು ತಳುಕು ಹೋಗಿ, ಅವರ ವಿರುದ್ಧದ ಮನಸ್ಥಿತಿ ರೂಪಿಸುವ ಕೆಲಸದ ಫಲವಾಗಿ ಹುಟ್ಟಿಕೊಂಡದ್ದು)ವರನ್ನು ಫೀಲ್ಡಿಗಿಳಿಸಲು ಮಾಡುವ ತಯಾರಿಯದು. ಇಲ್ಲಿಂದ ಮುಂದಕ್ಕೆ ಕೋಲಾರದವರು ಇದನ್ನು ಷೇರ್ ಮಾಡಿದರೂ ಅವು ಕೋಲಾರದ ಅಕೌಂಟುಗಳಿಂದ ಬೇರೆಡೆಗೆ ಹೋಗಿಲ್ಲ. ನೇರವಾಗಿ ತುಮಕೂರು ಗುಂಪುಗಳಿಗೆ ಹೋಗಿ ಬಿದ್ದಿವೆ. ಅಂದರೆ ಐಟಿ ಸೆಲ್ ನೇರವಾಗಿ ಕಾರ್ಯಾಚರಣೆಗೆ ಇಳಿದಿದೆ.‌

ಐಟಿ ಸೆಲ್

ಯಾವ ಫೋಟೋ ಬೇಕು, ಯಾವುದು ಬೇಡ?

ಇದೇ ನಳಿನಿ ಕೆ.ಎಸ್.ಪುಟ್ಟಣ್ಣಯ್ಯನವರ ಜೊತೆಗೆ, ಚುಕ್ಕಿ ನಂಜುಂಡಸ್ವಾಮಿಯವರ ಜೊತೆಗೆ ನಿಂತಿರುವ, ದೇವನೂರರ ಜೊತೆಗೆ ನಿಂತಿರುವ ಫೋಟೋಗಳೂ ಆಕೆಯ ಫೇಸ್‍ಬುಕ್ ವಾಲ್ ಮೇಲೆ ಇದ್ದವು. ಆಕೆ ಸತತವಾಗಿ ಹೋರಾಟದ ಚಟುವಟಿಕೆಗಳಲ್ಲಿ ತೊಡಗಿರುವುದಕ್ಕೆ ಅಲ್ಲಿ ಸಾಕ್ಷಿಗಳಿದ್ದವು. ಆದರೆ ಅವೆಲ್ಲವನ್ನೂ ಬಿಟ್ಟು ಈಗಾಗಲೇ ಅತ್ಯಂತ ನೀಚತನದಿಂದ ಯಾರನ್ನು ಹಿಂದೂವಿರೋಧಿ ಎಂದು ಪ್ರೊಜೆಕ್ಟ್ ಮಾಡಲಾಗಿತ್ತೋ ಅವನ್ನು ಮಾತ್ರ ಆಯ್ದುಕೊಳ್ಳಲಾಯಿತು.‌

ಐಟಿ ಸೆಲ್
ಪುಟ್ಟಣ್ಣಯ್ಯನವರ ಜೊತೆ ನಳಿನಿ ಮತ್ತು ಅವರ ಸಹೋದರಿ

ಅದರ ನಂತರ ಆಯ್ದುಕೊಂಡಿದ್ದು ಇನ್ನಷ್ಟು ಕ್ಷುದ್ರದಾರಿ. ನಳಿನಿ ಹೊಲದಲ್ಲಿ ಕೆಲಸ ಮಾಡುತ್ತಿರುವ, ಟ್ರ್ಯಾಕ್ಟರ್ ಓಡಿಸುತ್ತಿರುವ ಎಷ್ಟೋ ಫೋಟೋಗಳನ್ನು ಬಿಟ್ಟು ಆಕೆ ಬೈಕ್ ಮೇಲೆ ಕೂತಿರುವ ಅಥವಾ ಸ್ಕೂಟಿ ಓಡಿಸುತ್ತಿರುವ ಫೋಟೋಗಳನ್ನು ಆಯ್ದು ‘ಈಕೆ ಹೋರಾಟಗಾರ್ತಿಯಾ?’ ಎಂಬ ಪೋಸ್ಟರ್‍ಗಳು ಬಂದವು. ಯಥಾಪ್ರಕಾರ ಇವೂ ಸೆಂಟ್ರಲ್ ಟೀಂನಿಂದಲೇ ಬಂದವು. ಅದಕ್ಕೆ ಪುರಾವೆಯೂ ನಿಮಗೆ ಸೋಷಿಯಲ್ ಮೀಡಿಯಾ ಅಕೌಂಟುಗಳ ಮೇಲೆ ಗಮನ ಹರಿಸಿದರೆ ಸಿಕ್ಕಿಬಿಡುತ್ತದೆ.

ಮಾಳವಿಕಾ ಫೀಲ್ಡಿಗಿಳಿದಿದ್ದು ಏಕೆ?

ಇದೂ ಸಹಾ ಒಂದು ವ್ಯವಸ್ಥಿತ ತಂತ್ರ. ನಳಿನಿ ಒಂದು ವೇಳೆ ಶರ್ಟು ಪ್ಯಾಂಟು ಹಾಕಿದರೆ, ಜೀನ್ಸ್ ಹಾಕಿದರೆ ತಪ್ಪೇನು? ಆಕೆ ಸ್ಕೂಟಿ ಓಡಿಸಿದರೆ ಏನು ಸಮಸ್ಯೆ? ಆಕೆಗೆ ದೇಶದ ನಾಗರಿಕಳಾಗಿ ಮಂತ್ರಿಯೊಬ್ಬರನ್ನು ಪ್ರಶ್ನೆ ಮಾಡುವ ಹಕ್ಕಿಲ್ಲವಾ? ಈ ನಿರ್ದಿಷ್ಟ ಪ್ರಕರಣದಲ್ಲಿ ಆಕೆ ಒಂದೇ ಒಂದು ತಪ್ಪು ಮಾತಾಡಿಲ್ಲ ಎಂಬುದಕ್ಕೆ ವಿಡಿಯೋ ಸಾಕ್ಷಿ ಇದೆ. ಹೀಗಿರುವಾಗ ಇರುವ ಒಂದೇ ದಾರಿ ಆಕೆಯನ್ನು ನಡತೆ ಸರಿ ಇಲ್ಲದ ವ್ಯಕ್ತಿ ಎಂದು ಬಿಂಬಿಸುವುದು. ಅದಕ್ಕೂ ಸಮಾಜ ಒಪ್ಪುವ ಸುಳ್ಳುಗಳನ್ನು ಸೃಷ್ಟಿ ಮಾಡಲು ಸಾಧ್ಯವಾಗಿಲ್ಲ. ಕೊನೆಗೆ ಮಹಿಳೆಯಾಗಿ ಬೈಕ್ ಓಡಿಸುವುದು ಪ್ಯಾಂಟ್ ಹಾಕುವುದು ಸರಿಯಲ್ಲ ಎಂಬ ಫ್ಯೂಡಲ್ ಮನಸ್ಥಿತಿಯನ್ನು ಬಡಿದೆಬ್ಬಿಸಬೇಕು. ಹೆಣ್ಣುಮಕ್ಕಳು ಸುಮ್ಮನೆ ಮನೆಯೊಳಗೆ ಇರಬೇಕು ಎಂದು ಬಯಸುವ (ಬಿಜೆಪಿಯನ್ನು ಬೆಂಬಲಿಸುವವರಲ್ಲೂ ಕನಿಷ್ಠ ಮುಕ್ಕಾಲು ಪಾಲಷ್ಟು ಜನರು ಈ ಮನಸ್ಥಿತಿ ಹೊಂದಿರುತ್ತಾರೆ) ಗಂಡಸರು ಷೇರ್ ಮಾಡುವಂತಹ ಪೋಸ್ಟರ್‍ಗಳನ್ನು ಮಾಡಬೇಕು.

ಐಟಿ ಸೆಲ್
ಅಷ್ಟೇ ಆದರೆ ಸಾಲದು, ಇದನ್ನು ಒಬ್ಬ ಮಹಿಳೆಯ ಬಾಯಲ್ಲಿ ಹೇಳಿಸಬೇಕು. ಮಾಳವಿಕಾ ಅವರು ಈ ಹಿಂದೆ ಆಡಿದ ಒಂದು ಅಪಾಯಕಾರಿ ಮಾತು ನಿಮಗೆ ನೆನಪಿದೆಯೇ? ಅದು ಸ್ಯಾನಿಟರಿ ಪ್ಯಾಡ್ ವಿಚಾರದಲ್ಲಿ!! ಅಪ್ಪಟ ಮಹಿಳಾವಿರೋಧಿ ಮಾತುಗಳನ್ನು ಈ ಮಾಡ್ರನ್ ಮಹಿಳೆಯ ಬಾಯಲ್ಲಿ ಹೇಳಿಸಲಾಗಿತ್ತು. ಮೇ 23ರ ಬೆಳಿಗ್ಗೆ ಹೊತ್ತಿಗೆ ಆಕೆಯ ಪೋಸ್ಟ್ ಬಂದಿತು. ಯಾವಾಗ ಅದಕ್ಕೆ ವಿರೋಧ ಬರತೊಡಗಿತೋ ಈ ಸಾರಿ ಯಾಕೋ ಸರಿಹೋಗಲಿಲ್ಲ ಎಂದು ಡಿಲಿಟ್ ಮಾಡಿದರು (ಅಥವಾ ಡಿಲಿಟ್ ಮಾಡಿಸಲಾಯಿತು!)

ಬಿಜೆಪಿ ವಿರೋಧಿಗಳ ಸಾಫ್ಟ್ ದಾರಿ

ಇಲ್ಲಿ ಗಮನಿಸಬೇಕಾದ್ದೆಂದರೆ ಹರತಾಳು ಹಾಲಪ್ಪನ ಫೊಟೋಗಳನ್ನು ಪದೇ ಪದೇ ಹಾಕಿ ರೇಪಿಸ್ಟ್ ಹಾಲಪ್ಪ ಎಂದು ಬಿಜೆಪಿ ವಿರೋಧಿಗಳು ಹೇಳುವುದಿಲ್ಲ; ಹಾಗೆಯೇ ರೇಣುಕಾಚಾರ್ಯರ ಫೋಟೋ ಪದೇ ಪದೇ ಹಾಕಿ ಹಾದರದ ರೇಣುಕಾ ಎಂತಲೂ ಹೇಳುವುದಿಲ್ಲ. ಸ್ವತಃ ಮಾಳವಿಕಾರ ಖಾಸಗಿ ಬದುಕನ್ನು ತೆಗೆದು ಬೀದಿಗೆ ತಂದರೆ ಹಲವಾರು ಸಂಗತಿಗಳು ಸಿಗುತ್ತವೆ. ಆಕೆ ಅಮಾನವೀಯತೆ ಮತ್ತು ಮೌಢ್ಯಗಳನ್ನು ಮೆರೆಯುತ್ತಿರುವ ವ್ಯಕ್ತಿ ಎಂದೆಲ್ಲಾ ಹೇಳಲು ಪುರಾವೆಗಳು ಸಿಗುತ್ತವೆ. ಆದರೆ ವ್ಯಕ್ತಿಯೊಬ್ಬರ ಖಾಸಗಿ ವಿಚಾರಗಳನ್ನು ಆ ರೀತಿ ಎತ್ತಿ ಆಡುವುದು ಅನೈತಿಕವಾದದ್ದು. ಆದರೆ ಬಿಜೆಪಿ ದೇಶವಿರೋಧಿ ಕೆಲಸ ಮಾಡುತ್ತಿದೆ ಎಂದು ತೋರಿಸಬಲ್ಲ ನೂರು, ಸಾವಿರ ಫೊಟೋಗಳನ್ನು ಎತ್ತಿಟ್ಟುಕೊಂಡು ಅವನ್ನೂ ಹಾಕುವುದಿಲ್ಲ.

ಇಲ್ಲಿ ನಳಿನಿ ಕೇಸಿನಲ್ಲೇ ನೋಡುವುದಾದರೆ ಆಕೆ ಹೊಲದಲ್ಲಿ ಕೆಲಸ ಮಾಡುತ್ತಿರುವ, ನಿರಂತರವಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿರುವ ಸಾವಿರ ಸಾವಿರ ಫೋಟೋಗಳನ್ನು (ಎಲ್ಲರಲ್ಲಿ ಈ ರೀತಿಯ ಡಾಕ್ಯುಮೆಂಟೇಷನ್ ಸಹಾ ಇರುವುದಿಲ್ಲ) ಹಾಕುವವರು ಯಾರೂ ಇರುವುದಿಲ್ಲ. ಆ ಗ್ಯಾರಂಟಿ ಬಿಜೆಪಿಯ ಐಟಿ ಸೆಲ್‍ಗಿದೆ.

ನಳಿನಿ ಯಾವ ಜಮೀನಿನಲ್ಲಿ ಕೆಲಸ ಮಾಡುತ್ತಾರೋ ಅದೇ ಜಮೀನಿಗೆ ಅದೇ ಕೆರೆಯಿಂದ ನೀರು ಬರಬೇಕು. ಅಂದರೆ ಹೋರಾಟಗಾರ್ತಿಯಾಗಿ, ನಾಗರಿಕಳಾಗಿ ಯಾವುದನ್ನು ಬೇಕಾದರೂ ಪ್ರಶ್ನೆ ಮಾಡುತ್ತಾರೆಂಬುದಷ್ಟೇ ಅಲ್ಲ, ಸ್ವತಃ ಆಕೆಯೇ ಸಂತ್ರಸ್ತೆ. ಆದರೆ ಅದನ್ನು ಮುಂದಿಟ್ಟು ಜಗಳಕ್ಕಿಳಿಯುವವರು ಯಾರೂ ಇಲ್ಲ. ಯಾರಲ್ಲೂ ಅಂತಹ ವ್ಯವಸ್ಥಿತ ಯಂತ್ರಾಂಗ ಇಲ್ಲ. ಬಿಜೆಪಿಯನ್ನು ಮೀರಿಸುವ ಕ್ರಿಯೇಟಿವಿಟಿ ಮತ್ತು ಬದ್ಧತೆಗಳಿರುವ ಲಕ್ಷ ಜನರಿರಬಹುದು. ಅವರು ಸಾಮಾನ್ಯವಾಗಿ ತಮ್ಮಲ್ಲೇ ಜಗಳವಾಡಿಕೊಳ್ಳುತ್ತಿರುತ್ತಾರೆ.

ಈ ಕೀಳುಮಟ್ಟಕ್ಕೆ ಒಂದು ರಾಜಕೀಯ ಪಕ್ಷ ಇಳಿಯಬಹುದೇ?

ಧೀಮಂತವಾಗಿ ತನ್ನದೇ ರೀತಿಯಲ್ಲಿ ಕೆಲಸ ಮಾಡುತ್ತಿರುವ ಮಾದರಿ ವ್ಯಕ್ತಿತ್ವದ ಹೆಣ್ಣುಮಗಳೊಬ್ಬಳನ್ನು ಕೀಳುಗೈಯ್ಯಲು ಎಳ್ಳಷ್ಟೂ ಹೇಸದ ಮಾರ್ಗ ಅದು. ಕಲಬುರ್ಗಿ, ಗೌರಿಲಂಕೇಶರ ಹಸೀ ಹಸೀ ಕೊಲೆಗಳನ್ನೇ ಸಮರ್ಥಿಸಿಕೊಳ್ಳಲು ಇದನ್ನು ಬಳಸಿ ಅವರಿಗೆ ಅನುಭವವಿದೆ. ನಳಿನಿ ಥರದವರನ್ನು ಹಣಿಯಲು ಮಹಿಳಾ ವಿರೋಧಿ, ಪ್ರಶ್ನೆ ಮಾಡಬೇಕಾದ ಸ್ವಾತಂತ್ರ್ಯದ ವಿರೋಧಿ ಧೋರಣೆಗಳನ್ನೇ ಬಳಸಲಾಯಿತು ಎಂಬುದನ್ನು ಗಮನಿಸಬೇಕು. ಅಷ್ಟೇ ಅಲ್ಲದೇ ಪ್ರಕಾಶ್ ರೈ, ದೊರೆಸ್ವಾಮಿಯವರಂಥ ಕನ್ನಡನಾಡು ಹೆಮ್ಮೆ ಪಡಬೇಕಾದ ವ್ಯಕ್ತಿಗಳನ್ನು ಹೀಗಳೆಯುವ ನೆರೇಟಿವ್‍ಅನ್ನು ಬಲಪಡಿಸಲೂ ಬಳಸಲಾಯಿತು.

ಅಷ್ಟೇ ಸಾಕಾಗದು ಎಂದು ಆಕೆಯನ್ನು ಕಮ್ಯುನಿಸ್ಟ್ ಎಂದು ಹೇಳಲಾಯಿತು. ನಳಿನಿ ಅಭಿಮಾನವಿಟ್ಟಿರುವ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರೇ ಕಮ್ಯುನಿಸ್ಟರಾಗಿರಲಿಲ್ಲ. ಕಮ್ಯುನಿಸ್ಟ್ ಎಂದು ಯಾರನ್ನೋ ಬಯ್ಯುವವರಿಗೂ ಕಮ್ಯುನಿಸಂನ ಜನಪರತೆ ಗೊತ್ತಿರುವುದಿಲ್ಲ. ಏನೋ ಒಂದು ಬೈಗುಳ ಎಂಬಂತೆ ಮಾಡಲಾಗಿರುತ್ತದೆ. ಅಂದರೆ ಸುಳ್ಳುಗಳು, ಅರೆ ಸುಳ್ಳುಗಳು, ಹಸೀ ಸುಳ್ಳುಗಳ ಆಧಾರದ ಮೇಲೆ ವ್ಯವಸ್ಥಿತವಾಗಿ ಚಾರಿತ್ರ್ಯವಧೆ ಮಾಡುವಲ್ಲಿ ಅಪಾರ ಪರಿಣಿತಿ ಪಡೆದುಕೊಂಡಿರುವ ಒಂದು ಪಕ್ಷವಾಗಿ ಬಿಜೆಪಿ ಬೆಳೆದುನಿಂತಿದೆ. ಐಟಿಸೆಲ್ ಎಂಬ ಅದರ ಬ್ರಹ್ಮಾಸ್ತ್ರಕ್ಕೆ ನಳಿನಿ ಒಂದು ಗುಬ್ಬಿಯಷ್ಟೇ.

ಐಟಿ ಸೆಲ್
ಇದು ಕೇವಲ ನಳಿನಿಯ ವಿಚಾರವಲ್ಲ; ಬದಲಿಗೆ ನಾವೆಲ್ಲರೂ ವ್ಯವಸ್ಥಿತವಾಗಿ ಹಿಮ್ಮೆಟ್ಟಿಸಬೇಕಾದ ಒಂದು ಮನುಷ್ಯವಿರೋಧಿ ಯಂತ್ರಾಂಗದ ವಿರುದ್ಧದ ಹೋರಾಟ ಎಂದು ಎಲ್ಲರೂ ಆಲೋಚಿಸಿ ಕಾರ್ಯಪ್ರವೃತ್ತವಾಗುವವರೆಗೂ ಇದಕ್ಕೆ ಕೊನೆಯಿಲ್ಲ.

(ಅಧ್ಯಯನದಲ್ಲಿ ನೆರವಾದ ಸಾಮಾಜಿಕ ಜಾಲತಾಣದ ಮಿತ್ರರಿಗೆ ಧನ್ಯವಾದಗಳು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. “ಬಿಜೆಪಿಯನ್ನು ಮೀರಿಸುವಂಥ ಕ್ರಿಯೇಟಿವಿಟಿ ಮತ್ತು ಬದ್ಧತೆಗಳಿರುವ ಲಕ್ಷ ಜನರಿರಬಹುದು. ಆದರೆ ಅವರು ಸಾಮಾನ್ಯವಾಗಿ ತಮ್ಮೊಳಗೇ ಜಗಳವಾಡುತ್ತಿರುತ್ತಾರೆ” – ಇಂಥ ಮಾತುಗಳನ್ನು ಬೋಲ್ಡ್ ಮಾಡಬೇಕು. ಎಂಥಾ ದುರಂತದ ಕಟು ಸತ್ಯದ ಮಾತು ಅದು!

LEAVE A REPLY

Please enter your comment!
Please enter your name here

- Advertisment -

Must Read

ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ್ದಕ್ಕೆ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿತ: ಅವಮಾನ ತಾಳಲಾರದೆ ಆತ್ಮಹತ್ಯೆ

0
ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಬೈಕ್ ಮತ್ತು ಮೊಬೈಲ್ ಕಿತ್ತುಕೊಂಡು ಸವರ್ಣೀಯರು ಮರಕ್ಕೆ ಕಟ್ಟಿ ಥಳಿಸಿರುವ ಮತ್ತು ಆ ಯುವಕ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಜಾತಿ...