Homeಕರ್ನಾಟಕಕತ್ತಲೆ ದಾರಿಗೆ ಬೆಳಕು ಹಿಡಿಯುವವರ್‍ಯಾರು?

ಕತ್ತಲೆ ದಾರಿಗೆ ಬೆಳಕು ಹಿಡಿಯುವವರ್‍ಯಾರು?

- Advertisement -
- Advertisement -

ಏಜಾಜ್ ಅಹಮದ್ ಅವರು ದಶಕಗಳ ಹಿಂದೆ ಬಿಜೆಪಿ ಫ್ಯಾಸಿಸಮ್‌ಅನ್ನು ಕುರಿತು ಬರೆದಿದ್ದ ಲೇಖನಗಳನ್ನು ಇತ್ತೀಚೆಗೆ ಓದುತ್ತಿದ್ದಾಗ ನಮ್ಮ ಇಂದಿನ ರಾಜಕೀಯ ಸ್ಥಿತಿಗೆ ದೀರ್ಘವಾದ ಇತಿಹಾಸವಿದೆಯೆನ್ನುವುದು ಮನದಟ್ಟಾಯಿತು. ಬಲಪಂಥೀಯ ರಾಜಕೀಯದ ಬಗ್ಗೆ ಮಾತನಾಡುವಾಗ ಇದು ಈಗ ತಾನೇ ಹುಟ್ಟಿಕೊಂಡ ವಿದ್ಯಮಾನವೆನ್ನುವ ಧೋರಣೆ ಕಂಡುಬರುತ್ತದೆ. ಆದ್ದರಿಂದಲೇ ನಮ್ಮ ರಾಜಕೀಯ ಸಂಸ್ಥೆಗಳಿಗೆ, ಪ್ರಜಾಪ್ರಭುತ್ವಕ್ಕೆ ಮತ್ತು ನಾಗರಿಕ ಸಮಾಜಕ್ಕೆ ಇದೇನಾಗಿದೆ ಎಂದು ಆಶ್ಚರ್ಯ ಹಾಗೂ ವಿಷಾದವನ್ನು ವ್ಯಕ್ತಪಡಿಸುತ್ತೇವೆ. ಎಲ್ಲೋ ಒಂದು ಕಡೆಗೆ ಉದಾರವಾದಿ ಸಾಮರಸ್ಯದ ಕರ್ನಾಟಕದ ಪ್ರತಿಮೆ ನಮ್ಮ ಮನಸ್ಸಿನಲ್ಲಿರುತ್ತದೆ. ವಾಸ್ತವವೆಂದರೆ ಏಜಾಜ್ ಅಹಮದ್ ಹೇಳುವ ಹಾಗೆ ಬಲಪಂಥೀಯ ರಾಜಕೀಯದ ಹಿನ್ನೆಲೆಗಳನ್ನು ವಸಾಹತುಶಾಹಿ ಕಾಲದ ಸಾಮಾಜಿಕ ಸುಧಾರಣಾ ಹಾಗೂ ಧಾರ್ಮಿಕ ಸುಧಾರಣಾ ಚಳವಳಿಗಳಲ್ಲಿಯೇ ಕಾಣಬಹುದಾಗಿದೆ. ವಸಾಹತುಶಾಹಿಯ ವಿರುದ್ಧ ’ಹಿಂದೂ’ ಅಸ್ಮಿತೆಯನ್ನು ಕಟ್ಟಿಕೊಳ್ಳುವುದು ಆಗಲೇ ಆರಂಭವಾಯಿತು. ಇಂದು ಪ್ರಗತಿಪರರೂ ಕೂಡ ಅವಿಮರ್ಶಾತ್ಮಕವಾಗಿ ನೋಡುವ ಸ್ವಾಮಿ ವಿವೇಕಾನಂದರ ಚಿಂತನೆಯಲ್ಲಿಯ ವಿಶ್ವಗುರು ಭಾರತದ ಪರಿಕಲ್ಪನೆ ಇದೆ. ಅವರು ಪುರೋಹಿತಶಾಹಿಯನ್ನು, ಬ್ರಾಹ್ಮಣ್ಯವನ್ನು ಅತ್ಯಂತ ಕಟುವಾಗಿ ಟೀಕಿಸಿದರು.

ಹಾಗೆಯೇ ಮೂಢನಂಬಿಕೆಗಳನ್ನು ಮತ್ತು ಆಚರಣೆಗಳನ್ನು. ಇದರ ಮೂಲಕ ಶೂದ್ರ ಪ್ರಜ್ಞೆಯೊಂದು ಹುಟ್ಟಲು ಕಾರಣವಾದರು. ಕುವೆಂಪು ಅವರ ಮೇಲೆ ಅತ್ಯಂತ ಗಾಢವಾದ ಪ್ರಭಾವವು ವಿವೇಕಾನಂದರದೇ ಆಗಿತ್ತು. ಭಾರತವು ಧರ್ಮಗಳ, ಆಧ್ಯಾತ್ಮಿಕತೆಯ ತವರು. ಹಿಂದೂ ಧರ್ಮವು ತನ್ನ ಕ್ಲೈಬ್ಯವನ್ನು ಗೆದ್ದು ಪುರುಷತ್ವವನ್ನು, ಕ್ಷಾತ್ರವನ್ನು ಮತ್ತೆ ಪಡೆದುಕೊಳ್ಳಬೇಕು ಎಂದು ಅವರು ವಾದಿಸಿದರು. ಸ್ವಲ್ಪ ಬದಲಾವಣೆಯೊಂದಿಗೆ ಈ ವಾದಗಳು ಹಿಂದುತ್ವದ ವಾದಗಳಾಗಿ ಕಾಣುತ್ತವೆ. ದಯಾನಂದ ಸರಸ್ವತಿಯವರು ಆರ್ಯ ಧರ್ಮದ ತತ್ವಗಳಲ್ಲಿ ವರ್ಣಾಶ್ರಮದ ಸ್ವೀಕಾರ, ಮತಾಂತರ ವಿರೋಧ ಮತ್ತು ಶುದ್ಧೀಕರಣದ ಪರಿಕಲ್ಪನೆಗಳಿವೆ. ಇವು ಕೂಡ ಇಂದಿನ ಹಿಂದುತ್ವದ ನೆಲೆಗಟ್ಟಾಗಿವೆ. 1925ರ ನಂತರ ಹಿಂದೂ ಮಹಾಸಭಾ, ಆರ್‌ಎಸ್‌ಎಸ್ ಸ್ಥಾಪನೆಯೊಂದಿಗೆ ಈ ಚಿಂತನೆಗಳಿಗೆ ಒಂದು ರಾಜಕೀಯ ಸೈದ್ಧಾಂತಿಕ ಸ್ವರೂಪವು ಬಂದಿತು. ಹಿಂದೂ ಮಹಾಸಭಾದ ಪ್ರಮುಖ ಸದಸ್ಯರು ಕಾಂಗ್ರೆಸ್ ಸದಸ್ಯರೂ ಆಗಿದ್ದರು. ಗಾಂಧಿ, ನೆಹರು ಅವರ ಹೊರತಾಗಿಯೂ ಕಾಂಗ್ರೆಸ್ ಕೇಂದ್ರಿತ ಭಾರತೀಯ ರಾಜಕೀಯವು ಯಾವಾಗಲೂ ‘Soft Hindutwa’ ಮಾದರಿಯ ರಾಜಕೀಯವೇ ಆಗಿತ್ತು. ಇದರಲ್ಲಿ ಕೋಮುವಾದ, ಅಸ್ಪೃಶ್ಯತೆ, ದಲಿತರ ಕಡೆಗಣನೆ ಎಲ್ಲವೂ ಸೇರಿಕೊಂಡಿದ್ದವು. ಆದ್ದರಿಂದಲೇ ಅಂಬೇಡ್ಕರ್ ದಲಿತರಿಗಾಗಿ ಕಾಂಗ್ರೆಸ್ ಹಾಗೂ ಗಾಂಧಿ ಏನು ಮಾಡಿದ್ದಾರೆ ಎನ್ನುವ ತೀವ್ರ ಆಕ್ರೋಶದ ಕೃತಿಯನ್ನು ಬರೆಯಬೇಕಾಯಿತು. ಹೀಗಾಗಿ ಅಂಬೇಡ್ಕರ್, ನೆಹರು ಹಾಗೂ ನಮ್ಮ ಸಂವಿಧಾನವು ಪ್ರತಿಪಾದಿಸುವ ಸೆಕ್ಯುಲರ್‌ವಾದವು ನಾಗರಿಕ ಸಮಾಜದಲ್ಲಿ ಪ್ರಧಾನ ಮೌಲ್ಯವಾಗಲಿಲ್ಲ. ಇದರ ಜೊತೆಗೆ ಭಾರತದಲ್ಲಿ ನಿಜವಾದ ಪ್ರಜಾಪ್ರಭುತ್ವದ ಬದಲು ಕೇವಲ ಚುನಾವಣಾ ಕೇಂದ್ರಿತ Electoral ಪ್ರಜಾಫ್ರಭುತ್ವ ಮಾತ್ರ ಅನುಷ್ಠಾನವಾಯಿತು. ಇದರಿಂದಾಗಿ ಜಾತಿ ಮತಗಳು, ಮಠಗಳು, ಧರ್ಮ ಸಂಸ್ಥೆಗಳು ಅನೈತಿಕ ರಾಜಕೀಯ ಪ್ರವೇಶ ಮಾಡಿದವು.

ಇನ್ನೊಂದು ಕಡೆಗೆ ಬಾಬರಿ ಮಸೀದಿಯ ಧ್ವಂಸದ ನಂತರ ಬಲಪಂಥೀಯ ರಾಜಕೀಯವು ಅಧಿಕಾರವನ್ನೂ ಪಡೆಯತೊಡಗಿತು. ಜೆಪಿಯವರ ತಪ್ಪು ನಡೆಯಿಂದಾಗಿ ಪ್ರಧಾನಧಾರೆ ರಾಜಕೀಯವನ್ನೂ ಪ್ರವೇಶಿಸಿದ ಬಲಪಂಥೀಯವು ಈಗ ಪ್ರಭುತ್ವ ಸ್ಥಾಪನೆಯ ಪ್ರಾಬಲ್ಯವನ್ನು ಪಡೆದುಕೊಂಡಿತು. ಬಾಬರಿ ಮಸೀದಿಯ ಧ್ವಂಸದಿಂದ ಅದು ಕಲಿತ ಪಾಠಗಳೆಂದರೆ 1) ಸಂವಿಧಾನದ ಅಪೇಕ್ಷೆಗಳನ್ನು ತಿರಸ್ಕರಿಸಿಯೂ ರಾಜಕೀಯ ಅಧಿಕಾರ ಪಡೆಯಬಹುದು 2) ಸರ್ವೋಚ್ಚ ನ್ಯಾಯಾಲಯಕ್ಕೆ ಮಾತುಕೊಟ್ಟು ಅದನ್ನು ಮುರಿದ ಕಲ್ಯಾಣಸಿಂಗ್ ಅವರಿಗೆ ನಮ್ಮ ನ್ಯಾಯವ್ಯವಸ್ಥೆಯು ಯಾವ ಶಿಕ್ಷೆಯನ್ನು ಕೊಡುವುದಿಲ್ಲ. 3) ನೇರವಾಗಿ ಹಿಂಸೆಗೆ, ಮುಸ್ಲಿಮರ ಕೊಲೆಗೆ ಆಹ್ವಾನ ನೀಡುವುದು ಅಪರಾಧವಲ್ಲ. ಬದಲಾಗಿ ಅದರಿಂದ ಉಮಾ ಭಾರತಿಯಂಥವರಿಗೆ, ಇದಕ್ಕೆಲ್ಲ ಕಾರಣವಾದ ಆಧುನಿಕ ಭಾರತದ ಖಳನಾಯಕನಾದ ಲಾಲಕೃಷ್ಣ ಅಡ್ವಾನಿಯವರಿಗೆ ಈ ಹಿಂಸೆಯ ಬಗ್ಗೆ ಯಾವ ಕಾಳಜಿಯೂ ಇಲ್ಲ. 4) ಬಹುಸಂಖ್ಯಾತ ಭಾರತೀಯರು ಸುಪ್ತ ಬಲಪಂಥಿಯರೇ ಆಗಿದ್ದಾರೆ. 5) ರಾಜಕೀಯ ಅಧಿಕಾರದಿಂದ ಅಪಾರ ಸಂಪತ್ತು ಮತ್ತು ಲೈಂಗಿಕ ಸುಖಗಳು ಸುಲಭವಾಗಿ ದೊರೆಯುತ್ತವೆ. ಇವು ದೇಶಭಕ್ತಿಗೆ ವಿರುದ್ಧವೇನೂ ಅಲ್ಲ. ಇವುಗಳಲ್ಲಿ ಕೊನೆಯದನ್ನು ಪೂರ್ಣ ಅಧಿಕಾರ ಪಡೆದ ಮೇಲೆ ಬಿಜೆಪಿ ಕಂಡುಕೊಂಡಿದೆ.

ದುರಂತವೆಂದರೆ 1970ರ, 80ರ ದಶಕಗಳಲ್ಲಿ ನಡೆದ ಜನಪರ ಚಳವಳಿಗಳು ಕರ್ನಾಟಕದ ವಾಸ್ತವ ರಾಜಕೀಯವನ್ನು ಬದಲಾಯಿಸಲೇ ಇಲ್ಲ. ಅದು ಲಿಂಗಾಯತ, ಒಕ್ಕಲಿಗ ಜಾತಿಗಳ ರಾಜಕೀಯವಾಗಿಯೇ ಮುಂದುವರೆಯಿತು. ಭೂಸುಧಾರಣೆ ಹಾಗೂ ದೇವರಾಜ ಅರಸು ರಾಜಕೀಯದಿಂದ ಮುನ್ನಲೆಗೆ ಬಂದ ದಲಿತ, ಹಿಂದುಳಿದ ವರ್ಗದ ರಾಜಕೀಯ ನಾಯಕರು, ಪ್ರತಿನಿಧಿಗಳು ಜೀತದಾಳುಗಳಾಗಿದ್ದಾರೆ ಹೊರತು ಯಾವುದೇ ರ್‍ಯಾಡಿಕಲ್ ಆದ ಕ್ರಿಯೆಗಳಲ್ಲಿ ಭಾಗಿಯಾಗಲಿಲ್ಲ. ಇಂಥ ಹಿನ್ನೆಲೆಯಲ್ಲಿ ಕರ್ನಾಟಕವು ಬಿಜೆಪಿಯನ್ನು ಅಧಿಕಾರಕ್ಕೆ ತಂದು ಬಿಜೆಪಿ ಆಡಳಿತದ ಮೊದಲ ದಕ್ಷಿಣ ರಾಜ್ಯವಾದದ್ದು ಆಶ್ಚರ್ಯವಲ್ಲ.

ಈಗ ಭಾರತೀಯ ರಾಜಕೀಯದ ಹೊಸ ತಿರುವು ಅಂದರೆ, ಚುನಾವಣಾ ರಾಜಕೀಯದಲ್ಲಿ ತನಗೆ ಸೋಲು ಇಲ್ಲವೆಂದು ಆತ್ಮವಿಶ್ವಾಸ ಹೊಂದಿರುವ ಬಿಜೆಪಿ ಯಾವ ಹಿಂಜರಿಕೆಯೂ ಇಲ್ಲದೆ ಸಂವಿಧಾನಾತ್ಮಕ ಭಾರತವನ್ನು ಹೋಗಲಾಡಿಸಿ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿರುವುದು. ಅಕ್ಷರಶಃ ಸಾವರ್ಕರ್ ಮತ್ತು ಗೋಲ್ವಲ್‌ಕರ್ ಅವರ ಪರಿಕಲ್ಪನೆಯ ಹಿಂದು ರಾಷ್ಟ್ರ ಇದಾಗಿದೆ. ಇದರಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು ’ಅತಿಥಿಗಳು’ ಮತ್ತು ದ್ವಿತೀಯ ದರ್ಜೆ ನಾಗರಿಕರು. ಅವರು ಬಹುಸಂಖ್ಯಾತ ಹಿಂದೂಗಳ ಮರ್ಜಿಗೆ ತಕ್ಕಹಾಗೆ ಬದುಕಬೇಕು. ಹೀಗಾಗಿ ಅವರಿಗಿರುವ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳಬೇಕು. ಇದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಯಾಗದಿದ್ದರೆ ಜರ್ಮನಿಯು ಯಹೂದಿಯರಿಗೆ ಮಾಡಿದ್ದನ್ನು ಇಲ್ಲಿ ಅಲ್ಪಸಂಖ್ಯಾತರಿಗೆ ಮಾಡಬೇಕು. ಗೋಲ್ವಲ್‌ಕರ್ ಅವರು ಇದನ್ನು ’ಜನಾಂಗೀಯ ಶುದ್ಧೀಕರಣ’ವೆಂದು ಕರೆಯುತ್ತಾರೆ ಹಾಗೂ ನಾಝಿ ಜರ್ಮನಿಯ ಮಾದರಿಯನ್ನು ಭಾರತವು ಅನುಕರಿಸಬೇಕು ಎನ್ನುತ್ತಾರೆ. ನಾವು ಈ ವಿಚಾರಗಳ ಅನುಷ್ಠಾನವನ್ನು ಕಾಣುತ್ತಿದ್ದೇವೆ.

ಈಗ ಕರ್ನಾಟಕದಲ್ಲಿ ಆರಂಭವಾಗಿರುವುದನ್ನು, ಗೋಧ್ರಾ ನಂತರದ ಗುಜರಾತಿನಲ್ಲಿ ಹಿಂದೆಯೇ ಮುಸ್ಲಿಮ್ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಮಾಡಲಾಯಿತು. ಜಾತ್ರೆಗಳಲ್ಲಿ, ಉತ್ಸವಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿಷೇಧ ಮಾಡಲು ಒತ್ತಡಗಳು ಆರಂಭವಾಗಿವೆ. ಇವು ಅಕಸ್ಮಾತ್ತಾಗಿ ಆರಂಭವಾದ ಅಥವಾ ಕೇವಲ ಸ್ಥಳೀಯವಾದ ವಿದ್ಯಮಾನವಲ್ಲ. ಬಲಪಂಥೀಯತೆಯ 90 ವರ್ಷಗಳ ಚಿಂತನೆಯ ಅನುಷ್ಠಾನದ ಮೊದಲ ಹೆಜ್ಜೆ. ಇಂಥ ನಿಷೇಧವು ಕಾನೂನಿನ ವಿರುದ್ಧವೆಂದು ಗೊತ್ತಿದ್ದರೂ ದತ್ತಿ ದೇವಾಲಯಗಳಿಗೆ ನಿರ್ಬಂಧಿಸಿದ ನಿಯಮವನ್ನು ಉದ್ದೇಶಪೂರ್ವಕವಾಗಿ ತಿರುಚಿ ಸರಕಾರವೂ ಪ್ರೋತ್ಸಾಹಿಸುತ್ತದೆ. ನಿಷೇಧದ ಬೇಡಿಕೆ ಕರ್ನಾಟಕ ಸರಕಾರದಿಂದ ಪ್ರಾಯೋಜಿತವಾಗಿದೆ ಎನ್ನುವುದರ ಬಗ್ಗೆ ಅನುಮಾನವೇ ಬೇಡ. ಹಾಗೆಯೇ ಹಿಜಾಬ್ ವಿವಾದವೂ ಕೂಡ. ಪ್ರಭಾವಿ ರಾಜಕೀಯ ನೆಲೆ ಇಲ್ಲದ ತಮ್ಮ ಊರಿನಲ್ಲಿಯೇ ಒಂದು ಚುನಾವಣೆ ಗೆಲ್ಲಲಾಗದ ನಾಯಕರುಗಳಿಗೆ ಹಿಜಾಬ್, ಮುಸ್ಲಿಮ್ ವ್ಯಾಪಾರ ನಿಷೇಧಗಳ ಮೂಲಕ ಧ್ರುವೀಕರಣಗೊಳಿಸಿ ಮುಂಬರುವ ಚುನಾವಣೆಗಳನ್ನು ಗೆಲ್ಲಬೇಕಿದೆ. ಆದ್ದರಿಂದಲೇ ಸಮಗ್ರ ಆಡಳಿತ ಯಂತ್ರ, ಪೊಲೀಸರು, ಜಿಲ್ಲಾಧಿಕಾರಿಗಳಿಗೆ ಈ ಕೋಮು ಧ್ರುವೀಕರಣದಲ್ಲಿ ಭಾಗಿಯಾಗಲು ನೇರ ಆದೇಶವನ್ನು ನೀಡಲಾಗಿದೆ. ಇದರಲ್ಲಿ ಅನುಮಾನವೇ ಇಲ್ಲ. ಇನ್ನು ಕೆಲವೇ ದಿನಗಳಲ್ಲಿ ಪ್ರಧಾನಿಗಳು ಮತ್ತು ಅಮಿತ್ ಶಾ ಕರ್ನಾಟಕಕ್ಕೆ ಬಂದು ಚುನಾವಣೆಯ ನಾಂದಿಯನ್ನು ಹಾಡಿದ ಮೇಲೆ ಮತದಾನದವರೆಗೂ ರಾಜ್ಯವು ಪ್ರಕ್ಷುಬ್ಧ ಸ್ಥಿತಿಯಲ್ಲೇ ಇರುತ್ತದೆ.

ಪ್ರಶ್ನೆಯೆಂದರೆ ಈ ಅನೈತಿಕವಾದ ಬಲಪಂಥೀಯ ಕೋಮು ರಾಜಕೀಯಕ್ಕೆ ಪ್ರತಿರೋಧವು ಎಲ್ಲಿಂದ ಹುಟ್ಟಬೇಕು? ಇಂದಿನ ಸ್ಥಿತಿಯಲ್ಲಿ ಕಾಂಗ್ರೆಸ್ ಹಿಂದುತ್ವವನ್ನು ಎದುರುಹಾಕಿಕೊಳ್ಳುವುದಿಲ್ಲ. ಹೀಗಾಗಿ ಜನರಿಗೆ
ಅದು ಪರ್ಯಾಯವೆಂದು ಕಾಣುವುದು ಅನುಮಾನ. ಅಲ್ಲದೆ ಅದು ಬೇಲಿ ಹಾರುವವರ ಪಕ್ಷವಾಗಿರುವುದರಿಂದ ಮತ್ತು ಭವಿಷ್ಯದ ಬಿಜೆಪಿ ಪ್ರತಿನಿಧಿಗಳ ಟ್ರೇನಿಂಗ್ ಸೆಂಟರ್ ಆಗಿರುವುದರಿಂದ ಅದರಿಂದ ರ್‍ಯಾಡಿಕಲ್ ಆದಂತಹ ಬದಲಾವಣೆಗಳು ಸಾಧ್ಯವಿಲ್ಲ.

ಎಲ್ಲರೂ ಆಶಿಸುವಂತೆ ಪ್ರತಿರೋಧವು ನಾಗರಿಕ ಸಮಾಜದಿಂದ ಬರುತ್ತದೆ ಎಂದು ನನಗೆ ನಂಬಿಕೆ ಇಲ್ಲ. ಇಂದು ಕೋಮುವಾದಿ ವಿಚಾರಗಳು ನಾಗರಿಕರ Common sense ಆಗಿಬಿಟ್ಟಿವೆ. ವಿಸ್ತಾರಗೊಂಡಿರುವ ಮಧ್ಯಮ ವರ್ಗವು ಜಾತಿಯನ್ನು ಮೀರಿ ಬಲಪಂಥದ ಸಮರ್ಥಕನಾಗಿದೆ. ದಲಿತ ರಾಜಕೀಯವು ಇಲ್ಲವೇ ಇಲ್ಲದಂತಾಗಿದೆ. ಮುಸ್ಲಿಮ್ ಜನಾಂಗಕ್ಕೆ ರಾಜಕೀಯ ನಾಯಕತ್ವವೇ ಇಲ್ಲ. ಹಿಜಾಬ್ ವಿವಾದದಲ್ಲಿ ನೋಡಿದ ಹಾಗೆ ಯುವಜನರು ವಿಶೇಷವಾಗಿ ಶೂದ್ರ ಹಾಗೂ ದಲಿತ ಯುವಜನರು ಮತಾಂಧರಾಗಿದ್ದಾರೆ. ಇನ್ನು ಎಡಪಂಥೀಯರ ಮೇಲೆ ಎಲ್ಲ ಬಗೆಯ ದಾಳಿಗಳು ಎರಡು ವರ್ಷಗಳ ಕಾಲದಿಂದ ನಿರಂತರವಾಗಿ ನಡೆಯುತ್ತಿವೆ. ಸದ್ಯಕ್ಕಂತೂ ಕತ್ತಲೆ ದಾರಿಯಲ್ಲಿ ಇನ್ನೂ ದೂರಕ್ಕೆ ಸಾಗಬೇಕಾಗಿದೆಯೆನಿಸುತ್ತದೆ.

ಪ್ರೊ.ರಾಜೇಂದ್ರ ಚೆನ್ನಿ

ಪ್ರೊ. ರಾಜೇಂದ್ರ ಚೆನ್ನಿ
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು, ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

 


ಇದನ್ನೂ ಓದಿ: ಕೋಮುದ್ವೇಷಕ್ಕೆ ಪೊಳ್ಳು ’ಸಮರ್ಥನೆ’ಯೂ ಬೇಡವಾಗಿರುವ ವಿಷಮ ಹಂತದಲ್ಲಿ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಮ್ಮ ನಾಯಕ ಅಂದು ಗುಹೆಯೊಳಗೆ, ಇಂದು ನೀರೊಳಗೆ, ಮುಂದೆ ಚಂದ್ರನ ಮೇಲೆ: ಪ್ರಕಾಶ್ ರಾಜ್

0
"ನಮಗೊಬ್ಬ ನಾಯಕನಿದ್ದಾನೆ. ಆತ 2019ರಲ್ಲಿ ಕ್ಯಾಮರಾ ಮ್ಯಾನ್‌ಗಳ ಜೊತೆ ಗುಹೆ ಸೇರ್ಕೊಂಡ. ಈಗ ಚುನಾವಣೆ ಬರುವಾಗ ನೀರಿನೊಳಗೆ ಹೋಗಿದ್ದಾನೆ. ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ. ಆತ 20ನೇ ಶತಮಾನದ ದೇಶದ ನಾಯಕನಾ?"...