ದೇಶದ ಆಡಳಿತ ಚುಕ್ಕಾಣಿ ಇರುವ ರಾಜಧಾನಿ ದೆಹಲಿಯಲ್ಲಿ ಮೇ 12ರಂದು ಮತದಾನ ನಡೆಯಲಿದೆ. ಪ್ರತಿ ಸಲ ಅಚ್ಚರಿಯ ಫಲಿತಾಂಶ ನೀಡುವ ದೆಹಲಿಯ 7 ಕ್ಷೇತ್ರಗಳಲ್ಲಿ ಈ ಸಲ ಭಾರೀ ಕುತೂಹಲ ಉಂಟು ಮಾಡಿದೆ. ಮೋದಿ ಅಲೆ, ಕೇಜ್ರಿವಾಲ್ ಕೆಲಸ ಮತ್ತು ರಾಹುಲ್ ವಿಶ್ವಾಸದಲ್ಲಿ ಯಾವುದನ್ನು ಅಲ್ಲಿಯ ಜನ ಕೈ ಹಿಡಿಯುತ್ತಾರೆ ನೋಡಬೇಕಿದೆ.

2014ರಲ್ಲಿ 7ಕ್ಕೆ 7 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಮತ್ತೆ ಅದೇ ವಿಶ್ವಾಸದಲ್ಲಿದೆ. ಬಿಜೆಪಿ ಮಣಿಸಲು ಕಾಂಗ್ರೆಸ್‍ನೊಡನೆ ಹೇಗಾದರೂ ಮಾಡಿ ಮೈತ್ರಿ ಮಾಡಿಕೊಳ್ಳಬೇಕೆಂದು ದೆಹಲಿ ಸಿಎಂ ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲ್ ಪಟ್ಟ ಶ್ರಮ ವ್ಯರ್ಥವಾಗಿದೆ. ಏಕೆಂದರೆ ಕಳೆದ ಚುನಾವಣೆಯಲ್ಲಿ ಎಲ್ಲಾ 7 ಕ್ಷೇತ್ರಗಳಲ್ಲಿ ಆಪ್ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳಲ್ಪಟ್ಟಿತ್ತು. ಕಾಂಗ್ರೆಸ್ ಮತ್ತು ಆಪ್ ನಡುವಿನ ಮತವಿಭಜನೆಯಿಂದಾಗಿ ಬಿಜೆಪಿ ಸ್ವೀಪ್ ಮಾಡಿತ್ತು.

ಆದರೆ ಲೋಕಸಭಾ ಚುನಾವಣೆ ಮುಗಿದ ಕೇವಲ 9 ತಿಂಗಳ ನಂತರ ನಡೆದ ದೆಹಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವೂ 70 ಕ್ಷೇತ್ರಗಳ ಪೈಕಿ 67ನ್ನು ತನ್ನದಾಗಿಸಿಕೊಳ್ಳುವ ಮೂಲಕ ಅಭೂತಪೂರ್ವ ಸಾಧನೆ ಮಾಡಿತ್ತು. ತದನಂತರ ನಡೆದ ಕಾರ್ಪೋರೇಷನ್ ಚುಣಾವಣೆಗಳಲ್ಲಿ ಮತ್ತೆ ಬಿಜೆಪಿ ಮೇಲುಗೈ ಸಾಧಿಸಿತ್ತು. ಈಗಿನ ಲೋಕಸಭಾ ಚುನಾವಣೆಗೆ ಪೂರ್ವ ದಿಲ್ಲಿಯಿಂದ ಬಿಜೆಪಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ದಕ್ಷಿಣದಿಂದ ಮೀನಾಕ್ಷಿ ಲೇಖಿಯವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‍ನಿಂದ ಕಪಿಲ್ ಸಿಬಲ್, ಶೀಲಾ ದೀಕ್ಷಿತ್, ಅಜಯ್ ಮಾಕನ್ ಆಕರ್ಷಣೆಯಾದರೆ ಆಪ್‍ನಿಂದ ದಿಲೀಪ್ ಪಾಂಡೆ, ಅತಿಶಿ ಮರ್ಲೀನಾ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.

ಕಳೆದ 20 ವರ್ಷದ ನಾಲ್ಕು ಚುನವಣೆಯ ಫಲಿತಾಂಶಗಳನ್ನು ನೋಡಿದರೆ ಪೂರ್ತಿ ದೆಹಲಿ ಜನ ಒಂದೇ ರೀತಿ ಯೋಚಿಸುತ್ತಾರೆ ಮತ್ತು ಒಂದೇ ಪಕ್ಷವನ್ನು ಆರಿಸುತ್ತಾರೆ ಎನ್ನುವ ರೀತಿಯ ಮತದಾನ ನಡೆದಿದೆ. 1999ರಲ್ಲಿ 7ಕ್ಕೆ 7ನ್ನು ಬಿಜೆಪಿ ಗೆದ್ದಿತ್ತು. 2004ರಲ್ಲಿ 7ರಲ್ಲಿ 6 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ದಕ್ಷಿಣ ದೆಹಲಿ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ವಿಜಯ್‍ಕುಮಾರ್ ಮಲ್ಹೋತ್ರ 18 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇನ್ನುಳಿದ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದವು. 2009ರ ಚುನಾವಣೆಯಲ್ಲಿ ಎಲ್ಲಾ 7 ಸ್ಥಾನಗಳಲ್ಲಿ ಮತ್ತೆ ಕಾಂಗ್ರೆಸ್ ಗೆಲುವು ಸಾಧಿಸಿತು. 2014ರ ಚುನಾವಣೆಗೆ ಬಂದರೆ 7 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಹೀನಾಯವಾಗಿ ಸೋತು ಮೂರನೇ ಸ್ಥಾನಕ್ಕೆ ಕುಸಿದರೆ ಬಿಜೆಪಿ 7ನ್ನು ಗೆದ್ದಿತ್ತು. ಆಪ್ ಪೈಪೋಟಿ ನೀಡಿದರೂ ಒಂದನ್ನು ಗೆಲ್ಲಲಾಗಲಿಲ್ಲ.

ಈ ಬಾರಿ ಇಲ್ಲಿ ಮತ್ತೆ ಪೈಪೋಟಿ ನಡೆದಿದೆ. 2014ರಲ್ಲಿದ್ದ ಮೋದಿ ಅಲೆ ಈ ಬಾರಿ ಇದೆಯೇ ಇಲ್ಲವೇ ಎಂಬುದನ್ನು ಫಲಿತಾಂಶದ ದಿನ ಮಾತ್ರ ಗಮನಿಸಬಹುದಾಗಿದೆ. ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ದೇಶ-ವಿದೇಶ ಗಮನ ಸೆಳೆಯುವಂತಹ ಒಳ್ಳೆಯ ಕೆಲಸ ಮಾಡಿರುವ ಆಮ್ ಆದ್ಮಿ ಪಕ್ಷಕ್ಕೆ ಜನ ಬೆಂಬಲಿಸುತ್ತಾರಾ ಎಂಬುದೂ ಪರೀಕ್ಷೆಗೊಳಪಡಲಿದೆ. ದೆಹಲಿ ಸರ್ಕಾರಿ ಶಾಲೆಗಳು ಮತ್ತು ಮೊಹಲ್ಲಾ ಕ್ಲಿನಿಕ್‍ಗಳು ಸಾಕಷ್ಟು ಒಳ್ಳೆಯ ಹೆಸರನ್ನು ಪಡೆದಿವೆ. ಇನ್ನು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತಿಸ್‍ಘಡದಲ್ಲಿ ಗೆಲುವಿನ ನಗೆ ಬೀರಿರುವ ಕಾಂಗ್ರೆಸ್ ದೆಹಲಿ ಗೆದ್ದುಕೊಳ್ಳುವ ಹುಮ್ಮಸ್ಸಿನಲ್ಲಿದೆ.

ಆದರೆ ಹಿಂದಿನ ಟ್ರೆಂಡ್ ಗಮನಿಸಿದರೆ ಈ ಬಾರಿ ಮತ್ತೆ 7ಕ್ಕೆ 7ನ್ನು ಬಿಜೆಪಿ ಗೆದ್ದುಕೊಳ್ಳುವಂತೆ ಕಾಣುತ್ತಿದೆ. ಏಕೆಂದರೆ ಕಳೆದ ಸಾರಿ ಅಲ್ಲಿ ಬಿಜೆಪಿ 46.40% ರಷ್ಟು ಮತಗಳನ್ನು ಪಡೆದಿದ್ದರೆ ಆಪ್ ಮತ್ತು ಕಾಂಗ್ರೆಸ್ ಸೇರಿ 32.90% + 15.10% = 48.00%ರಷ್ಟನ್ನು ಮಾತ್ರ ಪಡೆದುಕೊಂಡಿದ್ದವು. ಈ ಬಾರಿ ಈ ಎರಡು ಪಕ್ಷಗಳು ಮೈತ್ರಿ ಕೂಡ ಮಾಡಿಕೊಳ್ಳದೇ ಪ್ರತ್ಯೇಕವಾಗಿ ಚುನಾವಣೆಗೆ ಹೋಗಿರುವುದು ಸಹ ಬಿಜೆಪಿಗೆ ಅನುಕೂಲ ಮಾಡಿಕೊಡುವಂತಿದೆ. ಒಂದು ವೇಳೆ ಇದು ಬದಲಾದರೆ ಮತದಾರರ ಮನಸ್ಥಿತಿ ಕೂಡ ಬದಲಾಗಿದೆ ಎಂತಲೂ ಅರ್ಥೈಸಿಕೊಳ್ಳಬಹುದಾಗಿದೆ. ಇದರ ಹೊರತಾಗಿ ಅಚ್ಚರಿಯ ಫಲಿತಾಂಶ ಬರುವುದಾದಲ್ಲಿ ಮೇ 23ರವರೆಗೆ ಕಾಯಬೇಕು.

ಮೈತ್ರಿ ಏಕೆ ಆಗದಿದ್ದುದಕ್ಕೆ ಕಾಂಗ್ರೆಸ್‍ಗಿಂತ ಆಪ್ ಕಾರಣ ಹೌದೇ?

ಸಾಮಾಜಿಕ ಜಾಲತಾಣಗಳಲ್ಲಿ ಆಮ್‍ಆದ್ಮಿ ಪಕ್ಷವು ಕಾಂಗ್ರೆಸ್‍ಗೆ ಮೈತ್ರಿಯ ಆಹ್ವಾನ ನೀಡುವುದು, ಅದಕ್ಕೆ ಕಾಂಗ್ರೆಸ್‍ನಿಂದ ಯಾವ ಪ್ರತಿಕ್ರಿಯೆಯೂ ಕಾಣದಿರುವುದು ಅಥವಾ ಟಿವಿ ವರದಿಗಾರರಿಗೆ ಶೀಲಾ ದೀಕ್ಷಿತ್ ಮೈತ್ರಿ ಇಲ್ಲ ಎಂದು ಹೇಳುವುದು ಇದನ್ನು ಎಲ್ಲರೂ ನೋಡಿದ್ದಾರೆ. ವಾಸ್ತವವೇನೆಂದರೆ, ಮಾಧ್ಯಮಗಳ ಮೂಲಕ ಪದೇ ಪದೇ ಮೈತ್ರಿಯ ಆಹ್ವಾನ ನೀಡಿದ್ದ ಆಮ್‍ಆದ್ಮಿ ಪಕ್ಷವು ಕಾಂಗ್ರೆಸ್ ನಾಯಕತ್ವದ ಜೊತೆಗೆ ಅಂತಹ ಪ್ರಯತ್ನವನ್ನು ಮಾಡಲಿಲ್ಲವೆಂದು ಮೂಲಗಳು ತಿಳಿಸುತ್ತವೆ. ತಾನು ಬಿಜೆಪಿ ವಿರುದ್ಧದ ಮೈತ್ರಿಗೆ ತುದಿಗಾಲಿನಲ್ಲಿದ್ದೇನೆಂದು ಹೇಳುವುದಕ್ಕೆ ಆಪ್ ಮಾಡಿದ ಪ್ರಯತ್ನ ಎಷ್ಟಿತ್ತೋ, ಅಷ್ಟು ಪ್ರಯತ್ನ ನಿಜಕ್ಕೂ ಕಾಂಗ್ರೆಸ್ ಜೊತೆಗೆ ಮಾತುಕತೆಗೆ ಇರಲಿಲ್ಲವೆಂಬುದು ದೆಹಲಿ ವರ್ತುಲದ ಬಹಳಷ್ಟು ಜನರ ಅಂಬೋಣ.

ಎರಡನೆಯದಾಗಿ, ತನ್ನ ನೆಲೆಯೇ ಇಲ್ಲದ ಇತರ ರಾಜ್ಯಗಳು ಮತ್ತು ದೆಹಲಿಗಳ ಮೈತ್ರಿ ಒಟ್ಟಿಗೇ ಆಗಬೇಕೆಂಬುದು ಆಪ್‍ನ ನಿಲುವಾಗಿತ್ತು. ಆದರೆ, ಕಾಂಗ್ರೆಸ್ ತಮ್ಮದು ರಾಜ್ಯವಾರು ಮೈತ್ರಿಯಾದ್ದರಿಂದ, ದೆಹಲಿಯ ಕುರಿತು ಮಾತ್ರ ಮಾತನಾಡಿ ಎಂದಿತು. ಇದನ್ನೇ ರಾಹುಲ್‍ಗಾಂಧಿ ಟ್ವಿಟ್ಟರ್ ಮೂಲಕ ಹೇಳಿದರು. ಆಪ್‍ಗೆ 4 ಮತ್ತು ಕಾಂಗ್ರೆಸ್‍ಗೆ 3 ಎಂಬುದು ಅವರ ಪ್ರಸ್ತಾಪವಾಗಿತ್ತು. ಇದನ್ನು ಆಪ್ ತಿರಸ್ಕರಿಸಿತ್ತು. ಒಂದು ರೀತಿಯಲ್ಲಿ ಇದು ಹೇಗಿತ್ತೆಂದರೆ ಜೆಡಿಎಸ್ ಪಕ್ಷವು ಕಾಂಗ್ರೆಸ್ ಜೊತೆಗಿನ ಕರ್ನಾಟಕದ ಮೈತ್ರಿಗೆ, ಆಂಧ್ರಪ್ರದೇಶದಲ್ಲೂ ನಾಲ್ಕು ಸೀಟು ಬಿಟ್ಟುಕೊಡುವ ಷರತ್ತು ಹಾಕಿದರೆ ಹೇಗಿರುತ್ತದೋ ಹಾಗೆ. ಒಟ್ಟಾರೆಯಾಗಿ ಮೈತ್ರಿ ಆಗಲಿಲ್ಲ.

ಸರಿಯಾದ ಮೈತ್ರಿ ಆಗಿದ್ದರೆ 7ಕ್ಕೆ 7 ಗೆಲ್ಲಬಹುದಾಗಿದ್ದ ಕಾಂಗ್ರೆಸ್-ಆಪ್ ಪಕ್ಷಗಳು ಈಗ ಹೆಚ್ಚೆಂದರೆ ಒಂದೆರಡನ್ನು ಗೆಲ್ಲಬಹುದು, ಇಲ್ಲವಾದರೆ ಅದೂ ಇಲ್ಲ ಎಂಬ ಪರಿಸ್ಥಿತಿಯನ್ನು ತಂದುಕೊಂಡಿವೆ.

LEAVE A REPLY

Please enter your comment!
Please enter your name here