Homeಚಳವಳಿರಾಯಚೂರು ಘಟನೆ: ಸತ್ಯಶೋಧನಾ ವರದಿಯ ಮುಖ್ಯಾಂಶಗಳನ್ನಾಧರಿಸಿದ ಹಕ್ಕೊತ್ತಾಯಗಳು

ರಾಯಚೂರು ಘಟನೆ: ಸತ್ಯಶೋಧನಾ ವರದಿಯ ಮುಖ್ಯಾಂಶಗಳನ್ನಾಧರಿಸಿದ ಹಕ್ಕೊತ್ತಾಯಗಳು

- Advertisement -
ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆದು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು;
ಪರೋಕ್ಷ ಕಾರಣಗಳಿಗೂ ಪರಿಹಾರಮಾರ್ಗಗಳನ್ನು ಕಂಡುಕೊಳ್ಳಬೇಕು;
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ನಡೆಯದಂತೆ ತಡೆಗಟ್ಟಲು ಬೇಕಾದ ಕ್ರಮಗಳ ಕಡೆಗೆ ಸರ್ಕಾರ ಮುನ್ನಡೆಯಬೇಕು
ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ದುರಂತ ಸಾವು ರಾಜ್ಯದ ಮಹಿಳಾ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಮತ್ತು ಸೂಕ್ಷ್ಮ ಮನಸ್ಸಿನ ನಾಗರೀಕರನ್ನು ಆತಂಕಕ್ಕೆ ತಳ್ಳಿದೆ. ಈ ಬಗ್ಗೆ ಬೆಂಗಳೂರಿನ ‘ಲೈಂಗಿಕ ಹಿಂಸೆ ವಿರೋಧಿ ಜನಚಳುವಳಿ’ಯ ತಂಡ ಮತ್ತು ರಾಯಚೂರಿನ ರಾಜ್ಯ ಮಹಿಳಾ ಒಕ್ಕೂಟ ಹಾಗೂ ಕರ್ನಾಟಕ ಜನಶಕ್ತಿ ಸಂಘಟನೆಗಳು ಜಂಟಿಯಾಗಿ ವಿಸ್ತೃತವಾದ ಸತ್ಯಶೋಧನೆಯನ್ನು 21 ಏಪ್ರಿಲ್ ಶನಿವಾರದಂದು ಕೈಗೊಂಡಿದ್ದವು. ಮುಖ್ಯಾಂಶಗಳನ್ನಾಧರಿಸಿದ ಹಕ್ಕೊತ್ತಾಯಗಳು ಹೀಗಿವೆ.

ಸತ್ಯಶೋಧನೆಯ ತಂಡದಲ್ಲಿ ಹ್ಯೂಮನ್ ರೈಟ್ಸ್ ಲಾ ನೆಟ್‍ವರ್ಕ್, ಮಹಿಳಾ ಮುನ್ನಡೆ, ಕರ್ನಾಟಕ ಜನಶಕ್ತಿ, ರಾಜ್ಯ ಮಹಿಳಾ ಒಕ್ಕೂಟ, ಕರ್ಣಾಟಕ ವಿದ್ಯಾರ್ಥಿ ಸಂಘಟನೆ ಮೊದಲಾದ ಸಂಘಟನೆಗಳಿಗೆ ಸೇರಿದ ವಕೀಲರು, ಮಹಿಳಾ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು, ಶಿಕ್ಷಕಿಯರು ಮತ್ತಿತರ ಕಾಳಜಿಯುಳ್ಳ ನಾಗರೀಕರು ಭಾಗವಹಿಸಿದ್ದರು. ಸತ್ಯಶೋಧನಾ ತಂಡವು, ವಿದ್ಯಾರ್ಥಿನಿಯ ಕುಟುಂಬದ ಸದಸ್ಯರನ್ನು, ವಿದ್ಯಾರ್ಥಿನಿ ಸೇರಿದ್ದ ಸಮುದಾಯದ ಸಂಘಟನೆಯ ಮುಖ್ಯಸ್ಥರನ್ನು, ಆ ವಲಯದ ಇನ್ಸ್‍ಪೆಕ್ಟರ್ ಜನರಲ್ ಅವರನ್ನು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು, ಘಟನೆ ನಡೆದ ಸ್ಥಳದ ಆಸುಪಾಸಿನ ಜನರನ್ನು, ವಿದ್ಯಾರ್ಥಿನಿಯ ಹಿಂದಿನ ತರಗತಿಗಳ ಶಿಕ್ಷಕಿ ಮತ್ತು ಉಪನ್ಯಾಸಕರನ್ನು, ಪತ್ರಕರ್ತರನ್ನು, ಸಾಮಾಜಿಕ ಕಾರ್ಯಕರ್ತರನ್ನು, ಆಕೆ ಈಗ ಹಾಲಿ ಓದುತ್ತಿದ್ದ ಕಾಲೇಜಿನ ಉಪಪ್ರಾಂಶುಪಾಲರನ್ನು, ಮ್ಯಾನೇಜರ್ ಅವರನ್ನು, ಲೈಂಗಿಕ ಹಿಂಸೆ ತಡೆ ಸಮಿತಿಯ ಮುಖ್ಯಸ್ಥರನ್ನು ಹಾಗೂ ವಿದ್ಯಾರ್ಥಿಗಳನ್ನು ಮಾತನಾಡಿಸಿ, ವಿವರವಾದ ಮಾಹಿತಿ ಸಂಗ್ರಹ ನಡೆಸಿದೆ. ಈ ಮಾಹಿತಿಯನ್ನು ಮತ್ತು ಪೂರಕ ವಿವರಗಳನ್ನೊಳಗೊಂಡ ಎಲ್ಲ ಅಂಶಗಳನ್ನು ವಿಸ್ತಾರವಾಗಿ ಗಮನಿಸಿ ವಿಶ್ಲೇಷಿಸಿದಾಗ ಕೆಳಗಿನ ಅಭಿಪ್ರಾಯಗಳನ್ನು ಮುಂದಿಡಬಹುದಾಗಿದೆ.
ಮೊದಲನೇಯದಾಗಿ, ಸತ್ಯಶೋಧನಾ ತಂಡವು ಈ ಘಟನೆಯ ಸಾಮಾಜಿಕ ಆಯಾಮದ ಬಗ್ಗೆ ಹೆಚ್ಚು ಒತ್ತುಕೊಟ್ಟು ಮಾತನಾಡಲು ಬಯಸುತ್ತದೆ. ಈ ಘಟನೆಯಲ್ಲಿ, ವಿದ್ಯಾರ್ಥಿನಿಯದು ಆತ್ಮಹತ್ಯೆಯೋ ಕೊಲೆಯೋ, ಕೊಲೆಗೆ ಮೊದಲು ಅತ್ಯಾಚಾರ ನಡೆದಿತ್ತೋ ಇಲ್ಲವೋ, ನಡೆದಿದ್ದರೆ ಅದು ಸಾಮೂಹಿಕ ಅತ್ಯಾಚಾರವೇ…… ಇವೇ ಮೊದಲಾದ ಸಂಗತಿಗಳ ಬಗ್ಗೆ ಅತಿ ಹೆಚ್ಚು ಕುತೂಹಲ ಪ್ರದರ್ಶಿಸಲಾಗುತ್ತಿದೆ. ಅನೇಕ ವಾಹಿನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಗತಿಗಳ ಸುತ್ತ ಅನೇಕ ಊಹಾಪೋಹಗಳನ್ನೂ ಸೇರಿದ ವೈಭವೀಕೃತ ಮಾಹಿತಿ ಹರಿದಾಡುವ ಮೂಲಕ ನಿಜಸಂಗತಿಗಳು ಮತ್ತು ಹೆಚ್ಚು ಚರ್ಚೆಯಾಗಬೇಕಾದ ವಿಷಯಗಳು ಹಿನ್ನೆಲೆಗೆ ಸರಿಯುತ್ತಿವೆ.  ಪೊಲೀಸ್ ವ್ಯವಸ್ಥೆಯನ್ನೂ ಒಳಗೊಂಡಂತೆ ಸರ್ಕಾರದ ಯಂತ್ರಾಂಗ, ಕಾಲೇಜಿನ ಆಡಳಿತ ಮಂಡಳಿ ಮತ್ತು ಪೋಷಕರೂ ಕೂಡಾ ಗಮನಹರಿಸಬೇಕಾದ ಹಲವು ಬಹುಮುಖ್ಯ ಸಂಗತಿಗಳಿವೆ:
• “ಪ್ರಕರಣವನ್ನು ಆತ್ಮಹತ್ಯೆಯೆಂದು ಈಗಾಗಲೇ ಬಿಂಬಿಸಲಾಗುತ್ತಿದ್ದು, ಅದನ್ನು ಹಾಗೆಂದೇ ತೀರ್ಮಾನಿಸಿ ಮುಚ್ಚಿಹಾಕುವ ಎಲ್ಲ ಸಂಭವವಿದೆ” ಎಂದು ಕುಟುಂಬದ ಸದಸ್ಯರು ಮತ್ತು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಆಕೆ ಮಾನಸಿಕ ಒತ್ತಡದಲ್ಲಿದ್ದಳು ಎಂದು ಮತ್ತು ಆಕೆಯ ಕೆಲವು ವಿಷಯಗಳು ನಪಾಸಾಗಿದ್ದವೆಂದು-ಇವೇ ಮೊದಲಾಗಿ ಸುದ್ದಿ ಹಬ್ಬಿಸಲಾಗುತ್ತಿದೆಯೆಂದು ಹೇಳಿಕೊಂಡಿದ್ದಾರೆ. ಮೊದಲನೇಯದಾಗಿ, ಪ್ರಕರಣದ ಭೀಕರತೆಯನ್ನು ಮತ್ತು ಮುಂದೆಯೂ ಇಂತಹವು ನಡೆಯಬಾರದೆಂಬ ಕಳಕಳಿಯನ್ನು ಮನಸ್ಸಿನಲ್ಲಿಟ್ಟುಕೊಂಡು ತನಿಖಾ ಸಂಸ್ಥೆಗಳು ಘಟನೆಯ ಎಲ್ಲ ಆಯಾಮಗಳನ್ನೂ ತಳಮಟ್ಟದಿಂದ ಶೋಧಿಸುವಂತಹ ನಿಷ್ಪಕ್ಷಪಾತ ತನಿಖೆಯನ್ನು ನಡೆಸಬೇಕೆಂದು ಸತ್ಯಶೋಧನಾ ಸಮಿತಿಯ ಭಾಗವಾಗಿದ್ದ ಎಲ್ಲ ಸಂಘಟನೆಗಳ ಪರವಾಗಿ ಒತ್ತಾಯಿಸುತ್ತೇವೆ.
• ಈ ಪ್ರಕರಣದಲ್ಲಿ ಆರೋಪಿಯಾಗಿ ಬಂಧನಕ್ಕೊಳಗಾಗಿರುವ ಯುವಕ ವಿದ್ಯಾರ್ಥಿನಿ ಮತ್ತು ಕುಟುಂಬಕ್ಕೆ ಹಿಂದೆಯೇ ಪರಿಚಿತನಾಗಿದ್ದು, ಸ್ವಲ್ಪ ಕಾಲದಿಂದ ವಿದ್ಯಾರ್ಥಿನಿ ಮತ್ತು ಆತನ ನಡುವೆ ತಿಕ್ಕಾಟಗಳಿದ್ದು ಒತ್ತಡದ ವಾತಾವರಣ ನಿರ್ಮಾಣವಾಗಿತ್ತು ಎಂದು ಕುಟುಂಬದ ಸದಸ್ಯರು ಮತ್ತು ಆಪ್ತರು ತಿಳಿಸುತ್ತಾರೆ. ಇದರಿಂದ ಇಡೀ ಕುಟುಂಬ ಆತಂಕದಲ್ಲಿದ್ದರೂ ಕೂಡಾ, ಆಸುಪಾಸಿನ ಜನರ ನಡುವೆ ಸ್ವಲ್ಪ ಪ್ರಭಾವಿಗಳಾಗಿದ್ದ ಆರೋಪಿ ಮತ್ತು ಆತನ ತಂಡವನ್ನು ಎದುರು ಹಾಕಿಕೊಂಡು ಈ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳಲು ವಿದ್ಯಾರ್ಥಿನಿಗಾಗಲೀ ಅಥವಾ ಆಕೆಯ ಕುಟುಂಬಕ್ಕಾಗಲೀ ಸಾಧ್ಯವಾಗಿಲ್ಲ. ಅಂದರೆ, ಇಂತಹ ಸಮಸ್ಯೆ ಎದುರಾದಾಗ ವಿಶ್ವಾಸಾರ್ಹವಾದ ನೆರವು ಪೋಲೀಸ್ ಇಲಾಖೆಯಿಂದ ಅಥವಾ ಇತರ ಸರ್ಕಾರಿ ಸಂಸ್ಥೆಗಳಿಂದ ದೊರೆಯುತ್ತದೆಂಬ ಬಗ್ಗೆ ಸಾಮಾನ್ಯ ನಾಗರೀಕರಿಗೆ ನಂಬಿಕೆ ಮೂಡಿಸುವಲ್ಲಿ ಸರ್ಕಾರಿ ಯಂತ್ರಾಂಗ ವಿಫಲವಾಗಿದೆ. ಆದ್ದರಿಂದ, ಜನರಿಗೆ ಸಮಸ್ಯೆ ಬಗೆಹರಿಯುವ ಮತ್ತು ನ್ಯಾಯ ದೊರಕುವ ವಿಶ್ವಾಸವನ್ನು ಸರ್ಕಾರಿ ಇಲಾಖೆಗಳು ಮೂಡಿಸುವ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ.
• ವಿದ್ಯಾರ್ಥಿನಿ ಮನೆಗೆ ಹಿಂತಿರುಗದಿದ್ದಾಗ ಹುಡುಕಾಟದಲ್ಲಿದ್ದ ಕುಟುಂಬ ಸದಸ್ಯರು ಮರುದಿನ ಸ್ಥಳೀಯ ಠಾಣೆಗೆ ದೂರು ನೀಡಲು ಹೋಗಿದ್ದಾಗಿ, ಆದರೆ ಠಾಣೆಯಲ್ಲಿ ದೂರು ಸ್ವೀಕರಿಸದೆ ಹೋದದ್ದಾಗಿ ವಿದ್ಯಾರ್ಥಿನಿಯ ಕುಟುಂಬ ಮತ್ತು ಸಮುದಾಯದ ಜಿಲ್ಲಾ ಮುಖಂಡರು ಮಾಹಿತಿ ನೀಡಿದರು. ಈ ವಿಚಾರ ಒಂದು ವೇಳೆ ಹಾಗೆ ನಡೆದದ್ದೇ ಆದಲ್ಲಿ, ಇದು ಸ್ಥಳೀಯ ಠಾಣಾಧಿಕಾರಿಗಳ ಗಂಭೀರ ಕರ್ತವ್ಯಲೋಪವೇ ಆಗಿರುತ್ತದೆ. ಇದನ್ನು ಪರಿಶೀಲಿಸಿ, ಕರ್ತವ್ಯಲೋಪವಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.
• ವಿದ್ಯಾರ್ಥಿನಿ ಈ ಹಿನ್ನೆಲೆಯಲ್ಲಿ ಮಾನಸಿಕ ಒತ್ತಡದಲ್ಲಿದ್ದಾಗಲೂ, ಕಾಲೇಜಿನ ‘ಆಂತರಿಕ ದೂರು ಸಮಿತಿ’ ಅಥವಾ ಲೈಂಗಿಕ ಹಿಂಸೆ ತಡೆ ಸಮಿತಿಯ ಬಳಿ ತನ್ನ ಸಮಸ್ಯೆಯನ್ನು ಹಂಚಿಕೊಂಡಿಲ್ಲ. ಕಾರಣ, ಈ ದೂರು ಸಮಿತಿಯ ಕಾರ್ಯವ್ಯಾಪ್ತಿ ಕಾಲೇಜಿನ ಒಳಗಿನ ಮತ್ತು ಹೊರಗಿನ ಲೈಂಗಿಕ ದೌರ್ಜನ್ಯದ ಪರಿಸ್ಥಿತಿಗಳಲ್ಲಿ ಮಧ್ಯಪ್ರವೇಶಿಸುವುದನ್ನೂ ಒಳಗೊಂಡಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ವ್ಯಾಪಕ ಅರಿವು ಮೂಡಿಸುವ ಕೆಲಸ ನಡೆದಿಲ್ಲ ಎಂಬುದು ಸತ್ಯಶೋಧನಾ ಸಮಿತಿಯ ಗಮನಕ್ಕೆ ಬಂದಿದೆ. ಅಂದರೆ, ಕಾಲೇಜಿನಲ್ಲಿ ದೂರು ಸಮಿತಿಯ ರಚನೆ ಮಾತ್ರವಲ್ಲದೆ ಅದರ ನೆರವು ಪಡೆದುಕೊಳ್ಳಲು ಅಗತ್ಯವಿರುವ ಮಾಹಿತಿಯನ್ನು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ನೀಡುವುದು ಕೂಡಾ ಅತ್ಯಗತ್ಯವಾಗಿದ್ದು, ಆ ಕೆಲಸ ನಡೆದಿಲ್ಲ. ಆದ್ದರಿಂದ, ವಿದ್ಯಾರ್ಥಿನಿ ತನ್ನ ಸಮಸ್ಯೆಯನ್ನು ಮೊದಲೇ ಹಂಚಿಕೊಂಡು ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗದೆ ಹೋಗಿರಬಹುದು. ಆದ್ದರಿಂದ, ವಿದ್ಯಾರ್ಥಿನಿಯ ಶಿಕ್ಷಣ ಸಂಸ್ಥೆ ಮಾತ್ರವಲ್ಲದೆ ರಾಜ್ಯಾದ್ಯಂತ ಎಲ್ಲ ಶಾಲಾಕಾಲೇಜುಗಳಲ್ಲಿ ‘ಲೈಂಗಿಕ ಹಿಂಸೆ ತಡೆ ಸಮಿತಿ’ ಇರುವ ಕುರಿತು ಪ್ರತಿ ವಿದ್ಯಾರ್ಥಿ ಮತ್ತು ಉದ್ಯೋಗಿಗಳಿಗೆ ಮಾಹಿತಿ ಇರುವಂತೆ ಪ್ರಚಾರ ನೀಡುವ ಅಗತ್ಯವಿದೆ. ಹಾಗೆಯೇ ಜಿಲ್ಲಾ ಮಟ್ಟದ ಸಮಿತಿಗಳ ಬಗ್ಗೆಯೂ ಪ್ರಚಾರ ನೀಡುವ ಅಗತ್ಯವಿದೆ.
• ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು (ಕೊಲೆ?) ಸಂಭವಿಸಿರುವ ಪ್ರದೇಶ ಅತ್ಯಂತ ನಿರ್ಜನ ಪ್ರದೇಶವಾಗಿದೆ. ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ನೀಡಿದ ಖಚಿತವಾದ ಮಾಹಿತಿಯ ಪ್ರಕಾರ, ಎರಡು ವರ್ಷಗಳ ಹಿಂದೆ, ಇದೇ ವಿದ್ಯಾಸಂಸ್ಥೆಯ ನರ್ಸಿಂಗ್ ಕಾಲೇಜಿಗೆ ಸೇರಿದ್ದ ವಿದ್ಯಾರ್ಥಿನಿಯೊಬ್ಬಳನ್ನೂ ಕೂಡಾ ಇದೇ ಸ್ಥಳದ ಆಸುಪಾಸಿನಲ್ಲಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಇಂತಹ ಇನ್ನೂ ಕೆಲವು ಪ್ರಕರಣಗಳು ನಿರ್ಜನವಾಗಿರುವ ಆ ಪ್ರದೇಶದಲ್ಲಿ ನಡೆದಿದ್ದರೂ ಕೂಡಾ, ಅಗತ್ಯವಿರುವಷ್ಟು ಪ್ರಮಾಣದ ಸುರಕ್ಷತಾ ಕ್ರಮಗಳನ್ನು ಕೈಗೊಂಡದ್ದು ಕಂಡುಬರುವುದಿಲ್ಲ. ಈ ಪ್ರಕರಣ ನಡೆದ ಸಂದರ್ಭದಲ್ಲೂ, ವಿದ್ಯಾರ್ಥಿನಿ ಕಾಣೆಯಾದ ಮೂರನೇ ದಿನ ಆ ಸ್ಥಳದಲ್ಲಿ ಮೃತದೇಹವನ್ನು ಪತ್ತೆ ಮಾಡಲಾಗಿದೆ ಎಂದರೆ ಎಷ್ಟು ಮಟ್ಟಿಗೆ ಅಲ್ಲಿ ಜನಸಂಚಾರವಿಲ್ಲ ಮತ್ತು ಯಾವ ಪೊಲೀಸ್ ಪೆಟ್ರೋಲಿಂಗ್ ಸಹಾ ನಡೆಯುತ್ತಿಲ್ಲ ಎಂಬುದನ್ನು ಗುರುತಿಸಬಹುದು.
ಬಹಳ ದೊಡ್ಡ ವಿದ್ಯಾಸಂಸ್ಥೆಯಾಗಿರುವ ಸದರಿ ಸಂಸ್ಥೆಯ ಕ್ಯಾಂಪಸ್ಸಿನ ಹಿಂಭಾಗದಲ್ಲೇ ಈ ನಿರ್ಜನ ಪ್ರದೇಶವಿದ್ದು, ಬೀದಿದೀಪಗಳೂ ಕೂಡಾ ಸರಿಯಾಗಿಲ್ಲದ್ದನ್ನು ಸ್ಥಳಪರಿಶೀಲನೆಯ ಸಂದರ್ಭದಲ್ಲಿ ಸತ್ಯಶೋಧನಾ ಸಮಿತಿ ಗಮನಿಸಿದೆ. ಸತ್ಯಶೋಧನಾ ಸಮಿತಿ ಸ್ಥಳಕ್ಕೆ ಬಂದದ್ದನ್ನು ಗಮನಿಸಿ ಸ್ವಯಂಪ್ರೇರಣೆಯಿಂದ ಬಂದು ಮಾತನಾಡಿದ ಸ್ಥಳೀಯ ನಾಗರೀಕರೂ ಕೂಡಾ ಈ ಸ್ಥಳ ಅಪಾಯಕಾರಿಯಾಗಿದೆ ಮತ್ತು ಅಗತ್ಯವಿರುವಷ್ಟು ಸುರಕ್ಷತಾ ವ್ಯವಸ್ಥೆ ಅಲ್ಲಿ ಇಲ್ಲ ಎಂಬ ಹೇಳಿಕೆ ನೀಡಿದರು.
ಈ ಬಗೆಯ ನಿರ್ಲಕ್ಷ್ಯವೂ ಕೂಡಾ ವಿದ್ಯಾರ್ಥಿನಿಯ ಸಾವಿಗೆ ಕಾರಣವಾಗಿರುತ್ತದೆ.
• ಜಿಲ್ಲಾಡಳಿತ ಮತ್ತು ಜಿಲ್ಲಾ ಲೈಂಗಿಕ ದೌರ್ಜನ್ಯ ತಡೆ ಸಮಿತಿಯ ವತಿಯಿಂದ ‘ಲೈಂಗಿಕ ಕಿರುಕುಳ/ದೌರ್ಜನ್ಯ’ಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ವ್ಯಾಪಕ ಅರಿವಿನ ಕಾರ್ಯಕ್ರಮಗಳನ್ನು ನಡೆಸುವ, ಈ ಕುರಿತ ‘ಹೆಲ್ಪ್‍ಲೈನ್ ನಂಬರ್’ ಕುರಿತ ಮಾಹಿತಿ ನೀಡುವ ಪೋಸ್ಟರ್‍ಗಳು ಮತ್ತು ಸೈನ್‍ಬೋರ್ಡ್‍ಗಳನ್ನು ಅಳವಡಿಸುವ ತುರ್ತು ಅಗತ್ಯವಿದೆ.
• ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ತನಿಖೆಯು ಆಳವಾಗಿಯೂ, ನಿಷ್ಪಕ್ಷಪಾತವಾಗಿಯೂ ನಡೆದು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು; ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ದೊರಕಬೇಕು; ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯುವುದನ್ನು ಮೊದಲೇ ತಡೆಗಟ್ಟಲು ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸರ್ಕಾರ ಹೆಚ್ಚಿನ ಮಹತ್ವ ನೀಡಬೇಕು.
ಈ ಮೇಲಿನ ಅಂಶಗಳ ಆಧಾರದ ಈ ಪತ್ರಿಕಾ ಹೇಳಿಕೆಯನ್ನು ದಯವಿಟ್ಟು ಪ್ರಕಟಿಸುವ ಮೂಲಕ ಈ ರೀತಿಯ ದೌರ್ಜನ್ಯಗಳ ತಡೆಯುವ ಪ್ರಕ್ರಿಯೆಗೆ ಮಾಧ್ಯಮಗಳು ದಯವಿಟ್ಟು ಕೈ ಜೋಡಿಸಬೇಕೆಂದು ಮನವಿ ಮಾಡುತ್ತೇವೆ.
ಧನ್ಯವಾದಗಳೊಡನೆ
ಇಂತಿ ವಿಶ್ವಾಸಿಗಳು
ಗೌರಿ, ಮಲ್ಲಿಗೆ (ಸತ್ಯಶೋಧನಾ ತಂಡದ ಪರವಾಗಿ)
ಮಹಿಳಾ ಮುನ್ನಡೆ, ಕರ್ನಾಟಕ ಜನಶಕ್ತಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆ.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಥುರಾ ಭೂ ವಿವಾದ: ಫೆಬ್ರವರಿ 29ರಂದು ಅಲಹಾಬಾದ್ ಹೈಕೋರ್ಟಿನಲ್ಲಿ ವಿಚಾರಣೆ

0
ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಹೂಡಿರುವ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಫೆಬ್ರವರಿ 29ಕ್ಕೆ ನಿಗದಿಪಡಿಸಿದೆ. ಶಾಹಿ ಈದ್ಗಾ ಇಂತೇಜಾಮಿಯಾ ಸಮಿತಿಯು ಕತ್ರ...