Homeಮುಖಪುಟಎರಡು ಈರುಳ್ಳಿ ದೋಸೆ ಮತ್ತು ಈರುಳ್ಳಿ ಬೆಳೆದ ರೈತರ ಪಾಡು : ಈರುಳ್ಳಿ ಬೆಲೆ ಏರಿಕೆಗೆ...

ಎರಡು ಈರುಳ್ಳಿ ದೋಸೆ ಮತ್ತು ಈರುಳ್ಳಿ ಬೆಳೆದ ರೈತರ ಪಾಡು : ಈರುಳ್ಳಿ ಬೆಲೆ ಏರಿಕೆಗೆ ಕಾರಣವೇನು? ಲಾಭ ಯಾರಿಗೆ?

- Advertisement -
- Advertisement -

ಎರಡು ಈರುಳ್ಳಿ ದೋಸೆ ಕೊಡಿ.
ಇಲ್ಲಾ ಸರ್, ಈರುಳ್ಳಿ ದೋಸೆ ಮಾಡೋದು ಬಿಟ್ಟು ವಾರದ ಮೇಲಾಯ್ತು. ಕೆಜಿ ಈರುಳ್ಳಿ ಬೆಲೆ 180 ರೂಪಾಯಿ ಆದ್ರೆ ಹೇಗೆ ಮಾಡೋದು ಸರ್, ನಾವು 40 ರೂಪಾಯಿಗೆ ಒಂದು ಈರುಳ್ಳಿ ದೋಸೆ ಕೊಡ್ತಿದ್ವಿ. ಈಗ ಅದು ಕೊಡೋಕಾಗ್ದೆ ನಿಲ್ಲಿಸಿ ಬಿಟ್ಟಿದ್ವಿ ಸರ್. ಎಂದು ಹೋಟೆಲ್ ಮಾಲಿಕರೊಬ್ಬರು ಹೇಳಿದಾಗ ಆ ಗ್ರಾಹಕರು ಬೇರೆ ಆರ್ಡರ್ ಮಾಡಿದರು.

ಒಂದು ಕೆಜಿ ಈರುಳ್ಳಿ ಎಷ್ಟಪ್ಪ?
ಇದು 140, ಅದು 160, ನಿಮಗೆ ಯಾವುದು ಬೇಕು ಹೇಳಿ ಸಾರ್?
ಇಲ್ಲ, ರೇಟ್ ಏನಿದೆ ಅಂತ ಕೇಳ್ದೆ ಅಷ್ಟೇ ಅಂದ್ರು ಆ ಹಿರಿಯರು.

ಈ ಎರಡು ಘಟನೆಗಳನ್ನುಪ್ರಸ್ತಾಪಿಸಲು ಕಾರಣವಿದೆ. ಮೊದಲನೆಯದು ಈರುಳ್ಳಿ ದೋಸೆ ತಿನ್ನಲು ಬಯಸುವವರಿಗೆ  ಆ ಹೋಟೆಲ್ ನಲ್ಲಿ ಅದು ಸಿಗುತ್ತಿಲ್ಲ. ನಿತ್ಯವೂ ಅಲ್ಲಿಗೆ ಬಂದು ಈರುಳ್ಳಿ ದೋಸೆ ತಿನ್ನುತ್ತಿದ್ದವರಿಗೆ ನಿರಾಸೆಯಾಗಿದೆ. ಎರಡನೆಯದು ಸಾಂಬಾರು ಮಾಡಲು ಈರುಳ್ಳಿ ಬೇಕಾಗಿರುವವರು ದುಪ್ಪಟ್ಟು-ಮುಪ್ಪಟ್ಟು ದರ ಏರಿಕೆಯಾಗಿರುವುದರಿಂದ ಈರುಳ್ಳಿ ದರ ಕೇಳಿ ಮುಂದುಕ್ಕೆ ಹೋಗುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಇದು ತುಮಕೂರಿನ ಕತೆ ಮಾತ್ರವಲ್ಲ. ಇಡೀ ದೇಶದ ನೋವುಗಳ ಕಥನ.. ಸಾಂಬರ್, ಒಗ್ಗರಣೆ ಮೊದಲಾದವುಗಳಿಗೆ ಈರುಳ್ಳಿ ಹಾಕದೆ ರುಚಿ ಹತ್ತುವುದಿಲ್ಲ. ಈರುಳ್ಳಿ ಕೊಳ್ಳೋಣ ಎಂದರೆ ಅದು ಕೈಗೆಟಕುತ್ತಿಲ್ಲ. ಈ ಎರಡೂ ಸಂಕಟಗಳನ್ನು ಬಹುಜನರು ಅನುಭವಿಸಬೇಕಾಗಿದೆ.

ಬಹುಜನರು ಬಳಸುವ ಈರುಳ್ಳಿ ಬೆಲೆ ಗನನಕ್ಕೇರಿದೆ. ಏರುತ್ತಲೇ ಇದೆ. ಕಳೆದ ಒಂದು ತಿಂಗಳಿಂದಲೂ ಈರುಳ್ಳಿ ಕೊಳ್ಳುವವರ ಸಂಖ್ಯೆ ಭಾರೀ ಇಳಿಮುಖವಾಗಿದೆ. ಸಂಜೆ ಮುಂಜಾನೆ ಕನಿಷ್ಠ ಐದಾರು ಮಂದಿ ಮಂಡಿಯಲ್ಲಿ ಈರುಳ್ಳಿ ಆರಿಸುತ್ತಿದದ್ದವರು ಈಗ ಒಬ್ಬರೂ ಇಲ್ಲದೆ ಈರುಳ್ಳಿ ವ್ಯಾಪಾರಿಗಳು ಅಂಗಡಿಯಲ್ಲಿ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಆದರೆ ಹಿಂದೆ 10 ಕೆಜಿ ಮಾರಿದರೆ ಸಿಗುತ್ತಿದ್ದ ಲಾಭ ಈಗ 5 ಕೆಜಿ ಈರುಳ್ಳಿಗೇ ಸಿಗುತ್ತಿದೆ. ಈರುಳ್ಳಿ ಬೆಲೆ ಹೆಚ್ಚಾದ ಕಾರಣಕ್ಕೆ ಅವುಗಳಿಗೆ ಚಿನ್ನದ ಬೆಲೆ ಬಂದಿದೆ. ಇದೇ ಕಾರಣಕ್ಕಾಗಿಯೇ ಈರುಳ್ಳಿ ಸಾಗಣೆ ಮಾಡುವವರು ಲಾರಿ ಸಮೇತ ಪರಾರಿಯಾಗಿರುವುದು ಕೂಡ ವರದಿಯಾಗಿದೆ. ಈರುಳ್ಳಿ ಬೆಲೆ ಹೆಚ್ಚಾಗುತ್ತ ಹೋದಂತೆ ಸಾಮಾಜಿ ಜಾಲತಾಣದಲ್ಲಿ ಅದರ ಬಗ್ಗೆ ವಿವಿಧ ರೀತಿಯ ಸಣ್ಣ ಕತೆಗಳೂ ಹುಟ್ಟಿಕೊಂಡು ಸದ್ದು ಮಾಡುತ್ತಿವೆ. ಕೆಲವರು ಈರುಳ್ಳಿ ಸರವನ್ನು ಕೊರಳಿಗೆ ಹಾಕಿಕೊಂಡು ಕಣ್ಣೀರು ಕರೆಯುತ್ತ ವ್ಯಂಗ್ಯ ಮಾಡಿದವರೂ ಉಂಟು.

ಈಗ ಈರುಳ್ಳಿ ದರ ಹೆಚ್ಚಳವಾಗಿರುವುದರಿಂದ ರೈತರಿಗೇನಾದರೂ ಪ್ರಯೋಜನವಾಗುತ್ತದೆಯೇ ಎಂದು ಪ್ರಶ್ನಿಕೊಂಡರೆ ಅದಕ್ಕೆ ಉತ್ತರ ಶೂನ್ಯ. ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ಮತ್ತು ಹೊಸದುರ್ಗ ತಾಲೂಕುಗಳಲ್ಲಿ ಹೆಚ್ಚು ಈರುಳ್ಳಿ ಬೆಳೆಯುತ್ತಾರೆ. ಒಬ್ಬೊಬ್ಬ ರೈತರು ಕನಿಷ್ಠ 800 -1000 ಕ್ವಿಂಟಾಲ್ ಈರುಳ್ಳಿ ಬೆಳೆಯುತ್ತಾರೆ. ಆದರೆ ಈಗ ರೈತರ ಬಳಿ ಈರುಳ್ಳಿ ದಾಸ್ತಾನು ಇಲ್ಲ. ಅವರೆಲ್ಲರೂ ಐದಾರು ತಿಂಗಳ ಹಿಂದೆಯೇ ಬೆಳೆದು ಕೆಜಿ ಈರುಳ್ಳಿಗೆ ಕೇವಲ 20-30 ರೂಪಾಯಿಗೆ ಮಾರಾಟ ಮಾಡಿದ್ದಾರೆ. ಈಗ ಈರುಳ್ಳಿ ಬೆಲೆ ದುಪ್ಪಟ್ಟು ಏರಿಕೆಯಾಗಿದ್ದರೂ ರೈತರಿಗೇನೂ ಲಾಭವಿಲ್ಲ.

ಮಲ್ಲಯ್ಯ, ಶ್ರವಣಗೆರೆ

ಹಿರಿಯೂರು ತಾಲೂಕು ಶ್ರವಣಗೆರೆಯ ರೈತ ಮಲ್ಲಯ್ಯ ಹೇಳುವುದು ಹೀಗೆ: ಈ ಭಾಗದಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯುತ್ತಾರೆ. ಆದರೆ ಈರುಳ್ಳಿ ಬೆಳೆ ಕೈಗೆ ಬಂದಿದ್ದಾಗ ಬೆಲೆ ಇರಲಿಲ್ಲ. ಈಗ ಬೆಲೆಯೇನೋ ಇದೆ. ಆದರೆ ರೈತರ ಕೈಯಲ್ಲಿ ಈರುಳ್ಳಿ ಇಲ್ಲ. ಈರುಳ್ಳಿ ಬಂಡವಾಳಿಗರ ಗೋಡೋನ್ ನಲ್ಲಿ ದಾಸ್ತಾನು ಮಾಡಲಾಗಿದೆ. ಈಗೇನಿದ್ದರೂ ಅವರಿಗೆ ಲಾಭ. ಗೋಡೋನ್‌ಗಳಲ್ಲಿ ಸ್ಟಾಕ್ ಹಾಕಿಕೊಂಡಿರುವವರು 10 ಪಟ್ಟು ಲಾಭ ಮಾಡುತ್ತಿದ್ದಾರೆ. ಈರುಳ್ಳಿಯನ್ನು ಸಂಗ್ರಹಿಸಿಟ್ಟಿರುವ ಮಾಲೀಕರು ಈರುಳ್ಳಿಯ ಕೃತಕ ಕೊರತೆ ಉಂಟು ಮಾಡಿದ್ದಾರೆ. ಸರ್ಕಾರ ಇಂಥವರನ್ನು ಗುರುತಿಸಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮಧ್ಯವರ್ತಿಗಳು ಮತ್ತು ಮಾಲಿಕರೇ ಹಣ ಮಾಡುತ್ತಾರೆ. ಬೆಲೆ ಏರಿಕೆಯಾಗಿರುವುದನ್ನು ನೋಡಿ ಈಗ ರೈತರು ಮತ್ತೆ ಈರುಳ್ಳಿ ಬೀಜ ಬಿತ್ತನೆ ಮಾಡಿದ್ದಾರೆ. ಈ ಈರುಳ್ಳಿ ಮಾರುಕಟ್ಟೆಗೆ ಬರುವ ಹೊತ್ತಿಗೆ ಬೆಲೆ ಕುಸಿದು ಹೋಗಿರುತ್ತದೆ. ಹೀಗಾಗಿ ರೈತರು ಹಾಕಿರುವ ಬಂಡವಾಳವೂ ಬಾರದೆ, ಮಾಡಿರುವ ಸಾಲವನ್ನೂ ಕಟ್ಟಲಾಗದೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಇದನ್ನು ತಪ್ಪಿಸಲು ವೈಜ್ಞಾನಿಕ ಬೆಲೆ ಪದ್ದತಿ ಜಾರಿಗೆ ತರಬೇಕು.

ಕೊಪ್ಪಳ ಜಿಲ್ಲೆಯ 800 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಪ್ರವಾಹಕ್ಕೆ ಬಹುತೇಕ ಬೆಳೆ ಕೊಚ್ಚಿ ಹೋಗಿದೆ. ಈರುಳ್ಳಿ ಬೆಳೆಯ ಹೊಲಕ್ಕೆ ನೀರು ಹರಿದು ಬೆಳೆಯೆಲ್ಲಾ ಕೊಳೆತು ಹೋಗಿದೆ. ಇದರ ನಡುವೆಯೂ ಕೆಲವು ರೈತರಿಗೆ ಬಂಪರ್ ಬೆಳೆ ಬಂದಿದೆ. ಕೊಪ್ಪಳದ ರೈತರೊಬ್ಬರು ಮೂರು ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿಗೆ 6 ಲಕ್ಷ ರೂಪಾಯಿ ಆದಾಯ ಬಂದಿದೆ. ರೇಟ್ ಐತಿ, ಈ ವರ್ಷ ಬೆಳೆಯೂ ಚನ್ನಾಗಿದೆ. ಒಂದಷ್ಟು ಕೊಳೆತೂ ಹೋಗಿದೆ. ಆದರೆ ಇಲ್ಲಿನ ರೈತರು ಬೆಳೆದ ಈರುಳ್ಳಿಯನ್ನು ಗುಲ್ಬರ್ಗಾ ಇಲ್ಲವೇ ಬೆಂಗಳೂರು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಇದರಿಂದ ಈರುಳ್ಳಿ ಸಾಗಾಣಿಕಾ ವೆಚ್ಚ ಹೆಚ್ಚಾಗುತ್ತದೆ. ಈ ಜಿಲ್ಲಾ ಕೇಂದ್ರದಲ್ಲೇ ಈರುಳ್ಳಿ ಮಾರುಕಟ್ಟೆ ಇದ್ದರೆ ಹೆಚ್ಚು ಅನುಕೂಲವಾಗುತ್ತದೆ. ರೈತರಿಗೆ ಖರ್ಚು ತಪ್ಪುತ್ತದೆ. ಒಂದಿಷ್ಟು ಲಾಭವೂ ಬರುತ್ತದೆ. ಹಾಗಾಗಿ ಸರ್ಕಾರ ಈರುಳ್ಳಿ ಬೆಳೆಗೆ ಹೆಸರಾಗಿರುವ ಕೊಪ್ಪಳದಲ್ಲಿ ಮಾರುಕಟ್ಟೆ ಮಾಡಿದರೆ ಒಳ್ಳೆಯದು ಎನ್ನುತ್ತಾರೆ ರೈತ ರಾಜಾಸಾಬ್.

ಈರುಳ್ಳಿ ಬೆಲೆ ಉತ್ತರ ಭಾರತ ನಗರಗಳಲ್ಲಿ ಮತ್ತಷ್ಟು ಏರಿಕೆಯಾಗಿದೆ. ಅಲ್ಲಿ 200ರ ಗಡಿ ದಾಟಿದೆ. ಪರಿಸ್ಥಿತಿ ಹೀಗಿದ್ದರೂ ಕೇಂದ್ರ ಸರ್ಕಾರ ಜನರ ಈ ಸಮಸ್ಯೆಯನ್ನು ನೀಗಿಸಲು ಯಾವುದೇ ಕ್ರಮಕ್ಕೆ ಮುಂದಾದಂತೆ ಕಾಣುತ್ತಿಲ್ಲ. ಬದಲಿಗೆ ಜವಾಬ್ದಾರಿಯುತ ಕೇಂದ್ರ ಸಚಿವರು ನಾವು ನಮ್ಮ ಮನೆಯಲ್ಲಿ ಈರುಳ್ಳಿಯನ್ನೇ ಬಳಸುವುದಿಲ್ಲ. ನಾವು ಈರುಳ್ಳಿ ತಿನ್ನುವ ಕುಟುಂಬದಿಂದ ಬಂದಿಲ್ಲ, ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಅಪಹಾಸ್ಯ ಮಾತನಾಡುತ್ತಿದ್ದಾರೆ. ಕೇಂದ್ರ ಸಚಿವರ ಈ ಮಾತುಗಳಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು, ಫೇಸ್ ಬುಕ್ಕಿಗರು ಸರಿಯಾಗೇ ತರಾಟೆಗೆ ತೆಗೆದುಕೊಂಡಿದ್ದಾರೆ. ಬಹುಜನರು ಬಳಸುವ ಈರುಳ್ಳಿಯ ಬಗ್ಗೆ ಹೀಗೆ ಮಾತನಾಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕುವುದನ್ನು ಮುಂದೂಡುತ್ತಿದ್ದಂತೆಯೇ ದೇಶದಲ್ಲಿ ದಿಢೀರ್ ಈರುಳ್ಳಿ ಬೆಲೆ ಏರಿಕೆಯಾಗಿದೆ. ಹೀಗೆ ಈರುಳ್ಳಿಯ ಕೃತಕ ಕೊರತೆ ಮತ್ತು ಗಗನಮುಖಿ ಬೆಲೆ ಏರಿಕೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿರುವ ಸಾಧ್ಯತೆ ಹೆಚ್ಚಾಗಿದೆ. ದೇಶೀಯ ಮಾರುಕಟ್ಟೆಯನ್ನು ಮಧ್ಯವರ್ತಿಗಳು ಮತ್ತು ಮಾಲೀಕರು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಮಾಡಿರುವ ತಂತ್ರದ ಭಾಗವಾಗಿಯೂ ಇದು ಕಂಡು ಬರುತ್ತಿದೆ. ಈರುಳ್ಳಿ ಬೆಲೆ ಹೆಚ್ಚಾದಾಗಲೆಲ್ಲ ಆಡಳಿತದಲ್ಲಿರುವ ಹಲವು ಸರ್ಕಾರ ಬಿದ್ದುಹೋಗಿರುವ ಉದಾಹರಣೆಯೂ ನಮ್ಮ ಮುಂದಿದೆ. ರೈತರು ಮತ್ತು ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿರುವ ಸನ್ನಿವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜನರ ನೆರವಿಗೆ ಬರಬೇಕಾಗಿದೆ. ಮಧ್ಯವರ್ತಿಗಳು ಮತ್ತು ಮಾಲೀಕರ ಲಾಭಕೋರತನವನ್ನು ತಡೆದು ಗ್ರಾಹಕರ ಹಿತಕಾಯಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...