Homeಕರ್ನಾಟಕಯಾದಗಿರಿ | ಪಿಎಸ್‌ಐ ಪರಶುರಾಮ್ ಹಠಾತ್ ಸಾವು : ಶಾಸಕ ಚನ್ನಾರೆಡ್ಡಿ ವಿರುದ್ಧ ಗಂಭೀರ ಆರೋಪ...

ಯಾದಗಿರಿ | ಪಿಎಸ್‌ಐ ಪರಶುರಾಮ್ ಹಠಾತ್ ಸಾವು : ಶಾಸಕ ಚನ್ನಾರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದ ಪತ್ನಿ

- Advertisement -
- Advertisement -

ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗಿದ್ದು, ಆದರೆ ಅವರ ಪತ್ನಿ ಈ ಸಂಬಂಧ ಹಲವು ಆರೋಪಗಳನ್ನು ಮಾಡಿದ್ದಾರೆ.

ಪರಶುರಾಮ ಅವರು ಸೈಬರ್ ಕ್ರೈಂ ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದರು. ಮೊನ್ನೆ ನಗರ ಠಾಣೆಯಲ್ಲಿ ಬೀಳ್ಕೊಡುಗೆ ಪಡೆದಿದ್ದರು. ನಿನ್ನೆ ಸಂಜೆ ಪೊಲೀಸ್ ಕ್ವಾಟ್ರಸ್‌ನ ನಿವಾಸದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಆದರೆ, ಈ ಪ್ರಕರಣವು ಈಗ ರಾಜ್ಯದ ಗಮನ ಸೆಳೆಯುತ್ತಿದ್ದು, ಹೊಸ ತಿರುವು ಪಡೆದುಕೊಂಡಿದೆ. “ನನ್ನ ಪತಿ, ಪಿಎಸ್‌ಐ ಪರಶುರಾಮ ಅವರ ಸಾವಿಗೆ ಯಾದಗಿರಿ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಮಗ ಸನ್ನೇ ಗೌಡ ಕಾರಣ” ಎಂದು ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಅವರಿಗೆ ದೂರು ಸಲ್ಲಿಸಿದ್ದು, ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ.

“ಪೋಸ್ಟಿಂಗ್‌ಗಾಗಿ ಲಕ್ಷ ಲಕ್ಷ ಹಣಕ್ಕೆ ಯಾದಗಿರಿ ಕಾಂಗ್ರೆಸ್‌ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಬೇಡಿಕೆ ಇಟ್ಟಿದ್ದರು. ಬಳಿಕ ನಿಯಮ ಬಾಹಿರವಾಗಿ ವರ್ಗಾವಣೆ ಮಾಡಿದ್ದರಿಂದ ಪರಶುರಾಮ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಇದರಿಂದ ಅವರಿಗೆ ಹೃದಯಾಘಾತವಾಗಿದೆ. ಶಾಸಕರು ಮತ್ತು ಅವರ ಮಗ ವರ್ಗಾವಣೆಗೆ 30-40 ಲಕ್ಷ ರೂ. ಕೇಳಿದ್ದರು. ಅವರ ವಿರುದ್ದ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು. ಜಾತಿ ಮತ್ತು ಹಣಕ್ಕಾಗಿ ನಿಯತ್ತಿನ ಅಧಿಕಾರಿಯ ಸಾವಿಗೆ ಕಾರಣರಾಗಿದ್ದಾರೆ” ಎಂದು ಪತ್ನಿ ಶ್ವೇತಾ ಆರೋಪಿಸಿದ್ದಾರೆ.

“ಯಾದಗಿರಿ ನಗರ ಠಾಣೆಗೆ ಪೋಸ್ಟಿಂಗ್‌ಗಾಗಿ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ 30 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ, ಪರಶುರಾಮ 30 ಲಕ್ಷ ರೂ. ನೀಡಿ ಯಾದಗಿರಿ ನಗರಕ್ಕೆ ವರ್ಗಾವಣೆಯಾಗಿದ್ದರು. ಆದರೆ, ಒಂದು ವರ್ಷದ ಪೂರೈಸುವ ಮುನ್ನವೇ ಅವರನ್ನು ಮತ್ತೆ ಯಾದಗಿರಿ ಸೈಬರ್ ಕ್ರೈಂ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಅವರು ಒತ್ತಡಕ್ಕೆ ಒಳಗಾಗಿದ್ದರು. ಸಾಲದ ಸುಳಿಗೆ ಸಿಲುಕಿದ್ದರು. ಶುಕ್ರವಾರ ಸಚಿವ ಪ್ರಿಯಾಂಕ್ ಖರ್ಗೆ ಜೊತೆಗೆ ಪೋನ್‌ನಲ್ಲಿ ಮಾತನಾಡಿದ್ದರು” ಎಂದು ಕುಟುಂಬಸ್ಥರು ಹೇಳಿದ್ದಾರೆ.

ದಲಿತ ಸಂಘಟನೆಗಳಿಂದ ಪ್ರತಿಭಟನೆ

ತಪ್ಪಿತಸ್ಥ ಶಾಸಕ ಚನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಮಗ ಸನ್ನೇಗೌಡರನ್ನು ಕೂಡಲೇ ಬಂಧಿಸುವಂತೆ ವಿವಿಧ ದಲಿತ ಪರ ಸಂಘಟನೆಗಳು ಮತ್ತು ಮೃತ ಪಿಎಸ್ಐ ಪರಶುರಾಮ ಕುಟುಂಬಸ್ಥರು ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಯಾದಗಿರಿಯಲ್ಲಿ ಪಿಎಸ್ಐ ಪರಶುರಾಮ್‌ ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ. ಘಟನೆ ನಡೆದು 16 ಗಂಟೆಯಾದರೂ ಪ್ರಕರಣ ದಾಖಲಿಸಿಕೊಳ್ಳದೇ ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ ಎಂದಿರುವ ಪ್ರತಿಭಟನಾಕಾರರು, ಖಾಸಗಿ ಆಸ್ಪತ್ರೆಯಿಂದ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸುವಾಗ ಆ್ಯಂಬುಲೆನ್ಸ್‌ ತಡೆದಿದ್ದಾರೆ.

ತನಿಖೆಗೆ ಸೂಚಿಸಿದ್ದೇನೆ : ಗೃಹ ಸಚಿವ ಪರಮೇಶ್ವರ್

ಪ್ರಕರಣದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, “ಈ ಬಗ್ಗೆ ನಾನು ತನಿಖೆಗೆ ಸೂಚನೆ ನೀಡಿದ್ದೇನೆ. ಪರಶುರಾಮ ಅವರು ಸಹಜವಾಗಿ ಸಾವನ್ನಪ್ಪಿದ್ದಾರೆ ಎಂದು ಸುದ್ದಿಗಳು ಬರುತ್ತಿವೆ. ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ, ಯಾವುದೇ ಡೆತ್‌ನೋಟ್ ಕೂಡ ಪತ್ತೆಯಾಗಿಲ್ಲ. ಅವರನ್ನು ವರ್ಗಾವಣೆ ಮಾಡಿದ್ದಾರೆ ಎಂಬ ಕಾರಣ ಕೊಟ್ಟಿದ್ದಾರೆ. ಇವೆಲ್ಲದರ ಬಗ್ಗೆ ತನಿಖೆ ಮಾಡುವಂತೆ ನಾನು ಸೂಚನೆ ಕೊಟ್ಟಿದ್ದೇನೆ. ಏನು ವರದಿ ಬರುತ್ತದೆ ನೋಡೋಣ. ಪತ್ನಿಯ ಆರೋಪಗಳನ್ನೂ ಪರಿಗಣಿಸುತ್ತೇವೆ. ಆ ನಿಟ್ಟಿನಲ್ಲಿಯೂ ತನಿಖೆ ಮಾಡುವಂತೆ ಸೂಚಿಸಿದ್ದೇನೆ” ಎಂದಿದ್ದಾರೆ.

ಎಫ್‌ಐಆರ್ ದಾಖಲಿಸಿಲ್ಲ ಎಂಬ ಬಗ್ಗೆ ಕೇಳಿದ್ದಕ್ಕೆ “ಪೊಲೀಸರು ಎಫ್‌ಐಆರ್ ದಾಖಲಿಸುತ್ತಾರೆ. ಪ್ರಾಥಮಿಕವಾಗಿ ಒಂದಿಷ್ಟು ಸಾಕ್ಷ್ಯಗಳು, ಮಾಹಿತಿಗಳು ಸಂಗ್ರಹಿಸಬೇಕಾಗಿದೆ. ಅದನ್ನು ಮಾಡಿದ ಬಳಿಕ ಎಫ್‌ಐರ್‌ ದಾಖಲಿಸುತ್ತಾರೆ” ಎಂದು ತಿಳಿಸಿದ್ದಾರೆ.

ಸ್ಥಳೀಯ ಶಾಸಕರಿಗೆ ವರ್ಗಾವಣೆಗೆ 30 ಲಕ್ಷ ರೂಪಾಯಿ ಕೊಟ್ಟಿದ್ದಾರೆ ಎಂಬುವುದಾಗಿ ಅವರ ಪತ್ನಿ ಆರೋಪಿಸಿದ್ದಾರೆ ಎಂದು ಕೇಳಿದ್ದಕ್ಕೆ ” ಆರೋಪವಷ್ಟೇ ಮಾಡಿದ್ದಾರೆ. ಆರೋಪ ಮಾಡಿದಾಕ್ಷಣ ಅದೇ ಸರಿ, ಇಲ್ಲ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಆ ಬಗ್ಗೆ ತನಿಖೆ ಮಾಡಬೇಕಿದೆ. ಶಾಸಕರ ಹೆಸರಿದ್ದರೂ ಕೂಡ ಎಫ್‌ಐಅರ್‌ ದಾಖಲಿಸಲು ನಾನು ಸೂಚನೆ ಕೊಟ್ಟಿದ್ದೇನೆ, ಮಾಡ್ತಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ : ವಯನಾಡ್ ಭೂಕುಸಿತ : ಅಮಿತ್ ಶಾ ವಿರುದ್ದ ಹಕ್ಕುಚ್ಯುತಿ ನೋಟಿಸ್ ನೀಡಿದ ಕಾಂಗ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...