Homeಅಂಕಣಗಳುದೇವೇಗೌಡ್ರು ಯಾವ ಜನಾಂಗನೂ ದ್ವೇಷ ಮಾಡಲ್ಲ

ದೇವೇಗೌಡ್ರು ಯಾವ ಜನಾಂಗನೂ ದ್ವೇಷ ಮಾಡಲ್ಲ

ಅದೊಂದು ಹಿರಿಯರು ಒಪ್ಪಿದ ಮದುವೆ. ಯಾಕೆಂದರೆ ಮನೆ ನಡೆದುಕೊಂಡು ಹೋಗಬೇಕು. ವಂಶಾಭಿವೃದ್ಧಿಯಾಗಬೇಕು. ಆ ವಂಶ ಊರಲ್ಲೆಲ್ಲಾ ಹರಡಬೇಕು.

- Advertisement -
- Advertisement -

ಅದೊಂದು ಹಿರಿಯರು ಒಪ್ಪಿದ ಮದುವೆ. ಯಾಕೆಂದರೆ ಮನೆ ನಡೆದುಕೊಂಡು ಹೋಗಬೇಕು. ವಂಶಾಭಿವೃದ್ಧಿಯಾಗಬೇಕು. ಆ ವಂಶ ಊರಲ್ಲೆಲ್ಲಾ ಹರಡಬೇಕು. ಕುಟುಂಬದ ವೈರಿಗಳು ನಿರ್ನಾಮವಾಗಬೇಕು. ಊರು ಅಭಿವೃದ್ಧಿಯಾಗಬೇಕು. ಇತ್ಯಾದಿ ಆಶಯಗಳೊಂದಿಗೆ ನಡೆದುಹೋದ ಬಲವಂತದ ಮದುವೆ. ಆದರೂ ಏಗಬೇಕಿದೆ. ಒಂದುವೇಳೆ ವಿಚ್ಛೇದನವಾದರೆ, ಅದನ್ನೆ ಕಾಯುತ್ತ ಕುಳಿತ ವೈರಿಪಡೆ, ಬೇಕಾದಷ್ಟು ಧನಕನಕ ವಸ್ತುಗಳನ್ನು ಕೊಟ್ಟು ಹುಡುಗಿ ಹೇಗಾದರೂ ಇರಲಿ ಆರಿಸಿಕೊಂಡು ಹೋಗಿ ಮದುವೆ ಮಾಡಿಕೊಳ್ಳಲು ತುದಿಗಾಲ ಮೇಲೆ ನಿಂತಿದೆ. ಇಂತಹ ಅಪಾಯದ ಸನ್ನಿವೇಶವರಿತ ವಧುವಿನ ತಂದೆಯ ಪಾಡು ಹೇಳತೀರದು. ಇಂತದೊಂದು ಕುಟುಂಬದ ಸ್ಥಿತಿ ಕರ್ನಾಟಕದ ರಾಜಕಾರಣವನ್ನೇ ಹೋಲುತ್ತಿದೆಯಂತಲ್ಲಾ. ಈ ನಡುವೆ ವಧುವಿನ ಕಡೆಯ ಕುರುಬರ ಪೈಕಿಯ ಯಜಮಾನನೊಬ್ಬ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿರುವ ತೀರ್ಮಾನ ಕೇಳಿ ಫೋನ್ ಮಾಡಬೇಕೆನಿಸಿತಲ್ಲಾ. ತಡ ಮಾಡದೆ ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್: … ನಿನಗ್ಯಾರಿದ್ದರೇನು ಸುಖವಿಲ್ಲಾ ಪ್ರಭುವೆ. ದಾರಿ ಸುಖವಿಲ್ಲ… ಬಾಯಾರಿತು ಎಂದು ದಳದ ಬಾವಿಗೆ ಪೋದೆ.
“ಹಲೋ ಯಾರೂ”
“ನಾನೂ ಸರ್ ಯಾಹೂ”
“ಏನಪ್ಪ ಯಾಹೂ”
“ಚೆನ್ನಾಗಿದ್ದೀರಾ ಸರ್”
“ಏನೋ ಹಿಂಗಿದೀನಿ”
“ದಳದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ರಂತಲ್ಲ ಸಾರ್”
“ಜವಾಬ್ದಾರಿ ಸಾಕು ಅನ್ನುಸ್ತು ಕೊಟ್ಟೆ”
“ಜವಾಬ್ದಾರಿ ಏನಿತ್ತು ಸಾರ್ ಅಲ್ಲಿ”
“ಒಂದು ಪಾರ್ಟಿ ಅಧ್ಯಕ್ಷ ಅಂದಮೇಲೆ ಜವಾಬ್ದಾರಿ ಇರಲ್ವೆ”

“ನಾನು ತಿಳಕಂಡಂಗೆ ಸಾರ್, ಜನತಾದಳದ ಜವಾಬ್ದಾರಿ ಅಂದ್ರೆ, ಬೆಳಿಗ್ಗೆ ತಿಂಡಿ ತಿನ್ನುವಾಗ ದೇವೇಗೌಡ್ರು ಕುಮಾರಣ್ಣ ರೇವಣ್ಣ ಆಡಿದ ಮಾತುಗಳು ನಿಮಗೆ ತಲುಪ್ತವೆ, ಅವನ್ನ ಕೇಳಿಸಿಗಂಡು ಸುಮ್ಮನಾಗದು ಅಲವೆ ಸಾರ್”
“ಅದು ನಿಮ್ಮ ಊಹೆ”

“ಆಮೇಲೆ ಅಡುಗೆ ಮನೆಯಿಂದ ಚೆನ್ನಮ್ಮ ಅದೇನೇನೊ ಹೇಳ್ತಾರೆ. ಮತ್ತೆ ಭವಾನಿ ಹೇಳಿದ್ದ ರೇವಣ್ಣ ತಂದಿರತನೆ. ಈ ತರ ಮಾತು ಕತೆ ಪಾರ್ಟಿ ಅಧ್ಯಕ್ಷನಿಗೆ ತಲುಪಬಹುದು ಅಥವಾ ತಲುಪದೆಯೂ ಇರಬಹುದು. ಇಂತಹ ಪಾರ್ಟಿಯ ಅಧ್ಯಕ್ಷನಾದವನು ಅಸಾಮಾನ್ಯ ತಾಳ್ಮೆ, ಮುಜುಗರ ಸಹಿಸಿಕೊಳೊ ಶಕ್ತಿ ಪಡೆದಿರಬೇಕು ಅಲ್ವ ಸಾರ್”
“ನೀವು ಹೇಳ್ತಕಂತ ಯಾವುದೇ ಸನ್ನಿವೇಶನ ನಾನು ಎದುರಿಸಿಲ್ಲ”

“ಪಂಚಾಯ್ತಿ ಚುನಾವಣೇಲಿ ಸ್ವಜಾತಿಗೊಂದು ಟಿಕೆಟ್ ಕೊಡಲಿಕ್ಕಾಗದ ಪಾರ್ಟಿ ಅಧ್ಯಕ್ಷಗಿರಿ ಇನ್ನೆಂತದಿರಬೇಕು ಸಾರ್”
“ನನ್ನ ರಾಜೀನಾಮೆ ಅವನ್ನೆಲ್ಲಾ ಒಳಗೊಂಡಿದೆ”

“ಒಳ್ಳೆ ಕೆಲಸ ಮಾಡಿದ್ರಿ. ಸಾಮಾನ್ಯವಾಗಿ ದೇವೇಗೌಡ್ರು ಪಾರ್ಟಿ ಅಧ್ಯಕ್ಷನ್ನ ಅವನ ಅನುಪಸ್ಥಿತೀಲಿ ಬದ್ಲಾಯಿಸ್ತಾರೆ. ಆದ್ರೆ ನೀವೇ ರಾಜೀನಾಮೆ ಕೊಟ್ಟಿದ್ದು ಒಳ್ಳೆದು. ಸಾರ್”
“ನೋಡಿ ಯಾಹೂ, ಕಾಲಕ್ಕೆ ನಾವು ಅಂಟಿಕೊಂಡು ಕೂತ್ಗಬಾರ್ದು. ಕಾಲ ಬದಲಾವಣೆ ಬಯಸಿದಾಗ ನಾವು ಬದಲಾಗಬೇಕು”

“ನಿಜ ಸಾರ್, ಆ ಸಿದ್ದರಾಮಯ್ಯನ್ನ ಹಿಡಕಂಡೋಗಿ ಕಾಂಗೈ ಸೇರಿಸಿದ್ರಿ. ನೀವು ಬಂದು ದಳದ ಅಧ್ಯಕ್ಷರಾದ್ರಿ. ಏನಾಶ್ಚರ್ಯ ಅಲವಾ”
‘‘ಅದಕ್ಕೆ ರಾಜಕಾರಣ ಅನ್ನದು”

“ಅಂದ್ರೆ ರಾಜಕಾರಣದಲ್ಲಿ ಏನಾದ್ರು ಆಗಬವುದ?”
“ನೀವೇ ನೋಡಿದ್ರಲ್ಲ, ನಿಮ್ಮಪ್ಪನಾಣೆ ಮುಖ್ಯಮಂತ್ರಿ ಆಗಲ್ಲ ಅಂತ ಬೆಳಿಗ್ಗೆ ಕುಮಾರಸ್ವಾಮಿಗೆ ಹೇಳಿದ ಸಿದ್ದರಾಮಯ್ಯ, ಮಧ್ಯಾಹ್ನ ಒಂದು ಗಂಟೆಗೆ ಬಂದು ನಿಮ್ಮಪ್ಪನಾಣೆ ನೀನೆ ಮುಖ್ಯಮಂತ್ರಿ ಆಗು ಬಾ ಅಂದಿರೋದು. ಇಂತದ್ದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ನಡೆದಿರಲಿಲ್ಲ”

“ಇದನ್ನ ಅವಮಾನಕರ ನಡವಳಿಕೆ ಅಂತೀರಾ”
“ಇಲ್ಲ ಹಾಗನ್ನಲ್ಲ. ಮತೀಯ ಶಕ್ತಿಗೆ ಅವಕಾಶ ಕೊಡಬಾರ್ದು ಅನ್ನೊ ತೀರ್ಮಾನಕ್ಕೆ ತಲೆಬಾಗಿದ್ದು ಅಂತ ಭಾವುಸ್ತೀನಿ. ಆದ್ರೆ ಅಹಂಕಾರದ ಮಾತು ಯಾರಿಗೂ ಒಳ್ಳೆದಲ್ಲ”

“ಸಿದ್ದರಾಮಯ್ಯನಿಗೆ ಅಹಂಕಾರ ಇದೆ ಅಂತೀರಾ?”
“ಅಹಂಕಾರದ ಮೂರ್ತಿರೂಪ ಆತ”

“ಅದು ಅಹಂಕಾರದ ತರದ ವ್ಯಕ್ತಿರೂಪವಂತಲ್ಲಾ”
“ಹಾಗೇನೂ ಇಲ್ಲ. ಉಪಕಾರ ಸ್ಮರಣೆ ಇಲ್ಲದ ಧಿಮಾಕಿನ ಮನ್ಸ ಆತ. ಮನುಷ್ಯನಿಗೆ ತಪ್ಪು ತಿದ್ದಿಕಳೊ ಒಳನೋಟ, ಅಹಂಕಾರಕ್ಕೆ ಅವಕಾಶ ಕೊಡದ ವ್ಯಕ್ತಿತ್ವ ಇರಬೇಕು”

“ನೀವು ಒಂದು ಕಾಲದ ಸಿದ್ದು ಅಭಿಮಾನಿ. ಅವರಿಗಾದ ಅವಮಾನಾನ ನೀವು ಸಹಿಸುತಿರಲಿಲ್ಲ. ಸಿದ್ದುನ ಯಾರಾದ್ರು ಟೀಕೆ ಮಾಡಿದ್ರೆ ನೀವು ಪ್ರತಿಕ್ರಿಯಿಸ್ತಿದ್ರಿ. ಇದು ನಿಮ್ಮ ತಪ್ಪೊ ಸಿದ್ದರಾಮಯ್ಯರ್ ತಪ್ಪೊ ಹೇಳಿ”
“ನನ್ನದೇ ತಪ್ಪು”

“ಈ ತಪ್ಪಿನಲ್ಲಿ ಮತೀಯ ಅಂಶ ಇದೆ ಅಲ್ವ”
“ಇರಬವುದು”

“ಇರಬವುದೇನು, ಇದೆ ಸಾರ್. ನಮ್ಮ ಜನಾಂಗದ ಲೀಡ್ರು, ಅವನನ್ನ ಯಾರೂ ಟೀಕೆ ಮಾಡಬಾರ್ದು ಬೈಯ್ಯಬಾರ್ದು ಅಂತ ಭಾವಿಸಿದ್ದ ಮನಸ್ಸಿನ ಕಣ್ಣು ತೆರಿಸಿದಾನಲ್ಲ ಸಿದ್ದರಾಮಯ್ಯ”
“ಇರಬವುದು”

“ಅವುರಂಗೆ ಮಾಡಿದ್ರಿಂದ ನೀವು ದಳಕ್ಕೆ ಬಂದು ಲೀಡರಾದ್ರಿ, ಶಾಸಕರಾದ್ರಿ, ಅಧ್ಯಕ್ಷರಾದ್ರಿ”
“ನಿಜ ನನ್ನ ರಾಜಕೀಯದ ಅಂತ್ಯ, ನಿರಾಶೆಗೊಳ್ಳೊತರ ಇಲ್ಲ. ಮಾಜೀ ಪ್ರಧಾನಿಯ ಪಾರ್ಟಿಗೆ ಅಧ್ಯಕ್ಷನಾದದ್ದು ಸಾಮಾನ್ಯ ಸಂಗತಿಯಲ್ಲ”

“ಈಗಲಾದ್ರು ದೇವೇಗೌಡ್ರಿಗೆ ಕುರುಬರನ್ನ ಕಂಡ್ರೆ ಅವ್ಯಕ್ತ ಅಕ್ಕರೆ ಇದೆ ಅನ್ನದನ್ನ ಒಪ್ಪಿಗತಿರಾ”
“ನೋಡಿ ಯಾಹು, ದೇವೇಗೌಡ್ರಿಗೆ ಯಾವ ಜನಾಂಗ ಕಂಡ್ರೂ ದ್ವೇಷ ಇಲ್ಲ. ರಾಜಕಾರಣದ ಕಾರಣಕ್ಕೆ ಅಂತ ಆಪಾದನೆಗಳಿಗೆ ಗುರಿಯಾಗ್ತಾರೆ”

“ಹೌದ ಸಾರ್”
“ನೋಡಿ, ಅವುರು ಬ್ರಾಹ್ಮಣ ವಿರೋಧಿ ಅಂತಾರೆ, ಅದೂ ಕೂಡ ಸುಳ್ಳು. ಲಿಂಗಾಯತರ ಬೊಮ್ಮಾಯಿ ಅಂದ್ರೆ ಅವರಿಗೆ ಪಂಚಪ್ರಾಣ. ದಲಿತರ ಡಾ.ತಿಪ್ಪೇಸ್ವಾಮಿನ ಪಾರ್ಟಿ ಪ್ರೆಸಿಡೆಂಟ್ ಮಾಡಿದ್ರು. ಲಿಂಗಾಯಿತರ ತಿಪ್ಪಣ್ಣನ್ನ ಅಧ್ಯಕ್ಷನ್ನ ಮಾಡಿದ್ರು. ಆ ನಂತರ ಕುರುಬರ ಸಿದ್ದರಾಮಯ್ಯನ್ನ ಅಧ್ಯಕ್ಷನನ್ನಾಗಿ ಮಾಡಿ ಫೈನಾನ್ಸ್ ಮಿನಿಷ್ಟ್ರು ಮಾಡಿದ್ರು. ಈಗ ನನ್ನ ಮಾಡಿದಾರೆ”

“ಅದೇ ಸಾರ್ ನಾನೇಳಿದ್ದೂ, ಕುರುಬರನ್ನ ಮುಂದೆ ತಂದಂಗೆ ಒಕ್ಕಲಿಗರನ್ನ ತರಲಿಲ್ಲ. ಒಕ್ಕಲಿಗರನ್ನೆಲ್ಲಾ ಮುಗಿಸಿ ಅಲ್ಲಿಗೆ ತಮ್ಮ ಕುಟುಂಬವನ್ನ ನಾಟಿ ಮಾಡ್ತಾ ಬಂದ್ರು. ಇದನ್ನ ಒಪ್ಪಿಗಳ್ತಿರಾ”
“ಒಕ್ಕಲಿಗ ನಾಯಕರನ್ನ ತುಳುದ್ರು ಪರ್ಯಾಯವಾಗಿ ಒಕ್ಕಲಿಗ ಲೀಡರನ್ನ ಬೆಳಸಿದಾರೆ”

“ಅದೆಲ್ಲಾ ಅಂಗಿರ್ಲಿ. ಲೋಕಸಭಾ ಚುನಾವಣೇಲಿ ಜನ ಸಮ್ಮಿಶ್ರ ಸರ್ಕಾರದ ವಿರುದ್ಧ ಓಟು ಕೊಟ್ಟಿರೋದನ್ನ ಒಪ್ಪಿಗಳ್ತೀರಾ”

“ಮೋದಿ ಅಲೆ”
“ಮೋದಿದೂ ಇಲ್ಲ ಯಂತದೂ ಇಲ್ಲ. ಒಂದೊರ್ಸದಿಂದ ದಳದೋರು ಕಾಂಗ್ರೆಸ್‍ನೋರು ಆಡ್ತಾಯಿರೊ ಜಗಳ ನಿಲ್ಸಕ್ಕೆ ಸೋಲ್ಸಿದ್ರು”

“ಥೂತ್ತೇರಿ”

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...