Homeನ್ಯಾಯ ಪಥಮೋದಿ ಮತ್ತೆ ಪ್ರಧಾನಿಯಾಗಲಾರರು ಎಂಬ ಸುಳಿವು ನೀಡುತ್ತಿದೆಯೇ ಬಿಜೆಪಿ-ಶಿವಸೇನೆ ಮೈತ್ರಿ?

ಮೋದಿ ಮತ್ತೆ ಪ್ರಧಾನಿಯಾಗಲಾರರು ಎಂಬ ಸುಳಿವು ನೀಡುತ್ತಿದೆಯೇ ಬಿಜೆಪಿ-ಶಿವಸೇನೆ ಮೈತ್ರಿ?

- Advertisement -
- Advertisement -

ಗಿರೀಶ್ ತಾಳಿಕಟ್ಟೆ |

ಬಿಜೆಪಿ ಮತ್ತು ಶಿವಸೇನೆ ಮತ್ತೆ ಮೈತ್ರಿ ಮಾಡಿಕೊಂಡಿವೆ. ಇವೆರಡೂ ಅವಲಂಬಿಸಿರುವ ವೋಟ್ ಬ್ಯಾಂಕ್ ರಾಜಕಾರಣ ಬಲ್ಲವರಿಗೆ ಇದರಲ್ಲಿ ಅಚ್ಚರಿ ಪಡುವಂತದ್ದೇನೂ ಇಲ್ಲ. ಯಾಕೆಂದರೆ ಈ ಎರಡೂ ಪಕ್ಷಗಳಿಗೆ ‘ಹಿಂದೂತ್ವ’ವೇ ಬಂಡವಾಳ. ಒಂದೇ ಬಂಡವಾಳವನ್ನು ಇಬ್ಬರು ಹಂಚಿಕೊಂಡರೆ ಬರುವ ಲಾಭವೂ ಕಡಿಮೆ ಎಂಬುದು ಕಾಮನ್‌ಸೆನ್ಸ್. ಆ ನಿಟ್ಟಿನಿಂದ ಸುಮಾರು ಎರಡು ದಶಕಗಳ ಈ ಹಳೇ ಮಿತ್ರರ ಮರುಮೈತ್ರಿ ಅಚ್ಚರಿ ಹುಟ್ಟಿಸುವುದಿಲ್ಲ. ಆದಾಗ್ಯೂ ಬಿಜೆಪಿ-ಶಿವಸೇನೆ ಮೈತ್ರಿ ರಾಷ್ಟ್ರ ರಾಜಕಾರಣದಲ್ಲಿ ಬೇರೊಂದು ಆಯಾಮದಿಂದ ಗಮನ ಸೆಳೆಯುತ್ತದೆ. ಅದು ಮೋದಿಯವರ ರಾಜಕೀಯ ಭವಿಷ್ಯಕ್ಕೆ ಸಂಬಂಧಪಟ್ಟದ್ದು.

ಬಹುಶಃ ಇತ್ತೀಚಿನ ವರ್ಷಗಳಲ್ಲಿ ಮೋದಿಯವರನ್ನು ಮತ್ತು ಕೇಂದ್ರ ಸರ್ಕಾರವನ್ನು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗಿಂತಲೂ ಕಟುವಾಗಿ ಟೀಕಿಸುತ್ತಾ ಬಂದದ್ದು ಶಿವಸೇನೆ. ರಾಮಮಂದಿರ ನಿರ್ಮಾಣದ ವಿಚಾರ ಇರಬಹುದು, ರಫೇಲ್ ಹಗರಣವಿರಬಹುದು, ಪಾಕಿಸ್ತಾನದೊಂದಿಗೆ ವಿದೇಶಾಂಗ ನೀತಿಗಳಿರಬಹುದು ಎಲ್ಲಾ ವಿಚಾರಗಳಲ್ಲೂ ಶಿವಸೇನೆ ಮೋದಿಯವರ ಕಾಲೆಳೆಯುವ ಅವಕಾಶವನ್ನು ಮಿಸ್ ಮಾಡಿಕೊಂಡಿಲ್ಲ. ಎಷ್ಟರಮಟ್ಟಿಗೆ ಅಂದರೆ, ರಾಹುಲ್ ಗಾಂಧಿಯವರ ಪಾಪ್ಯುಲರ್ ಸ್ಲೋಗನ್ ಆದ ‘ಚೌಕಿದಾರ್ ಹೀ ಚೋರ್ ಹೈ’ ಹೇಳಿಕೆಯನ್ನು ಶಿವಸೇನೆಯ ಸುಪ್ರಿಮೋ ಉದ್ಧವ್ ಠಾಕ್ರೆ ಬಹಿರಂಗವಾಗಿ ಪುನರುಚ್ಚರಿಸಿ ಬಿಜೆಪಿಯನ್ನು ಹಂಗಿಸಿದ್ದರು. ಮಹಾರಾಷ್ಟ್ರದ ಬಿಜೆಪಿ ಸಿಎಂ ದೇವೇಂದ್ರ ಫಡ್ನವೀಸ್‌ರವರು ‘ಪ್ರಧಾನಿ ಮೋದಿಯನ್ನು ಟೀಕಿಸುವುದೆಂದರೆ ಸೂರ್ಯನಿಗೆ ಉಗಿದಂತೆ. ಉಗಳು ಯಾರ ಮೇಲೆ ಬೀಳುತ್ತೆ ಅಂತ ಟೀಕಿಸುವವರಿಗೆ ಗೊತ್ತಿರಬೇಕು’ ಎಂದು ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ್ದರು. ಇದೆಲ್ಲ ನಡೆದದ್ದು ತೀರಾ ಇತ್ತೀಚೆಗಷ್ಟೆ. ಇನ್ನು ತೆಲುಗುದೇಶಂ ಪಾರ್ಟಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧದ ಎಲ್ಲಾ ಪಕ್ಷಗಳ ಪ್ರತಿಭಟನೆಗೂ ಶಿವಸೇನೆ ತನ್ನ ಪ್ರತಿನಿಧಿಯನ್ನು ಕಳಿಸಿಕೊಟ್ಟಿತ್ತು. ಅಷ್ಟೆಲ್ಲಾ ಯಾಕೆ, ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ‘ಉಗ್ರರನ್ನು ಮಟ್ಟಹಾಕಲು ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ’ ಎಂದು ಬಿಜೆಪಿ ಪ್ರಚಾರಕ್ಕೆ ಮುಂದಾದಾಗ ಇದೇ ಉದ್ಧವ್ ಠಾಕ್ರೆ ’ಸೈನಿಕರ ಬಲಿದಾನವನ್ನು ಬಿಜೆಪಿ ಹೀಗೆ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಹೇಯ ಕೃತ್ಯ’ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಉದ್ದವ್ ಠಾಕ್ರೆ, ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಮತ್ತು ದೇವೇಂದ್ರ ಫಡ್ನವೀಸ್ ಕೈಕೈಹಿಡಿದು ಮೈತ್ರಿಯನ್ನು ಸಾರಿದರು!

ಇಲ್ಲಿ ಶಿವಸೇನೆ ಎಂಬ ಪ್ರಾದೇಶಿಕ ಪಕ್ಷವೊಂದರ sudden shift over, ಅದರ ನುಡಿ ಮತ್ತು ನಡೆಗಳಿಗಿಂತಲೂ ಹೆಚ್ಚಾಗಿ, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷವೊಂದು ತನ್ನನ್ನು ಮತ್ತು ತನ್ನ ಪ್ರಧಾನಿಯನ್ನು ಕೊನೇ ಕ್ಷಣದವರೆಗು ಕಾಡಿದ ಪಾರ್ಟಿಯನ್ನು ಸಹಿಸಿಕೊಳ್ಳುವ ತೀರ್ಮಾನ ಕೈಗೊಂಡಿದ್ದೇಕೆ? ಎಂಬುದು ಇಂಟರೆಸ್ಟಿಂಗ್ ವಿಷಯ. ನೋ ಡೌಟ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಂತಹ ‘ಹಿಂದಿ ಹಾರ್ಟ್‌ಲ್ಯಾಂಡ್’ ಚುನಾವಣೆಗಳಲ್ಲಿ ಸೋತ ನಂತರ ಬಿಜೆಪಿಗೆ ರಾಜಕೀಯ ಪರಿಸ್ಥಿತಿಯ ಅಂದಾಜು ಸಿಕ್ಕಿದೆ ಮತ್ತು ಆ ಅಂದಾಜಿನ ಪ್ರಕಾರ 2019ರ ಎಲೆಕ್ಷನ್‌ನಲ್ಲಿ ಕಳೆದ ಸಾರಿಯಂತೆ ತಾನು ಒಂಟಿಯಾಗಿ ಅಧಿಕಾರ ರಚಿಸಲು ಸಾಧ್ಯವಿಲ್ಲ ಎಂಬುದು ಮನದಟ್ಟಾಗಿದೆ. ಮಿತ್ರಪಕ್ಷಗಳ ಮೈತ್ರಿ ಅನಿವಾರ್ಯತೆ ಬಿಜೆಪಿಗೆ ಮನದಟ್ಟಾಗಿರುವುದರಿಂದಲೇ ಈಗ ಶಿವಸೇನೆ, ಎಐಎಡಿಎಂಕೆಗಳ ಜೊತೆ ಕೈಜೋಡಿಸುತ್ತಿದೆ. ಇದು ಬಿಜೆಪಿ-ಶಿವಸೇನೆ ಮೈತ್ರಿಗೆ ಸಿಗುವ ಸೀದಾಸಾದಾ ಪೊಲಿಟಿಕಲ್ ವಿಶ್ಲೇಷಣೆ. ನಿರ್ದಿಷ್ಟವಾಗಿ ಶಿವಸೇನೆಯ ವಿಚಾರಕ್ಕೆ ಬಂದರೆ, ಇದನ್ನೂ ಮೀರಿದ ರಾಜಕೀಯ ಲೆಕ್ಕಾಚಾರವೊಂದು ನಮ್ಮ ಗಮನಕ್ಕೆ ಬರುತ್ತದೆ. ಅದು ನಮಗೆ ಅರ್ಥವಾಗಬೇಕೆಂದರೆ ಶಿವಸೇನೆ-ಬಿಜೆಪಿ ನಡುವಿನ ಮೈತ್ರಿ ಯಾಕೆ ಮುರಿದುಬಿದ್ದಿತ್ತು ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕು.

1960ರಲ್ಲಿ ಮಹಾರಾಷ್ಟ್ರ ಸ್ವತಂತ್ರ ರಾಜ್ಯವಾಗಿ ಉದಯಿಸಿದ ಮೇಲೆ ಬಹುಪಾಲು ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮಿತ್ರಕೂಟಗಳೇ ಆ ರಾಜ್ಯವನ್ನು ಆಳಿವೆ. ಅಂಥಾ ಪ್ರತಿಕೂಲ ಪರಿಸ್ಥಿತಿ ನಡುವೆಯೂ 1995ರಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ರಚಿಸಲು ಶಿವಸೇನೆಗೆ ಸಾಧ್ಯವಾದದ್ದು ಬಿಜೆಪಿ ಜೊತೆಗಿನ ಮೈತ್ರಿಯಿಂದ. ಅಲ್ಲಿಂದ ಶುರುವಾದ ಆ ದೋಸ್ತಿ ಎರಡು ದಶಕಗಳ ಕಾಲ ನಿರಾತಂಕವಾಗಿ ಮುಂದುವರೆದಿತ್ತು. ಹಾಗೆ ನೋಡಿದರೆ, ಶಿವಸೇನೆಯ ಹೆಗಲೇರಿಕೊಂಡೇ ಬಿಜೆಪಿ ಮಹಾರಾಷ್ಟ್ರದಲ್ಲಿ ಗಟ್ಟಿ ನೆಲೆಕಂಡುಕೊಳ್ಳಲು ಸಾಧ್ಯವಾದದ್ದು. ಆದರೆ 2014ರ ಲೋಕಸಭಾ ಚುನಾವಣೆಯ ತರುವಾಯ ದೋಸ್ತಿಯೊಳಗೆ ಹಳೆಯ ವಿಶ್ವಾಸ ಉಳಿದುಕೊಳ್ಳಲಿಲ್ಲ. ಅದಕ್ಕೆ ಕಾರಣವಾದದ್ದು ಮೋದಿಯವರ Personal ego!

ಎಂಪಿ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿ ಬಿಜೆಪಿ ಪ್ರಚಂಡ ಜಯಸಾಧಿಸಿದ್ದು ಮೋದಿ ಕೇಂದ್ರಿತ ಚುನಾವಣಾ ಪ್ರಚಾರದಿಂದ. ಹಾಗಾಗಿ ಮೋದಿ ಪಕ್ಷದೊಳಗೆ ಬಲಾಢ್ಯವಾಗುತ್ತಾ ಬಂದರು. ಅಡ್ವಾಣಿಯಂತಹ ಹಿರಿಯ ನಾಯಕರೂ ದನಿ ಕಳೆದುಕೊಂಡರು. ಪಕ್ಷದೊಳಗಿನ ನಾಯಕರೇ ಮಂಕಾಗಿರಬೇಕೆಂದು ಬಯಸುತ್ತಿದ್ದ ಮೋದಿಯವರಲ್ಲಿ ಮಿತ್ರಪಕ್ಷಗಳ ಬಗ್ಗೆಯೂ ಆದರ ಉಳಿಯಲಿಲ್ಲ. ಅದರ ಮೊದಲ ಬಲಿಪಶು ಈ ಶಿವಸೇನೆ. ಎಂಪಿ ಎಲೆಕ್ಷನ್ ಗೆಲುವಿನ ಹ್ಯಾಂಗ್‌ಹೋವರ್ ಇಳಿಯುವ ಮುನ್ನವೇ ಅಂದರೆ, ಆರು ತಿಂಗಳ ಒಳಗೇ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಎದುರಾಯ್ತು. ಇದೇ ಗೆಲುವಿನ ಅಲೆಯಲ್ಲಿ, ಸ್ವತಂತ್ರವಾಗಿ ಸ್ಪರ್ಧಿಸಿದರೂ ಮಹಾರಾಷ್ಟ್ರದಲ್ಲಿ ಸುಸೂತ್ರವಾಗಿ ಅಧಿಕಾರ ಹಿಡಿದುಬಿಡುತ್ತೇವೆ ಎಂಬ ಲೆಕ್ಕಾಚಾರದಲ್ಲಿ ಮೋದಿ-ಶಾ ಜೋಡಿ ಶಿವಸೇನೆ ಜೊತೆಗಿನ ಸೀಟು ಹೊಂದಾಣಿಕೆಯಲ್ಲಿ ತಕರಾರು ಬರುವಂತೆ ನೋಡಿಕೊಂಡಿತು. ಒಳಗೊಳಗೇ ಸ್ವತಂತ್ರವಾಗಿ ಚುನಾವಣೆ ಎದುರಿಸಲು ಏನೆಲ್ಲ ತಯಾರಿಗಳು ಬೇಕೊ ಅದನ್ನೆಲ್ಲ ಬಿಜೆಪಿ ಮಾಡಿಕೊಳ್ಳುತ್ತಿದ್ದರೂ ಸೀಟು ಹಂಚಿಕೆಯ ಮಾತುಕತೆಯನ್ನು ಚಾಲ್ತಿಯಲ್ಲಿಟ್ಟಯ. ಚುನಾವಣೆ ಘೋಷಣೆಗೆ ಇನ್ನು ಹದಿನೈದು ದಿನ ತಾನೇ  ಅಧಿಕೃತವಾಗಿ ಮೈತ್ರಿಯನ್ನು ಮುರಿದುಕೊಳ್ಳುವಂಥ ಪರಿಸ್ಥಿತಿ ಬರುವವರೆಗೂ ಶಿವಸೇನೆ ಸೀಟು ಹಂಚಿಕೆ ಕಗ್ಗಂಟು ಬಗೆಹರಿಯುತ್ತೆ ಎಂಬ ವಿಶ್ವಾಸದಲ್ಲೇ ಇತ್ತು. ಆದರೆ ಅದು ಸುಳ್ಳಾಯ್ತು. ಮೈತ್ರಿ ಮುರಿದುಬಿತ್ತು. ಇಂಥಾ ಪರಿಸ್ಥಿತಿಗೆ ಸಿದ್ಧವಾಗಿದ್ದ ಬಿಜೆಪಿ ಒಟ್ಟು 288 ಕ್ಷೇತ್ರಗಳ ಪೈಕಿ 262ರಲ್ಲಿ ಸ್ಪರ್ಧಿಸಿ 122 ಸ್ಥಾನ ಗೆದ್ದು ಬಹುದೊಡ್ಡ ಪಕ್ಷವಾಗಿ ಹೊಮ್ಮಿದರೆ, ಸ್ವತಂತ್ರ ಸ್ಪರ್ಧೆಗೆ ಯಾವ ತಯಾರಿಯನ್ನೂ ಮಾಡಿಕೊಳ್ಳದ ಶಿವಸೇನೆ 282 ಸ್ಥಾನಗಳಲ್ಲಿ ಸ್ಪರ್ಧಿಸಿದರೂ ಗೆದ್ದದ್ದು 66 ಸ್ಥಾನ ಮಾತ್ರ!

ಆನಂತರವೂ ಸಂಖ್ಯಾಬಲವಿಲ್ಲದ ಬಿಜೆಪಿ ಮೈತ್ರಿಗಾಗಿ ಎನ್.ಸಿ.ಪಿ.ಯ ಶರದ್ ಪವಾರ್‌ರನ್ನು ವಿಶ್ವಾಸಕ್ಕೆ ತೆಗೆದುಕೊಂಡಿತೇ ವಿನಾಃ ಶಿವಸೇನೆಯನ್ನಲ್ಲ. ‘ಯಜಮಾನಿಕೆ’ ಧೋರಣೆ ಮೇಲೆಯೇ ಪಕ್ಷ ಕಟ್ಟಿಕೊಂಡ ಶಿವಸೇನೆ ನಾಯಕರಿಗೆ ಇದು ತಮಗೆ ಮಾಡಿದ ದೊಡ್ಡ ಅವಮಾನದಂತೆ ಭಾಸವಾದುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಅಲ್ಲಿಂದಾಚೆಗೆ ಮೋದಿ ಮತ್ತು ಶಿವಸೇನೆಯ ಸಂಬಂಧ ಬಿಗಡಾಯಿಸುತ್ತಲೇ ಬಂದಿತು. ‘ಹಿಂದೂತ್ವ’ವನ್ನೇ ತನ್ನ ಅಜೆಂಡಾವಾಗಿಸಿಕೊಂಡಿರುವ ಶಿವಸೇನೆಗೆ ಅದೇ ಸಿದ್ಧಾಂತದ ಬಿಜೆಪಿ ಜೊತೆ ಮುನಿಸಿಕೊಳ್ಳಲು ಬೇರಾವ ಕಾರಣಗಳೂ ಇಲ್ಲ, ಏಕೈಕ ಕಾರಣ ಅದು ಮೋದಿಯವರ egoistic ವರ್ತನೆ! ಪ್ರಧಾನಿ ಭೇಟಿಗೆ ದಿನಾಂಕಕ್ಕಾಗಿ ಸತತ ಒಂದು ತಿಂಗಳು ಸತಾಯಿಸಿಕೊಂಡು ಸಿಟ್ಟಿಗೆದ್ದು ಮೈತ್ರಿಯಿಂದ ಹೊರಬಂದ ಚಂದ್ರಬಾಬು ನಾಯ್ಡು ಒಳಗೊಂಡು ಬಹುತೇಕ ಮಿತ್ರ ಪಕ್ಷಗಳು ಎನ್ ಡಿ ಎ ತೊರೆಯಲು ಇದೇ ಮುಖ್ಯ ಕಾರಣ. ಸ್ವತಃ ಬಿಜೆಪಿ ನಾಯಕರೇ ಮೋದಿಯವರ ಈ ಆಟಿಟ್ಯೂಡ್ ಬಗ್ಗೆ ಅಸಮಾಧಾನ ಹೊಂದಿರುವುರಾದರು ಪಕ್ಷಕ್ಕೆ ಡ್ಯಾಮೇಜ್ ಮಾಡಬಾರದೆನ್ನುವ ಉದ್ದೇಶದಿಂದ, (ಅಥವಾ ಅಸಹಾಯಕತೆಯಿಂದಲೂ ಇರಬಹುದು), ಸಹಿಸಿಕೊಂಡಿದ್ದಾರೆ.

ಈಗ ಪ್ರಸ್ತುತ ವಿದ್ಯಮಾನದ ಒಳಗುಟ್ಟು ನಮಗೆ ಅರ್ಥವಾಗುತ್ತೆ. ಯಾವ ಮೋದಿಯವರನ್ನು ಶಿವಸೇನೆ ವಿರೋಧಿಸುತ್ತಿತ್ತೊ ಅದೇ ಮೋದಿಯ ಕೈಬಲಪಡಿಸಲು ಮೈತ್ರಿ ಮಾಡಿಕೊಳ್ಳುತ್ತದಾ? ಯಾವ ಲಾಜಿಕ್ಕೂ ಇದನ್ನು ಸಮರ್ಥಿಸುವುದಿಲ್ಲ. ಆದರೆ ಈ ಗೊಂದಲಕ್ಕೆ ಉತ್ತರವಾಗಿ ನಿಲ್ಲುವ ಹೆಸರು ನಿತಿನ್ ಗಡ್ಕರಿ! ಬಿಜೆಪಿಯೊಳಗೆ ನಿತಿನ್ ಗಡ್ಕರಿ ಹೆಸರು ಮುನ್ನೆಲೆಗೆ ಬರುತ್ತಿರುವ ಕಾಲದಲ್ಲೇ ಶಿವಸೇನೆ ಮೈತ್ರಿಗೆ ಓಕೆ ಎಂದಿರುವುದು ಕೇವಲ ಕಾಕತಾಳೀಯವಲ್ಲ. ಅದರ ಹಿಂದೆ ಸ್ಪಷ್ಟ ಲೆಕ್ಕಾಚಾರಗಳಿವೆ. ಮೋದಿ-ಶಾ ವಿರುದ್ಧ ಬಿಜೆಪಿಯಲ್ಲಿ ಅಪಸ್ವರಕ್ಕೆ ಆಸ್ಪದವೇ ಇಲ್ಲ ಎನ್ನುವಂತಿದ್ದ ವಾತಾವರಣದಲ್ಲಿ ನಿತಿನ್ ಗಡ್ಕರಿ ‘ಮೂರು ರಾಜ್ಯಗಳ ಚುನಾವಣಾ ಸೋಲಿಗೆ ಬಿಜೆಪಿ ಅಧ್ಯಕ್ಷರೇ ಹೊಣೆ ಹೊತ್ತುಕೊಳ್ಳಬೇಕು’, ‘ತನ್ನ ಸಂಸಾರವನ್ನು ಸಾಕಲಾಗದ ವ್ಯಕ್ತಿ ದೇಶವನ್ನು ಹೇಗೆ ಮುನ್ನಡೆಸಿಯಾನು’ ಎಂಬಿತ್ಯಾದಿ ಕಾಂಟ್ರವರ್ಸಿ ಹೇಳಿಕೆಗಳ ಮೂಲಕ ರೆಬೆಲ್ ಆದದ್ದು ಒಂದು ನಿರ್ದಿಷ್ಟ, ನಿರ್ದೇಶಿತ ಉದ್ದೇಶಕ್ಕೆ. 2019ರಲ್ಲಿ ಸರ್ಕಾರ ರಚನೆಗೆ ಮಿತ್ರಪಕ್ಷಗಳು ಅನಿವಾರ್ಯ ಎನಿಸಿದಾಗ, ಯಾವ ಮೋದಿಯವರ ವರ್ತನೆಯನ್ನು ವಿರೋಧಿಸಿ ಅವರೆಲ್ಲ ಹಿಂದೆ ಸರಿದಿದ್ದವೋ ಅದೇ ಮೋದಿಯನ್ನು ಮುಂದಿಟ್ಟುಕೊಂಡು ಬೆಂಬಲ ಕೇಳಿದರೆ ಒಪ್ಪಲಾರವು. ಒಂದು ತಟಸ್ಥ, ಸರ್ವಸಮ್ಮತ ಮುಖವನ್ನು ಮುಂದಿಟ್ಟುಕೊಂಡು ಮೈತ್ರಿಗೆ ಮುಂದಾಗಬೇಕು ಎನ್ನುವ ಯೋಚನೆಯಿಂದಲೇ ಮೋದಿಗೆ ಪರ್ಯಾಯವಾಗಿ ನಾಗ್ಪುರದ ಲಿಂಕುಗಳು ಚೆನ್ನಾಗಿರುವ ನಿತಿನ್ ಗಡ್ಕರಿಯನ್ನು ಪೋಷಿಸಲಾಗುತ್ತಿದೆ. ಇದು ಈಗ ರಹಸ್ಯವಾಗೇನೂ ಉಳಿದಿಲ್ಲ.

‘ಮುಂದಿನ ಸಲ ಯಾರ ಹಂಗೂ ಇಲ್ಲದ ಸ್ಥಿರ ಸರ್ಕಾರ ರಚಿಸಲು ಸಾಧ್ಯವಾಗದೇ ಹೋದರೆ (ಮಿತ್ರ ಪಕ್ಷಗಳ ಮರ್ಜಿ ಇಲ್ಲದೆ) ಭಾರತದ ಘನತೆ ವಿಶ್ವದ ಮುಂದೆ ಕುಸಿದು ಬೀಳಲಿದೆ’ ಎಂಬರ್ಥದಲ್ಲಿ ಮೋದಿಯವರು ಇತ್ತೀಚೆಗೆ ಜನರನ್ನು ಅಪ್ರೋಚ್ ಮಾಡಿದ್ದು ಸಹಾ ಸಮ್ಮಿಶ್ರ ಸರ್ಕಾರ ರಚನೆಯಾದರೆ ತನಗೆ ಪ್ರಧಾನಿಯಾಗುವ ಅವಕಾಶ ಸಿಕ್ಕುವುದಿಲ್ಲ ಎಂಬ ಸ್ಪಷ್ಟ ಇರಾದೆಯಿಂದ. ಇತ್ತ ಮೋದಿಯವರು ಮಿತ್ರಪಕ್ಷಗಳ ಮುಲಾಜಿಲ್ಲದ ಸ್ವತಂತ್ರ ಬಿಜೆಪಿಯ ಸರ್ಕಾರಕ್ಕಾಗಿ ಜನರ ಬಳಿ ಬೇಡಿಕೆ ಇಡುತ್ತಿದ್ದರೆ, ಅತ್ತ ಅವರ ಆಪ್ತರಾದ ಅಮಿತ್ ಶಾ ಪಕ್ಷದ ಅಧ್ಯಕ್ಷಾಗಿರುವ ಕಾರಣಕ್ಕೆ ಅನಿವಾರ್ಯವಾಗಿ ತಾನೆ ಮುಂದೆ ನಿಂತು ಮಿತ್ರಪಕ್ಷಗಳ ಜೊತೆಗೆ ಹೊಂದಾಣಿಕೆಗೆ ಓಡಾಡಬೇಕಿದೆ.

ಶಿವಸೇನೆಗು ಸಹಾ ಪ್ರಧಾನಿ ಹುದ್ದೆಯಿಂದ ಮೋದಿಯವರನ್ನು ದೂರ ಇರಿಸುವ ಭರವಸೆ ಕೊಟ್ಟು, ಉದ್ಧವ್ ಠಾಕ್ರೆ ಸೇರಿದಂತೆ ಬಹುಪಾಲು ಮಿತ್ರಪಕ್ಷಗಳ ಜೊತೆ ಒಳ್ಳೆಯ ಒಡನಾಟವಿರುವ ಗಡ್ಕರಿಯವರನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಪ್ರಪೋಸ್ ಮಾಡಿರುವುದರಿಂದಲೇ ಹಳೆಯ ಸಿಟ್ಟನ್ನೆಲ್ಲ ಮರೆತು ಮೈತ್ರಿಗೆ ಸಮ್ಮತಿಸಿದೆ ಎಂದು ಶಿವಸೇನೆಯ ಒಳಮೂಲಗಳೇ ತಿಳಿಸುತ್ತಿವೆ. ಇಂತಹ ಒಂದು ಸ್ಪಷ್ಟ ನೀಲನಕ್ಷೆ ಇರುವ ಕಾರಣಕ್ಕೇ ಅವತ್ತು ಮೈತ್ರಿಯನ್ನು ಘೋಷಿಸುವ ಸಮಯದಲ್ಲಿ ಉದ್ದೇಶಪೂರ್ವಕವಾಗಿ ನಿತಿನ್ ಗಡ್ಕರಿಯವರ ಮುಖ ಕಾಣದಂತೆ ನೋಡಿಕೊಳ್ಳಲಾಯಿತು. ಈ ಮೈತ್ರಿ ಗಡ್ಕರಿಯವರ ಫಲಶ್ರುತಿ ಎಂಬುದು ಬಹಿರಂಗವಾಗಿಬಿಟ್ಟರೆ ಪಕ್ಷದೊಳಗಿನ ಲೆಕ್ಕಾಚಾರಗಳು ಬಯಲಾಗುವುದಲ್ಲದೆ, ಕಾರ್ಯಕರ್ತರಲ್ಲಿ ಗೊಂದಲ ಮೂಡುವ, ಆತ್ಮವಿಶ್ವಾಸ ಕುಗ್ಗುವ ಸಾಧ್ಯತೆ ಇರುತ್ತೆ ಎಂಬುದೇ ಅವತ್ತಿನ ಗಡ್ಕರಿ ಅನುಪಸ್ಥಿತಿಯ ಅಸಲೀ ಕಾರಣ. ಇಲ್ಲವಾಗಿದ್ದರೆ ತನ್ನದೇ ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಮಹತ್ವದ ಬೆಳವಣಿಗೆಗೆ ಅವರು ಗೈರು ಹಾಜರಾಗುವ ಕಾರಣವೇ ಇಲ್ಲ.

ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಇದು ಕೇವಲ ಮೈತ್ರಿ ಮಾತ್ರವಲ್ಲ. ಶಿವಸೇನೆಯ ಮುಂದೆ ಬಿಜೆಪಿ ಸಂಪೂರ್ಣವಾಗಿ ಮಂಡಿ ಊರಿದಂತ ಪರಿಸ್ಥಿತಿ. ಈಗಿನ ಹಂಚಿಕೆಯ ಪ್ರಕಾರ ಒಟ್ಟು ೪೮ ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 25 ಮತ್ತು ಶಿವಸೇನೆ 23 ಸ್ಥಾನಗಳಲ್ಲಿ ಸ್ಪರ್ಧಿಸುವುದೆಂದು ನಿಕ್ಕಿಯಾಗಿದೆ. ಶಿವಸೇನೆ ಭಾಳಾ ಠಾಕ್ರೆಯವರ ನೇತೃತ್ವದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗಲೂ ಮೈತ್ರಿಯಲ್ಲಿ ಅದಕ್ಕೆ ಇಷ್ಟು ಸೀಟುಗಳು ಲಭಿಸಿದ್ದಿಲ್ಲ. ರಾಷ್ಟ್ರೀಯ ಪಕ್ಷವಾದ ಬಿಜೆಪಿ 26-28 ಸ್ಥಾನಗಳನ್ನಿಟ್ಟುಕೊಂಡರೆ ಶಿವಸೇನೆಗೆ 18-19 ಸ್ಥಾನಗಳಷ್ಟೇ ಸಿಗುತ್ತಿದ್ದವು. ಹಾಲಿ ಬಿಜೆಪಿ ಸಂಸದರೇ ಗೆದ್ದು ಪ್ರತಿನಿಧಿಸುತ್ತಿರುವ ಪಾಲ್ಗರ್ ಕ್ಷೇತ್ರವನ್ನೂ ಶಿವಸೇನೆ ಬಿಜೆಪಿಯಿಂದ ತನ್ನ ಪಾಲಿಗೆ ತೆಗೆದುಕೊಳ್ಳಲು ಯಶಸ್ವಿಯಾಗಿದ್ದು, ಇದರಿಂದ ಬೇಸರಗೊಂಡ ಸುಮಾರು 50 ಬಿಜೆಪಿ ಕಾರ್ಯಕರ್ತರು ಪಾರ್ಟಿಯಿಂದಲೇ ಹೊರನಡೆದಿದ್ದಾರೆ. ಕೇವಲ ಎಂಪಿ ಎಲೆಕ್ಷನ್‌ನಲ್ಲಿ ಮಾತ್ರವಲ್ಲ, ಅದು ಮುಗಿದು ಐದಾರು ತಿಂಗಳಿಗೆ ಎದುರಾಗುವ ವಿಧಾನಸಭಾ ಚುನಾವಣೆಗೂ ಸೀಟು ಹಂಚಿಕೆಗಳು ಅಂತಿಮವಾಗಿದ್ದು ಬಿಜೆಪಿ ಮತ್ತು ಶಿವಸೇನೆ ತಲಾ 144 ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿವೆ. ನೆನಪಿರಲಿ, ಕಳೆದ ಅಸೆಂಬ್ಲಿ ಎಲೆಕ್ಷನ್‌ನಲ್ಲಿ ಬಿಜೆಪಿ 122 ಸ್ಥಾನ ಗೆದ್ದಿದ್ದರೆ, ಶಿವಸೇನೆಯ 66 ಶಾಸಕರಷ್ಟೇ ಆಯ್ಕೆಯಾಗಿದ್ದರು. 122 ಸ್ಥಾನ ಗೆದ್ದ ಪಕ್ಷ ಈಗ 66 ಸ್ಥಾನ ಗೆದ್ದ ಪಕ್ಷಕ್ಕೆ ಸಮಪಾಲು ಕೊಡಲು ಸಮ್ಮತಿಸಿಯೆಂದರೆ ಬಿಜೆಪಿ ಮೈತ್ರಿಯಲ್ಲಿ ಸಂಪೂರ್ಣವಾಗಿ ಬಗ್ಗಿದೆ ಅಂತಲೇ ಅರ್ಥ. ಪಕ್ಕದ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಗಣನೀಯ ಸಂಖ್ಯೆಯಲ್ಲಿ ಸ್ಥಾನಗಳನ್ನು ಕಳೆದುಕೊಳ್ಳಲಿರುವುದು ಖಾತ್ರಿಯಾಗಿರುವುದರಿಂದಲೇ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಬಿಟ್ಟುಕೊಟ್ಟು ಉಳಿಸಿಕೊಳ್ಳುವ ರಕ್ಷಣಾತ್ಮಕ ಆಟ ಅನಿವಾರ್ಯವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...