Homeಮುಖಪುಟತಾನು ಮಾಡುವ ಮಹಾನ್‌ ತಪ್ಪುಗಳಿಗೆ ಮೋದಿ ಬೆಲೆತೆರದೆ ಉಳಿದುಕೊಳ್ಳುವುದಾದರೂ ಹೇಗೆ?

ತಾನು ಮಾಡುವ ಮಹಾನ್‌ ತಪ್ಪುಗಳಿಗೆ ಮೋದಿ ಬೆಲೆತೆರದೆ ಉಳಿದುಕೊಳ್ಳುವುದಾದರೂ ಹೇಗೆ?

ಮೋದಿ ಇರಾನಿನ ಆಲಿ ಖಮೇನಿಯಂತೆ! ತಾನು ಉಂಟುಮಾಡುವ ಸಂಕಷ್ಟಗಳಿಗೆ ಆತ ಯಾವುದೇ ರಾಜಕೀಯ ಬೆಲೆತೆರದೆ ಉಳಿದುಕೊಳ್ಳುವುದಾದರೂ ಹೇಗೆ?

- Advertisement -
- Advertisement -

ಇರಾನಿನ ಆಲಿ ಖಮೇನಿಯಂತೆ ಪ್ರಧಾನಿ ನರೇಂದ್ರ ಮೋದಿ ತಾನು ಉಂಟುಮಾಡುತ್ತಿರುವ ಸಂಕಷ್ಟಗಳಿಗೆ ಯಾವುದೇ ರಾಜಕೀಯ ಬೆಲೆ ತೆರುತ್ತಿಲ್ಲ. ತನ್ನ “ಆತ್ಮ ನಿರ್ಭರ” ಭಾಷಣದಲ್ಲಿ ಮೋದಿ- ವಲಸೆ ಕಾರ್ಮಿಕರ ಸಂಕಷ್ಟಗಳು ಮತ್ತು ಉದ್ಯೋಗ ನಷ್ಟದ ಬಗ್ಗೆ ಉಲ್ಲೇಖಿಸಲೇ ಇಲ್ಲ ಎಂಬುದು ಹಲವರನ್ನು ದಂಗುಬಡಿಸಿದೆ. ಆದರೂ, ಯಾರೂ ಅವರ ಮೇಲೆ ಸಿಟ್ಟಿಗೇಳುತ್ತಿಲ್ಲ.

ಒಬ್ಬ ಸಾಮಾನ್ಯ ರಾಜಕಾರಣಿಯಾಗಿದ್ದರೆ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಈ ಹೊತ್ತಿಗೆ ಅಧಃಪಾತಾಳ ತಲುಪಿರುತ್ತಿತ್ತು. ಮಾರ್ಚ್ 24ರಂದು ಘೋಷಿಸಲಾದ ದಿಡೀರ್ ಲಾಕ್‌ಡೌನ್‌ನಿಂದ ಮೂರರಲ್ಲಿ ಇಬ್ಬರು ಭಾರತೀಯರು ಕೆಲಸ ಕಳೆದುಕೊಂಡಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತವೆ. ಎರಡು ತಿಂಗಳುಗಳಿಂದ ಉಲ್ಭಣಿಸುತ್ತಿರುವ ವಲಸೆ ಕಾರ್ಮಿಕರ ಬಿಕ್ಕಟ್ಟು ನಿಭಾಯಿಸಲು ಸರಕಾರವು ದಯನೀಯವಾಗಿ ವಿಫಲವಾಗಿದೆ. ಅರ್ಧದಷ್ಟು ಭಾರತೀಯ ಕುಟುಂಬಗಳು ದಿನದ ಊಟವನ್ನು ಕಡಿತಗೊಳಿಸಿವೆ. ಆದರೂ ಆಶ್ಚರ್ಯಕರವಾಗಿ ಮೋದಿಯ ವಿರುದ್ಧ ಯಾರಿಗೂ ಸಿಟ್ಟಿರುವಂತೆ ಕಾಣುವುದಿಲ್ಲ. ಆತ ಹಿಂದಿನಂತೆಯೇ ಜನಪ್ರಿಯರಾಗಿರುವಂತಿದೆ.

ಮೇ 12ರಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಯಾವುದೇ ಸಾಂತ್ವನ ಒದಗಿಸುವುದು ಬಿಡಿ, ಆತ ಒಮ್ಮೆ ಕೂಡಾ ವಲಸೆ ಕಾರ್ಮಿಕರ ಬಿಕ್ಕಟ್ಟನ್ನು ಉಲ್ಲೇಖಿಸಲೇ ಇಲ್ಲದಿರುವುದು ಅನೇಕರನ್ನು ದಂಗುಬಡಿಸಿದೆ. ಆತ ಅಭೂತಪೂರ್ವವಾದ ಉದ್ಯೋಗ ನಷ್ಟವನ್ನಾಗಲೀ, ಅಗತ್ಯ ವಸ್ತುಗಳ ಕೊರತೆಯನ್ನಾಗಲೀ ಅಥವಾ ಉತ್ಕಟ ಹತಾಶೆಯ ವಾತಾವರಣವನ್ನಾಗಲೀ ಗಮನಕ್ಕೇ ತೆಗೆದುಕೊಳ್ಳಲಿಲ್ಲ. 2016ರಲ್ಲಿ ನೋಟು ಅಮಾನ್ಯೀಕರಣವು ಉಂಟುಮಾಡಿದ ಜೀವನಾವಕಾಶಗಳ ನಾಶವನ್ನು ಒಪ್ಪಿಕೊಳ್ಳದ ರೀತಿಯಲ್ಲಿಯೇ ಇದು. ಬೇರಾವುದೇ ರಾಜಕೀಯ ನಾಯಕ ಇಂತಹ ಒಂದು ಮಹಾಪ್ರಮಾದವನ್ನು ಮಾಡಿ ಉಳಿದುಕೊಳ್ಳುತ್ತಿರಲಿಲ್ಲ.

ಬಹುತೇಕ ತಾನು ಉಂಟುಮಾಡುವ ಸಂಕಷ್ಟಗಳಿಗೆ ಆತ ಯಾವುದೇ ರಾಜಕೀಯ ಬೆಲೆತೆರದೆ ಉಳಿದುಕೊಳ್ಳುವುದಾದರೂ ಹೇಗೆ? ತಮ್ಮ ಸಂಕಷ್ಟಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿರುವಾಗಲೂ ಹೆಚ್ಚಿನ ಜನರಿಗೆ ಆತ ಒಬ್ಬ ದುರಹಂಕಾರಿ, ವಾಸ್ತವದೊಂದಿಗೆ ಸಂಪರ್ಕ ಕಳೆದುಕೊಂಡ ನಾಯಕನಾಗಿ ಅಥವಾ ಸರಳವಾಗಿ ಒಬ್ಬ ಕ್ರೂರಿಯಾಗಿ ಕಾಣಿಸಿಕೊಳ್ಳುತ್ತಿಲ್ಲವೇಕೆ?

ಮೋದಿ ಸಾಮಾನ್ಯವಾದ ರಾಜಕೀಯ ವಿಶ್ಲೇಷಣೆಗೆ ನಿಲುಕುತ್ತಿಲ್ಲವೇಕೆಂದರೆ, ಅವರ ಪ್ರಭಾವ ಕೇವಲ ರಾಜಕೀಯವಾದುದಲ್ಲ. ಮೋದಿಯ ಪ್ರಭಾವ ಪ್ರವಾದಿಯಂತಹ ಅರೆ ಧಾರ್ಮಿಕವಾದದ್ದು. ಗಾಂಧಿಯಂತೆಯೇ ಮೋದಿ- ರಾಜಕೀಯ ಶಾಸ್ತ್ರಜ್ಞ ಮೋರಿಸ್ ಜೋನ್ಸ್ ಹಿಂದೆ ಉಲ್ಲೇಖಿಸಿದ್ದಂತೆ ಭಾರತೀಯ ರಾಜಕಾರಣದ “ಸಂತನ ಪ್ರತಿಮೆ”. ಆತ ಜನರ ಮಟ್ಟಿಗೆ ಸ್ವಯಂ ಘೋಷಿಸಿಕೊಂಡಂತೆ ಒಬ್ಬ “ಫಕೀರ”; ಕುಟುಂಬ ಮತ್ತು ಐಹಿಕ ಆಸ್ತಿಗಳಿಂದ ದೂರವಾಗಿ, ರಾಜಕೀಯವಾಗಿ ಮಾತ್ರವಲ್ಲ; ಸಾಮಾಜಿಕವಾಗಿ, ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಭಾರತದ ನಾಯಕತ್ವ ವಹಿಸಲು ಬಂದಾತ. ಆದುದರಿಂದಲೇ ಅವರು ಅನುಯಾಯಿಗಳನ್ನು ಮಾತ್ರವಲ್ಲ; ಭಕ್ತರನ್ನು ಹೊಂದಿರುವುದು. ಆದುದರಿಂದಲೇ ಈ ಭಕ್ತಿ ಆತ ಮುನ್ನಡೆಸುವ ಸರಕಾರದ ಸಾಧನೆಗಳಿಗೆ ಅತೀತವಾದದ್ದು.

ಜನರ ಸಂಕಷ್ಟವು ನಂಬಿಕೆಯ ಪರೀಕ್ಷೆ!

ನೀವು ಸಂಕಷ್ಟಗಳಿಗೆ ಒಳಗಾದಾಗ ನಿಮ್ಮ ಸಂತನನ್ನು ಕೈಬಿಡುವುದಿಲ್ಲ; ನಿಮ್ಮ ದೇವರನ್ನು ಕೈಬಿಡುವುದಿಲ್ಲ. ನಿಮ್ಮ ನಂಬಿಕೆ ಇಮ್ಮಡಿಯಾಗುತ್ತದೆ. ಯಾಕೆಂದರೆ, ಈ ಸಂಕಷ್ಟಗಳೆಲ್ಲವೂ ಇನ್ನಷ್ಟು ಉನ್ನತವಾದ ಉದ್ದೇಶಕ್ಕಾಗಿ ಎಂದು ನಿಮ್ಮ ದೇವರು ನಿಮಗೆ ಹೇಳುತ್ತಾನೆ. ಈ ಕಲ್ಲು ಮುಳ್ಳಿನ ಹಾದಿಯು ದೇವರು ಮಾತ್ರ ನಿಮ್ಮನ್ನು ಕೊಂಡೊಯ್ಯಬಲ್ಲ ಮುಕ್ತಿಗಾಗಿ! ಒಂದು ಸಲ ಮೋದಿ ದಿನಗೂಲಿ ನೌಕರರ – ಪೌರ ಕಾರ್ಮಿಕರ ಸಂಕಷ್ಟಗಳನ್ನು ಉಲ್ಲೇಖಿಸಿದಾಗ ಅವರದನ್ನು “ತಪಸ್ಯಾ” ಅಥವಾ ತಪಸ್ಸು ಎಂದು ಕರೆದರು. ಅಂದರೆ, ಉನ್ನತ ಉದ್ದೇಶಕ್ಕಾಗಿ ಸಂಕಷ್ಟ.

ಅದೇ ರೀತಿ ಅವರು ನೋಟು ಅಮಾನ್ಯೀಕರಣವನ್ನು “ಭ್ರಷ್ಟಾಚಾರದ ವಿರುದ್ಧ ಯಜ್ಞ” ಎಂದು ಕರೆದಿದ್ದರು. ಎಪ್ರಿಲ್ 14ರಂದು ಮೊದಲ ಲಾಕ್‌ಡೌನ್ ವಿಸ್ತರಿಸಿದಾಗ, ಅವರು ಇದುವೇ ಆಧ್ಯಾತ್ಮಿಕವೆಂದು ಕಾಣುವ ಪದಪ್ರಯೋಗ ಮಾಡಿ, “ತ್ಯಾಗ” ಮತ್ತು “ತಪಸ್ಯಾ”ಕ್ಕೆ ಕರೆಕೊಟ್ಟರು. ಗಾಂಧಿಯವರು ಭಾರತವು ತ್ಯಾಗ ಮತ್ತು ಸ್ವಯಂ ಶುದ್ಧೀಕರಣದಿಂದ ಸ್ವಾತಂತ್ರ‍್ಯ ಗಳಿಸುವುದು ಎಂದು ಹೇಳಿದ್ದರು ಮತ್ತು ಇದುವೇ ಸತ್ಯಾಗ್ರಹಕ್ಕೆ ಆಧಾರವಾಯಿತು. ಮೋದಿ ಜನರ ತ್ಯಾಗ ಮತ್ತು ಬಲಿದಾನದಿಂದ “ಆತ್ಮ ನಿರ್ಭರ ಭಾರತ” ಅಂದರೆ, ಸ್ವಾವಲಂಬಿ ಭಾರತ ಕಟ್ಟುವುದಾಗಿ ಹೇಳುತ್ತಿದ್ದಾರೆ.

ಮೋದಿಯ ನೋಟು ಅಮಾನ್ಯೀಕರಣದ ಅಮಾನವೀಯತೆ

ಅದಕ್ಕಾಗಿಯೇ ಮೋದಿ ತನ್ನ ಭಾಷಣವನ್ನು ಭಾರತದ ಪ್ರಾಚೀನ ವೈಭವದಿಂದ ಆರಂಭಿಸಿದ್ದು. ಮೋದಿ ಒಂದು ನಿರ್ದಿಷ್ಟ ನೈತಿಕ ಬ್ರಹ್ಮಾಂಡದ ಪ್ರವಾದಿ. ಆ ಬ್ರಹ್ಮಾಂಡದಲ್ಲಿ ಭಾರತವು ಮಹಾನ್ ದೇಶವಾಗಿತ್ತು. ಅವರ ಮಾತಿನಂತೆಯೇ ನಂತರ “1200 ವರ್ಷಗಳ ಗುಲಾಮಿಯಲ್ಲಿ” ಕಳೆದೆವು. (ಇದರಲ್ಲಿ ಸ್ವಾತಂತ್ರ‍್ಯಾನಂತರದ ಗುಲಾಮಿ ಮನೋವೃತ್ತಿಯೂ ಸೇರಿದೆ.)- ಅದೂ ನಮ್ಮನ್ನು ಹಿಂದಿನ ವೈಭವಕ್ಕೆ ಕೊಂಡೊಯ್ಯಲು ಮೋದಿ ಬರುವ ತನಕ! ಕೊರೋನ ವೈರಸ್ ಜಾಗತಿಕ ನಾಯಕರು ಅನುಸರಿಸುತ್ತಿರುವಂತೆ ಹಾನಿ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕಾದ ಬಿಕ್ಕಟ್ಟಲ್ಲ! ಅದು ಭಾರತವನ್ನು ಒಂದು ಮಹಾನ್ ರಾಷ್ಟ್ರವನ್ನಾಗಿ ಪುನರ್ ಸ್ಥಾಪನೆ ಮಾಡುವ ಅವರ ಕನಸನ್ನು ಸಾಕಾರಗೊಳಿಸಲು ಒದಗಿದ ಅವಕಾಶ!

ಆದರೆ, ಅದಕ್ಕಾಗಿ ಅವರಿಗೆ ನಿಶ್ಶರ್ತವಾದ ನಂಬಿಕೆ ಬೇಕು. ಈ ಚೌಕಟ್ಟಿನಲ್ಲಿ ಜನರ ಸಂಕಷ್ಟವು ಈ ನಂಬಿಕೆಯ ಪರೀಕ್ಷೆ. ರಾಷ್ಟ್ರದ ಮೇಲಿನ, ಮೋದಿಯ ನಾಯಕತ್ವದ ಮೇಲಿನ ಜನರ ನಂಬಿಕೆಯ ಪರೀಕ್ಷೆ. ಅನೇಕ ಹತಾಶ ಜನರು ಈ ನಂಬಿಕೆಗೆ ಕಟ್ಟುಬೀಳುವುದರಲ್ಲಿ ವಿಶೇಷವೇನಿಲ್ಲ. ಸಂಪೂರ್ಣ ಹತಾಶೆಗೆ ಗುರಿಯಾಗುವುದಕ್ಕೆ ಬದಲಾಗಿ ಈ ನಂಬಿಕೆಯು ಅವರ ಸಂಕಷ್ಟಗಳಿಗೆ ಒಂದು ಅರ್ಥವನ್ನು ಕೊಡುತ್ತದೆ! ಸಂಕಷ್ಟವು ನಂಬಿಕೆಯನ್ನು ಬಲಗೊಳಿಸುತ್ತದೆ; ಅದನ್ನು ದುರ್ಬಲಗೊಳಿಸುವುದಿಲ್ಲ!

ಈ ನಂಬಿಕೆಯನ್ನು ಇತ್ತೀಚೆಗೆ ಲಕ್ಷಾಂತರ ಜನರು ಭಾಗವಹಿಸಿದ ಜಾಗಟೆ ಬಡಿಯುವುದು, ದೀಪ ಹಚ್ಚುವುದು ಮುಂತಾದ ಧಾರ್ಮಿಕ ಆಚರಣೆಗಳ ಮೂಲಕ ಪವಿತ್ರಗೊಳಿಸಲಾಗಿದೆ. ಜೊತೆಗೆ ಮೋದಿ ಜನರಿಗೆ ಏಳು ಶಪಥಗಳನ್ನೂ ಬೋಧಿಸಿದರು. ಅವುಗಳಲ್ಲಿ “ವಯಸ್ಸಾದವರನ್ನು ನೋಡಿಕೊಳ್ಳುವುದು”, “ಬಡವರ ಬಗ್ಗೆ ಕಾಳಜಿ ವಹಿಸುವುದು”, “ನಿಮ್ಮ ಕಾರ್ಮಿಕರ ಬಗ್ಗೆ ಉದಾರ ಭಾವ ಹೊಂದಿರುವುದು” ಇತ್ಯಾದಿ ಸೇರಿದ್ದವು. ಇದೇ ವೇಳೆಗೆ ಅವರು ತನ್ನದೇ ಸ್ವಂತ ಯೋಗದ ಅನಿಮೇಟೆಡ್ ವಿಡಿಯೋವನ್ನು ಬಿಡುಗಡೆಗೊಳಿಸಿದರು. ಅದನ್ನು ಲಕ್ಷಾಂತರ ಜನರು ನೋಡಿದರು. ಈ ಎಲ್ಲಾ ಕ್ರಮಗಳ ಮೂಲಕ ಅವರು ಭಾರತದ ಸಾಮಾಜಿಕ, ನೈತಿಕ ಮತ್ತು ಆಧ್ಯಾತ್ಮಿಕ ನಾಯಕತ್ವಕ್ಕೆ ತನ್ನ ದಾವೆಯನ್ನು ಬಲಗೊಳಿಸಲು ಯತ್ನಿಸಿದರು.

ಪರಿಹಾರ ಎಂದರೆ ವೈಯಕ್ತಿಕ ಔದಾರ್ಯ!

ಮೋದಿ ತನ್ನ ಭಾಷಣಗಳನ್ನು ಮಹಾನ್ ಜ್ಞಾನೋದಯದ ಪ್ರಭಾವಳಿಯೊಂದಿಗೆ ಪ್ಯಾಕೇಜ್ ಮಾಡುತ್ತಾರೆ. ಈ ಬಿಕ್ಕಟ್ಟಿನ ವೇಳೆಯಲ್ಲಿ ಉಳಿದ ಪ್ರಜಾಸತ್ತಾತ್ಮಕ ನಾಯಕರು ಪ್ರತಿನಿತ್ಯ ತಮ್ಮ ಪ್ರಜೆಗಳೊಂದಿಗೆ ವ್ಯವಹರಿಸುವುದಕ್ಕೆ ವ್ಯತಿರಿಕ್ತವಾಗಿ ಮೋದಿ ವಾರಕ್ಕೊಮ್ಮೆ ಜನರ ಜೊತೆ ಸಂವಹನ ಮಾಡುತ್ತಾರೆ. ತಾನು ಪ್ರತ್ಯಕ್ಷನಾಗುವ ಕುರಿತು ಒಂದೆರಡು ದಿನ ಮೊದಲೇ ಘೋಷಿಸುತ್ತಾರೆ. ಆ ಮೂಲಕ ಜನರು ಜ್ಞಾನೋದಯಕ್ಕಾಗಿ ಕಾಯುವಂತೆ ಮಾಡುತ್ತಾರೆ. ಈ ಎರಡು ದಿನಗಳ ಅವಕಾಶದಲ್ಲಿ ಊಹಾಪೋಹಗಳು ನಡೆಯುತ್ತವೆ; ಜನರು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವ ರೀತಿಯಲ್ಲಿ ತಮ್ಮ ಆಸೆ, ಆಕಾಂಕ್ಷೆಗಳನ್ನು ವ್ಯಕ್ತಪಡಿಸುತ್ತಾರೆ!

ಕೊನೆಗೆ ಆತ ನಿಗದಿತ ಸಮಯದಲ್ಲಿ ಪ್ರತ್ಯಕ್ಷವಾದಾಗ ಅವರ ಭಾಷಣಗಳು ಅರ್ಧ ಭಾಗ ಪ್ರವಚನ, ಅರ್ಧ ಭಾಗ ಆದೇಶಗಳಾಗಿರುತ್ತವೆ. ಅವುಗಳ ನಡುವೆ ಒಂದು ಆಶ್ಚರ್ಯಜನಕ ಅಥವಾ ಆಘಾತಕಾರಿ ಘೋಷಣೆ ಇರುತ್ತದೆ. ಉಳಿದ ರಾಷ್ಟ್ರ ನಾಯಕರು ಸಮಾಧಾನ ಚಿತ್ತದಿಂದ ಬಿಕ್ಕಟ್ಟು ನಿವಾರಣಾ ಕ್ರಮಗಳನ್ನು ವಿವರಿಸಿದರೆ, ಮೋದಿ ಮಾತ್ರ ಬಾಯಿಯಿಂದ ಚಿನ್ನದ ಮೊಟ್ಟೆಯನ್ನು ಹೊರತೆಗೆಯುವ ಸಾಯಿಬಾಬಾನಂತೆ ಘೋಷಣೆಗಳನ್ನು ಮಾಡುತ್ತಾರೆ.

“20 ಲಕ್ಷ ಕೋಟಿ” ಎಂದು ಮತ್ತೆಮತ್ತೆ ಹೇಳುತ್ತಾ ತನ್ನ ಪ್ಯಾಕೇಜಿನ ಅಗಾಧತೆಯ ಕುರಿತು ಜನರು ಮಂತ್ರಮುಗ್ಧಗೊಳ್ಳುವಂತೆ ಮಾಡುತ್ತಾರೆ. ಅದನ್ನು ಅವರು “ಮೋದಿ ಪ್ಯಾಕೇಜ್” ಎಂದು ಕರೆದಿಲ್ಲ. (ಆ ಕೆಲಸವನ್ನು ಭಟ್ಟಂಗಿ ಮಾಧ್ಯಮಗಳಿಗೆ ವಹಿಸಲಾಗಿದೆ.) ಆದರೆ, ಅವರು ಅದನ್ನು ಜನರ ಊಹೆಗೆ ಮೀರಿದ ತನ್ನ ವೈಯಕ್ತಿಕ ಔದಾರ್ಯ ಎಂಬಂತೆ ಬಿಂಬಿಸುತ್ತಾರೆ. “ಮೋದಿ ಪ್ಯಾಕೇಜ್ ಪಾಕಿಸ್ತಾನದ ಆರ್ಥಿಕತೆಯಷ್ಟು ಅಥವಾ ಅದಕ್ಕಿಂತಲೂ ಹೆಚ್ಚು” ಎಂದು ಅವರ ಹಿಂಬಾಲಕರು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಭಟ್ಟಂಗಿ ಪತ್ರಕರ್ತರು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಚೀರುತ್ತಾರೆ. ಆದರೆ, ವಾಸ್ತವವಾಗಿ ಪ್ಯಾಕೇಜ್ ಭಾರತದಂತಹ ದೇಶಕ್ಕೆ ಅಗತ್ಯವಿರುವುದಕ್ಕಿಂತ ಅಥವಾ ಬೇರೆ ಕೆಲವು ದೇಶಗಳು ನೀಡುತ್ತಿರುವುದಕ್ಕಿಂತ ಕಡಿಮೆ ಇರುತ್ತದೆ. ಇದು ಹಿಂದೆ ಗುಜರಾತಿನಲ್ಲಿ ಬಳಸಲಾದ ಹಳೆಯ ತಂತ್ರ. ಮೋದಿ ನಿರ್ದಿಷ್ಟವಾಗಿ ಏನನ್ನೂ ಹೇಳುವುದಿಲ್ಲ; ಧಾರ್ಮಿಕ ನಾಯಕರಂತೆ ಭವ್ಯವಾಗಿ, ಅಸ್ಪಷ್ಟ ಸಾಂಕೇತಿಕವಾಗಿ ಮಾತ್ರ ಹೇಳುತ್ತಾರೆ.

ಮಂತ್ರಿಗಳು ಉತ್ತರದಾಯಿ; ಮೋದಿಯಲ್ಲ!

ಮೋದಿಯ “ಆತ್ಮ ನಿರ್ಭರ ಭಾರತ”ವನ್ನು ಸಾಕಾರಗೊಳಿಸಲು ಯೋಜನೆಗಳನ್ನು ರೂಪಿಸುವ ಕೆಲಸ ಮಾತ್ರ ನಿರ್ಮಲಾ ಸೀತಾರಾಮನ್ ಅಂತವರಿಗೆ. ಮೋದಿ ಯಾವುದೇ ಧೋರಣೆಗಳನ್ನು ನಿರ್ದಿಷ್ಟವಾಗಿ ಮತ್ತು ನಿಖರವಾಗಿ ಘೋಷಿಸುವುದಿಲ್ಲವೇಕೆಂದರೆ, ಅವುಗಳಿಗಾಗಿ ತನ್ನನ್ನು ಹೊಣೆಗಾರನನ್ನಾಗಿ ಮಾಡುವುದು ಅವರಿಗೆ ಬೇಕಾಗಿಲ್ಲ. ಎಲ್ಲ ವೈಫಲ್ಯಗಳ ಹೊಣೆಯನ್ನು ನಿರ್ಮಲಾ ಸೀತಾರಾಮನ್‌ರಂತೆ ಇತರ ಮಂತ್ರಿಗಳು ಹೊರಬೇಕಾಗುತ್ತದೆ.

ಒಟ್ಟಿನಲ್ಲಿ ಮೋದಿ ಇರಾನಿನ ಪರಮೋಚ್ಚ ನಾಯಕ ಆಲಿ ಖಮೇನಿಯಂತೆ ತನ್ನನ್ನು ಪ್ರತಿಷ್ಟಾಪಿಸಿಕೊಂಡಿದ್ದಾರೆ. ದೇಶದ ಎಲ್ಲಾ ಆಗುಹೋಗುಗಳಲ್ಲಿ ಅವರದ್ದೇ ಕೊನೆಯ ಮಾತು. ಆದರೆ, ವೈಫಲ್ಯಗಳ ಹೊಣೆಗಾರಿಕೆಯನ್ನು ಹೊರಬೇಕಾಗಿಲ್ಲ. ಅವರು ಎಲ್ಲಕ್ಕೂ ಆತೀತರು!

-ಅಸೀಮ್ ಆಲಿ

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ಕೃಪೆ: ದಿ ಪ್ರಿಂಟ್‌

(ಲೇಖಕರು ದಿಲ್ಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಸಂಸ್ಥೆಯಲ್ಲಿ ಸಂಶೋಧಕರು. ಅಭಿಪ್ರಾಯಗಳು ವೈಯಕ್ತಿಕವಾದವುಗಳು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸರ್ವಾಧಿಕಾರಿಗಳ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತದಾನ ಮಾಡಿ: ಖರ್ಗೆ, ರಾಹುಲ್‌ ಗಾಂಧಿ ಆಗ್ರಹ

0
ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ಸರ್ವಾಧಿಕಾರಿಗಳ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತದಾರರು ಮನೆಯಿಂದ ಹೊರಗೆ ಬಂದು ಮತ ಚಲಾಯಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ. ಇದು ಸಾಮಾನ್ಯ...