Homeಮುಖಪುಟಕೃಷಿ ಕ್ಷೇತ್ರದ ಸಮಸ್ಯೆಗಳು: ಡಾ.ಕಮ್ಮರಡಿಯವರ ಲೇಖನ ಸರಣಿ -ಆಹಾರ ಭದ್ರತೆ ನೀಡಿದ ರೈತರ ಪಾಡೇನು?

ಕೃಷಿ ಕ್ಷೇತ್ರದ ಸಮಸ್ಯೆಗಳು: ಡಾ.ಕಮ್ಮರಡಿಯವರ ಲೇಖನ ಸರಣಿ -ಆಹಾರ ಭದ್ರತೆ ನೀಡಿದ ರೈತರ ಪಾಡೇನು?

ಭಾರತದ ಕೃಷಿ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಪರಿಹಾರ ಒದಗಿಸುವ ದೃಷ್ಟಿಯಿಂದ ಚಿಂತಿಸುವವರಲ್ಲಿ ಪ್ರಕಾಶ್‌ ಕಮ್ಮರಡಿಯವರೂ ಒಬ್ಬರು. ಏಕಕಾಲದಲ್ಲಿ ಕೃಷಿ ಅರ್ಥಶಾಸ್ತ್ರಜ್ಞ ಮತ್ತು ಸಮಾಜವಾದಿ ಚಿಂತಕರಾಗಿರುವುದೂ ಅದಕ್ಕೊಂದು ಕಾರಣವಿರಬಹುದು. ಭಾರತದ ಆಹಾರ ಭದ್ರತೆ, ಈಗಿನ ಸಮಸ್ಯೆ ಇತ್ಯಾದಿಗಳ ಕುರಿತು ಪ್ರಸ್ತುತ ಲೇಖನದಲ್ಲಿ ಚರ್ಚಿಸಿದ್ದಾರೆ. ಅವರು ಬರೆಯಲಿರುವ ಸರಣಿ ಲೇಖನಗಳಲ್ಲಿ ಇದು ಮೊದಲನೆಯದು

- Advertisement -
- Advertisement -


ಡಾ. ಟಿ. ಎನ್. ಪ್ರಕಾಶ್ ಕಮ್ಮರಡಿ

 

 

ಭಾರತವು ಸ್ವಾತಂತ್ರ್ಯ ಪಡೆದ ನಂತರದ ವರ್ಷಗಳಲ್ಲಿ ಆಹಾರದ ಉತ್ಪಾದನೆ ಅತೀ ಕಡಿಮೆಯಿದ್ದು, ಹಸಿದಹೊಟ್ಟೆಗೆ ಊಟ ನೀಡುವುದೇ ದೊಡ್ಡ ಸಮಸ್ಯೆಯಾಗಿತ್ತು. ಆಹಾರ ಭದ್ರತೆಯು ಅಂದಿನ ಪ್ರಧಾನ ಸಮಸ್ಯೆ ಹಾಗಾಗಿ ವಿದೇಶಗಳಿಗೆ ಕೈವೊಡ್ಡಿ ಆಹಾರದ ಆಮದು ಮಾಡಿಕೊಳ್ಳಬೇಕಾಗಿರುವ ಶೋಚನಿಯ ಪರಿಸ್ಥಿತಿಯನ್ನು ದೇಶ ಎದುರಿಸುತ್ತಿತ್ತು. ಆ ಸಮಯದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನವು ಸಮೃದ್ಧ ಆಹಾರ ಧಾನ್ಯಗಳನ್ನು ಉತ್ಪಾದಿಸುತ್ತಿತ್ತು. ಆ ದೇಶದ ಗೋಧಿ ಧಾನ್ಯ ತುಂಬಿದ ಹಡಗುಗಳು ಭಾರತದ ಆಸುಪಾಸಿನಲ್ಲಿ ಹಾದು ಹೋಗುತ್ತಿರುವಾಗ ಅವು ದಾರಿ ತಪ್ಪಿ ನಮ್ಮ ಬಂದರುಗಳಿಗೆ ಬರಲಿ, ಆ ಮೂಲಕ “ಹಡಗಿನಿಂದ ಆಹಾರ ದೇಶದ ಜನರ ಬಾಯಿಗೆ” (Ship to Mouth) ಬಂದು ಬೀಳುವಂತಾಗಲಿ ಎಂದು ಹಾರೈಸುವ ಹೀನಾಯ ಪರಿಸ್ಥಿತಿ ದೇಶದಲ್ಲಿತ್ತು. ರಾಜತಾಂತ್ರಿಕವಾಗಿ ಭಾರತ ಅಂದಿನ ಸೋವಿಯತ್ ರಷ್ಯಾದ ಜೊತೆಗಿರುವುದನ್ನೇ ಹೆಳೆ ಮಾಡಿಕೊಂಡ ಅಮೇರಿಕಾ ಭಾರತದ ಈ ಪರಿಸ್ಥಿತಿಯ ಬಗ್ಗೆ, ಅವಕಾಶ ದೊರೆತಾಗಲೆಲ್ಲಾ ಅಣಕವಾಡುತ್ತಿತ್ತು.

ಆಹಾರದ ತೀವ್ರ ಅಭಾವ ಹಾಗೇ ಮುಂದುವರಿದಲ್ಲಿ ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯಕ್ಕೇ ಕುತ್ತು ಬರುವ ಅಪಾಯ ದೇಶದ ಮುಂದಿತ್ತು.

ಆದರೆ ಅದೆಲ್ಲಾ ಈಗ ಇತಿಹಾಸ. ನಾವೀಗ ಆಹಾರ ಭದ್ರತೆ ಸಾಧಿಸಿದ್ದೇವೆ. ನಮ್ಮ ರೈತರು ಸುಧಾರಿಸಿದ ತಳಿ, ನೀರಾವರಿ, ಆಧುನಿಕ ತಂತ್ರಜ್ಞಾನ, ಯಂತ್ರಗಳನ್ನು ಸಮರ್ಥವಾಗಿ ಬಳಸಿ, ಬೆವರು ಹರಿಸಿ ದುಡಿದಿರುವ ಪರಿಣಾಮವಾಗಿ ಇಂದು ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿರುವುದು ಮಾತ್ರವಲ್ಲ ಬಹುತೇಕ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಉತ್ಪಾದನೆಯಲ್ಲಿ ದೇಶ ಸಮೃದ್ಧಿಯನ್ನೇ ಸಾಧಿಸಿರುತ್ತದೆ. ಇದನ್ನೇ ಹಸಿರುಕ್ರಾಂತಿ (Green Revolution) ಎಂದು ವರ್ಣಮಯವಾಗಿ ಬಣ್ಣಿಸಲಾಗುತ್ತಿದೆ. ಈ ಮೂಲಕ ದೇಶಕ್ಕೆ ಆಹಾರದ ಉತ್ಪಾದನೆಯಲ್ಲಿ ಸ್ವಾವಲಂಬನೆ ಮಾತ್ರವಲ್ಲ ತರಕಾರಿ, ಹಣ್ಣು, ಹಾಲುಗಳ ಸಮೃದ್ಧ ಉತ್ಪಾದನೆ ಮೂಲಕ ಅರಿವಿಗೂ ಬಾರದ ಅಗಾಧ ಪ್ರಮಾಣದ ಪೌಷ್ಟಿಕಾಂಶ ಭದ್ರತೆ (Nutrition Security) ಕೂಡ ರೈತರು ಒದಗಿಸಿರುವುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ

ಇದನ್ನೂ ಓದಿ: ಕನಿಷ್ಠ ಬೆಲೆಯ ಗರಿಷ್ಠ ಸಮಸ್ಯೆಗಳು

ಭಾರತದ ಈಗಿನ ಆಹಾರ ಉತ್ಪಾದನೆಯ ಪ್ರಮಾಣ

ಇತ್ತೀಚೆಗಿನ ವರ್ಷಗಳಲ್ಲಿ (2018-19) ನಮ್ಮ ಆಹಾರ ಉತ್ಪಾದನೆ ದಾಖಲೆ ಪ್ರಮಾಣದ 281 ದಶಲಕ್ಷ ಟನ್ ಮೀರಿರುತ್ತದೆ. ಇದರಲ್ಲಿ ಭತ್ತ 116 ದಶಲಕ್ಷ ಟನ್, ಗೋಧಿ 99 ದಶಲಕ್ಷ ಟನ್, ಒರಟು ಧಾನ್ಯ 43 ದಶಲಕ್ಷ ಟನ್, ದ್ವಿದಳ ಧಾನ್ಯ 24 ದಶಲಕ್ಷ ಟನ್ ಹಾಗೂ ಎಣ್ಣೆಕಾಳು 32 ದಶಲಕ್ಷ ಟನ್‍ಗಳಾಗಿರುತ್ತದೆ. ಹಾಗೇ, ನಮ್ಮ ತರಕಾರಿ (187 ದಶಲಕ್ಷ ಟನ್), ಹಣ್ಣು (97 ದಶಲಕ್ಷ ಟನ್), ಹಾಲು (176 ದಶಲಕ್ಷ ಟನ್) ಮತ್ತು ಸಕ್ಕರೆ (132 ದಶಲಕ್ಷ ಟನ್) ಉತ್ಪಾದನೆ ಕೂಡ ದಾಖಲು ಪ್ರಮಾಣದ್ದಾಗಿವೆ. ಈ ಎಲ್ಲಾ ಉತ್ಪನ್ನಗಳನ್ನು ದೇಶದ 137 ಕೋಟಿ ಜನತೆಗೆ ಸಮಾನವಾಗಿ ಹಂಚಿದರೆ ಹಸಿವು, ಅಪೌಷ್ಟಿಕಾಂಶತೆಗಳು ಭಾರತದಲ್ಲಿ ಮಾಯವಾಗಲಿವೆ ಎನ್ನುವುದಕ್ಕೇ ಈ ಕೆಳಗಿನ ಚಿತ್ರದ ಅಂಕಿಅಂಶಗಳೇ ಸಾಕ್ಷಿ.

ಆಹಾರ ಭದ್ರತೆ

ಚಿತ್ರ: ಭಾರತದಲ್ಲಿ ತಲಾವಾರು ಲಭ್ಯವಿರುವ ಆಹಾರ, ಹಣ್ಣು, ತರಕಾರಿ ಪ್ರಮಾಣ (ಗ್ರಾಂ/ ಪ್ರತಿ ನಿತ್ಯ)

ಗಮನಿಸಬೇಕಾದ ಅತೀ ಮುಖ್ಯ ವಿಚಾರವೆಂದರೆ ವ್ಯಕ್ತಿ ಒಬ್ಬ ಆರೋಗ್ಯಕರ ಬದುಕು ನಡೆಸಲು ಅಗತ್ಯವಿರುವ ಪ್ರಮಾಣಕ್ಕಿಂತ ಅಧಿಕ ಆಹಾರ, ಹಣ್ಣು, ಹಾಲು, ತರಕಾರಿಗಳನ್ನು ಈ ದೇಶದ ಜನತೆಗೆ ನಮ್ಮ ರೈತಾಪಿ ವರ್ಗ ನೀಡಿರುತ್ತದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಪೌಷ್ಟಿಕಾಂಶ ನಿರ್ವಹಣಾ ಬ್ಯೂರೋ” (National Nutrition Monitoring Bureau) ಪ್ರತಿ ವ್ಯಕ್ತಿ ದಿನನಿತ್ಯ 400 ಗ್ರಾಂ ಏಕದಳ ಧಾನ್ಯ, 80 ಗ್ರಾಂ ದ್ವಿದಳ ಧಾನ್ಯ, 30 ಗ್ರಾಂ ಎಣ್ಣೆಕಾಳು, 300 ಗ್ರಾಂ ತರಕಾರಿ ಹಾಗು 300 ಗ್ರಾಂ ಹಾಲು ಸೇವಿಸುವಂತೆ ಶಿಫಾರಸ್ಸು ಮಾಡಿರುತ್ತದೆ. ಅಂದರೆ ದ್ವಿದಳಧಾನ್ಯದ ಹೊರತಾಗಿ ಬೇರೆಲ್ಲಾ ಉತ್ಪನ್ನಗಳ ತಲಾವಾರು ಲಭ್ಯತೆ ದೇಶದಲ್ಲಿ ಅಗತ್ಯಕ್ಕಿಂತ ಅಧಿಕವಾಗಿದೆ ಎಂದಾಯ್ತು. ಹಾಗಿದ್ದರೂ, ದೇಶದಲ್ಲಿ ಹಸಿವು, ಅಪೌಷ್ಟಿಕತೆ ತಾಂಡವಾಡುತ್ತಿರಲು ಸಮಾನ ಹಂಚಿಕೆ ಮಾಡುವುದರಲ್ಲಿ ಸರ್ಕಾರ ಸೋತಿರುತ್ತದೆಯೇ ಹೊರತು ಅವುಗಳನ್ನು ಉತ್ಪಾದಿಸಿ, ಪೂರೈಕೆ ಮಾಡುವಲ್ಲಿ ದೇಶದ ರೈತ ಹಿಂದೆ ಬಿದ್ದಿಲ್ಲ. ಆದರೆ, ಇದಕ್ಕೆ ಪ್ರತಿ ಫಲವಾಗಿ ದೇಶ ರೈತಾಪಿ ವರ್ಗಕ್ಕೆ ನೀಡಿರುವುದಾದರು ಏನು ಎಂಬ ಪ್ರಶ್ನೆಗೆ ಪಟ್ಟಣ ಪ್ರದೇಶಗಳ ಕಡೆಗಿನ ವಲಸೆ, ಬೇಸಾಯ ಮಾಡದೆ ಭೂಮಿಯನ್ನು ಬೀಳುಬಿಡುತ್ತಿರುವುದರಿಂದ ದೇಶದಾದ್ಯಂತ ನಡೆಯುತ್ತಿರುವ ರೈತರ ಅವ್ಯಾಹತ ಆತ್ಮಹತ್ಯೆಗಳು ಉತ್ತರ ನೀಡುತ್ತಿವೆ.

ಇದನ್ನೂ ಓದಿ: ಲಾಕ್‌ ಡೌನ್‌ ಮತ್ತು ಕೃಷಿ ಕ್ಷೇತ್ರದ ಸಮಸ್ಯೆ – ಸಿಎಂ ತರಾಟೆಗೆ

(ಲೇಖಕರು ಕೃಷಿ ಆರ್ಥಿಕ ತಜ್ಣರು ಮತ್ತು ಕರ್ನಾಟಕ ಬೆಲೆ ಆಯೋಗದ ಮಾಜಿ ಅಧ್ಯಕ್ಷರು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಅಬಕಾರಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ಕಸ್ಟಡಿ ಅವಧಿ ಮೇ 31ರವರೆಗೆ ವಿಸ್ತರಿಸಿದ...

0
ದೆಹಲಿ ಮದ್ಯದ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ಮೇ 31 ರವರೆಗೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಮಂಗಳವಾರ ವಿಸ್ತರಿಸಿದೆ. ಫೆಬ್ರವರಿ 26,...