ಗೌರಿ ಲಂಕೇಶ್
ವಾರ್ಷಿಕ ವಿಶೇಷಾಂಕ, 2007 (`ಕಂಡಹಾಗೆ’ ಸಂಪಾದಕೀಯದಿಂದ) |

ನಮ್ಮ ನೆಲದಲ್ಲಿ ಹಿಂದೂತ್ವ ವಿರೋಧಿಗಳನ್ನು ನಕ್ಸಲರು ಎಂದೂ, ಮುಸಲ್ಮಾನರನ್ನು ಭಯೋತ್ಪಾದಕರೆಂದೂ ಬಣ್ಣಿಸುವುದು ಸಾಮಾನ್ಯವಾಗಿಬಿಟ್ಟಿದೆ. ಹೀಗೆ ಬ್ರ್ಯಾಂಡ್ ಮಾಡುವುದರ ಹುನ್ನಾರವೇನಿರಬಹುದು? ಇವತ್ತು ನಮ್ಮನ್ನಾಳುವವರ ಮನಸ್ಥಿತಿ ಹೇಗಿದೆಯೆಂದರೆ, ರಾಜಕಾರಣವೆಂದರೆ ಅವರಿಗೆ ಅಧಿಕಾರ ಮಾತ್ರ. ಆ ಅಧಿಕಾರ ಪಡೆಯಲು ಅವರು ಅವಲಂಭಿಸಿರೋದು ಹಣವನ್ನು. ಆ ಹಣ ಹರಿದು ಬರೋದು ಬಂಡವಾಳಶಾಹಿಗಳಿಂದ. ಹಾಗಾಗಿ ದೇಶದ ಸಂಪತ್ತನ್ನು ವಿದೇಶಿ ಕಂಪನಿ ಮತ್ತು ಬಂಡವಾಳಶಾಹಿ ಲೂಟಿಕೋರರಿಗೆ ಧಾರೆಯೆರೆಯಲು ಯಾವ ಮುಲಾಜೂ ಇಲ್ಲದೆ ತಯಾರಾಗಿರುತ್ತಾರೆ. ಅಂತಹ ಅವರ ಹಾದಿಗೆ ಯಾರೆಲ್ಲ ಅಡ್ಡಿಯಾಗುತ್ತಾರೊ ಅಂತವರಿಗೆ ನಕ್ಸಲರ ಪಟ್ಟಿಯನ್ನೋ, ಭಯೋತ್ಪಾದಕ ಕಟ್ಟಿ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಾರೆ. ಈ ಕೆಲಸವನ್ನು ಕೇವಲ ಬಲಪಂಥೀಯರು ಮಾತ್ರವಲ್ಲ, ಅಧಿಕಾರಕ್ಕಂಟಿಕೂತ ಎಡಪಂಥೀಯರೂ ಇದನ್ನೇ ಶುರು ಮಾಡಿಕೊಂಡಿದ್ದಾರೆ. ನಂದಿಗ್ರಾಮದಲ್ಲಿ ರತನ್ ಟಾಟಾ ಒತ್ತುವರಿಯನ್ನು ವಿರೋಧಿಸಿದ ಮೂಲನಿವಾಸಿಗಳನ್ನು `ನಕ್ಸಲರು ಮತ್ತು ಮುಸ್ಲಿಂ ಭಯೋತ್ಪಾದಕರು ತಲೆಹರಟೆ ಮಾಡುತ್ತಿದ್ದಾರೆ’ ಎಂದ ಪಶ್ಚಿಮ ಬಂಗಾಳದ ಬುದ್ಧದೇವ ಭಟ್ಟಾಚಾರ್ಯ ಇದಕ್ಕೆ ಸಾಕ್ಷಿ.
ಇಂತಹ ಘನಕಾರ್ಯಕ್ಕೆ ಅದ್ಯಾಕೆ ಮಹಾತ್ಮಗಾಂಧಿ ಮತ್ತು ಸಾವಿರಾರು ಜನ ಬ್ರಿಟಿಷರ ವಿರುದ್ಧ ಹೋರಾಡಿ, ಜೀವ ತೆತ್ತು, ರಕ್ತ ಹರಿಸಿ, ಬಂಧನಕ್ಕೊಳಗಾಗಿ ಸ್ವಾತಂತ್ರ್ಯವನ್ನು ಪಡೆಯಬೇಕಿತ್ತು? ಬ್ರಿಟಿಷರು ನಮ್ಮನ್ನು ಲೂಟಿ ಮಾಡುತ್ತಿದ್ದಂತೆಯೇ ಇವತ್ತು ನಮ್ಮ ಈ ದೊಡ್ಡ ‘ಪ್ರಜಾಪ್ರಭುತ್ವ’ದಲ್ಲಿ ಜನಪ್ರತಿನಿಧಿಗಳೇ ದೇಶವನ್ನು ತುಂಡುತುಂಡಾಗಿ ವಿದೇಶಿ ಕಂಪನಿಗಳಿಗೆ ಮಾರುತ್ತಾರೆಂದರೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅರ್ಥ ಇದೆಯೇ? ನಿಜವಾಗಲೂ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆಯೇ? ನಂದಿಗ್ರಾಮದಲ್ಲಾದದ್ದನ್ನು ನೋಡಿದರೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದೇ ಹೇಳಬೇಕಾಗುತ್ತದೆಲ್ಲದೆ, ಇವತ್ತು ಹೊಸ ಸ್ವಾತಂತ್ರ್ಯ ಸಂಗ್ರಾಮವನ್ನು ಪ್ರಾರಂಭಿಸಬೇಕಿದೆ ಎಂದು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕಿದೆ.
ಎಲ್ಲಿಯತನಕ ಬುದ್ಧದೇವ ಭಟ್ಟಾಚಾರ್ಯರಂತಹ ಎಡಪಂಥೀಯರು, ಮೂಲಭೂತವಾದದ ಬಲಪಂಥೀಯರಿರುತ್ತಾರೊ ಅಲ್ಲಿಯತನಕ ನಮ್ಮ ನೆಲ, ಜಲದ ಮೇಲೆ ನಮಗೆ ಯಾವ ಹಕ್ಕು ಇರುವುದಿಲ್ಲ, ಪ್ರಜೆಗಳಾಗಿ ನಮ್ಮ ಹಕ್ಕುಗಳಿಗೆ ಕಿಂಚಿತ್ತೂ ಬೆಲೆ ಇರುವುದಿಲ್ಲ. ಅಷ್ಟೇ ಅಲ್ಲ, ಕುವೆಂಪು, ಗಾಂಧಿ, ಬಸವಣ್ಣ ಎಲ್ಲರೂ ಕೇವಲ ಫೊಟೋಗಳಲ್ಲಿ, ಪುಸ್ತಕದಲ್ಲಿ ಶವಗಳಾಗಿರುತ್ತಾರೆ…..
ನಮ್ಮಲ್ಲಿ ಅದೆಷ್ಟೋ ಬುದ್ದಿಜೀವಿಗಳು, ಬರಹಗಾರರು, ಹೋರಾಟಗಾರರು, 1975ರಲ್ಲಿ ಇಂದಿರಾಗಾಂಧಿ ಹೇರಿದ್ದ ತುರ್ತುಪರಿಸ್ಥಿತಿ ವಿರುದ್ಧ ಪ್ರತಿಭಟಿಸಿದ್ದರು. ಜನರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಿದ್ದ, ತಮಗೆ ಇಷ್ಟವಿಲ್ಲದವರನ್ನು ಬಂಧಿಸಿದ್ದ, ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದ, ಅಮಾನುಷ ದೌರ್ಜನ್ಯಗಳನ್ನು ಎಸಗಿದ್ದ, ಲೈಸೆನ್ಸ್ ರಾಜ್ ಮುಲಕ ಅಂಧಾದರ್ಬಾರು ನಡೆಸಿದ್ದ ಇಂದಿರಾಗಾಂಧಿಯನ್ನು ಉಗ್ರವಾಗಿ ಖಂಡಿಸಿದ್ದರು.
ಅವತ್ತು ಅಧಿಕೃತವಾಗಿ ತುರ್ತುಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ಆದರೆ ಇವತ್ತು ಅನಧಿಕೃತವಾಗಿ ತುರ್ತುಪರಿಸ್ಥಿತಿಯನ್ನು ಜಾರಿಗೆ ತರಲಾಗಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲೇ ಜನಪ್ರತಿನಿಧಿಗಳು ಇದನ್ನು ಮಾಡಿದ್ದರೂ “ಈಗೇನು ತುರ್ತುಪರಿಸ್ಥಿತಿ ಇಲ್ಲ” ಎಂದೇ ನಂಬಿರುವವರೆಲ್ಲಾ ಫೂಲ್ಸ್ ಪ್ಯಾರಡೈಸ್‍ನಲ್ಲಿ ಬದುಕುತಿದ್ದಾರೆ.
ಏಕೆಂದರೆ, ಅಂದಿನ ಮಿಸ (ಎಮ್‍ಐಎಸ್‍ಎ) ಕಾಯಿದೆಗಿಂತಲೂ ಕಠೋರವಾದ ಟಾಡ (ಟಿಎಡಿಎ) ಬಂತು, ಅದನ್ನೂ ಮೀರಿಸುವಂತಹ ಪೊಟಾ (ಪಿಎಟಿಎ) ಈಗ ಜಾರಿಗೆ ಬಂದಿವೆ. ಅವತ್ತಿನ ಲೈಸೆನ್ಸ್ ರಾಜ್ ಜಾಗದಲ್ಲಿ ಜಾಗತೀಕರಣ-ಖಾಸಗೀಕರಣ-ಉದಾರೀಕರಣ ಎಂಬ ಮೂರು ಭೂತಗಳು ಬಂದಿವೆ. ಅಲ್ಲಿ ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ತಿಜೋರಿಗೆ ನಷ್ಟವಾದರೂ ಪರವಾಗಿಲ್ಲ ಭೂಮಿಯನ್ನು ಬಂಡವಾಳಶಾಹಿಗಳಿಗೆ ನೀಡುತ್ತೇವೆ ಎಂದು ಸರ್ಕಾರ ಪಟ್ಟು ಹಿಡಿದಿದ್ದರೆ, ಇಲ್ಲಿ ಅಧಿಕಾರದಲ್ಲಿರುವವರು ಗಣಿ ಹಗರಣ, ಲ್ಯಾಂಡ್ ಹಗರಣದಲ್ಲಿ ಮುಳುಗಿ ರಾಜ್ಯವನ್ನೇ ಮನೆ ಆಸ್ತಿ ಮಾಡಿಕೊಳ್ಳತೊಡಗಿದ್ದಾರೆ.
ಹಣ-ಹೆಂಡ ಹರಿಸಿ ಚುನಾವಣೆ ಎಂಬ ಸರ್ಕಸ್‍ನಲ್ಲಿ ಗೆದ್ದವರನ್ನು ನಿಜವಾಗಲೂ ಜನಪ್ರತಿನಿಧಿಗಳು ಎಂದು ಕರೆಯಲಾಗುತ್ತದೆಯೇ. ನಮ್ಮದೂ ಒಂದು ಪ್ರಜಾಪ್ರಭುತ್ವ ಎಂದು ಹಮ್ಮೆ ಪಡಲಾಗುತ್ತದೆಯೇ?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here