Homeಅಂಕಣಗಳುನಿಮಗಿನ್ನೂ ಏನಾಗಬೇಕು ಸಾರ್

ನಿಮಗಿನ್ನೂ ಏನಾಗಬೇಕು ಸಾರ್

- Advertisement -
- Advertisement -

| ಯಾಹೂ |

ಅಂತೂ ಎಲ್ಲರೂ ಅವರವರ ಗೋಳನ್ನು ವಿಂಗಡಿಸಿಕೊಂಡು “ನಮಗ್ಯಾರಿದ್ದರೇನು ಸುಖವಿಲ್ಲ ಪ್ರಭುವೇ” ಎಂಬ ತತ್ವಪದ ಗುನುಗುತ್ತ ಒಳಗೊಳಗೇ ಅಳುತ್ತಿದ್ದಾರಂತಲ್ಲಾ. ಮೊದಲನೆಯದಾಗಿ ಅತಿವೃಷ್ಟಿಯಿಂದ ಕೊಚ್ಚಿಹೋದ ಬದುಕನ್ನು ಯಾರೂ ಸರಿಮಾಡಲಾರರೆಂಬ ತೀರ್ಮಾನಕ್ಕೆ ಬಂದಿರುವ ಪ್ರವಾಹ ಸಂತ್ರಸ್ತರು, ಮನೆಮಠ ನೆನೆಸಿಕೊಂಡು ಒಳಗೊಳಗೇ ಅಳುತ್ತಿದ್ದಾರೆ. ಎಡೂರಪ್ಪ ಅನರ್ಹ ಶಾಸಕರುಗಳ ಸ್ಥಿತಿ ನೋಡಿ ಗೊಳೋ ಎಂದು ಅಳುತ್ತಿರಬೇಕಾದರೆ, ಸಮ್ಮಿಶ್ರ ಸರಕಾರದಲ್ಲಿ ಮಂತ್ರಿಗಳಾಗಿ ಮೆರೆಯುತ್ತಿದ್ದ ಮೈತ್ರಿ ಸರಕಾರದ ಮಂತ್ರಿಗಳು ಕಣ್ಣಂಚಿನಲ್ಲಿ ನೀರು ತಂದುಕೊಂಡು ಬರೀ ಶಾಸಕರಾಗಿ ಬಾಳುವೆ ಮಾಡುವುದನ್ನು ನೆನಸಿಕೊಂಡು ಮುಮ್ಮಲ ಮರಗುತ್ತಿವೆಯಂತಲ್ಲಾ. ಇನ್ನ ಮಗನನ್ನು ಮುಖ್ಯಮಂತ್ರಿ ಮಾಡಿ ಬದುಕಿನ ಸಾರ್ಥಕತೆ ಕಂಡುಕೊಂಡು ಒಳಗೊಳಗೇ ಯಾವ ಪ್ರತಿರೋಧವೂ ಮಗನ ಬಳಿ ಸುಳಿಯದಂತೆ ಬೆಂಗಾವಲಾಗಿದ್ದ ದೇವೇಗೌಡರು ಹೇಳಿಕೊಳ್ಳಲಾಗದ ವೇದನೆಯಿಂದ ಅಳುತ್ತಿದ್ದಾರಂತಲ್ಲಾ, ಥೂತ್ತೇರಿ..

ಮಗನ ಮುಖ್ಯಮಂತ್ರಿಗಿರಿ ಹೋಯಿತು; ರೇವಣ್ಣ ಗಡಿಗೆ ತೆಗೆದುಕೊಂಡು ಕೆ.ಎಂ.ಎಫ್ ಡೈರಿ ಹತ್ತಿರ ಹೋದರೆ, ಜಾರಕಿ ಎಂಬ ಹಸು ಜಾಡಿಸಿ ಒದ್ದ ಪರಿಣಾಮ ಈಗ ಅವರೂ ನಿರುದ್ಯೋಗಿ. ಇದ್ದುದರಲ್ಲಿ ಅನಿತಾ, ಕುಮಾರ, ರೇವಣ್ಣ ಬರೀ ಶಾಸಕರು ಮಾತ್ರ. ಸ್ವತಃ ತಾವೂ ಕೂಡ ಜನಾಂಗದಿಂದ ತಿರಸ್ಕರಿಸಲ್ಪಟ್ಟಿರುವ ಸಮಯ ನೆನೆಸಿಕೊಂಡು ಮುಂದೇನು ಎಂದು ಹಲುಬುತ್ತಿರುವ ದೇವೇಗೌಡರನ್ನ ಮಾತನಾಡಿಸಿ, ಸಾಂತ್ವನ ಹೇಳುವುದು ನಮ್ಮ ಕರ್ತವ್ಯವಲ್ಲವೇ ಎಂದು ಚಿಂತಿಸಿ ಫೋನ್ ಮಾಡಲಾಗಿ ರಿಂಗಾಯ್ತು.
ರಿಂಗ್‍ಟೋನ್: “ಏನಿದೀ ಗ್ರಹಚಾರವೋ ಏನಿದೀ ವನವಾಸವೊ……….”
“ಹಲೋ ಯಾರು?”
“ನಾನು ಪತ್ರಕರ್ತ. ಗೌಡ್ರು ಜೊತೆ ಮಾತಾಡಬೇಕು.”
“ಹಲೋ”
“ನಾನು ಸಾರ್ ಯಾಹು”
“ಏನು ಗುರುವೇ”
“ಸುಮ್ಮನೆ ಮಾತಾಡಸನ ಅಂತ ಫೋನು ಮಾಡಿದೆ ಸಾರ್”
“ಏನು ಮಾತಾಡದು ಯಲ್ಲ ಮುಗಿತಲ್ಲ”
“ಮುಗದಿಲ್ಲ ಸಾರ್, ಯಲ್ಲ ಈಗ ಶುರುವಾಗ್ಯದೆ”
“ಅಯ್ಯೋ ರಾಮ ಏನು ಶುರುವಾಗಿದೆ”
“ನಿಮ್ಮ ಕುಟುಂಬದಿಂದ ಒಳ್ಳೆ ರಾಜಕಾರಣಿ ಬಂದ ಸಾರ್. ಪ್ರಜ್ವಲ ನಿಮ್ಮ ಹೆಸರುಳುಸ್ತನೆ. ಇನ್ನ ನಿಖಿಲ್ ನಿಮ್ಮ ಸಂಸ್ಕøತಿ ಉಳುಸ್ತನೆ. ರೇವಣ್ಣ ಕುಮಾರಣ್ಣನ ಕತೆ ಮುಗಿತಿದ್ದಂಗೆ ಇಬ್ಬರು ಎದ್ದರಲ್ಲ ಸಾರ್”
“ಎಲ್ಲಾ ಜನತೆ ಆಶೀರ್ವಾದ”
“ಆದ್ರೆ ಜನತೆ ಆಶೀರ್ವಾದ ನಿಮಗೆ ಸಿಗಲಿಲಲ್ಲವಲ್ಲ ಸಾರ್”
“ಸಿಗತಿತ್ತು, ಹಿತಶತ್ರುಗಳಿಂದ ಹಾಗಾಯ್ತು”
“ಹಿತ ಶತ್ರು ಏನು ಅಂತ ಗೊತ್ತಿದ್ರು ಯಾಕ್ ಸಾರ್ ಅವರ ಜೊತೆ ಇದ್ರಿ”
“ಅನಿವಾರ್ಯವಾಗಿ ಇರಬೇಕಾಯ್ತು”
“ನಿಮ್ಮಿಬ್ಬರ ನಡುವೆ ಅಷ್ಟೊಂದು ದ್ವೇಷ ಇದ್ದು ಅದ್ಯಂಗೆ ಹದುನಾಕು ತಿಂಗಳು ಜೊತೆಲಿದ್ರಿ ಸಾರ್”
“ದುರ್ಯೋದನನ ಜೊತೆ ಶಕುನಿ ಸ್ನೇಹದಿಂದ್ಲೇ ಇರಲಿಲ್ವೆ”
“ಅದೇನೊ ನಿಜ ಸಾರ್, ಆದ್ರು ಸಭೆ ಸಮಾರಂಭದಲ್ಲಿ ನೀವೆ ನಿಮ್ಮ ವೈರಿ ಕೈಮುಟ್ಟಿ ಮಾತನಾಡುಸ್ತಿದ್ರಿ. ಪ್ರೀತಿ ತೋರಿಸಿದ್ರಿ. ಮುದಿ ಪ್ರೇಮಿತರ ತುಂಟನಗೆ ಬೀರಿದ್ರಿ”
“ಅದು ಚುನಾವಣಾ ಸಂದರ್ಭ. ಮಾನ್ಯ ರಾಮಕೃಷ್ಣ ಹೆಗಡೆಯವರು ನಾನು ಎಷ್ಟೇ ಜಗಳ ಆಡಿದ್ರೂ ಸಾರ್ವಜನಿಕ ವೇದಿಕೇಲಿ ಒಂದಾಗಿರಲಿಲ್ವೇ”
“ನಿಜ ಸಾರ್ ನಿಮ್ಮಗಳ ಅಭಿನಯಕ್ಕೆ ಆಸ್ಕರ್ ಸಿಗಬೇಕಿತ್ತು ಸಾರ್”
“ಅದು ಅಭಿನಯ ಅಲ್ಲ. ಈ ನಾಡಿನ ಹಿತಕ್ಕಾಗಿ ನಾವೂ ಹೊಂದಾಣಿಕೆ ಮಾಡಿಕೊಬೇಕಾಗತ್ತೆ. ಅದನ್ನ ನಿಮ್ಮಂತವರು ಅಭಿನಯ ಅಂತಿರಾ”
“ಅಲ್ಲ ಸಾರ್, ನಿಮ್ಮಪ್ಪನಾಣೆ ಮುಖ್ಯಮಂತ್ರಿಯಾಗಲ್ಲ ಅಂದೊರು ಕುಮಾರಸ್ವಾಮಿ ಸರಕಾರ ಇರದಿಕ್ಕೆ ಬಿಡ್ತರಾ ಅಂದಿದ್ದಿರಿ. ಚುನಾವಣೆಗೂ ಮೊದಲಿನ ಈ ಹೇಳಿಕೆ ನಿಮಗೆ ಸಿಟ್ಟು ತರಿಸಿದೆ. ಆದ್ರೂ ಅವುರ ಜೊತೆ ನಗನಗತ ಇದ್ರಲ್ಲ”
“ಕರ್ನಾಟಕದಲ್ಲಿ ಮಕ್ಕಳ ರಾಜ್ಯ ಸ್ಥಾಪನೆ ಮಾಡಕ್ಕೆ ತಯಾರಾದ್ರು ಆದ್ರಿಂದ ನಾವು ಗೌಡರನ್ನ ವಿರೋಧಿಸೋದು ಅನಿವಾರ್ಯ ಆಯ್ತು ಅಂತರಲ್ಲ ಸಾರ್.”
“ಆ ರೀತಿ ಹೇಳೊ ಮಹಾನಾಯಕರು ಈ ದೇವೇಗೌಡ ಗುರುತಿಸಿ ಹಣಕಾಸಿನ ಸಚಿವನನ್ನಾಗಿ ಮಾಡೋವರಿಗೂ ಎಲ್ಲಿದ್ರೂ. ಉಪಮುಖ್ಯಮಂತ್ರಿ ಮಾಡಿದ್ಯಾರು ಅದು ಸಾಲದು ಅಂತ ಮುಖ್ಯಮಂತ್ರಿ ಆಗೋದಿಕ್ಕೆ ಹೋದಾಗ ಜೆ.ಎಚ್.ಪಟೇಲರು ಮೆಟ್ಟಿನಲ್ಲಿ ಹೊಡಿಯಕ್ಕೆ ಹೋದದ್ದು ತಡೆದೊರ್ಯಾರು. ಅವುರು ಇತಿಹಾಸ ಮಾತಾಡೋದಾದ್ರೆ ನಾವು ಮಾತನಾಡ್ತೀವಿ”
“ಸದ್ಯದಲ್ಲಿ ನಿಮ್ಮ ವೈರಿಗಳು ಬಿಜೆಪಿಗಳಲ್ಲವ ಸಾರ್.”
“ಯಾರೂ ವೈರಿಗಳಲ್ಲ. ಹತ್ತೊಂಬತ್ತು ನೂರಾ ಎಪ್ಪತ್ತೊಂಬತ್ತನೇ ಇಸವಿಲಿ ನಾನು ದೇವರಾಜ ಅರಸುರನ್ನ ಟೀಕೆ ಮಾಡ್ತ ಭ್ರಷ್ಟತೆಯ ಮಹಾಜನಕ ಅರಸು ಅಂತ ಭಾಷಣ ಮಾಡಿದೆ. ಅದೇ ದಿನ ರಾತ್ರಿ ಮುರಾರ್ಜಿ ದೇಸಾಯಿಯವರಿಂದ ಫೋನ್ ಬಂತು. ನೀವು ಅರಸುರವರನ್ನ ಭೇಟಿ ಮಾಡಿ ಕರ್ನಾಟಕದ ಎಂ.ಪಿಗಳು ಮುರಾರ್ಜಿ ಸರಕಾರಕ್ಕೆ ಬೆಂಬಲ ಕೊಡಬೇಕು ಅಂತ ವಿನಂತಿ ಮಾಡಿ ಅಂತಹೇಳಿ. ನನ್ನ ಪರಿಸ್ಥಿತಿ ಏನಾಗಿರಬೇಕು? ಅವತ್ತಿನಿಂದ ನಾನು ಯಾರನ್ನು ವೈರಿಗಳು ಅಂತ ಪರಿಗಣಿಸಿ ಹೋರಾಟ ಮಾಡಲ್ಲ. ಭವಿಷ್ಯದಲ್ಲಿ ಏನಾಗಬಹುದೊ ಅಂತ ತಿಳಕೊಂಡು ಮಾತನಾಡ್ತಿನಿ. ಆದ್ರೆ ಮಹಾ ನಾಯಕರಲ್ಲಿ ಅದಿಲ್ಲ.”
“ನನಿಗನ್ನಿಸಿದಂಗೆ ನಿಮಗೂ ಅವರಿಗೂ ದಾಯಾದಿ ಕಲಹ ಅನ್ನಿಸುತ್ತೆ ಸಾರ್”
“ಅದು ಹೇಗೇಳ್ತಿರೀ”
“ನೋಡಿ ಸಾರ್, ಹೊಳೆನರಸೀಪುರದಲ್ಲಿ ನಿಮ್ಮ ಮನೆ ಹತ್ರನೇ ಅವುರ ಜನಾಂಗದ ಮನೆಗಳೂ ಇದ್ದವಂತೆ. ಬಹಳ ಹೊಂದಿಕೊಂಡಿದ್ದವಂತೆ. ನೀವು ರಾಜಕೀಯವಾಗಿ ಬೆಳದಂಗೂ ಜಗಳ ಜಾಸ್ತಿಯಾಯ್ತಂತೆ. ಸಾಮಾನ್ಯವಾಗಿ ಹುಟ್ಟುತಾ ಅಣ್ಣತಮ್ಮದೀರು ಬೆಳಿತ ದಾಯಾದಿಗಳು ಅಂತ ಗಾದೆನೆ ಇದೆ. ಹಂಗಾಗಿ ನಿಮಗೂ ಅವುರ ಕಡೆಯವರಿಗೂ ಜಗಳ ಶುರುವಾಯ್ತಂತೆ. ಇದು ರಾಜಕೀಯವಾಗಿ ಇಡೀ ರಾಜ್ಯವೆ ಆವರಿಸಿಗಂಡದೆ. ಯಂಗೇ ಅಂದ್ರೇ, ಊರ ಜಮೀನು ವಿಷ್ಯ ರಾಜ್ಯದವರೆಗೂ ಹಬ್ಬಿ ಈಗ ನೀವು ಅವುರ ಎದುರಾಬದುರಾ ಹೋರಾಡ್ತ ಇದ್ದಿರಿ ಸರಿನ ಸಾರ್”
“ಹಾಗೇನು ಇಲ್ಲ”
“ಇಲ್ಲ ಅಂದ್ರೆ ಇದನ್ನೆಲ್ಲಾ ನಿಲ್ಲಿಸಿ ಸಾರ್. ಈಗ ಅಂಥಾ ನೀವು ಪ್ರಧಾನಿಯಾಗಿದ್ರಿ. ರೇಣುಕಾಚಾರಿ ತರದ ಕುಮಾರಣ್ಣ ಒಂದು ಸತಿಯಲ್ಲ ಯರಡಸತಿ ಮುಖ್ಯಮಂತ್ರಿಯಾದ್ರು. ಇನ್ನ ಇಲಾತಿ ಹಸಕಟ್ಟಿ ಸಾವುರಾರು ಲೀಟ್ರು ಹಾಲುಮಾರೊ ಹೈನೋದ್ಯಮ ತರದ ರೇವಣ್ಣ ಯರಡು ಮೂರು ಸತಿ ಯರಡು ಮೂರು ಪ್ರಬಲ ಖಾತೆನೆ ನಿಭಾಯಿಸಿದ್ರು. ಅಕ್ಕಪಕ್ಕದ ಮನೆಗೋಗಿ ಕಷ್ಟಸುಖ ಹೇಳಿಕಳೊತರ ಇದ್ದ ಅನಿತಕ್ಕ ಯರಡು ಬಾರಿ ಶಾಸಕಿಯಾದ್ರು. ಇನ್ನ ಭವಾನಕ್ಕ ಏನೇನಾಯ್ತರೊ ಏನೊ. ಪ್ರಜ್ವಲ ಜನಪ್ರಿಯ ಎಂ.ಪಿ. ಚಿಲ್ಡ್‍ಬೀರ್ ನಿಖಿಲಣ್ಣನ ಭವಿಷ್ಯ ದೊಡ್ಡದಾಗೆ ಉದ್ಘಾಟನೆ ಆಗಿದೆ. ಇನ್ನ ಬೀಗರು ಬಿಜ್ಜರು ನಂಟರು ಇಷ್ಟರು ಅಕ್ರಮಿಸಿರೊ ಸ್ಥಾನಮಾನದ ಪಟ್ಟಿ ದೊಡ್ಡದಿದೆ ಹಿಂಗಿರುವಾಗ ಇನ್ನು ಏನಾಗಬೇಕಿದೆ ಸಾರ್”
“ಇನ್ನ ಆಗಬೇಕಾದ್ದೇನಿಲ್ಲ ಕಡೆಯವರಿಗೂ ಹೋರಾಡ್ತಿನಿ ಈ ದೇವೇಗೌಡ ಹೋರಾಟದಿಂದ ಬಂದೊನು”
“ಹೋರಾಟ ಕುಟುಂಬದ ಉನ್ನತಿಗಾಗಿ ಅಂತ ಜನಾಂಗ ತಿಳಕಂಡು ತಿರಸ್ಕರುಸ್ತಾ ಅವುರಲ್ಲ ಸಾರ್”
“ಯಾರ ತಿರಸ್ಕಾರಕ್ಕೂ ಈ ದೇವೇಗೌಡ ಹೆದರಲ್ಲ”
“ಥೂತ್ತೇರಿ”

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...