Homeಅಂಕಣಗಳುಪ್ರಶಸ್ತಿಗಿಂತಲೂ ಬದುಕು ದೊಡ್ಡದು

ಪ್ರಶಸ್ತಿಗಿಂತಲೂ ಬದುಕು ದೊಡ್ಡದು

- Advertisement -
- Advertisement -

| ಡಾ. ವಿನಯಾ ಒಕ್ಕುಂದ |

ಮಿಠಾಯಿ ಕೊಳಚೆಯಲ್ಲಿ ಬಿದ್ದರೆ ತ್ಯಾಜ್ಯವಾಗುವಂತೆ, ಪ್ರಶಸ್ತಿಗಳೂ ಮಲಿನವಾಗುತ್ತವೆ. ಶ್ರೀಮಂತ ಬಂಡವಾಳಶಾಹಿಗಳು   ಸಾಂಸ್ಕೃತಿಕ ಲೋಕದ ಮೇಲೆ ಹಿಡಿತ ಸಾಧಿಸಲು ಪ್ರಶಸ್ತಿ ಸ್ಥಾಪನೆ ಮಾಡಿದ್ದರೆ, ಪ್ರಶಸ್ತಿ ಪಡೆಯಲು ಲಾಬಿ ನಡೆದರೆ, ಅನ್ಯಾನ್ಯ ಕಾರಣಗಳಿಗಾಗಿ ಪ್ರಶಸ್ತಿಗಳನ್ನು ಫ್ರೀಜ್ ಮಾಡಿ ಕೆಲವರಿಗಾಗಿ ಮೀಸಲಿಟ್ಟರೆ ಅದು ಪ್ರಾಣಹೀನವಾಗುತ್ತದೆ.

‘ಪ್ರಶಸ್ತಿಗಿಂತಲೂ ಬರಹ ದೊಡ್ಡದಲ್ಲವೇ?’ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಪ್ರಶಸ್ತಿ ಸ್ವೀಕಾರ ಮತ್ತು ನಿರಾಕರಣೆಗಳ ಕುರಿತ ಚರ್ಚೆಯನ್ನು ಅರುಣ ಜೋಳದಕೂಡ್ಲಿಗಿ ಪ್ರಾರಂಭಿಸಿದರು. ಆ ಚರ್ಚೆ ತಣ್ಣಗಾಗುತ್ತಿರುವಷ್ಟರಲ್ಲಿ ಡಾ.ಕೃತಿ ಕಾರಂತ್ ಅವರು ಪಡೆದ ಅಂತರಾಷ್ಟ್ರೀಯ ಮನ್ನಣೆಯ ರೋಲೆಕ್ಸ್ ಪ್ರಶಸ್ತಿಯ ಕುರಿತು ತಕರಾರೆದ್ದಿದೆ. ಪರಿಸರ ತಜ್ಞೆಯಾಗಿರುವ ಕೃತಿ ಕಾರಂತ್ ಅವರು ಮಾನವ-ಪ್ರಾಣಿ ಸಂಘರ್ಷದ ಪ್ರಸಂಗಗಳಲ್ಲಿ ತಮ್ಮ ‘ವೈಲ್ಡ ಸೇವೆ’ ಸಂಸ್ಥೆಯ ವತಿಯಿಂದ ಕರ್ನಾಟಕದ ಬಂಡೀಪುರ ಹಾಗೂ ನಾಗರಹೊಳೆ ಅರಣ್ಯದಂಚಿನ ಪ್ರದೇಶಗಳಲ್ಲಿ ಕೆಲಸ ಮಾಡಿದ್ದಾರೆ ಎಂಬ ವರದಿ ಮತ್ತು ಒದಗಿಸಿದ ಮಾಹಿತಿಗಳು ಸತ್ಯಕ್ಕೆ ದೂರವಾದವು ಎಂದು ಕರ್ನಾಟಕದ ಅರಣ್ಯ ಇಲಾಖೆ ಪ್ರಕಟಿಸಿದೆ. ಇಂತಹ ಸುಳ್ಳು ಮಾಹಿತಿಗಳಿಗಾಗಿ ಕೃತಿ ಕಾರಂತ್ ವಿರುದ್ಧ ಕಾನೂನಾತ್ಮಕ ಹೋರಾಟಕ್ಕಿಳಿಯುವುದಾಗಿಯೂ ಹೇಳಿದೆ. ಈ ಘಟನೆ ಪ್ರಶಸ್ತಿಗಳ ಕುರಿತ ಮರುಚಿಂತನೆಯ ಅಗತ್ಯವನ್ನು ಒತ್ತಾಯಿಸಿದೆ.

2001-02ರ ಸುಮಾರಿಗೆ ಮಹಾಲಿಂಗಪುರದಲ್ಲಿ ನಡೆದ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ತೆಲುಗಿನ ಖ್ಯಾತ ಕವಿ ಮಾನವ ಹಕ್ಕು ಹೋರಾಟಗಾರರಾದ ವರವರರಾವ್ ಮತ್ತು ಕ್ರಾಂತಿ ದೀವಿಗೆಯಾಗಿದ್ದ ಗದ್ದರ್ ಬಂದಿದ್ದರು. ಅವರನ್ನು ಸಭೆಗೆ ಪರಿಚಯಿಸಿದ ಶಿವಸುಂದರ್, ‘ಯಾವ ಪ್ರಶಸ್ತಿಯನ್ನೂ ಸ್ವೀಕರಿಸುವುದಿಲ್ಲ’ ಎಂದು ಪ್ರಕಟಿಸಿ, ಬರವಣಿಗೆ ಪ್ರಾರಂಭಿಸಿದವರು ಎಂದಿದ್ದರು. ಆಗ ಒಂದು ಕೃತಿ ಪ್ರಕಟಿಸಿದ್ದ ನನಗೆ ವರವರರಾವ್ ಅವರ ಬದ್ಧತೆಯ ಬಿಸಿ ಗಾಢವಾಗಿಯೇ ತಟ್ಟಿತ್ತು. ಆದರೆ, ವರವರರಾವ್ ಅವರು ಕೆಲಸ ಮಾಡುವ ಜಗತ್ತು ಮತ್ತು ಕಮಿಟ್‍ಮೆಂಟಗಳಿಗೂ ನನ್ನಂತಹ ಸಾಮಾನ್ಯ ಜೀವವೊಂದು ದುಡಿಯುವ-ಬರೆಯುವ ಜಗತ್ತಿಗೂ ಇರುವ ವ್ಯತ್ಯಾಸ ಬಹಳ ಸ್ಪಷ್ಟವಾಗಿ ಕಂಡಿತ್ತು. ದೇವನೂರು ಮಹಾದೇವ ಅವರು ನೃಪತುಂಗ ಪ್ರಶಸ್ತಿಯನ್ನೂ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ಸಾರಾಸಗಟಾಗಿ ನಿರಾಕರಿಸಿದರು. ಕನ್ನಡದ ಉಳಿವಿನ ಪ್ರಶ್ನೆಯೆದುರು ಈ ಪ್ರಶಸ್ತಿ ದೊಡ್ಡದಲ್ಲ ಎಂದರು. ಪ್ರಶಸ್ತಿ ನಿರಾಕರಿಸುವ ಮೂಲಕವೇ ಸಾಮಾಜಿಕ ಅರಿವನ್ನು ತರುವ ಪ್ರಯತ್ನವದು. ‘ಮಾವಿನ ಮರದಲಿ ಹಾಡುವ ಕೋಗಿಲೆ, ರಾಜನ ಬಿರುದನು ಕಾಯುವುದಿಲ್ಲ’ ಎಂದಿದ್ದರು ಕುವೆಂಪು. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯೊದಗಿದಾಗ, ಪ್ರಭುತ್ವ ಪ್ರೇರಿತ ಹಿಂಸಾ ಪ್ರಚೋದನೆಗಳು ನಡೆದು ಮತೀಯ ಅಸಹನೆಗಳು ಬೆಳೆದಾಗ ಪ್ರಶಸ್ತಿ ವಾಪಸಾತಿಯ ಚಳುವಳಿಯೇ ನಡೆಯಿತು. ಹಿರಿಯರು-ಕಿರಿಯರೆಲ್ಲ ಅದರಲ್ಲಿ ಸಹಭಾಗಿಗಳಾದರು.

ಅಂದಿಗೂ ಇಂದಿಗೂ ಪರಿಸ್ಥಿತಿ ಬಿಗಡಾಯಿಸುತ್ತಲೇ ಇದೆ. ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿದ ಮತಿಗೆಟ್ಟ ಸ್ವಾಮೀಜಿ ಮತ್ತು ಹಿಂದೂ ಧರ್ಮ ರಕ್ಷಣಾ ವೇದಿಕೆಯವರು, ಪ್ರಗತಿಪರತೆ ಮಾನವೀಯತೆಯ ಕುರಿತು ಮಾತನಾಡುವ ಸಾಹಿತಿಗಳನ್ನು ಜೀವ ಬೆದರಿಕೆಗೆ ಈಡು ಮಾಡುವ ತುಚ್ಛೀಕರಿಸುವ ಹೇಳಿಕೆ ನೀಡಿದರು. ಇಷ್ಟೊಂದು ಕ್ರೂರ ವರ್ತನೆಗೆ ನಮ್ಮ ಸರ್ಕಾರ ಅವರನ್ನು ಶಿಕ್ಷಿಸುವ ತೊಂದರೆಯನ್ನೇನೂ ತೆಗೆದುಕೊಳ್ಳಲಿಲ್ಲ. ಸುಸಂಸ್ಕೃತರ ನಾಡಿನಲ್ಲಿ ಸಾಲದ ಬಡ್ಡಿ ತೀರಿಸಲಾಗದ ಕುಟುಂಬದ ಹೆಣ್ಣುಮಗುವನ್ನು ಸಾಲಕೊಟ್ಟವರು ಅಪಹರಿಸಿ, ಅತ್ಯಾಚಾರದಂತಹ ಅಮಾನುಷ ವರ್ತನೆಯನ್ನು ತೋರಿದ್ದಾರೆ. ಅವರಲ್ಲಿ ಪೊಲೀಸ್, ಉಪನ್ಯಾಸಕ ಎಂಬ ‘ಗಣ್ಯ’ರು ಸೇರಿದ್ದಾರೆ ಎನ್ನುವುದೇ ಭಯಾನಕ. ಮನುಷ್ಯತ್ವದ ಹೆಣ ಬಿದ್ದಿದೆ, ತಿನಬಂದ ನಾಯಿ-ನರಿಗಳನ್ನು ದಿನಂಪ್ರತಿ ನೋಡುತ್ತಿದ್ದೇವೆ. ಇಂತಹ ಅಸ್ವಸ್ಥ ಸಮಾಜದಲ್ಲಿ ಕಲೆ-ಸಾಹಿತ್ಯಗಳು ಮನರಂಜನೆಯ ಕೋಡಂಗಿ ವರ್ತನೆಗಳಾಗಿ ಕಾಣುತ್ತವೆ. ಈ ಪರಿಸರದಲ್ಲಿ ಪ್ರಶಸ್ತಿ ಪಡೆಯುವುದು ಸಂತಸದ ಕೆಲಸವಾಗಿ ಉಳಿದಿಲ್ಲ. ಹಾಗಿದ್ದರೆ, ಪ್ರಶಸ್ತಿಗಳನ್ನು ನಿರಾಕರಿಸುವುದು ಇದಕ್ಕೆ ಪರಿಹಾರವೇ?

ಇಷ್ಟಕ್ಕೂ ಪ್ರಶಸ್ತಿ ಎಂದರೇನು? ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನು ಗುರುತಿಸುವ, ಗೌರವಿಸುವ, ಅವರ ಶ್ರಮವನ್ನು ಇನ್ನಿತರರಿಗೆ ಮನವರಿಕೆ ಮಾಡುವ ಒಂದು ವಿಧಾನ. ಮನುಷ್ಯ ಸಂಸ್ಕøತಿ ತುಂಬ ಹಿಂದಿನಿಂದಲೇ ರೂಪಿಸಿಕೊಂಡು ಬಂದ ಕ್ರಮ ಇದು. ಬಾಲ್ಯದಿಂದಲೂ ಮಕ್ಕಳ ಪೋಷಣೆಯ ಭಾಗವಾಗಿಯೇ ಇದನ್ನು ಅನುಸಂಧಾನಿಸಿಕೊಂಡು ಬರಲಾಗಿದೆ. ಹಾಗಿಲ್ಲದಿದ್ದರೆ ಆ ಕ್ಷೇತ್ರದಲ್ಲಿ ಸಾಧನೆ ಮಾಡುವ ಹುರುಪು ಇಲ್ಲವಾದೀತು. ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯ ಬಹುಮಾನ ಬರದಿದ್ದರೆ, ಖಂಡಿತ ನಾನು ಕಥೆ ಬರೀಬಲ್ಲೆ ಎಂಬ ಆತ್ಮವಿಶ್ವಾಸ ಮೂಡುತ್ತಿರಲಿಲ್ಲ. ವಿಲ್ಸನ್ ಬೆಜವಾಡರಿಗೆ ಮೆಗ್ಸೆಸೆ ಪ್ರಶಸ್ತಿ ಬರುವ ಮೂಲಕ, ಅವರು ಅದುವರೆಗೂ ನಡೆಯಿಸಿತಂದ ಸಫಾಯಿ ಕರ್ಮಚಾರಿಗಳ ಹೋರಾಟದ ಬದ್ಧತೆ ಲೋಕದ ಅರಿವಿಗೆ ಬಂತು. ಜಗತ್ತು ಮನ ಬಾಗಿಸಿತು. ಒಂದು ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ಬೆಜವಾಡರಿಗೆ, ಪ್ರಶಸ್ತಿ ಸ್ವೀಕಾರ ಏಕಾಂಗಿ ನಿರ್ಧಾರವಾಗಲು ಸಾಧ್ಯವಿಲ್ಲ. ತಮ್ಮ ಸಹಜೀವಗಳೊಂದಿಗೆ ಚರ್ಚಿಸಿಯೇ ತೀರ್ಮಾಸಿದ್ದು ಸರಿಯಾದ ಮತ್ತು ಅಗತ್ಯವಾದ ಪ್ರಜಾತಂತ್ರದ ನಡೆ. ಪ್ರಶಸ್ತಿ ತಂದ ಹಣವನ್ನು ತಮ್ಮ ಸಂಘಟನೆಗೆ ವಿನಿಯೋಗಿಸದೆ ಇನ್ನೇನು ಮಾಡಲು ಸಾಧ್ಯ? ಪ್ರಶಸ್ತಿಯ ಹಣ ಹೀಗೆ ಸದ್ವಿನಿಯೋಗವಾದೆ, ಅಥವಾ ಆರ್ಥಿಕ ತೊಂದರೆಯಲ್ಲಿರುವವರಿಗೆ ಸಹಾಯವಾದರೆ ಮಾತ್ರ ಪ್ರಶಸ್ತಿಗೆ ಮೌಲ್ಯ ಎನ್ನುತ್ತಾರೆ ಅರುಣ ಜೋಳದಕೂಡ್ಲಿಗಿ.

ಇದು ಅತ್ಯಂತ ಸೂಕ್ಷ್ಮ ವಿಚಾರ. ಕಲಾವಿದರು, ಬರಹಗಾರರು ತಮ್ಮ ಸುತ್ತಲ ಬದುಕಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಾರೆ ಎಂದು ಒಪ್ಪುವುದಾದರೆ, ಅವರಿಗೆ ತನ್ನ ಕಮಿಟ್‍ಮೆಂಟ್ ಏನೆನ್ನುವುದು ತಿಳಿದಿರುತ್ತದೆ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ತಮಗೆ ಬಂದ ಒಟ್ಟೂ ಪ್ರಶಸ್ತಿಗಳ ಮೊತ್ತದಿಂದ ‘ನರಹಳ್ಳಿ ಪ್ರಶಸ್ತಿ’ ಸ್ಥಾಪಿಸಿ ಯುವ ಬರಹಗಾರರಿಗೆ ಕೊಡುತ್ತ ಬಂದರು ಎಂದು ಕೇಳಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ‘ನಾನು ಪ್ರಶಸ್ತಿಯ ಒಂದು ಪೈಸೆಯನ್ನೂ ಸ್ವಂತಕ್ಕೆ ಬಳಸಿಕೊಳ್ಳುವುದಿಲ್ಲ’ ಎಂದು ವೇದಿಕೆಯಲ್ಲಿ ಘೋಷಿಸಿ ಚಪ್ಪಾಳೆ ಗಿಟ್ಟಿಸಿಕೊಂಡವರನ್ನೂ ನೋಡಿಯಾಗಿದೆ. ಮತೀಯವಾದಿ ಸಂಸ್ಥೆಗಳಲ್ಲಿ ಬಹುಮಾನ ಪಡೆದ ಪ್ರಗತಿಪರರನ್ನೂ ನೋಡಿಯಾಗಿದೆ. ಇಂತಹ ಘೋಷಣೆಗಳ ಮರೆಯಲ್ಲಿ ಜನಪ್ರಿಯತೆಯ ಉಮೇದಿಯಿಲ್ಲವೇ? ‘ಯೋಧ ನಡೆಯುವ ಹಾದಿ ಕವಿಯ ಹಾದಿಯೂ ಕೂಡ’ ಎಂದಿದ್ದರು ಕವಿ ಎಕ್ಕುಂಡಿ. ನಾವು ನಂನಮ್ಮ ದುಡಿಮೆಯಲ್ಲಿ ಸಮಾಜಕ್ಕಾಗಿ ಎಷ್ಟನ್ನು ಹೇಗೆ ವಿನಿಯೋಗಿಸಿದೆವು ಎನ್ನುವುದನ್ನು ನಮ್ಮ ನಂತರದ ಸುತ್ತಲ ಸಮಾಜ ಹೇಳಬೇಕು ನಾವಲ್ಲ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಬಾರದು ಎಂದಿದ್ದರು ಹಿರೀಕರು. ನಾವು ನಮ್ಮ ಬಗ್ಗೆ ಹೇಳಿಕೊಳ್ಳುವುದರಲ್ಲಿ ನಮ್ಮನ್ನು ನಾವೇ ವಿವಿಧ ಆ್ಯಂಗಲ್ಲುಗಳಲ್ಲಿ ಪ್ರದರ್ಶಿಸುವುದರಲ್ಲಿ ತಪ್ಪು ಕಾಣದ ವಾಟ್ಸಪ್, ಫೇಸ್‍ಬುಕ್‍ಗಳ ಕಾಲವಿದು. ಹಾಗಿದ್ದೂ ಕೊಟ್ಟು ಮರೆವ, ಕೊಡುವುದನ್ನು ಮರೆಯದ ನಿಯತಿಯೇ ಸರಿದಾರಿಯೆಂದು ನಾನು ತಿಳಿದಿದ್ದೇನೆ.

ಮಿಠಾಯಿ ಕೊಳಚೆಯಲ್ಲಿ ಬಿದ್ದರೆ ತ್ಯಾಜ್ಯವಾಗುವಂತೆ, ಪ್ರಶಸ್ತಿಗಳೂ ಮಲಿನವಾಗುತ್ತವೆ. ಶ್ರೀಮಂತ ಬಂಡವಾಳಶಾಹಿಗಳು ಸಾಂಸ್ಕೃತಿಕ ಲೋಕದ ಮೇಲೆ ಹಿಡಿತ ಸಾಧಿಸಲು ಪ್ರಶಸ್ತಿ ಸ್ಥಾಪನೆ ಮಾಡಿದ್ದರೆ, ಪ್ರಶಸ್ತಿ ಪಡೆಯಲು ಲಾಬಿ ನಡೆದರೆ, ಅನ್ಯಾನ್ಯ ಕಾರಣಗಳಿಗಾಗಿ ಪ್ರಶಸ್ತಿಗಳನ್ನು ಫ್ರೀಜ್ ಮಾಡಿ ಕೆಲವರಿಗಾಗಿ ಮೀಸಲಿಟ್ಟರೆ ಅದು ಪ್ರಾಣಹೀನವಾಗುತ್ತದೆ. ಒಂದೊಮ್ಮೆ ಕೃತಿ ಕಾರಂತ್ ಅವರ ಬಗ್ಗೆ ಅರಣ್ಯ ಇಲಾಖೆಯ ಆರೋಪ ನಿಜವಾಗಿದ್ದರೆ ಇದು ತಲೆ ತಗ್ಗಿಸುವ ಸಂಗತಿಯೇ. ನನ್ನ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕೆಡಮಿ ಬಂದ ಕೆಲದಿನಗಳಾಗಿತ್ತು. ಧಾರವಾಡದಲ್ಲೊಂದು ಕಾರ್ಯಕ್ರಮ. ನನ್ನನ್ನು ಕೇಳಿ ಹುಡುಕಿ ಒಬ್ಬರು ಬಂದರು. ಅವರು ‘ಸಂಭೋಳಿ’ಯ ಲಕ್ಷ್ಮಣ ಸರ್. ನನಗವರ ಪರಿಚಯವಿರಲಿಲ್ಲ. ‘ನಿಮ್ಮನ್ನು ಹುಡುಕಿ ಬಂದೆ. ಮಾತಾಡಿಸುವಾ ಅಂತ. ಅಕೆಡಮಿಯ ನಿಮ್ಮ ಪುಸ್ತಕ ಆಯ್ಕೆ ಕಮೀಟಿಯಲ್ಲಿ ನಾನೂ ಇದ್ದೆ. ಕೊನೇ ಸುತ್ತಿಗೆ 21 ಪುಸ್ತಕ ಬಂದಿದ್ದವು. ನಿಮ್ಮೊಬ್ಬರನ್ನು ಹೊರತುಪಡಿಸಿ ಬಹುತೇಕ ಎಲ್ಲರೂ, ಯಾರ್ಯಾರಿಂದಲೋ ಶಿಫಾರಸು ಪತ್ರ ಹಾಕಿಸಿದವರೇ. ಅವರ ಪುಸ್ತಕಗಳಿಗೆ ಬಂದ ವಿಮರ್ಶೆ ಕಳಿಸಿದವರೇ…..’ ‘ನಿಮ್ಮ ಈ ಮಾತು ನನಗೆ ಮತ್ತೊಂದು ಪ್ರಶಸ್ತಿ’ ಎಂದಿದ್ದೆ ನಿಜ. ಪ್ರತಿಯೊಂದು ಪ್ರಶಸ್ತಿಯೂ ಆಯ್ಕೆ ಸಮಿತಿಯ ಅಭಿಮತಕ್ಕನುಗುಣವಾಗಿ ನಿರ್ಣಯಿತವಾಗುತ್ತದೆ. ಆಯ್ಕೆಗಾರರು ಬೇರೆಯಾದರೆ, ಪ್ರಶಸ್ತಿ ಬೇರೆ ಪುಸ್ತಕಕ್ಕೇ ಬರಬಹುದು. ಜಯಂತ್ ಕಾಯ್ಕಿಣಿ ಹಿಂದೊಮ್ಮೆ ಪತ್ರದಲ್ಲಿ ಬರೆದಿದ್ದರು. ‘ಪ್ರಶಸ್ತಿ ನಿನಗಲ್ಲ ನಿನ್ನ ಪುಸ್ತಕಕ್ಕೆ’ ಯಾವತ್ತೂ ನೆನಪಿಟ್ಟುಕೊಳ್ಳಬೇಕಾದ ಮಾತದು. ಬರಹಕ್ಕೆ ಬರಹಗಾರನೆಷ್ಟು ಹೊಣೆಗಾರನೋ, ಸುತ್ತಲ ಲೋಕವಾಸ್ತವಗಳೂ ಅಷ್ಟೇ ಹೊಣೆಗಾರವಾಗಿರುತ್ತವೆ. ಬೇಂದ್ರೆ ಹೇಳುವ, ‘ದೇವಗೆಂದು ಮುಗಿದ ಕೈಯಿ ಗುಡಿಗೆ ಸಲ್ಲುವಂತೆಯೇ’ ಬರಹಗಾರರು ಕಲಾವಿದರು ನಿಮಿತ್ತಗಳಾಗಿರುತ್ತಾರೆ.

ಪ್ರಶಸ್ತಿ ಸ್ವೀಕರಿಸಿದಿರುವ ಮೂಲಕ ಸುತ್ತಲ ಬದುಕನ್ನು ಎಚ್ಚರದಲ್ಲಿಡಲು ಸಾಧ್ಯವಾಗುವುದಾದರೆ, ನಮ್ಮ ಕಾಲದ ಅಸ್ತವ್ಯಸ್ತ ಅಸಹನೀಯತೆಗಳಿಗೆ ಮುಲಾಮು ಹುಡುಕುವುದು ಆಗುವುದಾದರೆ ಹಾಗೇ ಮಾಡಬಹುದು. ಆದರೆ ಪ್ರಾಮಾಣಿಕವಾದ ನ್ಯಾಯಯುತವಾದ ಪ್ರಶಸ್ತಿಗಳು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದನ್ನು ಯಾಕೆ ಅಲ್ಲಗಳೆಯಬೇಕು? ನಮಗಿಂತ ಹಿರಿಯರಾದ, ಸಾಧಕರ ಹೆಸರಿನ ಪ್ರಶಸ್ತಿಗೆ ಕೈಯಾನುವಾಗ ಅನುಭವಿಸುವ ತೃಪ್ತಿಯನ್ನು ಯಾಕೆ ಮುಚ್ಚಿಡಬೇಕು? ನಿರಾಕರಣೆಯೂ ಜನಪ್ರಿಯತೆಗೆ ಸಲಕರಣೆಯಾಗಬಾರದು. ಅಂಕೋಲೆಯಲ್ಲಿ ನನ್ನ ಪ್ರೀತಿಯ ನಿರ್ಮಲಾ ಮೇಡಂ ಇದ್ದಾರೆ. ಅವರಿಗೀಗ 76ರ ಹರಯ. ಜೀವಮಾನವಿಡೀ ಸುತ್ತಲ ಪರಿಸರದ ನೂರಾರು ಬಡ ಮಕ್ಕಳನ್ನು ತನ್ನ ಮನೆಯಲ್ಲೇ ಇರಿಸಿಕೊಂಡು ಸಾಕಿ ಸಲುಹಿದರು ಜಾತಿಯ ಹಂಗಿಲ್ಲದೆ. ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ. ಧಾರವಾಡದ ಹಿರೇಮಲ್ಲೂರೂ ಈಶ್ವರನ್ ಸಂಸ್ಥೆಯವರು ನೀಡುವ ‘ಸಾವಿತ್ರಿಬಾಯಿ ಫುಲೆ ಅವಾರ್ಡ್’ ಸ್ವೀಕರಿಸಲು ನಿರ್ಮಲಾ ಮೇಡಂ ಅವರಿಗೆ ತುಂಬ ವಿನಂತಿಸಿದೆ. ಕಡೆಗೂ, ‘ಈಗ ಈ ವಯಸ್ಸಿನಲ್ಲಿ ನನ್ನ ಕಮಿಟ್‍ಮೆಂಟ್‍ಗೆ ನಿನ್ನ ಪ್ರೀತಿ ತೊಂದರೆಯಾಗದಿರಲಿ’ ಎಂದರು. ಸಮ್ಮನಾದೆ.

ನಿಜ, ಪ್ರಶಸ್ತಿಗಿಂತಲೂ ಬರಹ ದೊಡ್ಡದು. ಸಾರ್ಥಕ ಬದುಕು ಅದಕ್ಕಿಂತಲೂ ದೊಡ್ಡದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಆಂಧ್ರದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ನೀಡಲಾಗಿದೆ ಎಂಬ...

0
"ಮುಸ್ಲಿಂ ಮೀಸಲಾತಿಯನ್ನು ಜಾರಿಗೊಳಿಸಲು ಕಾಂಗ್ರೆಸ್ ಆಂಧ್ರ ಪ್ರದೇಶದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಕಡಿಮೆ ಮಾಡಿದೆ. ಇದೊಂದು ಪ್ರಮುಖ ಯೋಜನೆಯಾಗಿದ್ದು, ಇದನ್ನು ಇಡೀ ದೇಶದಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಬಯಸಿದೆ" ಎಂದು ಟೋಂಕ್‌ನಲ್ಲಿ ಮಂಗಳವಾರ (ಏ.23)...