ಭಾರತದ ಆರ್ಥಿಕತೆಯ ಸ್ಥಿತಿ ತುಂಬಾ ಆತಂಕಕಾರಿಯಾಗಿದೆ. ನಾನು ಇದನ್ನು ಒಬ್ಬ ವಿರೋಧ ರಾಜಕೀಯ ಪಕ್ಷದ ಸದಸ್ಯನಾಗಿ ಹೇಳುತ್ತಿಲ್ಲ. ಈ ದೇಶದ ಪ್ರಜೆಯಾಗಿ, ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ ಹೇಳುತ್ತಿದ್ದೇನೆ. ಈ ವೇಳೆಗೆ ಎಲ್ಲರಿಗೂ ವಾಸ್ತವ ಸ್ಥಿತಿ ಸ್ಪಷ್ಟವಾಗಿದೆ. ನಾಮಿನಲ್ ಜಿಡಿಪಿ ಬೆಳವಣಿಗೆಯ ದರ ೧೫ ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ನಿರುದ್ಯೋಗ ದರ ೪೫ ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಗ್ರಾಹಕರ ಬಳಕೆಯ ಪ್ರಮಾಣ ನಾಲ್ಕು ದಶಕಗಳಲ್ಲಿ ಎಂದೂ ಇಷ್ಟು ಕುಸಿದರಲಿಲ್ಲ. ಬ್ಯಾಂಕುಗಳಲ್ಲಿ ಮರುಪಾವತಿಯಾಗದ ಸಾಲದ ಸ್ಥಿತಿ ಎಂದೂ ಇಷ್ಟು ಹದಗೆಟ್ಟಿರಲಿಲ್ಲ. ವಿದ್ಯುತ್ ಉತ್ಪಾದನೆಯ ಪ್ರಮಾಣ ಕಳೆದ ೧೫ವರ್ಷಗಳಲ್ಲೇ ಕನಿಷ್ಠ ಮಟ್ಟದಲ್ಲಿದೆ. ಈ ಗರಿಷ್ಠ ಕನಿಷ್ಠಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಜೊತೆಗೆ ಅಷ್ಟೇ ಸಂಕಟವೂ ಆಗುತ್ತದೆ. ಇವೆಲ್ಲಾ ಕಳವಳಕಾರಿಯಾದ ಅಂಕಿಅಂಶಗಳು ಅನ್ನೋದು ನಿಜ. ಆದರೆ ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ನಾವು ಅಷ್ಟೊಂದು ಆತಂಕಗೊಳ್ಳುವುದಕ್ಕೆ ಈ ಮಾಹಿತಿಗಳೇ ಕಾರಣಲ್ಲ. ಇವೆಲ್ಲಾ ಇಂದು ನಮ್ಮ ದೇಶದ ಆರ್ಥಿಕತೆಯನ್ನು ಕಾಡುತ್ತಿರುವ ಗಂಭೀರವಾದ ರೋಗದ ಲಕ್ಷಣಗಳು ಅಷ್ಟೇ.

ಒಂದು ದೇಶದ ಸಮಾಜದ ಸ್ಥಿತಿ ಆ ದೇಶದ ಆರ್ಥಿಕ ಸ್ಥಿತಿಯನ್ನು ನಿರ್ಧರಿಸುತ್ತದೆ, ಅದನ್ನು ಪ್ರತಿಫಲಿಸುತ್ತದೆ. ಜನರ ಹಾಗೂ ಸಂಸ್ಥೆಗಳ ನಡುವಿನ ಸಾಮಾಜಿಕ ಸಂಬಂಧಗಳು, ಒಡನಾಟಗಳು ಒಟ್ಟಾರೆಯಾಗಿ ಒಂದು ದೇಶದ ಆರ್ಥಿಕತೆಯನ್ನು ನಿರ್ಧರಿಸುತ್ತವೆ. ಹೀಗೆ ಆರ್ಥಿಕತೆಯ ಪ್ರಗತಿಯನ್ನು ಬೆಳೆಸುವ, ಪೋಷಿಸುವ ಸಾಮಾಜಿಕ ಒಡನಾಟ, ಸಂಬಂಧಗಳು ನಿಂತಿರುವುದೇ ಪರಸ್ಪರ ನಂಬಿಕೆ ಹಾಗೂ ಆತ್ಮವಿಶ್ವಾಸದ ಮೇಲೆ. ಅವುಗಳೇ ಆದರ ಆಧಾರಸ್ತಂಭ. ಆದರೆ ಇಂದು ಅಂತಹ ವಿಶ್ವಾಸ ಹಾಗೂ ನಂಬಿಕೆಯನ್ನು ಆಧರಿಸಿದ ನಮ್ಮ ಸಾಮಾಜಿಕ ನೇಯ್ಗೆಯೇ ಹರಿದು ಛಿದ್ರಗೊಂಡಿದೆ.

ಕೈಗಾರಿಕೋದ್ಯಮಿಗಳು ಹೆದರಿಕೆಯಲ್ಲಿ ಬದುಕುತ್ತಿದ್ದಾರೆ

ಇಂದು ನಮ್ಮ ಸಮಾಜವನ್ನು ಆವರಿಸಿರುವ ಭಯದ ವಾತಾವರಣ ಸ್ಪಷ್ಟವಾಗಿ ಕಾಣುತ್ತಿದೆ. ಸರ್ಕಾರಿ ಅಧಿಕಾರಿಗಳ ಕಿರುಕುಳದ ಭೀತಿಯಲ್ಲಿ ನಾವು ಬದುಕುತ್ತಿದ್ದೇವೆ ಎಂದು ಹಲವು ಕೈಗಾರಿಕೋದ್ಯಮಿಗಳು ನನಗೆ ಹೇಳುತ್ತಿದ್ದಾರೆ. ಬ್ಯಾಂಕರುಗಳು ಹೊಸ ಸಾಲ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಪ್ರತೀಕಾರದ ಭಯ ಅವರನ್ನು ಕಾಡುತ್ತಿದೆ. ಉದ್ದಿಮೆದಾರರು ಹೊಸ ಪ್ರಾಜೆಕ್ಟುಗಳನ್ನು ಪ್ರಾರಂಭಿಸಲು ಹಿಂಜರಿಯುತ್ತಿದ್ದಾರೆ. ಯಾವುದೋ ದುರುದ್ದೇಶಕ್ಕೆ ಬಲಿಯಾಗಿ ತಮ್ಮ ಪ್ರಾಜೆಕ್ಟುಗಳು ವಿಫಲವಾಗಬಹುದು ಎಂಬ ಆತಂಕ ಅವರನ್ನು ಬಾಧಿಸುತ್ತಿದೆ. ತಾಂತ್ರಿಕ ಸ್ಟಾರ್ಟ್ ಅಪ್‌ಗಳು ಆರ್ಥಿಕ ಬೆಳವಣಿಗೆಗೆ ಹಾಗೂ ಉದ್ಯೋಗದ ಸೃಷ್ಟಿಗೆ ಪ್ರಧಾನವಾದ ನೆಲೆ. ಇಂದು ಅದೇ ನಿರಂತರ ಬೇಹುಗಾರಿಕೆಯ ಹಾಗೂ ತೀವ್ರ ಅನುಮಾನದ ನೆರಳಿನಲ್ಲಿ ಬದುಕುತ್ತಿರುವಂತೆ ಭಾಸವಾಗುತ್ತಿದೆ. ಸರ್ಕಾರ ಮತ್ತು ಇತರ ಸಂಸ್ಥೆಗಳಲ್ಲಿ ನಿಯಮಗಳನ್ನು ರೂಪಿಸಬೇಕಾದವರೇ ನಿಜ ಹೇಳುವುದಕ್ಕೆ ಹೆದರುತ್ತಿದ್ದಾರೆ. ನೀತಿಗಳನ್ನು ರೂಪಿಸುವ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಲು ಹೆದರುತ್ತಿದ್ದಾರೆ. ಆರ್ಥಿಕ ಪ್ರಗತಿಯ ಏಜೆನ್ಸಿಗಳಾಗಿ ದುಡಿಯುತ್ತಿರುವ ಜನರಲ್ಲಿ ತೀವ್ರವಾದ ಹೆದರಿಕೆ ಹಾಗು ಅಪನಂಬಿಕೆ ನೆಲೆನಿಂತಿದೆ. ಒಂದು ಸಮಾಜದಲ್ಲಿ ವಿಶ್ವಾಸ, ನಂಬಿಕೆಗಳೇ ಇಲ್ಲದೇ ಹೋದರೆ ಅದು ಅಲ್ಲಿಯ ಆರ್ಥಿಕ ಸಂಬಂಧದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆರ್ಥಿಕತೆಗೆ ಹಾನಿಯಾಗುತ್ತದೆ. ಜನ ಹಾಗು ಸಂಸ್ಥೆಗಳ ನಡುವಿನ ಸಂಬಂಧ, ಒಡನಾಟ ಹಾಳಾದರೆ ಅರ್ಥಿಕ ಚಟುವಟಿಕೆಯೂ ನಿಧಾನಗೊಳ್ಳುತ್ತದೆ. ಕೊನೆಗೆ ಆರ್ಥಿಕತೆ ಸ್ಥಗಿತಗೊಳ್ಳುತ್ತದೆ. ಜನರನ್ನು ಆವರಿಸಿಕೊಂಡಿರುವ ಭಯ, ಅಪನಂಬಿಕೆ ಮತ್ತು ವಿಶ್ವಾಸದ ಕೊರತೆಯ ಈ ದುಸ್ಥಿತಿಯೇ ಈವತ್ತು ನಾವು ನೋಡುತ್ತಿರುವ ಆರ್ಥಿಕ ಮಂದಗತಿಗೆ ಪ್ರಮುಖವಾದ ಮೂಲಭೂತ ಕಾರಣ.

ಇವುಗಳ ಜೊತೆಗೆ ಅಸಹಾಯಕತೆಯ ಸ್ಥಿತಿಯು ಸೇರಿಕೊಂಡಿದೆ. ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ನೊಂದವರಿಗೆ ಅವಕಾಶವೇ ಇಲ್ಲ. ಸ್ವತಂತ್ರ ಸಂಘಟನೆಗಳಾದ ಮಾಧ್ಯಮಗಳು, ನ್ಯಾಯಾಂಗ, ನಿಯಂತ್ರಕ ಅಧಿಕಾರಿಗಳು ಮತ್ತು ತನಿಖಾ ಸಂಸ್ಥೆಗಳು ಸಾರ್ವಜನಿಕರ ವಿಶ್ವಾಸ ಕಳೆದುಕೊಳ್ಳುತ್ತಿವೆ. ಹಾಗಾಗಿ ತಮಗೆ ತೆರಿಗೆಗೆ ಸಂಬಂಧಿಸಿದಂತೆ ಅನಾವಶ್ಯಕವಾಗಿ ಕಿರುಕುಳವಾದಾಗ, ಅಥವಾ ಕಾನೂನು ಬಾಹಿರ ನೀತಿಗಳ ವಿರುದ್ಧ ರಕ್ಷಣೆಯೇ ಇಲ್ಲದಾಗಿದೆ. ಅಂತಹ ಸಂದರ್ಭದಲ್ಲಿ ತಮ್ಮ ಬೆಂಬಲಕ್ಕೆ ನಿಲ್ಲಬಹುದಾದ ಒಂದು ವ್ಯವಸ್ಥೆಯೇ ಉದ್ದಿಮೆದಾರರಿಗೆ ಕಾಣುತ್ತಿಲ್ಲ. ಇದರಿಂದ ಉದ್ದಿಮೆದಾರರಿಗೆ ಹೊಸ ಉದ್ದಿಮೆಯನ್ನು ಪ್ರಾರಂಭಿಸುವುದಕ್ಕಾಗಲಿ, ಉದ್ಯೋಗಗಳನ್ನು ಸೃಷ್ಟಿಸುವುದಕ್ಕೆ ರಿಸ್ಕ್ ತೆಗೆದುಕೊಳ್ಳುವ ಉತ್ಸಾಹವಾಲೀ ಇನ್ನಷ್ಟು ಕಮರಿ ಹೋಗುತ್ತದೆ. ನಮ್ಮ ಸಮಾಜವನ್ನು ಇಂದು ತೀವ್ರವಾಗಿ ವ್ಯಾಪಿಸಿಕೊಂಡಿರುವ ಗಾಢವಾದ ಅವಿಶ್ವಾಸ, ಭಯ, ನಿರಾಸೆಯ ಭಾವನೆ ಇವೆಲ್ಲಾ ಒಟ್ಟಾಗಿ ಸೇರಿಕೊಂಡು ಒಂದು ವಿಷಪೂರಿತ ಸ್ಥಿತಿಯನ್ನು ನಿರ್ಮಿಸಿವೆ. ಅದರಿಂದಾಗಿ ಇಂದು ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿವೆ. ಅದರ ಪರಿಣಾಮವಾಗಿ ಆರ್ಥಿಕ ಬೆಳವಣೆಗೆ ಕುಂಠಿತಗೊಂಡಿದೆ.

ಇದನ್ನೂ ಓದಿ: ಭಾರತ ಮತ್ತು ವಿಶ್ವಾಸ ಕಳೆದುಕೊಂಡ ಆರ್ಥಿಕತೆ : ಕೌಶಿಕ್ ಬಸು

ನಮ್ಮ ಸಾಮಾಜಿಕ ರಚನೆಯು ಈ ಪ್ರಮಾಣದಲ್ಲಿ ಛಿಧ್ರವಾಗುವುದಕ್ಕೆ ಮೋದಿ ಸರ್ಕಾರದ ’ವ್ಯತಿರಿಕ್ತವಾಗಿ ಸಾಬೀತಾಗುವರೆಗೆ ಇದು ದುರುದ್ದೇಶದಿಂದ ಕೂಡಿದೆ’ ಎನ್ನುವ ಆಡಳಿತ ನೀತಿ ಕೂಡ ಮೂಲಭೂತವಾಗಿ ಕಾರಣವಾಗಿದೆ. ಆರ್ಥಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರೆಲ್ಲ್ಲಾ ಯಾವುದೋ ದುರುದ್ದೇಶದಿಂದಲೇ ಅದರಲ್ಲಿ ತೊಡಗಿಕೊಂಡಿರುತ್ತಾರೆ ಎಂದು ಭಾವಿಸಿಕೊಂಡೇ ಸರ್ಕಾರದ ನೀತಿ ರೂಪುಗೊಳ್ಳುತ್ತದೆ. ಇದಕ್ಕೆ ವ್ಯತಿರಿಕ್ತವಾದದ್ದು ಸಾಬೀತಾಗುವವರೆಗೆ ಇದೇ ಸತ್ಯ ಅಂತಲೇ ಅದು ಭಾವಿಸುತ್ತದೆ. ಪ್ರತಿಯೊಬ್ಬ ಕೈಗಾರಿಕೋದ್ಯಮಿ, ಬ್ಯಾಂಕರ್, ನಿಯಮವನ್ನು ರೂಪಿಸುವವನು, ನಿಯಂತ್ರಕ, ಉದ್ದಿಮೆದಾರ ಹಾಗೂ ಪ್ರಜೆಗೂ ಸರ್ಕಾರವನ್ನು ಮೋಸಗೊಳಿಸುವುದೇ ಉದ್ದೇಶವಾಗಿರುತ್ತದೆ ಅನ್ನುವ ಅನುಮಾನ ಸರ್ಕಾರದ್ದು. ಈ ಅನುಮಾನದಿಂದಾಗಿಯೇ ನಮ್ಮ ಸಮಾಜದಲ್ಲಿ ಇದ್ದಂತಹ ವಿಶ್ವಾಸ ಸಂಪೂರ್ಣವಾಗಿ ನಾಶವಾಗಿರುವುದು. ಇದು ನಮ್ಮ ದೇಶದ ಆರ್ಥಿಕ ಬೆಳವಣಿಗೆಯನ್ನು ಸ್ಥಗಿತಗೊಳಿಸಿದೆ. ಬ್ಯಾಂಕರುಗಳಿಗೆ ಸಾಲಕೊಡಲು ಸಾಧ್ಯವಾಗುತ್ತಿಲ್ಲ. ಉದ್ದಿಮೆದಾರರಿಗೆ ಬಂಡವಾಳ ಹೂಡಲು ಆಗುತ್ತಿಲ್ಲ ಮತ್ತು ನಿಯಮಗಳನ್ನು ರೂಪಿಸುವವರಿಗೆ ತಮ್ಮ ಕೆಲಸ ಮಾಡಲು ಆಗುತ್ತಿಲ್ಲ.

ಮೋದಿ ಸರ್ಕಾರ ಪ್ರತಿಯೊಂದನ್ನೂ, ಪ್ರತಿಯೊಬ್ಬರನ್ನೂ ಅನುಮಾನ ಹಾಗೂ ಅವಿಶ್ವಾಸದ ಕನ್ನಡಿಯಲ್ಲೇ ನೋಡುತ್ತಿರುವಂತೆ ಕಾಣುತ್ತಿದೆ. ಅದರಿಂದಾಗಿಯೇ ಹಿಂದಿನ ಸರ್ಕಾರದ ಪ್ರತಿಯೊಂದು ನೀತಿಯೂ ದುರುದ್ದೇಶದಿಂದಲೇ ಕೂಡಿರುವಂತೆ ಅದಕ್ಕೆ ತೋರುತ್ತಿದೆ. ಅದು ನೀಡಿದ ಯಾವುದೇ ಸಾಲವೂ ಈ ಸರ್ಕಾರಕ್ಕೆ ಯೋಗ್ಯವಾಗಿ ಕಾಣುತ್ತಿಲ್ಲ. ಪ್ರತಿಯೊಂದು ಹೊಸ ಕೈಗಾರಿಕಾ ಯೋಜನೆಯ ಹಿಂದೆಯೂ ಸ್ವಹಿತಾಸಕ್ತಿಯೇ ಕಾಣುತ್ತಿದೆ. ಸರ್ಕಾರ ತನ್ನನ್ನು ಒಬ್ಬ ರಕ್ಷಕನ ಸ್ಥಾನದಲ್ಲಿಟ್ಟುಕೊಂಡು ನಗದು ಅಮಾನ್ಯೀಕರಣದಂತಹ ಸ್ವಲ್ಪವೂ ಯೋಚಿಸದ ಮತ್ತು ಆಘಾತಕಾರಿಯಾದ, ಅವಿವೇಕದ ನೈತಿಕ ಕಾವಲುಗಾರಿಕೆಯ ನೀತಿಗಳನ್ನು ಜಾರಿಗೊಳಿಸುತ್ತಾ ಹೋಗುತ್ತಿದೆ. ಪ್ರತಿಯೊಬ್ಬರನ್ನು ದುಷ್ಟರಾಗಿ ಚಿತ್ರಿಸುವ ಮತ್ತು ಪ್ರತಿಯೊಂದನ್ನು ಕೆಟ್ಟದು ವರ್ಸಸ್ ಒಳ್ಳೆಯದು ಎಂದು ವಿಂಗಡಿಸಿ ನೋಡುವ ಕ್ರಮ ಒಳ್ಳೆಯ ಆಳ್ವಿಕೆಯ ನೀತಿಯಾಗಲಾರದು. ಅದು ಆರೋಗ್ಯಕರ ಆರ್ಥಿಕ ಬೆಳವಣೆಗೆಗೆ ಒಳ್ಳೆಯ ಮಾರ್ಗವಲ್ಲ.

ಇದನ್ನೂ ಓದಿ: ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ 6 ವರ್ಷದಲ್ಲಿ 90 ಲಕ್ಷ ಉದ್ಯೋಗ ಕುಸಿತ…

ಆರ್ಥಿಕ ಬೆಳವಣಿಗೆಯಲ್ಲಿ ಸಾಮಾಜಿಕ ವಿಶ್ವಾಸದ ಪಾತ್ರವನ್ನು ಆಡಂ ಸ್ಮಿತ್‌ನಿಂದ ಹಿಡಿದು ಇತ್ತೀಚಿನ ಆಧುನಿಕ ಕಾಲದ ವರ್ತನ ಆರ್ಥಶಾಸ್ತ್ರಜ್ಞರವರೆಗೆ ಎಲ್ಲರೂ ಸೊಗಸಾಗಿ ದಾಖಲಿಸಿದ್ದಾರೆ. ಸಾಮಾಜಿಕ ವ್ಯವಸ್ಥೆಯ ವಿಶ್ವಾಸದ ಚಾದರನ್ನು ಹರಿದು ಚಿಂದಿ ಮಾಡಿದ್ದೇ ಇಂದಿನ ಆರ್ಥಿಕ ದುಸ್ಥಿತಿಗೆ ಮುಖ್ಯ ಕಾರಣ. ಇಂದು ನಮ್ಮ ಆರ್ಥಿಕ ಬೆಳವಣಿಗೆ ಮತ್ತೆ ಚೇತರಿಸಿಕೊಳ್ಳಬೇಕಾದರೆ ಭೀತಿ ಮತ್ತು ಅಪನಂಬಿಕೆಯಿಂದಾಗಿ ಚಿಂದಿಯಾಗಿರುವ ಚಾದರವನ್ನು ಮತ್ತೆ ಸೇರಿಸಿ, ಹೊಲಿದು, ನೇಯ್ದು, ನಂಬಿಕೆ ಹಾಗೂ ವಿಶ್ವಾಸವನ್ನು ಮೂಡಿಸಬೇಕಾಗಿದೆ. ವ್ಯಾಪಾರಸ್ಥರಲ್ಲಿ, ಬಂಡವಾಳ ಒದಗಿಸುವವರಲ್ಲಿ ಮತ್ತು ಕಾರ್ಮಿಕರಲ್ಲಿ ಮತ್ತೆ ವಿಶ್ವಾಸ ಮೂಡಬೇಕು. ಅವರಲ್ಲಿ ಹೆದರಿಕೆ, ಆತಂಕ ಹೋಗಿ, ಮತ್ತೆ ಉತ್ಸಾಹ, ಉಲ್ಲಾಸ ಮೂಡಬೇಕು. ಇದು ಸಾಧ್ಯವಾಗಬೇಕಾದರೆ ಅದು ಸುಳ್ಳು ಎಂದು ಸಾಬೀತಾಗುವವರೆಗೆ ಪ್ರತಿಯೊಬ್ಬರೂ ದುರುದ್ದೇಶಿಗಳೇ ಆಗಿರುತ್ತಾರೆ’ ಎನ್ನುವ ಭಾವನೆ ಹೋಗಬೇಕು. ಭಾರತೀಯ ಉದ್ದಿಮೆದಾರರನ್ನು ನಂಬಬೇಕು.

ಇಂದು ಭಾರತದ ಆರ್ಥಿಕತೆ ಆತಂಕಕಾರಿ ಸ್ಥಿತಿಯಲ್ಲಿ ಬಳಲುತ್ತಿದೆ. ವರಮಾನ ಬೆಳೆಯುತ್ತಿಲ್ಲ. ಕುಟುಂಬದಲ್ಲಿನ ಬಳಕೆ ನಿಧಾನವಾಗುತ್ತಿದೆ. ತಮ್ಮ ಹಿಂದಿನ ಮಟ್ಟದ ಬಳಕೆಯನ್ನು ಕಾಪಾಡಿಕೊಳ್ಳಲು ಉಳಿತಾಯಕ್ಕೆ ಕೈಹಾಕುತ್ತಿದ್ದಾರೆ. ಜಿಡಿಪಿ ಬೆಳವಣೆಗೆಯ ಫಲವೆಲ್ಲಾ ಮೇಲ ಸ್ತರದ ಕೆಲವೇ ಅನುಕೂಲಸ್ಥರಿಗೆ ಹೋಗುತ್ತಿದೆ.

ಸ್ಥಗಿತತೆಯ ಅಪಾಯ

ನಿಜವಾಗಿ ಆತಂಕಕಾರಿಯಾದ ಬೆಳವಣಿಗೆ ಅಂದರೆ ಇತ್ತೀಚಿನ ಚಿಲ್ಲರೆ (ರಿಟೇಲ್) ಸರಕಿನ ಹಣದುಬ್ಬರದ ಸೂಚಿ ತೀವ್ರವಾಗಿ ಏರಿದೆ. ಅದರಲ್ಲೂ ಆಹಾರಕ್ಕೆ ಸಂಬಂಧಿಸಿದ ಹಣದುಬ್ಬರದ ಸೂಚಿ ಏರುತ್ತಿರುವುದು ನಿಜಕ್ಕೂ ಆತಂಕಕಾರಿಯಾದ ಬೆಳವಣಿಗೆ. ರಿಟೇಲ್ ಹಣದುಬ್ಬರ ಬರುವ ತಿಂಗಳುಗಳಲ್ಲಿ ಇನ್ನಷ್ಟು ಏರುವ ಸಾಧ್ಯತೆಗಳಿವೆ. ನಿರಂತರವಾಗಿ ಏರುತ್ತಿರುವ ಹಣದುಬ್ಬರದ ದರ, ಬೇಡಿಕೆಯ ಸ್ಥಗಿತತೆ ಮತ್ತು ಗರಿಷ್ಠ ಮಟ್ಟದ ನಿರುದ್ಯೋಗ ಎಲ್ಲಾ ಒಟ್ಟಾರೆಯಾಗಿ ಅರ್ಥಶಾಸ್ತ್ರಜ್ಞರು ಸ್ಥಗಿತತೆ ಎಂದು ಕರೆಯುವ ಅಪಾಯಕಾರಿ ಸ್ಥಿತಿಗೆ ನಮ್ಮನ್ನು ತಳ್ಳಿಬಿಡುತ್ತದೆ. ಒಮ್ಮೆ ಆ ಸ್ಥಿತಿ ತಲುಪಿದರೆ ನಮ್ಮಂತಹ ದೊಡ್ಡ ಆರ್ಥಿಕತೆಗೆ ಚೇತರಿಸಿಕೊಳ್ಳುವುದು ತುಂಬಾ ಕಷ್ಟ. ನಾವು ಸಧ್ಯಕ್ಕೆ ಸ್ಥಗಿತತೆಯ ಅಂದರೆ ಸ್ಟಾಗ್‌ಪ್ಲೇಷನ್ ಸ್ಥಿತಿಯನ್ನು ಇನ್ನೂ ತಲುಪಿಲ್ಲ. ತಕ್ಷಣ ಕ್ರಮ ತೆಗೆದುಕೊಂಡು ಬಳಕೆಯ ವಸ್ತುಗಳ ಬೇಡಿಕೆಯನ್ನು ಸುಧಾರಿಸಬೇಕು. ಅದಕ್ಕಾಗಿ ವಿತ್ತೀಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಣಕಾಸು ಆಧಾರಿತ ನಿಯಮಗಳು ಪರಿಣಾಮಕಾರಿಯಾಗುವಂತೆ ಕಾಣುತ್ತಿಲ್ಲ.

ಭಾರತ ಈಗಿರುವ ಸೂಕ್ಷ್ಮವಾದ ಆರ್ಥಿಕ ಪರಿಸ್ಥಿತಿಯಲ್ಲಿ ಎರಡು ನೀತಿಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದು ನನಗನ್ನಿಸುತ್ತದೆ. ವಿತ್ತೀಯ ನೀತಿಗಳನ್ನು ಅನುಸರಿಸಿ ಬೇಡಿಕೆಯನ್ನು ಹೆಚ್ಚಿಸಬೇಕು ಮತ್ತು ಎರಡನೆಯದಾಗಿ ’ಸಾಮಾಜಿಕ ನೀತಿಯ’ ಮೂಲಕ ಖಾಸಗೀ ಹೂಡಿಕೆಯನ್ನು ಪ್ರೋತ್ಸಾಹಿಸಬೇಕು. ಹೂಡಿಕೆದಾರರಲ್ಲಿ ನಂಬಿಕೆ ಮತ್ತು ವಿಶ್ವಾಸ ಮೂಡಿ ಅವರು ಸಮಾಜದ ಆರ್ಥಿಕತೆಯಲ್ಲಿ ಪಾಲ್ಗೊಳ್ಳುವಂತಾದರೆ ಇದು ಸಾಧ್ಯವಾಗುತ್ತದೆ.
– ಮನಮೋಹನ್ ಸಿಂಗ್

 

ಇದನ್ನೂ ಓದಿ: ಆರ್ಥಿಕ ಕುಸಿತ- ಮೋದಿಗೆ ಕಳಂಕ ತಪ್ಪಿಸಲು ಬಲಿಪಶು ಆಗುತ್ತಿದ್ದಾರಾ ನಿರ್ಮಲಾ ಸೀತಾರಾಮನ್!?

ಇಂದು ಭಾರತ ಮೂರು ಟ್ರಿಲಿಯನ್ ಜಾಗತಿಕ ಆರ್ಥಿಕ ಶಕ್ತಿಕೇಂದ್ರವಾಗಿದೆ. ಪ್ರಮುಖವಾಗಿ ಖಾಸಗಿ ವಾಣಿಜ್ಯಸಂಸ್ಥೆಗಳು ಈ ಆರ್ಥಿಕತೆಯ ಚಾಲಕ ಶಕ್ತಿಯಾಗಿದ್ದಾರೆ. ಮನಸ್ಸಿಗೆ ಬಂದಂತೆ ನಿಯಂತ್ರಿಸಬಹುದಾದ ಹಾಗೂ ನಿರ್ದೇಶಿಸಬಹುದಾದ ಪುಟ್ಟ ಆರ್ಥಿಕತೆ ಇದಲ್ಲ. ಅಥವಾ ಪತ್ರಿಕೆಗಳಲ್ಲಿ ವರ್ಣರಂಜಿತ ಪ್ರಮುಖ ಸುದ್ದಿಮಾಡಿ ಮತ್ತು ಮಾಧ್ಯಮಗಳಲ್ಲಿ ಗದ್ದಲಮಾಡುವ ಟೀಕೆಗಳಿಂದ ನಿರ್ವಹಿಸಿಬಿಡಬಹುದಾದ ಆರ್ಥಿಕತೆಯೂ ಅಲ್ಲ. ನಮಗೆ ರುಚಿಸದ ಅಥವಾ ಕಹಿ ಸುದ್ದಿಯನ್ನು ಹೇಳುವ ಮಂದಿಯನ್ನು ಗುಂಡಿಕ್ಕುವುದೇ ಆಗಲಿ, ಆರ್ಥಿಕ ವರದಿಗಳನ್ನು ಮತ್ತು ದತ್ತಾಂಶಗಳನ್ನು ತಡೆಹಿಡಿಯುವುದೇ ಆಗಲಿ ತೀರಾ ಬಾಲಿಶವಾದ ಕ್ರಮಗಳು. ಅವು ಬೆಳೆಯುತ್ತಿರುವ ಒಂದು ಜಾಗತಿಕ ಆರ್ಥಿಕ ಶಕ್ತಿಗೆ ಉಚಿತವಾದ ಕ್ರಮವೂ ಅಲ್ಲ. ಯಾವುದೇ ಕುತಂತ್ರ ಅಥವಾ ಕುಟಿಲೋಪಾಯದಿಂದಲೂ ೧.೨ ಬಿಲಿಯನ್ ಜನರು ಇರುವ ಮೂರು ಟ್ರಿಲಿಯನ್ ಮಾರುಕಟ್ಟೆ ಆರ್ಥಿಕತೆಯ ಸ್ಥಿತಿಯನ್ನು ಮರೆಮಾಚುವುದಕ್ಕೆ ಸಾಧ್ಯವಿಲ್ಲ. ಅವನ್ನು ಕುರಿತ ವಿಶ್ಲೇಷಣೆಯನ್ನು ತಪ್ಪಿಸುವುದಕ್ಕೆ ಸಾಧ್ಯವಿಲ್ಲ. ಆರ್ಥಿಕ ವ್ಯವಸ್ಥೆಯಲ್ಲಿನ ಪಾಲುದಾರರಿಗೆ ಬೇಕಿರುವುದು ಸಾಮಾಜಿಕ ಮತ್ತು ಆರ್ಥಿಕ ಪ್ರೇರಣೆ. ಅವರು ಸ್ಪಂದಿಸುವುದು ಅದಕ್ಕೇ ಹೊರತ ಆಜ್ಞೆಗಳಿಗೆ, ಬಲಾತ್ಕಾರಕ್ಕೆ ಅಥವಾ ಸಾರ್ವಜನಿಕ ಸಂಬಂಧಗಳಿಗಲ್ಲ.

ಜಾಗತಿಕ ಆರ್ಥಿಕತೆಯನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡು ಲಾಭಮಾಡಿಕೊಳ್ಳಬಹುದಾದ ವಿಶಿಷ್ಟವಾದ ಮತ್ತು ಸೊಗಸಾದ ಅವಕಾಶ ಭಾರತಕ್ಕಿದೆ. ಇಂತಹ ಅದ್ಭುತ ಗಳಿಗೆಯಲ್ಲಿ ತನ್ನ ಆರ್ಥಿಕತೆಯನ್ನು ಹೀಗೆ ಸ್ವತಃ ಘಾಸಿಗೊಳಿಸಿಕೊಳ್ಳುತ್ತಿರುವುದು ದುಃಖಕರ. ಚೀನಾದ ಆರ್ಥಿಕತೆ ಮಂದಗತಿಯಲ್ಲಿದೆ ಮತ್ತು ಅದರ ರಫ್ತು ಇಳಿಮುಖವಾಗುತ್ತಿದೆ. ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ರಫ್ತಿನಲ್ಲಿ ತೊಡಗಿಕೊಳ್ಳುವುದಕ್ಕೆ ಸೊಗಸಾದ ಅವಕಾಶ ಸಿಕ್ಕಿದೆ. ಮತ್ತೆ ಸಮಾಜದಲ್ಲಿ ವಿಶ್ವಾಸ ಮತ್ತು ಆರ್ಥಿಕ ಪ್ರಗತಿಯನ್ನು ಸೃಷ್ಟಿಸಿ, ಈಗಿರುವ ಅಪನಂಬಿಕೆ, ಭಯ ಮತ್ತು ನೈರಾಶ್ಯವನ್ನು ತೊಡೆದು ಹಾಕಬೇಕು. ಆ ಮೂಲಕ ಜಾಗತಿಕ ರಫ್ತಿನಲ್ಲಿ ಸಿಂಹಪಾಲನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸಬೇಕು. ಈಗ ಲೋಕಸಭೆಯಲ್ಲಿ ಸರ್ಕಾರಕ್ಕೆ ಸ್ಪಷ್ಟ ಬಹುಮತ ಇದೆ ಮತ್ತು ಜಾಗತಿಕ ತೈಲಬೆಲೆಗಳು ಕಡಿಮೆ ಇದೆ. ಇಂತಹ ಸುವರ್ಣ ಅವಕಾಶಗಳು ದೊರಕುವುದು ತಲೆಮಾರಿಗೊಮ್ಮೆ ಮಾತ್ರ. ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬೇಕು. ಭಾರತವನ್ನು ಆರ್ಥಿಕ ಬೆಳವಣಿಗೆಯ ಮುಂದಿನ ಹಂತಕ್ಕೆ ತ್ವರಿತವಾಗಿ ಕೊಂಡೊಯ್ಯುವುದಕ್ಕೆ ಬಳಸಿಕೊಳ್ಳಬೇಕು. ನಮ್ಮ ಕೋಟ್ಯಂತರ ಯುವಕ ಯುವತಿಯರಿಗೆ ಹೊಸ ನೌಕರಿಗಳು ಸೃಷ್ಟಿಯಾಗಬೇಕು. ಉದ್ಯಮಪತಿಗಳು ಮತ್ತು ಕೈಗಾರಿಕೋದ್ಯಮಿಗಳ ಬಗ್ಗೆ ಇರುವ ಆಳವಾದ ಅಪನಂಬಿಕೆಯನ್ನು ಬಿಟ್ಟು ಪ್ರಧಾನಮಂತ್ರಿ ಮೋದಿಯವರು ಸ್ವಾಭಾವಿಕ ಹುರುಪು, ಹುಮ್ಮಸ್ಸುಗಳನ್ನು ಪುನರುಜ್ಜೀವಗೊಳಿಸುವ ಮತ್ತು ನಮ್ಮ ಆರ್ಥಿಕತೆ ಚೇತರಿಸಿಕೊಂಡು ಮೇಲೇರುವುದಕ್ಕೆ ಸಹಕಾರಿಯಾಗುವಂತಹ ಪರಸ್ಪರ ನಂಬಿಕೆ ವಿಶ್ವಾಸಗಳುಳ್ಳ ಸಾಮಾಜಿಕ ವ್ಯವಸ್ಥೆಯನ್ನು ಬೆಳೆಸಬೇಕೆಂದು ನಾನು ಮನವಿಮಾಡಿಕೊಳ್ಳುತ್ತೇನೆ.

ಮನಮೋಹನ್ ಸಿಂಗ್
ಅನುವಾದ : ಟಿ ಎಸ್ ವೇಣುಗೋಪಾಲ್
ಕೃಪೆ: ದಿ ಹಿಂದು

 

https://naanugauri.com/28-%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%bf-%e0%b2%b8%e0%b2%82%e0%b2%b8%e0%b3%8d%e0%b2%a5%e0%b3%86%e0%b2%97%e0%b2%b3-%e0%b2%ae%e0%b2%be%e0%b2%b0%e0%b2%be%e0%b2%9f/

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

1 COMMENT

  1. ಉಚಿತವಾಗಿ ವೀಕ್ಷಿಸಲು ಅವಕಾಶ ನೀಡುವ ತಾಣಗಳನ್ನು ಆರ್ಥಿಕವಾಗಿ ಸಾಧ್ಯವಾದಷ್ಟು ಚಂದಾದಾರರಾಗಿ ಪ್ರೋತ್ಸಾಹಿಸಿ

LEAVE A REPLY

Please enter your comment!
Please enter your name here