Homeಮುಖಪುಟಬ್ರಾಹ್ಮಣ್ಯ ಮತ್ತು ಪುರುಷಾಧಿಪತ್ಯ: ಟ್ವಿಟರ್‌ನಲ್ಲಿ ಬೆತ್ತಲಾದ ಭಾರತ!

ಬ್ರಾಹ್ಮಣ್ಯ ಮತ್ತು ಪುರುಷಾಧಿಪತ್ಯ: ಟ್ವಿಟರ್‌ನಲ್ಲಿ ಬೆತ್ತಲಾದ ಭಾರತ!

- Advertisement -
- Advertisement -

ಮಲ್ಲಿಗೆ ಸಿರಿಮನೆ |

Smash Brahminical Patriarchy- ಚಹರೆ 1
ಸಂಗಪಲ್ಲಿ ಅರುಣಾ ಎಂಬ ಯುವತಿ ಟ್ವಿಟರ್ ಸಿಇಓ ಜಾಕ್ ಡಾರ್ಸೆಗೆ ಒಂದು ಉಡುಗೊರೆ ನೀಡಿದರು. ಅದನ್ನು ಕೈಯ್ಯಲ್ಲಿ ಹಿಡಿದು ಅಲ್ಲಿದ್ದ ಇನ್ನಿತರ ಕೆಲವರೊಂದಿಗೆ ಜಾಕ್ ಒಂದು ಫೋಟೋಗೆ ಪೋಸ್ ನೀಡಿದರು. ಆ ಫೋಟೋವನ್ನು ಮೊದಲೇ ಪಡೆದಿದ್ದ ಅನುಮತಿಯ ಮೇರೆಗೆ ಆ ಸಂದರ್ಭದಲ್ಲಿ ಅಲ್ಲಿದ್ದ ಕೆಲವರು ತಮ್ಮ ಟ್ವಿಟರ್ ಖಾತೆಗಳಲ್ಲಿ ಪ್ರಕಟಿಸಿದರು. ಅದಾದ ತಕ್ಷಣ ಭಾರತ ಮತ್ತೊಮ್ಮೆ ತನ್ನ ಬ್ರಾಹ್ಮಣ್ಯದ ಪೂರ್ತಿ ವಿಕೃತತೆಯೊಂದಿಗೆ ಬೆತ್ತಲಾಯಿತು.

ನಡೆದದ್ದಿಷ್ಟು…..

ನ.18ರಂದು ಟ್ವಿಟರ್‌ನ ದೆಹಲಿ ಕಛೇರಿಯಲ್ಲಿ ಒಂದು ಸಭೆ ನಡೆಯಿತು. ಟ್ವಿಟರ್‌ನ ಸಿಇಓ ಜಾಕ್ ಡಾರ್ಸೆ ಮತ್ತು ಭಾರತದಲ್ಲಿನ ಮತ್ತೊಬ್ಬ ಟ್ವಿಟರ್ ಉನ್ನತಾಧಿಕಾರಿ ವಿಜಯಾ ಗದ್ದೆ ಈ ಅನೌಪಚಾರಿಕ ಸಭೆಯನ್ನು ಕರೆದಿದ್ದರು. ಈ ಸಭೆಗೆ ಭಾರತದಲ್ಲಿ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ಆಯಾಮಗಳಿಂದ ಸಕ್ರಿಯವಾಗಿರುವ 7ಮಂದಿ ಮಹಿಳೆಯರನ್ನು ಕರೆಯಲಾಗಿತ್ತು. ಪತ್ರಕರ್ತೆ ಬರ್ಖಾ ದತ್, ಸಾಮಾಜಿಕ ಕಾರ್ಯಕರ್ತೆ ರಿತುಪರ್ಣಾ ಚಟರ್ಜಿ, ಅನ್ನಾ ಎಂಎಂ ವೆಟ್ಟಿಕಾಡ್, ನಿಲಾಂಜನಾ ಎಸ್.ರಾಯ್, ಜಾಲತಾಣದಲ್ಲಿ ‘ದಲಿತ್ ವಿಮೆನ್ ಫೈಟ್’ ಎಂಬ ಸಾಕಷ್ಟು ಪರಿಚಿತ ಖಾತೆಯನ್ನು ನಿರ್ವಹಿಸುವವರಲ್ಲಿ ಒಬ್ಬರಾದ ಸಂಗಪಲ್ಲಿ ಅರುಣಾ ಮೊದಲಾದವರು. ಈ ಸಭೆಯ ಉದ್ದೇಶ ಟ್ವಿಟರ್‌ನಲ್ಲಿ ಮಹಿಳೆಯರು ತಮ್ಮ ಅನುಭವ, ಆತಂಕ, ನಿಲುವುಗಳನ್ನು ಸುರಕ್ಷಿತವಾಗಿ ಹಂಚಿಕೊಳ್ಳಲು ಸಾಧ್ಯವಾಗುವಂತೆ, ಟ್ವಿಟರ್ ಮತ್ತು ಇನ್ನಿತರ ಜಾಲತಾಣಗಳಲ್ಲಿ ‘ಟ್ರೋಲ್’ ಎಂದು ಕರೆಯಲ್ಪಡುವ ಹಿಂಸೆಯಿಂದ ಮುಕ್ತವಾಗುವಂತೆ ಟ್ವಿಟರ್ ಏನು ಮಾಡಬೇಕು…. ಇದೇ ಮೊದಲಾದ ಮಹಿಳಾ ಸುರಕ್ಷತೆಯ ವಿಚಾರಗಳನ್ನು ಚರ್ಚಿಸುವುದಾಗಿತ್ತು. ಆದ್ದರಿಂದಲೇ ಟ್ವಿಟರ್‌ನ ಅತ್ಯುನ್ನತ ಅಧಿಕಾರಿ ಜಾಕ್ ಡಾರ್ಸೆಯ ಭಾರತ ಭೇಟಿಯ ಸಂದರ್ಭದಲ್ಲಿ ಈ ಸಭೆಯನ್ನು ಟ್ವಿಟರ್ ಏರ್ಪಡಿಸಿತ್ತು.

ಈ ಸಭೆಯ ಬಗ್ಗೆ ಅನ್ನಾ ಎಂಎಂ ವೆಟ್ಟಿಕಾಡ್, ರಿತುಪರ್ಣಾ ಚಟರ್ಜಿ, ನಿಲಾಂಜನಾ ರಾಯ್ ಮತ್ತು ಅರುಣಾ ಸೇರಿಕೊಂಡು ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಹೀಗೆ ವಿವರಿಸಲಾಗಿದೆ. ‘ಅದೊಂದು ಅನೌಪಚಾರಿಕ ಸಭೆಯಾಗಿತ್ತು. ಅಲ್ಲಿ ಯಾವುದೂ ಕೂಡಾ ಉದ್ದೇಶಪೂರ್ವಕವಾಗಿ ಮೊದಲೇ ಯೋಜಿತವಾಗಿ ನಡೆಯುವಂತಿರಲಿಲ್ಲ. ಅಂದು ನಮ್ಮೆಲ್ಲರಿಗೂ, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗೆ ಟ್ವಿಟರ್ ತಮ್ಮ ಬದ್ಧತೆಯನ್ನು ಹೇಗೆ ತೋರಬಹುದೆಂಬ ವಿಚಾರ, ಟ್ವಿಟರ್ ಸೇರಿದಂತೆ ಜಾಲತಾಣಗಳಲ್ಲಿ ಪ್ರದರ್ಶಿತವಾಗುವ ಮಹಿಳೆಯರ ಮೇಲೆ ದಾಳಿ ಮಾಡುವ ಮನೋಭಾವ, ಇಂತಹದ್ದರ ಬಗ್ಗೆ ನಮ್ಮ ಅನಿಸಿಕೆ, ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ತಿಳಿಸಲಾಗಿತ್ತು. ಟ್ವಿಟರ್‌ನ ಸಿಇಓ ಜಾಕ್ ಡಾರ್ಸೆ ಸೇರಿದಂತೆ ಇಡೀ ತಂಡ ಬಹಳ ಆತ್ಮೀಯವಾಗಿ, ತಾಳ್ಮೆಯಿಂದ ನಮ್ಮೆಲ್ಲರ ಅನುಭವ, ಅನಿಸಿಕೆ, ಸಲಹೆಗಳನ್ನು ಕೇಳಿ, ಬರೆದುಕೊಂಡರು. ಇದೇ ಸಂದರ್ಭದಲ್ಲಿ ದಲಿತ ಮಹಿಳಾ ವಿಚಾರಗಳ ಬಗ್ಗೆ ಹೆಚ್ಚು ಒಡನಾಟವಿರುವ ಅರುಣಾರವರು, ತಳಸಮುದಾಯಗಳನ್ನು, ಅದರಲ್ಲೂ ದಲಿತ ಮಹಿಳೆಯರನ್ನು ಗುರಿಯಾಗಿಸಿಕೊಂಡು ಜಾಲತಾಣಿಗರು ನಡೆಸುವ ದಾಳಿಗಳ ಬಗ್ಗೆ ಅನುಭವ ಹಂಚಿಕೊಂಡರು. ಜಾತ್ಯಾಧಾರಿತ ಹೇಳಿಕೆಗಳನ್ನು ಟ್ವಿಟರ್ ಕಂಪೆನಿಗೆ ರಿಪೋರ್ಟ್ ಮಾಡಲು ಬೇಕಾದ ಅವಕಾಶ ಕೂಡಾ ಅದರಲ್ಲಿ ಇಲ್ಲ ಎಂಬುದನ್ನು

ಗಮನಕ್ಕೆ ತಂದರು. ವಿಸ್ತಾರವಾಗಿ ಜಾತ್ಯಾಧಾರಿತ ಪಿತೃಪ್ರಧಾನತೆ ಹೇಗೆ ದಲಿತ ಮಹಿಳೆಯರ ಎಲ್ಲ ಸ್ವತಂತ್ರ ಅಭಿವ್ಯಕ್ತಿಯನ್ನು ಕಸಿಯುತ್ತದೆ ಎಂಬುದನ್ನು ವಿವರಿಸಿದರು. ಇಡೀ ಸಂವಾದ ಪರಿಣಾಮಕಾರಿಯಾಗಿ ನಡೆಯಿತು. ಕೊನೆಗೆ ಅರುಣಾ ಸಿಇಓಗೆ ಒಂದು ಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಿದರು. ಆ ಚಿತ್ರದ ಜೊತೆಯಲ್ಲೇ ಆ ಚರ್ಚೆಯಲ್ಲಿ ಪಾಲ್ಗೊಂಡ ನಮ್ಮೆಲ್ಲರ ಜೊತೆ ಜಾಕ್ ಡಾರ್ಸೆ ಫೋಟೋ ತೆಗೆಸಿಕೊಂಡರು, ಮತ್ತು ಟ್ವಿಟ್ಟರ್‌ನ ಉದ್ಯೋಗಿಗಳಿಂದಲೇ ನಮಗೂ ತಲುಪಿದ ಆ ಚಿತ್ರವನ್ನು ಹಂಚಿಕೊಳ್ಳಲೂ ಕೇಳಲಾಗಿತ್ತು.

ಆದರೆ ಯಾವ ಬಗೆಯ ದಾಳಿ ಮತ್ತು ಬೆದರಿಕೆಗಳ ಬಗ್ಗೆ ಸಭೆ ನಡೆದಿತ್ತೋ, ಅಂತಹದ್ದೇ ದಾಳಿ ಈ ಚಿತ್ರದ ಸುತ್ತ ಟ್ವಿಟರ್‌ನಲ್ಲಿ ನಡೆಯಿತು. ‘ಬ್ರಾಹ್ಮಣೀಯ ಪುರುಷಾಧಿಪತ್ಯವನ್ನು ಧ್ವಂಸಗೊಳಿಸಿ’ (Smash Brahminical Patriarchy) ಎಂಬ ಕರೆಕೊಡುತ್ತಿದ್ದ ಆ ಪೇಂಟಿಂಗ್‌ನ್ನು ಜಾಕ್ ಕೈಯ್ಯಲ್ಲಿ ಹಿಡಿದುಕೊಂಡಿದ್ದು, ಹಲವು ಟ್ವಿಟರ್ ಬಳಕೆದಾರರಿಗೆ ಜನಾಂಗೀಯ ದ್ವೇಷದಂತೆ ಕಂಡು ಅವರು ನಮೆಲ್ಲರ ಮೇಲೆ ದಾಳಿಗಿಳಿದರು. ಈ ದಾಳಿಯಲ್ಲಿ ಭಾರತ ಮತ್ತು ಹೊರಗೆ ನೆಲೆಸಿರುವ ಬ್ರಾಹ್ಮಣ/ಮೇಲ್ಜಾತಿ ಟ್ವಿಟರಿಗರೆಲ್ಲ ಭಾಗಿಯಾದರು (ಕೆಲವು ಹೆಸರಾಂತ ಚಿಂತಕರು, ಬರಹಗಾರರನ್ನೂ ಒಳಗೊಂಡಂತೆ). ಇದು ಎಷ್ಟು ತೀವ್ರವಾಗಿ ನಡೆಯಿತೆಂದರೆ, ಜಾಕ್ ಡಾರ್ಸೆ ಕ್ಷಮೆ ಕೇಳಿದರು ಮಾತ್ರವಲ್ಲ ಟ್ವಿಟರ್ ಈ ಕುರಿತು ವಿಷಾದ ವ್ಯಕ್ತಪಡಿಸಿ ಅಧಿಕೃತ ಹೇಳಿಕೆ ಹೊರಡಿಸಿತು. ಎಲ್ಲಿಂದ ಆರಂಭವಾಯಿತೋ ಕೊನೆಗೆ ನೋಡಿದರೆ ನಾವು ಮತ್ತೆ ಅಲ್ಲಿಗೇ ಬಂದು ನಿಂತಿದ್ದೆವು………” ಎಂದು ರಿತುಪರ್ಣಾ ಹೇಳಿದ್ದಾರೆ.

ಈ ಎಲ್ಲ ದಾಳಿಗಳ ಗುರಿಯಾದ ಸಂಗಪಲ್ಲಿ ಅರುಣಾ ಮತ್ತು ಆಕೆ ನೀಡಿದ ಪೇಂಟಿಂಗ್‌ಅನ್ನು ರಚಿಸಿದ ಭಾರತ ಸಂಜಾತ ಕಲಾವಿದೆ ಕನಿಮೋಳಿ ಸಹಾ ತಮ್ಮ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಅರುಣಾ ಈ ಬಗ್ಗೆ ಬರೆಯುತ್ತಾ, ಈಗ ನಡೆದಿರುವ ದಾಳಿಯೇ ಸಾಕ್ಷಿ, ನಾನು ಆ ಸಭೆಯಲ್ಲಿ ಹಂಚಿಕೊಂಡ ನನ್ನ ಅನುಭವಗಳು ಸಂಪೂರ್ಣ ಸತ್ಯ ಎಂಬುದಕ್ಕೆ. ಟ್ವಿಟರ್ ಮಾತ್ರವಲ್ಲ ಎಲ್ಲ ಜಾಲತಾಣಗಳಲ್ಲೂ ದಲಿತ ಮಹಿಳೆಯರು ತಮ್ಮನ್ನು ತಾವು ಅಭಿವ್ಯಕ್ತಿಸಲು ಮುಕ್ತ ಅವಕಾಶ ಆಗಲೇಬೇಕು, ಅಂತಹ ವೇದಿಕೆಗಳು ಬಹಳ ಮುಖ್ಯ ಎಂದಿದ್ದಾರೆ. ಕನಿಮೋಳಿ ಸಾಮಾಜಿಕ ಜಾಲತಾಣಗಳಲ್ಲಿ ‘ದಲಿತ್ ದಿವಾ’ ಹೆಸರಿನಲ್ಲಿ ಸಕ್ರಿಯವಾಗಿದ್ದಾರೆ. ಅವರು ಇಂತಹ ಎಷ್ಟೇ ದಾಳಿ ನಡೆದರೂ ನಮ್ಮ ವಾದವನ್ನು ನಾವು ಮುಂದಿಡಲೇಬೇಕಿದೆ. ಒಂದು ವೇಳೆ ಟ್ವಿಟರ್ ಅದಕ್ಕೆ ಅವಕಾಶ ನೀಡುವಷ್ಟು ಮುಕ್ತವಾಗಿಲ್ಲವಾದರೆ ಅದನ್ನು ತೊರೆದು ಪರ್ಯಾಯ ಹುಡುಕಿಕೊಳ್ಳಲೂ ಕೂಡಾ ಸಿದ್ಧ ಎಂದು ದಿಟ್ಟವಾದ ಸಂದೇಶ ನೀಡಿದ್ದಾರೆ.

ಇದೆಲ್ಲಕ್ಕಿಂತ, ಆಘಾತಕಾರಿಯಾದದ್ದು ಟ್ವಿಟರ್‌ನ ನಡವಳಿಕೆ. ಅದನ್ನು ಹೇಳಿಕೆಗೆ ಸಹಿ ಮಾಡಿರುವ ಈ ಎಲ್ಲ ಮಹಿಳೆಯರು ಟೀಕಿಸಿದ್ದಾರೆ. ಈ ಸಭೆಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಜಯಾ ಗದ್ದೆ ಅವರು ವಿವಾದ ಆರಂಭವಾಗುತ್ತಿದ್ದಂತೆಯೇ, ‘ಈ ಮಹಿಳೆಯರು ದ್ವೇಷ ಹರಡುತ್ತಿದ್ದಾರೆ’ ಎಂದು ಆರೋಪಿಸಿದ ಟ್ವಿಟರ್ ಹ್ಯಾಂಡಲ್‌ಗಳ ಕ್ಷಮೆ ಕೇಳಿದರು, ಅಲ್ಲಿ ತೆಗೆಯಲಾಗಿದ್ದ ಗುಂಪು ಫೋಟೋ ಖಾಸಗಿಯಾಗಿತ್ತು ಎಂದು ಸತ್ಯಕ್ಕೆ ದೂರವಾದ ಮಾತು ಹೇಳಿದರು ಹಾಗೂ ತಕ್ಷಣವೇ ದಲಿತ ಮತ್ತು ಮಹಿಳಾ ಕಾಳಜಿಗಳಿಂದ ದೂರ ಸರಿದರು. ಆಕೆ ಮಾತ್ರವಲ್ಲ, ಇನ್ನಿತರ ದೇಶಗಳಲ್ಲಿ ಮಹಿಳಾ ಮತ್ತು ಅಂಚಿಗೊತ್ತಲ್ಪಟ್ಟ ಸಮುದಾಯಗಳ ಕಾಳಜಿಗಳ ಬಗ್ಗೆ ಬಹಳ ಸೂಕ್ಷ್ಮತೆ ಪ್ರದರ್ಶಿಸುವ ಟ್ವಿಟರ್ ಇಲ್ಲಿ ಮಾತ್ರ ಹೇಗೆ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿತು? ಲೈಂಗಿಕ ಹಿಂಸಾಚಾರವನ್ನು ಅಥವಾ ವರ್ಣನಿಂದನೆಯನ್ನು ಪರೋಕ್ಷವಾಗಿ ಸಮರ್ಥಿಸುವ ಕೆಲವು ಹೇಳಿಕೆಗಳು ಅಥವಾ ಚಿತ್ರಗಳು ಬಂದಷ್ಟಕ್ಕೇ, ಇತರ ದೇಶಗಳಲ್ಲಿ ಇದಕ್ಕಾಗಿ ಪಶ್ಚಾತ್ತಾಪವಾಗಿದೆ, ಇದನ್ನು ತಡೆಯುತ್ತೇವೆ ಎಂದು ಸೂಕ್ಷ್ಮತೆ ತೋರಿದ್ದ ಸಿಇಓ ಅವರಿಗೆ, ಭಾರತದಲ್ಲಿ ಈ ಒಂದು ಪೋಸ್ಟರ್ ಕಾರಣಕ್ಕೆ ಮಹಿಳೆಯರ ಮೇಲೆ ನಡೆದ ದಾಳಿ ಅಸಮರ್ಪಕ ಅನ್ನಿಸಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಟ್ವಿಟರ್ ನಿಜಕ್ಕೂ ಈ ಸಂದರ್ಭದಲ್ಲಿ ಧೈರ್ಯವಹಿಸಬೇಕು ಮತ್ತು ತಾನು ಈವರೆಗೆ ಏನನ್ನು ಹೇಳಿಕೊಂಡು ಬಂದಿದೆಯೋ ಅಂತಹ ನ್ಯಾಯನಿಷ್ಠುರತೆಯನ್ನು ಪ್ರದರ್ಶಿಸಬೇಕು ಎಂದು ಕರೆ ಕೊಟ್ಟಿದ್ದಾರೆ.

Smash Brahminical Patriarchy- ಚಹರೆ 2

ಬ್ರಾಹ್ಮಣೀಯ ಪಿತೃಪ್ರಧಾನತೆಯನ್ನು ಮುರಿಯದೆ ಬೇರೆಯೇ ದಾರಿಯೇ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ!

ಭಾರತದ ಸಂದರ್ಭದಲ್ಲಿ ಜಾತಿ, ವರ್ಗ ಮತ್ತು ಲಿಂಗಗಳು ಬೇರ್ಪಡಿಸಲಾಗದಂತೆ ಹೆಣೆದುಕೊಂಡಿವೆ. ಅವು ಒಂದನ್ನೊಂದು ಪ್ರಭಾವಿಸುವುದು ಮಾತ್ರವಲ್ಲ, ಒಂದರಿಂದೊಂದು ರೂಪು ತಾಳಿವೆ. ಮದುವೆ ಮತ್ತು ಕುಟುಂಬ ವ್ಯವಸ್ಥೆ, ಮಹಿಳೆಯ ಲೈಂಗಿಕತೆ ಹಾಗೂ ಸಂತಾನೋತ್ಪತ್ತಿಗಳಿಗೆ ಬಿಗಿಯಲಾಗಿರುವ ಕಟ್ಟುಪಾಡುಗಳೇ ಭಾರತದ ಜಾತಿವ್ಯವಸ್ಥೆಯನ್ನು ಉಳಿಸಿಕೊಂಡಿರುವ ಅಡಿಪಾಯಗಳು. ಪುರುಷಾಧಿಪತ್ಯವನ್ನು ಖಾತ್ರಿಗೊಳಿಸುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ರಚನೆಗಳು ಜಾತಿವ್ಯವಸ್ಥೆಯ ಹುಟ್ಟು ಮತ್ತು ಅಸ್ತಿತ್ವಕ್ಕೂ ಕಾರಣವಾಗಿರುವಂಥವು. ಹಾಗೆಯೇ, ತನ್ನ ಸರದಿಯಲ್ಲಿ ಜಾತಿವ್ಯವಸ್ಥೆ ಪಿತೃಪ್ರಧಾನ ಮೌಲ್ಯವ್ಯವಸ್ಥೆಯನ್ನು ಬಲವಾಗಿ ಉಳಿಸಿಕೊಂಡು ಬಂದಿದೆ; ತುಳಿಯುವವರು ಮಾತ್ರವಲ್ಲ, ತುಳಿತಕ್ಕೊಳಗಾದವರೂ ಕೂಡಾ ಅವೇ ಮೌಲ್ಯಗಳನ್ನು ಒಪ್ಪಿ ಅನುಸರಿಸಿಕೊಂಡು ಹೋಗುವಂತೆ ಮಾಡಿದೆ.

‘ಬ್ರಾಹ್ಮಣೀಯ ಪಿತೃಪ್ರಧಾನತೆ’ಯ ಪರಿಕಲ್ಪನೆಯನ್ನು ಭಾರತದ ಸಾಮಾಜಿಕ ವಾಸ್ತವಗಳ ಹಿನ್ನೆಲೆಯಲ್ಲಿ ಅತ್ಯಂತ ಸರಿಯಾಗಿ ಕಟ್ಟಿಕೊಟ್ಟವರು ಡಾ. ಅಂಬೇಡ್ಕರ್. ತನ್ನ ಪ್ರಕಾರ ಬ್ರಾಹ್ಮಣವಾದ ಎಂದರೆ ಏನು ಎಂಬುದನ್ನೂ ವಿವರಿಸುತ್ತಾರೆ. ಎಲ್ಲ ಬಗೆಯ ಶ್ರೇಣೀಕೃತ ಅಸಮಾನತೆಗಳಿಗೆ ಜನ್ಮ ಕೊಟ್ಟಿರುವ ಈ ಚಿಂತನಾಕ್ರಮ, ಮೂಲತಃ ಪ್ರತಿಯೊಂದನ್ನೂ ಶ್ರೇಷ್ಠ-ಕನಿಷ್ಠಗಳೆಂದು ವಿಭಜಿಸುತ್ತದೆ; ಆ ವಿಭಜನೆಯನ್ನು ಹುಟ್ಟುಹಾಕಿ, ಉಳಿಸಿ, ಬೆಳೆಸುವ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಸಂರಚನೆಗಳನ್ನು ನಿರ್ಮಿಸುತ್ತದೆ. ಆದ್ದರಿಂದ, ಯಾವುದೇ ಶೋಷಣೆಯ/ಅಸಮಾನತೆಯ ಸ್ವರೂಪವನ್ನು ಕೆದಕುತ್ತಾ ಹೋದರೂ ಅದರ ಮೂಲದಲ್ಲಿ ನಾವು ಬ್ರಾಹ್ಮಣವಾದ ಅಥವಾ ಬ್ರಾಹ್ಮಣೀಯ ಚಿಂತನೆಗಳಿಗೇ ಬಂದು ತಲುಪುತ್ತೇವೆ ಎಂದು ಅಂಬೇಡ್ಕರ್ ಹೇಳುತ್ತಾರೆ.

1916ರಲ್ಲಿ ಅಂಬೇಡ್ಕರರ ಒಂದು ಭಾಷಣ-ಪ್ರಬಂಧದಲ್ಲಿ ಭಾರತದ ‘ಅಂತರ್ವಿವಾಹ’ ಪದ್ಧತಿಯನ್ನು (ಆಯಾ ಜಾತಿಗಳ/ ಪಂಗಡಗಳ ಒಳಗೆ ಮಾತ್ರವೇ ವಿವಾಹ ಸಂಬಂಧ ಬೆಳೆಸುವ ಪದ್ಧತಿ) ಟೀಕಿಸುತ್ತಾ, ಅವರು ಭಾರತದ ಪುರುಷಾಧಿಪತ್ಯವು ‘ಬ್ರಾಹ್ಮಣೀಯವಾದದು’ ಅಥವಾ ‘ಶ್ರೇಣೀಕೃತವಾದದ್ದು’ ಎಂದು ಗುರುತಿಸುತ್ತಾರೆ. ಅಂದರೆ, ಮೇಲ್ಜಾತಿಗಳ ಮಹಿಳೆಯರ ದೇಹ, ಲೈಂಗಿಕತೆ ಮತ್ತು ಸಂತಾನಗಳು ಜಾತಿ ಶುದ್ಧತೆಯನ್ನು ಕಾಪಾಡುವ ಒತ್ತಡಕ್ಕೆ ಸಿಲುಕಿ ಶೋಷಣೆಗೊಳಪಟ್ಟರೆ, ತಳಸಮುದಾಯಗಳ ಹೆಣ್ಣುಮಕ್ಕಳ ದೇಹ, ಶ್ರಮ ಮತ್ತು ಲೈಂಗಿಕತೆಗಳು ಜಾತಿ-ವರ್ಗಾಧಿಕಾರಗಳ ಕಾರಣಕ್ಕೆ ಶೋಷಣೆಗೊಳಪಡುತ್ತವೆ. ಬ್ರಾಹ್ಮಣಶಾಹಿ ವ್ಯವಸ್ಥೆ ಮತ್ತು ಚಿಂತನಾಕ್ರಮ ಹೇಗೆ ಇಡೀ ಸಮಾಜದ ಎಲ್ಲ ಜಾತಿಗಳನ್ನು ಒಂದರ ಮೇಲೊಂದರಂತೆ ಪೇರಿಸಿಕೊಂಡು ಹೋಗಿವೆಯೋ ಹಾಗೆಯೇ, ಮಹಿಳಾ ಸಮುದಾಯವನ್ನೂ ಕೂಡಾ ಶ್ರೇಣೀಕರಿಸಲಾಗಿದೆ; ಆದರೆ, ಇಲ್ಲಿನ ವಿಪರ್ಯಾಸವೆಂದರೆ, ಸ್ವತಃ ಜಾತಿ ಪರಿಶುದ್ಧತೆಯ ತತ್ವದ ಕಾರಣಕ್ಕೆ ಶೋಷಣೆಗೊಳಗಾಗಿದ್ದರೂ ಮೇಲ್ಜಾತಿಗಳ ಮಹಿಳೆಯರು, ಪುರುಷಾಧಿಪತ್ಯ ಮತ್ತು ಜಾತಿ ವ್ಯವಸ್ಥೆಯನ್ನು ಕಾಪಾಡುವ ಬ್ರಾಹ್ಮಣೀಯ ವ್ಯವಸ್ಥೆಯ ಜೊತೆ ಹೆಚ್ಚು ಸೇರಿಕೊಳ್ಳುತ್ತಾರೆ ಎಂಬುದನ್ನೂ ಡಾ.ಅಂಬೇಡ್ಕರ್ ವಿಸ್ತಾರವಾಗಿ ಹೇಳುತ್ತಾರೆ.

ಹೀಗೆ, ಬ್ರಾಹ್ಮಣೀಯ ಪುರುಷಾಧಿಪತ್ಯ ಎಂಬ ಪರಿಕಲ್ಪನೆ, ಭಾರತದ ಪಿತೃಪ್ರಧಾನತೆಯ ಎಲ್ಲ ಲಕ್ಷಣಗಳು, ಕಾರಣಗಳು ಮತ್ತು ಅದು ವ್ಯಕ್ತಗೊಳ್ಳುವ ಬಗೆಗಳನ್ನೂ ಒಳಗೊಂಡಂತೆ ಎಲ್ಲವನ್ನೂ ಸಮಗ್ರವಾಗಿ ವಿವರಿಸುವಂಥದ್ದು. ಆದ್ದರಿಂದ, ಪಾಶ್ಚಾತ್ಯ ದೇಶಗಳ ಕಪ್ಪು ಮಹಿಳಾ ಹೋರಾಟಗಾರ್ತಿಯರಂತೆಯೇ, ಭಾರತದ ದಲಿತ ಸ್ತ್ರೀವಾದಿ ಮಹಿಳೆಯರು ‘ಬ್ರಾಹ್ಮಣೀಯ ಪಿತೃಪ್ರಧಾನತೆ’ ಎಂಬ ಗಹನವಾದ ಪರಿಕಲ್ಪನೆಯನ್ನು ಸಾಕಷ್ಟು ಮುನ್ನೆಲೆಗೆ ತರುವ ಪ್ರಯತ್ನ ಮಾಡಿದ್ದಾರೆ. ಆದರೂ, ಈ ಸಂಘರ್ಷ ದಿನೇ ದಿನೇ ತೀಕ್ಷ್ಣಗೊಳ್ಳುತ್ತಲೇ ಇದೆ. ಇಲ್ಲದಿದ್ದರೆ, ಈಚೆಗೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ಫೋಟೋ ಒಂದರಲ್ಲಿದ್ದ ಪೋಸ್ಟರ್ ಮೇಲಿನ ಘೋಷಣೆಯ ಕಾರಣಕ್ಕೆ ಟ್ವಿಟರಿಗರು ಗದ್ದಲವೆಬ್ಬಿಸುವ ಸಂದರ್ಭ ಬರುತ್ತಿರಲಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...