Homeಅಂಕಣಗಳುಮಾತು ಮರೆತ ಭಾರತ; ಕಿಲ್ವೇನ್ಮಣಿ ಫೈಲ್: ಸ್ವತಂತ್ರ ಭಾರತದ ಭೀಕರ ಹತ್ಯಾಕಾಂಡ

ಮಾತು ಮರೆತ ಭಾರತ; ಕಿಲ್ವೇನ್ಮಣಿ ಫೈಲ್: ಸ್ವತಂತ್ರ ಭಾರತದ ಭೀಕರ ಹತ್ಯಾಕಾಂಡ

- Advertisement -
- Advertisement -

1947ರ ಆಗಸ್ಟ್ 15ರಂದು ಭಾರತ ದೇಶವು ಬ್ರಿಟಿಷರಿಂದ ಸ್ವತಂತ್ರವಾಯಿತು. ಭಾರತೀಯರು ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಿ ಪಡೆದರು. 1950 ಜನವರಿ 26ರಂದು ಭಾರತದ ಸಂವಿಧಾನವು ಜಾರಿಗೊಂಡಿತು. ಅದು ಸಮಸ್ತ ಭಾರತೀಯರಿಗೂ ಮೂಲಭೂತ ಹಕ್ಕುಗಳನ್ನು ಖಾತ್ರಿಗೊಳಿಸಿತು. ಅದು ಸರ್ವ ಭಾರತೀಯರಿಗೂ ಸ್ವಾತಂತ್ರ್ಯ, ಸಮಾನತೆಯನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಹೆಗಲ ಮೇಲೆ ಹೇರಿತು. ಬ್ರಿಟಿಷರಿಂದ ರಾಜಕೀಯ ಸ್ವಾತಂತ್ರ್ಯ ಗಳಿಸಿಕೊಂಡ ಭಾರತವು ನಂತರದ ದಿನಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ತನ್ನೆಲ್ಲಾ ಜನತೆಗೆ ಖಾತ್ರಿಗೊಳಿಸಲು ಸೋತಿದೆ. ಅದಕ್ಕೆ ಸ್ಪಷ್ಟ ನಿದರ್ಶನ ಹಿಂದೂ ಮೇಲ್ಜಾತಿಗಳು ದಲಿತರ ಮೇಲೆ ನಡೆಸುವ ದೌರ್ಜನ್ಯಗಳಾಗಿವೆ.

ಸ್ವತಂತ್ರ ಭಾರತಕ್ಕೆ 20 ವರ್ಷಗಳಾಗಿತ್ತು. ಅಷ್ಟರಲ್ಲಿಯೇ ಅತ್ಯಂತ ಭೀಕರ ದಲಿತರ ಹತ್ಯಾಕಾಂಡ ತಮಿಳುನಾಡಿನ ಕಿಲ್ವೇನ್ಮಣಿಯಲ್ಲಿ ನಡೆಯಿತು. ಅದಕ್ಕೂ ಮೊದಲು ಅದೆಷ್ಟು ದೌರ್ಜನ್ಯಗಳಾಗಿದ್ದವೋ ಕಾಣೆ. ಅವುಗಳೆಲ್ಲ ಭಾರತದ ಇತಿಹಾಸದಲ್ಲಿ ಸಮಾಧಿಯಾಗಿ ಹೋಗಿವೆ. ಆದರೆ 1968 ಡಿಸೆಂಬರ್ 25ರಂದು ಕಿಲ್ವೇನ್ಮಣಿಯಲ್ಲಿ ನಡೆದದ್ದು ಅಕ್ಷರಶಃ ನರಮೇಧ.

60ರ ದಶಕ ಭಾರತದ ಭೂಹೋರಾಟಗಳ ಕಾಲಘಟ್ಟ ಎಂದೇ ಹೇಳಬಹುದು. ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದ ಎಡಪಂಥೀಯ ಸಂಘಟನೆಗಳು ಭೂರಹಿತ ಕೂಲಿ ಕಾರ್ಮಿಕರಿಗೆ
ಭೂಹಂಚಿಕೆ ಮಾಡುವಂತೆ ದೇಶಾದ್ಯಂತ ಹೋರಾಟ ರೂಪಿಸಿದ್ದವು. ಮಹಾರಾಷ್ಟ್ರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಅನುಯಾಯಿ ದಾದಾಸಾಹೇಬ್ ಗಾಯಕ್ವಾಡ್ ಸಹ ಭೂಹೋರಾಟ ಆರಂಭಿಸಿದ್ದು ಇದೇ ಕಾಲಘಟ್ಟದಲ್ಲಿ. ಬ್ರಿಟಿಷರಿಂದ ಭಾರತ ಸ್ವತಂತ್ರಗೊಂಡು 20 ವರ್ಷಗಳು ಕಳೆದಿದ್ದರೂ ಬೃಹತ್ ದೇವಾಲಯಗಳು ಹಾಗೂ ಮೇಲ್ಜಾತಿ ಭೂಮಾಲೀಕರು ಸಾವಿರಾರು ಎಕರೆಗಟ್ಟಲೆ ಭೂಮಿಯನ್ನು ವಶದಲ್ಲಿಟ್ಟುಕೊಂಡಿದ್ದರು. ಅಂದಿನ ಎಲ್ಲಾ ರಾಜಕೀಯ ಪಕ್ಷಗಳೂ ಭೂಮಾಲೀಕರ ಅಂಗಳವಾಗಿದ್ದ ಕಾರಣ ಅವರ ವಿರುದ್ಧ ತಿರುಗಿ ಬೀಳುವವರಿರಲಿಲ್ಲ. ಆದರೆ ಸೈದ್ಧಾಂತಿಕವಾಗಿ ಕೃಷಿಕೂಲಿಗಳ ಪರವಾಗಿಯೇ ಕೆಲಸ ಮಾಡುತ್ತಿದ್ದ ಕಮ್ಯುನಿಸ್ಟ್ ಸಂಘಟನೆಗಳು ಮಾತ್ರ ಭೂಹೋರಾಟವನ್ನೇ ಪ್ರಮುಖ ಕಾರ್ಯಕ್ರಮವನ್ನಾಗಿ ಮಾಡಿಕೊಂಡವು. ಇದರ ಪರಿಣಾಮವಾಗಿ ಹಳ್ಳಿಗಳಲ್ಲಿ ಕೃಷಿಕೂಲಿಗಳಾಗಿ ದುಡಿಯುತ್ತಿದ್ದ ದಲಿತರನ್ನು ಸಂಘಟಿಸಿದರು. ಇದೇ ರೀತಿಯಲ್ಲಿಯೇ ಅವಿಭಜಿತ ತಂಜಾವೂರು ಜಿಲ್ಲೆಯಲ್ಲಿಯೂ ಹಲವು ಸಂಘಟನೆಗಳಾದವು.

ತಮಿಳುನಾಡಿನ ಕಿಲ್ವೇನ್ಮಣಿ ದಲಿತ ಕೃಷಿಕೂಲಿಗಳೂ ಸಹ ಸಂಘಟನೆಯೊಂದನ್ನು ಸ್ಥಾಪಿಸಿಕೊಂಡರು. ಇದಕ್ಕೆ ತಕ್ಕಂತೆ ಹಸಿರು ಕ್ರಾಂತಿಯೂ ಸಹ ಭಾರತದಲ್ಲಿ ಮನೆಮಾತಾಗಿತ್ತು. ಈ ಸಂಘಟನೆಯ ಮೂಲಕ ಕೂಲಿ ದರವನ್ನು ಹೆಚ್ಚು ಮಾಡಲು ಭೂಮಾಲೀಕರನ್ನು ಆಗ್ರಹಿಸುತ್ತಿದ್ದರು. ಇದಕ್ಕೆ ವಿರುದ್ಧವಾಗಿ ಭೂಮಾಲೀಕರೂ ಸಹ ಭತ್ತ ಉತ್ಪಾದನೆ ಸಂಘಟನೆಯನ್ನು ಸ್ಥಾಪಿಸಿಕೊಂಡು ಒಗ್ಗಟ್ಟಾದರು. ಅಲ್ಲಿಂದ ಈ ಎರಡು ಸಂಘಟನೆಗಳ ನಡುವೆ ಆಗಾಗ ಸಂಘರ್ಷ ನಡೆಯುತ್ತಲೇ ಇತ್ತು. ಕೃಷಿ ಕೂಲಿಕಾರರು ತಮ್ಮ ಕೂಲಿ ದರವನ್ನು ಹೆಚ್ಚು ಮಾಡಿಸಿಕೊಳ್ಳಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರು. ಭೂಮಾಲೀಕರು ಕೃಷಿ ಕೂಲಿಗಳನ್ನು ಹದ್ದುಬಸ್ತಿನಲ್ಲಿಡುವ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರು.

1968ನೇ ಇಸವಿಯ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಬೆಳೆ ಕೊಯ್ಲು ಸಮಯ ಬಂದಾಗ ಕೃಷಿಕೂಲಿಗಳ ಸಂಘಟನೆಯು ಭೂಮಾಲೀಕರು ಕೂಲಿ ದರ ಹೆಚ್ಚು ಮಾಡದಿದ್ದರೆ ಕೆಲಸಕ್ಕೆ ಬರುವುದಿಲ್ಲವೆಂದು ಘೋಷಿಸಿತು. ಎಂದಿನಂತೆ ಭೂಮಾಲೀಕರು ಕೃಷಿಕೂಲಿಗಳನ್ನು ವಿಭಜಿಸಿ ತಮ್ಮ ಆಟವನ್ನು ಆಡಲು ಮುಂದಾದರಾದರೂ ಈ ಬಾರಿ ಸಂಘಟನೆಯ ಕಾರಣಕ್ಕಾಗಿ ಒಬ್ಬ/ಳು ಕೃಷಿಕೂಲಿಯೂ ಅಲ್ಲಾಡಲಿಲ್ಲ. ಈ ಬೆಳವಣಿಗೆ ಭೂಮಾಲೀಕರ ಪಿತ್ತ ನೆತ್ತಿಗೇರಿಸಿತ್ತು. ಆದರೂ ಪಕ್ಕದ ಊರಿನ ಕೃಷಿಕೂಲಿಗಳನ್ನು ಕರೆಸಿ ಕೊಯ್ಲು ಮಾಡಿಸಿಕೊಳ್ಳುವಲ್ಲಿ ಮೇಲ್ಜಾತಿ ಭೂಮಾಲೀಕರು ಯಶಸ್ವಿಯಾದರು. ಈ ಘಟನೆ ಎರಡೂ ಪಾಳೆಯದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು.

ಇಂತಹ ಪರಿಸ್ಥಿತಿಯಲ್ಲಿ ಕಿಲ್ವೇನ್ಮಣಿಯ ಕಿರಾಣಿ ಅಂಗಡಿಯ ಮಾಲೀಕನೊಬ್ಬನನ್ನು ಭೂಮಾಲೀಕರ ಬೆಂಬಲಿಗರು ಅಪಹರಣ ಮಾಡಿದರು. ಇದಕ್ಕೆ ಮುಖ್ಯ ಕಾರಣ ಭೂಮಾಲೀಕರು ದಲಿತ ಕೃಷಿಕೂಲಿಗಳನ್ನು ಬಹಿಷ್ಕಾರ ಹಾಕಿದ್ದರೂ ಅವರಿಗೆ ಆ ಅಂಗಡಿಯ ಮಾಲೀಕ ದವಸ ಧಾನ್ಯಗಳನ್ನು ನೀಡಿದ್ದು. ಹೀಗೆ ಅಪಹರಣಗೊಂಡ ವ್ಯಕ್ತಿಯನ್ನು ಬಿಡಿಸಿಕೊಂಡು ಬರಲು ತೆರಳಿದ ಕೃಷಿ ಕೂಲಿಗಳ ಹಾಗೂ ಭೂಮಾಲೀಕರ ಗೂಂಡಾಗಳ ನಡುವೆ ಸಂಘರ್ಷವೇರ್ಪಟ್ಟು ಭೂಮಾಲೀಕರ ಬೆಂಬಲಿಗನೊಬ್ಬ ಅದರಲ್ಲಿ ಹತ್ಯೆಯಾದನು. ಈ ಘಟನೆ ಕಿಲ್ವೇನ್ಮಣಿಯ ಹತ್ಯಾಕಾಂಡಕ್ಕೆ ತಕ್ಷಣದ ಕಾರಣವಾಯಿತು. ಆದರೆ ಮೇಲ್ಜಾತಿ ಭೂಮಾಲೀಕರಲ್ಲಿದ್ದ ’ಸ್ವಾಭಿಮಾನಿ ದಲಿತ’ರ ಮೇಲಿನ ಸಿಟ್ಟು ಅದಕ್ಕೆ ಶಾಶ್ವತ ಕಾರಣವಾಗಿತ್ತು.

1968 ಡಿಸೆಂಬರ್ 25ನೇ ತಾರೀಖಿನಂದು ರಾತ್ರಿ ಹತ್ತು ಗಂಟೆಯ ಸಮಯಕ್ಕೆ ಲಾರಿಗಳಲ್ಲಿ ಬಂದ ಸುಮಾರು 200 ಭೂಮಾಲೀಕರ ಗೂಂಡಾಗಳು ದಲಿತ ಕೇರಿಯನ್ನು ಸುತ್ತುವರಿದು ನಿಂತರು. ಕೇರಿಯಿಂದ ಒಂದು ಸೊಳ್ಳೆಯೂ ಹೊರಹೋಗದಂತೆ ದಿಗ್ಭಂಧನ ವಿಧಿಸಿದರು. ಇಬ್ಬರು ಕೃಷಿಕೂಲಿಗಳನ್ನು ಗುರಿಮಾಡಿ ಬಂದೂಕಿನಿಂದ ಸುಟ್ಟು ಗಾಯಗೊಳಿಸಲಾಯಿತು. ಈ ಸದ್ದು ತಿಳಿದು ಹೊರಬಂದ ದಲಿತರ ಕೈಯಲ್ಲಿದ್ದ ಆಯುಧ ಕೇವಲ ಕಲ್ಲುಗಳು ಮಾತ್ರ. ಒಂದೆಡೆ ದಲಿತ ಯುವಕರು ಹಾಗೂ ವಯಸ್ಕರು ಕಲ್ಲುಗಳನ್ನು ತೂರುತ್ತಾ ಭೂಮಾಲೀಕರ ಗೂಂಡಾಗಳನ್ನು ಹಿಂದೆ ಸರಿಸುತ್ತಿದ್ದರೆ ಭೂಮಾಲೀಕರ ಗೂಂಡಾಗಳು ದಲಿತರು ಗುಂಪುಗಟ್ಟಿದ್ದ ಸ್ಥಳವನ್ನು ಹುಡುಕುತ್ತಿದ್ದರು. ಸುರಕ್ಷತೆಗಾಗಿ ಹೆಂಗಸರು, ವಯಸ್ಸಾದ ಮುದುಕ, ಮುದುಕಿಯರು ಹಾಗೂ ಮಕ್ಕಳನ್ನು ತನ್ನೊಡಲಲ್ಲಿ ತುಂಬಿಕೊಂಡಿದ್ದ ಗುಡಿಸಲು ಆ ಪಾಪಿಗಳ ಕಣ್ಣಿಗೆ ಬಿದ್ದೇಬಿಟ್ಟಿತು. ಆ ಗುಡಿಸಿಲಿನ ಸುತ್ತ ನೆರೆದ ದುಷ್ಕರ್ಮಿಗಳು ಗುಡಿಸಲಿಗೆ ಬೆಂಕಿ ಇಟ್ಟೇಬಿಟ್ಟರು. ಬೆಂಕಿಯ ತಾಪ ತಾಳಲಾರದೇ ಹೊರಬಂದ ಇಬ್ಬರು ಮುದುಕರನ್ನು ಕತ್ತರಿಸಿ ಮತ್ತೆ ಗುಡಿಸಿಲಿನೊಳಕ್ಕೆ ಎಸೆದರು. ಮಕ್ಕಳಾದರೂ ಬದುಕಿಕೊಳ್ಳಲೆಂದು ಗುಡಿಸಿಲಿನೊಳಗಿದ್ದ ಹೆಂಗಸರು ಇಬ್ಬರು ಮಕ್ಕಳನ್ನು ಹೊರಹಾಕಿದರು. ಆದರೆ ಒಂದೇ ಕ್ಷಣದಲ್ಲಿ ಮತ್ತೆ ಆ ಮಕ್ಕಳಿಬ್ಬರನ್ನೂ ಧಗಧಗನೆ ಉರಿಯುತ್ತಿರುವ ಗುಡಿಸಿಲಿನೊಳಕ್ಕೆ ಎಸೆಯಲಾಯಿತು. ಕೆಲವೇ ಕ್ಷಣಗಳಲ್ಲಿ ಆ ಗುಡಿಸಲು ಸುಟ್ಟು ಭಸ್ಮವಾಯಿತು. ಅದರಲ್ಲಿದ್ದ 5 ಮುದುಕರು, 16 ಮಹಿಳೆಯರು ಹಾಗೂ 23 ಮಕ್ಕಳೂ ಸೇರಿ 44 ಜನ ದಲಿತರು ಸುಟ್ಟು ಕರಕಲಾಗಿದ್ದರು.

ಇಂತಹ ನರಮೇಧ ನಡೆಸಿದ ಮೇಲೆ ಆ ದುಷ್ಕರ್ಮಿಗಳು ನೇರವಾಗಿ ಹೋದದ್ದು ಪೊಲೀಸ್ ಸ್ಟೇಷನ್ನಿಗೆ. ಅಲ್ಲಿ ತಮಗೆ ರಕ್ಷಣೆ ಬೇಕೆಂದು ಪೊಲೀಸ್ ಸೆಕ್ಯುರಿಟಿ ಪಡೆದರು. ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಅಣ್ಣಾದೊರೈ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದಾಗಿ ಭರವಸೆ ನೀಡಿದರು. ಭೂಮಾಲೀಕರನ್ನು ಹಾಗೂ ದುಷ್ಕರ್ಮಿಗಳನ್ನು ಜೈಲಿಗೆ ಅಟ್ಟಲಾಯಿತು. 10 ಜನರಿಗೆ 10 ವರ್ಷಗಳ ಕಾಲ ಶಿಕ್ಷೆಯನ್ನು ಸೆಷನ್ ಕೋರ್ಟ್ ವಿಧಿಸಿತು. ಅದರಲ್ಲಿ ಭೂಮಾಲೀಕರ ನಾಯಕ ಗೋಪಾಲಕೃಷ್ಣನ್ ನಾಯ್ಡು ಸಹ ಸೇರಿದ್ದನು. ಆದರೆ 1975ರಲ್ಲಿ ಸಾಕ್ಷಿಗಳ ಕೊರತೆಯ ಕಾರಣ ನೀಡಿ ಮದ್ರಾಸ್ ಹೈ ಕೋರ್ಟ್ ನಾಯ್ಡುಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿ ಬಿಡುಗಡೆಗೊಳಿಸಿತು. ನ್ಯಾಯಾಲಯದ ಶಿಕ್ಷೆಯಿಂದ ತಪ್ಪಿಸಿಕೊಂಡ ನಾಯ್ಡುವನ್ನು 1980ರಲ್ಲಿ ಪ್ರತೀಕಾರವಾಗಿ ಕೊಲೆ ಮಾಡಲಾಯಿತು.

ಕಿಲ್ವೇನ್ಮಣಿ ಘಟನೆಯು ಭಾರತದ ಭೂಹೋರಾಟಗಳ ಧಿಕ್ಕನ್ನು ಬದಲಾಯಿಸಿತು. ದೇಶಾದ್ಯಂತ ಹಲವು ಕಡೆ ನೂರಾರು ಭೂಹೋರಾಟಗಳು ನಡೆದವು. ವಿಪರ್ಯಾಸವೆಂದರೆ ಪ್ರತಿ ಬಾರಿಯೂ ಈ ದೇಶದಲ್ಲಿ ಒಂದು ಹುಲ್ಲುಕಡ್ಡಿಯು ಪ್ರಗತಿಪರವಾಗಿ ಅಲುಗಾಡಬೇಕೆಂದರೆ ದಲಿತರ ಮಾರಣ ಹೋಮವೇ ನಡೆಯಬೇಕಲ್ಲ!

ಕಿಲ್ವೇನ್ಮಣಿ ಘಟನೆ ಅಧರಿಸಿ ಹಲವು ಕಾದಂಬರಿಗಳು ಬಂದಿವೆ. ಸಿನೆಮಾಗಳನ್ನು ಮಾಡಲಾಗಿದೆ. ಇತ್ತೀಚೆಗೆ ತಮಿಳಿನಲ್ಲಿ ತೆರೆಕಂಡ ಅಸುರನ್ ಸಿನೆಮಾದಲ್ಲಿ ಕಿಲ್ವೇನ್ಮಣಿ ಹೋಲುವ ಘಟನೆಯೂ ಸೇರಿದೆ. ಅರವಿಂದನ್ ಸಿನೆಮಾದ ಪ್ರಮುಖ ಕಥೆ ಕಿಲ್ವೇನ್ಮಣಿ.

ಕೋಮುವಾದದ ಫೈಲ್ಸ್‌ಗಳೇ ಸದ್ದು ಮಾಡುತ್ತಿರುವ ಈ ಕಾಲಘಟ್ಟದಲ್ಲಿ ದಲಿತ್ ಫೈಲ್ಸ್‌ಗಳನ್ನು ಪರಿಗಣಿಸುವುದೇ ಈ ಮೇಲ್ಜಾತಿ ಹಿಂದೂ ಸಮಾಜ?


ಇದನ್ನೂ ಓದಿ: ಮಾತು ಮರೆತ ಭಾರತ; ದಲಿತ್ ಫೈಲ್ಸ್: ಸ್ವಾತಂತ್ರ್ಯದ ಹೊಸ್ತಿಲಲ್ಲಿ ಸಾಸನೂರು ಹತ್ಯಾಕಾಂಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...