ದಲಿತ ಚಳವಳಿಯ ಹಿರಿಯ ಮುಖಂಡರಾದ ತುಮಕೂರಿನ ಕೆ.ದೊರೈರಾಜ್ ಅವರ ‘ನಮ್ಮಹಟ್ಟಿ’ ಆತ್ಮಕಥೆ ಶನಿವಾರ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಬಿಡುಗಡೆಯಾಗಲಿದೆ.
ಸರ್ಕಾರಿ ಅಧಿಕಾರಿಯಾಗಿದ್ದ ದೊರೈರಾಜ್ ಅವರು, ತಮ್ಮ ವಿದ್ಯಾರ್ಥಿ ಜೀವನದಿಂದಲೇ ದಲಿತ ಚಳವಳಿಯಲ್ಲಿ ಗುರುತಿಸಿಕೊಂಡವರು. ನಿವೃತ್ತಿ ಬಳಿಕವೂ ಸಕ್ರಿಯವಾಗಿ ಚಳವಳಿಯಲ್ಲಿ ದುಡಿಯುತ್ತಿದ್ದಾರೆ. ಅವರ ಆತ್ಮಕಥೆಯಾದ ‘ನಮ್ಮಹಟ್ಟಿ’ ಕೃತಿಯು ಈಗಾಗಲೇ ಮರುಮುದ್ರಣ ಕಂಡಿದೆ.
ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಲಿದ್ದಾರೆ. ಒಳಮೀಸಲಾತಿ ಹೋರಾಟಗಾರರಾದ ಬಸವರಾಜ್ ಕೌತಾಳ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿ, ಡಾ. ನೆಲ್ಲುಕುಂಟೆ ವೆಂಕಟೇಶಯ್ಯ, ಗಂಗಮ್ಮ ಕೆಂಪಣ್ಣ ಭಾಗವಹಿಸಲಿದ್ದಾರೆ. ಪುಸ್ತಕದ ಕುರಿತು ಯುವ ಚಿಂತಕರಾದ ವಿ.ಎಲ್. ನರಸಿಂಹಮೂರ್ತಿ ಮತ್ತು ಡಾ.ರವಿಕುಮಾರ್ ಬಾಗಿ ಮಾತನಾಡಲಿದ್ದಾರೆ.

‘ನಮ್ಮಹಟ್ಟಿ’ ಆಯ್ದ ಭಾಗ
ತುಮಕೂರಿನಲ್ಲಿ ನಾವು ಮಾದಿಗರು ವಾಸ ಮಾಡುವ ಕೇರಿಯನ್ನು ‘ದೊಡ್ಡಹಟ್ಟಿ’ ಎಂದೇ ಕರೆಯುತ್ತಾರೆ. ಪ್ರಾಚೀನ ನೆನಪುಗಳಿರುವ ಹಟ್ಟಿ ಇದು. ಇನ್ನೂ ಕೆಲವರ ಬಾಯಲ್ಲಿ ‘ಮಾದಿಗರ ಹಟ್ಟಿ’ ಎಂದೂ ಪ್ರಸಿದ್ದವಾಗಿದೆ. ನಮ್ಮ ದೊಡ್ಡಹಟ್ಟಿಯು ತುಮಕೂರಿನ ಕೋತಿತೋಪು ಬಡಾವಣೆಯ ಪೂರ್ವಕ್ಕೆ, ದೇವರಾಯನದುರ್ಗಕ್ಕೆ ಹೋಗುವ ರಸ್ತೆಯ ಎಡಭಾಗದಲ್ಲಿ ಇದೆ. ನಗರ ಈಗಿನಂತೆ ಬೆಳೆಯುವ ಮುನ್ನ, ನಮ್ಮ ಹಟ್ಟಿ ತುಮಕೂರಿನ ಹೊರಭಾಗದಲ್ಲಿತ್ತು. ನಮ್ಮ ಹಟ್ಟಿಯ ಪೂರ್ವಕ್ಕೆ ಸೀಗೆಮೆಳೆ, ಹೊಂಗೆಮರಗಳು ದಟ್ಟವಾಗಿದ್ದು ಪಾಳುಬಿದ್ದ ಜಾಗವಿತ್ತು. ಅದನ್ನು ‘ಮಕ್ಕಳ ದೊಂಗ್ರ’ ಎಂದು ಕರೆಯುತ್ತಿದ್ದರು (ಮೃತಪಟ್ಟ ಮಕ್ಕಳನ್ನು ಇಲ್ಲಿ ದಫನ್ ಮಾಡುತ್ತಿದ್ದರಿಂದ ಈ ಸ್ಥಳಕ್ಕೆ ‘ಮಕ್ಕಳ ದೊಂಗ್ರ’ ಎಂಬ ಹೆಸರು ಬಂದಿತ್ತು). ಹಟ್ಟಿಯ ಉತ್ತರಕ್ಕೆ ನಮ್ಮ ಹಟ್ಟಿಯವರೇ ಆದ ಮೂಗಹುಚ್ಚಪ್ಪ ಮಾಡುತ್ತಿದ್ದ ಹೊಲವಿತ್ತು. ಈ ಹೊಲದ ಪಕ್ಕ ತಿಗಳರ ಯಜಮಾನ್ ಲಕ್ಷ್ಮಪ್ಪ ಅವರ ತೋಟವಿತ್ತು. ಇವರ ತೋಟಕ್ಕೆ ಅಂಟಿಕೊಂಡಂತೆ ಹೆಂಚಿನ ಕಾರ್ಖಾನೆಯ ತುದಿಗೆ ಹೊಂದಿಕೊಂಡಂತೆ ತುಮಕೂರು ಅಮಾನಿಕೆರೆ ಇತ್ತು. ಈ ಹೆಂಚಿನ ಕಾರ್ಖಾನೆ ನಮ್ಮ ಹಟ್ಟಿಯ ಸುಮಾರು ೨೫-೩೦ ಕುಟುಂಬಗಳಿಗೆ ಉದ್ಯೋಗ ಕೊಟ್ಟಿತ್ತು. ತಿಗಳರ ಮರ್ಲಮ್ಮನ ತೋಟಕ್ಕೆ ಲಗತ್ತಾಗಿ ಒಂದು ಪುರಾತನ ದೊಡ್ಡ ಆಲದ ಮರವಿತ್ತು. ‘ಕಾಳವಾಳಮ್ಮ’ನಿಗೆ ಹರಕೆ ತೀರಿಸಲು ನಮ್ಮ ಹಟ್ಟಿಯ ಎಲ್ಲರೂ ಈ ಆಲದಮರದ ಕೆಳಗೆ ಬರುತ್ತಿದ್ದರು. ಪೂರ್ವಕ್ಕೆ ಹಟ್ಟಿ ಕೊಲ್ಲಾಪುರದಮ್ಮನ ಗುಡಿಯ ಮುಂದೆ ದೊಡ್ಡಹಟ್ಟಿಯವರೇ ಆದ ಶೇಷಯ್ಯನವರ ಹೊಲ ಹಬ್ಬಿತ್ತು. ಹಟ್ಟಿಯಲ್ಲಿ ನಿಂತು ಕತ್ತೆತ್ತಿ ಪೂರ್ವ ದಿಕ್ಕಿಗೆ ನೋಡಿದರೆ ನಮ್ಮ ಹಟ್ಟಿಯವರು ಸೌದೆ ತರಲು ಹೋಗುತ್ತಿದ್ದ ದೇವರಾಯನದುರ್ಗದ ನೀಲಿ ಬೆಟ್ಟಗಳ ಸಾಲು ಕಣ್ಣಿಗೆ ಹಿತ ತರುತ್ತಿತ್ತು. ಹಟ್ಟಿಯ ಪೂರ್ವಕ್ಕೆ ಮಳೆ ಬಂದಾಗ ಮಾತ್ರ ಹರಿಯುತ್ತಿದ್ದ ಒಂದು ತೊರೆ ಇತ್ತು. ನಾವೆಲ್ಲ ಸ್ಕೂಲಿಗೆ ಹೋಗದೆ, ಕದ್ದು ಈ ತೊರೆಮರಳಿನ ಹೊಂಗೆ ಸಾಲಿನಲ್ಲಿ ಆಟವಾಡುತ್ತಿದ್ದ ನೆನಪುಗಳು ಈಗಲೂ ಹಟ್ಟಿಯ ಹಿರಿಯರಲ್ಲಿ ಹಸುರಾಗಿದೆ. ನಮ್ಮ ದೊಡ್ಡಹಟ್ಟಿಯ ಹೊರಗಿನ ನಕ್ಷೆ ಇದು.
ಇನ್ನು ಹಟ್ಟಿಯ ಒಳಗೆ ಇನ್ನೊಂದು ಬಹುರೂಪಗಳ ಜೀವಂತ ಲೋಕವೆ ಇದೆ. ಹತ್ತಾರು ಕಸುಬಿನ ನೂರಾರು ಕುಶಲಕರ್ಮಿಗಳು, ತಮಟೆ, ಚಾಚ ಕಲಾವಿದರು, ಹರೆವಾದ್ಯ, ಬ್ಯಾಂಡ್ಸೆಟ್ ಕಲಾವಿದರು, ಪೈಲ್ವಾನರು, ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಪ್ರತಿನಿಧಿಸಿದ್ದವರು. ತುಮಕೂರು ನಗರಸಭೆಯಲ್ಲಿದ್ದ ಇಲ್ಲಿನ ಜನಪ್ರತಿನಿಧಿಗಳು, ಪತ್ರಕರ್ತರು, ಕ್ರೀಡಾಪಟುಗಳು, ಚಪ್ಪಲಿ ಹೊಲೆಯುವವರು, ಇಟ್ಟಿಗೆ ಕೊಯ್ದು ಗೂಡು ಸುಡುತ್ತಿದ್ದವರು, ದೇವರಾಯನದುರ್ಗದ ಕಾಡಿನಿಂದ ಸೌದೆ ಹೊತ್ತುತಂದು ಮಾರುವವರು, ಗಾರೆ ಕೆಲಸದವರು, ತೋಟದ ಕೆಲಸಗಾರರು, ಮರಗೆಲಸದವರು, ಕುಲುಮೆ ಕೆಲಸದವರು, ಹಮಾಲಿಗಳು ಕೊನೆಗೆ ನಮ್ಮವರೇ ಆಗಿದ್ದ ಕ್ಷೌರ ಮಾಡುವವರೂ ಇದ್ದರು. ಹೀಗೆ ವಿವಿಧ ಕ್ಷೇತ್ರಗಳ ಪ್ರತಿಭಾವಂತರು ಇದ್ದ ಬಹು ವೈವಿಧ್ಯತೆಗಳ ಹಟ್ಟಿ ನಮ್ಮದು.
ಹೊರ ಜಗತ್ತಿಗೆ ಎಲ್ಲರಿಗೂ ಸರಿಸಾಟಿಯಾಗುವಂತೆ ಸ್ವಾಭಿಮಾನಿ ಮತ್ತು ಸ್ವಾವಲಂಬಿಯಾಗಿದ್ದ ದೊಡ್ಡಹಟ್ಟಿಯ ಈ ಪ್ರತಿಭಾವಂತರನ್ನು ಯಾರೂ ಗುರುತಿಸಲೇ ಇಲ್ಲ! ಚರಿತ್ರೆಯಲ್ಲಿ ದಾಖಲಾಗುವ ಎಲ್ಲ ಅರ್ಹತೆಗಳು ದೊಡ್ಡಹಟ್ಟಿಗಿತ್ತು. ಆದರೆ ಇತಿಹಾಸ ದೊಡ್ಡಹಟ್ಟಿಯ ಪ್ರತಿಭೆಗಳನ್ನು ತನ್ನ ಕಣ್ಣಿನ ನೇರಕ್ಕೆ ತಗೆದುಕೊಳ್ಳಲೇ ಇಲ್ಲ! ಎನ್ನುವ ನೋವು ಇಂದಿಗೂ ನಮ್ಮ ಹಟ್ಟಿಗಿದೆ. ಹಟ್ಟಿ ಚರಿತ್ರೆಯ ಬರೆಹದಿಂದ ಏಕೆ ನಿರಾಕರಿಸಲ್ಪಟ್ಟಿತು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ! ಮಾದಿಗರು ಎನ್ನುವ ಕಾರಣಕ್ಕೇ ಇವರನ್ನು ಹೊರಗಿಟ್ಟಿದೆ ಎನ್ನುವುದು ಹಗಲಿನಷ್ಟೇ ಸತ್ಯ. ಬಹುಶಃ ಎಲ್ಲ ಊರುಗಳಲ್ಲಿರುವ ಹಟ್ಟಿಗಳ ಕತೆ ಇದಕ್ಕಿಂತ ಭಿನ್ನವೇನಲ್ಲ! ಇಂತಹ ಎಲ್ಲ ತಿರಸ್ಕಾರಗಳನ್ನು ಕಂಡಿರುವ ನಾನು ಹಿರಿಯರಿಂದ ದೊಡ್ಡಹಟ್ಟಿಯ ಏಳುಬೀಳಿನ ಅಸಂಖ್ಯಾತ ಕಥೆಗಳನ್ನು ಕೇಳಿದ್ದೇನೆ. ಹಾಗೂ ಕೇವಲ ದುಡಿಮೆ ಮಾತ್ರದಿಂದಲೇ ಬದುಕುತ್ತಿದ್ದ ನನ್ನ ಹಟ್ಟಿಯ ದಾರುಣ ಸ್ಥಿತಿಗಳನ್ನು ಅನುಭವಿಸಿ ತಿಳಿದಿದ್ದೇನೆ. ನನ್ನ ಹಟ್ಟಿ ಕಾಲ ಕಾಲಕ್ಕೆ ಅನುಭವಿಸಿದ ಸ್ಥಿತ್ಯಂತರಗಳು ನನ್ನನ್ನು ಇನ್ನಿಲ್ಲದಂತೆ ಕಾಡಿವೆ. ಆದ್ದರಿಂದ ಈ ಬರೆಹವನ್ನು ನನ್ನ ಹಟ್ಟಿ ಬಾಳಿ-ಬದುಕಿದ ಕಥನವನ್ನಾಗಿ ರೂಪಿಸಲು ಪ್ರಯತ್ನಿಸಿದ್ದೇನೆ.
ನನ್ನ ಹಟ್ಟಿಗೊಂದು ಎಲ್ಲಿಯೂ ದಾಖಲಾಗದ ಇತಿಹಾಸವೂ ಇದೆ. ಮೊದಲಿಗೆ ನನ್ನ ಹಟ್ಟಿ ಪ್ರಾಚೀನ ತುಮಕೂರಿನ ಕೋಟೆ ಆಂಜನೇಯನ ಗುಡಿಯ ಹಿಂದಿರುವ ಹಾಸು ಬಂಡೆಯ ಮೇಲೆ ದುರ್ಗಮ್ಮನ ಗುಡಿಯ ಸುತ್ತ ನೆಲೆಸಿತ್ತು. ಇದೇ ನಮ್ಮ ಹಟ್ಟಿಯ ಮೂಲ ನೆಲೆ. ‘ಕುಳವಾಡಿ ಹನುಮ’ ಎನ್ನುವವರು ಈ ಹಟ್ಟಿಯ ಮೂಲ ಪುರುಷರು. ಇದೇ ಹಟ್ಟಿಯ ರಾಮ, ಎರಡು ತೊಡೆ ಲಕ್ಕ, ಪಠಾಣಿ ಎನ್ನುವವರು ಅವರ ನಂತರದ ತಲೆಮಾರಿನವರು. ನನ್ನ ಅಜ್ಜಿ ಲಕ್ಷ್ಮಮ್ಮನ ತಂದೆಯೇ ಈ ಎರಡು ತೊಡೆ ಲಕ್ಕ. ಆಗ ನಮ್ಮವರನ್ನು ಶಾನುಭೋಗರು ‘ಚಾಕರಿದಾರರು’ ಅಥವಾ ‘ಕುಳವಾಡಿಗಳು’ ಎಂದು ಕರೆಯುತ್ತಿದ್ದರು. ಅವರು ಹೇಳಿದ ಚಾಕರಿ ಮಾಡಲೆಂದೇ ನಮ್ಮನ್ನು ಅವರು ತಮ್ಮ ಕೇರಿಗೆ ಸಮೀಪದಲ್ಲೇ ಇರಿಸಿಕೊಂಡಿದ್ದರು. ನಮ್ಮ ಹಟ್ಟಿಯವರು ಆಗಿನ ಶಾನುಭೋಗರು ಹೇಳುವ ಎಲ್ಲ ಕೆಲಸಗಳನ್ನೂ ಬಿಟ್ಟಿಯಾಗಿ ಮಾಡಬೇಕಿತ್ತು! ಕೋಟೆಯ ಒಳಗಿದ್ದ ಅವರ ಕೇರಿಯ ಕಸ ಬಾಚುವುದು, ಸೌದೆ ಒಡೆಯುವುದು ಮುಂತಾದವನ್ನು ಬಿಟ್ಟಿಯಾಗಿ ಮಾಡಬೇಕಾಗಿತ್ತು. ಚಾಕರಿ ಮಾಡಿದ ಮೇಲೆ ಶಾನುಭೋಗರ ಕುಟುಂಬದವರು ನಮ್ಮವರಿಗಾಗಿ ಒಂದು ಎಲೆಯಲ್ಲಿ ಊಟವನ್ನು ದೂರದಲ್ಲಿ ಇರಿಸುತ್ತಿದ್ದರು. ಅವರ ನೆರಳು ಕಾಣೆಯಾದ ನಂತರ ನಮ್ಮವರು ಎಲೆಯನ್ನು ವಲ್ಲಿ ಬಟ್ಟೆಯಲ್ಲಿ ಸುತ್ತಿಕೊಂಡು ತಂದು ಹಟ್ಟಿಯಲ್ಲಿ ಊಟ ಮಾಡುತ್ತಿದ್ದರು. ತುಮಕೂರು ಅಮಾನಿಕೆರೆ, ಅಕ್ಕತಂಗಿಯರ ಕೆರೆಯ ‘ನೀರುಗಂಟೆ’ ಕೆಲಸವನ್ನು ನಮ್ಮ ಹಟ್ಟಿಯವರೇ ಮಾಡುತ್ತಿದ್ದರು. ನಮ್ಮವರ ಜೊತೆ ತಳವಾರರೂ ಸಹ ‘ನೀರುಗಂಟಿ’ಗಳಾಗಿ ಕೆಲಸ ಮಾಡುತ್ತಿದ್ದರು. ಇವೆಲ್ಲಾ ಹಟ್ಟಿಯವರು ಮಾಡುತ್ತಿದ್ದ ಪಾರಂಪರಿಕೆ ಕೆಲಸಗಳು. ಇದರ ಜೊತೆಗೆ ಊರಿನಲ್ಲಿ ಎಲ್ಲಾದರೂ ‘ಬೀಳುಬಿದ್ದರೆ’ (ದನ-ಕರು-ಕೋಣ, ಹಂದಿ, ಕೋತಿ, ನಾಯಿಗಳು ಸತ್ತರೆ ಅದನ್ನು ‘ಬೀಳುಬಿದ್ದಿದೆ’ ಎಂದು ಕರೆಯುತ್ತಿದ್ದರು) ಆ ಸುದ್ದಿಯನ್ನು ಶಾನುಭೋಗರು ನಮ್ಮ ಹಟ್ಟಿಯವರಿಗೆ ಮುಟ್ಟಿಸುತ್ತಿದ್ದರು. ಆ ದಿನಗಳಲ್ಲಿ ಸತ್ತ ದನ ಅಥವಾ ಎಮ್ಮೆಗಳನ್ನು ಹೊತ್ತು ತಂದು ದೊಂಗ್ರದಲ್ಲಿ ಮುಚ್ಚುವುದು ನಮ್ಮ ಹಟ್ಟಿಯವರ ಕೆಲಸವಾಗಿತ್ತು. ಹೀಗೆ ಬೀಳುಬಿದ್ದದ್ದನ್ನು ಹೊತ್ತು ತಂದು ಮುಚ್ಚಲು ಹಟ್ಟಿಯವರು ಮುತುವರ್ಜಿ ವಹಿಸುವುದನ್ನು ನಾನು ಕಂಡಿದ್ದೇನೆ. ಇದಕ್ಕೆ ಕಾರಣ ಎಂದರೆ, ಸತ್ತ ದನ, ಎಮ್ಮೆ ಅಥವಾ ಕೋಣದ ಚರ್ಮವನ್ನು ಸುಲಿದು ಮಾರಿದರೆ, ಅವರಿಗೆ ಕೆಲವು ಪುಡಿಗಾಸು ಸಿಗುತ್ತಿತ್ತು. ಅದಕ್ಕಾಗಿ ಅವರು ಬೀಳುಬಿದ್ದದ್ದನ್ನು ಮುಚ್ಚಲು ಮುಂದಾಗುತ್ತಿದ್ದರು. ಆದರೆ ಸತ್ತ ದನಗಳನ್ನೇ ಆಗಲಿ ಅಥವಾ ಎಮ್ಮೆ, ಕೋಣ, ಹಂದಿಗಳನ್ನೇ ಆಗಲಿ ನಮ್ಮ ಹಟ್ಟಿಯವರು ಯಾರೂ ತಿನ್ನುತ್ತಿರಲಿಲ್ಲ! ಶೇಷಯ್ಯನವರ ಹೊಲಕ್ಕೆ ಸತ್ತ ದನ, ಎಮ್ಮೆಗಳನ್ನು ಎಳೆದು ತಂದು ಅವುಗಳ ಚುರ್ಮ ಸುಲಿಯುತ್ತಿದ್ದರು. ನಂತರ ಅದನ್ನು ಅಲ್ಲೇ ಮಣ್ಣಿನೊಳಗೆ ಮುಚ್ಚಿ ಬಿಡುತ್ತಿದ್ದರು. ಚರ್ಮ ಸುಲಿದ ಪ್ರಾಣಿಗಳ ಮಾಂಸ ತಿನ್ನಲು ದೊಡ್ಡ ದೊಡ್ಡ ರಣಹದ್ದುಗಳು ಹಿಂಡು ಹಿಂಡಾಗಿ ಮುತ್ತಿಕೊಳ್ಳುತ್ತಿದ್ದವು. ಆ ದೃಶ್ಯ ಈಗಲೂ ನನ್ನ ಕಣ್ಣುಗಳೊಳಗೆ ಅಚೊತ್ತಿದಂತಿದೆ. ಅಷ್ಟು ದೊಡ್ಡ ರಣಹದ್ದುಗಳನ್ನು ನಾನು ಈವರೆಗೂ ನಮ್ಮ ಸುತ್ತ ಮುತ್ತಲ ಪ್ರದೇಶಗಳಲ್ಲಿ ಕಂಡಿಲ್ಲ
ಬ್ರಿಟಿಷರ ಆಳ್ವಿಕೆಯಲ್ಲಿ ತುಮಕೂರಿನ ಕೆಲವು ಬ್ರಾಹ್ಮಣರಿಗೆ ಕೆಲವು ಇನಾಮಿ ಬಡಾವಣೆಗಳಿದ್ದವು. ಅವುಗಳಲ್ಲಿ ಮುಖ್ಯವಾಗಿ ನಮ್ಮ ದೊಡ್ಡಹಟ್ಟಿ ಕೈ ಚಾಚಿದರೆ ಸಿಗುವಂತಿದ್ದ ‘ವೆಂಕಟರಾವ್ ಕಾಲೋನಿ’ಯೂ ಒಂದು. ಕಂದಾಯ ಇಲಾಖೆಯ ದಾಖಲೆಗಳು ಹೇಳುವಂತೆ ತುಮಕೂರಿನ ಅಗ್ರಹಾರದಲ್ಲಿದ್ದ ಶನಿಮಹಾತ್ಮನ ದೇವಾಸ್ಥಾನದ ಸುತ್ತಲಿನ ಜಮೀನನ್ನು ಬ್ರಿಟಿಷರು ತಿಗಳರಿಗೆ ಮತ್ತು ನಮ್ಮ ಹಟ್ಟಿಯವರಿಗೆ ಇನಾಯ್ತಿ ಜಮೀನಾಗಿ ನೀಡಿದ್ದರು. ಹಾಗೂ ತುಮಕೂರಿನ ಈಗಿನ ರೈಲ್ವೇ ಸ್ಟೇಷನ್ ಸುತ್ತಲಿನ ಜಾಗವೂ ಕೂಡ ನಮ್ಮ ಹಟ್ಟಿಯ ‘ಕುಳವಾಡಿ ಹನುಮ’ ಅವರಿಗೆ ದೊರೆತ ಇನಾಯ್ತಿ ಜಮೀನೇ ಆಗಿತ್ತು. ದಾಖಲೆಗಳಲ್ಲಿ ಇರುವಂತೆ ‘ಈ ಭೂಮಿಯು ಹನುಮ ಕುಳವಾಡಿ ವಗೈರೆ ಅವರಿಗೆ ಸೇರಿದ್ದು’ ಎಂಬುದಾಗಿತ್ತು. ಈಗಲೂ ಅಲ್ಲಿನ ಕೆಲವು ಜಮೀನುಗಳ ಒಡೆತನದ ಬಗ್ಗೆ ತಕರಾರುಗಳಿವೆ. ತುಮಕೂರಿನಲ್ಲಿದ್ದ ಇಷ್ಟೆಲ್ಲಾ ಜಮೀನನ್ನು ನನ್ನ ಹಟ್ಟಿಯವರು ಉಳಿಸಿಕೊಳ್ಳಲೇ ಇಲ್ಲ! ಕೆಲವು ಮಧ್ಯವರ್ತಿಗಳು ತೋರಿಸಿದ ಹಣದ ಆಸೆಗಾಗಿ ತಮ್ಮ ಇನಾಯ್ತಿ ಜಮೀನನ್ನು ಮಾರಿಕೊಂಡರು ಎಂದು ನನ್ನ ಹಟ್ಟಿಯ ಹಿರಿಯರು ಮರುಗುತ್ತಾ ಹೇಳುತಿದ್ದರು.


