Homeಮುಖಪುಟಭಾರತದಲ್ಲಿ ಬೆಂಕಿ ದುರಂತ 'ದಿನವೊಂದಕ್ಕೆ ಬಲಿಯಾಗುತ್ತಿವೆ 16 ಜೀವಗಳು' NCRB ವರದಿ

ಭಾರತದಲ್ಲಿ ಬೆಂಕಿ ದುರಂತ ‘ದಿನವೊಂದಕ್ಕೆ ಬಲಿಯಾಗುತ್ತಿವೆ 16 ಜೀವಗಳು’ NCRB ವರದಿ

- Advertisement -
- Advertisement -

ಇತ್ತೀಚೆಗೆ ದೆಹಲಿಯ ಮಾಳವೀಯ ನಗರದ ಹೋಟೆಲ್‌ ಒಂದರಲ್ಲಿ ನಡೆದ ಭೀಕರ ಬೆಂಕಿ ದುರಂತ (ಇದರಲ್ಲಿ 22 ಜನರು ಸಜೀವ ದಹನವಾಗಿದ್ದರು) ಇಡೀ ದೇಶವನ್ನೇ ನಡುಗಿಸಿದೆ. ಈ ದುರಂತದ ಬೆನ್ನಲ್ಲೇ ಕರ್ನಾಟಕದಲ್ಲೂ ವಾಣಿಜ್ಯ ಮತ್ತು ವಸತಿ ಕಟ್ಟಡಗಳ ಸುರಕ್ಷತೆಯ ಕುರಿತು ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ.

2024ರ ಒಂದೇ ವರ್ಷದಲ್ಲಿ ಭಾರತದಲ್ಲಿ ಸುಮಾರು 6,000 ಬೆಂಕಿ ಅವಘಡಗಳು ಸಂಭವಿಸಿದ್ದು, 5,888 ಜನರು ಜೀವ ಕಳೆದುಕೊಂಡಿದ್ದಾರೆ ಮತ್ತು 330 ಜನರು ಗಾಯಗೊಂಡಿದ್ದಾರೆ. ಇದರರ್ಥ, ದೇಶದಲ್ಲಿ ಸರಾಸರಿ ಪ್ರತಿ ದಿನ 16 ಜನರು ಬೆಂಕಿಗೆ ಆಹುತಿಯಾಗುತ್ತಿದ್ದಾರೆ. ವಸತಿ ಕಟ್ಟಡಗಳು (ಮನೆಗಳು) ಇಂದಿಗೂ ಇಂತಹ ಅಪಘಾತಗಳ ಪ್ರಮುಖ ತಾಣಗಳಾಗಿದ್ದು, ಅಡುಗೆ ಅನಿಲ (LPG) ಸಿಲಿಂಡರ್ ಸ್ಫೋಟ ಮತ್ತು ಶಾರ್ಟ್ ಸರ್ಕ್ಯೂಟ್‌ಗಳೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National Crime Records Bureau – NCRB) ತನ್ನ ವಾರ್ಷಿಕ ‘ಅಪಘಾತದ ಮರಣಗಳು ಮತ್ತು ಆತ್ಮಹತ್ಯೆಗಳ’ (ADSI) ವರದಿಯ ಮೂಲಕ ಈ ಅಂಕಿ-ಅಂಶಗಳನ್ನು ಪ್ರಕಟಿಸಿದೆ.

ಹತ್ತು ವರ್ಷಗಳಲ್ಲಿ ಬೆಂಕಿ ಅಪಘಾತಗಳ ಸಂಖ್ಯೆಯಲ್ಲಿ ಇಳಿಮುಖ

ಕಳೆದ ಒಂದು ದಶಕದಲ್ಲಿ ದೇಶದಲ್ಲಿ ಬೆಂಕಿ ಅವಗಡಗಳ ಸಂಖ್ಯೆ ಶೇ. 68 ರಷ್ಟು ಗಣನೀಯವಾಗಿ ಇಳಿಕೆಯಾಗಿದೆ. 2015 ರಲ್ಲಿ 18,450 ಇದ್ದ ಪ್ರಕರಣಗಳು 2024 ರ ವೇಳೆಗೆ 5,971 ಕ್ಕೆ ಇಳಿದಿವೆ. ಮರಣ ಹೊಂದಿದವರ ಸಂಖ್ಯೆಯೂ 17,700 ರಿಂದ 5,888 ಕ್ಕೆ ಕುಸಿದಿದೆ. ಆದರೆ, ಈ ಇಳಿಕೆಯು ಅಗ್ನಿಶಾಮಕ ವ್ಯವಸ್ಥೆಯ ಸುಧಾರಣೆಯಿಂದಾಗಿದೆಯೇ ಅಥವಾ ಪ್ರಕರಣಗಳನ್ನು ಸರಿಯಾಗಿ ದಾಖಲಿಸದೇ ಇರುವುದರಿಂದಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಸಾಮಾನ್ಯವಾಗಿ ದೊಡ್ಡ ಫ್ಯಾಕ್ಟರಿಗಳು ಅಥವಾ ಹೋಟೆಲ್‌ಗಳಲ್ಲಿ ಬೆಂಕಿ ಬಿದ್ದಾಗ ಮಾತ್ರ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಆದರೆ ವಾಸ್ತವ ಏನೆಂದರೆ, ಅತಿ ಹೆಚ್ಚು ಸಾವುಗಳು ಸಂಭವಿಸುವುದು ನಮ್ಮ ಮನೆಗಳ ಒಳಗಡೆ ಎನ್ನುತ್ತವೆ 2024 ರ ವರದಿಗಳು.

  • ವಸತಿ ಕಟ್ಟಡಗಳು (ಮನೆಗಳು): 3,585 ಪ್ರಕರಣಗಳು
  • ವಾಣಿಜ್ಯ ಸಂಕೀರ್ಣಗಳು (ಮಾಲ್/ಅಂಗಡಿ): 277 ಪ್ರಕರಣಗಳು
  • ಕಾರ್ಖಾನೆಗಳು (Factories): 149 ಪ್ರಕರಣಗಳು

2024 ರಲ್ಲಿ ಸಂಭವಿಸಿದ ಒಟ್ಟು ಸಾವುಗಳಲ್ಲಿ ಸುಮಾರು ಶೇ. 40 ರಷ್ಟು ಸಾವುಗಳು ಅಡುಗೆ ಮನೆ ಮತ್ತು ಕರೆಂಟ್ ಸಮಸ್ಯೆಯಿಂದಲೇ ಆಗಿವೆ.

  • ಸಿಲಿಂಡರ್/ಸ್ಟವ್ ಸ್ಫೋಟ: ಶೇ. 23.6 ಸಾವುಗಳು
  • ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಶೇ. 17.2 ಸಾವುಗಳು
  • ಪಟಾಕಿ ಅವಗಡಗಳು: ಶೇ. 2.3 ಸಾವುಗಳು

    ಇತರ ಕಾರಣಗಳು: ಶೇ. 57.0 ಸಾವುಗಳು (ಇದು ನಿಖರ ಕಾರಣ ಪತ್ತೆ ಹಚ್ಚುವಲ್ಲಿನ ಲೋಪವನ್ನು ತೋರಿಸುತ್ತದೆ).

ಅತಿ ಹೆಚ್ಚು ಸಾವುಗಳು ಸಂಭವಿಸಿದ ರಾಜ್ಯಗಳು: ಮಹಾರಾಷ್ಟ್ರ (639 ಸಾವು), ತಮಿಳುನಾಡು (537), ಉತ್ತರ ಪ್ರದೇಶ (489), ಮಧ್ಯಪ್ರದೇಶ (452), ಮತ್ತು ಒಡಿಶಾ (442).

ಜನಸಂಖ್ಯೆಗೆ ಹೋಲಿಸಿದರೆ ಅತಿ ಹೆಚ್ಚು ಮರಣ ದರ ಹೊಂದಿದ ರಾಜ್ಯಗಳು: ಮಿಜೋರಾಂ (ಪ್ರತಿ ಲಕ್ಷ ಜನಸಂಖ್ಯೆಗೆ 1.28 ಸಾವು), ಛತ್ತೀಸ್‌ಗಢ (1.14), ಮತ್ತು ಅಂಡಮಾನ್ ನಿಕೋಬಾರ್ (0.99). ಒಡಿಶಾ ರಾಜ್ಯವು ಒಟ್ಟು ಸಾವು ಮತ್ತು ಮರಣ ದರ ಎರಡರಲ್ಲೂ ಮುಂಚೂಣಿಯಲ್ಲಿದೆ.

ಇತ್ತೀಚೆಗೆ (ಜೂನ್ 2026) ದೆಹಲಿಯ ಮಾಳವೀಯ ನಗರದ ಹೋಟೆಲ್ ಒಂದರಲ್ಲಿ ನಡೆದ ಭೀಕರ ಬೆಂಕಿ ಅವಘಡವು ಭಾರತದ ನಗರ ಪ್ರದೇಶಗಳಲ್ಲಿರುವ ಅಗ್ನಿ ಸುರಕ್ಷತೆಯ ಬೇಜವಾಬ್ದಾರಿತನವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಬೆತ್ತಲೆಯಾಗಿಸಿದೆ. ಆ ಹೋಟೆಲ್ ತನ್ನ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಸಿಕೊಂಡಿತ್ತು, ಅದಕ್ಕೆ ಯಾವುದೇ ಅಧಿಕೃತ ಅಗ್ನಿಶಾಮಕ ಇಲಾಖೆಯ ಅನುಮತಿ (NOC) ಇರಲಿಲ್ಲ. ಇಡೀ ಕಟ್ಟಡಕ್ಕೆ ಇದ್ದದ್ದು ಒಂದೇ ಒಂದು ಪ್ರವೇಶ ಮತ್ತು ನಿರ್ಗಮನ ದ್ವಾರ, ಪರಿಣಾಮವಾಗಿ, ಬೆಂಕಿ ಬಿದ್ದಾಗ ಜನರು ಹೊರಗೆ ಓಡಲಾರದೆ ಅಲ್ಲೇ ಸಿಲುಕಿ ಜೀವ ಬಿಡಬೇಕಾಯಿತು.

ಇದು ಕೇವಲ ದೆಹಲಿಯ ಕಥೆಯಲ್ಲ; ಇತ್ತೀಚಿನ ವರ್ಷಗಳಲ್ಲಿ ದೇಶದ ವಿವಿಧೆಡೆ ನಡೆದ ಕೆಲವು ಭೀಕರ ಘಟನೆಗಳನ್ನು ಗಮನಿಸಿದರೆ ನಾವೆಷ್ಟು ಅಪಾಯಕಾರಿ ಸ್ಥಿತಿಯಲ್ಲಿದ್ದೇವೆ ಎಂಬುದು ಅರ್ಥವಾಗುತ್ತದೆ.

ಕಳೆದ ವರ್ಷ ಗುಜರಾತ್‌ನ ರಾಜ್‌ಕೋಟ್‌ನ ಗೇಮಿಂಗ್ ಜೋನ್ ಒಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮಕ್ಕಳು ಸೇರಿದಂತೆ 27 ಕ್ಕೂ ಹೆಚ್ಚು ಜನರು ಸಜೀವ ದಹನವಾಗಿದ್ದರು. ಆ ಕಟ್ಟಡವನ್ನು ಸಂಪೂರ್ಣವಾಗಿ ಹವಾನಿಯಂತ್ರಿತ (AC) ಮಾಡಲಾಗಿತ್ತು ಮತ್ತು ತುರ್ತು ನಿರ್ಗಮನದ ವ್ಯವಸ್ಥೆಯೇ ಇರಲಿಲ್ಲ. ಅದೇ ರೀತಿ, ದೆಹಲಿಯ ನವಜಾತ ಶಿಶುಗಳ ಆಸ್ಪತ್ರೆಯೊಂದರಲ್ಲಿ (Baby Care Centre) ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಅಮಾಯಕ ಕಂದಮ್ಮಗಳು ಪ್ರಾಣ ಬಿಟ್ಟಿದ್ದರು. ಈ ಎಲ್ಲಾ ಘಟನೆಗಳ ಹಿಂದೆ ಇದ್ದದ್ದು ಒಂದೇ ಕಾರಣ “ಭ್ರಷ್ಟಾಚಾರ ಮತ್ತು ನಿಯಮಗಳ ಉಲ್ಲಂಘನೆ.”

ನಮ್ಮ ಮನೆಗಳೇ ಸುರಕ್ಷಿತವಲ್ಲ!

NCRB ವರದಿ ಸ್ಪಷ್ಟಪಡಿಸುವಂತೆ, ಕೈಗಾರಿಕೆಗಳಿಗಿಂತ ಹೆಚ್ಚಾಗಿ ನಮ್ಮ ಮನೆಗಳೇ ಬೆಂಕಿ ಅಪಘಾತದ ಕೇಂದ್ರಗಳಾಗುತ್ತಿವೆ. ಮಧ್ಯಮ ಮತ್ತು ಬಡ ವರ್ಗದ ಜನ ವಾಸಿಸುವ ಪ್ರದೇಶಗಳಲ್ಲಿ ಗುಣಮಟ್ಟವಿಲ್ಲದ ವೈರಿಂಗ್ ಬಳಸುವುದು, ಒಂದೇ ಸಾಕೆಟ್‌ಗೆ ಅತಿಯಾದ ವಿದ್ಯುತ್ ಲೋಡ್ ನೀಡುವುದು (Overloading) ಮತ್ತು ಹಳೆಯದಾದ ಗ್ಯಾಸ್ ಪೈಪ್ ಹಾಗೂ ರೆಗ್ಯುಲೇಟರ್‌ಗಳನ್ನು ಬದಲಾಯಿಸದೆ ಇರುವುದು ಇಡೀ ಕುಟುಂಬವನ್ನೇ ನಾಮಾವಶೇಷ ಮಾಡುತ್ತಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಕನಿಷ್ಠ ಪಕ್ಷ ಅಗ್ನಿಶಾಮಕ ಸಿಲಿಂಡರ್‌ಗಳನ್ನು (Fire Extinguishers) ಹೇಗೆ ಬಳಸಬೇಕು ಎಂಬ ಕನಿಷ್ಠ ಜ್ಞಾನವೂ ಸಾಮಾನ್ಯ ಜನರಿಗೆ ಇಲ್ಲದಿರುವುದು ದುರಂತ.

ಯಾವುದೇ ಒಂದು ವಾಣಿಜ್ಯ ಕಟ್ಟಡ, ಹೋಟೆಲ್ ಅಥವಾ ಮಲ್ಟಿಪ್ಲೆಕ್ಸ್ ತಲೆಯೆತ್ತಬೇಕಾದರೆ ಅಗ್ನಿಶಾಮಕ ಇಲಾಖೆಯ ಕ್ಲಿಯರೆನ್ಸ್ ಕಡ್ಡಾಯ. ಆದರೆ, ಭಾರತದಲ್ಲಿ ಹಣ ಕೊಟ್ಟರೆ ಸಾಕು, ಯಾವುದೇ ಸುರಕ್ಷತಾ ಕ್ರಮಗಳಿಲ್ಲದ ಕಟ್ಟಡಗಳಿಗೂ ಸುಲಭವಾಗಿ ಪರವಾನಗಿ ಸಿಗುತ್ತದೆ ಎಂಬುದು ಓಪನ್ ಸೀಕ್ರೇಟ್. ದುರಂತ ಸಂಭವಿಸಿದಾಗ ಮಾತ್ರ ಅಧಿಕಾರಿಗಳು ನಾಮಕಾವಸ್ತೆ ದಾಳಿ ನಡೆಸಿ ಸೀಲ್ ಮಾಡುತ್ತಾರೆ. ಕೆಲವು ದಿನಗಳ ನಂತರ ಮತ್ತೆ ಎಂದಿನಂತೆ ಭ್ರಷ್ಟಾಚಾರ ಮುಂದುವರಿಯುತ್ತದೆ.

ಈ ಬೆಂಕಿ ಅಪಘಾತಗಳನ್ನು ತಪ್ಪಿಸಲು ಆಡಳಿತ ವರ್ಗಕ್ಕೆ ಪ್ರಾಮಾಣಿಕ ಇಚ್ಚಾಶಕ್ತಿ ಅಗತ್ಯ. ಹಾಗಾಗಿ ಇದರ ಕುರಿತಾಗಿ ಗಂಭೀರ ಪ್ರಯತ್ನಗಳು ನಡೆಯಬೇಕಿದೆ. ಯಾವೆಲ್ಲ ಮಾರ್ಗಗಳನ್ನು ಅನುಸರಿಸಿದರೆ ಇದನ್ನು ಹತೋಟಿಯಲ್ಲಿಡಲು ಸಾಧ್ಯವಾಗುತ್ತದೆ ಎಂಬುದನ್ನು ನೋಡೋಣ.

  • ಕಡ್ಡಾಯ ಆಡಿಟ್: ಪ್ರತಿ ವರ್ಷ ಎಲ್ಲಾ ಶಾಲೆ, ಕಾಲೇಜು, ಹೋಟೆಲ್ ಮತ್ತು ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ‘ಫೈರ್ ಆಡಿಟ್’ ನಡೆಸಬೇಕು. ತಪ್ಪು ಕಂಡುಬಂದಲ್ಲಿ ಲೈಸೆನ್ಸ್ ರದ್ದುಪಡಿಸಬೇಕು.
  • ಶಾಲಾ ಮಟ್ಟದಲ್ಲಿ ಜಾಗೃತಿ: ಪ್ರತಿಯೊಬ್ಬ ನಾಗರಿಕನಿಗೂ ಬೆಂಕಿ ಬಿದ್ದಾಗ ಹೇಗೆ ತಪ್ಪಿಸಿಕೊಳ್ಳಬೇಕು, ಅಗ್ನಿಶಾಮಕ ಉಪಕರಣಗಳನ್ನು ಹೇಗೆ ಬಳಸಬೇಕು ಎಂಬ ‘ಮೋಕ್ ಡ್ರಿಲ್’ (Mock Drill) ತರಬೇತಿಯನ್ನು ಶಾಲೆ ಮತ್ತು ಕಚೇರಿಗಳಲ್ಲಿ ಕಡ್ಡಾಯಗೊಳಿಸಬೇಕು.
  • ಕಠಿಣ ಶಿಕ್ಷೆ: ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಬಿಲ್ಡರ್‌ಗಳು ಮತ್ತು ಅದಕ್ಕೆ ಸಾಥ್ ನೀಡುವ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣಕ್ಕೆ ಸಮನಾದ ಕ್ರಿಮಿನಲ್ ಮೊಕದ್ದಮೆ ಹೂಡಬೇಕು.

ವರ್ಷಕ್ಕೆ ಸುಮಾರು 6,000 ಸಾವುಗಳು ಎಂದರೆ ಅದು ಕೇವಲ ಸಂಖ್ಯೆಯಲ್ಲ, 6,000 ಕುಟುಂಬಗಳ ಆಧಾರಸ್ತಂಭಗಳು ಕುಸಿದು ಬಿದ್ದಿವೆ ಎಂದರ್ಥ. ಭಾರತವು ಬುಲೆಟ್ ಟ್ರೈನ್, ಸ್ಮಾರ್ಟ್ ಸಿಟಿಗಳತ್ತ ಮುನ್ನುಗ್ಗುತ್ತಿರುವಾಗ, ತನ್ನ ನಾಗರಿಕರಿಗೆ ಉಸಿರುಗಟ್ಟದೆ ಕಟ್ಟಡದಿಂದ ಹೊರಗೆ ಓಡಿ ಬರಲು ಒಂದು ‘ತುರ್ತು ನಿರ್ಗಮನ’ದ ದಾರಿಯನ್ನೂ ಕಲ್ಪಿಸಿಕೊಡದಿದ್ದರೆ ಆ ಅಭಿವೃದ್ಧಿಗೆ ಯಾವುದೇ ಅರ್ಥವಿರುವುದಿಲ್ಲ. ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದ ಬೆಂಕಿಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು?

ದೆಹಲಿ ಮಾಳವೀಯ ನಗರದ ಹೋಟೆಲ್‌ನಲ್ಲಿ ನಡೆದ ಬೆಂಕಿ ದುರಂತವು ಕರ್ನಾಟಕದ ಪಾಲಿಗೆ ಕಣ್ಣು ತೆರೆಸುವ ಘಟನೆಯಾಗಬೇಕು. ಅಗ್ನಿ ಸುರಕ್ಷತೆಯನ್ನು ಕೇವಲ ಒಂದು ‘ಸರ್ಟಿಫಿಕೇಟ್’ ಪಡೆದುಕೊಳ್ಳುವ ಪ್ರಕ್ರಿಯೆಯಾಗಿ ನೋಡದೆ, ಮಾನವ ಜೀವಗಳ ರಕ್ಷಣೆಯ ಹೊಣೆಯಾಗಿ ಸರ್ಕಾರ, ಉದ್ಯಮಿಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಸ್ವೀಕರಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...