ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಮಾತುಕತೆಯ ಮಾರ್ಗವನ್ನು ಮುಂದುವರಿಸಲು ಇರಾನ್ ಬದ್ಧವಾಗಿದೆ ಎಂದು ದೇಶದ ಅಧ್ಯಕ್ಷ ಮಸೂದ್ ಪೆಝೇಷ್ಕಿಯಾನ್ ಪುನರುಚ್ಚರಿಸಿದ್ದು, ಯಾವುದೇ ಕಾರಣಕ್ಕೂ ಟೆಹ್ರಾನ್ ಶರಣಾಗತಿಗೆ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ (ಆಗಸ್ಟ್ 7) ತಮ್ಮ ಕಚೇರಿಯ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸಂದರ್ಶನವೊಂದರಲ್ಲಿ ಪೆಝೇಷ್ಕಿಯಾನ್ ಈ ಹೇಳಿಕೆ ನೀಡಿದ್ದಾರೆ. ಅಮೆರಿಕದೊಂದಿಗೆ ಮಾತುಕತೆ ನಡೆಸಿ ಯುದ್ಧ ಕೊನೆಗೊಳಿಸುವ ತಿಳಿವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕುವ ಇರಾನ್ ಸರ್ಕಾರದ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ಈ ಒಪ್ಪಂದದಡಿ ಅಮೆರಿಕ ತನ್ನ ಭರವಸೆಗಳನ್ನು ಈಡೇರಿಸುವವರೆಗೆ ಮಾತ್ರ ಇರಾನ್ ಕೂಡ ತನ್ನ ಬದ್ಧತೆಯನ್ನು ಕಾಯ್ದುಕೊಳ್ಳಲಿದೆ ಎಂದು ಹೇಳಿದ ಅವರು, “ಅಮೆರಿಕ ಎಲ್ಲೆಲ್ಲಿ ತಮ್ಮ ಭರವಸೆಗಳನ್ನು ಈಡೇರಿಸಲು ವಿಫಲರಾಗುತ್ತಾರೋ, ಅಲ್ಲೆಲ್ಲಾ ನಾವೂ ಈ ಪ್ರಕ್ರಿಯೆಯನ್ನು ಮುಂದುವರಿಸಲು ಯಾವುದೇ ಬಾಧ್ಯತೆ ಹೊಂದಿರುವುದಿಲ್ಲ” ಎಂದಿದ್ದಾರೆ.
ಇದಕ್ಕೂ ಮುನ್ನ, ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳನ್ನು ಪೆಝೇಷ್ಕಿಯಾನ್ ತಳ್ಳಿಹಾಕಿದ್ದು, “ದೃಢನಿಶ್ಚಯದಿಂದ ತಮ್ಮ ಕೆಲಸವನ್ನು ಮುಂದುವರಿಸುವುದಾಗಿ” ತಿಳಿಸಿದ್ದರು. ಅಮೆರಿಕದೊಂದಿಗಿನ ಒಪ್ಪಂದದ ವಿಚಾರವಾಗಿ ಇರಾನ್ ನಾಯಕತ್ವದಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂಬ ವದಂತಿಗಳ ನಡುವೆ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಕಳೆದ ಜೂನ್‌ನಲ್ಲಿ ಇರಾನ್ ಮತ್ತು ಅಮೆರಿಕ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದವು. ಅದರಂತೆ, ಅಂತಿಮ ಒಪ್ಪಂದಕ್ಕೆ ಬರಲು ಎರಡೂ ದೇಶಗಳು 60 ದಿನಗಳ ಅವಧಿಯಲ್ಲಿ ಮಾತುಕತೆ ನಡೆಸಬೇಕಿತ್ತು. ಆದರೆ, ಇತ್ತೀಚೆಗೆ ಮತ್ತೆ ಹೆಚ್ಚಿರುವ ಉದ್ವಿಗ್ನತೆಯಿಂದಾಗಿ ಮಾತುಕತೆಯ ಭವಿಷ್ಯ ಅನಿಶ್ಚಿತಗೊಂಡಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಸ್ಪೋಟದ ಸದ್ದು
ಇನ್ನೊಂದೆಡೆ, ಹಾರ್ಮುಜ್ ಜಲಸಂಧಿಯ ಪ್ರವೇಶದ್ವಾರದಲ್ಲಿ “ಶತ್ರು ಪಡೆಗಳ ಗುರಿ”ಗಳನ್ನು ಇರಾನ್ ಸಶಸ್ತ್ರ ಪಡೆಗಳು ಎದುರಿಸಿದ ಪರಿಣಾಮ, ದಕ್ಷಿಣ ಇರಾನ್‌ನ ಹೊರ್ಮೋಜ್ಗನ್ ಪ್ರಾಂತ್ಯದ ಖೇಷ್ಮ್ (Qeshm) ದ್ವೀಪದಲ್ಲಿ ಗುರುವಾರ ರಾತ್ರಿ ಎರಡು ಸ್ಫೋಟಗಳು ಸಂಭವಿಸಿವೆ ಎಂದು ‘ತಸ್ನಿಮ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸ್ಥಳೀಯ ಸಮಯ ರಾತ್ರಿ 9:40 ರ ಸುಮಾರಿಗೆ (ಜಿಎಂಟಿ 18:10) ಸ್ಫೋಟದ ಸದ್ದು ಕೇಳಿಬಂದಿದೆ ಎಂದು ತಸ್ನಿಮ್ ಮೂಲಗಳು ತಿಳಿಸಿದ್ದು, ಇರಾನ್ ನೌಕಾಪಡೆಗಳ ಕಾರ್ಯಾಚರಣೆಯ ವಿವರಗಳನ್ನು ಮುಂಬರುವ ಗಂಟೆಗಳಲ್ಲಿ ಪ್ರಕಟಿಸಲಾಗುವುದು ಎಂದು ವರದಿ ಮಾಡಿದೆ.
ಆದರೆ, ಹೊರ್ಮೋಜ್ ಪ್ರಾಂತ್ಯದ ಉಪ ರಾಜ್ಯಪಾಲ ಅಹ್ಮದ್ ನಫಿಸಿ ಮಾತನಾಡಿ, ಖೇಷ್ಮ್ ದ್ವೀಪದಲ್ಲಾಗಲಿ ಅಥವಾ ಪ್ರಾದೇಶಿಕ ರಾಜಧಾನಿ ಬಂದರ್ ಅಬ್ಬಾಸ್‌ನಲ್ಲಾಗಲಿ ಯಾವುದೇ ದಾಳಿ ಅಥವಾ ಅನಾಹುತ ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸ್ಫೋಟಕ್ಕೆ ಕಾರಣವೇನೆಂಬುದನ್ನು ಪತ್ತೆಹಚ್ಚಲು ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.


