ದೇವಸ್ಥಾನ ಪ್ರವೇಶಿಸಿದ ಕಾರಣಕ್ಕಾಗಿ ಪರಿಶಿಷ್ಟ ಜಾತಿಗೆ ಸೇರಿದ 16 ವರ್ಷದ ಬಾಲಕನಿಗೆ ಜಾತಿ ನಿಂದನೆ ಮಾಡಿ, ಕತ್ತಿಯಿಂದ ಹಲ್ಲೆ ನಡೆಸಲು ಯತ್ನಿಸಿದ ಗಂಭೀರ ಘಟನೆ ಚಿಕ್ಕಮಗಳೂರು ತಾಲೂಕಿನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ (ಅಟ್ರಾಸಿಟಿ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆಗಸ್ಟ್ 5 ರಂದು ಮಧ್ಯಾಹ್ನ ಸಂತ್ರಸ್ತ ಬಾಲಕ ತನ್ನ ಸ್ನೇಹಿತನನ್ನು ಬಸ್‌ಗೆ ಹತ್ತಿಸಿ, ಸ್ಥಳೀಯ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಮನೆಗೆ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಸಂತ್ರಸ್ತ ಬಾಲಕ ನೀಡಿದ ದೂರಿನ ವಿವರಗಳ ಪ್ರಕಾರ, ಗ್ರಾಮದ ವಿಜಯ ಅಲಿಯಾಸ್ ವಿಜಯರಾಜ್ ಎಂಬಾತ ಬಾಲಕ ದೇವಸ್ಥಾನ ಪ್ರವೇಶಿಸಿದ್ದನ್ನೇ ನೆಪವಾಗಿಟ್ಟುಕೊಂಡು, ಆತನ ಮೇಲೆ ಹಿಂದಿನಿಂದ ಕತ್ತಿಯಿಂದ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಬಾಲಕನನ್ನು ತಕ್ಷಣವೇ ಪಕ್ಕಕ್ಕೆ ಎಳೆದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.
ಬಳಿಕ ಆರೋಪಿಯು ಬಾಲಕನ ಜಾತಿಯನ್ನು ಉಲ್ಲೇಖಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನಲ್ಲದೆ, ನಿನ್ನನ್ನು ಗ್ರಾಮದಿಂದಲೇ ಹೊರಹಾಕುತ್ತೇವೆ ಎಂದು ಪ್ರಾಣ ಬೆದರಿಕೆ ಒಡ್ಡಿದ್ದಾನೆ. ಮತ್ತೆ ಕತ್ತಿಯಿಂದ ಹಲ್ಲೆಗೆ ಮುಂದಾದಾಗ ಮತ್ತೊಬ್ಬ ಸ್ಥಳೀಯ ವ್ಯಕ್ತಿ ಆರೋಪಿಯನ್ನು ತಡೆದಿದ್ದಾನೆ. ಈ ಆತಂಕಕಾರಿ ಘಟನೆಯ ಸಂದರ್ಭದಲ್ಲಿ ಭಯಗೊಂಡ ಬಾಲಕ ತನ್ನ ಮೊಬೈಲ್‌ನಲ್ಲಿ ದೃಶ್ಯಗಳನ್ನು ಸೆರೆಹಿಡಿಯಲು ಯತ್ನಿಸಿದ್ದಾನೆ.
ಮೊಬೈಲ್ ಕಿತ್ತುಕೊಂಡು ಹಲ್ಲೆಗೆ ಪ್ರಚೋದನೆ ಆರೋಪ
ಇದೇ ವೇಳೆ ಗ್ರಾಮದ ಶ್ವೇತಾ ಎಂಬ ಮಹಿಳೆಯು ಬಾಲಕನ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು, ಆತನ ಮೇಲೆ ಹಲ್ಲೆ ಮಾಡುವಂತೆ ಆರೋಪಿಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆಗಸ್ಟ್ 7 ರಂದು ಸಂತ್ರಸ್ತ ಬಾಲಕ ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಸತ್ಯಾಸತ್ಯತೆ ತಿಳಿಯಲು ತನಿಖೆ ತೀವ್ರಗೊಳಿಸಿದ್ದಾರೆ.


