ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಲ್ಲಿ ಲಕ್ಷಾಂತರ ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗುವ ಭೀತಿ ಎದುರಾಗಿದೆ ಎಂದು ‘SIR ವಿರೋಧಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟ’ ತೀವ್ರ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯಾದ್ಯಂತ ‘ಮತದಾರರ ಹಕ್ಕು ಪ್ರತಿಪಾದನಾ ದಿನ’ ಆಚರಿಸಲು ಹಾಗೂ ಮುಂದಿನ 15 ದಿನಗಳ ಕಾಲ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೃಹತ್ ಜನಜಾಗೃತಿ ಅಭಿಯಾನ ನಡೆಸಲು ಒಕ್ಕೂಟ ನಿರ್ಧರಿಸಿದೆ.
ಶನಿವಾರ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘SIR ಸುನಾಮಿಯಿಂದ ಕರ್ನಾಟಕವನ್ನು ರಕ್ಷಿಸಿಕೊಳ್ಳುವುದು ಹೇಗೆ?’ ಎಂಬ ವಿಷಯದ ಮೇಲಿನ ರಾಜ್ಯಮಟ್ಟದ ದುಂಡುಮೇಜಿನ ಸಭೆಯಲ್ಲಿ ಈ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಚುನಾವಣಾ ಆಯೋಗ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಬರೋಬ್ಬರಿ 1.10 ಕೋಟಿಗೂ ಅಧಿಕ ಮತದಾರರು ASDDO (Absent, Shifted, Dead, Duplicate, Official) ಪಟ್ಟಿಯಲ್ಲಿದ್ದಾರೆ. ಇದರ ಜೊತೆಗೆ 34 ಲಕ್ಷಕ್ಕೂ ಹೆಚ್ಚು ಜನರು ‘ಅನ್‌ಮ್ಯಾಪಿಂಗ್’ ಪಟ್ಟಿಯಲ್ಲಿದ್ದಾರೆ. ಒಟ್ಟಾರೆಯಾಗಿ 1.44 ಕೋಟಿಗೂ ಅಧಿಕ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಡಿಲೀಟ್ ಆಗುವ ಆತಂಕ ಎದುರಾಗಿದೆ ಎಂದು ಸಭೆಯಲ್ಲಿ ಒಕ್ಕೂಟ ಕಳವಳ ವ್ಯಕ್ತಪಡಿಸಿದೆ.
ಸೆಪ್ಟೆಂಬರ್ ಅಂತ್ಯದವರೆಗೆ ಗಡುವು ವಿಸ್ತರಿಸಲು ಒತ್ತಾಯ
ಸಭೆಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖ ಪದಾಧಿಕಾರಿ ನೂರ್ ಶ್ರೀಧರ್, “ಜನಚಳವಳಿಗಳ ತೀವ್ರ ಒತ್ತಡಕ್ಕೆ ಮಣಿದು ಚುನಾವಣಾ ಆಯೋಗ ಮೊದಲ ಹಂತದ ಗಡುವನ್ನು 10 ದಿನಗಳ ಕಾಲ ವಿಸ್ತರಿಸಿದೆ. ಆದರೆ, ಪ್ರಸ್ತುತ ಸೃಷ್ಟಿಯಾಗಿರುವ ತಾಂತ್ರಿಕ ಗೊಂದಲ ಹಾಗೂ ಲೋಪಗಳನ್ನು ಸರಿಪಡಿಸಲು ಈ ಕಾಲಾವಕಾಶ ಯಾವುದಕ್ಕೂ ಸಾಲುವುದಿಲ್ಲ. ಆದ್ದರಿಂದ SIR ಪ್ರಕ್ರಿಯೆಯ ಅಂತಿಮ ಗಡುವನ್ನು ಸೆಪ್ಟೆಂಬರ್ ಅಂತ್ಯದವರೆಗೆ ವಿಸ್ತರಿಸಬೇಕು” ಎಂದು ಆಗ್ರಹಿಸಿದರು.
“ಚುನಾವಣಾ ಆಯೋಗವು ಮನೆಮನೆಗೆ ತೆರಳಿ ಅರ್ಹ ಮತದಾರರನ್ನು ಸೇರ್ಪಡೆಗೊಳಿಸುವ ಬದಲಿಗೆ, ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವ (Delete) ಕೆಲಸಕ್ಕೆ ಮುಂದಾಗಿದೆ. ಉದ್ಯೋಗ ಅಥವಾ ಇತರೆ ಕಾರಣಗಳಿಗೆ ಸ್ಥಳಾಂತರಗೊಂಡವರಿಗೆ ನಮೂನೆ-8 (Form-8) ನೀಡಿ ಅವರನ್ನು ಮತಪಟ್ಟಿಯಲ್ಲೇ ಉಳಿಸಿಕೊಳ್ಳಬೇಕು. ಲೋಪದೋಷಗಳಿಂದ ಕೂಡಿದ ASDDO ಪಟ್ಟಿಯನ್ನು ಮರುಪರಿಶೀಲಿಸಲು ಬೂತ್ ಮಟ್ಟದ ಅಧಿಕಾರಿಗಳನ್ನು (BLO) ಮತ್ತೊಮ್ಮೆ ಮನೆಗಳಿಗೆ ಕಳುಹಿಸಬೇಕು” ಎಂದು ಅವರು ಒತ್ತಾಯಿಸಿದರು.
ಒಂದುವೇಳೆ ನಾಗರಿಕ ಮನವಿಗಳಿಗೆ ಸ್ಪಂದಿಸದೆ ದೊಡ್ಡ ಮಟ್ಟದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಿ ಕರಡು ಪಟ್ಟಿ ಪ್ರಕಟಿಸಿದರೆ, ಹೆಸರು ಕಳೆದುಕೊಂಡ ಎಲ್ಲಾ ಮತದಾರರೊಂದಿಗೆ ಚುನಾವಣಾ ಆಯೋಗದ ಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ರಾಜ್ಯ ಸರ್ಕಾರ ಶಾಶ್ವತ ನಿವಾಸ ಪ್ರಮಾಣಪತ್ರ ಹಾಗೂ ಜಾತಿ ಪ್ರಮಾಣಪತ್ರಗಳನ್ನು ವಿತರಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಒಕ್ಕೂಟ, ನಾಗರಿಕರು ಪ್ರಮಾಣಪತ್ರಗಳಿಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಪ್ರತಿ ಗ್ರಾಮ ಪಂಚಾಯತಿ ಹಾಗೂ ನಗರ ಪ್ರದೇಶದ ವಾರ್ಡ್‌ಗಳಲ್ಲಿ ತಕ್ಷಣವೇ ‘ಸಹಾಯ ಕೇಂದ್ರಗಳನ್ನು’ (Help Desks) ತೆರೆಯಬೇಕು ಎಂದು ಆಗ್ರಹಿಸಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಜಿ.ಸಿ. ಚಂದ್ರಶೇಖರ್, “SIR ವಿಚಾರದಲ್ಲಿ ನಾಗರಿಕ ಸಮಾಜ ಮತ್ತು ಜನಪರ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಬಿಜೆಪಿ ಮತ್ತು ಜೆಡಿಎಸ್ ಹೊರತುಪಡಿಸಿ ನಾವೆಲ್ಲರೂ ಈ ಗಂಭೀರ ಸಮಸ್ಯೆಯ ವಿರುದ್ಧ ಒಗ್ಗಟ್ಟಾಗಿ ನಿಂತಿದ್ದೇವೆ. ಯಾರೊಬ್ಬರೂ ಧ್ವನಿ ಕಳೆದುಕೊಳ್ಳುವ ಅಗತ್ಯವಿಲ್ಲ. ಸಂಘಟನೆಗಳು ಇಟ್ಟಿರುವ ಹಕ್ಕೊತ್ತಾಯಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳ ಜೊತೆ ಶೀಘ್ರವೇ ಉನ್ನತ ಮಟ್ಟದ ಸಭೆ ಏರ್ಪಡಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಮಹತ್ವದ ಸಭೆಯಲ್ಲಿ ಎಸ್‌ಯುಸಿಐ (SUCI) ನಾಯಕ ಕೆ.ವಿ. ಭಟ್, ಸಿಪಿಎಂನ ಕೆ. ಮಹಾಂತೇಶ್, ಆಮ್ ಆದ್ಮಿ ಪಕ್ಷದ ಸೀತಾರಾಮ ಗುಂಡಪ್ಪ, ಜಮಾತೆ ಇಸ್ಲಾಮಿ ಹಿಂದ್‌ನ ಮುಹಮ್ಮದ್ ಯೂಸುಫ್ ಕನ್ನಿ, ಎದ್ದೇಳು ಕರ್ನಾಟಕ ಸಂಘಟನೆಯ ತಾರಾ ರಾವ್, ಕೆ.ಎಲ್. ಅಶೋಕ್, ಮಲ್ಲಿಗೆ ಸಿರಿಮನೆ, ಕರ್ನಾಟಕ ಜನಶಕ್ತಿಯ ಕುಮಾರ್ ಸಮತಳ, ಡಾ. ಪೂರ್ಣಾನಂದ, ರಮೇಶ್ ಬೆಲ್ಲಂಕೊಂಡ, ಹಾಗೂ ಒಳಮೀಸಲಾತಿ ಹೋರಾಟಗಾರರಾದ ಕರಿಯಪ್ಪ ಗುಡಿಮನಿ, ಅಂಬಣ್ಣ ಅರೋಲಿಕರ್ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಪ್ರಮುಖ ನಾಯಕರು ಭಾಗವಹಿಸಿದ್ದರು.


