3ನೇ ಹಂತದದಲ್ಲಿ ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜುಲೈನಿಂದ ನಡೆಸಲಾದ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಪ್ರಕ್ರಿಯೆಯ ಬಳಿಕ ಬಿಡುಗಡೆಯಾದ ಕರಡು ಮತದಾರರ ಪಟ್ಟಿಯಲ್ಲಿ ಭಾರಿ ಪ್ರಮಾಣದ ಹೆಸರುಗಳು ಕೈಬಿಡಲ್ಪಟ್ಟಿವೆ. ಒಟ್ಟು 1.58 ಕೋಟಿಗೂ ಅಧಿಕ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಪರಿಷ್ಕರಣೆಗೂ ಮುನ್ನ ಈ 12 ಭಾಗಗಳಲ್ಲಿ ಒಟ್ಟು 13.77 ಕೋಟಿ ಮತದಾರರಿದ್ದರು. ಆದರೆ ಕರಡು ಪಟ್ಟಿ ಬಿಡುಗಡೆಯಾದ ಬಳಿಕ ಈ ಸಂಖ್ಯೆ 12.18 ಕೋಟಿಗೆ ಕುಸಿದಿದೆ. ಅಂದರೆ ಶೇಕಡಾ 11.51 ರಷ್ಟು ಮತದಾರರನ್ನು ವಿವಿಧ ಕಾರಣಗಳಿಂದ ಮತಪಟ್ಟಿಯಿಂದ ಹೊರಗಿಡಲಾಗಿದೆ.
- ಆಂಧ್ರಪ್ರದೇಶ: ಪರಿಷ್ಕರಣೆಗೂ ಮುನ್ನ 4.16 ಕೋಟಿಯಷ್ಟಿದ್ದ ಮತದಾರರ ಸಂಖ್ಯೆ 3.71 ಕೋಟಿಗೆ ಇಳಿಕೆಯಾಗಿದ್ದು, ಬರೋಬ್ಬರಿ 44.89 ಲಕ್ಷ (10.78%) ಹೆಸರುಗಳನ್ನು ಕೈಬಿಡಲಾಗಿದೆ.
- ಜಾರ್ಖಂಡ್: 2.64 ಕೋಟಿಯಿಂದ 2.21 ಕೋಟಿಗೆ ಕುಸಿದಿದ್ದು, 43.61 ಲಕ್ಷ (16.48%) ಮತದಾರರ ಹೆಸರುಗಳು ಡಿಲೀಟ್ ಆಗಿವೆ.
- ಹರ್ಯಾಣ: 2.06 ಕೋಟಿಯಿಂದ 1.72 ಕೋಟಿಗೆ ಇಳಿಕೆಯಾಗಿದ್ದು, 33.83 ಲಕ್ಷ (16.38%) ಹೆಸರುಗಳನ್ನು ತೆರವುಗೊಳಿಸಲಾಗಿದೆ.
- ಒಡಿಶಾ: 3.33 ಕೋಟಿಯಿಂದ 3.13 ಕೋಟಿಗೆ ತಗ್ಗಿದ್ದು, 20.12 ಲಕ್ಷ (6.02%) ಮತದಾರರನ್ನು ಪಟ್ಟಿಯಿಂದ ತೆಗೆಯಲಾಗಿದೆ.
- ಉತ್ತರಾಖಂಡ: 79.6 ಲಕ್ಷದಿಂದ 71.33 ಲಕ್ಷಕ್ಕೆ ಇಳಿಕೆಯಾಗಿದ್ದು, 8.26 ಲಕ್ಷ (10.39%) ಹೆಸರುಗಳು ಗಾಯಬ್ ಆಗಿವೆ.
ಇತರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು: ಮೇಘಾಲಯದಲ್ಲಿ 1.80 ಲಕ್ಷ (7.67%), ಅರುಣಾಚಲ ಪ್ರದೇಶದಲ್ಲಿ 1.69 ಲಕ್ಷ (19.09%), ಮಣಿಪುರದಲ್ಲಿ 1.58 ಲಕ್ಷ (7.5%), ದಾದ್ರಾ ಮತ್ತು ನಗರ್ ಹವೇಲಿ ಹಾಗೂ ದಾಮನ್-ದಿಯುನಲ್ಲಿ 1.26 ಲಕ್ಷ (29.64%), ಚಂಡೀಗಢದಲ್ಲಿ 66,181 (12.8%), ಮಿಝೋರಾಂನಲ್ಲಿ 46,162 (5.2%) ಹಾಗೂ ಸಿಕ್ಕಿಂನಲ್ಲಿ 37,724 (8%) ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ.
ಕರ್ನಾಟಕ ಸೇರಿ ಹಲವು ರಾಜ್ಯಗಳ ಪಟ್ಟಿ ಬಿಡುಗಡೆ ಬಾಕಿ
ಅನೇಕ ರಾಜ್ಯಗಳ ಕರಡು ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, ಉಳಿದ ಪ್ರಮುಖ ರಾಜ್ಯಗಳ ಪಟ್ಟಿಗಳು ಮುಂದಿನ ದಿನಗಳಲ್ಲಿ ಪ್ರಕಟಗೊಳ್ಳಲಿವೆ:
- ಪಂಜಾಬ್: ಆಗಸ್ಟ್ 13
- ತೆಲಂಗಾಣ: ಆಗಸ್ಟ್ 17
- ಕರ್ನಾಟಕ, ದೆಹಲಿ ಮತ್ತು ಮಹಾರಾಷ್ಟ್ರ: ಆಗಸ್ಟ್ 24
- ನಾಗಾಲ್ಯಾಂಡ್: ಸೆಪ್ಟೆಂಬರ್ 20
- ತ್ರಿಪುರಾ: ಅಕ್ಟೋಬರ್ 21
ಹೆಸರು ಸೇರ್ಪಡೆಗೆ ಮತ್ತೊಮ್ಮೆ ಅವಕಾಶ
ಈಗ ಬಿಡುಗಡೆಯಾಗಿರುವುದು ಕೇವಲ ಕರಡು ಮತದಾರರ ಪಟ್ಟಿಯಾಗಿದ್ದು (Draft Electoral Roll), ಹೆಸರು ಬಿಟ್ಟುಹೋದವರು ಹಾಗೂ ಹೊಸ ಮತದಾರರು ತಮ್ಮ ಆಕ್ಷೇಪಣೆ ಸಲ್ಲಿಸಲು ಮತ್ತು ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಹೀಗಾಗಿ ಅಂತಿಮ ಪಟ್ಟಿ ಪ್ರಕಟವಾಗುವ ವೇಳೆ ಮತದಾರರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.


