ರಾಜ್ಯದ ಹೋಟೆಲ್‌ಗಳು, ಡಾಬಾಗಳು ಹಾಗೂ ಆಹಾರ ಸೇವಾ ಸಂಸ್ಥೆಗಳು ಪಾಲಿಸಬೇಕಾದ ‘ಆಹಾರ ಸುರಕ್ಷತಾ ಮತ್ತು ನೈರ್ಮಲ್ಯ ನಿಯಮಗಳ’ನ್ನು ‘ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧ ಆಡಳಿತ ಇಲಾಖೆ’ ಆಯುಕ್ತರು ಪ್ರಕಟಿಸಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರು ನಗರದ ಪಂಚತಾರಾ ಹೋಟೆಲ್‌ಗಳು ಮತ್ತು ಇಂದಿರಾ ಕ್ಯಾಂಟಿನ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಅವಧಿ ಮೀರಿದ ಹಾಗೂ ಕೊಳೆತ ಆಹಾರ ಪದಾರ್ಥಗಳನ್ನು ಪತ್ತೆಹಚ್ಚಿದ್ದಾರೆ. ನಿಯಮ ಪಾಲಿಸದ ಹಲವು ಹೋಟಲ್‌ಗಳಿಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಇದೀಗ, ಹೋಟೆಲ್‌ಗಳಿಗೆ ಕಟ್ಟುನಿಟ್ಟಿನ ನಿಮಯಗಳನ್ನು ಜಾರಿ ಮಾಡಿದ್ದಾರೆ.
ಇತ್ತೀಚೆಗೆ ರಾಜ್ಯಮಟ್ಟದಲ್ಲಿ ತೀವ್ರ ಜಾರಿ ಮತ್ತು ತಪಾಸಣಾ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಸಂಗ್ರಹಣೆ ಹಾಗೂ ಕಳಪೆ ನೈರ್ಮಲ್ಯ ಇರುವುದು ಕಂಡುಬಂದಿರುತ್ತದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ 2011ರ ನಿಯಮಗಳನ್ವಯ ಈ ಕೆಳಕಂಡ ಮಾರ್ಗ ಸೂಚಿಗಳನ್ನು ಸಣ್ಣ ಹೋಟೆಲ್‌ಗಳು, ಡಾಬಾಗಳು, ರೆಸ್ಟೋರೆಂಟ್‌ಗಳು ಹಾಗೂ ಇತರೆ ಆಹಾರ ಸೇವಾ ಕೇಂದ್ರಗಳು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಿದೆ ಎಂದು ಆದೆಶದಲ್ಲಿ ತಿಳಿಸಲಾಗಿದೆ.
ಪ್ರಮುಖವಾಗಿ, ಆಹಾರ ವ್ಯವಹಾರದ ಪರವಾನಗಿಯನ್ನು ಸ೦ಸ್ಥೆಯ ಆವರಣದಲ್ಲಿ ಎಲ್ಲರಿಗೂ ಗೋಚರಿಸುವ
ಪ್ರಮುಖ ಸ್ಥಳದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಆಹಾರ ವ್ಯವಹಾರದ ಪ್ರಕ್ರಿಯೆಗಳು, ಚಟುವಟಿಕೆಗಳು ಅಥವಾ ಇತರೆ ವಿವರಗಳಲ್ಲಿ ಯಾವುದೇ ಬದಲಾವಣೆ/ಮಾರ್ಪಾಡು ಮಾಡಿದಲ್ಲಿ ಸಂಬಂಧಿತ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು ಎಂದು ಆದೇಶಿಸಲಾಗಿದೆ.
ಆಹಾರ ತಯಾರಿಕಾ ಪ್ರದೇಶ
“ಅಡುಗೆ ಮಾಡುವ ಪ್ರದೇಶವನ್ನು ಸದಾ ಸ್ವಚ್ಚವಾಗಿ, ವ್ಯವಸ್ಥಿತವಾಗಿ ಹಾಗೂ ಸಮರ್ಪಕ ಗಾಳಿಯಾಡುವಂತೆ ನಿರ್ವಹಿಸಬೇಕು. ಪಾತ್ರೆ ತೊಳೆಯುವುದು, ಉಪಕರಣಗಳನ್ನು ಸ್ವಚ್ಛಗೊಳಿಸುವುದು ಹಾಗೂ ಕಚ್ಚಾ ಆಹಾರ
ಪದಾರ್ಥಗಳನ್ನು ತೊಳೆಯುವುದಕ್ಕಾಗಿ ಪ್ರತ್ಯೇಕ ಸಿಂಕ್‌ಗಳ ವ್ಯವಸ್ಥೆ ಮಾಡಬೇಕು. ಅಡುಗೆ ಮತ್ತು ಆಹಾರ ವಿತರಣೆಗೆ ಬಳಸುವ ಉಪಕರಣಗಳು, ಪಾತ್ರೆಗಳು, ಕ್ರಾಕರಿ ಹಾಗೂ ಕಟ್ಲರಿಗಳನ್ನು ಡಿಟರ್ಜಿಂಟ್ ಮತ್ತು ಬಿಸಿ ನೀರನ್ನು ಬಳಸಿ ಸಮರ್ಪಕವಾಗಿ ತೊಳೆಯಬೇಕು ಹಾಗೂ ಸ್ವಚ್ಛಗೊಳಿಸಬೇಕು” ಎಂದು ಸೂಚಿಸಲಾಗಿದೆ.
ಕಚ್ಚಾ ಆಹಾರ ಪದಾರ್ಥಗಳು
“ಬಳಸುವ ಕಚ್ಚಾ ಆಹಾರ ಪದಾರ್ಥಗಳು ಉತ್ತಮ ಗುಣಮಟ್ಟದ್ಧಾಗಿದ್ದು, ವಿಶ್ವಾಸಾರ್ಹ
ಮೂಲದಿಂದ ಖರೀದಿಸಬೇಕು. ಕಚ್ಚಾ ಪದಾರ್ಥಗಳನ್ನು ಸೃಚ್ಚ ಮತ್ತು ನೈರ್ಮಲ್ಯಯುತ ಪರಿಸ್ಥಿಶಿಯಲ್ಲಿ, ಸೂಕ್ತ ತಾಪಮಾನದಲ್ಲಿ ಸಂಗ್ರಹಿಸಬೇಕು. ಹಣ್ಣು ಮತ್ತು ತರಕಾರಿಗಳನ್ನು ಬಳಸುವ ಮೊದಲು ಚೆನ್ನಾಗಿ ತೊಳೆಯಬೇಕು. ಆಹಾರ ಪದಾರ್ಥಗಳ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿ ಅವು ಹಾಳಾಗದಂತೆ
ಕ್ರಮ ಕೈಗೊಳ್ಳಬೇಕು. ಆಹಾರ ಪದಾರ್ಥಗಳನ್ನು ಸೂಕ್ತವಾಗಿ ಮುಚ್ಚಿ ಸಂಗ್ರಹಿಸಬೇಕು. ಅಗತ್ಯವಿರುವಲ್ಲಿ ಆಹಾರ ಉತ್ಪನ್ನಗಳಲ್ಲಿ ರಾಸಾಯನಿಕ ಹಾಗೂ ಸೂಕ್ಷ್ಮಜೀವಿ ಮಾಲಿನ್ಯಗಳ ಪರೀಕ್ಷೆಯನ್ನು ಖಚಿತಪಡಿಸಬೇಕು: ಎಂದು ಆದೇಶಿಸಲಾಗಿದೆ.
ಅಡುಗೆ ಮತ್ತು ಆಹಾರ ಸ೦ಗ್ರಹಣೆ
“ಆಹಾರವನ್ನು ಸಮರ್ಪಕವಾಗಿ ತಯಾರಿಸಿ, ಸಂಸ್ಕರಿಸಿ ಮತ್ತು ಸಂಪೂರ್ಣವಾಗಿ ಬೇಯಿಸಬೇಕು. ಆಹಾರ ತಯಾರಿಕೆಗೆ ಬಳಸುವ ಎಲ್ಲಾ ಪದಾರ್ಥಗಳು ತಾಜಾವಾಗಿದ್ದು, ಸಂಪೂರ್ಣವಾಗಿ ಬೇಯಿಸಿರುವುದನ್ನು ಖಚಿತಪಡಿಸಬೇಕು. ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ತಯಾರಿಕೆಯನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವುದನ್ನು ತಪ್ಪಿಸಬೇಕು. ಆಹಾರವನ್ನು ಸಂಪೂರ್ಣವಾಗಿ ಬೇಯಿಸಬೇಕು. ತಣ್ಣನೆಯ ಆಹಾರವನ್ನು ಶೇ.50ಕ್ಕಿಂತ ಕಡಿಮೆ ತಾಪಮಾನದಲ್ಲಿ ಹಾಗೂ ಬಿಸಿ ಆಹಾರವನ್ನು ಶೇ. 60 ಕ್ಕಿ೦ತ ಹೆಚ್ಚಿನ ತಾಪಮಾನದಲ್ಲಿ ಇಡಬೇಕು. ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಕ್ಕಾಗಿ ಪ್ರತ್ಯೇಕ ಕತ್ತರಿಸುವ ಫಲಕಗಳು, ಚಾಕುಗಳು ಹಾಗೂ ಪಾತ್ರೆಗಳನ್ನು ಬಳಸಬೇಕು. ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ಪ್ರತ್ಯೇಕ ಪಾತ್ರೆಗಳಲ್ಲಿ ಸಂಗ್ರಹಿಸಬೇಕು. ತಣ್ಣನೆಯ ಆಹಾರವನ್ನು ಶೇ.50ಕ್ಕಿಂತ ಕಡಿಮೆ ತಾಪಮಾನದಲ್ಲಿ ಮತ್ತು ಫ್ರೋಜನ್ ಆಹಾರ ಪದಾರ್ಥಗಳನ್ನು ಶೇ.181 ಅಥವಾ ಅದಕ್ಕಿ೦ತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಬೇಕು” ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ಸಿಬ್ಬಂದಿಯ ವೈಯಕ್ತಿಕ ನೈರ್ಮಲ್ಯ
“ಎಫ್‌ಎಸ್‌ಎಸ್‌ಎಐ ನಿಯಮಗಳನ್ವಯ ಆಹಾರ ನಿರ್ವಹಿಸುವ ಸಿಬ್ಬಂದಿಯ ಉನ್ನತ ಮಟ್ಟದ ವೈಯಕ್ತಿಕ
ನೈರ್ಮಲ್ಯವನ್ನು ಕಾಪಾಡಬೇಕು. ಸಿಬ್ಬಂದಿಯು ಸ್ವಚ್ಚ ಸಮವಸ್ತ್ರ, ಹೇರ್‌ನೆಟ್/ತಲೆಕವಚ ಹಾಗೂ ಅಗತ್ಯವಿರುವಲ್ಲಿ ಮಾಸ್ಕ್ ಮತ್ತು ಏಪ್ರನ್ ಧರಿಸಬೇಕು. ಸಿಬ್ಬಂದಿಯ ಉಗುರುಗಳನ್ನು ಚಿಕ್ಕದಾಗಿ ಹಾಗೂ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಅಡುಗೆಮನೆ ಮತ್ತು ಆಹಾರ ಸೇವಾ ಸಿಬ್ಬ೦ದಿಯ ವಾರ್ಷಿಕ ವೈದ್ಯಕೀಯ ಆರೋಗ್ಯ/ಫಿಟ್ನೆಸ್ ದಾಖಲೆಗಳನ್ನು ಸವೀಕರಿಸಿ ನಿರ್ವಹಿಸಬೇಕು. ದಿನವಿತ್ಯದ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ತರಬೇತಿ ಪಡೆದ ‘FoSTaC ಆಹಾರ ಸುರಕ್ಷತಾ ಮೇಲ್ವಿಚಾರಕ’ರನ್ನು ನಿಯೋಜಿಸಬೇಕು” ಎಂದು ಸೂಚನೆ ನೀಡಲಾಗಿದೆ.
ಆಹಾರದ ಸಾಗಣೆ ಮತ್ತು ನಿರ್ವಹಣೆ
“ಆಹಾರ ಸಾಗಿಸಲು ಬಳಸುವ ವಾಹನ ಅಥವಾ ಸಾರಿಗೆ ವ್ಯವಸ್ಥೆಯು ಸ್ವಚ್ಛ ಮತ್ತು ನೈರ್ಮಲ್ಯಯುತವಾಗಿರಬೇಕು. ಆಹಾರ ಉತ್ಪನ್ನಗಳ ಸಾಗಣೆಗೆ ಬಳಸುವ ವಾಹನಗಳನ್ನು ಸಾಧ್ಯವಾದಷ್ಟು ಆಹಾರ ಸಾಗಣೆಯ ಉದ್ದೇಶಕ್ಕಾಗಿಯೇ ಬಳಸಬೇಕು. ಆಹಾರ ಸಾಗಣೆಯ ಅವಧಿಯನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಬೇಕು.ಸಾಗಣೆ ಸಂದರ್ಭದಲ್ಲಿ ಆಹಾರಕ್ಕೆ ಅಗತ್ಯವಿರುವ ಸೂಕ್ತ ತಾಪಮಾನವನ್ನು ಕಾಪಾಡಬೇಕು. ಶೀತಲೀಕರಣ ಅಗತ್ಯವಿರುವ ಆಹಾರವನ್ನು ಸೂಕ್ತ ಪ್ರಮಾಣಗಳಲ್ಲಿ ಸಣ್ಣ ಘಟಕಗಳಾಗಿ
ವಿತರಿಸಬೇಕು. ಬಾಟಲಿ ಪಾನೀಯಗಳು, ಸ್ಟೆರಿಲೈಸ್ ಮಾಡಿದ ಹಾಲು, ಕ್ಯಾನ್ ಆಹಾರ ಮುಂತಾದ ಪ್ಯಾಕೇಜ್
ಮಾಡಿದ ಆಹಾರಗಳ ಪ್ಯಾಕಿಂಗ್/ಸೀಲ್‌ಗಳು ಹಾನಿಯಾಗದಂತೆ ಸಾಗಣೆ ಸಂದರ್ಭದಲ್ಲಿ ಸರಿಯಾಗಿ ಸಂಗ್ರಹಿಸಬೇಕು. ಆಹಾರವು ಅಂತಿಮ ಗ್ರಾಹಕರಿಗೆ ತಲುಪುವವರೆಗೂ ಅಗತ್ಯವಿರುವ ತಾಪಮಾನವನ್ನು
ಕಾಪಾಡಬೇಕು” ಎಂದು ಇಲಾಖೆ ಸೂಚಿಸಿದೆ.
ಸುರಕ್ಷಿತ ನೀರು
“ಅಡುಗೆ, ಆಹಾರ ತಯಾರಿಕೆ, ಪಾತ್ರೆ ತೊಳೆಯುವುದು ಹಾಗೂ ಸ್ವಚ್ಛತಾ ಕಾರ್ಯಗಳಿಗೆ ಸುರಕ್ಷಿತ
ಮತ್ತು ಕುಡಿಯಲು ಯೋಗ್ಯವಾದ ನೀರನ್ನು ಮಾತ್ರ ಬಳಸಬೇಕು. ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಬೇಕು ಮತ್ತು ಪರೀಕಾ ದಾಖಲೆಗಳನ್ನು ನಿರ್ವಹಿಸಬೇಕು. ಹೋಟೆಲ್‌ಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಉಚಿತವಾಗಿ ಒದಗಿಸಬೇಕು. ಸಾರ್ವಜನಿಕರಿಗೆ ಕಡ್ಡಾಯವಾಗಿ ಬಿಸಿ ನೀರಿನ ವ್ಯವಸ್ಮೆಯನ್ನು ಕಲ್ಪಿಸಬೇಕು” ಎಂದು ಹೇಳಲಾಗಿದೆ.
ಶೌಚಾಲಯ
“ಹೋಟೆಲ್‌ಗೆ ಭೇಟಿ ನೀಡುವ ಸಾರ್ವಜನಿಕರಿಗೆ ಶೌಚಾಲಯದ ಉಚಿತ ಬಳಕೆಗೆ ಅವಕಾಶ
ಕಲ್ಪಿಸಬೇಕು. ಹೋಟೆಲ್ ಕಾರ್ಯನಿರ್ವಹಿಸುವ ಅವಧಿಯಲ್ಲಿ ಶೌಚಾಲಯವನ್ನು ಸದಾ ಸ್ವಚ್ಚವಾಗಿ,
ಶುಚಿಯಾಗಿ ಹಾಗೂ ನೈರ್ಮಲ್ಯಯುತವಾಗಿ ನಿರ್ವಹಿಸಬೇಕು. ಶೌಚಾಲಯದಲ್ಲಿ ಸಮರ್ಪಕ ನೀರು, ಸಾಬೂನು ಹಾಗೂ ಕೈತೊಳೆಯುವ ವ್ಯವಸ್ಥೆ ಇರಬೇಕು” ಎಂದು ಸೂಚಿಸಲಾಗಿದೆ.
ಕೀಟ ನಿಯಂತ್ರಣ
“ಆಹಾರ ಸಂಗ್ರಹಣಾ ಪ್ರದೇಶ ಮತ್ತು ಅಡುಗೆ ಪ್ರದೇಶವನ್ನು ಸದಾ ಸ್ವಚ್ಛವಾಗಿ ಇಡಬೇಕು. ಕೀಟಗಳು, ನೊಣಗಳು, ಜಿರಳೆಗಳು, ಇಲಿಗಳು ಹಾಗೂ ಇತರೆ ದಂಶಕಗಳು ಪ್ರವೇಶಿಸದಂತೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ನಿಯಮಿತವಾಗಿ ಕೀಟ ನಿಯಂತ್ರಣಕಾರ್ಯವನ್ನು ಕೈಗೊಳ್ಳಬೇಕು.
ಸಂಬಂಧಿತ ದಾಖಲೆಗಳನ್ನು ನಿರ್ವಹಿಸಬೇಕು” ಎಂದು ಇಲಾಖೆ ಸೂಚಿಸಿದೆ.
ಆಹಾರ ಸಂಗ್ರಹಣೆ ಮತ್ತು ನಿರ್ವಹಣೆ- ಅಡುಗೆಮನೆ ಸ್ವಚ್ಛತೆ
“ಕಚ್ಚಾ ಮಾಂಸ, ಮೀನು/ಸಮುದ್ರ ಆಹಾರ ಮತ್ತು ತರಕಾರಿಗಳನ್ನು ಪರಸ್ಪರ ಪ್ರತ್ಯೇಕವಾಗಿ ಸಂಗ್ರಹಿಸಿ
ಅಡ್ಡ ಮಾಲಿನ್ಯ ಉಂಟಾಗದಂತೆ ನೋಡಿಕೊಳ್ಳಬೇಕು. ಶೀಥಲೀಕರಿಸಿದ ಆಹಾರವನ್ನು ಶೇ.4 ಕ್ಕಿಂತ ಕಡಿಮೆ ತಾಪಮಾನದಲ್ಲಿ ಮತ್ತು ಫ್ರೋಜನ್ ಆಹಾರ ಪದಾರ್ಥಗಳನ್ನು ಶೇ-48 ತಾಪಮಾನದಲ್ಲಿ ಸಂಗ್ರಹಿಸಬೇಕು. ಅವಧಿ ಮೀರಿದ ಆಹಾರ ಪದಾರ್ಥಗಳು, ಹಾಳಾದ ತರಕಾರಿ/ಹಣ್ಣುಗಳು ಅಥವಾ ಶಿಲೀಂಧ್ರ
ಕಾಣಿಸಿಕೊಂಡಿರುವ ಆಹಾರವನ್ನು ತಕ್ಷಣವೇ ವಿಲೇವಾರಿ ಮಾಡಬೇಕು” ಎಂದು ಸೂಚಿಸಲಾಗಿದೆ.
“ಹೋಟೆಲ್‌ಗಳ ಗೋಡೆಗಳು, ನೆಲ ಮತ್ತು ಮೇಲ್ಮಾವಣಿಯನ್ನು ಸ್ವಚ್ಛವಾಗಿ, ಸಮತಟ್ಟಾಗಿ ಮತ್ತು ಉತ್ತಮ
ಸ್ಥಿತಿಯಲ್ಲಿ ನಿರ್ವಹಿಸಬೇಕು. ಉದುರುವ ಬಣ್ಣ, ಬಿರುಕುಗಳು, ತೆರದ/ನೇತಾಡುವ ವಿದ್ಯುತ್ ತಂತಿಗಳು ಮುಂತಾದ ಅಪಾಯಕಾರಿ ಪರಿಸ್ಥಿತಿಗಳು ಇರದಂತೆ ನೋಡಿಕೊಳ್ಳಬೇಕು. ಧೂಳು ಮತ್ತು ನೊಣಗಳ ಪ್ರವೇಶವನ್ನು ತಡೆಯಲು ಕಿಟಕಿ ಮತ್ತು ಬಾಗಿಲುಗಳಿಗೆ ಜಾಲರಿ (661) ಅಥವಾ ಅಗತ್ಯವಿರುವಲ್ಲಿ ಏರ್ ಕರ್ಟನ್ ಅಳವಡಿಸಬೇಕು. ಸಾಬೂನು ಮತ್ತು ಶುದ್ಧ ಹರಿಯುವ ನೀರಿನೊಂದಿಗೆ ಪ್ರತ್ಯೇಕ ಕೈತೊಳೆಯುವ ಸಿಂಕ್‌ಗಳನ್ನು
ಒದಗಿಸಬೇಕು. ಕಚ್ಚಾ ಆಹಾರ ತೊಳೆಯಲು ಮತ್ತು ಪಾತ್ರೆ ಉಪಕರಣಗಳನ್ನು ತೊಳೆಯಲು ಪ್ರತ್ಯೇಕವಾಗಿ
ಗುರುತಿಸಲಾದ ಸಿಂಕ್‌ಗಳನ್ನು ಬಳಸಬೇಕು. ಕಸದ ಬುಟ್ಟಿಗಳನ್ನು ನಿಯಮಿತವಾಗಿ ಖಾಲಿ ಮಾಡಿ, ಮುಚ್ಚಳದೊಂದಿಗೆ ಇಡಬೇಕು. ಇದರಿಂದ ಕೀಟಗಳು ಮತ್ತು ಸೂಕ್ಷಜೀವಿಗಳ ಹರಡುವಿಕೆಯನ್ನು ತಡೆಯಬಹುದು. ಅಸುರಕ್ಷಿತ ಕೃತಕ ಬಣ್ಣಗಳು ಅಥವಾ ಅನುಮತಿಯಿಲ್ಲದ ಆಹಾರ ಸೇರ್ಪಡೆಗಳನ್ನು ಆಹಾರ
ತಯಾರಿಕೆಯಲ್ಲಿ ಬಳಸಬಾರದು” ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸಿಬ್ಬಂದಿಯ ಆರೋಗ್ಯ ಮತ್ತು ನಿರ್ವಹಣೆ
“ಎಲ್ಲಾ ಆಹಾರ ನಿರ್ವಹಿಸುವ ಸಿಬ್ಬಂದಿಯು ಸ್ವಚ್ಚವಾದ ಸಮವಸ್ತ್ರ ಧರಿಸಿ, ಹೇರ್‌ನೆಟ್/ತಲೆಕವಚ ಹಾಗೂ ಅಗತ್ಯವಿರುವ ರಕ್ಷಣಾತ್ಮಕ ಉಡುಪುಗಳನ್ನು ಬಳಸಬೇಕು. ಸಿಬ್ಬಂದಿಯ ಕೈಗಳು ಮತ್ತು ಉಗುರುಗಳನ್ನು ಸದಾ ಸ್ವಚ್ಛವಾಗಿಡಬೇಕು. ಎಲ್ಲಾ ಅಡುಗೆ ಮತ್ತು ಆಹಾರ ಸೇವಾ ಸಿಬ್ಬಂದಿಯ ಮಾನ್ಯ ವೈದ್ಯಕೀಯ ಪಿಟ್ನೆಸ್ ದಾಖಲೆಗಳನ್ನು ನಿರ್ವಹಿಸಬೇಕು. ಆಹಾರ ಸುರಕ್ಷತಾ ವಿಯಮಗಳು ಮತ್ತು ವೈಯಕ್ತಿಕ ನೈರ್ಮಲ್ಯದ ಕುರಿತು ಸಿಬ್ಬಂದಿಗೆ ನಿಯಮಿತ ತರಬೇತಿ ನೀಡಬೇಕು” ಎಂದು ಸೂಚಿಸಲಾಗಿದೆ.
ತ್ಯಾಜ್ಯ ಮತ್ತು ಬಳಸಿದ ಅಡುಗೆ ಎಣ್ಣೆಯ ವಿಲೇವಾರಿ
“ಅಡುಗೆ ಮನೆಯ ಆಹಾರ ತ್ಯಾಜ್ಯವನ್ನು ಸಮರ್ಪಕವಾಗಿ ಸಂಗ್ರಹಿಸಿ ನಿಯಮಾನುಸಾರ ವಿಲೇವಾರಿ ಮಾಡಬೇಕು. ಬಳಸಿದ ಅಡುಗೆ ಎಣ್ಣೆಯನ್ನು ಅನಧಿಕೃತವಾಗಿ ಮರುಬಳಕೆ ಮಾಡಬಾರದು. ಬಳಸಿದ ಅಡುಗೆ ಎಣ್ಣೆಯನ್ನು ಅಧಿಕೃತ/ಅನುಮೋದಿತ ಮಾರ್ಗಗಳ ಮೂಲಕ ಮಾತ್ರ ವಿಲೇವಾರಿ ಮಾಡಬೇಕು. ಆಹಾರ ತ್ಯಾಜ್ಯ ಮತ್ತು ಇತರೆ ತ್ಯಾಜ್ಯಗಳನ್ನು ಅಡುಗೆ ಪ್ರದೇಶದಲ್ಲಿ ದೀರ್ಫಕಾಲ ಸಂಗ್ರಹಿಸಿಡಬಾರದು” ಎಂದು ಆದೇಶಿಸಲಾಗಿದೆ.
ನಿಯಮಗಳ ಕಟ್ಟುನಿಟ್ಟಿನ ಅನುಸರಣೆಗೆ ಸೂಚನೆ
“ಮೇಲ್ಕಂಡ ಆಹಾರ ಸುರಕ್ಷತೆ, ನೈರ್ಮಲ್ಯ, ಸಂಗ್ರಹಣೆ, ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆ, ಕೀಟ ನಿಯಂತ್ರಣ ಹಾಗೂ ತಾಪಮಾನ ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲಾ ಕ್ರಮಗಳನ್ನು ಹೋಟೆಲ್‌ಗಳು, ಡಾಬಾಗಳು ಮತ್ತು ಇತರೆ ಆಹಾರ ಸೇವಾ ಸ೦ಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕು. ಅವಧಿ ಮುಗಿದ ಆಹಾರ ಉತ್ಪನ್ನಗಳ ಬಳಕೆ ಅಥವಾ ಸಂಗ್ರಹಣೆ, ಕಳಪೆ ನೈರ್ಮಲ್ಯ, ಆಹಾರ ಕಲುಷಿತಗೊಳ್ಳುವಿಕೆ, ಅಸುರಕ್ಷಿತ ನೀರಿನ ಬಳಕೆ ಅಥವಾ ಆಹಾರ ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಕಂಡುಬಂದಲ್ಲಿ, ನಿಯಮಗಳ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಇಲಾಖಾ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.


