ಜಾರ್ಖಂಡ್ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಆಗಸ್ಟ್ 16 ರಂದು (ಭಾನುವಾರ) ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ತೀವ್ರಗೊಂಡಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್, ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಪ್ರತಿಕೃತಿಗಳನ್ನು ದಹಿಸಿದರು.
ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟವು ತಮ್ಮ ಬೇಡಿಕೆಗಳ ಕುರಿತು “ಕಠಿಣ ಕ್ರಮ ಕೈಗೊಳ್ಳಲು ವಿಫಲವಾಗಿದೆ” ಎಂದು ಆರೋಪಿಸಿ ಪ್ರತಿಭಟನೆಕಾರರು ಮುಖ್ಯಮಂತ್ರಿ ಹೇಮಂತ್ ಸೊರೇನ್, ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಪ್ರತಿಕೃತಿಗಳನ್ನು ದಹಿಸಿದರು.
ಈ ಮಧ್ಯೆ, ರಾಜ್ಯ ಸರ್ಕಾರ ಸೋಮವಾರ ಹೊಸ ಸುತ್ತಿನ ಮಾತುಕತೆಗೆ ಪ್ರತಿಭಟನಾಕಾರರಿಗೆ ಆಹ್ವಾನ ನೀಡಿದೆ.
‘ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ಸುಧಾರಣಾ ಮಂಚ್’ ನೇತೃತ್ವದ ಪ್ರತಿಭಟನೆಯು ಭಾನುವಾರ 23 ನೇ ದಿನಕ್ಕೆ ಕಾಲಿಟ್ಟಿದೆ. ಆಪಾದಿತ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ಜೊತೆಗೆ ಜೆಎಸ್‌ಎಸ್‌ಸಿ-ಸಿಜಿಎಲ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ವಿದ್ಯಾರ್ಥಿಗಳು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು.
ಪ್ರತಿಭಟನಾ ಸ್ಥಳವಾದ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಿಂದ ಆಲ್ಬರ್ಟ್ ಎಕ್ಕಾ ಚೌಕ್‌ಗೆ ಪಂಜಿನ ಮೆರವಣಿಗೆ ನಡೆಸಿ, ಅಲ್ಲಿ ಅವರು ಪ್ರತಿಕೃತಿಗಳನ್ನು ದಹಿಸಿದರು. ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿಯೂ ಪ್ರತಿಕೃತಿಗಳನ್ನು ದಹಿಸಲಾಯಿತು.
ಆಡಳಿತಾರೂಢ ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟವು ತಮ್ಮ ಬೇಡಿಕೆಗಳ ಕುರಿತು ಸ್ಪಷ್ಟವಾದ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು. ಉದ್ಯೋಗ ಆಕಾಂಕ್ಷಿಗಳ ಭವಿಷ್ಯದ ವಿಷಯಗಳ ಬಗ್ಗೆ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಉದ್ವಿಗ್ನತೆಯ ಮಧ್ಯೆ, ಜಾರ್ಖಂಡ್ ಸರ್ಕಾರವು ಆಗಸ್ಟ್ 17 ರ ಸೋಮವಾರ ಮಧ್ಯಾಹ್ನ 2 ಗಂಟೆಗೆ ಪ್ರತಿಭಟನಾಕಾರರ ಪ್ರತಿನಿಧಿಗಳನ್ನು ಹೊಸ ಸುತ್ತಿನ ಮಾತುಕತೆಗೆ ಆಹ್ವಾನಿಸಿತು.
ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ಪ್ರತಿಭಟನಾಕಾರರು, ಉಪ-ವಿಭಾಗೀಯ ಅಧಿಕಾರಿ, ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನಡುವೆ ನಡೆದ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ವಿದ್ಯಾರ್ಥಿಗಳು ತಮ್ಮ ಕಾನೂನು ಸಲಹೆಗಾರರೊಂದಿಗೆ ಚರ್ಚೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ಸುಧಾರಣಾ ಮಂಚ್’ ರಾಜ್ಯ ಅತಿಥಿ ಗೃಹದಲ್ಲಿ ಮಾತುಕತೆಗಾಗಿ ಸರ್ಕಾರದ ಪ್ರಸ್ತಾಪವನ್ನು ಒಪ್ಪಿಕೊಂಡಿದೆ. ಆದರೆ, ಅದು ತನ್ನ ಪ್ರಮುಖ ಬೇಡಿಕೆಗಳಿಂದ ಹಿಂಜರಿಯುವುದಿಲ್ಲ ಎಂದು ಹೇಳಿದೆ.
“ನಾವು ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಲು ಬಯಸುತ್ತಿರುವುದರಿಂದ ಖಂಡಿತವಾಗಿಯೂ ಹೋಗುತ್ತೇವೆ. ನಮ್ಮ ಎರಡು ಬೇಡಿಕೆಗಳ ಬಗ್ಗೆ ನಾವು ದೃಢವಾಗಿದ್ದೇವೆ, ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ಮತ್ತು ಜೆಎಸ್‌ಎಸ್‌ಸಿ-ಸಿಜಿಎಲ್ ಪರೀಕ್ಷೆಗಳ ರದ್ದತಿ ಸೇರಿವೆ” ಎಂದು ಅದರ ನಾಯಕ ರವೀಂದ್ರ ಪಾಸ್ವಾನ್ ಸುದ್ದಿಗಾರರಿಗೆ ತಿಳಿಸಿದರು.
ಮಾತುಕತೆಗೆ ನಿಯೋಗದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಸೋಮವಾರ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ಪ್ರಸ್ತಾವಿತ ಸಭೆಯು ಸರ್ಕಾರ ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ನಡುವಿನ ಏಳನೇ ಸುತ್ತಿನ ಮಾತುಕತೆಯಾಗಲಿದೆ. ಆಗಸ್ಟ್ 9 ರಂದು ನಡೆದ ಹಿಂದಿನ ಸುತ್ತಿನ ಮಾತುಕತೆಯು ಯಾವುದೇ ಪ್ರಗತಿಯನ್ನು ನೀಡಲಿಲ್ಲ.
ಆಗಸ್ಟ್ 15 ರ ಶನಿವಾರದಂದು, ಆಗಸ್ಟ್ 20 ರಂದು ಮುಖ್ಯಮಂತ್ರಿಯವರ ನಿವಾಸಕ್ಕೆ ಘೇರಾವ್ ಹಾಕುವುದಾಗಿ ಪ್ರತಿಭಟನಾಕಾರರು ಘೋಷಿಸಿದ್ದರು. ಜಾರ್ಖಂಡ್‌ನಾದ್ಯಂತದ ವಿದ್ಯಾರ್ಥಿಗಳು ಪ್ರತಿಭಟನೆಗಾಗಿ ರಾಂಚಿಯಲ್ಲಿ ಸೇರುವಂತೆ ಮನವಿ ಮಾಡಿದ್ದರು.
“ಜೆಎಂಎಂ ಮತ್ತು ಕಾಂಗ್ರೆಸ್ ಎರಡೂ ನಮ್ಮೊಂದಿಗೆ ರಾಜಕೀಯ ಮಾಡುತ್ತಿವೆ, ಆದ್ದರಿಂದ ನಾವು ಸಿಎಂ ರಾಜೀನಾಮೆಯನ್ನು ಕೋರುತ್ತೇವೆ” ಎಂದು ಪಾಸ್ವಾನ್ ಆರೋಪಿಸಿದರು.
ಮುಖ್ಯಮಂತ್ರಿ ತಮ್ಮ ಕಳವಳಗಳ ಬಗ್ಗೆ ಕ್ರಮ ಕೈಗೊಳ್ಳಲು ವಿಫಲವಾದರೆ ಜೆಎಂಎಂ ನೇತೃತ್ವದ ಸರ್ಕಾರಕ್ಕೆ ಕಾಂಗ್ರೆಸ್ ತನ್ನ ಬೆಂಬಲವನ್ನು ಹಿಂತೆಗೆದುಕೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
14 ನೇ ಜೆಪಿಎಸ್‌ಸಿ ಪರೀಕ್ಷೆಯನ್ನು ರದ್ದುಗೊಳಿಸುವುದು, ಆಪಾದಿತ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ, ತನಿಖಾ ವರದಿಯನ್ನು ಸಾರ್ವಜನಿಕಗೊಳಿಸುವುದು ಸೇರಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿ ಸಂಘಟನೆ ಒತ್ತಾಯಿಸುತ್ತಿದೆ.
ಜಾರ್ಖಂಡ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ ಭಾನುವಾರ ವಿದ್ಯಾರ್ಥಿಗಳ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಸೊರೇನ್ ಅವರನ್ನು ಒತ್ತಾಯಿಸಿದರು.
“ವಿದ್ಯಾರ್ಥಿಗಳು ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ, ಸರ್ಕಾರ ಅದಕ್ಕೆ ಆದೇಶಿಸಬೇಕು ಎಂದು ನಾನು ಭಾವಿಸುತ್ತೇನೆ. ಸರ್ಕಾರ ಇದಕ್ಕೆ ಏಕೆ ಭಯಪಡುತ್ತದೆ?” ಎಂದು ಮರಾಂಡಿ ಹೇಳಿದರು.
ಸರ್ಕಾರದ ನಿಷ್ಕ್ರಿಯತೆ ಮುಂದುವರೆದರೆ ಹೆಚ್ಚಿನ ಯುವಕರು ಮತ್ತು ವಿದ್ಯಾರ್ಥಿಗಳು ಬೀದಿಗಿಳಿಯಬೇಕಾಗುತ್ತದೆ ಎಂದು ಅವರು ಹೇಳಿದರು.


