2027ರ ಜನಗಣತಿ ಪ್ರಶ್ನಾವಳಿಯಲ್ಲಿ ಪೋಷಕರ ಧರ್ಮ ಹಾಗೂ ಜನ್ಮಸ್ಥಳದ ಕುರಿತಾದ ವಿವರಗಳನ್ನು ಸಂಗ್ರಹಿಸಲು ಉದ್ದೇಶಿಸಿರುವುದರ ವಿರುದ್ಧ ಸಿಪಿಐ(ಎಂ) ತೀವ್ರ ಆತಂಕ ವ್ಯಕ್ತಪಡಿಸಿದ್ದು, ಈ ಕ್ರಮವು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೆ ತರುವ ಮುನ್ಸೂಚನೆಯಾಗಿದೆ ಎಂದು ಎಚ್ಚರಿಸಿದೆ. ಜನಗಣತಿಯನ್ನು ಸಾಂಪ್ರದಾಯಿಕ ಜನಸಂಖ್ಯಾ ದತ್ತಾಂಶ ಸಂಗ್ರಹಣೆಯ ಮಿತಿಯಿಂದ ಹೊರತಂದು, ವ್ಯಕ್ತಿಗತ ಗುರುತುಗಳ ಮೂಲಕ ಪೌರತ್ವ, ಮತದಾರರ ಪಟ್ಟಿ ಹಾಗೂ ಇತರ ಸರ್ಕಾರಿ ದತ್ತಾಂಶಗಳೊಂದಿಗೆ ಸಂಯೋಜಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಪಕ್ಷ ಆರೋಪಿಸಿದೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಅವರು ಈ ಕುರಿತು ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಮುಂಬರುವ ಜನಗಣತಿ ಪ್ರಶ್ನಾವಳಿಯಲ್ಲಿ ಪೋಷಕರ ಜನ್ಮಸ್ಥಳ ಮತ್ತು ಧರ್ಮದ ವಿವರಗಳನ್ನು ಸೇರಿಸಲಾಗುತ್ತಿದ್ದು, ಇದರ ಮೂಲಕ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಪ್ರಕ್ರಿಯೆಯನ್ನು ಹಿಂಬಾಗಿಲ ಮೂಲಕ ಜಾರಿಗೆ ತರಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ. ಎನ್‌ಪಿಆರ್‌ನಲ್ಲಿ ಸಂಗ್ರಹಿಸಿದ ವಿವರಗಳನ್ನು ಆಧರಿಸಿ ಎನ್‌ಆರ್‌ಸಿ ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯದ 2018-19ರ ವರದಿಯಲ್ಲೇ ಉಲ್ಲೇಖಿಸಲಾಗಿದೆ ಎಂಬುದನ್ನು ಅವರು ಬೆಟ್ಟುಮಾಡಿದ್ದಾರೆ.
ಜನಗಣತಿ ಪ್ರಶ್ನಾವಳಿಯಲ್ಲಿ ಆಧಾರ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗಳಂತಹ ಸೂಕ್ಷ್ಮ ವೈಯಕ್ತಿಕ ವಿವರಗಳನ್ನು ಕೇಳಲಾಗುತ್ತಿದೆ. ಇವುಗಳಲ್ಲಿ ಕೆಲವು ಐಚ್ಛಿಕ ಎಂದು ಹೇಳಲಾಗಿದ್ದರೂ, ಸರ್ಕಾರಿ ಎಣಿಕೆದಾರರು ಪ್ರಶ್ನಿಸಿದಾಗ ಸಾರ್ವಜನಿಕರು ಈ ವಿವರಗಳನ್ನು ನೀಡಲು ಒತ್ತಡಕ್ಕೆ ಒಳಗಾಗುತ್ತಾರೆ ಎಂದು ಸಿಪಿಐ(ಎಂ) ಕಳವಳ ವ್ಯಕ್ತಪಡಿಸಿದೆ. ಈ ದತ್ತಾಂಶವನ್ನು ಸರ್ಕಾರಿ ಯೋಜನೆಗಳು ಹಾಗೂ ಮತದಾರರ ಪಟ್ಟಿಗಳೊಂದಿಗೆ ಲಿಂಕ್ ಮಾಡುವ ಸಾಧ್ಯತೆಯಿದೆ ಎಂದು ಪಕ್ಷ ಎಚ್ಚರಿಸಿದೆ.
ಇದರೊಂದಿಗೆ, ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಪುನರ್ವಿಂಗಡಣೆಗೆ ಜನಗಣತಿ ಆಧಾರವಾಗುವುದರಿಂದ, ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ಜಾರಿಗೆ ತಂದ ರಾಜ್ಯಗಳು ರಾಜಕೀಯ ಪ್ರಾತಿನಿಧ್ಯವನ್ನು ಕಳೆದುಕೊಳ್ಳುವ ಮೂಲಕ ಶಿಕ್ಷೆಗೆ ಒಳಗಾಗಬಾರದು ಎಂದು ಸಿಪಿಐ(ಎಂ) ಪ್ರತಿಪಾದಿಸಿದೆ. ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಹೊರತುಪಡಿಸಿ ಇತರ ಜಾತಿಗಳ ಎಣಿಕೆಯಲ್ಲಿ ಸೂಕ್ತ ವರ್ಗೀಕರಣ ಇಲ್ಲದಿರುವುದು ಹಾಗೂ ವಿಕಲಚೇತನರ 21 ವರ್ಗಗಳ ಪೈಕಿ ಕೇವಲ 9 ವರ್ಗಗಳನ್ನು ಮಾತ್ರ ಪರಿಗಣಿಸಿರುವುದನ್ನೂ ಪಕ್ಷ ಪ್ರಶ್ನಿಸಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಸರ್ವಪಕ್ಷ ಸಭೆ ಕರೆಯಬೇಕು, ವೈಯಕ್ತಿಕ ಹಾಗೂ ಪೋಷಕರ ಸೂಕ್ಷ್ಮ ವಿವರಗಳನ್ನು ಪ್ರಶ್ನಾವಳಿಯಿಂದ ತೆಗೆದುಹಾಕಬೇಕು ಮತ್ತು ಜನಗಣತಿ ದತ್ತಾಂಶವನ್ನು ಇತರ ಡೇಟಾಬೇಸ್‌ಗಳೊಂದಿಗೆ ಸಂಯೋಜಿಸದಂತೆ ಕಟ್ಟುನಿಟ್ಟಿನ ನಿಯಮ ರೂಪಿಸಬೇಕು ಎಂದು ಸಿಪಿಐ(ಎಂ) ಒತ್ತಾಯಿಸಿದೆ.


