ಲೋಕಸಭೆ ವಿಪಕ್ಷ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ‘ಛಾತ್ರೋನ್ ಕೀ ಗೂಂಜ್’ ಅಭಿಯಾನದ ವೇಳೆ ನೀಡಲಾದ ಹೇಳಿಕೆಗಳನ್ನು ಫ್ಯಾಕ್ಟ್-ಚೆಕ್ (ಸತ್ಯಾಸತ್ಯತೆ ಪರಿಶೀಲನೆ) ಮಾಡುವ ವೆಬ್ಸೈಟ್ ಒಂದನ್ನು ಉಲ್ಲೇಖಿಸಿರುವ ಬಿಜೆಪಿ, “ರಾಹುಲ್ ಗಾಂಧಿ ಯುವಕರನ್ನು ಹಾದಿ ತಪ್ಪಿಸುತ್ತಿದ್ದಾರೆ. ಅಲ್ಲದೆ ಅವರ ಸುಳ್ಳುಗಳಿಗೆ ಇನ್ಮುಂದೆ ಸೂಕ್ತ ಮುಖಾಮುಖಿ ಸಾಕ್ಷ್ಯಾಧಾರಗಳ ಮೂಲಕ ಉತ್ತರ ನೀಡಲಾಗುವುದು” ಎಂದು ಹೇಳಿದೆ.
“ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಹತಾಶೆಯಿಂದ ರಾಹುಲ್ ಗಾಂಧಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿರುವ ಬಿಜೆಪಿ, ತನ್ನ ವಕ್ತಾರರ ದಂಡನ್ನೇ ಅಖಾಡಕ್ಕಿಳಿಸಿ ರಾಹುಲ್ ವಿರುದ್ಧ ಕಟು ವಾಗ್ದಾಳಿ ನಡೆಸಿದೆ. ‘ಜೂಠ್ ಕೀ ಗೂಂಜ್’ (ಸುಳ್ಳಿನ ಸದ್ದು) ಎಂಬ ಶೀರ್ಷಿಕೆಯ ಈ ವೆಬ್ಸೈಟ್ ರಾಹುಲ್ ಅವರ ಅಭಿಯಾನಕ್ಕೆ ತಕ್ಕ ತಿರುಗೇಟು ನೀಡಲಿದೆ ಎಂದು ಬಣ್ಣಿಸಿರುವ ಬಿಜೆಪಿ ನಾಯಕರು, ತಮ್ಮ ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ವೆಬ್ಸೈಟ್ ಲಿಂಕ್ ಹಂಚಿಕೊಂಡಿದ್ದಾರೆ.
ಬಿಜೆಪಿ ಸಂಸದ ಹಾಗೂ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಮಾತನಾಡಿ, “ರಾಹುಲ್ ಗಾಂಧಿ ಸುಳ್ಳುಗಳ ಧ್ವಜವಾಹಕ. ಪ್ರಧಾನಿ ಮೋದಿ ವಿರುದ್ಧದ ಹತಾಶೆಯಿಂದ ಅವರು ಏನೇ ಸುಳ್ಳು ಹರಡಿದರೂ, ಈಗ ಪ್ರತಿಯೊಂದು ಸುಳ್ಳನ್ನು ಸಾಕ್ಷ್ಯಗಳ ಸಮೇತ ಬ ಬಯಲು ಮಾಡಲಾಗುತ್ತಿದೆ. ಜೂಠ್ ಕೀ ಗೂಂಜ್ ವೆಬ್ಸೈಟ್ ರಾಹುಲ್ ಗಾಂಧಿ ಅವರ ಪ್ರತಿ ಪ್ರತಿಪಾದನೆಯ ನೈಜತೆಯನ್ನು ಬಹಿರಂಗಪಡಿಸುತ್ತಿದೆ” ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಪಕ್ಷದ ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥ ಮತ್ತು ಮುಖ್ಯ ವಕ್ತಾರ ಅನಿಲ್ ಬಲೂನಿ ಮಾತನಾಡಿ, “ರಾಹುಲ್ ಗಾಂಧಿ ಸುಳ್ಳು ಹೇಳುತ್ತಿರಲಿ, ತೊಂದರೆಯಿಲ್ಲ… ಆದರೆ ಈಗ ಪ್ರತಿಯೊಂದು ಸುಳ್ಳಿಗೂ ಸತ್ಯಗಳ ಮೂಲಕವೇ ಉತ್ತರ ಸಿಗಲಿದೆ. ಸುಳ್ಳಿನ ಪ್ರಚಾರ ಎಷ್ಟು ವೇಗವಾಗಿ ಸದ್ದು ಮಾಡುತ್ತದೋ, ಸತ್ಯವೂ ಅಷ್ಟೇ ಜೋರಾಗಿ ಹೊರಬರುತ್ತದೆ” ಎಂದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಮಾಧ್ಯಮ ಸಹ-ಉಸ್ತುವಾರಿ ಪ್ರದೀಪ್ ಭಂಡಾರಿ ಮಾತನಾಡಿ, ರಾಹುಲ್ ಗಾಂಧಿ ಅವರ “ನಕಲಿ ನಿರೂಪಣೆ”ಗೆ ಪ್ರತಿಯಾಗಿ ದೇಶದ ಯುವಕರೇ ಈ ವೆಬ್ಸೈಟ್ ಪ್ರಾರಂಭಿಸಿದ್ದಾರೆ. ಕಾಂಗ್ರೆಸ್ ಹಾಗೂ ಅದರ ಬೆಂಬಲಿಗರ ಪ್ರಚಾರವನ್ನು ಯುವಜನತೆ ಬಯಲು ಮಾಡುತ್ತಿದ್ದಾರೆ ಎಂದು ಹೇಳಿದರು.
ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಂಡಾರಿ, “ರಾಹುಲ್ ಗಾಂಧಿ ಅವರ ಸಾಲು ಸಾಲು ಸುಳ್ಳುಗಳಿಂದ ದೇಶದ ಯುವಕರು ಬೇಸತ್ತಿದ್ದಾರೆ. ರಾಹುಲ್ ಗಾಂಧಿ ತಮ್ಮ ಕಳೆದ ನಾಲ್ಕು ಕಾರ್ಯಕ್ರಮಗಳಲ್ಲಿ 40 ಪ್ರತಿಪಾದನೆಗಳನ್ನು ಮಾಡಿದ್ದು, ಯುವಕರ ಪ್ರಕಾರ ಆ 40 ಹೇಳಿಕೆಗಳೂ ಸುಳ್ಳು ಅಥವಾ ಹಾದಿತಪ್ಪಿಸುವಂತಿವೆ” ಎಂದು ಅವರು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರೇಮ್ ಶುಕ್ಲಾ ಮತ್ತು ವಕ್ತಾರ ಪ್ರತ್ಯೂಷ್ ಕಾಂತ್ ಕೂಡ ಈ ವೆಬ್ಸೈಟ್ ದಾಖಲಿತ ಆಧಾರಗಳ ಮೂಲಕ ರಾಹುಲ್ ಗಾಂಧಿ ಅವರ ಪ್ರತಿಪಾದನೆಗಳನ್ನು ವ್ಯವಸ್ಥಿತವಾಗಿ ಪರಿಶೀಲಿಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯುತ್ತಿದೆ ಎಂದು ಪ್ರತಿಪಾದಿಸಿದರು.
ಸುಪ್ರೀಂ ಕೋರ್ಟ್ ಹಿರಿಯ ವಕೀಲ ರಮೇಶ್ ಜೇಠ್ಮಲಾನಿ ಕೂಡ ಬಿಜೆಪಿಯ ಧ್ವನಿಗೆ ಧ್ವನಿಗೂಡಿಸಿ, ರಾಹುಲ್ ಗಾಂಧಿ ಅವರ ‘ಛಾತ್ರೋನ್ ಕೀ ಗೂಂಜ್’ ಅಭಿಯಾನಕ್ಕೆ ಜೆನ್-ಝೀ ಯುವಜನತೆ ‘ಜೂಠ್ ಕೀ ಗೂಂಜ್’ ಮೂಲಕ ಸೂಕ್ತ ಉತ್ತರ ನೀಡಿದ್ದಾರೆ ಎಂದರು. ರಾಹುಲ್ ಗಾಂಧಿ 4 ರ್ಯಾಲಿಗಳಲ್ಲಿ ನೀಡಿದ 40 ಹೇಳಿಕೆಗಳನ್ನು 134 ಆಧಾರಗಳನ್ನು ಬಳಸಿ ಪರಿಶೀಲಿಸಲಾಗಿದ್ದು, ಅದರಲ್ಲಿ 29 ಸಂಪೂರ್ಣ ಸುಳ್ಳು ಮತ್ತು 11 ಹಾದಿತಪ್ಪಿಸುವಂತಿವೆ ಎಂದು ಅವರು ಹೇಳಿದರು.
ಯುವಕರು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರಿಕರಿಸಿ ರಾಹುಲ್ ಗಾಂಧಿ ಇದುವರೆಗೆ ಈ ಅಭಿಯಾನದಡಿ 4 ಕಾರ್ಯಕ್ರಮಗಳನ್ನು ನಡೆಸಿದ್ದಾರೆ.


