Homeದಲಿತ್ ಫೈಲ್ಸ್ತಮಿಳುನಾಡು| ದಲಿತ ಯುವಕನ ಲಾಕಪ್ ಡೆತ್ ಪ್ರಕರಣ; ಆರು ಜನ ಪೊಲೀಸರ ವಿರುದ್ಧ ಪ್ರಕರಣ ದಾಖಲು

ತಮಿಳುನಾಡು| ದಲಿತ ಯುವಕನ ಲಾಕಪ್ ಡೆತ್ ಪ್ರಕರಣ; ಆರು ಜನ ಪೊಲೀಸರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಕಲೆದ ಮಾರ್ಚ್‌ನಲ್ಲಿ ತಮಿಳುನಾಡಿನ ಶಿವಗಂಗೈ ಜಿಲ್ಲೆಯಲ್ಲಿ ನಡೆಸಿದ್ದ 26 ವರ್ಷದ ದಲಿತ ಯುವಕ ಆಕಾಶ್ ಡೆಲಿಸನ್ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿ-ಸಿಐಡಿ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ (ಚಾರ್ಜ್‌ಶೀಟ್), ಆರೋಪಿಗಳಾದ ಆರು ಮಂದಿ ಪೊಲೀಸರಿಗೆ ಯುವಕ ಪರಿಶಿಷ್ಟ ಜಾತಿಯ (ಎಸ್‌ಸಿ) ‘ದೇವೇಂದ್ರಕುಲ ವೆಳ್ಳಾಲರ್’ ಸಮುದಾಯಕ್ಕೆ ಸೇರಿದವನೆಂಬುದು ತಿಳಿದಿತ್ತು ಮತ್ತು ಆತನನ್ನು ಕೊಲ್ಲುವ ಉದ್ದೇಶದಿಂದಲೇ ದಾಳಿ ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ ಎಂದು ‘ದಿ ನ್ಯೂಸ್‌ ಮಿನಿಟ್’ ಪೋರ್ಟಲ್‌ ವಿಶೇಷ ವರದಿ ಮಾಡಿದೆ.

ಆರೋಪಿಗಳಾದ ಆರೂ ಮಂದಿ ಪೊಲೀಸರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಿವಗಂಗೈ ಜಿಲ್ಲೆಯ ಆಕಾಶ್, ಮಾನಾಮಧುರೈ ಪೊಲೀಸರಿಂದ ಬಂಧನಕ್ಕೊಳಗಾದ ಎರಡು ದಿನಗಳ ನಂತರ ಅಂದರೆ ಮಾರ್ಚ್ 8 ರಂದು ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ (ಜಿಆರ್‌ಎಚ್) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಕೊಲೆ ಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾರ್ಚ್ 6 ರಂದು ಆಕಾಶ್ ಮತ್ತು ಗುಣ ಎಂಬ ಮತ್ತೊಬ್ಬ ಯುವಕನನ್ನು ಪೊಲೀಸರು ಬಂಧಿಸಿದ್ದರು.

ಆಕಾಶ್ ಅವರ ಕಸ್ಟಡಿ ಚಿತ್ರಹಿಂಸೆ ಮತ್ತು ಕೊಲೆಗೆ ಸಂಬಂಧಿಸಿದ ದೋಷಾರೋಪಣೆ ಪಟ್ಟಿಯನ್ನು ಜೂನ್ 18 ರಂದು ಮಧುರೈನ ನಾಗರಿಕ ಹಕ್ಕುಗಳ ರಕ್ಷಣೆ (ಪಿಸಿಆರ್) ಪ್ರಕರಣಗಳ 3 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಎದುರು ಸಲ್ಲಿಸಲಾಗಿದ್ದರೂ, ಆಕಾಶ್ ಅವರ ಪೋಷಕರಿಗೆ ಇತ್ತೀಚೆಗಷ್ಟೇ ಇದರ ಪ್ರತಿ ಲಭಿಸಿದೆ. ಇದರಲ್ಲಿ ಇನ್ಸ್‌ಪೆಕ್ಟರ್ ದಿಲೀಪನ್, ಸಬ್ ಇನ್ಸ್‌ಪೆಕ್ಟರ್ ಕೆ. ಗುಹನ್, ಗ್ರೇಡ್-1 ಕಾನ್‌ಸ್ಟೇಬಲ್ ಎಸ್. ಕಾಳೀಶ್ವರನ್, ಚಾಲಕ ಕಾನ್‌ಸ್ಟೇಬಲ್ ಪಿ. ಮಹೇಂದ್ರನ್, ಕಾನ್‌ಸ್ಟೇಬಲ್ ಎಲ್. ದೈವೇಂದ್ರನ್ ಮತ್ತು ಕಾನ್‌ಸ್ಟೇಬಲ್ ಬಿ. ಪಳನಿಯಪ್ಪನ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರದ ವ್ಯಕ್ತಿಯು ಎಸ್‌ಸಿ/ಎಸ್‌ಟಿ ವ್ಯಕ್ತಿಯ ಜಾತಿ ಅಥವಾ ಬುಡಕಟ್ಟು ಗುರುತನ್ನು ತಿಳಿದು ಆತನ ವಿರುದ್ಧ ಅಪರಾಧ ಎಸಗಿದಾಗ ಅನ್ವಯವಾಗುವ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(2)(ವಿ) ಅಡಿಯಲ್ಲಿ ಸಿಬಿ-ಸಿಐಡಿ ಈ ಆರೂ ಮಂದಿ ವಿರುದ್ಧ ಪ್ರಕರಣ ದಾಖಲಿಸಿದೆ. ಇದರೊಂದಿಗೆ ಕೊಲೆ ಹಾಗೂ ಸಾಕ್ಷ್ಯ ನಾಶ ಮತ್ತು ಸುಳ್ಳು ಮಾಹಿತಿ ನೀಡಿದ ಆರೋಪಗಳನ್ನು ಹೊರಿಸಲಾಗಿದೆ.

ಮೊದಲ ಆರೋಪಿಯಾಗಿರುವ ಇನ್ಸ್‌ಪೆಕ್ಟರ್ ದಿಲೀಪನ್, ಸಾರ್ವಜನಿಕ ಸೇವಕನಾಗಿದ್ದುಕೊಂಡು ಇನ್ನೊಬ್ಬರಿಗೆ ಹಾನಿ ಮಾಡುವ ಉದ್ದೇಶದಿಂದ ತಿಳಿದಿದ್ದರೂ ಸುಳ್ಳು ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಯನ್ನು ಸೃಷ್ಟಿಸಿದ ಹೆಚ್ಚುವರಿ ಆರೋಪವನ್ನು ಎದುರಿಸುತ್ತಿದ್ದಾರೆ.

ಸಂತ್ರಸ್ತ ಮತ್ತು ಆರೋಪಿಗಳಿಬ್ಬರ ಜಾತಿ ಗುರುತನ್ನು ದೋಷಾರೋಪಣೆ ಪಟ್ಟಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.

ಆಕಾಶ್ ಎಸ್‌ಸಿ ವರ್ಗದ ಅಡಿಯಲ್ಲಿ ಬರುವ ಹಿಂದೂ ದೇವೇಂದ್ರಕುಲ ವೆಳ್ಳಾಲರ್ ಸಮುದಾಯಕ್ಕೆ ಸೇರಿದವನೆಂದು ಗುರುತಿಸಲಾಗಿದೆ. ಇನ್ಸ್‌ಪೆಕ್ಟರ್ ದಿಲೀಪನ್ ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದ ಹಿಂದೂ ಪಿರಮಲೈ ಕಲ್ಲರ್ ಸಮುದಾಯಕ್ಕೆ ಸೇರಿದವನಾಗಿದ್ದು, ಶಿವಗಂಗೈ ಸೇರಿದಂತೆ ನಿರ್ದಿಷ್ಟ ಜಿಲ್ಲೆಗಳಲ್ಲಿ ಈ ಸಮುದಾಯವನ್ನು ಅಧಿಸೂಚಿತವಲ್ಲದ ಬುಡಕಟ್ಟು (ಡಿಎನ್‌ಟಿ) ಎಂದು ವರ್ಗೀಕರಿಸಲಾಗಿದೆ. ಗುಹನ್ ಹಿಂದೂ ಕಲ್ಲರ್ ಸಮುದಾಯಕ್ಕೆ, ಕಾಳೀಶ್ವರನ್ ಹಿಂದೂ ತುಳುವ ವೆಳ್ಳಾಲರ್ ಸಮುದಾಯಕ್ಕೆ, ಮಹೇಂದ್ರನ್ ಹಿಂದೂ ಗೌಂಡರ್ ಸಮುದಾಯಕ್ಕೆ ಹಾಗೂ ದೈವೇಂದ್ರನ್ ಮತ್ತು ಪಳನಿಯಪ್ಪನ್ ಹಿಂದೂ ಅಗಮುಡಾಯಾರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರೆಲ್ಲರೂ ತಮಿಳುನಾಡಿನ ಬಿಸಿ (ಹಿಂದುಳಿದ ವರ್ಗ) ವರ್ಗಕ್ಕೆ ಸೇರುತ್ತಾರೆ.

ಆಕಾಶ್ ಪರಿಶಿಷ್ಟ ಜಾತಿ ಎಂಬುದು ಪೊಳೀಸರಿಗೆ ತಿಳಿದಿತ್ತು

ಪೊಲೀಸರು ನಡೆಸಿದ ಹಲ್ಲೆಯು ಆಕಾಶ್‌ನ ಜಾತಿಯ ಗುರುತಿಗೆ ನೇರ ಸಂಬಂಧ ಹೊಂದಿದೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

“ಮೃತ ಆಕಾಶ್ ದೇವೇಂದ್ರಕುಲ ವೆಳ್ಳಾಲರ್ ಸಮುದಾಯಕ್ಕೆ ಸೇರಿದವನೆಂದು ಸಂಪೂರ್ಣವಾಗಿ ತಿಳಿದಿದ್ದ ಆರೋಪಿಗಳು, ಮಾರ್ಚ್ 6, 2026 ರಂದು ಸಂಜೆ 5.30 ರ ಸುಮಾರಿಗೆ ಮಾನಂಬಾತಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿದ್ದ ನೀಲಗಿರಿ ಮರಗಳಿಂದ ಕೂಡಿದ ನಿರ್ಜನ ಪ್ರದೇಶಕ್ಕೆ ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದಾರೆ ಎಂಬುದು ಇದುವರೆಗಿನ ತನಿಖೆಯಿಂದ ತಿಳಿದುಬಂದಿದೆ” ಎಂದು ದೋಷಾರೋಪಣೆ ಪಟ್ಟಿಯಲ್ಲಿ ತಿಳಿಸಲಾಗಿದೆ.

“ಆಕಾಶ್‌ನನ್ನು ಕೊಲ್ಲುವ ಉದ್ದೇಶದಿಂದಲೇ” ಆರೋಪಿಗಳು ಅಲ್ಲಿಗೆ ಕರೆದೊಯ್ದಿದ್ದರು. ಆರೂ ಮಂದಿ ಸೇರಿ ಆತನ ಬಲ ಮಂಡಿಯ ಕೆಳಗೆ ಹಾಗೂ ಹಿಮ್ಮಡಿಯ ಮೇಲೆ ಕಬ್ಬಿಣದ ರಾಡ್‌ನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದರಿಂದ ಮೂಳೆ ಮುರಿತಕ್ಕೊಳಗಾಗಿತ್ತು ಎಂದು ಹೇಳಲಾಗಿದೆ.

ಈ ಗಾಯಗಳಿಂದಾಗಿ ಉಂಟಾದ ‘ಫ್ಯಾಟ್ ಎಂಬೋಲಿಸಮ್’ (ಕೊಬ್ಬಿನ ಪ್ಲಗ್ ರಕ್ತನಾಳ ಸೇರುವುದು) ಆಕಾಶ್‌ನ ಸಾವಿಗೆ ನೇರ ಕಾರಣವಾಯಿತು ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಲಾಗಿದೆ.

ಎಸ್‌ಸಿ/ಎಸ್‌ಟಿ ಕಾಯ್ದೆಯಡಿಯ ಆರೋಪವು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಎಸ್‌ಸಿ ಅಥವಾ ಎಸ್‌ಟಿ ಸದಸ್ಯರಲ್ಲದ ವ್ಯಕ್ತಿಯು ಎಸ್‌ಸಿ/ಎಸ್‌ಟಿ ವ್ಯಕ್ತಿಯ ವಿರುದ್ಧ ಐಪಿಸಿ/ಬಿಎನ್‌ಎಸ್ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿದಾಗ ಸೆಕ್ಷನ್ 3(2)(ವಿ) ಅನ್ವಯಿಸುತ್ತದೆ. ಈ ಪ್ರಕರಣದಲ್ಲಿ, ಆರು ಮಂದಿ ಪೊಲೀಸರಿಗೆ ಆಕಾಶ್‌ನ ಎಸ್‌ಸಿ ಗುರುತಿನ ಬಗ್ಗೆ ತಿಳಿದಿತ್ತು ಎಂದು ಸಿಬಿ-ಸಿಐಡಿ ಸ್ಪಷ್ಟವಾಗಿ ಹೇಳಿದೆ.

ಆಕಾಶ್ ಕಾಲು ಮುರಿಯಲು ಮೊದಲೇ ಪ್ಲಾನ್‌ ಮಾಡಿದ್ದ ಆರೋಪಿಗಳು

ಆಕಾಶ್‌ ಮೇಲೆ ಹಲ್ಲೆ ನಡೆಸಿದ ಸ್ಥಳಕ್ಕೆ ಹೇಗೆ ಕರೆದೊಯ್ಯಲಾಯಿತು ಎಂಬುದರ ವಿವರವಾದ ಮಾಹಿತಿಯನ್ನೂ ದೋಷಾರೋಪಣೆ ಪಟ್ಟಿಯಲ್ಲಿ ನೀಡಲಾಗಿದೆ. ದೋಷಾರೋಪಣೆ ಪಟ್ಟಿಯ ಪ್ರಕಾರ, ಇನ್ಸ್‌ಪೆಕ್ಟರ್ ದಿಲೀಪನ್ ಸಬ್-ಇನ್ಸ್‌ಪೆಕ್ಟರ್ ಗುಹನ್‌ಗೆ ಆಕಾಶ್ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಿ ಆತನ ಕಾಲನ್ನು ಮುರಿಯಬೇಕು ಎಂದು ಹೇಳಿದ್ದಲ್ಲದೆ, ಅದಕ್ಕೆ ಸೂಕ್ತವಾದ ಸ್ಥಳವನ್ನು ಗುರುತಿಸುವಂತೆ ಸೂಚಿಸಿದ್ದ.

ಗುಹನ್, ಕಾನ್‌ಸ್ಟೇಬಲ್‌ಗಳಾದ ದೈವೇಂದ್ರನ್ ಮತ್ತು ಪಳನಿಯಪ್ಪನ್ ಅವರೊಂದಿಗೆ ಮಧುರೈನಿಂದ ಮಾನಂಬಾತಿಗೆ ಹೋಗುವ ರಸ್ತೆಯಲ್ಲಿ ನೀಲಗಿರಿ ಮರಗಳಿಂದ ಸುತ್ತುವರಿದ ಮಣ್ಣಿನ ರಸ್ತೆಯ ಬಳಿಯ ನಿರ್ಜನ ಸ್ಥಳವನ್ನು ಆಯ್ಕೆ ಮಾಡಿದ್ದ.

ನಂತರ ದಿಲೀಪನ್, ಕಾಳೀಶ್ವರನ್ ಮತ್ತು ಮಹೇಂದ್ರನ್ ಅವರೊಂದಿಗೆ ಪೊಲೀಸ್ ವಾಹನದಲ್ಲಿ ಆ ಸ್ಥಳಕ್ಕೆ ತೆರಳಿದ್ದ. ಕಣ್ಣಿಗೆ ಬಟ್ಟೆ ಕಟ್ಟಲಾಗಿದ್ದ ಆಕಾಶ್‌ನನ್ನು ಮತ್ತೊಂದು ವಾಹನದಿಂದ ಇಳಿಸಿ ದಿಲೀಪನ್‌ನ ವಾಹನದಲ್ಲಿ ಕುಳಿತಿಕೊಳ್ಳಲಾಗಿತ್ತು.

ದಿಲೀಪನ್, ಕಾಳೀಶ್ವರನ್ ಮತ್ತು ಮಹೇಂದ್ರನ್ ಆಕಾಶ್‌ನನ್ನು ಸರ್ಕಾರಿ ನೀಲಗಿರಿ ತೋಪಿಗೆ ಕರೆದೊಯ್ದರು. ಅಲ್ಲಿ ಗುಹನ್, ದೈವೇಂದ್ರನ್ ಮತ್ತು ಪಳನಿಯಪ್ಪನ್ ಈಗಾಗಲೇ ಕಾಯುತ್ತಿದ್ದರು.

ಅಲ್ಲಿ ಆರೂ ಮಂದಿ ಸೇರಿ ಆಕಾಶ್‌ನ ಬಲಗಾಲಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಮೂಳೆ ಮುರಿಯುವಂತೆ ಹಲ್ಲೆ ನಡೆಸಿದ್ದಾರೆ. ಮೂಳೆ ಹೊರಗೆ ಕಾಣಿಸುವಷ್ಟು ತೀವ್ರವಾಗಿ ಮುರಿತಕ್ಕೊಳಗಾಗಿತ್ತು ಎಂದು ದಾಖಲೆಯಲ್ಲಿ ಹೇಳಲಾಗಿದೆ.

ಗಾಯಗೊಂಡ ಆಕಾಶ್‌ನನ್ನು ದೈವೇಂದ್ರನ್, ಪಳನಿಯಪ್ಪನ್, ಕಾಳೀಶ್ವರನ್ ಮತ್ತು ಮಹೇಂದ್ರನ್ ಮರಳಿ ಪೊಲೀಸ್ ವಾಹನಕ್ಕೆ ಕರೆದೊಯ್ಯಲು ನೆರವಾಗಿದ್ದು, ದಿಲೀಪನ್ ಕೂಡ ಅವರೊಂದಿಗಿದ್ದ.

ಸುಳ್ಳು ಕಥೆ ಸೃಷ್ಟಿಸಿದ ಪೊಲೀಸರು

ಹಲ್ಲೆಗೆ ಬಳಸಿದ ಕಬ್ಬಿಣದ ರಾಡ್ ಅನ್ನು ಮುಚ್ಚಿಟ್ಟ ಪೊಲೀಸರು, ಆಕಾಶ್‌ಗೆ ಗಾಯಗಳಾದ ರೀತಿಯ ಬಗ್ಗೆ ಸುಳ್ಳು ಕಥೆಯನ್ನು ಸೃಷ್ಟಿಸಿದ್ದಾರೆ ಎಂದೂ ದೋಷಾರೋಪಣೆ ಪಟ್ಟಿಯಲ್ಲಿ ಆರೋಪಿಸಲಾಗಿದೆ.

ಮಾನಾಮಧುರೈ ಬಳಿಯ ಮೇಲಪ್ಪಸಾಲಿ ಸೇತುವೆಯಿಂದ ಜಿಗಿದಿದ್ದರಿಂದ ಆಕಾಶ್‌ಗೆ ಗಾಯಗಳಾಗಿವೆ ಎಂದು ಇನ್ಸ್‌ಪೆಕ್ಟರ್ ದಿಲೀಪನ್ ದಾಖಲಿಸಿದ್ದ. ಆಕಾಶ್ ಸೇತುವೆಯಿಂದ ಜಿಗಿದಿಲ್ಲ ಎಂಬುದು ಗೊತ್ತಿದ್ದರೂ, ಸಾರ್ವಜನಿಕ ಸೇವಕನಾಗಿದ್ದುಕೊಂಡು ದಿಲೀಪನ್ ಈ ಸುಳ್ಳು ವಿವರವನ್ನು ದಾಖಲಿಸಿದ್ದ ಎಂದು ಸಿಬಿ-ಸಿಐಡಿ ಹೇಳಿದೆ. ಈ ಆರೋಪವು ಬಿಎನ್‌ಎಸ್‌ನ ಸೆಕ್ಷನ್ 201 ಮತ್ತು 238 ರ ಅಡಿಯಲ್ಲಿ ದಿಲೀಪನ್ ವಿರುದ್ಧದ ಹೆಚ್ಚುವರಿ ಆರೋಪಗಳಿಗೆ ಆಧಾರವಾಗಿದೆ.

ಹಲ್ಲೆಯ ನಂತರ ಆಕಾಶ್‌ನನ್ನು ಮಾನಾಮಧುರೈ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಶಿವಗಂಗೈ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ತರುವಾಯ ನ್ಯಾಯಾಂಗ ಬಂಧನದಲ್ಲಿದ್ದಾಗಲೇ ಆತನನ್ನು ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ದಾಖಲಿಸಲಾಯಿತು.

ಚಿಕಿತ್ಸೆ ಪಡೆಯುತ್ತಿದ್ದಾಗ ಮಾರ್ಚ್ 8 ರಂದು ಆತ ಮೃತಪಟ್ಟಿದ್ದು, ಆಕಾಶ್ ಕುಟುಂಬಸ್ಥರು ಲಾಕಪ್ ಚಿತ್ರಹಿಂಸೆಯ ಆರೋಪ ಮಾಡಿದ್ದರು. ಶಿವಗಂಗೈ ಜಿಲ್ಲೆಯ ಮಾನಾಮಧುರೈ ಬಳಿಯ ಕೃಷ್ಣರಾಜಪುರದ ನಿವಾಸಿಯಾಗಿದ್ದ ಆಕಾಶ್‌ನನ್ನು ಇಬ್ಬರು ವ್ಯಕ್ತಿಗಳ ಮೇಲಿನ ಹಲ್ಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾರ್ಚ್ 6 ರಂದು ಗುಣ ಎಂಬ ಮತ್ತೊಬ್ಬ ವ್ಯಕ್ತಿಯೊಂದಿಗೆ ಬಂಧಿಸಲಾಗಿತ್ತು.

ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಸೇತುವೆಯಿಂದ ಜಿಗಿದಿದ್ದರಿಂದ ಆಕಾಶ್‌ಗೆ ಗಾಯಗಳಾಗಿವೆ ಎಂದು ಪೊಲೀಸರು ಆರಂಭದಲ್ಲಿ ವಾದಿಸಿದ್ದರು. ಈ ವಾದವನ್ನು ತಿರಸ್ಕರಿಸಿದ ಆತನ ಕುಟುಂಬಸ್ಥರು, ಕಸ್ಟಡಿಯಲ್ಲಿ ಆತನ ಮೇಲೆ ತೀವ್ರ ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪಿಸಿದ್ದರು.

ಆಕಾಶ್ ತನ್ನ ತಾಯಿ ಆನಂದಿ ಅವರ ಬಳಿ ಹೇಳಿದ ಕೊನೆಯ ಮಾತುಗಳನ್ನು ಅವರು ನೆನಪಿಸಿಕೊಂಡಿದ್ದಾರೆ. “ಅಮ್ಮಾ, ಅವರು ನನ್ನನ್ನು ಹೊಡೆದರು. ತುಂಬಾ ನೋವಾಗುತ್ತಿದೆ. ಹೊಡೆಯಬೇಡಿ ಎಂದು ಬೇಡಿಕೊಂಡರೂ ಅವರು ನಿಲ್ಲಿಸಲಿಲ್ಲ. ನನ್ನ ಕಾಲನ್ನು ಮುರಿದರು ಅಮ್ಮಾ” ಎಂದಿದ್ದರು.

ನ್ಯಾಯಾಧೀಶರ ಮುಂದೆ ದಾಖಲಿಸಲಾಗಿದೆ ಎನ್ನಲಾದ ಮರಣಪೂರ್ವ ಹೇಳಿಕೆಯನ್ನು ಮಾನವ ಹಕ್ಕುಗಳ ಕಾರ್ಯಕರ್ತರು, ಆಕಾಶ್‌ ಕುಟುಂಬದ ಕಸ್ಟಡಿ ಹಲ್ಲೆಯ ಆರೋಪಕ್ಕೆ ಬೆಂಬಲವಾಗಿ ಉಲ್ಲೇಖಿಸಿದ್ದರು.

ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಆಕಾಶ್ ಅವರ ಬಲಗಾಲಿನ ಟಿಬಿಯಾ ಮತ್ತು ಫಿಬುಲಾ ಮೂಳೆ ಮುರಿತಗಳು, ಸ್ನಾಯು ಮತ್ತು ನರಗಳ ಹಾನಿ, ಮೊಣಕೈ ಮತ್ತು ಮೊಣಕಾಲುಗಳಲ್ಲಿ ಗಾಯಗಳು ಹಾಗೂ ದೇಹದಾದ್ಯಂತ ಅನೇಕ ಗಾಯಗಳು ಸೇರಿ 24 ಕ್ಕೂ ಹೆಚ್ಚು ಗಾಯಗಳು ದಾಖಲಾಗಿವೆ.

ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕುಟುಂಬಸ್ಥರು ಮೃತದೇಹವನ್ನು ಪಡೆಯಲು ನಿರಾಕರಿಸಿದ್ದರಿಂದ ಆಕಾಶ್ ಅವರ ಮೃತದೇಹ ಸುಮಾರು 100 ದಿನಗಳ ಕಾಲ ಸರ್ಕಾರಿ ರಾಜಾಜಿ ಆಸ್ಪತ್ರೆಯ ಶವಾಗಾರದಲ್ಲಿತ್ತು. ತದನಂತರ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಶವಸಂಸ್ಕಾರ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದರಿಂದ ಜೂನ್ 17 ರಂದು ಆತನ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಈ ಪ್ರಕರಣ ಪ್ರಸ್ತುತ ಮಧುರೈನ ಪಿಸಿಆರ್ ಪ್ರಕರಣಗಳ 3 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್ ಘಟಿಕೋತ್ಸವ ರದ್ದು: ಸಿಜೆಐ, ಬಾರ್ ಕೌನ್ಸಿಲ್ ಮುಖ್ಯಸ್ಥರ ಆಹ್ವಾನಕ್ಕೆ ವಿದ್ಯಾರ್ಥಿಗಳ ತೀವ್ರ ವಿರೋಧ!

ಬೆಂಗಳೂರು: ದೇಶದ ಪ್ರತಿಷ್ಠಿತ ಕಾನೂನು ಶಿಕ್ಷಣ ಸಂಸ್ಥೆಯಾದ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU), ತನ್ನ 34ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವನ್ನು ದಿಢೀರ್ ರದ್ದುಗೊಳಿಸಿದೆ. ಸೆಪ್ಟೆಂಬರ್ 12 ರಂದು...

Karnataka SIR | ಡಿಲೀಟ್ ಪಟ್ಟಿಯಲ್ಲಿ ಅಂದಾಜು 52 ಲಕ್ಷ ಅರ್ಹ ಮತದಾರರಿದ್ದಾರೆ : ನಾಗರಿಕ ಸಂಘಟನೆಗಳಿಂದ ಗಂಭೀರ ಆರೋಪ

ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ ಮತದಾರರ ಪಟ್ಟಿಯಿಂದ ಈಗಾಗಲೇ ಹೊರಗಿಟ್ಟಿರುವ 1.08 ಕೋಟಿ (1,07,96,415) ಮತದಾರರ ಪೈಕಿ ಅಂದಾಜು 52 ಲಕ್ಷ ಮಂದಿ ಅರ್ಹರಿದ್ದಾರೆ ಎಂದು ನಾಗರಿಕ ಸಂಘಟನೆಗಳು ಗಂಭೀರ...

ನೇಪಾಳದಲ್ಲಿ ಜಲಪ್ರಳಯ: 300 ಭಾರತೀಯರು ಸೇರಿ 1,500 ಮಂದಿ ನಾಪತ್ತೆ, ಸಾವಿನ ಸಂಖ್ಯೆ 165ಕ್ಕೆ ಏರಿಕೆ

ನೇಪಾಳ ಮತ್ತು ಟಿಬೆಟ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದ ನಂತರ ಸುಮಾರು 1,500 ಜನರು ಕಾಣೆಯಾಗಿದ್ದಾರೆ. ಈ ಪ್ರವಾಹದಲ್ಲಿ 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್...

PTCL ಕಾಯ್ದೆ ಅನುಷ್ಠಾನ ವೈಫಲ್ಯ: ನ್ಯಾಯಾಂಗ ಹಾಗೂ ಸರ್ಕಾರದ ಧೋರಣೆ ಖಂಡಿಸಿ ಜ್ಯೂರಿ ವರದಿ ಬಿಡುಗಡೆ

ದಲಿತ ಸಮುದಾಯಗಳಿಗೆ ಮಂಜೂರಾದ ಭೂಮಿ ಅನ್ಯಯವಾಗುವುದನ್ನು ತಡೆಯುವಲ್ಲಿ ಹಾಗೂ ಪಿಟಿಸಿಎಲ್ (PTCL) ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ನ್ಯಾಯಾಂಗ ಮತ್ತು ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಜ್ಯೂರಿ ವರದಿಯು ತೀವ್ರವಾಗಿ ಅತೃಪ್ತಿ ವ್ಯಕ್ತಪಡಿಸಿದೆ. ಪಿಟಿಸಿಎಲ್...

SIR ಪ್ರಕ್ರಿಯೆಗೆ 6 ತಿಂಗಳ ಕಾಲಾವಕಾಶ ನೀಡಿ: ಸೆಪ್ಟೆಂಬರ್ 1 ರಂದು ‘ಎಲೆಕ್ಷನ್ ಕಮಿಷನ್ ಚಲೋ’ ಗೆ ಒಕ್ಕೂಟ ಕರೆ

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಅವೈಜ್ಞಾನಿಕ ಧೋರಣೆ ಹಾಗೂ ಗೊಂದಲಮಯ ಕ್ರಮಗಳನ್ನು ತೀವ್ರವಾಗಿ ಖಂಡಿಸಿರುವ 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ', ಮತದಾರರ ಹಕ್ಕುಗಳನ್ನು...

ನೇಪಾಳದಲ್ಲಿ ದಿಢೀರ್ ಪ್ರವಾಹ : 105 ಭಾರತೀಯರು ಸೇರಿದಂತೆ 384 ಮಂದಿ ನಾಪತ್ತೆ

ನೇಪಾಳ ಪ್ರವಾಸೋದ್ಯಮ ಮಂಡಳಿಯ ಮಾಹಿತಿ ಪ್ರಕಾರ, ಬುಧವಾರ (ಆ.26) ಬೆಳಿಗ್ಗೆ ನೇಪಾಳದ ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ನಂತರ 105 ಭಾರತೀಯ ಪ್ರಜೆಗಳು ಸೇರಿದಂತೆ ಕನಿಷ್ಠ 384...

ರಾಜ್ಯದಲ್ಲಿ 102 ತಾಲೂಕುಗಳಲ್ಲಿ ಬರ: ಡಿಸಿಎಂ ಪರಮೇಶ್ವರ್

ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, 102 ತಾಲೂಕುಗಳ ಗ್ರೌಂಡ್ ಟ್ರೂಥಿಂಗ್ ವರದಿ ಬಂದಿದೆ. ಕೇಂದ್ರ ಸರ್ಕಾರದ ಮಾನದಂಡಗಳನ್ವಯ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಧಿಕೃತವಾಗಿ ಬರ ಘೋಷಿಸಲಾಗುವುದು ಹಾಗೂ ಪ್ರತಿ ವಾರವೂ...

ಪ. ಬಂಗಾಳ SIR : ನ್ಯಾಯಮಂಡಳಿಗಳಿಂದ ಇದುವರೆಗೆ ಕೇವಲ 2.17% ಮೇಲ್ಮನವಿಗಳ ಇತ್ಯರ್ಥ; ಇನ್ನು 37 ಲಕ್ಷಕ್ಕೂ ಹೆಚ್ಚು ಬಾಕಿ!

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಭಗವಾಂಗೋಲಾದ ನಿವಾಸಿಯಾದ ಮೊಹಮ್ಮದ್ ದುವಾಲ್ ಅಲಿ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಕರ್ತವ್ಯದ ಅವಧಿಯಲ್ಲಿ ಗುಂಡೇಟಿಗೆ ಒಳಗಾಗಿದ್ದರು. ಪ್ರಾಣಾಪಾಯದಿಂದ ಬದುಕುಳಿದ ಅವರು ನಂತರ ಭಾರತೀಯ ರೈಲ್ವೆಯಲ್ಲಿ ಕೆಲಸ...

ಬಂಡಾಯ ಸಂಸದರಿಗೆ ಸಂಕಷ್ಟ: 7 ದಿನಗಳಲ್ಲಿ ಉತ್ತರಿಸಲು ಲೋಕಸಭೆ ಸಚಿವಾಲಯ ತಾಕೀತು

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ 20 ಬಂಡಾಯ ಸಂಸದರಿಗೆ ಲೋಕಸಭಾ ಸಚಿವಾಲಯವು ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳ ಒಳಗಾಗಿ ಸೂಕ್ತ ಉತ್ತರ ನೀಡುವಂತೆ ಸೂಚಿಸಿದೆ. ಪಕ್ಷಾಂತರ ಕಾಯ್ದೆಯಡಿ ಸಂಸದರ ಅನರ್ಹತೆ ಪ್ರಕ್ರಿಯೆಗಳನ್ನು...

ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ನ್ಯೂಯಾರ್ಕ್ ಮೇಯರ್ ವಿರೋಧ: ಸಂಘದ ‘ಹೊರಗಿಡುವ ದೃಷ್ಟಿಕೋನ’ ಖಂಡಿಸಿದ ಮಮ್ದಾನಿ

ಅಮೆರಿಕದ ನ್ಯೂಯಾರ್ಕ್ ನಗರದ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿರುವ ಬೃಹತ್ ಭಾರತೀಯ ಮೂಲದವರ ಸಮಾವೇಶವು...