ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಅವೈಜ್ಞಾನಿಕ ಧೋರಣೆ ಹಾಗೂ ಗೊಂದಲಮಯ ಕ್ರಮಗಳನ್ನು ತೀವ್ರವಾಗಿ ಖಂಡಿಸಿರುವ ‘SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ’, ಮತದಾರರ ಹಕ್ಕುಗಳನ್ನು ರಕ್ಷಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ 1 ರಂದು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ‘ಎಲೆಕ್ಷನ್ ಕಮಿಷನ್ ಚಲೋ’ ಬೃಹತ್ ಹೋರಾಟವನ್ನು ಹಮ್ಮಿಕೊಂಡಿದೆ.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಉಂಟಾಗಿರುವ ಗೊಂದಲಗಳು ಮತ್ತು ಬಡವರು, ಕಾರ್ಮಿಕರ ಮೇಲೆ ಬೀರುತ್ತಿರುವ ವ್ಯತಿರಿಕ್ತ ಪರಿಣಾಮಗಳ ಕುರಿತು ಒಕ್ಕೂಟದ ಪ್ರಮುಖರಾದ ಜೆ.ಎಂ. ವೀರಸಂಗಯ್ಯ, ಕೆ.ಎಲ್. ಅಶೋಕ್ ಮತ್ತು ಮುಹಮ್ಮದ್ ಯೂಸುಫ್ ಕನ್ನಿ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಸರ್ಕಾರದ ಗಮನ ಸೆಳೆದಿದ್ದಾರೆ.
ರಾಜ್ಯ ಸರ್ಕಾರದ ನಿಲುವಿಗೆ ಸ್ವಾಗತ, ಆದರೆ ಹೋರಾಟ ನಿಲ್ಲದು
SIR ಪ್ರಕ್ರಿಯೆ ಕುರಿತು ರಾಜ್ಯ ಸರ್ಕಾರದ ವತಿಯಿಂದ ವ್ಯಕ್ತವಾಗಿರುವ ನಿಲುವು ಮತ್ತು ಕಾಳಜಿಯ ಆಶಯವನ್ನು SIR ವಿರೋಧಿ ಕರ್ನಾಟಕ ಒಕ್ಕೂಟವು ಸ್ವಾಗತಿಸಿ ಅಭಿನಂದಿಸಿದೆ. ಆದರೆ ಸರ್ಕಾರದ ಈ ನಿಲುವು ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಬಾರದು. ಚುನಾವಣಾ ಆಯೋಗದಿಂದ ನಾಗರಿಕರ ಹಕ್ಕೊತ್ತಾಯಗಳನ್ನು ಈಡೇರಿಸುವವರೆಗೂ ರಾಜ್ಯ ಸರ್ಕಾರ ನಿರಂತರ ಹೋರಾಟ ಮುಂದುವರಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ಒಕ್ಕೂಟದ ಪ್ರಮುಖ ಬೇಡಿಕೆಗಳು ಮತ್ತು ಆಕ್ಷೇಪಣೆಗಳು:
- ಎಎಸ್ಡಿಡಿಒ (ASDDO) ಪಟ್ಟಿಗೂ ಹಕ್ಕು-ಆಕ್ಷೇಪಣೆಗೆ ಅವಕಾಶವಿರಲಿ:
ಅನ್ಮ್ಯಾಪ್ಡ್ ಮತ್ತು ಲಾಜಿಕಲ್ ಡಿಸ್ಕ್ರಿಪೆನ್ಸಿ ಪಟ್ಟಿಯಲ್ಲಿರುವವರಿಗೆ ಹಕ್ಕು ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿರುವ ರೀತಿಯಲ್ಲೇ, ಎಎಸ್ಡಿಡಿಒ ಪಟ್ಟಿಯಲ್ಲಿರುವ ‘ಗೈರು ಮತ್ತು ಇತರರು’ (Absent and Others) ವರ್ಗದವರಿಗೂ ಅವಕಾಶ ಕಲ್ಪಿಸಬೇಕು. ಈ ಹಿಂದೆ ಮತಪಟ್ಟಿಯಲ್ಲಿದ್ದವರನ್ನು ಯಾವುದೇ ಮುನ್ಸೂಚನೆ ಅಥವಾ ಸಮರ್ಪಕ ಕಾರಣವಿಲ್ಲದೆ ಏಕಾಏಕಿ ಪಟ್ಟಿಯಿಂದ ಕೈಬಿಡುವುದು ಮತ್ತು ಹೊಸದಾಗಿ ನಮೂನೆ-6 ಸಲ್ಲಿಸುವಂತೆ ಒತ್ತಾಯಿಸುವುದು ಕಾನೂನುಬಾಹಿರ ಹಾಗೂ ನ್ಯಾಯಸಮ್ಮತವಲ್ಲ. - ಸಮಯಾವಕಾಶವನ್ನು 6 ತಿಂಗಳಿಗೆ ವಿಸ್ತರಿಸಿ:
ಕೇವಲ 7 ದಿನಗಳ ಅಲ್ಪಾವಧಿಯಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಮತ್ತು ಅನ್ಮ್ಯಾಪ್ಡ್ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಸಲ್ಲಿಸುವುದು ಪ್ರಾಯೋಗಿಕವಾಗಿ ಅಸಾಧ್ಯ. ಗ್ರಾಮೀಣ ಭಾಗದ ಬಡವರು, ವೃದ್ಧರು, ಮತ್ತು ಕಾರ್ಮಿಕ ವರ್ಗದ ಜನರಿಗೆ ಇದು ತೀವ್ರ ಸಂಕಷ್ಟ ತಂದೊಡ್ಡಲಿದೆ. ಆದ್ದರಿಂದ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ ಅವಧಿಯನ್ನು ಆರು ತಿಂಗಳಿಗೆ ವಿಸ್ತರಿಸಬೇಕು. - ಗ್ರಾಮ ಹಾಗೂ ವಾರ್ಡ್ ಸಭೆಗಳು ಕೇವಲ ನಾಮಕಾವಸ್ತೆಯಾಗಬಾರದು:
ಗ್ರಾಮಸಭೆ ಮತ್ತು ವಾರ್ಡ್ ಸಭೆಗಳನ್ನು ಕೇವಲ ಪ್ರಕ್ರಿಯೆ ಪೂರ್ಣಗೊಳಿಸುವ ದೃಷ್ಟಿಯಿಂದ ಆಯೋಜಿಸದೆ, ಸಭೆಗೂ ಕನಿಷ್ಠ ಒಂದು ವಾರ ಮುನ್ನವೇ ಮತದಾರರ ಪಟ್ಟಿಯಿಂದ ಹೊರಗುಳಿದವರ ಹಾಗೂ ‘ಇತರರು’ ವರ್ಗದಲ್ಲಿರುವವರ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಮನೆಮನೆಗೆ ತೆರಳಿ ವ್ಯಾಪಕ ಪ್ರಚಾರ ನಡೆಸಿ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅರ್ಥಪೂರ್ಣವಾಗಿ ಸಭೆಗಳನ್ನು ನಡೆಸಬೇಕು.
ಮುಖ್ಯ ಚುನಾವಣಾಧಿಕಾರಿ ರಾಜೀನಾಮೆಗೆ ಆಗ್ರಹ
ಚುನಾವಣಾ ಆಯೋಗ ರೂಪಿಸಿರುವ SIR ಪ್ರಕ್ರಿಯೆಯು ಸಂಪೂರ್ಣವಾಗಿ ದೋಷಭರಿತವಾಗಿದ್ದು, ಇದರ ಹಿಂದೆ ದುರುದ್ದೇಶವಿದೆ ಎಂದು ಒಕ್ಕೂಟ ಗಂಭೀರವಾಗಿ ಆರೋಪಿಸಿದೆ. ಈ ಅನಾಗರಿಕ ಮತ್ತು ಅವೈಜ್ಞಾನಿಕ ಪ್ರಕ್ರಿಯೆಗೆ ಕಾರಣರಾಗಿರುವ ಕೇಂದ್ರ ಚುನಾವಣಾ ಆಯೋಗ ಮತ್ತು ಅದರ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಸೆಪ್ಟೆಂಬರ್ 1 ರಂದು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಸಂತ್ರಸ್ತರ ಸಾಕ್ಷ್ಯಗಳೊಂದಿಗೆ ಹಮ್ಮಿಕೊಳ್ಳಲಾಗಿರುವ ಈ ಬೃಹತ್ ‘ಎಲೆಕ್ಷನ್ ಕಮಿಷನ್ ಚಲೋ’ ಹೋರಾಟದಲ್ಲಿ ಪ್ರಜ್ಞಾವಂತ ಸಮಾಜದ ಪ್ರತಿಯೊಬ್ಬ ಮತದಾರರೂ ಭಾಗವಹಿಸಿ, ಮತದಾನದ ಹಕ್ಕಿನ ರಕ್ಷಣೆಗಾಗಿ ಕೈಜೋಡಿಸುವಂತೆ ಒಕ್ಕೂಟದ ನಾಯಕರು ಕರೆ ನೀಡಿದ್ದಾರೆ.


