ಇತ್ತೀಚೆಗೆ ಬಿಡುಗಡೆಯಾದ ಭಾರತದ ತ್ರೈಮಾಸಿಕ ಜಿಡಿಪಿ ಅಂಕಿಅಂಶಗಳ ಕುರಿತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ. 2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತವು ಶೇಕಡಾ 7.8 ರಷ್ಟು ಜಿಡಿಪಿ ಪ್ರಗತಿ ಸಾಧಿಸಿದೆ ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಮಹುವಾ ಮೊಯಿತ್ರಾ, “ತಮಗೆ ಸರಿಯಾಗಿ ಅರ್ಥವಾಗದ ವಿಷಯಗಳ ಬಗ್ಗೆ ಪ್ರಧಾನಿಯವರು ಕಡಿಮೆ ಮಾತನಾಡಿದರೆ ಒಳ್ಳೆಯದು” ಎಂದು ಟೀಕಿಸಿದ್ದಾರೆ.
ಸೆಪ್ಟೆಂಬರ್ 1 ರಂದು ವೀಡಿಯೊ ಒಂದನ್ನು ಹಂಚಿಕೊಂಡಿದ್ದ ಪ್ರಧಾನಿ ಮೋದಿ, ಜಾಗತಿಕ ಸವಾಲುಗಳ ನಡುವೆಯೂ ಶೇ.7.8 ಜಿಡಿಪಿ ದರವನ್ನು ತಲುಪಿರುವುದಕ್ಕೆ ದೇಶದ ಜನತೆಯನ್ನು ಅಭಿನಂದಿಸಿದ್ದರು. ಸ್ವಾವಲಂಬನೆಯ ಮಹತ್ವವನ್ನು ಪ್ರತಿಪಾದಿಸಿದ್ದ ಅವರು, ಜಿಡಿಪಿ ವೇಗವನ್ನು ಕಾಯ್ದುಕೊಳ್ಳಲು ವಿದೇಶಿ ಪ್ರವಾಸಗಳನ್ನು ತಪ್ಪಿಸುವಂತೆ ಜನರಿಗೆ ಮನವಿ ಮಾಡಿದ್ದರು.
ಪ್ರಧಾನಿ ಮೋದಿ ವಿರುದ್ಧ ಮಹುವಾ ಮೊಯಿತ್ರಾ ವಾಗ್ದಾಳಿ
ಜೆನ್ ಜಿ (Gen Z) ಯುವಜನರನ್ನು ತಲುಪಲು ಪ್ರಧಾನಿ ಮೋದಿ ಅವರು ಮಾಡುತ್ತಿರುವ ವೀಡಿಯೊಗಳನ್ನು ಉಲ್ಲೇಖಿಸಿ ಟೀಕಿಸಿದ ಮೊಯಿತ್ರಾ, “ಅರ್ಧರಾತ್ರಿಯಲ್ಲಿ ರೀಲ್ಸ್ ಮಾಡಿದರೆ ಮಾತ್ರ ಜೆನ್ ಜಿ ಯುವಕರನ್ನು ತಲುಪಬಹುದು ಎಂದು ಯಾರೋ ಅವರಿಗೆ ಸಲಹೆ ನೀಡಿದ್ದಾರೆ. ಹೀಗಾಗಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯರಾಗಲು ಯತ್ನಿಸುತ್ತಿದ್ದಾರೆ. ಆದರೆ ಜಿಡಿಪಿಯಂತಹ ಅವರಿಗೆ ಅರ್ಥವಾಗದ ವಿಷಯಗಳ ಬಗ್ಗೆ ಕಡಿಮೆ ಮಾತನಾಡಿದರೆ ಒಳಿತು” ಎಂದಿದ್ದಾರೆ.
ಜಿಡಿಪಿ ಅಂಕಿಅಂಶಗಳ ನಂಬಿಕಾರ್ಹತೆಯನ್ನು ಪ್ರಶ್ನಿಸಿದ ಅವರು, “ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲೂ ಶೇ.7.9 ಜಿಡಿಪಿ ಪ್ರಗತಿಯಾಗಿದೆ ಎಂದು ಹೇಳಲಾಗಿತ್ತು. ಆದರೆ ನಂತರ ಅದನ್ನು ಶೇ.7 ಗೆ ಇಳಿಸಲಾಯಿತು. ಶೇ.2.6 ಅಂಕಿಅಂಶದ ವಿಷಯದಲ್ಲೂ ಇದೇ ರೀತಿಯ ಮರುಪರಿಶೀಲನೆ ನಡೆದಿತ್ತು” ಎಂದು ಆರೋಪಿಸಿದರು.
ಆಗಸ್ಟ್ 31, 2026 ರಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಜಿಡಿಪಿ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ನಂತರ ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿತ್ತು. ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ಮತ್ತು ಎನ್‌ಡಿಟಿವಿ ನಿರೂಪಕಿ ಗೌರಿ ದ್ವಿವೇದಿ ನಡುವಿನ ಚರ್ಚೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದರಲ್ಲಿ ಗಾರ್ಗ್, “ಕಳೆದ ವರ್ಷದ ಜಿಡಿಪಿ ದರವನ್ನು 6.9 ಶೇಕಡಾಕ್ಕೆ ತಗ್ಗಿಸಲಾಗಿದೆ. ಹಿಂದಿನ ವರ್ಷದ ಜಿಡಿಪಿಯನ್ನು ಕಡಿಮೆ ತೋರಿಸಿದಾಗ, ಪ್ರಸ್ತುತ ವರ್ಷದ ಜಿಡಿಪಿ ಹೆಚ್ಚಾಗಿ ಕಾಣಿಸುತ್ತದೆ” ಎಂದು ಆರೋಪಿಸಿದ್ದರು.
ಪ್ರಧಾನಿಯವರ ವಿದೇಶಿ ಪ್ರವಾಸಗಳ ಕುರಿತು ವ್ಯಂಗ್ಯವಾಡಿದ ಮೊಯಿತ್ರಾ, “ನೀವು ಸ್ವೀಡನ್, ಉಜ್ಬೆಕಿಸ್ತಾನ್, ಕಿರ್ಗಿಸ್ತಾನ್, ಲಂಡನ್ ಮತ್ತು ನಾರ್ವೆಗೆ ಪ್ರಯಾಣಿಸುತ್ತೀರಿ. ಆದರೆ ನಾವೇನು ಮಾಡಬೇಕು? ನಾವು ಅಹಮದಾಬಾದ್‌ನಲ್ಲೇ ಕುಳಿತುಕೊಳ್ಳಬೇಕೇ? ಪ್ರಧಾನಿಯವರೇ, ದಯವಿಟ್ಟು ಹೀಗೆ ಮಾಡಬೇಡಿ. ನಮಗೂ ವಿದೇಶ ಪ್ರವಾಸದ ಆಸೆಯಿದೆ. ನೀವು ಉತ್ತಮ ಉಡುಪುಗಳನ್ನು ಧರಿಸುತ್ತೀರಿ, ನಮಗೂ ಚೆನ್ನಾಗಿ ತಯಾರಾಗುವ ಆಸೆಯಿದೆ. ನೀವು ವಿದೇಶಕ್ಕೆ ಹೋಗಿ ‘ಮೆಲೋಡಿ’ ಆನಂದಿಸುತ್ತೀರಿ, ನಮಗೂ ಅದು ಇಷ್ಟ” ಎಂದಿದ್ದಾರೆ.
ಮುಂದುವರಿದು ಪ್ರಧಾನಿಯವರ ಚರ್ಮದ ಸೌಂದರ್ಯದ ಬಗ್ಗೆ ಪ್ರಶ್ನಿಸಿದ ಅವರು, “ನಿಮ್ಮ ಚರ್ಮವು ತುಂಬಾ ಹೊಳೆಯುತ್ತಿದೆ, ನನಗೆ ಅದು ಇಷ್ಟವಾಯಿತು. ಪ್ರಧಾನಿ ಮೋದಿ ಅವರೇ, ನಿಮ್ಮ ಈ ಹೊಳೆಯುವ ಚರ್ಮದ ಹಿಂದಿನ ರಹಸ್ಯವೇನು? ನೀವು ವಿದೇಶಕ್ಕೆ ಹೋದಾಗ ಅಲ್ಲಿ ನಿಮಗೇನು ಸಿಗುತ್ತದೆ?” ಎಂದು ಪ್ರಶ್ನಿಸಿದ್ದಾರೆ.


