ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ.
ಕೆಲಸದ ಸ್ಥಳದಲ್ಲಿ ಆಕೆಗೆ ಪ್ರತ್ಯೇಕ ‘ಡಿಸ್ಪೋಸಬಲ್’ ಕಪ್‌ಗಳನ್ನು ಬಳಸುವಂತೆ ಹಾಗೂ ಆಕೆಯ ಜಾತಿಯ ಕಾರಣಕ್ಕಾಗಿ ಪಂಚಾಯತ್ ಕಾರ್ಯದರ್ಶಿಯ ಚಪ್ಪಲಿಯನ್ನು ಕೈಯಿಂದ ಹೊರಹಾಕುವಂತೆ ಒತ್ತಾಯಿಸಲಾಗುತ್ತಿತ್ತು ಎಂದು ಆರೋಪಿಸಿದ ಕೆಲವು ದಿನಗಳ ನಂತರ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕಂಬೂರ್ ನಿವಾಸಿಯಾಗಿರುವ ಶಶಿಕಲಾ ಕಳೆದ ಎಂಟು ವರ್ಷಗಳಿಂದ ಗ್ರಾಮದಲ್ಲಿ ನೈರ್ಮಲ್ಯ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಜಾತಿ ತಾರತಮ್ಯ ಮತ್ತು ಬೆದರಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಅವರು ಈ ಹಿಂದೆ ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಅವರಿಗೆ ಮನವಿ ಸಲ್ಲಿಸಿದ್ದರು.
ಭಾನುವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಶಶಿಕಲಾ ತಮ್ಮ ಮನೆಯ ಹೊರಗೆ ವಾಂತಿ ಮಾಡುತ್ತಿರುವುದು ಕಂಡುಬಂತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರ ಸ್ಥಿತಿಯನ್ನು ಗಮನಿಸಿದ ನೆರೆಹೊರೆಯವರೊಬ್ಬರು ತಕ್ಷಣ ಅವರನ್ನು ಮೇಲೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಪರಿಶೀಲಿಸಿದ ವೈದ್ಯರು ಅವರು ಕೀಟನಾಶಕ ಸೇವಿಸಿರುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ಅವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿದ್ದಾರೆ.
ಕಲ್ಲರ್ ಸಮುದಾಯಕ್ಕೆ ಸೇರಿದ ಪಂಚಾಯತ್ ಕಾರ್ಯದರ್ಶಿ ರೂಪಾ ಅವರು ದಲಿತ ನೈರ್ಮಲ್ಯ ಕಾರ್ಮಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು ಎಂದು ಶಶಿಕಲಾ ಅವರ ಪತಿ ಟಿ. ಪ್ರಕಾಶ್ ಆರೋಪಿಸಿದ್ದಾರೆ. “ದಲಿತ ಕಾರ್ಮಿಕರಿಗೆ ಚಹಾ ಕುಡಿಯಲು ಸಾಮಾನ್ಯ ಲೋಹದ ಲೋಟಗಳನ್ನು ಬಳಸಲು ಅನುಮತಿ ಇರಲಿಲ್ಲ. ಅವರು ಪ್ರತ್ಯೇಕ ಡಿಸ್ಪೋಸಬಲ್ ಕಪ್‌ಗಳನ್ನು ಬಳಸುವಂತೆ ಸೂಚಿಸಲಾಗುತ್ತಿತ್ತು” ಎಂದು ಪ್ರಕಾಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಾರ್ಮಿಕರು ಇದನ್ನು ವಿರೋಧಿಸಿದರೂ ಇದೇ ಪದ್ಧತಿ ಮುಂದುವರಿದಿತ್ತು ಎಂದು ಅವರು ಆರೋಪಿಸಿದ್ದಾರೆ.
ಕಾರ್ಯದರ್ಶಿಯವರು ಜಾತಿಯ ಆಧಾರದ ಮೇಲೆ ಕೆಲಸವನ್ನು ನಿಯೋಜಿಸುತ್ತಿದ್ದರು. ಸಿಬ್ಬಂದಿಗಳ ಜಾತಿ ನೋಡಿ ಹಗುರವಾದ ಮಾತುಗಳನ್ನು ಆಡುತ್ತಿದ್ದರು ಎಂದೂ ಅವರು ಆರೋಪಿಸಿದ್ದಾರೆ. “ಕೆಲವು ಸಂದರ್ಭಗಳಲ್ಲಿ, ನನ್ನ ಹೆಂಡತಿ ದಲಿತ ಸಮುದಾಯಕ್ಕೆ ಸೇರಿದವಳು ಎಂಬ ಕಾರಣಕ್ಕಾಗಿ ರೂಪಾ ಅವರ ಚಪ್ಪಲಿಯನ್ನು ಕೈಯಲ್ಲಿ ಹೊರವಂತೆ ಒತ್ತಾಯಿಸಲಾಗಿತ್ತು” ಎಂದು ಅವರು ಹೇಳಿದ್ದಾರೆ.
ಪಂಚಾಯತಿಯಲ್ಲಿ ನಡೆಯುತ್ತಿದ್ದ ಈ ತಾರತಮ್ಯದ ಕುರಿತು ದೂರುಗಳನ್ನು ಎತ್ತಿದ ನಂತರ ಶಶಿಕಲಾ ಒತ್ತಡವನ್ನು ಎದುರಿಸಬೇಕಾಯಿತು ಎಂದು ಪ್ರಕಾಶ್ ಆರೋಪಿಸಿದ್ದಾರೆ. “ರೂಪಾ ಅವರ ಬೆಂಬಲಿಗರು ನಮಗೆ ನಿರಂತರವಾಗಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸ್ ದೂರನ್ನು ಹಿಂಪಡೆಯುವಂತೆ ನನ್ನ ಹೆಂಡತಿಯನ್ನು ಒತ್ತಾಯಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಶಶಿಕಲಾ ಅವರು ಜಿಲ್ಲಾಧಿಕಾರಿಗೆ ನೀಡಿದ ಮನವಿಯಲ್ಲಿ, “ಈ ಹಿಂದೆ ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರಿಗೆ ದೂರುಗಳನ್ನು ಸಲ್ಲಿಸಲಾಗಿತ್ತು ಎಂದು ಉಲ್ಲೇಖಿಸಿದ್ದಾರೆ. ಬಳಿಕ ತಮಗೆ ಮತ್ತು ತನಗೆ ಬೆಂಬಲ ನೀಡಿದ ಮತ್ತೊಬ್ಬ ಕಾರ್ಮಿಕರಿಗೆ ಬೆದರಿಕೆ ಹಾಕಲಾಗಿದೆ. ನನ್ನನ್ನು ಟಾರ್ಗೆಟ್ ಮಾಡಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.
“ಆರೋಪಗಳ ಕುರಿತು ತನಿಖೆ ನಡೆಸಿ, ಪಂಚಾಯಿತಿ ಕಾರ್ಯದರ್ಶಿಯ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಅವರು ಮನವಿ ಮಾಡಿದ್ದರು.
ಅಶ್ಲೀಲ ಕೃತ್ಯಗಳು ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 296(ಬಿ) ಮತ್ತು 351(2) ಜೊತೆಗೆ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೂಕ್ತ ಕಾಯ್ದೆಗಳ ಅಡಿಯಲ್ಲಿ ಕೊಟ್ಟಂಪಟ್ಟಿ ಪೊಲೀಸರು ಸೆಪ್ಟೆಂಬರ್ 4 ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೇಲೂರು ಡಿಎಸ್‌ಪಿ ಶಿವಕುಮಾರ್ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.


