ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ‘ತಾರ್ಕಿಕ ವ್ಯತ್ಯಾಸ’ ಮತ್ತು ‘ಅನ್‌ಮ್ಯಾಪ್ಡ್’ ವರ್ಗದಡಿಯಲ್ಲಿ ಗುರುತಿಸಲಾದ ಮತದಾರರಿಗೆ ನೀಡಿರುವ ನೋಟಿಸ್ ವಿವರಗಳು ಈಗ ಸಾರ್ವಜನಿಕ ಲಭ್ಯವಿವೆ.
ಜನಪರ ಸಂಘಟನೆಗಳು, ಮಾಧ್ಯಮಗಳು ಮತ್ತು ನಾಗರಿಕ ವಲಯದಿಂದ ವ್ಯಕ್ತವಾದ ತೀವ್ರ ಆಕ್ಷೇಪ ಹಾಗೂ ಸಾರ್ವಜನಿಕ ಒತ್ತಡದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಈ ಪಾರದರ್ಶಕ ಹೆಜ್ಜೆಯನ್ನಿಟ್ಟಿದೆ.
ಪಟ್ಟಿಯಲ್ಲಿ ಏನಿದೆ? ಮತದಾರರಿಗೆ ಏಕೆ ಮುಖ್ಯ?
ಇಷ್ಟು ದಿನ ‘ಎಸ್‌ಐಆರ್’ ಹೆಸರಿನಲ್ಲಿ ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಇಲ್ಲವೇ ಎಂಬ ಗೊಂದಲದಲ್ಲಿದ್ದ ಲಕ್ಷಾಂತರ ನಾಗರಿಕರಿಗೆ ಈ ಪ್ರಕಟಣೆ ಒಂದಿಷ್ಟು ಸ್ಪಷ್ಟತೆ ನೀಡಲಿದೆ. ಮತದಾರರು ತಮ್ಮ ಹೆಸರು ಪರಿಶೀಲನೆಯ ವ್ಯಾಪ್ತಿಗೆ ಬಂದಿದೆಯೇ, ತಮಗೆ ನೋಟಿಸ್ ಜಾರಿಯಾಗಿದೆಯೇ ಮತ್ತು ಅದಕ್ಕೆ ಕಾರಣವೇನು ಎಂಬುದನ್ನು https://ceo.karnataka.gov.in/notices_issued.html ಲಿಂಕ್ ಮೂಲಕ ನೇರವಾಗಿ ತಿಳಿದುಕೊಳ್ಳಬಹುದು.
ನೋಟಿಸ್ ಜಾರಿಯಾಗಿರುವ ವಿಷಯ ತಿಳಿದರೆ, ಅರ್ಹ ಮತದಾರರು ಅಗತ್ಯ ದಾಖಲೆಗಳೊಂದಿಗೆ ಇಆರ್‌ಒ (ERO) ಅಥವಾ ಎಇಆರ್‌ಒ (AERO) ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಹೋರಾಡಬಹುದು.
ಪ್ರಕ್ರಿಯೆಯಲ್ಲಿದೆ ಗಂಭೀರ ಲೋಪ: ನಾಗರಿಕರ ಆತಂಕ
ನೋಟಿಸ್ ಪಟ್ಟಿಯನ್ನು ಪ್ರಕಟಿಸುವುದು ಪಾರದರ್ಶಕತೆಯ ದೃಷ್ಟಿಯಿಂದ ಸ್ವಾಗತಾರ್ಹವಾದರೂ, ಆಯೋಗ ವಿಧಿಸಿರುವ ನಿಯಮಗಳು ಬಡವರು, ಕಾರ್ಮಿಕರು ಮತ್ತು ವಲಸಿಗರಿಗೆ ಶಾಪವಾಗಿ ಪರಿಣಮಿಸಿವೆ.
ನೋಟಿಸ್ ಪಡೆದ ಮತದಾರರೇ ಸ್ವತಃ ಇಆರ್‌ಒ/ಎಇಆರ್‌ಒ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಆಯೋಗ ಕಡ್ಡಾಯಗೊಳಿಸಿದೆ. ಕುಟುಂಬದ ಪ್ರತಿನಿಧಿಗಳಾಗಲಿ ಅಥವಾ ವಕೀಲರಾಗಲಿ ಹಾಜರಾಗಲು ಅವಕಾಶವಿಲ್ಲ. ದಿನಗೂಲಿ ಕಾರ್ಮಿಕರು, ವೃದ್ಧರು ಮತ್ತು ಉದ್ಯೋಗ ನಿಮಿತ್ತ ಹೊರಗಿರುವವರು ಕೆಲಸ ಬಿಟ್ಟು ವಿಚಾರಣೆಗೆ ಅಲೆಯುವುದು ಪ್ರಜಾಸತ್ತಾತ್ಮಕ ಹಕ್ಕಿನ ಮೇಲಿನ ದಾಳಿಯಂತಾಗಿದೆ.
ಕಾಲಾವಕಾಶ ವಿಸ್ತರಣೆಗೆ ಹೆಚ್ಚಿದ ಆಗ್ರಹ
ಯಾವುದೇ ಕಾರಣಕ್ಕೂ ಒಬ್ಬನೇ ಒಬ್ಬ ಅರ್ಹ ಮತದಾರನ ಹೆಸರೂ ಪಟ್ಟಿಯಿಂದ ಕೈಬಿಟ್ಟುಹೋಗಬಾರದು. 43.81 ಲಕ್ಷದಷ್ಟು ಬೃಹತ್ ಸಂಖ್ಯೆಯ ಮತದಾರರಿಗೆ ದಾಖಲೆ ಸಲ್ಲಿಸಲು ಮತ್ತು ಆಕ್ಷೇಪಣೆ ಎತ್ತಲು ಈಗ ನೀಡಿರುವ ಸಮಯ ತೀರಾ ಕಡಿಮೆಯಾಗಿದೆ. ಆದ್ದರಿಂದ ನೋಟಿಸ್‌ಗೆ ಉತ್ತರಿಸುವ ಕಾಲಾವಕಾಶವನ್ನು ತಕ್ಷಣವೇ ವಿಸ್ತರಿಸಬೇಕು ಎಂದು ನಾಗರಿಕ ಹಕ್ಕು ಹೋರಾಟಗಾರರು ಒತ್ತಾಯಿಸಿದ್ದಾರೆ. ಆಯೋಗದ ಈ ‘ಡಿಜಿಟಲ್ ಜಾಗೃತಿ’ ಕೇವಲ ಕಾಗದಕ್ಕಷ್ಟೇ ಸೀಮಿತವಾಗದೆ, ನೈಜ ಮತದಾರರ ಹಕ್ಕುಗಳನ್ನು ರಕ್ಷಿಸುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.


