HomeಅಂಕಣಗಳುKarnataka against SIRಕರ್ನಾಟಕ ಎಸ್ಐಆರ್: ‘ಕೊನೆಯ ಮತದಾರನಿಗೆ ತನ್ನ ಹಕ್ಕು ಸಿಗುವವರೆಗೂ ನನ್ನ ಹೋರಾಟ ನಿಲ್ಲಲ್ಲ’: ನಟ ಪ್ರಕಾಶ್‌...

ಕರ್ನಾಟಕ ಎಸ್ಐಆರ್: ‘ಕೊನೆಯ ಮತದಾರನಿಗೆ ತನ್ನ ಹಕ್ಕು ಸಿಗುವವರೆಗೂ ನನ್ನ ಹೋರಾಟ ನಿಲ್ಲಲ್ಲ’: ನಟ ಪ್ರಕಾಶ್‌ ರಾಜ್

- Advertisement -
- Advertisement -

ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ಬಡವರು, ಆದಿವಾಸಿಗಳು ಹಾಗೂ ದಾಖಲೆಗಳ ಕೊರತೆ ಹೊಂದಿರುವ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿರುವ ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್, ರಾಜ್ಯದ ಕೊನೆಯ ಮತದಾರನಿಗೆ ಮತದಾನದ ಹಕ್ಕು ಸಿಗುವವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ. ಎಸ್‌ಐಆರ್ ರದ್ದಾಗಲೇಬೇಕು ಎಂದು ಆಗ್ರಹ ಮಾಡಿದ್ದಾರೆ.

ಕರ್ನಾಟಕದಲ್ಲಿ ಸುಮಾರು ಐದೂವರೆ ಕೋಟಿ ಮತದಾರರಿದ್ದು, ಇಷ್ಟು ದೊಡ್ಡ ಪ್ರಮಾಣದ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಕೇವಲ ಆರು ತಿಂಗಳಲ್ಲಿ ಪೂರ್ಣಗೊಳಿಸುವುದು ಸಾಧ್ಯವಿಲ್ಲ ಎಂದು ಮೊದಲಿನಿಂದಲೂ ಎಚ್ಚರಿಸುತ್ತಿದ್ದೆವು. ಅಗತ್ಯ ಸಂಖ್ಯೆಯ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಕೊರತೆಯ ನಡುವೆಯೂ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಅವರು ದೂರಿದರು.

“ಎಷ್ಟೋ ಜನರಿಗೆ ಇನ್ನೂ ಎಸ್ಐಆರ್‌ ಗಣತಿ ನಮೂನೆಗಳು ಸಿಕ್ಕಿಲ್ಲ. ಆದಿವಾಸಿಗಳ ಬಳಿ ದಾಖಲೆಗಳು ಎಲ್ಲಿಂದ ಇರಬೇಕು? ಪಶ್ಚಿಮ ಬಂಗಾಳದಲ್ಲಿ ನಡೆದ ಬೆಳವಣಿಗೆಗಳನ್ನು ನೋಡಿದ ನಾವು ಕರ್ನಾಟಕದಲ್ಲಿಯೂ ಇದೇ ರೀತಿಯ ಸಮಸ್ಯೆಗಳು ಎದುರಾಗಬಹುದು ಎಂದು ಮೊದಲೇ ಎಚ್ಚರಿಸಿದ್ದೆವು” ಎಂದು ಹೇಳಿದರು.

ಎಸ್‌ಐಆರ್ ಪ್ರಕ್ರಿಯೆಯ ಬಳಿಕ ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಿ, ನೋಟಿಸ್‌ಗಳಿಗೆ ಉತ್ತರಿಸಲು ಜನರಿಗೆ ಹೆಚ್ಚಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರೂ ತಮ್ಮ ಮನವಿಗೆ ಸ್ಪಂದನೆ ದೊರೆಯಲಿಲ್ಲ ಎಂದು ಅವರು ಆರೋಪಿಸಿದರು.

“ಕೋಟ್ಯಂತರ ಮತದಾರರ ಹೆಸರು ತೆಗೆದುಹಾಕಲಾಗಿದೆ”

ದೇಶಾದ್ಯಂತ ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಸುಮಾರು 13 ಕೋಟಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಕರ್ನಾಟಕದಲ್ಲಿ 1.08 ಕೋಟಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದ್ದು, 43 ಲಕ್ಷ ಮಂದಿಗೆ ‘ಲಾಜಿಕಲ್ ಡಿಸ್ಕ್ರೆಪೆನ್ಸಿ’ ಹೆಸರಿನಲ್ಲಿ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.

“ಇದರರ್ಥ ಸುಮಾರು ಒಂದೂವರೆ ಕೋಟಿ ಜನರ ಮತದಾನದ ಹಕ್ಕು ಪ್ರಶ್ನೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ 38 ಲಕ್ಷ ಮಂದಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಪ್ರಕರಣಗಳನ್ನು ಇತ್ಯರ್ಥಗೊಳಿಸಲು 12ರಿಂದ 15 ವರ್ಷಗಳ ಕಾಲ ಬೇಕಾಗಬಹುದು ಎಂದು ಟ್ರಿಬ್ಯುನಲ್ ಹೇಳುತ್ತಿದೆ. ಹಾಗಾದರೆ 15 ವರ್ಷಗಳ ಕಾಲ ಅಲ್ಲಿನ ಜನರು ಬದುಕಿದ್ದೂ ಸತ್ತವರಂತೆ ಇರಬೇಕೇ? ಅವರೆಲ್ಲಾ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಬೇಕೇ?” ಎಂದು ಅವರು ಪ್ರಶ್ನಿಸಿದರು.

“ಕರ್ನಾಟಕವನ್ನು ಮತ್ತೊಂದು ಪಶ್ಚಿಮ ಬಂಗಾಳವಾಗಲು ನಾವು ಬಿಡುವುದಿಲ್ಲ. ಇದು ಕೇವಲ ಎಸ್‌ಐಆರ್ ವಿರುದ್ಧದ ಹೋರಾಟವಲ್ಲ; ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸುವ ಹೋರಾಟ” ಎಂದು ಎಚ್ಚರಿಕೆ ನೀಡಿದರು.

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಎಸ್‌ಐಆರ್‌ಗೆ ಸಂಬಂಧಿಸಿದ ಕಳೆದ ಎರಡು ವರ್ಷಗಳ ಎಲ್ಲ ನಿರ್ಧಾರಗಳು ಮತ್ತು ದಾಖಲೆಗಳನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

“ಚುನಾವಣಾ ಆಯೋಗಕ್ಕೆ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಅಧಿಕಾರವಿಲ್ಲ. ಚುನಾವಣಾ ಆಯುಕ್ತರ ವಿರುದ್ಧ ಪ್ರಕರಣ ದಾಖಲಾಗದಂತೆ ಕಾನೂನು ತಿದ್ದುಪಡಿ ಮಾಡಲಾಗಿದೆ ಎಂದ ಅವರು, ಬಿಜೆಪಿ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದರು. ಮುಸ್ಲಿಮರು, ಕ್ರಿಶ್ಚಿಯನ್ನರು, ಅಲೆಮಾರಿಗಳು ಹಾಗೂ ಬಡವರ ಮತಗಳು ಬಿಜೆಪಿಗೆ ಬೇಡ ಎಂಬ ಕಾರಣಕ್ಕೆ ಮತದಾರರ ಪಟ್ಟಿಯ ಮೂಲಕ ಅವರ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಎಸ್‌ಐಆರ್ ಜತೆಗೆ ವಸತಿ ಸಮಸ್ಯೆಯೂ ಇದೆ

ಎಸ್‌ಐಆರ್ ಮಾತ್ರವಲ್ಲದೆ, ಆದಿವಾಸಿಗಳು ಹಾಗೂ ಬಡವರ ವಸತಿ ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸುವುದಾಗಿ ಅವರು ಹೇಳಿದರು.

“ತಾತ-ಮುತ್ತಾತರ ಕಾಲದಿಂದಲೂ ಜನ ಇಲ್ಲೇ ಬದುಕುತ್ತಿದ್ದಾರೆ. ಅದಕ್ಕಿಂತ ದಾಖಲೆಗಳು ಇನ್ನೇನು ಬೇಕು? ನಿಮ್ಮ ಅಹವಾಲುಗಳನ್ನು ಕೇಳಲು ನಾವೇ ಇಲ್ಲಿಗೆ ಬಂದಿದ್ದೇವೆ. ಈ ದಾಖಲೆಗಳನ್ನು ಸಂಗ್ರಹಿಸಿ ನಾವೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತೇವೆ. ನಿಮಗೆ ನಿವೇಶನ ಏಕೆ ಕೊಡುವುದಿಲ್ಲ ಎಂಬುದನ್ನು ನೋಡೋಣ” ಎಂದು ಅವರು ಹೇಳಿದರು.

ಈ ವೇಳೆ ಬಡವರು ಹಾಗೂ ಶ್ರೀಮಂತರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ವಿಭಿನ್ನ ರೀತಿಯ ಸೇವೆ ನೀಡಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು.

“ಶ್ರೀಮಂತರ ಮತದಾರರ ಪಟ್ಟಿಯ ಸಮಸ್ಯೆಗಳನ್ನು ಅಧಿಕಾರಿಗಳು ಮನೆಗೆ ತೆರಳಿ ಸರಿಪಡಿಸುತ್ತಾರೆ. ಆದರೆ ಬಡವರ ಮನೆಗಳಿಗೆ ಏಕೆ ಹೋಗುವುದಿಲ್ಲ? ಬಾಬಾ ಸಾಹೇಬರು ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಅಧಿಕಾರಿಗಳೇ ಮನೆಗೆ ತೆರಳಿ ಮತದಾರರ ಸಮಸ್ಯೆಗಳನ್ನು ಸರಿಪಡಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ ಈ ವ್ಯವಸ್ಥೆ ಇಲ್ಲಿಯೂ ಇರಬೇಕಲ್ಲವೇ?” ಎಂದು ಪ್ರಶ್ನಿಸಿದರು.

ಎಸ್‌ಐಆರ್ ತಪ್ಪು ಸರಿಪಡಿಸುವ ಕೆಲಸವಲ್ಲ, ರದ್ದಾಗಲೇಬೇಕು

ಎಸ್‌ಐಆರ್ ನಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಸಣ್ಣಪುಟ್ಟ ತಿದ್ದುಪಡಿಯ ಮೂಲಕ ಪರಿಹರಿಸಲು ಸಾಧ್ಯವಿಲ್ಲ. ಪ್ರಕ್ರಿಯೆಯಲ್ಲೇ ಗಂಭೀರ ದೋಷಗಳಿವೆ ಎಂಬುದು ತಮ್ಮ ನಿಲುವು ಎಂದು ಅವರು ಹೇಳಿದರು.

“ಎಸ್‌ಐಆರ್ ತಪ್ಪುಗಳನ್ನು ಸರಿ ಮಾಡಿಕೊಳ್ಳುವುದು ಕಾರಿಗೆ ಪಂಚರ್ ಹಾಕಿದಂತೆ ಅಲ್ಲ. ಎಸ್‌ಐಆರ್ ಪ್ರಕ್ರಿಯೆಯಲ್ಲೇ ತಪ್ಪಿದೆ. ಆದ್ದರಿಂದ ರದ್ದಾಗಲೇಬೇಕು. ನಮ್ಮ ಹೋರಾಟ ಇಷ್ಟಕ್ಕೇ ಸೀಮಿತವಾಗುವುದಿಲ್ಲ” ಎಂದರು.

ಹತ್ತು ದಿನಗಳ ಪ್ರವಾಸದ ವೇಳೆ ಸಂಗ್ರಹಿಸಿರುವ ಮಾಹಿತಿಯನ್ನು ಬೆಂಗಳೂರಿನಲ್ಲಿ ಮಾಧ್ಯಮಗಳ ಮೂಲಕ ಜನರ ಮುಂದಿಡುವುದಾಗಿ ತಿಳಿಸಿದ ಅವರು, ಸಂತ್ರಸ್ತರೊಂದಿಗೆ ಎಲ್ಲ ಸಂಸದರು ಹಾಗೂ ಶಾಸಕರು ನಿಲ್ಲಬೇಕು ಎಂದು ಒತ್ತಾಯಿಸಿದರು.

“ನಿಮ್ಮನ್ನು ಬೆಂಗಳೂರಿಗೆ ಕರೆಸಿಕೊಳ್ಳುವುದು ಕಷ್ಟವಲ್ಲ. ಆದರೆ ನಿಮ್ಮ ಅಹವಾಲುಗಳನ್ನು ಕೇಳಲು ನಾವೇ ಇಲ್ಲಿಗೆ ಬಂದಿದ್ದೇವೆ. ರಾಜ್ಯದ ಕೊನೆಯ ಮತದಾರನಿಗೆ ತನ್ನ ಹಕ್ಕು ಸಿಗುವವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ. ಎಸ್‌ಐಆರ್ ರದ್ದಾಗುವವರೆಗೂ ಹೋರಾಟ ಮುಂದುವರಿಯುತ್ತದೆ” ಎಂದು ಪ್ರಕಾಶ್ ರಾಜ್ ಹೇಳಿದರು.

SIR ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಲೋಪಗಳು ಮತ್ತು ಅಕ್ರಮಗಳನ್ನು ಪರಿಶೀಲಿಸಿ, ಸಂತ್ರಸ್ತ ಮತದಾರರನ್ನು ನೇರವಾಗಿ ಭೇಟಿಯಾಗಿ ಅವರ ಸಾಕ್ಷ್ಯಗಳನ್ನು ಸಂಗ್ರಹಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟ ‘SIR ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’ವನ್ನು ಹಮ್ಮಿಕೊಂಡಿದೆ. ಮಡಿಕೇರಿಯಲ್ಲಿ ನಡೆದ ಸಮಾಲೋಚನಾ ಸಭೆ ಇದೇ ಪ್ರವಾಸದ ಭಾಗವಾಗಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹಕ್ಕು ಕಸಿಯುತ್ತಿರುವ SIR: ಸೆ.30 ರಂದು ‘SIR ಪರಿಶೋಧನಾ’ ವರದಿ ಬಿಡುಗಡೆ

ಕೇಂದ್ರ ಚುನಾವಣಾ ಆಯೋಗವು ಜಾರಿಗೆ ತಂದಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಬಡ ಹಾಗೂ ಅರ್ಹ ಮತದಾರರ ಹೆಸರುಗಳು ತಾಂತ್ರಿಕ ಕಾರಣ ನೀಡಿ ಪಟ್ಟಿಯಿಂದ ಡಿಲೀಟ್ ಆಗುತ್ತಿದ್ದು, ನಾಗರಿಕರ ಮೂಲಭೂತ...

ಮತದಾರರ ಹಕ್ಕು ಕಸಿಯುತ್ತಿರುವ SIR: ಸೆ.30 ರಂದು ಸರ್ಕಾರಕ್ಕೆ ‘ಪರಿಶೋಧನೆ ಹಾಗೂ ಪ್ರತಿರೋಧ ಜಾಥಾ’ ವರದಿ ಸಲ್ಲಿಕೆ

ಕೇಂದ್ರ ಚುನಾವಣಾ ಆಯೋಗವು ಜಾರಿಗೆ ತಂದಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಬಡ ಹಾಗೂ ಅರ್ಹ ಮತದಾರರ ಹೆಸರುಗಳು ತಾಂತ್ರಿಕ ಕಾರಣಗಳನ್ನು ನೀಡಿ ಪಟ್ಟಿಯಿಂದ ಡಿಲೀಟ್ ಆಗುತ್ತಿದ್ದು, ನಾಗರಿಕರ ಮೂಲಭೂತ...

ಕರ್ನಾಟಕದಲ್ಲಿ ಇಂದಿನಿಂದ ಎಸ್‌ಐಆರ್ ‘ಕಚೇರಿ ವಿಚಾರಣೆ’ ಸ್ಥಗಿತ: ಚುನಾವಣಾ ಆಯೋಗದಿಂದ ಹೊಸ ಮಾರ್ಗದರ್ಶಿ!

ಮತದಾರರ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ' (Special Intensive Revision - SIR) ಪ್ರಕ್ರಿಯೆಯಲ್ಲಿ ನೋಟಿಸ್ ಪಡೆದಿರುವ ಮತದಾರರು ಚುನಾವಣಾ ಕಚೇರಿಗಳಿಗೆ ನೇರವಾಗಿ ಹಾಜರಾಗುವ 'ಕಚೇರಿ ವಿಚಾರಣೆ' (Physical Hearing) ವ್ಯವಸ್ಥೆಯನ್ನು ಕರ್ನಾಟಕದ...

ಸಂವಿಧಾನ ಇಲ್ಲಿನ ಬಡವರ ಮನೆಗೆ ತಲುಪಿಲ್ಲ : ಕೆ. ಮೊಣ್ಣಪ್ಪ

"ಶೋಷಿತ ಸಮುದಾಯದಲ್ಲಿ ಹುಟ್ಟಿದ ನನ್ನ ತಂದೆಗೆ 12 ಜನ ಮಕ್ಕಳು. ಐದು ತಲೆಮಾರು ಬದಲಾದರೂ..ಸ್ವಾತಂತ್ರ್ಯ ಬಂದು 80 ವರ್ಷ ಕಳೆದರೂ ಇಂದಿಗೂ ನಮ್ಮ ಜನರಿಗೆ ನೆಲೆ ಸಿಕ್ಕಿಲ್ಲ. ಭೂಮಾಲೀಕರು ಹೇಳಿದಂತೆ ಕೇಳಿದರೆ ಮಾತ್ರ...

ಸಂಭಲ್ ಚುನಾವಣೆ ವಿವಾದ: ಸಿಇಸಿ ಅಳಿಯನ ವರದಿ ಆಧರಿಸಿ ದೂರು ವಜಾ? ಎದ್ದುನಿಂತ ‘ಸ್ವಹಿತಾಸಕ್ತಿ ಸಂಘರ್ಷ’ದ ಪ್ರಶ್ನೆ!

ಭಾರತೀಯ ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಮತ್ತು ಕಾರ್ಯವೈಖರಿಯ ಪಾರದರ್ಶಕತೆಯ ಕುರಿತು ‘ಸ್ಕ್ರಾಲ್.ಇನ್’ (Scroll.in) ಡಿಜಿಟಲ್ ಮಾಧ್ಯಮ ಸಂಸ್ಥೆ ಪ್ರಕಟಿಸಿರುವ ಸರಣಿ ತನಿಖಾ ವರದಿಯೊಂದು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. 2024ರ ಲೋಕಸಭಾ ಚುನಾವಣೆ...

SIR | ಕೊಡಗಿನ ಪಾಲೆಮಾಡಿನಲ್ಲಿ ‘ಬೃಹತ್ ಪಬ್ಲಿಕ್ ಹಿಯರಿಂಗ್’ : ನಟ ಪ್ರಕಾಶ್ ರಾಜ್ ಮುಂದೆ ನೋವು ತೋಡಿಕೊಂಡ ಹಾಡಿ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) 'ಪರಿಶೋಧನೆ ಮತ್ತು ಪ್ರತಿರೋಧ ಜಾಥಾ'ದ ಭಾಗವಾಗಿ ಬಹುಭಾಷಾ ನಟ, ಹೋರಾಟಗಾರ ಪ್ರಕಾಶ್ ರಾಜ್‌ ನೇತೃತ್ವದಲ್ಲಿ ಮಂಗಳವಾರ (ಸೆ.29) ಕೊಡಗಿನ ಪಾಲೆಮಾಡಿನಲ್ಲಿ 'ಬೃಹತ್ ಪಬ್ಲಿಕ್ ಹಿಯರಿಂಗ್'...

ದೆಹಲಿ-ಎನ್‌ಸಿಆರ್‌ನಲ್ಲಿ ಸರಣಿ ಅತ್ಯಾಚಾರ: ‘ವ್ಯವಸ್ಥಿತ ವೈಫಲ್ಯ’ ಎಂದ ಸುಪ್ರೀಂ ಕೋರ್ಟ್, ಸಾರ್ವಜನಿಕ ಸ್ಥಳಗಳು ‘ಅಪಾಯದ ವಲಯ’ವಾಗಲು ಬಿಡಲಾಗದು

ನವದೆಹಲಿ: ದೆಹಲಿ-ಎನ್‌ಸಿಆರ್‌ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿರುವ ಸರಣಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಈ ಪ್ರಕರಣಗಳು ಕೇವಲ ಪ್ರತ್ಯೇಕ ಅಪರಾಧಗಳಾಗಿ ನೋಡಲು ಸಾಧ್ಯವಿಲ್ಲ ಎಂದು...

ಎಲ್‌ಪಿಯು ಕ್ಯಾಂಪಸ್‌ ಹಿಂಸಾಚಾರ: ಹೆಣ್ಣುಮಕ್ಕಳಿಗೆ ‘ಹಾಸ್ಟೆಲ್‌ನೊಳಗೂ ಸುರಕ್ಷತೆ ಇಲ್ಲದಿದ್ದರೆ ಅದು ಗಂಭೀರ ಸಮಸ್ಯೆ’: ಅಭಿಜೀತ್ ದೀಪ್ಕೆ 

ಫಾಗ್ವಾರಾ: ಪಂಜಾಬ್‌ನ ಫಾಗ್ವಾರಾದಲ್ಲಿರುವ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ (ಎಲ್‌ಪಿಯು) ಕ್ಯಾಂಪಸ್‌ನಲ್ಲಿ ವಾರಾಂತ್ಯದಲ್ಲಿ ನಡೆದ ಪ್ರತಿಭಟನೆ, ಹಿಂಸಾಚಾರ ಮತ್ತು ಬೆಂಕಿ ಹಚ್ಚಿದ ಘಟನೆಗಳ ಬೆನ್ನಲ್ಲೇ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ...

ಉಜ್ಜಯಿನಿ ಶಾಹಿ ಮಸೀದಿ ವಿವಾದ: ರಸ್ತೆ ಅಗಲೀಕರಣಕ್ಕಾಗಿ ಭಾಗಶಃ ಕೆಡವುವಿಕೆಯ ವಿರುದ್ಧದ ಮೇಲ್ಮನವಿ ವಜಾಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್ 

ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಶಾಹಿ ಮಸೀದಿಯ ಒಂದು ಭಾಗವನ್ನು ತೆರವುಗೊಳಿಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠ ಸೋಮವಾರ, ಸೆಪ್ಟೆಂಬರ್ 28ರಂದು ವಿಲೇವಾರಿ ಮಾಡಿದೆ. ಮಸೀದಿ...

ಮುಖ್ಯ ಚುನಾವಣಾ ಆಯುಕ್ತ ಹುದ್ದೆಯಿಂದ ಗ್ಯಾನೇಶ್ ಕುಮಾರ್‌ ಅಮಾನತುಗೊಳಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಇತರ ಪರಿಹಾರಗಳ ಜೊತೆಗೆ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಬೇಕು ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಅದರ ಮುಖ್ಯಸ್ಥರು ಏಕಪಕ್ಷೀಯವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುವುದಾಗಿ ಘೋಷಿಸಬೇಕು...