ಮತದಾರರ ಪಟ್ಟಿಗಳ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision – SIR) ಪ್ರಕ್ರಿಯೆಯಲ್ಲಿ ನೋಟಿಸ್ ಪಡೆದಿರುವ ಮತದಾರರು ಚುನಾವಣಾ ಕಚೇರಿಗಳಿಗೆ ನೇರವಾಗಿ ಹಾಜರಾಗುವ ‘ಕಚೇರಿ ವಿಚಾರಣೆ’ (Physical Hearing) ವ್ಯವಸ್ಥೆಯನ್ನು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಕಚೇರಿಯು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದೆ. ‘ದಿ ನ್ಯೂಸ್ ಮಿನಿಟ್’ ಪ್ರಕಟಿಸಿರುವ ವರದಿಯ ಪ್ರಕಾರ, ನವದೆಹಲಿಯಲ್ಲಿ ನಡೆದ ಭಾರತೀಯ ಚುನಾವಣಾ ಆಯೋಗದ ಪೂರ್ಣ ಪ್ರಮಾಣದ ಸಭೆಯಲ್ಲಿ ಕೈಗೊಳ್ಳಲಾದ ನೂತನ ಮಾರ್ಗದರ್ಶಿ ಸೂತ್ರಗಳ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಆಯೋಗದ ನೂತನ ನಿರ್ದೇಶನದಂತೆ, ದತ್ತಾಂಶಗಳಲ್ಲಿನ ವ್ಯತ್ಯಾಸಗಳು ಹಾಗೂ ‘ಅನ್‌ಮ್ಯಾಪ್ಡ್’ ವಿಭಾಗದಡಿಯಲ್ಲಿ ನೋಟಿಸ್ ಸ್ವೀಕರಿಸಿರುವ ಮತದಾರರು ಇನ್ಮುಂದೆ ಇಆರ್‌ಒ ಅಥವಾ ಎಇಆರ್‌ಒ ಕಚೇರಿಗಳಿಗೆ ಅಲೆಯುವ ಅಗತ್ಯವಿರುವುದಿಲ್ಲ. ಬದಲಿಗೆ, ಬೂತ್ ಮಟ್ಟದ ಅಧಿಕಾರಿಗಳು (BLO) ಸ್ವತಃ ಮತದಾರರ ಮನೆಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ ಮತ್ತು ಅವುಗಳನ್ನು ‘ಇಸಿಐನೆಟ್’ ಡಿಜಿಟಲ್ ವ್ಯವಸ್ಥೆಯಲ್ಲಿ ಅಪ್‌ಲೋಡ್ ಮಾಡಲಿದ್ದಾರೆ. ತೀರಾ ಅನಿವಾರ್ಯ ಹಾಗೂ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಆನ್‌ಲೈನ್ ಮೂಲಕ ವಿಚಾರಣೆ ನಡೆಸಲು ಸೂಚಿಸಲಾಗಿದ್ದು, ವಿಚಾರಣೆ ಕಡ್ಡಾಯವಾದಲ್ಲಿ ಮತದಾರರು ತಮ್ಮ ಪರವಾಗಿ ಕುಟುಂಬದ ಹಿರಿಯ ಸದಸ್ಯರೊಬ್ಬರನ್ನು ಹಾಜರಾಗಲು ನಿಯೋಜಿಸಬಹುದಾಗಿದೆ.
ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಡಿಯಲ್ಲಿ ಒಟ್ಟು 43.82 ಲಕ್ಷ ಮತದಾರರಿಗೆ ವಿಚಾರಣೆಯ ನೋಟಿಸ್ ನೀಡಲಾಗಿತ್ತು. ಆ ಪೈಕಿ ಸೆಪ್ಟೆಂಬರ್ 26ರ ವೇಳೆಗೆ 28.80 ಲಕ್ಷ ವಿಚಾರಣೆಗಳು ಪೂರ್ಣಗೊಂಡಿದ್ದು, ಇನ್ನು 12.82 ಲಕ್ಷ ವಿಚಾರಣೆಗಳು ಬಾಕಿಯಿದ್ದವು. ಈ ಮೊದಲು ಬಾಕಿ ಇರುವ ವಿಚಾರಣೆಗಳನ್ನು ಪೂರ್ಣಗೊಳಿಸಲು ಅಕ್ಟೋಬರ್ 12 ಕೊನೆಯ ದಿನಾಂಕವಾಗಿತ್ತು ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿತ್ತು. ಚುನಾವಣಾ ಕಚೇರಿಗಳ ಮುಂದೆ ದಿನಗೂಲಿ ಕಾರ್ಮಿಕರು, ಬಡವರು ಮತ್ತು ಹಿರಿಯ ನಾಗರಿಕರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಕಚೇರಿಗೆ ಅಲೆಯುವ ಪ್ರಕ್ರಿಯೆಯಿಂದ ಸಾರ್ವಜನಿಕರಿಗೆ ಅಗಾಧ ತೊಂದರೆಯಾಗುತ್ತಿದೆ ಎಂಬ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಆಯೋಗವು ಈ ಸಡಿಲಿಕೆಯ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ.
ದೇಶಾದ್ಯಂತ ನಡೆಯುತ್ತಿರುವ ಎಸ್‌ಐಆರ್ ಪರಿಷ್ಕರಣೆಯಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಏಕಪಕ್ಷೀಯವಾಗಿ ಕೈಬಿಡಲಾಗುತ್ತಿದೆ ಎಂಬ ಆರೋಪಗಳು ಮತ್ತು ಡಿಜಿಟಲ್ ಫಾರ್ಮ್-6 ಬದಲಾವಣೆಗಳ ಕುರಿತು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರ ನಡುವೆ ವ್ಯಕ್ತವಾಗಿದ್ದ ಆಂತರಿಕ ಭಿನ್ನಾಪ್ರಾಯಗಳ ನಡುವೆಯೇ ಕರ್ನಾಟಕ ಸಿಇಒ ಕಚೇರಿ ಈ ಕ್ರಮಕ್ಕೆ ಮುಂದಾಗಿದೆ.


