ಕೇಂದ್ರ ಚುನಾವಣಾ ಆಯೋಗವು ಜಾರಿಗೆ ತಂದಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಬಡ ಹಾಗೂ ಅರ್ಹ ಮತದಾರರ ಹೆಸರುಗಳು ತಾಂತ್ರಿಕ ಕಾರಣಗಳನ್ನು ನೀಡಿ ಪಟ್ಟಿಯಿಂದ ಡಿಲೀಟ್ ಆಗುತ್ತಿದ್ದು, ನಾಗರಿಕರ ಮೂಲಭೂತ ಹಕ್ಕಿಗೆ ತೀವ್ರ ಧಕ್ಕೆಯುಂಟಾಗಿದೆ. ವಿಚಾರಣೆಯ ಹೆಸರಿನಲ್ಲಿ ಬಡವರು ತಮ್ಮ ಕೆಲಸ ಕೂಲಿ ಬಿಟ್ಟು ಬಿಎಲ್ಒಗಳ (BLO) ಮುಂದೆ ಗಂಟೆಗಟ್ಟಲೆ ನಿಲ್ಲುವ ದುಸ್ಥಿತಿ ನಿರ್ಮಾಣವಾಗಿದೆ.
ಈ ಅನ್ಯಾಯದ ವಿರುದ್ಧ ‘ಎಸ್ಐಆರ್ ವಿರೋಧಿ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟದ’ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ‘ಎಸ್ಐಆರ್ ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’ ಜಾಥಾವು ಸೆಪ್ಟೆಂಬರ್ 30ರಂದು ಬೆಂಗಳೂರಿನ ಶಾಸಕರ ಭವನದಲ್ಲಿ (LH) ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸುವ ಮೂಲಕ ಸಮಾರೋಪಗೊಳ್ಳಲಿದೆ ಎಂದು ಎಸ್ಐಆರ್ ವಿರೋಧಿ ಒಕ್ಕೂಟ ತಿಳಿಸಿದೆ.
20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಂಚರಿಸಿ ಜನಾಭಿಪ್ರಾಯ ಸಂಗ್ರಹ
ಸೆಪ್ಟೆಂಬರ್ 22ರಿಂದ ಆರಂಭವಾದ ಈ ಪ್ರತಿರೋಧ ಜಾಥಾದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್, ನೂರ್ ಶ್ರೀಧರ್, ಕೆ.ಎಲ್. ಅಶೋಕ್, ಕುಮಾರ್ ಸಮತಳ ಸೇರಿದಂತೆ ಹಲವು ಮುಖಂಡರು ಸಕ್ರಿಯವಾಗಿ ಭಾಗವಹಿಸಿ, ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡ ತಂಡವು, ಎಸ್ಐಆರ್ ಅವಾಂತರದಿಂದಾಗಿ ತಮ್ಮದಲ್ಲದ ತಪ್ಪಿಗೆ ಮತಹಕ್ಕು ಕಳೆದುಕೊಂಡ 100 ಮತಗಟ್ಟೆಗಳ ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಅವರ ಅಹವಾಲುಗಳನ್ನು ಆಲಿಸಿದೆ. ಕೊಡಗಿನಲ್ಲಿ ನಡೆದ ಸಂತ್ರಸ್ತರ ಬೃಹತ್ ಸಮಾವೇಶ (ಪಬ್ಲಿಕ್ ಹಿಯರಿಂಗ್) ಸೇರಿದಂತೆ ವಿವಿಧ ಸಾರ್ವಜನಿಕ ವಿಚಾರಣೆಗಳಲ್ಲಿ ಕ್ರೂಡೀಕರಿಸಲಾದ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿರುವ ಸಾಕ್ಷ್ಯಗಳು ಮತ್ತು ದೂರುಗಳ ವರದಿಯನ್ನು ನಾಳೆ (ಸೆಪ್ಟಂಬರ್ 30) ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತಿದೆ ಎಂದಿದೆ.
ರಾಷ್ಟ್ರಮಟ್ಟದ ಹೋರಾಕ್ಕೆ ಕರೆ:
ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಮತದಾರರ ಹಕ್ಕುಗಳ ಕಸಿತವನ್ನು ಖಂಡಿಸಿ, ಸಂತ್ರಸ್ತರ ಹಕ್ಕುಗಳನ್ನು ಮರುಸ್ಥಾಪಿಸಲು ಈ ಹೋರಾಟವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಲು ತೀರ್ಮಾನಿಸಲಾಗಿದೆ. ಇದರ ಭಾಗವಾಗಿ ಅಕ್ಟೋಬರ್ 1ರಂದು ದೆಹಲಿಯ ಜಂತರ್ ಮಂತರ್ನಲ್ಲಿ ಸಂತ್ರಸ್ತ ರಾಜ್ಯಗಳ ಪ್ರತಿನಿಧಿಗಳ ಸಮಾವೇಶ ನಡೆಸಲಾಗುವುದು ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಮುಖ ಚಿಂತಕರಾದ ಯೋಗೇಂದ್ರ ಯಾದವ್ ಹಾಗೂ ಪರಕಾಲ ಪ್ರಭಾಕರ್ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು, ದೇಶಾದ್ಯಂತ ಹೋರಾಟ ರೂಪಿಸುವ ಕಾರ್ಯತಂತ್ರವನ್ನು ಪ್ರಕಟಿಸಲಾಗುವುದು ಎಂದಿದ್ದಾರೆ.
ಸಿಇಸಿ ಜ್ಞಾನೇಶ್ ಕುಮಾರ್ ವಜಾಗೆ ತೀವ್ರಗೊಂಡ ಆಗ್ರಹ
ಮತ್ತೊಂದೆಡೆ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ಸರ್ವಾಧಿಕಾರಿ ಧೋರಣೆ, ಏಕಪಕ್ಷೀಯ ನಿರ್ಧಾರಗಳು ಮತ್ತು ಎಸ್ಐಆರ್ ಪ್ರಕ್ರಿಯೆಯ ಆಡಳಿತಾತ್ಮಕ ಅಕ್ರಮಗಳ ವಿರುದ್ಧ ಚುನಾವಣಾ ಆಯೋಗದ ಇನ್ನಿಬ್ಬರು ಆಯುಕ್ತರೇ ಸಾಲು ಸಾಲು ಆಕ್ಷೇಪವೆತ್ತಿರುವುದು ವಿವಾದವನ್ನು ತೀವ್ರಗೊಳಿಸಿದೆ. ದೇಶದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳ ನಿಷ್ಪಕ್ಷಪಾತತೆಯನ್ನು ರಕ್ಷಿಸಲು ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಎಂಬ ಆಗ್ರಹದೊಂದಿಗೆ ಸಾರ್ವಜನಿಕ ಹಾಗೂ ರಾಜಕೀಯ ಪ್ರತಿರೋಧದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ.


