ಕೇಂದ್ರ ಚುನಾವಣಾ ಆಯೋಗವು ಜಾರಿಗೆ ತಂದಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಬಡ ಹಾಗೂ ಅರ್ಹ ಮತದಾರರ ಹೆಸರುಗಳು ತಾಂತ್ರಿಕ ಕಾರಣ ನೀಡಿ ಪಟ್ಟಿಯಿಂದ ಡಿಲೀಟ್ ಆಗುತ್ತಿದ್ದು, ನಾಗರಿಕರ ಮೂಲಭೂತ ಹಕ್ಕಿಗೆ ತೀವ್ರ ಧಕ್ಕೆಯುಂಟಾಗಿದೆ. ವಿಚಾರಣೆಯ ಹೆಸರಿನಲ್ಲಿ ಬಡವರು ಕೆಲಸ ಕೂಲಿ ಬಿಟ್ಟು ಬಿಎಲ್‌ಒಗಳ (BLO) ಮುಂದೆ ಗಂಟೆಗಟ್ಟಲೆ ನಿಲ್ಲುವ ದುಸ್ಥಿತಿ ನಿರ್ಮಾಣವಾಗಿದೆ.
ಈ ಅನ್ಯಾಯದ ವಿರುದ್ಧ ‘ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟ’ವು ಹಮ್ಮಿಕೊಂಡಿದ್ದ ‘ಎಸ್‌ಐಆರ್ ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’ ಜಾಥಾದ ಸಮಾರೋಪದ ಅಂಗವಾಗಿ ನಾಳೆ (ಸೆಪ್ಟೆಂಬರ್ 30, 2026) ‘ಎಸ್‌ಐಆರ್ ಪರಿಶೋಧನಾ ವರದಿ’ ಬಿಡುಗಡೆಯಾಗಲಿದೆ.
ಶಾಸಕರ ಭವನದಲ್ಲಿ ವರದಿ ಬಿಡುಗಡೆ, ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಕೆ
ಸೆಪ್ಟೆಂಬರ್ 22ರಿಂದ ಆರಂಭವಾದ ಈ ಪ್ರತಿರೋಧ ಜಾಥಾದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್, ನೂರ್ ಶ್ರೀಧರ್, ಕೆ.ಎಲ್. ಅಶೋಕ್, ಕುಮಾರ್ ಸಮತಳ ಸೇರಿದಂತೆ ಹಲವು ಮುಖಂಡರು ಭಾಗವಹಿಸಿ, 20ಕ್ಕೂ ಹೆಚ್ಚು ಜಿಲ್ಲೆಗಳ 100ಕ್ಕೂ ಹೆಚ್ಚು ಮತಗಟ್ಟೆಗಳ ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಅಹವಾಲು ಆಲಿಸಿದ್ದಾರೆ. ಕೊಡಗಿನ ಪಬ್ಲಿಕ್ ಹಿಯರಿಂಗ್ ಸೇರಿದಂತೆ ವಿವಿಧಡೆ ಸಂಗ್ರಹಿಸಿದ ಸಾಕ್ಷ್ಯಾಧಾರಿತ ‘ಎಸ್‌ಐಆರ್ ಪರಿಶೋಧನಾ ವರದಿ’ಯನ್ನು ಸೆಪ್ಟೆಂಬರ್ 30ರಂದು ಬೆಳಿಗ್ಗೆ 10:30ಕ್ಕೆ ಬೆಂಗಳೂರಿನ ಶಾಸಕರ ಭವನ-2ರಲ್ಲಿ ನಡೆಯಲಿರುವ ಸಮಾಲೋಚನಾ ಸಭೆಯಲ್ಲಿ ಬಿಡುಗಡೆ ಮಾಡಲಾಗುವುದು. ತದನಂತರ ಮಧ್ಯಾಹ್ನ 3 ರಿಂದ 4 ಗಂಟೆಯ ನಡುವೆ ವಿಧಾನಸೌಧದಲ್ಲಿ ರಾಜ್ಯ ಸರ್ಕಾರ ಹಾಗೂ ನಾಗರಿಕ ಸಮಾಜದ ಈ ಹಕ್ಕೊತ್ತಾಯದ ವರದಿಯನ್ನು ಸಲ್ಲಿಕೆ ಮಾಡಲಾಗುವುದು.
ಅಕ್ಟೋಬರ್ 1ಕ್ಕೆ ದೆಹಲಿ ಜಂತರ್ ಮಂತರ್‌ನಲ್ಲಿ ಸಮಾವೇಶ
ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮತದಾರರ ಹಕ್ಕು ಕಸಿಯುತ್ತಿರುವ ಎಸ್‌ಐಆರ್ ವಿರುದ್ಧದ ಹೋರಾಟವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಲು ತೀರ್ಮಾನಿಸಲಾಗಿದೆ. ಇದರ ಭಾಗವಾಗಿ ಅಕ್ಟೋಬರ್ 1ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಸಂತ್ರಸ್ತ ರಾಜ್ಯಗಳ ಪ್ರತಿನಿಧಿಗಳ ಬೃಹತ್ ಸಮಾವೇಶ ನಡೆಯಲಿದೆ. ಪ್ರಮುಖ ಚಿಂತಕರಾದ ಯೋಗೇಂದ್ರ ಯಾದವ್ ಹಾಗೂ ಪರಕಾಲ ಪ್ರಭಾಕರ್ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ, ದೇಶಾದ್ಯಂತ ಹೋರಾಟ ರೂಪಿಸುವ ಕಾರ್ಯತಂತ್ರ ಪ್ರಕಟಿಸಲಾಗುವುದು ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.
ಮತ್ತೊಂದೆಡೆ, ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರ ಸರ್ವಾಧಿಕಾರಿ ಧೋರಣೆ ಹಾಗೂ ಎಸ್‌ಐಆರ್ ಆಡಳಿತಾತ್ಮಕ ಅಕ್ರಮಗಳ ವಿರುದ್ಧ ಚುನಾವಣಾ ಆಯೋಗದ ಇನ್ನಿಬ್ಬರು ಆಯುಕ್ತರೇ ಸಾಲು ಸಾಲು ಆಕ್ಷೇಪವೆತ್ತಿರುವುದು ವಿವಾದವನ್ನು ತೀವ್ರಗೊಳಿಸಿದ್ದು, ದೇಶದ ಸಾಂವಿಧಾನಿಕ ಸಂಸ್ಥೆಗಳ ನಿಷ್ಪಕ್ಷಪಾತತೆ ರಕ್ಷಿಸಲು ಸಿಇಸಿ ಗ್ಯಾನೇಶ್ ಕುಮಾರ್ ಅವರನ್ನು ತಕ್ಷಣವೇ ವಜಾಗೊಳಿಸಬೇಕೆಂಬ ಆಗ್ರಹ ತೀವ್ರಗೊಂಡಿದೆ.


