ದೇಶದಲ್ಲಿ ಗರಿಷ್ಠ ಚಿಲ್ಲರೆ ಬೆಲೆ (MRP) ಹೆಸರಿನಲ್ಲಿ ಔಷಧಗಳ ಬೆಲೆಯನ್ನು ಮನಬಂದಂತೆ ಹೆಚ್ಚಿಸಿ ಸಾಮಾನ್ಯ ರೋಗಿಗಳನ್ನು ಸುಲಿಗೆ ಮಾಡುತ್ತಿರುವುದನ್ನು ಸುಪ್ರೀಂ ಕೋರ್ಟ್ ‘ಅಮಾನವೀಯ ಲೂಟಿ’ ಎಂದು ತೀವ್ರವಾಗಿ ಖಂಡಿಸಿದೆ.
ಔಷಧಗಳ ನೈಜ ಖರೀದಿ ವೆಚ್ಚ ಮತ್ತು MRP ನಡುವಿನ ಭಾರಿ ವ್ಯತ್ಯಾಸದಿಂದಾಗಿ ಪ್ರತಿದಿನ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿರುವ ಅತ್ಯುನ್ನತ ನ್ಯಾಯಾಲಯ, ಔಷಧ ದರಗಳಲ್ಲಿ ಪಾರದರ್ಶಕತೆ ತರಲು ಚಿಲ್ಲರೆ ವ್ಯಾಪಾರಿ ಬೆಲೆಗಿಂತ (PTR) ಗರಿಷ್ಠ ಚಿಲ್ಲರೆ ಬೆಲೆಯ (MRP) ಮಾರ್ಜಿನ್ ಶೇಕಡಾ 16ಕ್ಕಿಂತ ಹೆಚ್ಚು ಇರದಂತೆ ನಿಯಮ ರೂಪಿಸಲು ಸಾಧ್ಯವಿಲ್ಲವೇ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಔಷಧಗಳ ಬೆಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು, ಮೆಡಿಕಲ್ ಮಾಫಿಯಾ ಹಾಗೂ ಆಸ್ಪತ್ರೆಗಳ ದಂಧೆಯನ್ನು ಸಾಕ್ಷ್ಯಾಧಾರಗಳ ಸಮೇತ ಎತ್ತಿಹಿಡಿಯಿತು.
ವಿಚಾರಣೆ ವೇಳೆ ₹3,520 ಚಿಲ್ಲರೆ ವ್ಯಾಪಾರ ದರವಿರುವ ಇಂಜೆಕ್ಷನ್‌ಗೆ ಬರೋಬ್ಬರಿ ₹22,437 MRP ನಿಗದಿಪಡಿಸಿರುವುದು ಹಾಗೂ ಕೇವಲ ₹3,000 ಚಿಲ್ಲರೆ ದರದ ಕ್ಯಾನ್ಸರ್ ಔಷಧಿಗೆ ₹27,000 MRP ಹಾಕಿ ಮಾರಾಟ ಮಾಡುತ್ತಿರುವುದನ್ನು ಕೋರ್ಟ್ ಗಮನಕ್ಕೆ ತರಲಾಯಿತು. ಈ ಭಾರಿ ಅಂತರವನ್ನು ಕಂಡು ಆಘಾತ ವ್ಯಕ್ತಪಡಿಸಿದ ನ್ಯಾಯಮೂರ್ತಿ ಸಂದೀಪ್ ಮೆಹ್ತಾ, “ಖರೀದಿ ಬೆಲೆಗಿಂತ 10 ಪಟ್ಟು ಹೆಚ್ಚಿರುವ ಈ ಬೃಹತ್ ಮೊತ್ತದ ಹಣ ಯಾರ ಜೇಬಿಗೆ ಹೋಗುತ್ತಿದೆ? ಇದು ಸ್ಪಷ್ಟವಾಗಿ ರೋಗಿಗಳ ಮೇಲಿನ ಲೂಟಿ” ಎಂದು ಖಾರವಾಗಿ ನುಡಿದರು.
ಇದರ ಜೊತೆಗೆ, ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಹೊರಗಿನ ಫಾರ್ಮಸಿಗಳಲ್ಲಿ ಅಗ್ಗದ ದರಕ್ಕೆ ಔಷಧ ಖರೀದಿಸಲು ಬಿಡದೆ, ತಮ್ಮದೇ ಆಸ್ಪತ್ರೆಯ ಒಳಗಿರುವ ಮೆಡಿಕಲ್ ಶೋರೂಮ್‌ಗಳಿಂದಲೇ ದುಬಾರಿ MRP ಬೆಲೆಗೆ ಔಷಧಿಗಳನ್ನು ಕೊಳ್ಳುವಂತೆ ಒತ್ತಾಯಿಸುತ್ತಿರುವ ಮಾಫಿಯಾ ಶೈಲಿಯನ್ನು ನ್ಯಾಯಪೀಠ ತೀವ್ರವಾಗಿ ಆಕ್ಷೇಪಿಸಿತು. ದೇಶದ ಕೋಟ್ಯಂತರ ರೋಗಿಗಳ ಹಿತದೃಷ್ಟಿಯಿಂದ ಪ್ರಾಣರಕ್ಷಕ ಔಷಧಗಳ ದರಗಳಿಗೆ ಕಟ್ಟುನಿಟ್ಟಿನ ಮಿತಿ ಹೇರಲೇಬೇಕು ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ.


