2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿತರಾಗಿರುವ ವಿದ್ಯಾರ್ಥಿ ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ (ಸೆ.30) ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್ ಮತ್ತು ದಿನೇಶ್ ಭಟ್ ಅವರನ್ನೊಳಗೊಂಡ ಪೀಠವು ಖಾಲಿದ್ ಹಾಗೂ ಶಾರ್ಜೀಲ್ ಅವರ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದ್ದು, ಹೈಕೋರ್ಟ್ ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ.
ಸುಪ್ರೀಂ ಕೋರ್ಟ್ ಜನವರಿ 5 ರಂದು ನೀಡಿದ್ದ ಆದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ಸಂರಕ್ಷಿತ ಸಾಕ್ಷಿಗಳ (ಪ್ರೊಟೆಕ್ಟೆಡ್ ವಿಟ್ನೆಸಸ್) ವಿಚಾರಣೆ ಪೂರ್ಣಗೊಳ್ಳುವುದು ಅಥವಾ ಆದೇಶ ಹೊರಡಿಸಿದ ದಿನಾಂಕದಿಂದ ಒಂದು ವರ್ಷ ಪೂರ್ಣಗೊಳ್ಳುವುದು, ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಕಾಯುವಂತೆ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಇಬ್ಬರೂ ಆರೋಪಿಗಳಿಗೆ ತಿಳಿಸಿತ್ತು.
ಫೆಬ್ರವರಿ 2020 ರಲ್ಲಿ ಸಂಭವಿಸಿದ ದೆಹಲಿ ಗಲಭೆಯ ಮುಖ್ಯ ರೂವಾರಿಗಳು ಎಂಬ ಆರೋಪದ ಮೇಲೆ ಖಾಲಿದ್ ಮತ್ತು ಇಮಾಮ್ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಗಲಭೆಯಲ್ಲಿ 53 ಜನರು ಪ್ರಾಣ ಕಳೆದುಕೊಂಡಿದ್ದು (ಅವರಲ್ಲಿ 36 ಜನರು ಮುಸ್ಲಿಮರು) ಹಾಗೂ 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), 2019 ಮತ್ತು ರಾಷ್ಟ್ರೀಯ ಪೌರರ ನೋಂದಣಿ (ಎನ್‌ಆರ್‌ಸಿ) ವಿರುದ್ಧ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಈ ಹಿಂಸಾಚಾರ ಭುಗಿಲೆದ್ದಿತ್ತು.
ದೆಹಲಿ ಪೋಲಿಸರ ಸ್ಪೆಷಲ್ ಸೆಲ್ ತನಿಖೆ ನಡೆಸುತ್ತಿರುವ ಈ ‘ದೊಡ್ಡ ಸಂಚು’ ಪ್ರಕರಣದಲ್ಲಿ ಖಾಲಿದ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಸೇರಿದಂತೆ ಇತರರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ವಿಚಾರಣಾ ನ್ಯಾಯಾಲಯವು ಜುಲೈ 4 ರಂದು ಮೂರನೇ ಬಾರಿಗೆ ಇವರ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದ ನಂತರ, ಇವರು ಈ ವರ್ಷದ ಆರಂಭದಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಮಾಮ್ ಅವರನ್ನು ಆಗಸ್ಟ್ 25, 2020 ರಂದು ಬಂಧಿಸಲಾಗಿದೆ. ಖಾಲಿದ್ ಅವರನ್ನು ಸೆಪ್ಟೆಂಬರ್ 13, 2020 ರಂದು ವಶಕ್ಕೆ ಪಡೆಯಲಾಗಿತ್ತು.
ಹೈಕೋರ್ಟ್‌ನಲ್ಲಿ ಇವರ ಅರ್ಜಿಗಳನ್ನು ವಿರೋಧಿಸಿದ ದೆಹಲಿ ಪೊಲೀಸರು, ಇವರಿಬ್ಬರೇ ಗಲಭೆಯ “ಮುಖ್ಯ ರೂವಾರಿಗಳು” ಎಂದು ಪ್ರತಿಪಾದಿಸಿದ್ದಾರೆ.


