ಮಂಗಳೂರು ನಗರದ ಹೊರವಲಯದ ಜೋಕಟ್ಟೆ ಬಳಿ ಇರುವ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ (ಸಿಎಚ್‌ಟಿ) ಬುಧವಾರ ಮಧ್ಯಾಹ್ನ 12:15 ರ ಸುಮಾರಿಗೆ ಭಾರಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ಸ್ಫೋಟದ ತೀವ್ರತೆಗೆ ಆಕಾಶಕ್ಕೆ ದಟ್ಟ ಹೊಗೆ ಆವರಿಸಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಈ ಭೀಕರ ಸ್ಫೋಟದ ರಭಸಕ್ಕೆ ಜೋಕಟ್ಟೆಯಲ್ಲಿರುವ ಪಂಚಾಯತ್ ಕಟ್ಟಡ, ಗ್ರಂಥಾಲಯ, ಅಂಗನವಾಡಿ ಕೇಂದ್ರ ಹಾಗೂ ಹಲವು ಮನೆಗಳು ಕಂಪಿಸಿದ್ದು, ಬಾಗಿಲು ಮತ್ತು ಕಿಟಕಿ ಗಾಜುಗಳು ಮುರಿದು ಬಿದ್ದಿವೆ. ಸ್ಫೋಟದ ಶಬ್ದ ಇಡೀ ಮಂಗಳೂರು ನಗರದಾದ್ಯಂತ ಕೇಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯಲ್ಲಿ ಒಟ್ಟು 8 ಮಂದಿ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಘಟಕದಲ್ಲಿದ್ದ ರಾಜೇಶ್ ಬ್ಯಾಪ್ಟಿಸ್ಟ್ ಎಂಬ ಸಿಬ್ಬಂದಿಗೆ ಶೇ.35 ರಷ್ಟು ಸುಟ್ಟ ಗಾಯಗಳಾಗಿದ್ದು, ಅವರನ್ನು ಶ್ರೀನಿವಾಸ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಪಕ್ಕದ ಕಚೇರಿಯಲ್ಲಿದ್ದ ಇನ್ನುಳಿದ 6 ಮಂದಿ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಮಹಿಳಾ ಸಿಬ್ಬಂದಿ ಇರಲಿಲ್ಲ ಹಾಗೂ ಗಾಯಗೊಂಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಜಿ.ಪಂ ಸಿಇಒ ನರ್ವಡೆ ವಿನಾಯಕ್ ಕಾರ್ಭಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.


