ಪಶ್ಚಿಮ ಬಂಗಾಳ ಪೊಲೀಸರು ತಮ್ಮ ನಾಲ್ಕು ‘ಇಂಡಿಯನ್ ಬ್ಯಾಂಕ್’ ಖಾತೆಗಳನ್ನು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ನೇತೃತ್ವದ ‘ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ (ಎಐಟಿಸಿ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ (ಅ.1) ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಎಂ. ಎಂ. ಸುಂದ್ರೇಶ್ ಮತ್ತು ಬಿ. ವರಾಳೆ ಅವರ ಪೀಠವು, ಕಲ್ಕತ್ತಾ ಹೈಕೋರ್ಟ್ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದ್ದರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದೆ. ಮುಖ್ಯ ಪ್ರಕರಣವು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿರುವುದನ್ನು ಗಮನಿಸಿದ ಪೀಠವು, ಸಂವಿಧಾನದ 136ನೇ ವಿಧಿಯ ಅಡಿಯಲ್ಲಿನ ನ್ಯಾಯವ್ಯಾಪ್ತಿಯನ್ನು ಚಲಾಯಿಸಲು ನಿರಾಕರಿಸಿದೆ. ಈ ವಿಷಯವನ್ನು ಇತ್ಯರ್ಥಪಡಿಸುವ ಸಂದರ್ಭದಲ್ಲಿ, ವಿಚಾರಣೆಯನ್ನು ತ್ವರಿತಗೊಳಿಸುವಂತೆ ಪೀಠವು ಹೈಕೋರ್ಟ್‌ಗೆ ವಿನಂತಿಸಿದೆ.
ಶಾಸಕ ಬಿಸ್ವನಾಥ್ ದಾಸ್ ಅವರು ನೀಡಿದ ದೂರಿನ ಮೇರೆಗೆ ಪಶ್ಚಿಮ ಬಂಗಾಳ ಪೊಲೀಸರು ಕೈಗೊಂಡಿದ್ದ ಕ್ರಿಮಿನಲ್ ತನಿಖೆಯ ಹಿನ್ನೆಲೆಯಲ್ಲಿ ‘ಡೆಬಿಟ್-ಫ್ರೀಝ್’ (ಹಣ ಹಿಂಪಡೆಯದಂತೆ ತಡೆಹಿಡಿಯಲಾದ) ಮಾಡಲಾಗಿದ್ದ ಇಂಡಿಯನ್ ಬ್ಯಾಂಕ್‌ನ ನಾಲ್ಕು ಖಾತೆಗಳನ್ನು ನಿರ್ವಹಿಸಲು ಅನುಮತಿ ಕೋರಿ ಟಿಎಂಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ.
ಈ ಪ್ರಕರಣವು, ಸಂಬಂಧಪಟ್ಟ ಪಕ್ಷದವರ 3 ಹೆಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದ್ದ ಹಿಂದಿನ ಪ್ರಕರಣಕ್ಕಿಂತ ಭಿನ್ನವಾಗಿದೆ ಎಂಬುದು ಗಮನಾರ್ಹ
ಮಮತಾ ಬ್ಯಾನರ್ಜಿ ಬಣದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಇಂಡಿಯನ್ ಬ್ಯಾಂಕ್‌ನ ನಾಲ್ಕು ಖಾತೆಗಳನ್ನು ಫ್ರೀಝ್ ಮಾಡಿರುವುದರಿಂದ ಪಕ್ಷದ ಕಾರ್ಯನಿರ್ವಹಣೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಪಕ್ಷದ ಆಡಿಟ್ ಮಾಡಲಾದ ಲೆಕ್ಕಪತ್ರಗಳ ಪ್ರಕಾರ, ರಾಜಕೀಯ ವೆಚ್ಚಗಳನ್ನು ಹೊರತುಪಡಿಸಿ ದಿನನಿತ್ಯದ ಕಾರ್ಯಾಚರಣೆಗಳಿಗಾಗಿ ಕನಿಷ್ಠ ರೂ. 12.15 ಕೋಟಿ ಮಾಸಿಕ ವೆಚ್ಚವಾಗುತ್ತದೆ ಎಂದು ತಿಳಿಸಿದ್ದಾರೆ.
“ಆಡಳಿತ ಪಕ್ಷವು ನನ್ನನ್ನು ವಿರೋಧಿಸುವ ರಾಜ್ಯದ ಪೊಲೀಸರನ್ನು ಕಳುಹಿಸಿ ಎಲ್ಲಾ ಖಾತೆಗಳನ್ನು ಫ್ರೀಝ್ ಮಾಡಿದರೆ, ರಾಜಕೀಯ ಚಟುವಟಿಕೆಗಳನ್ನು ತಡೆಯಲು ಅದಕ್ಕಿಂತ ಉತ್ತಮ ಮಾರ್ಗ ಮತ್ತೊಂದಿಲ್ಲ” ಎಂದು ಸಿಂಘ್ವಿ ವಾದಿಸಿದ್ದಾರೆ. ಹೈಕೋರ್ಟ್ ಆದೇಶವು ಈ ಹಿಂದಿನ ಮೂರು ಖಾತೆಗಳನ್ನು ಪ್ರಸ್ತುತ ನಾಲ್ಕು ಖಾತೆಗಳೊಂದಿಗೆ ಗೊಂದಲಗೊಳಿಸಿದೆ, ಉಪಚುನಾವಣೆಗಳು ಹತ್ತಿರ ಬರುತ್ತಿವೆ ಮತ್ತು ಖಾತೆಗಳನ್ನು ಫ್ರೀಝ್ ಮಾಡುವ ಪ್ರಕ್ರಿಯೆಯಲ್ಲಿ ಮ್ಯಾಜಿಸ್ಟ್ರೇಟ್ ಅವರ ಯಾವುದೇ ನ್ಯಾಯಾಂಗದ ಪಾತ್ರ ಒಳಗೊಂಡಿಲ್ಲ ಎಂದು ಹೇಳಿದ್ದಾರೆ.
ನ್ಯಾಯಾಲಯದಿಂದ ನೇಮಕಗೊಂಡ ಆಡಳಿತಾಧಿಕಾರಿಯು ಈ ಖಾತೆಗಳನ್ನೂ ಸಹ ನಿರ್ವಹಿಸಬಹುದು ಎಂದು ಪೀಠವು ಸಲಹೆ ನೀಡಿದಾಗ, ತಾತ್ಕಾಲಿಕ ವ್ಯವಸ್ಥೆಯಾಗಿ ಸದ್ಯಕ್ಕೆ ತಾವು ಅದಕ್ಕೆ ಒಪ್ಪಿಕೊಳ್ಳುವುದಾಗಿ ಸಿಂಘ್ವಿ ತಿಳಿಸಿದ್ದಾರೆ. ಮುಂದುವರಿದು ವಾದಿಸಿದ ಅವರು, ದೇಶದ ಮೂರನೇ ಅತಿ ದೊಡ್ಡ ಪಕ್ಷವನ್ನು ನಡೆಸಲು ತಿಂಗಳಿಗೆ ಕನಿಷ್ಠ ರೂ. 12.15 ಕೋಟಿ ಅಗತ್ಯವಿದ್ದು, ಇದರಲ್ಲಿ ಉಪಚುನಾವಣೆಗಳು, ಕಾನೂನು ವೆಚ್ಚಗಳು ಅಥವಾ ಇತರೆ ಯಾವುದೇ ವೆಚ್ಚಗಳು ಸೇರಿಲ್ಲ ಎಂದು ವಿವರಿಸಿದ್ದಾರೆ.
ಸರ್ಕಾರದ ಪರವಾಗಿ ವಾದ ಮಂಡಿಸಿದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಪ್ರಕರಣವು ಒಂದು ಭಿನ್ನವಾದ ಎಫ್‌ಐಆರ್ ಮತ್ತು ಬಣಗಳ ನಡುವಿನ ವಿವಾದಕ್ಕೆ ಸಂಬಂಧಿಸಿದೆ. ಈ ವಿವಾದದಲ್ಲಿ ಒಂದು ಬಣವು ತಾನೇ ನಿಜವಾದ ತೃಣಮೂಲ ಕಾಂಗ್ರೆಸ್ ಎಂದು ಪ್ರತಿಪಾದಿಸುತ್ತಿದೆ ಎಂದು ಹೇಳಿದ್ದಾರೆ. ಯಾವ ಬಣವು ನಿಜವಾದ ಪಕ್ಷ ಎಂಬ ವಿಷಯವನ್ನು ಭಾರತೀಯ ಚುನಾವಣಾ ಆಯೋಗವೇ ನಿರ್ಧರಿಸಬೇಕೆಂದು ಸುಪ್ರೀಂ ಕೋರ್ಟ್ ಈ ಹಿಂದೆ ಆದೇಶಿಸಿತ್ತು ಎಂಬುವುದನ್ನು ಪೀಠದ ಗಮನಕ್ಕೆ ತಂದಿದ್ದಾರೆ.
ಪಕ್ಷದ ಒಂದು ಬಣಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಖಾತೆಗಳಿಗೆ 35 ಕೋಟಿ ರೂಪಾಯಿ ನಗದು ಜಮೆ ಮಾಡಿದ್ದರು ಮತ್ತು ಈ ಸಂಬಂಧದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಎರಡೂ ತಿರಸ್ಕರಿಸಿದ್ದವು. ಅಲ್ಲದೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಭೂಮಿಯನ್ನು ಖಾಸಗಿ ಭೂಮಿಯಾಗಿ ಪರಿವರ್ತಿಸಿ ನಂತರ ಮಾರಾಟ ಮಾಡಲಾದ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ಸಾಲಿಸಿಟರ್ ಅವರ ವಾದಗಳನ್ನು ತಳ್ಳಿಹಾಕಿದ ಸಿಂಘ್ವಿ, ಇವು ಎಫ್‌ಐಆರ್‌ಗೆ ಸಂಬಂಧಿಸಿಲ್ಲ ಮತ್ತು ನ್ಯಾಯಾಲಯದ ಮೇಲೆ ಪೂರ್ವಗ್ರಹಪೀಡಿತ ಅಭಿಪ್ರಾಯವನ್ನು ಉಂಟುಮಾಡುವ ಉದ್ದೇಶದಿಂದಲೇ ಇವುಗಳನ್ನು ಮಂಡಿಸಲಾಗಿದೆ ಎಂದು ಹೇಳಿದ್ದಾರೆ.
ದೂರುದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕೆ. ಪರಮೇಶ್ವರ್, ದಿನನಿತ್ಯದ ವೆಚ್ಚಗಳಿಗೆ ಈ ಹಿಂದೆ ಅನುಮತಿ ನೀಡಲಾಗಿದ್ದರೂ, ಅರ್ಜಿದಾರರು ಈಗ ಹೆಚ್ಚುವರಿ ವೆಚ್ಚಗಳಿಗೂ ಬೇಡಿಕೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ‘ಅಸಲಿ’ ತೃಣಮೂಲ ಪಕ್ಷ ಯಾವುದು ಎಂಬ ಬಗ್ಗೆ ನಿರ್ಧಾರವಾಗುವವರೆಗೆ ಪಕ್ಷದ ಚಿಹ್ನೆಯನ್ನು ತಡೆಹಿಡಿದು (ಫ್ರೀಝ್ ಮಾಡಿ) ಹೊರಡಿಸಲಾದ 17 ಸೆಪ್ಟೆಂಬರ್ 2026ರ ಚುನಾವಣಾ ಆಯೋಗದ ಆದೇಶವನ್ನೂ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
ಚುನಾವಣಾ ಆಯೋಗದ ಆದೇಶವು ಕೇವಲ ಪಕ್ಷದ ಚಿಹ್ನೆಗೆ ಸಂಬಂಧಿಸಿದ್ದೇ ಹೊರತು, ಬ್ಯಾಂಕ್ ಖಾತೆಗಳ ಬಗ್ಗೆ ಯಾವುದೇ ಉಲ್ಲೇಖವನ್ನು ಹೊಂದಿರಲಿಲ್ಲ ಎಂದು ಸಿಂಘ್ವಿ ಪ್ರತಿಪಾದಿಸಿದ್ದು, ಹೆಚ್‌ಡಿಎಫ್‌ಸಿ ಖಾತೆಗಳು ಈಗಾಗಲೇ ಆಯುಕ್ತರ ಮೇಲ್ವಿಚಾರಣೆಯಲ್ಲಿದ್ದವು ಮತ್ತು ಪ್ರಸ್ತುತ ಖಾತೆಗಳು ಇಂಡಿಯನ್ ಬ್ಯಾಂಕ್‌ನಲ್ಲಿದ್ದವು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಮತ್ತು “ಭಾರಿ ಪ್ರಮಾಣದ ನಗದು” ಜಮಾವಣೆಯ ಕುರಿತಾದ ಉಲ್ಲೇಖಗಳನ್ನು ಅವರು ಆಕ್ಷೇಪಿಸಿದ್ದು, ಇಂತಹ ವಿಷಯಗಳು ಪ್ರಸ್ತುತ ಪ್ರಕರಣದ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಖಾತೆಗಳನ್ನು ಸ್ಥಗಿತಗೊಳಿಸಲು ಪೊಲೀಸರು ಯಾವುದೇ ಕಾರಣಗಳನ್ನು ನೀಡಿಲ್ಲ ಎಂದು ವಾದಿಸಿದ್ದಾರೆ.
Courtesy :livelaw.in


